ಕ್ಯಾನ್ಸರ್‌ನೊಡನೆ ಸೆಣಸುತ್ತಲೇ ರೋಗಿಗಳ ಸೇವೆ ಮಾಡಿದವಳು
Team Udayavani, Dec 28, 2018, 4:07 AM IST
“..ಸಿಸ್ಟರ್ ಒಂದು ವಿಷ ಕುಡದ ಪೇಶಂಟ್ ಬಂದೈತ್ರಿ, ಭಾಳ ಸೀರಿಯಸ್ ಐತ್ರಿ.’ ಹೇಳುವವಳ ಮಾತು ಇನ್ನೂ ಬಾಯಿಂದ ಪೂರ್ತಿ ಬಂದಿರಲಿಲ್ಲ, ಆಗಲೇ ದಿಗ್ಗನೆದ್ದುಬಿಟ್ಟಿದ್ದಳು, ತನ್ನ ಕೈಯಲ್ಲಿ ಚುಚ್ಚಿಕೊಂಡಿದ್ದ ಸಲೈನ್‌ನ ಸೂಜಿಯನ್ನೂ ಲೆಕ್ಕಿಸದೆ. ಬದಿಯಲ್ಲೆ ಇದ್ದ ಕಪ್ಪು ಅರಿವೆಯೊಂದನ್ನು ಕೂದಲುದುರಿ ಬೋಳಾದ ತಲೆಗೆ ಸುತ್ತಿಕೊಂಡು ಎಮರ್ಜೆನ್ಸಿ ವಾರ್ಡಿಗೆ ನುಗ್ಗಿದಳು. ಅಲ್ಲಿ ತನ್ನೆಲ್ಲ ಬೇನೆಗಳನ್ನು, ಮಾನಸಿಕ ತುಮುಲಗಳನ್ನು, ದೈಹಿಕ ನೋವನ್ನು ಬದಿಗಿಟ್ಟು ಸಾವಿನ ದವಡೆಯಲ್ಲಿದ್ದ ಪೇಶಂಟ್‌ನ್ನು ಉಪಚರಿಸುವುದರಲ್ಲಿ ಮಗ್ನಳಾದಳು. ಆಕೆ ಇರುವುದೇ ಹಾಗೆ. ಕಷ್ಟಗಳನ್ನೆಲ್ಲ ನುಂಗುತ್ತ ರೋಗಿಗಳ ಸೇವೆಯಲ್ಲೆ ಸಂತೋಷ ಪಡುವಂಥವಳು.
ಕೀಮೋಥೆರಪಿಯಿಂದ ಹೆಪ್ಪುಗಟ್ಟಿದ ರಕ್ತನಾಳಗಳಿಂದಾಗಿ ಅಂದಗೆಟ್ಟ ಮುಂದೋಳುಗಳು, ರೋಮಗಳುದುರಿ ಬೋಳಾದ ಹುಬ್ಬುಗಳು, ಕಣೆಪ್ಪೆಗಳು, ಶಸ್ತ್ರಚಿಕಿತ್ಸೆಯಿಂದಾಗಿ ಚಪ್ಪಟೆಯಾದ ಒಂದು ಬದಿಯ ಎದೆ, ವಿಕಿರಣ ಚಿಕಿತ್ಸೆಯಿಂದಾಗಿ ಆವರಿಸಿದ ನಿಶ್ಶಕ್ತಿ ಇವಾವುದೂ ಅವಳ ಕರ್ತವ್ಯಕ್ಕೆಂದೂ ಅಡ್ಡಬರಲೇ ಇಲ್ಲ. ರೋಗಿಗಳ ಸೇವೆಯ ಸಮಯ ಬಂದಾಗ ಹಗಲಿರುಳೂ, ಕಷ್ಟ ಸುಖ ಎಲ್ಲವೂ ಒಂದೇ ಅವಳಿಗೆ. ಅವಳು ನಮ್ಮ ಆಸ್ಪತ್ರೆಯಲ್ಲಿ ನರ್ಸ್. ಆಸ್ಪತ್ರೆ ಪ್ರಾರಂಭವಾದಾಗಿನಿಂದ ಇಡೀ ಆಸ್ಪತ್ರೆಯ ಜವಾಬ್ದಾರಿಗಳನ್ನೆಲ್ಲ ಬೆನ್ನಿಗೆ ಕಟ್ಟಿಕೊಂಡವಳು. ಎಮರ್ಜೆನ್ಸಿ ಗಳಿ¨ªಾಗ ನಾನು ಆಸ್ಪತ್ರೆ ತಲುಪುವುದರೊಳಗೆ ಅರ್ಧ ಆರೈಕೆ ಮುಗಿಸಿಯೇ ಸಿದ್ಧ.
