ಮೇಕಿಂಗ್ ಆಫ್ ಗಾಂಧಿ ಚಿತ್ರಸಂತೆ
Team Udayavani, Dec 22, 2018, 3:40 PM IST
ಕುಮಾರಕೃಪಾ ರಸ್ತೆಯಲ್ಲಿ ವರ್ಷದ ಅಷ್ಟೂ ದಿನ ಮರಗಳ ನೆರಳಿನ ಕಪ್ಪುಬಣ್ಣದ ರಂಗೋಲಿ. ಚಿತ್ರಸಂತೆಯ ದಿನ ಮಾತ್ರ ಅಲ್ಲಿ ನೂರಾರು ಬಣ್ಣಗಳ ಓಕುಳಿ. ಧೋ ಎಂದು ಮಳೆ ಬಂದುಹೋದ ಹಾಗೆ, ಜನ ಬಂದು, ಬಯಸಿದ ಚಿತ್ರವನ್ನು ಕೊಂಡು ಹೋಗುತ್ತಾರೆ. ಸ್ಟಾರ್‌ನಟರ ಚಿತ್ರಕ್ಕೂ ಜನ ಅಷ್ಟು ಮುಗಿಬೀಳುತ್ತಾರೋ, ಇಲ್ಲವೋ ಎನ್ನುವಷ್ಟರ ಮಟ್ಟಿಗೆ ಕಲಾಪ್ರಿಯರ ಜಾತ್ರೆ ಅಲ್ಲಿರುತ್ತೆ. ಈ ಬಾರಿಯ ಚಿತ್ರಸಂತೆಯು ಸಂಪೂರ್ಣ ಗಾಂಧಿಮಯ ಎನ್ನುವುದನ್ನು ಕೇಳಿದ್ದೇವೆ. ಅದಕ್ಕೆ ನಡೆಯುತ್ತಿರುವ ತಯಾರಿಯೇ ವಿಶಿಷ್ಟವಾಗಿದೆ…
ಗಾಂಧೀಜಿಯ ಮೂಗಿನ ಮೇಲೆ ಕುಳಿತ ಕನ್ನಡಕ, ಕಲಾಕಾರನ ಹೃದಯಲ್ಲಿ ಇಳಿದು, ಕೃಮಾರಕೃಪಾ ರಸ್ತೆಯಲ್ಲಿ ಕಾಮನಬಿಲ್ಲಿನಂತೆ ಕಾಣಿಸುತ್ತದೆ. ಕಿರುಬೆರಳಿನಲ್ಲಿ ಎತ್ತಿ ಆಚೆ ಇಡುವಷ್ಟು ಪುಟ್ಟ ಗಾತ್ರದ್ದಲ್ಲ ಆ ಕನ್ನಡಕ. ಹಗುರವೂ ಅಲ್ಲ. ಒಮ್ಮೆಲೆ ಆ ಕನ್ನಡಕದೊಳಗೆ ನೂರಾರು ಮಂದಿ ಸಲೀಸಾಗಿ ಹೋಗಬಹುದು; ಅಷ್ಟು ದೊಡ್ಡ ದ್ವಾರ. ಒಳಕ್ಕೆ ಕಾಲಿಟ್ಟರೆ, ಅಲ್ಲಿ ಬಣ್ಣದ ಜಗತ್ತಿನ ದಿಗªರ್ಶನ. ಎಲ್ಲಿ ನೋಡಿದರಲ್ಲಿ ಕಾಣಿಸೋದು ಬರೀ ಬಾಪೂ. ರೇಖೆಗಳಲ್ಲಿ, ಬಣ್ಣಗಳಲ್ಲಿ, ಭಾವ ಚಿತ್ತಾರಗಳಲ್ಲಿ ಕರಮಚಂದನದ್ದೇ ಲೋಕ. ಸತ್ಯ- ಅಹಿಂಸೆಯನ್ನು ಜಗತ್ತಿಗೆ ಸಾರಿದ ಮಹಾತ್ಮನ ಮೇಲೆ ಒಡಮೂಡಿದ ಚಿತ್ರವಿಸ್ಮಯಗಳ ಜಾತ್ರೆ ಅದು.
