ಅಭಿಮಾನದ “ಅಭಿನವ’ಕ್ಕೆ 25 ವರ್ಷ!
Team Udayavani, Dec 28, 2018, 5:01 PM IST
ಇಂಕು, ಮಸಿ, ಕಾಗದ, ಅಕ್ಷರ, ಸಾಹಿತಿಗಳು, ಕವಿಗಳು, ಚಿಂತಕರು, ಇವರೆಲ್ಲರ ಜೊತೆ ಒಡನಾಡುವುದಕ್ಕೂ ಪುಣ್ಯ ಬೇಕು. ಅಂಥದ್ದೊಂದು ಪುಣ್ಯ ಪುಸ್ತಕ ಪ್ರಕಾಶಕರದ್ದು. ಒಂದು ಪುಸ್ತಕ ಶ್ರೇಷ್ಠ ಅನ್ನಿಸಿಕೊಂಡಾಗ ನಾವೆಲ್ಲರೂ ಲೇಖಕನನ್ನು ಕೊಂಡಾಡುತ್ತೇವೆ. ಪುಸ್ತಕ ಬರೆಸಲು ಅವನನ್ನು ಬೆಂಬಿಡದೆ ಕಾಡಿದ, ಜಿದ್ದಿಗೆ ಬಿದ್ದು ಬರೆಸಿದ ಪ್ರಕಾಶಕ ನಮ್ಮ ಕಣ್ಣಿಗೆ ಬೀಳುವುದೇ ಇಲ್ಲ. ಹೆಸರು ಬರದಿದ್ದಾಗಲೂ, ಪುಸ್ತಕ ಕಾಸು ಮಾಡದಿದ್ದಾಗಲೂ ಆತ ಚಿಂತಿತನಾಗುವುದಿಲ್ಲ. ಮತ್ತದೇ ಅದಮ್ಯ ಉತ್ಸಾಹ ತುಂಬಿಕೊಂಡು ಮುಂದಿನ ಪುಸ್ತಕ ಪ್ರಕಾಶನಕ್ಕೆ ಸಿದ್ಧನಾಗುತ್ತಾನೆ. ಪುಸ್ತಕ ಪ್ರಕಾಶನ ಎಂಬ ಪರೋಕ್ಷ ಕನ್ನಡ ಸೇವೆಯಲ್ಲಿ ನಿರತರಾಗಿರುವವರಲ್ಲಿ “ಅಭಿನವ’ ಪ್ರಕಾಶನದ ರವಿಕುಮಾರ್ ಅವರೂ ಒಬ್ಬರು. ಅವರು ಹೊರತಂದಿರುವ ಪುಸ್ತಕಗಳು ಸುಮಾರು 5 ಶತಕಗಳಷ್ಟು!
ನನ್ನೂರು, ಬೆಂಗಳೂರು ಸಮೀಪದ ಮಾಗಡಿ. ಕನ್ನಡ ಸಾಹಿತ್ಯದೊಂದಿಗಿನ ಒಡನಾಟ ತುಂಬಾ ಹಳೆಯದು. ಅದಕ್ಕೆ ಅಡಿಪಾಯ ಮನೆಯಲ್ಲಿಯೇ ಸಿಕ್ಕಿತ್ತು. ಅಪ್ಪ, ರೇಡಿಯೋದಲ್ಲಿ ಪ್ರಸಾರವಾಗುತ್ತಿದ್ದ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಕೇಳಿಸುತ್ತಿದ್ದರು. ಅಮ್ಮ ಅಡುಗೆ ಸಾಮಾನನ್ನು ಕಟ್ಟಿಕೊಡುತ್ತಿದ್ದ ಪೊಟ್ಟಣಗಳನ್ನೇ ಬಿಡಿಸಿ ಅದರಲ್ಲಿ ಬರೆದಿರುತ್ತಿದ್ದುದನ್ನು ಓದಿ ಹೇಳುತ್ತಿದ್ದರು. ಇವೆಲ್ಲದರಿಂದಾಗಿ, ಸಾಹಿತ್ಯದ ಬಗೆಗಿನ ಒಲವು ಮನದಲ್ಲಿ ಹಚ್ಚಹಸುರಾಯಿತು. ಖಾಸಗಿ ಸಂಸ್ಥೆಯಲ್ಲಿ ಸುಮಾರು 25 ವರ್ಷಗಳ ಟೆಕ್ನೀಷಿಯನ್ ಆಗಿ ಕೆಲಸ ನಿರ್ವಹಿಸಿದ್ದೆ. ವೃತ್ತಿಯ ದಿನಗಳಲ್ಲಿ ಸಾಹಿತ್ಯ ಚಟುವಟಿಕೆಗಳ ಸಂಘಟನೆಯಲ್ಲೂ ಪಾಲ್ಗೊಳ್ಳುತ್ತಿದ್ದೆ. ಕ್ರೈಸ್ಟ್ ಕಾಲೇಜು ಕನ್ನಡ ಸಂಘದ ಶ್ರೀನಿವಾಸರಾಜು ಮುಂತಾದವರ ಒಡನಾಟ ಬೆಳೆಯಿತು. ಚಾತುರ್ಮಾಸಿಕ ಪತ್ರಿಕೆಯೊಂದನ್ನೂ ಹೊರತಂದೆವು. ಹೀಗಿದ್ದಾಗ, ಮುಂದೆ ಕೆಲಸದಿಂದ ನಿವೃತ್ತನಾದಾಗ ಮುಂದೇನು ಮಾಡಬೇಕೆಂಬುದರ ಬಗ್ಗೆ ಗೊಂದಲವೇ ಮೂಡಲಿಲ್ಲ. ನೇರವಾಗಿ ಪುಸ್ತಕ ಪ್ರಕಾಶನಕ್ಕೆ ಇಳಿದುಬಿಟ್ಟೆ. ಇಲ್ಲೂ 25 ವರ್ಷಗಳು ಹೇಗೆ ಕಳೆದು ಹೋದುವು ಎಂದೇ ತಿಳಿಯಲಿಲ್ಲ. ಪ್ರಶಸ್ತಿಗಳೂ ಅರಸಿ ಬಂದವು. ಆದರೆ ನಮ್ಮ ಪುಸ್ತಕವನ್ನು ಓದುಗ ಕೊಂಡು, ಕೈಲಿ ಹಿಡಿದು ಓದುತ್ತಾನಲ್ಲ; ಅದನ್ನು ನೋಡಿದಾಗ ಸಿಗುವ ಖುಷಿಯ ಮುಂದೆ ಉಳಿದುದೆಲ್ಲವೂ ಗೌಣವಾಗಿಬಿಡುತ್ತದೆ.
ಮರೆಯಲಾಗದ ಪುಸ್ತಕಗಳು
ಈವರೆಗೆ ನಾವು ಪ್ರಕಟಿಸಿರುವ ಸುಮಾರು 500 ಪುಸ್ತಕಗಳಷ್ಟೂ ಸ್ವಂತ ಮಕ್ಕಳಂತೆ. ಪ್ರತಿಯೊಂದು ಪುಸ್ತಕ ಪ್ರಕಟಣೆಯ ಹಿಂದೆ ಒಂದು ಬಾಂಧವ್ಯ ಬೆಸೆದುಕೊಂಡಿರುತ್ತದೆ. ಅಭಿನವದಿಂದ ಪ್ರಕಟಗೊಂಡ ಪುಸ್ತಕಗಳಲ್ಲೇ ಆತ್ಮತೃಪ್ತಿ ಕೊಟ್ಟ ಪುಸ್ತಕವೆಂದರೆ ಬೆಳಗೆರೆ ಕೃಷ್ಣಶಾಸಿŒಯವರ “ಮರೆಯಲಾದೀತೇ?’. ಅನೇಕ ಕಾರಣಗಳಿಗೆ ಈ ಪುಸ್ತಕ ಆಪ್ತ ಎನಿಸುತ್ತದೆ. ನಿಮ್ಮ ಬದುಕನ್ನು ಹಿಡಿದಿಡುವ ಪುಸ್ತಕ ಬರೆದುಕೊಡಿ ಎಂದು ಬೆಳಗೆರೆಯವರನ್ನು ಕೇಳಿದ ಸಂದರ್ಭದಲ್ಲಿ ಅವರಿಗೆ ಬರೆಯುವ ಶಕ್ತಿ ಇರಲಿಲ್ಲ. ಆದರೆ ಅವರಿಂದ ಒಂದು ಪುಸ್ತಕ ಬರೆಸಲೇಬೇಕೆಂಬ ಜಿದ್ದು ನನ್ನದು. ಇದಕ್ಕೆ ರವಿ ಬೆಳಗೆರೆಯವರ ಒತ್ತಾಸೆಯೂ ಇತ್ತೆನ್ನಿ. ಕಡೆಗೆ ಶಾಸಿŒಗಳ ಹೇಳುವ ಮಾತುಗಳನ್ನು