ರಾಜನಾಗಿದ್ದ ಚಿತ್ರಕೇತು ವೃತ್ರಾಸುರನಾಗಿದ್ದರ ಹಿಂದಿನ ರಹಸ್ಯ ಏನು?!
Team Udayavani, Jan 1, 2019, 6:14 AM IST
ಪುತ್ರ ಶೋಕದಿಂದ ಗಾಢವಾದ ಅಜ್ಞಾನಾಂಧಕಾರದಲ್ಲಿ ಮುಳುಗಿದ ಚಿತ್ರಕೇತು ರಾಜನು ದೇವರ್ಷಿ ನಾರದರಲ್ಲಿ ಶರಣಾಗತನಾಗಲು, ಭಕ್ತನಾದ ಚಿತ್ರಕೇತು ರಾಜನಿಗೆ ದೇವರ್ಷಿ ನಾರದರು ಪರಮಜ್ಞಾನವನ್ನು ಉಪದೇಶಿಸಿ ಆಂಗೀರಸ ಮಹರ್ಷಿಗಳೊಂದಿಗೆ ಬ್ರಹ್ಮಲೋಕಕ್ಕೆ ತೆರಳಿದರು. ಚಿತ್ರಕೇತು ರಾಜನು ನಾರದರ ಆದೇಶದಂತೆ ಏಳು ದಿನಗಳ ಕಾಲ ಕೇವಲ ಜಲಾಹಾರಿಯಾಗಿದ್ದು , ಅವರಿಂದ ಉಪದೇಶಿಸಲ್ಪಟ್ಟ ವಿದ್ಯೆಯನ್ನು ಏಕಾಗ್ರತೆಯಿಂದ ಅನುಷ್ಠಾನ ಮಾಡಿದನು. ಏಳು ರಾತ್ರಿಯ ಬಳಿಕ ಅವನಿಗೆ ವಿದ್ಯಾಧರರ ಅಖಂಡಾಧಿಪತ್ಯ ಪ್ರಾಪ್ತವಾಯಿತು. ಮತ್ತೆ ಕೆಲವೇ ದಿನಗಳಲ್ಲಿ ಆ ವಿದ್ಯೆಯ ಪ್ರಭಾವದಿಂದ ಅವನ ಮನಸು ಇನ್ನಷ್ಟು ಶುದ್ಧವಾಯಿತು. ಅದರ ಪುಣ್ಯವಿಶೇಷದಿಂದಾಗಿ ಅವನು ಭಗವಾನ್ ಆದಿಶೇಷನ ಲೋಕವನ್ನು ತಲುಪಿದನು. ಅಲ್ಲಿ ಭಗವಂತನು ಆದಿಶೇಷನ ಅಂತರ್ಯಾಮಿಯಾದ ಸಂಕರ್ಷಣನಾಗಿ ವಿರಾಜಮಾನನಾಗಿರುವುದನ್ನು ನೋಡಿದನು. ಅವನ ದಿವ್ಯ ಮಂಗಳ ದೇಹವು ಕಮಲದ ದಂಟಿನಂತೆ ಹೊಳೆಯುತ್ತಿತ್ತು. ಅವನು ನೀಲಿ ಬಣ್ಣದ ಪೀತಾಂಬರವನ್ನು ಧರಿಸಿದ್ದನು. ತಲೆಯ ಮೇಲೆ ಕೀರೀಟವನ್ನು, ಬಾಹುಗಳಲ್ಲಿ ತೋಳು ಬಂದಿಯನ್ನು, ಕಟಿಯಲ್ಲಿ ಉಡಿದಾರವನ್ನು, ಕೈಗಳಲ್ಲಿ ಕಂಕಣವನ್ನು ಧರಿಸಿ ನಸುಗೆಂಪಾದ ಕಣ್ಣುಗಳಿಂದ ಪ್ರಸನ್ನತೆಯಿಂದ ಕೂಡಿದ ಮುಖದಿಂದ ಶೋಭಿಸುತ್ತಿದ್ದನು. ಭಗವಂತನ ದರ್ಶನಮಾಡುತ್ತಲೇ ರಾಜರ್ಷಿ ಚಿತ್ರಕೇತುವಿನ ಪಾಪಗಳೆಲ್ಲವೂ ನಾಶವಾದವು.
