ವರ್ಷದ ಕೊನೆಯಲ್ಲಿ ಹರ್ಷದ ಹೊನಲು
Team Udayavani, Dec 31, 2018, 12:30 AM IST
ಮೆಲ್ಬರ್ನ್: ಭಾರತದ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆ ಸಾಕಾರಗೊಂಡಿದೆ. “ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್’ ಟೀಮ್ ಇಂಡಿಯಾಕ್ಕೆ ಒಲಿದಿದೆ. ಆಸ್ಟ್ರೇಲಿಯ ಎದುರಿನ ತೃತೀಯ ಟೆಸ್ಟ್ ಪಂದ್ಯವನ್ನು 137 ರನ್ನುಗಳ ಭಾರೀ ಅಂತರದಿಂದ ಗೆದ್ದ ಕೊಹ್ಲಿ ಪಡೆ 2-1 ಮುನ್ನಡೆಯೊಂದಿಗೆ “ಬೋರ್ಡರ್-ಗಾವಸ್ಕರ್ ಟ್ರೋಫಿ’ಯನ್ನು ತನ್ನಲ್ಲೇ ಉಳಿಸಿಕೊಂಡು ಮೆರೆದಾಡಿದೆ. ಇತಿಹಾಸವೊಂದಕ್ಕೆ ಹತ್ತಿರವಾಗಿದೆ.
ಜ. 3ರಿಂದ ಸಿಡ್ನಿಯಲ್ಲಿ ಆರಂಭವಾಗುವ “ನ್ಯೂ ಇಯರ್ ಟೆಸ್ಟ್’ ಪಂದ್ಯವನ್ನು ಡ್ರಾ ಮಾಡಿಕೊಂಡರೂ ಭಾರತ ಮೊದಲ ಬಾರಿಗೆ ಆಸ್ಟ್ರೇಲಿಯ ನೆಲದಲ್ಲಿ ಟೆಸ್ಟ್ ಸರಣಿಯನ್ನು ವಶಪಡಿಸಿಕೊಳ್ಳಲಿದೆ. 7 ದಶಕಗಳ ಕಾಯುವಿಕೆ ಕೊನೆಗೊಳ್ಳಲಿದೆ.
ಸ್ವಾಗತ ಕೋರಿದ ಮಳೆರಾಯ!
ಅಂತಿಮ ದಿನವಾದ ರವಿವಾರ ಕೊಹ್ಲಿ ಪಡೆಯ ಗೆಲುವಿಗೆ ಅಗತ್ಯವಿದ್ದದ್ದು 2 ವಿಕೆಟ್ ಮಾತ್ರ. ಆದರೆ ಬೆಳಗ್ಗೆ 5 ಗಂಟೆಗೆ ಎದ್ದು ಭಾರತದ ಗೆಲುವನ್ನು ಕಣ್ತುಂಬಿಸಿಕೊಳ್ಳಲು ಟಿವಿ ಮುಂದೆ ಕುಳಿತವರಿಗೆ ಅನಿರೀಕ್ಷಿತ ಆಘಾತವೊಂದು ಎದುರಾಗಿತ್ತು.
ಮೆಲ್ಬರ್ನ್ ನಲ್ಲಿ ಮಳೆ ಸುರಿಯುತ್ತಿತ್ತು; ಪಂದ್ಯ ಸ್ಥಗಿತಗೊಂಡಿತ್ತು! ಅಯ್ಯೋ ಗ್ರಹಚಾರವೇ ಎಂದು ಪರಿತಪಿಸುತ್ತಿರುವಾಗಲೇ ಮೆಲ್ಬರ್ನ್ ಬಾನಿನಲ್ಲಿ ಸೂರ್ಯ ಮೂಡಿದ. ಲಂಚ್ ಬಳಿಕ ಆಟ ಆರಂಭಗೊಂಡಿತು. ಕೇವಲ 4.3 ಓವರ್‌ಗಳಲ್ಲಿ ಉಳಿದೆರಡು ವಿಕೆಟ್‌ಗಳನ್ನು ಉಡಾಯಿಸಿದ ಭಾರತ ಜಯಭೇರಿ ಮೊಳಗಿಸಿತು. 8 ವಿಕೆಟಿಗೆ 258 ರನ್ ಮಾಡಿದ್ದ ಆಸೀಸ್ 261ಕ್ಕೆ ಆಲೌಟ್ ಆಯಿತು. ಹಿಂದಿನ ದಿನ ಅರ್ಧ ಗಂಟೆ ಹೆಚ್ಚುವರಿ ಅವಧಿ ಪಡೆದಿದ್ದರೂ ಭಾರತಕ್ಕೆ ಈ 2 ವಿಕೆಟ್ ಮರೀಚಿಕೆಯೇ ಆಗುಳಿದಿತ್ತು.