ನಮ್ಮಂಥ “ಏಕವೈದ್ಯ ಆಸ್ಪತ್ರೆ’ಗಳಲ್ಲಿ ಇಂಥ ಶುಶ್ರೂಶಕಿಯರ ಪಾತ್ರ ತುಂಬ ಮಹತ್ವದ್ದು. ವೈದ್ಯಕೀಯದ ಡಿಗ್ರೀ ಮಾತ್ರ ಇವರಿಗಿರುವುದಿಲ್ಲ. ಆದರೆ ಸಂದರ್ಭ ಬಂದಾಗ ಒಬ್ಬ ವೈದ್ಯನಿಗಿಂತಲೂ ಹೆಚ್ಚು ನಿಖರವಾಗಿ ಆರೈಕೆ ನೀಡುವ ಸಾಮರ್ಥ್ಯ ಹೊಂದಿರುತ್ತಾರೆ, ತಮ್ಮ ಬದ್ಧತೆ ಹಾಗೂ ಬಾಧ್ಯತೆಗಳಿಂದಾಗಿ. ಇಂಥವಳಿಗೆ ಕಾಡಿದ್ದು ಸ್ತನ ಕ್ಯಾನ್ಸರ್.ಆದರೆ ಅವಳು ತನಗೆ ಬಂದೊದಗಿದ ಕ್ಯಾನ್ಸರ್ ಎಂಬ ಮಹಾಮಾರಿಯ ಜೊತೆಗೆ ಸೆಣಸುತ್ತಲೇ ರೋಗಿಗಳೆಡಗಿನ ತನ್ನ ಕರ್ತವ್ಯ ನಿಭಾಯಿಸಿದ ಪರಿ ಅನನ್ಯ, ಅನುಕರಣೀಯ, ಅವಿಸ್ಮರಣೀಯ.
ಸುಮಾರು ಐದು ವರ್ಷಗಳ ಹಿಂದಿನ ಮಾತು. ಮೊಟ್ಟ ಮೊದಲ ಬಾರಿ ಅವಳು ತನ್ನ ಬಲ ಸ್ತನದಲ್ಲಿ ಸಣ್ಣದೊಂದು ಗಂಟನ್ನು ಕಂಡುಕೊಂಡಿದ್ದಳು. ನಮ್ಮ ಆಸ್ಪತ್ರೆಯಲ್ಲೆ ಸೇವೆ ಮಾಡುತ್ತಿದ್ದುರಿಂದ ಸ್ವಾಭಾವಿಕವಾಗಿ ಮೊದಲು ತೋರಿಸಿದ್ದು ನನಗೇನೇ. ಪರೀಕ್ಷೆಗಳನ್ನೆಲ್ಲ ಮಾಡಿಸಿ ನೋಡಿದರೆ ಬಹಳಷ್ಟು ಮಹಿಳೆಯರಲ್ಲಿ ಕಾಣುವ ಸಾದಾ ಗಂಟಿನಂತೆ ತೋರಿತು. ಆದರೆ ಎದೆಯಲ್ಲಿ ಯಾವುದೇ ರೀತಿಯ ಗಂಟು ಕಂಡರೂ ಅದನ್ನು ಅಲಕ್ಷ ಮಾಡಲೇಬಾರದು. ಬಹುತೇಕ ಗಂಟುಗಳು ಸಾದಾ ರೀತಿಯವಾಗಿರುತ್ತವಾದರೂ ತಜ್ಞರು ಪರೀಕ್ಷೆ ಮಾಡಿ, ಅದಕ್ಕೆ ಅವಶ್ಯಕವಾದ ಹೆಚ್ಚಿನ ಪರೀಕ್ಷೆಗಳನ್ನು ಮಾಡುವವರೆಗೂ ಯಾವುದೇ ನಿರ್ಧಾರಕ್ಕೆ ಬರುವುದು ಅಸಾಧ್ಯ. ಆದ್ದರಿಂದಲೇ ಯಾವುದಕ್ಕೂ ಸಂಶಯವಿಲ್ಲದಿರಲಿ ಎಂದು ಅದನ್ನು ಶಸ್ತ್ರಚಿಕಿತ್ಸೆ ಮುಖಾಂತರ ಕತ್ತರಿಸಿ ತೆಗೆದು ಪರೀಕ್ಷೆಗೆ ಕಳಿಸಿ¨ªೆವು. ಅವಳೇನೋ ನಿಶ್ಚಿಂತೆಯಿಂದಿದ್ದಳು. ನನಗೆ ಮಾತ್ರ ರಿಪೋರ್ಟ್ ಬರುವವರೆಗೂ ಅಳುಕು. ಅಲ್ಲದೆ ಅದರ ಮುಂದಿನ ತಿಂಗಳೇ ನನ್ನ ಮಗನ ಮದುವೆ. ಸಣ್ಣ ಪಟ್ಟಣಗಳಲ್ಲಿ ಸಿಬ್ಬಂದಿಯವರೆಲ್ಲ ಮನೆಮಂದಿಯಂತೆಯೇ ಇರುತ್ತಾರೆ. ಮನೆಯ ಎಲ್ಲ ಕಾರ್ಯಕ್ರಮಗಳಲ್ಲೂ ಅವರ ಭಾಗವಹಿಸುವಿಕೆ ಸಾಮಾನ್ಯ. ಅಂಥದರಲ್ಲಿ ಬರೀ ಒಂದು ತಿಂಗಳಲ್ಲಿ ಮನೆಯಲ್ಲಿ ಕಾರ್ಯಕ್ರಮವಿ¨ªಾಗ ಇವಳಿಗೆ ಅಂಥದ್ದೇನಾದರೂ ಆದರೆ, ಎಂಬ ಚಿಂತೆಯ ಜೊತೆಗೇ ಜೀವನಪರ್ಯಂತ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಬೇರೆಯವರಿಗಾಗಿಯೇ ದುಡಿದವಳಿಗೆ ಕ್ಯಾನ್ಸರ್ ಆದರೆ ಹೇಗೆ, ಎಂಬ ಅಳುಕು ಬೇರೆ. ಆದರೆ ಯಾರು ಎಂಥವರು ಎನ್ನುವುದು ರೋಗಗಳಿಗೇನು ಗೊತ್ತು, ಎಂಬ ಸತ್ಯದ ಅರಿವಿತ್ತಲ್ಲ ನನಗೆ. ಐದು ದಿನಗಳ ನಂತರ ಒಂದು ಮಧ್ಯಾಹ್ನ ನಾನು, ನನ್ನ ಮಗ ಮದುವೆಯ ಕರೆಯೋಲೆ ಪ್ರಿಂಟ್ ಮಾಡಿಸಲು ಪ್ರಸ್‌ನಲ್ಲಿ¨ªೆವು. ಆಗ ಬಾಗಲಕೋಟೆಯ ಪೆಥಾಲಾಜಿ ಫೋನ್ ಮಾಡಿ ವಿಷಯ ತಿಳಿಸಿದಾಗ ನಾವಿಬ್ಬರೂ ಕಳವಳಕ್ಕೀಡಾದೆವು. ಹೌದು, ಅವಳಿಗೆ ಸ್ತನದ ಕ್ಯಾನ್ಸರ್. ಈ ವಿಷಯವನ್ನು ಅವಳೆದುರಿಗೆ ಹೇಗೆ ಹೇಳುವುದು ಎಂಬ ಅಳುಕಿನಿಂದಲೇ ಹೋಗಿ ಅವಳೆದುರು ಹೇಳಿದರೆ, ಒಂದಿಷ್ಟೂ ವಿಚಲಿತಳಾಗದ ಅವಳು ಹೇಳಿದ್ದು ಎರಡೇ ಶಬ್ದಗಳ ಒಂದು ಮಾತು, “ಸರ್, ನೀವಿದ್ದೀರಲ್ಲ!’ ಅವಳ ನಿರ್ಲಿಪ್ತತೆ, ಬಂದದ್ದನ್ನು ಧೈರ್ಯದಿಂದ ಎದುರಿಸುವ ಅವಳ ಸಂಕಲ್ಪಕ್ಕೆ ನಾನು ಆಶ್ಚರ್ಯಚಕಿತನಾದೆ. ಅವಳ ಮುಖ ಗಮನಿಸಿದರೆ ಯಾವುದೇ ಭಾವವಿಲ್ಲ. ಅನೇಕ ರೋಗಿಗಳಿಗೆ ಕ್ಯಾನ್ಸರ್ ಇದ್ದದ್ದನ್ನು ಹೇಳುವ ಕೆಟ್ಟ ಗಳಿಗೆಗಳು ನನ್ನ 38 ವರ್ಷದ ವೈದ್ಯಕೀಯದಲ್ಲಿ ಅನೇಕ ಬಾರಿ ಬಂದಿವೆ. ಬಹಳಷ್ಟು ರೋಗಿಗಳು