ಅವನ ಅಂತಃಕರಣವು ಸ್ವಚ್ಛವೂ ನಿರ್ಮಲವೂ ಆಯಿತು . ಹೃದಯದಲ್ಲಿ ಭಕ್ತಿಯ ಪ್ರವಾಹವು ಉಕ್ಕಿಹರಿಯಿತು. ಕಣ್ಣುಗಳಲ್ಲಿ ಪ್ರೇಮಶ್ರುಗಳು ಉಮ್ಮಳಿಸಿದವು. ಮೈ ಪುಳಕದಿಂದ ಅರಳಿತು. ಅವನು ಅಂತಹ ಸ್ಥಿತಿಯಲ್ಲಿಯೇ ಆದಿಪುರುಷ ಸಂಕರ್ಷಣನಿಗೆ ನಮಸ್ಕರಿಸಿದನು. ಚಿತ್ರಕೇತುವಿನ ಕಣ್ಣು ಗಳಿಂದ ತೊಟ್ಟಿಕ್ಕುತ್ತಿದ್ದ ಆನಂದಬಾಷ್ಪಗಳಿಂದ ಭಗವಂತನ ಪಾದಗಳು ತೋಯ್ದು ಹೋದವು. ಭಕ್ತಿಯ ಉದ್ರೇಕದಿಂದ ರಾಜನ ಬಾಯಿಯಿಂದ ಒಂದಕ್ಷರವೂ ಹೊರಡಲಿಲ್ಲ. ಬಹಳ ಸಮಯದ ತನಕ ಸುಮ್ಮನಿದ್ದ ರಾಜನು,ನಂತರ ನಿಧಾನವಾಗಿ, ಕಷ್ಟಪಟ್ಟು ,ತನ್ನ ಶಕ್ತಿಯನ್ನೆಲ್ಲ ಒಗ್ಗೂಡಿಸಿ ಶೇಷದೇವರನ್ನು ಕುರಿತು ಸ್ತುತಿಸಲು ಪ್ರಾರಂಭಿಸಿದನು.
” ಓ ಅಜಿತನೇ ನೀನು ಯಾರಿಂದಲೂ ಗೆಲ್ಲಲ್ಪಡದವನಾಗಿದ್ದರೂ, ಸಮದರ್ಶಿಗಳೂ, ಜೇತೇಂದ್ರಿಯರೂ ಆದ ಸಾಧುಗಳು ನಿನ್ನನ್ನು ಭಕ್ತಿಯಿಂದ ಗೆದ್ದುಕೊಂಡಿರುವರು. ನೀನು ನಿನ್ನ ಸೌಂದರ್ಯ, ಮಾಧುರ್ಯ, ಕಾರುಣ್ಯಗಳೇ ಮೊದಲಾದ ಗುಣಗಳಿಂದ ಸಾಧುಗಳನ್ನು ಗೆದ್ದು ವಶಪಡಿಸಿಕೊಂಡಿರುವೆ . ನಿಷ್ಕಾಮಭಾವದಿಂದ ನಿನ್ನನ್ನು ಭಜಿಸುವರಿಗೆ ನೀನು ವಶನಾಗುವೆ. ಭಗವಂತನೇ ಜಗತ್ತಿನ ಸ್ಥಿತಿ-ಉತ್ಪತ್ತಿ-ಸಂಹಾರಾದಿಗಳು ನಿನ್ನ ಲೀಲಾ ವಿಲಾಸವಾಗಿದೆ. ವಿಷಯ ಭೋಗಗಳನ್ನೇ ಬಯಸುವ ನರಪಶುಗಳು ನಿನ್ನನ್ನು ಭಜಿಸದೆ ನಿನ್ನ ವಿಭೂತಿ ಸ್ವರೂಪರಾದ ಇಂದ್ರಾದಿ ದೇವತೆಗಳನ್ನು ಉಪಾಸಿಸುತ್ತಾರೆ . ಪ್ರಭೋ, ರಾಜ ಕುಲವು ನಾಶವಾದ ಬಳಿಕ ಅದರ ಅನುಯಾಯಿಗಳ ಬದುಕು ಕೂಡ ನಾಶವಾಗುವಂತೆಯೇ ಕ್ಷುದ್ರ ದೇವತೆಗಳ ಶಕ್ತಿ ಹ್ರಾಸವಾದಾಗ ಅವರು ದಯಪಾಲಿಸಿದ ಭೋಗಗಳು ನಷ್ಟವಾಗಿಹೋಗುತ್ತವೆ.