ಕಮಿನ್ಸ್ ಹೋರಾಟ ಅಂತ್ಯ
ಅಜೇಯ 61 ರನ್ ಬಾರಿಸಿ ಹೋರಾಟ ವೊಂದನ್ನು ಸಂಘಟಿಸಿದ್ದ, ತಂಡದ ಸೋಲನ್ನು ಕೊನೆಯ ದಿನಕ್ಕೆ ಮುಂದೂಡಿದ್ದ ಪ್ಯಾಟ್ ಕಮಿನ್ಸ್ ಅವರನ್ನೇ ಭಾರತ ಮೊದಲು ಪೆವಿಲಿಯನ್ನಿಗೆ ಅಟ್ಟಿತು. ಈ ವಿಕೆಟ್ ಬುಮ್ರಾ ಬುಟ್ಟಿಗೆ ಬಿತ್ತು. ಬ್ಯಾಟಿಗೆ ಸವರಿ ಹೋದ ಚೆಂಡು ಮೊದಲ ಸ್ಲಿಪ್‌ನಲ್ಲಿದ್ದ ಪೂಜಾರ ಅವರ ಸುರಕ್ಷಿತ ಕೈಗಳನ್ನು ಸೇರಿತು. 5 ಎಸೆತಗಳ ಬಳಿಕ ಇಶಾಂತ್ ಶರ್ಮ ಮತ್ತೋರ್ವ ನಾಟೌಟ್ ಬ್ಯಾಟ್ಸ್‌ಮನ್ ನಥನ್ ಲಿಯೋನ್ ವಿಕೆಟ್ ಉಡಾಯಿಸಿ ಭಾರತದ ಗೆಲುವನ್ನು ಸಾರಿದರು. ಈ ಕ್ಯಾಚ್ ಕೀಪರ್ ರಿಷಬ್ ಪಂತ್ ಪಡೆದರು.
ಆಸ್ಟ್ರೇಲಿಯದ ದ್ವಿತೀಯ ಸರದಿಯ ಏಕೈಕ ಅರ್ಧ ಶತಕಕ್ಕೆ ಸಾಕ್ಷಿಯಾದ ಕಮಿನ್ಸ್ 114 ಎಸೆತ ಎದುರಿಸಿ 63 ರನ್ ಹೊಡೆದರು (5 ಬೌಂಡರಿ, 1 ಸಿಕ್ಸರ್). ಭರ್ತಿ 50 ಎಸೆತ ನಿಭಾಯಿಸಿದ ಲಿಯೋನ್ ಗಳಿಕೆ 7 ರನ್.
ಭಾರತದ ಬೌಲಿಂಗ್ ಸರದಿಯಲ್ಲಿ ಮಿಂಚಿದ ಬುಮ್ರಾ ಮತ್ತು ಜಡೇಜ ತಲಾ 3 ವಿಕೆಟ್, ಇಶಾಂತ್ ಮತ್ತು ಶಮಿ ತಲಾ 2 ವಿಕೆಟ್ ಉರುಳಿಸಿದರು.
37 ವರ್ಷಗಳ ಬಳಿಕ ಒಲಿದ ಮೆಲ್ಬರ್ನ್
ಇದರೊಂದಿಗೆ ಭಾರತ ತಂಡ 37 ವರ್ಷಗಳಷ್ಟು ಸುದೀರ್ಘಾ ವಧಿಯ ಬಳಿಕ ಮೆಲ್ಬರ್ನ್ನಲ್ಲಿ ಮೊದಲ ಟೆಸ್ಟ್ ಗೆಲುವನ್ನು ಕಂಡಿತು. 1980-81ರಲ್ಲಿ ಸುನೀಲ್ ಗಾವಸ್ಕರ್ ಸಾರಥ್ಯದ ಭಾರತ ತಂಡ ಮೆಲ್ಬರ್ನ್ ನಲ್ಲಿ 59 ರನ್ನುಗಳ ಗೆಲುವು ಸಾಧಿಸಿ ಸರಣಿಯನ್ನು 1-1 ಸಮಬಲದಲ್ಲಿ ಮುಗಿಸಿತ್ತು. ಗ್ರೆಗ್ ಚಾಪೆಲ್ ಅಂದಿನ ಆಸ್ಟ್ರೇಲಿಯ ತಂಡದ ನಾಯಕರಾಗಿದ್ದರು.
