ಫೈನಲ್‌ಗೇರಿದ ಬೆಂಗಳೂರು ಬುಲ್ಸ್
Team Udayavani, Jan 1, 2019, 1:25 AM IST
ಕೊಚ್ಚಿ: ಪ್ರೊ ಕಬಡ್ಡಿ ಇತಿಹಾಸದಲ್ಲೇ 2ನೇ ಬಾರಿಗೆ ಬೆಂಗಳೂರು ಬುಲ್ಸ್ ತಂಡ ಫೈನಲ್ ಪ್ರವೇಶಿಸಿದೆ. ಕೊಚ್ಚಿಯಲ್ಲಿ ನಡೆದ 1ನೇ ಕ್ವಾಲಿಫೈಯರ್‌ನಲ್ಲಿ ಎದುರಾಳಿ ಗುಜರಾತ್ ಫಾರ್ಚೂನ್ ಜೈಂಟ್ಸ್ ತಂಡವನ್ನು 41-29ರಿಂದ ಸೋಲಿಸಿ, ಬುಲ್ಸ್ ನೇರವಾಗಿ ಫೈನಲ್‌ಗೇರಿದೆ.
ಜ.5ಕ್ಕೆ ಮುಂಬೈನಲ್ಲಿ ನಡೆಯುವ ಅಂತಿಮ ಪಂದ್ಯಕ್ಕೆ ಸಿದ್ಧವಾಗಿದೆ.
ರೋಹಿತ್ ಕುಮಾರ್ ನಾಯಕತ್ವದ ಬೆಂಗಳೂರು ತಂಡ ಈ ಹಿಂದಿನ 3 ಆವೃತ್ತಿಗಳಲ್ಲಿ ವಿಫಲವಾಗಿತ್ತು. 2014ರಲ್ಲಿ ನಡೆದ ಮೊದಲ ಆವೃತ್ತಿಯಲ್ಲಿ ಸೆಮಿಫೈನಲ್‌ಗೇರಿದ್ದರೆ, 2015ರಲ್ಲಿ ನಡೆದ 2ನೇ ಆವೃತ್ತಿಯಲ್ಲಿ ಫೈನಲ್‌ಗೇರಿತ್ತು. ಅದಾದ ನಡೆದ 3 ಆವೃತ್ತಿಗಳಲ್ಲಿ ಸತತವಾಗಿ ಶ್ರಮಿಸಿದರೂ, ಉತ್ತಮ ಫಲಿತಾಂಶ ಸಾಧ್ಯವಾಗಿರಲಿಲ್ಲ. ಈ ಬಾರಿ ಪವನ್ ಸೆಹ್ರಾವತ್ ಹಾಗೂ ಕಾಶಿಲಿಂಗ್ ಅಡಕೆಯಂತಹ ದಿಗ್ಗಜರ ಸೇರ್ಪಡೆಯಿಂದಾಗಿ ತಂಡದ ಚಹರೆಯೇ ಬದಲಾಗಿ, ಬಿ ವಲಯದಿಂದ ಅಗ್ರಸ್ಥಾನಿಯಾಗಿ ಮೇಲೇರಿತು. ತನ್ನ ಹೆಗ್ಗಳಿಕೆಗೆ ತಕ್ಕಂತೆ ಕ್ವಾಲಿಫೈಯರ್ 1ರಲ್ಲೂ ಉತ್ತಮ ಪ್ರದರ್ಶನ ನೀಡಿ ಫೈನಲ್‌ಗೇರಿತು.