ಓ ಭಗವಂತನೇ ನೀನು ಪರಿಶುದ್ಧವಾದ ಭಾಗವತ ಧರ್ಮವನ್ನು ಉಪದೇಶಿಸಿದಾಗಲೇ ಎಲ್ಲರನ್ನು ಗೆದ್ದುಕೊಂಡಿರುವೆ ಏಕೆಂದರೆ, ತಮ್ಮಲ್ಲಿ ಯಾವುದೇ ಸಂಗ್ರಹ-ಪರಿಗ್ರಹವನ್ನು ಇಟ್ಟುಕೊಳ್ಳದಿರುವ, ಯಾವುದೇ ವಸ್ತುವಿನ ಬಗ್ಗೆ ಅಹಂಕಾರ-ಮಮತೆಗಳಿಲ್ಲದಿರುವ , ಆತ್ಮಾರಾಮರಾದ ಸನಕಾದಿ ಪರಮ ಮಹರ್ಷಿಗಳೂ ಕೂಡ ಮೋಕ್ಷ ಪ್ರಾಪ್ತಿಗಾಗಿ ಈ ಭಾಗವತ ಧರ್ಮವನ್ನೇ ಆಶ್ರಯಿಸುತ್ತಾರೆ. ನಿನ್ನ ದರ್ಶನಮಾತ್ರದಿಂದಲೇ ನನ್ನ ಅಂತಃಕರಣವು ಪರಿಶುದ್ದವಾಯಿತು. ನಿನ್ನ ಅನುಗ್ರಹದಿಂದಲೇ ಬ್ರಹ್ಮಾದಿ ದೇವತೆಗಳು ತಮ್ಮ ತಮ್ಮ ಕರ್ತವ್ಯಗಳನ್ನು ಮಾಡಲು ಸಮರ್ಥರಾಗುತ್ತಾರೆ. ಕೇವಲ ನಿನ್ನ ದೃಷ್ಟಿಯಿಂದಲೇ ಚೈತನ್ಯವನ್ನು ಪಡೆದು ಜ್ಞಾನೇಂದ್ರಿಯಗಳು ಹಾಗೂ ಕರ್ಮೇಂದ್ರಿಯಗಳು ತಮ್ಮ ವ್ಯಾಪಾರಗಳನ್ನು ಮಾಡಲು ಸಮರ್ಥವಾಗುತ್ತವೆ. ಈ ಭೂಮಂಡಲವು ನಿನ್ನ ತಲೆಯಮೇಲೆ ಒಂದು ಸಾಸಿವೆಯ ಕಾಳಿನಂತೆ ಕಂಡುಬರುತ್ತವೆ. ಅಂತಹ ಸಾವಿರ ತಲೆಗಳುಳ್ಳ, ಸಹಸ್ರಶೀರ್ಷಾದಿ ನಾಮಗಳಿಂದ ಪ್ರಸಿದ್ಧನಾದ , ಪರಮ ಪುರುಷನಾದ ನಿನಗೆ ಅನಂತ ನಮಸ್ಕಾರಗಳು” ಎಂದು ಭಾವುಕನಾಗಿ ಭಗವಂತನನ್ನು ಸ್ತುತಿಸುತ್ತಾ ನಮಸ್ಕಾರ ಮಾಡಿದನು.
ಚಿತ್ರಕೇತುವಿನ ಸ್ತುತಿಯಿಂದ ಸಂತೃಪ್ತನಾದಂತಹ ಭಗವಂತನು ತನ್ನ ಅಧಿಷ್ಠಾನ ಹಾಗೂ ಸನಾತನರೂಪವನ್ನು ವಿವರಿಸಿ, ಜ್ಞಾನ ವಿಜ್ಞಾನಗಳನ್ನು ಉಪದೇಶಿಸಿ ಅಂತರ್ಧಾನನಾದನು. ನಂತರ ಚಿತ್ರಕೇತುವು ಭಗವಂತನು ಅಂತರ್ಧಾನ ಹೊಂದಿದ ದಿಕ್ಕಿಗೆ ನಮಸ್ಕಾರ ಮಾಡಿ ಆಕಾಶ ಮಾರ್ಗದಲ್ಲಿ ಯೆಥೇಚ್ಛವಾಗಿ ಸಂಚರಿಸ ತೊಡಗಿದನು. ಯೋಗಿಯಾದ ಚಿತ್ರಕೇತುವು ಎಲ್ಲವಿಧದ ಸಂಕಲ್ಪಗಳನ್ನು ಪೂರ್ಣಗೊಳಿಸುವ ಮೇರು ಪರ್ವತದ ತಪ್ಪಲು ಗಳಲ್ಲಿ ಬಹಳಷ್ಟು ವರ್ಷಗಳ ತನಕ ವಿಹರಿಸುತ್ತಿದ್ದರೂ, ಅವನ ದೇಹ ಬಲ ಮತ್ತು ಇಂದ್ರಿಯ ಬಲಗಳು ಕಡಿಮೆಯಾಗಲಿಲ್ಲ.