ನಮ್ಮ ಓಟ ಇಲ್ಲಿಗೇ ಕೊನೆಗೊಳ್ಳದು. ಈ ಗೆಲುವು ನಮ್ಮಲ್ಲಿ ಅಪಾರ ಆತ್ಮವಿಶ್ವಾಸ ತುಂಬಿದೆ. ಸಿಡ್ನಿಯಲ್ಲಿ ಹೆಚ್ಚು ಸಕಾರಾತ್ಮಕವಾಗಿ ಆಡಿ ಸರಣಿ ಜಯಿಸುವುದು ನಮ್ಮ ಯೋಜನೆ. ಎಲ್ಲ ವಿಭಾಗಗಳಲ್ಲೂ ನಮ್ಮ ತಂಡ ಹೆಚ್ಚು ಪರಿಪೂರ್ಣವಾಗಿದೆ.
– ವಿರಾಟ್ ಕೊಹ್ಲಿ
ವಿಶ್ವ ದರ್ಜೆಯ ಬ್ಯಾಟ್ಸ್
ಮನ್‌ಗಳಾದ ಸ್ಮಿತ್, ವಾರ್ನರ್ ಅನುಪಸ್ಥಿತಿ ನಮ್ಮನ್ನು ಕಾಡಿದ್ದು ಸುಳ್ಳಲ್ಲ. ಭಾರತದ ಬೌಲಿಂಗ್ ವಿಭಾಗ ಅತ್ಯಂತ ಬಲಿಷ್ಠವಾಗಿದೆ. ಈ ವರೆಗೆ ನಮ್ಮ ಹುಡುಗರು ಎದುರಿಸಿದ ಬೌಲಿಂಗ್ ದಾಳಿಯಲ್ಲೇ ಇದು ಘಾತಕವಾಗಿತ್ತು.
– ಟಿಮ್ ಪೇನ್
ಭಾರತ ಪ್ರಥಮ ಇನ್ನಿಂಗ್ಸ್ 7 ವಿಕೆಟಿಗೆ 443 ಡಿಕ್ಲೇರ್
ಆಸ್ಟ್ರೇಲಿಯ ಪ್ರಥಮ ಇನ್ನಿಂಗ್ಸ್ 151
ಭಾರತ ದ್ವಿತೀಯ ಇನ್ನಿಂಗ್ಸ್ 8 ವಿಕೆಟಿಗೆ ಡಿಕ್ಲೇರ್ 106
ಆಸ್ಟ್ರೇಲಿಯ ದ್ವಿತೀಯ ಇನ್ನಿಂಗ್ಸ್
(ಗೆಲುವಿನ ಗುರಿ 399 ರನ್)
ಮಾರ್ಕಸ್ ಹ್ಯಾರಿಸ್ ಸಿ ಅಗರ್ವಾಲ್ ಬಿ ಜಡೇಜ 13
ಆರನ್ ಫಿಂಚ್ ಸಿ ರೋಹಿತ್ ಬಿ ಬುಮ್ರಾ 3
ಉಸ್ಮಾನ್ ಖ್ವಾಜಾ ಎಲ್‌ಬಿಡಬ್ಲ್ಯು ಶಮಿ 33
ಶಾನ್ ಮಾರ್ಷ್ ಎಲ್‌ಬಿಡಬ್ಲ್ಯು ಬುಮ್ರಾ 44
ಟ್ರ್ಯಾವಿಸ್ ಹೆಡ್ ಬಿ ಇಶಾಂತ್ 34
ಮಿಚೆಲ್ ಮಾರ್ಷ್ ಸಿ ಕೊಹ್ಲಿ ಬಿ ಜಡೇಜ 10
ಟಿಮ್ ಪೇನ್ ಸಿ ಪಂತ್ ಬಿ ಜಡೇಜ 26
ಪ್ಯಾಟ್ ಕಮಿನ್ಸ್ ಸಿ ಪೂಜಾರ ಬಿ ಬುಮ್ರಾ 63
ಮಿಚೆಲ್ ಸ್ಟಾರ್ಕ್ ಬಿ ಶಮಿ 18
ನಥನ್ ಲಿಯೋನ್ ಸಿ ಪಂತ್ ಬಿ ಇಶಾಂತ್ 7
ಜೋಶ್ ಹ್ಯಾಝಲ್‌ವುಡ್ ಔಟಾಗದೆ 0
ಇತರ 10
ಒಟ್ಟು (ಆಲೌಟ್) 261
ವಿಕೆಟ್ ಪತನ: 1-6, 2-33, 3-63, 4-114, 5-135, 6-157, 7-176, 8-215, 9-261.
ಬೌಲಿಂಗ್:
ಇಶಾಂತ್ ಶರ್ಮ 14.3-1-40-2
ಜಸ್‌ಪ್ರೀತ್ ಬುಮ್ರಾ 19-3-53-3
ರವೀಂದ್ರ ಜಡೇಜ 32-6-82-3
ಮೊಹಮ್ಮದ್ ಶಮಿ 21-2-71-2
ಹನುಮ ವಿಹಾರಿ 3-1-7-0
ಪಂದ್ಯಶ್ರೇಷ್ಠ: ಜಸ್‌ಪ್ರೀತ್ ಬುಮ್ರಾ
ಅಂತಿಮ ಟೆಸ್ಟ್: ಜ. 3-7 (ಸಿಡ್ನಿ)
ಎಕ್ಸ್‌ಟ್ರಾ ಇನ್ನಿಂಗ್ಸ್
ಭಾರತ ಟೆಸ್ಟ್ ಚರಿತ್ರೆಯಲ್ಲಿ 150 ಗೆಲುವು ಸಾಧಿಸಿದ ವಿಶ್ವದ 5ನೇ ತಂಡವಾಗಿ ಮೂಡಿಬಂತು. ಆಸ್ಟ್ರೇಲಿಯ (384), ಇಂಗ್ಲೆಂಡ್ (364), ವೆಸ್ಟ್ ಇಂಡೀಸ್ (171) ಮತ್ತು ದಕ್ಷಿಣ ಆಫ್ರಿಕಾ (162) ಈ ಸಾಧನೆ ಮಾಡಿರುವ ಉಳಿದ ತಂಡಗಳು.
ಭಾರತ ಮೊದಲ ಬಾರಿಗೆ ಮೆಲ್ಬರ್ನ್ನಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಜಯ ಸಾಧಿಸಿತು. ಹಿಂದಿನ 7 ಬಾಕ್ಸಿಂಗ್ ಡೇ ಟೆಸ್ಟ್
ಗಳಲ್ಲಿ ಭಾರತ ಐದರಲ್ಲಿ ಸೋತಿತ್ತು, ಎರಡನ್ನು ಡ್ರಾ ಮಾಡಿಕೊಂಡಿತ್ತು.
ಭಾರತ ಮೊದಲ ಬಾರಿಗೆ ಕ್ಯಾಲೆಂಡರ್ ವರ್ಷದಲ್ಲಿ ಏಶ್ಯದ ಹೊರಗಡೆ ಸರ್ವಾಧಿಕ 4 ಟೆಸ್ಟ್ ಪಂದ್ಯಗಳನ್ನು ಜಯಿಸಿತು.
ಭಾರತ ಕ್ಯಾಲೆಂಡರ್ ವರ್ಷದಲ್ಲಿ ಎದುರಾಳಿ ತಂಡವನ್ನು ಅತೀ ಹೆಚ್ಚು 25 ಸಲ ಆಲೌಟ್ ಮಾಡಿತು (27 ಇನ್ನಿಂಗ್ಸ್). 2002ರ 28 ಇನ್ನಿಂಗ್ಸ್‌ಗಳಲ್ಲಿ 22 ಸಲ ಆಲೌಟ್ ಮಾಡಿದ್ದು ಹಿಂದಿನ ದಾಖಲೆಯಾಗಿತ್ತು. 2005ರಲ್ಲಿ ಆಸ್ಟ್ರೇಲಿಯ, 2008ರಲ್ಲಿ ದಕ್ಷಿಣ ಆಫ್ರಿಕಾ ಎದುರಾಳಿಯನ್ನು 26 ಸಲ ಆಲೌಟ್ ಮಾಡಿದ್ದು ದಾಖಲೆ.