ಅತ್ತದ್ದನ್ನು, ಗೋಳಾಡಿದ್ದನ್ನು, ರಂಪ ಮಾಡಿದ್ದನ್ನು ಕಂಡಿದ್ದೇನೆ. ಆದರೆ ಇವಳಂತೆ ಶಾಂತವಾಗಿ ಸ್ವೀಕರಿಸಿದ ಜನ ಕಡಿಮೆ. ಅವಳು ನಮ್ಮ ಮೇಲಿಟ್ಟ ನಂಬಿಕೆ ಅಗಾಧವಾಗಿತ್ತು. ಹಾಗೆ ನೋಡಿದರೆ ವೈದ್ಯಕೀಯವೆಂಬುದು ಸರಿಯಾಗಿ ಸಾಗಬೇಕಾದರೆ ನಂಬಿಕೆ ಮತ್ತು ಭರವಸೆ ತುಂಬ ಮಹತ್ವದ ಪಾತ್ರ ವಹಿಸುತ್ತವೆ. ರೋಗಿಗಳು ವೈದ್ಯರನ್ನು ನಂಬಬೇಕು, ವೈದ್ಯರು ರೋಗಿಗಳ ಭರವಸೆಯ ಆಶಾಕಿರಣವಾಗಬೇಕು. ರೋಗಿ ಸಂಪೂರ್ಣವಾಗಿ ವೈದ್ಯರನ್ನು ನಂಬಿದರೆ ವೈದ್ಯ ತನ್ನೆಲ್ಲ ತಾಕತ್ತಿನಿಂದ ರೋಗಿಯನ್ನು ಗುಣಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಾನೆ. ಅದು ಆತನ ಬದ್ಧತೆಯಾಗಿ, ಜವಾಬ್ದಾರಿಯಾಗಿ ಪರಿಣಮಿಸುತ್ತದೆ. ಅದೇ ನಂಬಲಾರದ ರೋಗಿಗಳು ನೂರೆಂಟು ಆಸ್ಪತ್ರೆ ಅಲೆಯುತ್ತ ಎಲ್ಲೂ ಸಲ್ಲದವರಾಗಿಬಿಡುತ್ತಾರೆ.
ಕ್ಯಾನ್ಸರ್ ಎಂದು ಒಂದು ಬಾರಿ ಖಚಿತವಾದರೆ, ಪ್ರತಿಯೊಂದು ಕ್ಯಾನ್ಸರ್‌ಗೂ ಅದರದೇ ಆದ ವಿವಿಧ ರೀತಿಯ ಉಪಚಾರಗಳಿವೆ. ಕೆಲವೊಮ್ಮೆ ಬರೀ ಆಪರೇಶನ್ ದಿಂದ, ಇಲ್ಲವೇ ಬರೀ ಔಷಧೋಪಚಾರಗಳಿಂದ ಅಥವಾ ವಿಕಿರಣ ಚಿಕಿತ್ಸೆಯಿಂದ ಮತ್ತು ಹಲವು ಬಾರಿ ಈ ಮೂರೂ ವಿಧಾನಗಳ ಸರಿಯಾದ ಸಮ್ಮಿಳಿತದಿಂದ ಕ್ಯಾನ್ಸರ್ ನ್ನು ಹತೋಟಿಯಲ್ಲಿ ಇಡಬಹುದು. ದುರಾದೃಷ್ಟವೆಂದರೆ ಇವೆಲ್ಲವುಗಳು ನಮಗೆ ಲಭ್ಯವಿದ್ದರೂ ಬಹುತೇಕ ಸಂದರ್ಭಗಳಲ್ಲಿ ಕ್ಯಾನ್ಸರ್‌ನ್ನು ಸಂಪೂರ್ಣ ಗುಣಪಡಿಸುವುದು ಅಸಾಧ್ಯ. ವೈದ್ಯೋಪ ಚಾರದಿಂದ ರೋಗಿಯ ಬದುಕನ್ನು ಸಹನೀಯಗೊಳಿಸಬಹುದೇ ವಿನಃ ಸಾವನ್ನು ಗೆಲ್ಲುವುದು ಅಶಕ್ಯ. ಯಾಕೆಂದರೆ ಕ್ಯಾನ್ಸರ್‌ನ ಹುಟ್ಟೇ ಒಂದು ಜೈವಿಕ ವಿಪರ್ಯಾಸ. ದೇಹದ ಒಂದೇ ಒಂದು ಜೀವಕೋಶ ಎಲ್ಲ ನಿಯಂತ್ರಣಗಳನ್ನು ಮೀರಿ ಬೆಳೆಯಲು ಪ್ರಾರಂಭಿಸುವುದೇ ಕ್ಯಾನ್ಸರ್‌ನ ಉಗಮಕ್ಕೆ ಕಾರಣ. ಹೀಗಾಗಿ ಈ ಜೀವಕೋಶಗಳ ವಿರುದ್ಧ ಪ್ರಯೋಗಿಸುವ ಎಲ್ಲ ಉಪಚಾರಗಳೂ ಆರೋಗ್ಯವಂತ ಮತ್ತು ಉಪಯುಕ್ತ ಜೀವಕೊಶಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಹಾಗಾಗೇ ಇದರ ನಿಯಂತ್ರಣ ಕಷ್ಟಸಾಧ್ಯ. ಆರೋಗ್ಯವಂತ ಜೀವಕೋಶಗಳನ್ನು ಸಲಹುತ್ತಲೇ ಕ್ಯಾನ್ಸರ್ ಜೀವಕೋಶಗಳನ್ನು ಕೊಲ್ಲುವುದು ಅತ್ಯಂತ ಕ್ಲಿಷ್ಟಕರ ಕೆಲಸ. ಅದಕ್ಕಾಗಿಯೇ ಕ್ಯಾನ್ಸರ್ ಉಪಚಾರದ ಪರಿಣಾಮ ಗಳನ್ನು ಐದು ವರ್ಷ ಬದುಕುವ ಸಾಧ್ಯತೆ ಎಂಬ ಮಾನದಂಡದಿಂದ ಅಳೆಯಲಾಗುತ್ತದೆ.
ಹಾಗೆ ನೋಡಿದರೆ ಸ್ತನ ಕ್ಯಾನ್ಸರ್‌ನಲ್ಲಿ ಗುಣವಾಗುವ ಸಾಧ್ಯತೆಯ ಪ್ರಮಾಣ ಉಳಿದ ಕ್ಯಾನ್ಸರ್‌ಗಳಿಗಿಂತ ಸ್ವಲ್ಪ ಹೆಚ್ಚು. ಯಾವುದೇ ರೀತಿಯ ಉಪಚಾರದಲ್ಲೂ ಅಡ್ಡ ಪರಿಣಾಮಗಳು ಹೇಗಿವೆಯೆಂದರೆ ಅನೇಕ ಬಾರಿ ರೋಗಿಗಳು ಉಪಚಾರವನ್ನೇ ನಿಲ್ಲಿಸುವಂತೆ ಕೋರುತ್ತಾರೆ. ಪ್ರತಿ ಇಂಜೆಕ್ಷನ್ ಮುಗಿದಾಗಲೂ ಅದು ಉಂಟುಮಾಡುವ ಸಂಕಟ, ವಾಂತಿ, ಭೇದಿ, ನಿಶ್ಶಕ್ತಿ, ಕೂದಲುದುರುವಿಕೆ, ಇತ್ಯಾದಿಗಳು ವೈದ್ಯರಾದ ನಮ್ಮನ್ನೇ ಕಂಗೆಡಿಸುತ್ತವೆ, ಎಂದ ಮೇಲೆ ಅದರಿಂದ ಕಷ್ಟ ಅನುಭವಿಸುವ ರೋಗಿಗಳ ಸ್ಥಿತಿ ಹೇಗಿರಬೇಡ. ಆದರೂ ಅದಕ್ಕೆ ಪ್ರತಿ ಉಪಚಾರಗಳು ಲಭ್ಯ ಇವೆ ಎನ್ನುವುದೇ ಸಮಾಧಾನಕರ ಅಂಶ. ಇತ್ತೀಚಿನ ದಿನಗಳಲ್ಲಿ ಕರಾರುವಾಕ್ಕಾದ ವಿಕಿರಣ ಚಿಕಿತ್ಸೆ, ಔಷಧೋಪಚಾರಗಳು, ನುರಿತ ಶಸ್ತ್ರವೈದ್ಯರು, ಉತ್ತಮ ಆಸ್ಪತ್ರೆಗಳು, ರೋಗನಿದಾನದ ಪರಿಕರಗಳು ರೋಗಿಗಳ ಬದುಕನ್ನು ಸಹನೀಯಗೊಳಿಸಿವೆ.