2019, ಜನವರಿ 6ರ ಚಿತ್ರಸಂತೆಯ ವೈಯ್ನಾರದ ಪುಟ್ಟ ಟ್ರೈಲರ್ ಇದು. ಚಿತ್ರಸಂತೆ ಅಂದರೆ, ಅಲ್ಲಿ ಕಲಾವಿದರು ಸಾವಿರಾರು ಚಿತ್ರಗಳನ್ನು ಎದುರಿಟ್ಟು ಕೂರುತ್ತಾರೆ, ಕಲಾಸಕ್ತರು ಬಂದು ಅದನ್ನು ಕೊಳ್ಳುತ್ತಾರೆ ಎಂಬುದಷ್ಟೇ ಅಲ್ಲ. ಅದರ ಪೂರ್ವತಯಾರಿಯೇ ತುಂಬಾ ಆಸಕ್ತಿಕರ. ಈ ಸಲದ ಚಿತ್ರಸಂತೆ ಎಂದಿನಂತೆ ಇರದೇ, ಹಲವು ವಿಶೇಷತೆಗಳೊಂದಿಗೆ ಸೆಳೆಯಲಿದೆ. ಮಹಾತ್ಮ ಗಾಂಧೀಜಿ ಹುಟ್ಟಿ 150 ವರ್ಷಗಳಾದ ಹಿನ್ನೆಲೆಯಲ್ಲಿ, ಚಿತ್ರಸಂತೆಗೆ ಈ ಬಾರಿ ಗಾಂಧೀಜಿಯೇ ರಾಯಭಾರಿ. ಮಹಾತ್ಮನ ಹುಟ್ಟು, ಸಾಧನೆ, ಜೀವನತಣ್ತೀಗಳನ್ನು ಸಾರುವ ಸಂಗತಿಗಳೆಲ್ಲ ಸಂತೆಯ ಬಣ್ಣಗಳಲ್ಲಿ ರಾರಾಜಿಸಲಿವೆ.
ಕನ್ನಡಕ ದ್ವಾರ ಹೇಗಿರುತ್ತೆ?
ಗಾಂಧೀಜಿಯವರ ಆಕರ್ಷಣೆಗಳಲ್ಲಿ ಕನ್ನಡಕವೂ ಒಂದು. ಆ ಕನ್ನಡಕವೇ ಈ ಸಲದ ಚಿತ್ರಸಂತೆಗೆ ಮಾರ್ಗ! 24 ಅಡಿ ಅಗಲದ ಮೆಟಲ್‌ನಲ್ಲಿ ಕನ್ನಡಕದ ವಿನ್ಯಾಸವನ್ನು ರಚಿಸಿ, ಚರಕದಿಂದ ನೇಯ್ದ ದಾರವನ್ನು ಸುತ್ತಿ ಅದರ ಮೂಲಕ ಚಿತ್ರಸಂತೆಯೊಳಕ್ಕೆ ಸಂಚರಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಅದಕ್ಕಾಗಿ ರೂಪುರೇಷೆಗಳೂ ಸಿದ್ಧವಾಗಿವೆ. ಇದರ ಉದ್ದೇಶ ಇಷ್ಟೇ… ನಾವೆಲ್ಲರೂ ಗಾಂಧೀಜಿಯ ದೃಷ್ಟಿಕೋನದಲ್ಲಿ ಮುನ್ನಡೆಯಬೇಕು ಎಂಬುದು.