ಭಾರತದ ಪೇಸ್ ಬೌಲರ್‌ಗಳು ತವರಿನಾಚೆ ವರ್ಷವೊಂದರಲ್ಲಿ ಸರ್ವಾಧಿಕ 158 ವಿಕೆಟ್ ಉರುಳಿಸಿದರು (ಬುಮ್ರಾ 40, ಇಶಾಂತ್ 40, ಶಮಿ 46). ಈ ಸಾಧನೆಯಲ್ಲಿ ಭಾರತಕ್ಕೆ 2ನೇ ಸ್ಥಾನ. 1980ರಲ್ಲಿ ವಿಂಡೀಸ್ ವೇಗಿಗಳಾದ ಮಾರ್ಷಲ್, ಹೋಲ್ಡಿಂಗ್, ಗಾರ್ನರ್ ಸೇರಿಕೊಂಡು 189 ವಿಕೆಟ್ ಕೆಡವಿದ್ದು ದಾಖಲೆ.
ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ತವರಿನಾಚೆ 11 ಟೆಸ್ಟ್‌ಗಳನ್ನು ಗೆದ್ದಿತು. ಇದರೊಂದಿಗೆ ಅವರು ಸೌರವ್ ಗಂಗೂಲಿ ದಾಖಲೆಯನ್ನು ಸರಿದೂಗಿಸಿದರು.
ವಿರಾಟ್ ಕೊಹ್ಲಿ ಟಾಸ್ ಗೆದ್ದಾಗಲೆಲ್ಲ ಭಾರತ ಅಜೇಯವಾಗಿ ಉಳಿಯಿತು. 21 ಟೆಸ್ಟ್‌ಗಳಲ್ಲಿ ಕೊಹ್ಲಿ ಟಾಸ್ ಜಯಿಸಿದ್ದು, ಭಾರತ 18ರಲ್ಲಿ ಜಯಿಸಿದೆ. 3 ಡ್ರಾ ಆಗಿವೆ. ಈ ಸಾಧನೆಯಲ್ಲಿ ಕೊಹ್ಲಿ ಅವರದು ಡಾನ್ ಬ್ರಾಡ್‌ಮನ್‌ಗೂ ಮಿಗಿಲಾದ ಸಾಧನೆ. ಬ್ರಾಡ್‌ಮನ್ 10 ಸಲ ಟಾಸ್ ಗೆದ್ದು ಅಜೇಯ ದಾಖಲೆ ಕಾಯ್ದುಕೊಂಡಿದ್ದರು.
ವಿರಾಟ್ ಕೊಹ್ಲಿ ಸತತ 3ನೇ ವರ್ಷವೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸರ್ವಾಧಿಕ ರನ್ ಗಳಿಸಿದ ಅಪೂರ್ವ ಸಾಧನೆಯೊಂದನ್ನು ಮಾಡಿದ್ದಾರೆ. ಈ ವರ್ಷದ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕೊಹ್ಲಿ ಗಳಿಸಿದ ರನ್ 2,653. ಕಳೆದ ವರ್ಷ 2,818 ರನ್ ಹಾಗೂ 2016ರಲ್ಲಿ 2,595 ರನ್ ಗಳಿಸಿದ್ದರು.
ಮೆಲ್ಬರ್ನ್ ಜಯದೊಂದಿಗೆ ಕೊಹ್ಲಿ ವಿದೇಶದಲ್ಲಿ ನಾಯಕತ್ವ ವಹಿಸಿದ 24 ಟೆಸ್ಟ್‌ಗಳಲ್ಲಿ 11ನೇ ಗೆಲುವು ಸಾಧಿಸಿದಂತಾಯಿತು. ಇದರೊಂದಿಗೆ ವಿದೇಶಗಳಲ್ಲಿ ಅತ್ಯಧಿಕ ಟೆಸ್ಟ್‌ಗಳನ್ನು ಗೆದ್ದ ಸೌರವ್ ಗಂಗೂಲಿ ಅವರ ಭಾರತೀಯ ದಾಖಲೆಯನ್ನು ಕೊಹ್ಲಿ ಸರಿದೂಗಿಸಿದರು.