ರಿಪೋರ್ಟ್ ಬಂದ ಮರುದಿನವೇ ಆಪರೇಶನ್. ಬೆಳಗಾವಿಯ ಕ್ಯಾನ್ಸರ್ ತಜ್ಞರನ್ನು ಕರೆಯಿಸಿ ಅವಳನ್ನು ಟೇಬಲ್‌ಗೆ ಕರೆದರೆ, ನಿರ್ಲಿಪ್ತ ನಡೆ. ಅದೇ ಟೇಬಲ್‌ನ ಒಂದು ಬದಿ ನಿಂತು ನೂರಾರು ಆಪರೇಶನ್‌ಗೆ ಅಸಿÓr… ಮಾಡಿದವಳು ಈಗ ಅದೇ ಟೇಬಲ್ ನ್ನು ಹತ್ತುತ್ತಿರಬೇಕಾದರೆ ನಮಗೆಲ್ಲ ಕಳವಳ. ಅವಳಿಗೆ ಹೇಗಾಗಿರಬೇಡ. ಆದರೆ ಟೇಬಲ್ ಏರುವಾಗ ವೈದ್ಯರ ಕಾಲು ಮುಟ್ಟಿ ನಮಸ್ಕರಿಸಿ ಮೇಲೇರಿ ಮಲಗಿದವಳ ಮುಖದಲ್ಲಿ ಶಾಂತ ಕಳೆ. ಉಪಚಾರಕ್ಕೆ ಅರ್ಪಿಸಿಕೊಳ್ಳುವುದರಲ್ಲಿಯೂ ಆದರ್ಶ. ಆಪರೇಶನ್ ಮುಗಿದ ಮೇಲೆ ನೋವಿನಿಂದ ನರಳಿದ್ದೇ ಇಲ್ಲ. ಕೇಳಿದಾಗೊಮ್ಮೆ “ಸರ್, ಆರಾಮ ಅದೀನ್ರಿ…’
ಐದನೇ ದಿನಕ್ಕೆ ಹಾಸಿಗೆಯಿಂದೆದ್ದವಳು ಮತ್ತೆ ಪೇಶಂಟ್‌ಗಳ ಉಪಚಾರಕ್ಕೆ ತಯಾರು, ಎದೆಯ ಮೇಲಿನ ಡ್ರೆಸ್ಸಿಂಗ್‌ನ್ನು ಭದ್ರಗೊಳಿಸುತ್ತ, ಕರ್ಮಯೋಗಿಯಂತೆ. ನನ್ನ ಮಗನ ಮದುವೆಗೆ ಒಂದು ವಾರವಿ¨ªಾಗ ಮೊದಲ ಕೀಮೋಥೆರಪಿ ಇಂಜೆಕ್ಷನ್. ಅಂತಹ ಸಂಕಟದಲ್ಲೂ ಅವಳದೊಂದೇ ಬಯಕೆ, ಮದುವೆಗೂ ಮೊದಲು ತನ್ನ ತಲೆಗೂದಲು ಉದುರದಿರಲಿ ಎಂದು.! ಹಾಗೆಯೇ ಆಯಿತು. ಮದುವೆಯ ದಿನ ತುಂಬುಕೂದಲಿನಿಂದ ಸಂಭ್ರಮದಿಂದ ಓಡಾಡಿದಳು, ಮುಂದೆ ಎರಡೇ ದಿನಗಳಲ್ಲಿ ಉದುರಿದ ತನ್ನ ತಲೆಗೂದಲನ್ನೆಲ್ಲ ಕಸಗೂಡಿಸಿ ತಲೆಗೊಂದು ಕಪ್ಪನೆಯ ಅರಿವೆ ಬಿಗಿದಳು, ಯಾವುದೇ ಮುಜುಗರವಿಲ್ಲದೆ. ಭೆಟ್ಟಿಯಾದವರಿಗೆಲ್ಲ ಯಾವುದೇ ಹಿಂಜರಿಕೆಗಳಿಲ್ಲದೆ, “ನನಗ ಕ್ಯಾನ್ಸರ್ ಆಗೇತ್ರಿ, ಆಪರೇಶನ್ ಮಾಡ್ಯಾರು. ಈಗ ಕೀಮೋ ನಡದೈತ್ರಿ, ಕೂದಲೆಲ್ಲ ಉದರ್ಯಾವು, ಹೋಗಲಿ ಬಿಡ್ರಿ, ಮತ್ತ ಬರತಾವಲ್ವಾ’ ಈ ನಿರ್ಲಿಪ್ತ ಭಾವ ಇರುವಂತಹವರು ಕಡಿಮೆ. ಬಂದದ್ದನ್ನು ಬಂದ ಹಾಗೆ ಸ್ವೀಕರಿಸಿ, ಸಾಧ್ಯವಿದ್ದ ಉಪಚಾರಗಳನ್ನು ಪಡೆದು, ಇರುವಷ್ಟು ದಿನ ಸುಖದಿಂದಿರೋಣ, ಅವನು ಕರೆದರೆ ಎದ್ದು ಹೋಗಿಬಿಡೋಣ.. ಎನ್ನಬೇಕಾದರೆ ಗಟ್ಟಿ ಮನಸ್ಸು ಬೇಕು. ಅಂತಹ ಅಪರೂಪದ ವ್ಯಕ್ತಿತ್ವ ಅವಳದು.
ಕ್ಯಾನ್ಸರ್ ಉಪಚಾರವೇನು ಒಂದೆರಡು ವಾರಗಳಲ್ಲಿ ಮುಗಿಯುವಂಥದೇ? ಅನೇಕ ತಿಂಗಳುಗಳವರೆಗೆ ಸಾಗುವ ನಿರಂತರ ಪ್ರಕ್ರಿಯೆ, ಅದು. ಆಪರೇಶನ್ ಆದ ಮೇಲೆ ಐದಾರು ಆವರ್ತಗಳ ಕೀಮೋಥೆರಪಿ, ತದನಂತರ ಸಾಗುವ ವಿಕಿರಣ ಚಿಕಿತ್ಸೆ, ಕೀಮೋಥೆರಪಿಯಿಂದಾಗುವ ಅಡ್ಡಪರಿಣಾಮಗಳು, ಇವಕ್ಕೆಲ್ಲ ಗಟ್ಟಿ ಮನಸ್ಸು ಮಾಡಿ ನಿಲ್ಲಬೇಕಾಗುತ್ತದೆ. ಕೀಮೋಥೆರಪಿಯನ್ನೇನೋ ನಮ್ಮ ಆಸ್ಪತ್ರೆಯಲ್ಲೆ ಕೊಟ್ಟೆವು. ಆದರೆ ವಿಕಿರಣ ಚಿಕಿತ್ಸೆ ಇರುವುದು ಬೆಳಗಾವಿಯಲ್ಲಿ. ವಾರಕ್ಕೆ ಐದು ದಿನ ಒಂದು ತಿಂಗಳವರೆಗೆ. ಅಲ್ಲೆ ಮನೆ ಮಾಡಿಕೊಂಡು ಇರಲು ಸೂಚಿಸಿದರೆ, ಅವಳದೊಂದೇ ಮಾತು. “ನಾನು ಇರುವವರೆಗೂ ರೋಗಿಗಳ ಸೇವೆ ಮಾಡುತ್ತಲೇ ಬದುಕು ವವಳು, ದಿನಾಲೂ ಹೋಗಿ ಬಂದು ಮಾಡುತ್ತೇನೆ.’ ಅವಳ ಹಠದೆದುರು ನಾವೆಲ್ಲ ಅಸಹಾಯಕರು. ಅವಳ ಇಚ್ಛೆಯಂತೆಯೆ ಸಾಗಿತು. ಬಸ್ ಪ್ರಯಾಣ. ಅರ್ಧ ದಿನ ಬೆಳಗಾವಿಯಲ್ಲಿ ತನ್ನ ಉಪಚಾರ, ಉಳಿದರ್ಧ ದಿನ ರೋಗಿಗಳ ಸೇವೆ!