ರೆಕಾರ್ಡ್ ಮಾಡಿಕೊಂಡು ಕೃತಿಗೆ ಇಳಿಸುವುದಂತಲೂ ತೀರ್ಮಾನಿಸಿದೆವು. ಅದೆಷ್ಟು ತ್ರಾಸದಾಯಕ ಅನ್ನೋದು ಆ ಕೆಲಸಕ್ಕೆ ಕೈ ಹಚ್ಚಿದಾಗಲೇ ಗೊತ್ತಾಗಿದ್ದು. ಮಾತನ್ನು ಕೃತಿಗೆ ಇಳಿಸುವುದಷ್ಟೇ ಅಲ್ಲವೇ, ಅದು ಸರಳ ಎಂದು ಕೆಲವರಿಗೆ ಅನ್ನಿಸಬಹುದು. ಆದರೆ ಅವರ ಮಾತುಗಳ ಸರಣಿ ಹೇಗಿರುತ್ತಿದ್ದವೆಂದರೆ ಒಂದಕ್ಕೊಂದು ಸಂಬಂಧವೇ ತಪ್ಪಿ ಹೋಗಿಬಿಡುತ್ತಿತ್ತು. ಬರೆಯುವಾಗ ಇವೆಲ್ಲವನ್ನೂ ಗಮನದಲ್ಲಿರಿಸಿಕೊಂಡು, ವಿಷಯದ ಓಘ ತಪ್ಪದಂತೆ ಎಚ್ಚರಿಕೆ ವಹಿಸಬೇಕಾಗಿತ್ತು. ಕೈ ಕೆಸರಾದರೆ ಬಾಯಿ ಮೊಸರು ಎಂಬ ಹಿರಿಯರ ಮಾತಿನಂತೆ ಕಡೆಗೂ ಪುಸ್ತಕ ಹೊರಬಂದಾಗ ಸ್ವರ್ಗಕ್ಕೆ ಮೂರೇ ಗೇಣು ಎಂಬಂತಾಗಿತ್ತು. ಪುಸ್ತಕ ಹೇಗೆ ಮೂಡಿಬರಬೇಕು ಎಂದುಕೊಂಡಿದ್ದೆನೋ ಅಷ್ಟೇ ಚೆನ್ನಾಗಿ ಬಂದಿತ್ತು. ನನಗೆ ಮಾತ್ರ ಆ ಪುಸ್ತಕ ಹತ್ತಿರವಾದುದು ಎಂದುಕೊಂಡಿದ್ದೆ. ಆದರೆ, ಆ ಪುಸ್ತಕ ಓದಿದ ಅನೇಕರು ಕೃಷ್ಣಶಾಸಿŒಗಳ ಶಾಲೆಗೆ ತಮ್ಮ ಕೈಲಾದಷ್ಟು ಸಹಾಯ ಒದಗಿಸಿದ್ದು ನನಗೆ ಅತೀವ ಅಚ್ಚರಿ ತರಿಸಿತ್ತು. ಓದುಗನನ್ನು ಪ್ರಭಾವಿಸಿದ್ದೇ ಆದಲ್ಲಿ ಪುಸ್ತಕದ ಆಶಯ ಯಶಸ್ವಿ ಎನ್ನುವುದು ನನ್ನ ಭಾವನೆ. ಅದನ್ನು ಸಾಧಿಸಿದ ಪುಸ್ತಕ “ಮರೆಯಲಾದೀತೇ?’ ಎಂದು ಹೆಮ್ಮೆಯಿಂದ ಹೇಳಬಲ್ಲೆ. ಅಂತೆಯೇ, ಅಭಿನವ ಹೊರ ತಂದಿರುವ ಪುಸ್ತಕಗಳಲ್ಲೇ ಇಲ್ಲಿಯವರೆಗೆ ಅತಿ ಹೆಚ್ಚು ಮರುಮುದ್ರಣ ಕಂಡಿರುವ ದೇವನೂರು ಮಹಾದೇವ ಅವರ “ಎದೆಗೆ ಬಿದ್ದ ಅಕ್ಷರ’ ಮತ್ತು ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕಿಸಿಕೊಡುವಲ್ಲಿ ಮುಖ್ಯ ಪಾತ್ರ ವಹಿಸಿದ ಷ. ಶೆಟ್ಟರ್ ಅವರ “ಶಂಗಂ ತಮಿಳಿಗಂ’ ಕೂಡಾ ಅಚ್ಚುಮೆಚ್ಚು.