ಜಸ್‌ಪ್ರೀತ್ ಬುಮ್ರಾ ಆಸ್ಟ್ರೇಲಿಯದ ಟೆಸ್ಟ್ ಪಂದ್ಯವೊಂದರಲ್ಲಿ ಅತ್ಯುತ್ತಮ ಬೌಲಿಂಗ್ ಸಾಧನೆಗೈದ ಭಾರತದ ಪೇಸ್ ಬೌಲರ್ ಎನಿಸಿದರು (86ಕ್ಕೆ 9). 1985ರ ಅಡಿಲೇಡ್ ಟೆಸ್ಟ್‌ನಲ್ಲಿ ಕಪಿಲ್‌ದೇವ್ 109ಕ್ಕೆ 8 ವಿಕೆಟ್ ಉರುಳಿಸಿದ ದಾಖಲೆ ಪತನಗೊಂಡಿತು.
ರಿಷಬ್ ಪಂತ್ ಟೆಸ್ಟ್ ಸರಣಿಯೊಂದರಲ್ಲಿ ಅತ್ಯಧಿಕ 20 ಕ್ಯಾಚ್ ಮಾಡಿದ ಭಾರತದ ಕೀಪರ್ ಆಗಿ ಮೂಡಿಬಂದರು. ಈ ಸಂದರ್ಭ ನರೇನ್ ತಮಾನೆ (1954-55, ಪಾಕಿಸ್ಥಾನ ವಿರುದ್ಧ) ಮತ್ತು ಸಯ್ಯದ್ ಕಿರ್ಮಾನಿ (1979, ಪಾಕಿಸ್ಥಾನ ವಿರುದ್ಧ) ಅವರ 19 ಕ್ಯಾಚ್‌ಗಳ ದಾಖಲೆ ಮುರಿಯಲ್ಪಟ್ಟಿತು. ಇನ್ನೂ ಒಂದು ಟೆಸ್ಟ್ ಇರುವುದರಿಂದ ಪಂತ್‌ಗೆ ಈ ದಾಖಲೆ ಯನ್ನು ವಿಸ್ತರಿಸುವ ಉತ್ತಮ ಅವಕಾಶವಿದೆ.
ರಷಬ್ ಪಂತ್ ಪದಾರ್ಪಣ ವರ್ಷದಲ್ಲೇ ಅತ್ಯಧಿಕ 42 ವಿಕೆಟ್ ಪತನದಲ್ಲಿ ಕಾಣಿಸಿಕೊಂಡು (40 ಕ್ಯಾಚ್, 2 ಸ್ಟಂಪಿಂಗ್) ಆಸ್ಟ್ರೇಲಿಯದ ಬ್ರಾಡ್ ಹ್ಯಾಡಿನ್ ಅವರ 2008ರ ಕೀಪಿಂಗ್ ದಾಖಲೆಯನ್ನು ಸರಿದೂಗಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IRACON: ಸಂಧಿವಾತ ಸಮಸ್ಯೆ ಸಾರ್ವಜನಿಕರು ಮುಂಜಾಗ್ರತೆ ವಹಿಸಬೇಕು: ಡಾ ಶರಣಪ್ರಕಾಶ್ ಪಾಟೀಲ್
Jharkhand Polls: ಬುಡಕಟ್ಟು ರಾಜ್ಯದಲ್ಲಿ ಅಧಿಕಾರದತ್ತ ಇಂಡಿಯಾ ಒಕ್ಕೂಟ; ಬಿಜೆಪಿಗೆ ಹಿನ್ನಡೆ
Maharashtra Results 2024: ಮಾಹಾಯುತಿಗೆ ಭರ್ಜರಿ ಜನಮನ್ನಣೆ, ಮಹಾವಿಕಾಸ್ ಅಘಾಡಿಗೆ ಮುಖಭಂಗ
Maharashtra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್
Aaram Aravinda Swamy Movie Review: ಪಕ್ಕದ್ಮನೆ ಹುಡುಗನ ಫನ್‌ರೈಡ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.