ಬಾಲಿ ಕಲೆಯಲ್ಲಿ ಬಾಪೂ ತಣ್ತೀ
“ಕನ್ನಡಕ ಪ್ರವೇಶದ್ವಾರ’ ದಾಟಿದ ಮೇಲೆ, ಮಹಾತ್ಮ ಗಾಂಧೀಜಿ ಅವರ ಶಿಲ್ಪದ ದರ್ಶನ. ಮೌನವಾಗಿ ಕುಳಿತ ಬಾಪೂ ಈಗಾಗಲೇ ಪೂರ್ಣಗೊಂಡಿದ್ದಾರೆ. ಆ ಶಿಲ್ಪದ ಹಿಂದೆ ದೊಡ್ಡ ಚರಕ. 15 ಅಡಿ ಅಗಲ, 10 ಅಡಿ ಎತ್ತರದ ಆ ಚರಕದ ಪಕ್ಕದಲ್ಲಿಯೇ ಗಾಂಧಿ ತಣ್ತೀಗಳ ಲೋಕ. ಇಂಡೋನೇಷ್ಯಾದ ಬಾಲಿಯ ಕರಕುಶಲ ಕಲೆಯಲ್ಲಿ ಗಾಂಧಿಯ ತತ್ವಗಳನ್ನು ಹೇಳುವ ಪ್ರಯತ್ನ ಮಾಡಲಾಗುತ್ತಿದೆ. ಬಾಲಿಯ ಆ ಕಲೆ ಮೂಲತಃ ಭಾರತದ್ದಂತೆ. ಈ ಕಾರಣಕ್ಕಾಗಿಯೇ ಅದನ್ನು ಚಿತ್ರಸಂತೆಯಲ್ಲಿ ಹೈಲೈಟ್ ಆಗಿ ಪ್ರದರ್ಶಿಸಲಾಗುತ್ತಿದೆ. ಬಾಲಿಯ ಕಲಾ ಮಾಧ್ಯಮದಲ್ಲಿ ತೂಗು ಕಲಾಕೃತಿಗಳನ್ನು ರಚಿಸಿ, ಗಾಂಧೀಜಿಯ ವಿಚಾರಗಳನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಬರೆಸಲಾಗುತ್ತಿದೆ. ಇಷ್ಟೇ ಅಲ್ಲ, ಗಾಂಧೀಜಿ ಬಳಸುತ್ತಿದ್ದ ವಸ್ತುಗಳ ಮಾದರಿಯನ್ನೂ ಇಲ್ಲಿ ಚಿತ್ರಿಸಲಾಗುತ್ತಿದೆ. ಅಂದಹಾಗೆ, ಇದು ಸಿಕೆಪಿ ಅಧ್ಯಕ್ಷರಾದ ಡಾ.ಬಿ.ಎಲ್. ಶಂಕರ್ ಮತ್ತು ಗೌರವ ಸಹಕಾರ್ಯದರ್ಶಿ ಪ್ರೊ. ಅಪ್ಪಾಜಯ್ಯ ಮತ್ತು ಚಿತ್ರಕಲಾ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ. ತೇಜೇಂದ್ರ ಸಿಂಗ್ ಬಾವನಿ ಅವರ ಪರಿಕಲ್ಪನೆ.
ಚಿತ್ರಸಂತೆ ಎನ್ನುವುದು ಕಲಾವಿದರ, ಕಲಾಸಕ್ತರ ಪಾಲಿಗೆ ರಾಷ್ಟ್ರೀಯ ಹಬ್ಬ. ದೇಶದ ವಿವಿಧೆಡೆಯಿಂದ ಬರುವ ಕಲಾವಿದರು, ಇಲ್ಲಿ ತಮ್ಮ ಕುಂಚದಿಂದ ಉದಿಸಿದ ಕಲಾಕೂಸುಗಳನ್ನು ಪ್ರದರ್ಶನಕ್ಕಿಟ್ಟು, ಅದನ್ನು ಕಲಾಪ್ರಿಯರಿಗೆ ದಾಟಿಸಿ, ಮುಂದಿನ ವರ್ಷದ ಸಂತೆಯ ಹಬ್ಬಕ್ಕೆ ಕಾತರಿಸುತ್ತಾರೆ. ಸಾಂಪ್ರದಾಯಿಕ ಮೈಸೂರು ಶೈಲಿ, ತಾಂಜಾವೂರು ಶೈಲಿ, ರಾಜಸ್ಥಾನ ಶೈಲಿ, ಮಧು ಬನಿಯಾ ಶೈಲಿ, ತೈಲ ಮತ್ತು ಜಲವರ್ಣಗಳಲ್ಲಿ ರಚಿಸಿದ ಚಿತ್ರಗಳು ಮಾರಾಟಕ್ಕೆ ಇರಲಿವೆ. ಇವೆಲ್ಲದರಲ್ಲೂ ಗಾಂಧೀಜಿಯನ್ನು ಕಾಣುವ ಸುಯೋಗ, ಕಲಾಪ್ರಿಯರಿಗೆ. ಆಕ್ರಿಲಿಕ್, ಗಾಜಿನ ಮೇಲೆ ಬಿಡಿಸಿರುವ ಚಿತ್ರಗಳು, ಕೋಲಾಜ್, ಲಿಥೋಗ್ರಾಫ್ ಮತ್ತು ಎಂಬೋಸಿಂಗ್ ಮಾದರಿಯಲ್ಲಿ ಕಲಾಕೃತಿಗಳು ಇರಲಿವೆ. ಚಿತ್ರಶಿಲ್ಪಿ ವೆಂಕಟಪ್ಪ ಕೆ.ಕೆ. ಹೆಬ್ಟಾರ್, ಪ್ರೊ. ನಂಜುಂಡರಾವ್‌ರಂಥ ಪ್ರಮುಖ ಕಲಾವಿದರ ಚಿತ್ರಗಳು ಆಕರ್ಷಣೆ ಹೆಚ್ಚಿಸಲಿವೆ.