ಹೆಸರು ಮಾಡುವ ಧಾವಂತ!
ಇಂದಿನ ಆನ್‌ಲೈನ್ ಪ್ರಪಂಚದಲ್ಲಿ ಪ್ರತಿಯೊಬ್ಬರೂ ಬರಹಗಾರರಾಗಿಬಿಟ್ಟಿದ್ದಾರೆ, ಸಾಹಿತಿಗಳಾಗಿಬಿಟ್ಟಿದ್ದಾರೆ. ಇದು ಒಂದು ಒಂದು ರೀತಿಯಲ್ಲಿ ಉತ್ತಮ ಬೆಳವಣಿಗೆ. ಆದರೆ ಅದರ ಹಿಂದೆಯೇ ಸಮಸ್ಯೆಗಳೂ ಇಣುಕುತ್ತವೆ. ಹಿಂದೆಲ್ಲಾ ಪುಸ್ತಕಗಳನ್ನು ಮೊಳೆ ಜೋಡಿಸಿ ಮುದ್ರಿಸುತ್ತಿದ್ದರು. ಬಹಳ ಆಸ್ಥೆಯಿಂದ, ಎಚ್ಚರಿಕೆಯಿಂದ ಎಲ್ಲೂ ದುಂದಾಗದಂತೆ ನೋಡಿಕೊಳ್ಳುತ್ತಿದ್ದರು. ಅಕ್ಷರ ದೋಷಗಳಾಗದಂತೆ ಏಳೆಂಟು ಬಾರಿ ಪ್ರೂಫ್ ರೀಡ್ ಮಾಡುತ್ತಿದ್ದರು. ಆದರೀಗ ಮುದ್ರಣ ಬಹಳ ಸುಲಭ. ದಿನದಲ್ಲೇ ಕೆಲಸ ಮುಗಿದುಹೋಗುತ್ತದೆ, ಅದೂ ಕಡಿಮೆ ಖರ್ಚಿನಲ್ಲಿ! ಆದರೆ ದೋಷಗಳು ಮಾತ್ರ ಮೂಟೆಯಷ್ಟು ಸಿಗುತ್ತವೆ. ಆದಷ್ಟು ಬೇಗನೆ ಪುಸ್ತಕ ಮುದ್ರಿಸಿ ಹಂಚುವ ಧಾವಂತ ಎಲ್ಲರಿಗೂ. ಈ ಭರದಲ್ಲಿ ಅಕ್ಷರಪ್ರೀತಿಯನ್ನು ಕಳೆದುಕೊಳ್ಳಬಾರದು ಎಂಬ ಕಾಳಜಿಯಷ್ಟೆ. ಇತ್ತೀಚಿನ ದಿನಗಳಲ್ಲಿ ದುಡ್ಡಿದ್ದವರು ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಲು ತುಡಿಯುವ ಪ್ರವೃತ್ತಿ ಕಂಡುಬರುತ್ತಿದೆ. ಬರವಣಿಗೆಯ ಗುಣಮಟ್ಟ, ನೈಜವಾದ ಸಾಹಿತ್ಯಾಸಕ್ತಿ ಇಲ್ಲದ ಇಂಥ ಅನೇಕ ಮಂದಿಯನ್ನು ನಿರಾಕರಿಸಿದ್ದೂ ಇದೆ. ಪುಸ್ತಕ ಹೊರತರಲಿಚ್ಛಿಸುವ ಹೊಸಬರಿಗೆ ನಮ್ಮ ಪ್ರೋತ್ಸಾಹ ಸದಾ ಇರುತ್ತದೆ. ಸಾಮಾಜಿಕ ಬದ್ಧತೆ ಇರುವ, ಕನ್ನಡ ನೆಲದ ಸಂವೇದನೆಯನ್ನು ಕಟ್ಟಿಕೊಡಬೇಕು ಎನ್ನುವುದಷ್ಟೆ ನಮ್ಮ ಆಶಯ.