ಮಿಂಚಿದ ಪವನ್, ರೋಹಿತ್: ಬೆಂಗಳೂರು ಬುಲ್ಸ್ ಫೈನಲ್‌ಗೇರಲು ಪ್ರಮುಖ ಕಾರಣವಾಗಿದ್ದು, ಪವನ್ ಸೆಹ್ರಾವತ್ ಅವರ ಆಕ್ರಮಕ ದಾಳಿ ಹಾಗೂ ನಾಯಕ ರೋಹಿತ್ ಕುಮಾರ್ ಅವರ ಸರ್ವಾಂಗೀಣ ಆಟ. ದಾಳಿಯ ಜೊತೆಗೆ ರಕ್ಷಣಾ ವಿಭಾಗದಲ್ಲೂ ರೋಹಿತ್ ಮಿಂಚಿದರು. ಪವನ್ ಸೆಹ್ರಾವತ್ 9 ಬಾರಿ ಗುಜರಾತ್ ಕೋಟೆ ಮೇಲೆ ದಾಳಿ ಮಾಡಿದರು. ಕಡಿಮೆ ದಾಳಿಯಲ್ಲೇ ಮೆರೆದ ಅವರು ಅಷ್ಟರಲ್ಲೂ ಯಶಸ್ವಿಯಾಗಿ 13 ಅಂಕ ಗಳಿಸಿದರು. ರೋಹಿತ್ ದಾಳಿಯಲ್ಲಿ ಅಂತಹ ಯಶಸ್ಸು ಸಾಧಿಸಲಿಲ್ಲ. 17 ಬಾರಿ ಎದುರಾಳಿ ಕೋಟೆಯೊಳಗೆ ಅವರು ನುಗ್ಗಿದರೂ, 6 ಅಂಕ ಗಳಿಸಲು ಮಾತ್ರ ಸಾಧ್ಯವಾಯಿತು. ಈ ಕೊರತೆಯನ್ನು ರಕ್ಷಣಾ ವಿಭಾಗದಲ್ಲಿ ನೀಗಿಸಿದರು. 6 ಬಾರಿ ಗುಜರಾತ್ ಆಟಗಾರರನ್ನು ಕೆಡವಿಕೊಳ್ಳಲು ಯತ್ನಿಸಿ, 5 ಬಾರಿ ಯಶಸ್ವಿಯಾದರು. ಇದರಲ್ಲಿ 6 ಅಂಕ ಲಭಿಸಿತು. ಬೆಂಗಳೂರು ಪರ ಖ್ಯಾತ ಆಟಗಾರ ಕಾಶಿಲಿಂಗ್ ಅಡಕೆ ಗಮನ ಸೆಳೆಯಲಿಲ್ಲ.
ಗುಜರಾತ್ ಪರ ಸಚಿನ್ ಉತ್ತಮವಾಗಿ ದಾಳಿ ನಡೆಸಿದರು. ಅವರು 12 ಬಾರಿ ಬೆಂಗಳೂರು ಕೋಟೆ ಮೇಲೆ ದಾಳಿಯಿಟ್ಟು 7 ಬಾರಿ ಯಶಸ್ವಿಯಾಗಿ 10 ಅಂಕ ಗಳಿಸಿದರು. ಆದರೆ ರಕ್ಷಣಾ ವಿಭಾಗದಲ್ಲಿ ಗುಜರಾತ್ ಸಂಪೂರ್ಣವಾಗಿ ವಿಫಲವಾಯಿತು. ಪರಿಣಾಮ ಸೋಲಿನಲ್ಲಿ ಮುಕ್ತಾಯವಾಯಿತು.
ಫೈನಲ್: ಗುಜರಾತ್‌ಗೆ ಇನ್ನೊಂದು ಅವಕಾಶ
ಬೆಂಗಳೂರು ಬುಲ್ಸ್ ವಿರುದ್ಧ 1ನೇ ಕ್ವಾಲಿಫೈಯರ್‌ನಲ್ಲಿ ಸೋತಿದ್ದರೂ, ಗುಜರಾತ್ ಫಾರ್ಚೂನ್ ಜೈಂಟ್ಸ್‌ಗೆ ಫೈನಲ್‌ಗೇರಲು ಇನ್ನೊಂದು ಅವಕಾಶವಿದೆ. ಜ.3ಕ್ಕೆ 2ನೇ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ಮುಂಬೈನಲ್ಲಿ ನಡೆಯುವ ಆ ಪಂದ್ಯದಲ್ಲಿ ಎಲಿಮಿನೇಟರ್ ಸುತ್ತಿನಲ್ಲಿ ಗೆದ್ದುಬಂದ ತಂಡ ಎದುರಾಳಿಯಾಗಿರುತ್ತದೆ. ಅಲ್ಲಿ ಗೆದ್ದರೂ ಫೈನಲ್‌ಗೇರುವುದು ಸಾಧ್ಯ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.