ಅಂದಹಾಗೆ, ಇದು 16ನೇ ವಾರ್ಷಿಕ ಚಿತ್ರಸಂತೆ. ಗಾಂಧೀಜಿಯ 150ನೇ ಜನ್ಮವರ್ಷಾಚರಣೆ ಪ್ರಯುಕ್ತ ಸಿಕೆಪಿ, ವರ್ಷವಿಡೀ ಗಾಂಧೀಜಿಯ ಕುರಿತೇ ಚಿತ್ರಯೋಜನೆಗಳನ್ನು ಹಮ್ಮಿಕೊಂಡಿದೆ. ಅದರಲ್ಲಿ ಚಿತ್ರಸಂತೆಯೂ ಒಂದು. “ಎಲ್ಲರಿಗಾಗಿ ಕಲೆ’ ಎಂಬುದು ಈ ಬಾರಿಯ ಘೋಷವಾಕ್ಯ. ಹಿರಿಯರು, ಅಂಧರು ಮತ್ತು ಅಂಗವಿಕಲ ಕಲಾವಿದರಿಗೆ ಪರಿಷತ್ತಿನ ಆವರಣದಲ್ಲಿಯೇ ವಿಶೇಷ ಮಳಿಗೆ ಹಾಕಲಾಗುತ್ತಿದೆ.
ಯಾವಾಗ?: 2019ರ ಜ.6, ಭಾನುವಾರ
ಎಲ್ಲಿ?: ಕುಮಾರಕೃಪಾ ರಸ್ತೆ
ಮಿಂಚಿನ ತಯಾರಿ…
– 24 ಅಡಿ ಅಗಲದ ಮೆಟಲ್‌ನಲ್ಲಿ ರೂಪಿಸಲಾದ ಕನ್ನಡಕದ ಮಹಾದ್ವಾರ.
– ಮಹಾತ್ಮ ಗಾಂಧೀಜಿಯ ಶಿಲ್ಪಾಕೃತಿಗಳ ದರ್ಶನ.
– 15 ಅಡಿ ಅಗಲ, 10 ಅಡಿ ಎತ್ತರದ ಮಹಾ ಚರಕ
– ಇಂಡೋನೇಷ್ಯಾದ ಬಾಲಿಯ ಕಲೆಯಲ್ಲಿ ಗಾಂಧೀಜಿಯ ತಣ್ತೀಗಳನ್ನು ಸಾರುವ ಪ್ರಯತ್ನ.
– ಗಾಂಧೀಜಿ ಬಳಸಿದ ವಸ್ತುಗಳ ಚಿತ್ರ ಮಾದರಿಯೂ ಸೆಳೆಯಲಿವೆ.
– ಪಾಲ್ಗೊಳ್ಳುವ ಕಲಾವಿದರ ಕೈಯಲ್ಲೂ ಅರಳುವ ಬಾಪೂ.
ಬಳಕೂರು ವಿ.ಎಸ್. ನಾಯಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.