ಪುಸ್ತಕದಲ್ಲಿ ಗಡಿಯಾರ!
ನಮ್ಮ ನೆಲದ ಕತೆಗಳನ್ನು, ಪ್ರಜ್ಞೆಯನ್ನೂ ಓದುಗರಿಗೆ ತಲುಪಿಸಬೇಕೆಂಬುದು ನಮ್ಮಾಸೆ. ಅದರ ಜೊತೆಗೇ ಜಗದ್ವಿಖ್ಯಾತ ಸಾಹಿತಿಗಳನ್ನೂ, ಚಿಂತಕರನ್ನು ಮತ್ತು ಅವರ ವಿಚಾರಧಾರೆಯನ್ನು ಕನ್ನಡದ ಓದುಗರಿಗೆ ಪರಿಚಯಿಸಬೇಕೆಂಬ ನಿಟ್ಟಿನಲ್ಲಿಯೂ “ಅಭಿನವ’ ಕಾರ್ಯಾಚರಿಸುತ್ತಿದೆ. ಇದರೊಂದಿಗೆ ಕೆಲ ಯೋಜನೆಗಳೂ ನಮ್ಮ ಮುಂದಿವೆ. ಮೊದಲನೆಯದು ಕನ್ನಡದಲ್ಲಿ ವಿನೂತನ ಪದಕೋಶವನ್ನು ಸಂಪಾದಿಸಿ ಕೊಡುವುದು. ಅದರಲ್ಲಿ ಅರ್ಥ ಮಾತ್ರವಲ್ಲದೆ, ಭಾವಾರ್ಥ, ಯಾವ ಸಂದರ್ಭದಲ್ಲಿ ಉಪಯೋಗಿಸಲ್ಪಡುತ್ತದೆ ಮುಂತಾದ ಮಾಹಿತಿಯನ್ನೂ ಅದು ಒಳಗೊಂಡಿರುತ್ತದೆ. ಒಂದು ಪದದ ಸಂಪೂರ್ಣ ರಚನೆ ಮತ್ತು ಬಳಕೆ ಅದರಲ್ಲಿರುತ್ತದೆ. ಎರಡನೆಯ ಯೋಜನೆ, ಇಂಗ್ಲೀಷ್‌ನ ಬಣ್ಣಬಣ್ಣದ ರೈಮಿಂಗ್ ಪುಸ್ತಕಗಳಂತೆ, ಗುಣಮಟ್ಟದ ಮಕ್ಕಳ ಪುಸ್ತಕವನ್ನು ಕನ್ನಡದಲ್ಲಿ ತರಬೇಕು ಅನ್ನೋದು. ಕೆಲ ಸಮಯದ ಹಿಂದೆ ಒಂದು ವಿದೇಶಿ ಪುಸ್ತಕವೊಂದನ್ನು ನೋಡಿದ್ದೆ. ಅದರಲ್ಲಿ ಗಡಿಯಾರದ ಬಗ್ಗೆ ಕವನವಿತ್ತು. ಪಕ್ಕದ ಪುಟದಲ್ಲಿ ಕಾಗದದ ಗಡಿಯಾರದ ಪುಟ್ಟ ರಚನೆಯನ್ನೇ ಕೂರಿಸಲಾಗಿತ್ತು. ಮಕ್ಕಳು ಅದರ ಮುಳ್ಳುಗಳನ್ನು ಸರಿಸಿ ಸಮಯ ಹೇಳುವಂತೆ ಮಾಡುವುದು ಪುಸ್ತಕದ ಆಶಯ. ನಮ್ಮ ಮಕ್ಕಳನ್ನು ಜ್ಞಾನವಂತರನ್ನಾಗಿಸುತ್ತಲೇ, ಅವರಲ್ಲಿ ಸೃಜನಶೀಲತೆಯನ್ನು ಉದ್ದೀಪಿಸಬಲ್ಲ ಇಂಥ ಇಂಟರ್ಯಾಕ್ಟಿವ್ ಪುಸ್ತಕಗಳನ್ನು ತರಬೇಕೆಂಬ ಆಸೆಯಿದೆ. ನೋಡೋಣ…
ನಿರೂಪಣೆ - ಹರ್ಷವರ್ಧನ್ ಸುಳ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!
SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.