ಐದು ವರ್ಷಗಳ ನಂತರ ಈಗ ಇನ್ನಷ್ಟು ಹುಮ್ಮಸ್ಸಿನಿಂದ, ಆರೋಗ್ಯವಾಗಿದ್ದಾಳೆ. ತಲೆಯಲ್ಲಿ ಕೂದಲೇನೋ ಬಂದಿವೆ. ಆಪರೇಶನ್ ನಿಂದಾದ ಅಂಗವಿಕಾರ ಬದಲಾಗದು. ಆದರೇನು,ಅವಳ ಮನಸ್ಸಿನ ಸೌಂದರ್ಯದೆದುರು ದೈಹಿಕ ವಿಕಾರತೆ ಗೌಣವಾಗಿದೆ. ಎಂದಿನಂತೆ ಇಂದಿಗೂ ರೋಗಿಗಳೇ ಅವಳ ಪ್ರಥಮ ಪ್ರಾಶಸ್ತ್ಯ ನೋವಲ್ಲಿದ್ದವರ ಕಂಡರೆ ಧಾವಿಸುತ್ತಾಳೆ. ಸೀರಿಯಸ್ ಪೇಶಂಟ್ ಇದ್ದರೆ, ಅವರ ಬದಿಯ ಕಾಟ್‌ನಲ್ಲಿ ಮಲಗಿಬಿಡುತ್ತಾಳೆ, ಅಹೋರಾತ್ರಿ ಅವರ ಆರೈಕೆ ಮಾಡುತ್ತ. ನಮ್ಮ ಆಸ್ಪತ್ರೆಯಲ್ಲಿ ಅಲ್ಲದೆ, ಬೇರೆ ಎಲ್ಲಿಯೇ ಇರಲಿ ಕ್ಯಾನ್ಸರ್ ಎಂದು ರೋಗನಿದಾನ ಹೊಂದಿದವರನ್ನು ಬದಿಯಲ್ಲಿ ಕುಳ್ಳಿರಿಸಿಕೊಳ್ಳುತ್ತಾಳೆ. ತನ್ನದೇ ಉದಾಹರಣೆ ಕೊಡುತ್ತ ಸಮಾಧಾನಿಸುತ್ತಾಳೆ. ನಾಳೆಗಳಲ್ಲಿ ಅಡಗಿರಬಹುದಾದ ಕಷ್ಟಗಳನ್ನು, ಅವುಗಳನ್ನು ಧೈರ್ಯದಿಂದ ಎದುರಿಸಿದರೆ ಸಿಗಬಹುದಾದ ಸಂತೋಷವನ್ನು ತಿಳಿಹೇಳುತ್ತಾಳೆ. ಕತ್ತಲು ತುಂಬಿದವರಿಗೆ ಭರವಸೆಯ ಬೆಳಕಾಗುತ್ತಾಳೆ. ತನ್ಮೂಲಕ ಅವರ ಮೊಗದಲ್ಲಿ ಮೂಡಿದ ಸಂತೋಷದ ಮುಗುಳ್ನಗೆಯ ಕಂಡು ತೃಪ್ತಿಯಿಂದ ಬೀಗುತ್ತಾಳೆ, ನೊಂದ ಮನಗಳಿಗೆ ಸಾಂತ್ವನ ನೀಡುವ ಭಾಗ್ಯ ತನ್ನದಾಯ್ತೆಂದು..!
ಡಾ. ಶಿವಾನಂದ ಕುಬಸದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
A.B.Vajpayee Birth Century: ಭವಿಷ್ಯದ ಭಾರತಕ್ಕೆ ಅಟಲ್ ಬಿಹಾರಿ ವಾಜಪೇಯಿ ಭದ್ರ ಬುನಾದಿ
YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ
ಮೇಲ್ಮನೆಗೆ ನಾನೇ ಫೈನಲ್, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Max Movie: ಸಖತ್ ರೆಸ್ಪಾನ್ಸ್ ಪಡೆದ ಕಿಚ್ಚನ ʼಮ್ಯಾಕ್ಸ್ʼ ಮೊದಲ ದಿನ ಗಳಿಸಿದ್ದೆಷ್ಟು?
Updated: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ
Madikeri: ಶ್ರೀಗಂಧದ ಮರ ಕಳ್ಳತನ ಪ್ರಕರಣ: ಆರೋಪಿಗಳ ಬಂಧನ
Max movie review: ಮಾಸ್ ಮನಸುಗಳಿಗೆ ʼಮ್ಯಾಕ್ಸ್ʼ ಅಭಿಷೇಕ
Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.