ಒಂದು ದಿನ ಚಿತ್ರಕೇತುವು ಭಗವಂತನು ಕೊಟ್ಟಿರುವ ತೇಜೋಮಯ ವಿಮಾನದಲ್ಲಿ ಕುಳಿತು ಸಂಚರಿಸುತ್ತಿರುವಾಗ ಪಾರ್ವತೀಪತಿಯಾದ ಶಂಕರನನ್ನು ನೋಡಿದನು. ಪರಮೇಶ್ವರನು ಸಿದ್ಧಚಾರಣಾದಿಗಳಿಂದ ಸುತ್ತುವರಿದು, ಋಷಿಗಳ ದಿವ್ಯ ಸಭೆಯಲ್ಲಿ ಕುಳಿತು ಪಾರ್ವತಿಯನ್ನು ತನ್ನ ತೊಡೆಯಲ್ಲಿ ಕುಳ್ಳಿರಿಸಿಕೊಂಡು ಒಂದು ಕೈಯಿಂದ ಆಕೆಯನ್ನು ಆಲಿಂಗಿಸಿಕೊಂಡಿದ್ದನು. ಇದನ್ನು ನೋಡಿದ ಚಿತ್ರಕೇತುವು ವಿಮಾನ ಸಹಿತನಾಗಿ ಅವನ ಬಳಿಗೆ ಹೋಗಿ ಪಾರ್ವತಿದೇವಿಗೆ ಕೇಳುವಂತೆ ಗಟ್ಟಿಯಾಗಿ ನಗುತ್ತಾ ” ಆಹಾ.. ಈತನು ಜಗತ್ತಿನ ಎಲ್ಲ ಜೀವಿಗಳಿಗೂ ಧರ್ಮವನ್ನು ಬೋಧಿಸುವ ಜಗದ್ಗುರುವಾಗಿದ್ದು ಸರ್ವ ಪ್ರಾಣಿಗಳಲ್ಲಿಯೂ ಶ್ರೇಷ್ಠನಾಗಿರುವನು. ಆದರೂ ತುಂಬಿದ ಸಭೆಯಲ್ಲಿ ಪತ್ನಿಯನ್ನು ಜೊತೆಗೂಡಿ ಸಾಧಾರಣ ಮನುಷ್ಯರಂತೆ ನಿರ್ಲಜ್ಜನಾಗಿ ತೊಡೆಯಲ್ಲಿ ಹೆಂಡತಿಯನ್ನು ಕುಳ್ಳಿರಿಸಿಕೊಂಡಿರುವನು. ಸಾಧಾರಣವಾಗಿ ಸಾಮಾನ್ಯ ಮನುಷ್ಯರೂ ಕೂಡ ಏಕಾಂತದಲ್ಲಿ ಮಾತ್ರ ಪತ್ನಿಯನ್ನು ಧರಿಸುತ್ತಾರೆ. ಆದರೆ ಇವನು ಇಷ್ಟು ದೊಡ್ಡ ವ್ರತಧಾರಿಯಾಗಿದ್ದರೂ ತುಂಬಿದ ಸಭೆಯಲ್ಲಿ ಪತ್ನಿಯನ್ನು ತೊಡೆಯಲ್ಲಿ ಧರಿಸಿರುವನಲ್ಲ” ಎಂಬುದಾಗಿ ಹೀಯಾಳಿಸಿದನು.
ಚಿತ್ರಕೇತುವಿನ ಈ ಕುಚೋದ್ಯದ ಮಾತನ್ನು ಕೇಳಿಯೂ ಶಂಕರನು ನಕ್ಕು ಸುಮ್ಮನಾದನು. ಸಭೆಯಲ್ಲಿ ಕುಳಿತಿರುವ ಈಶ್ವರನ ಅನುಯಾಯಿಗಳು ಮೌನವಾಗಿದ್ದರು. ಆದರೆ ಇದನ್ನು ಕಂಡ ಪಾರ್ವತೀ ದೇವಿಯು ಕ್ರೋಧಗೊಂಡು “ಭೃಗು ನಾರದಾದಿ ಮಹಾತ್ಮರಿಂದ ಧ್ಯಾನಿಸಲು ಯೋಗ್ಯನಾದ, ಎಲ್ಲ ಮಂಗಳಗಳಿಗೂ ಮಂಗಳನಾದ ಶಂಕರನನ್ನು ಹಾಗೂ ಅನುಯಾಯಿಗಳನ್ನು ಈ ಕ್ಷತ್ರಿಯಾಧಮನು ತಿರಸ್ಕರಿಸಿದ್ದಾನೆ. ಆದ್ದರಿಂದ ಈ ದುರುಳನು ದಂಡನೆಗೆ ಯೋಗ್ಯನು. ತಾನೇ ಶ್ರೇಷ್ಠನೆಂದು ತಿಳಿದಿರುವ ಈ ಮೂರ್ಖನು ಶ್ರೀಹರಿಯ ಪಾದಾರವಿಂದಗಳಲ್ಲಿ ಇರಲು ಯೋಗ್ಯನಲ್ಲ. ಆದ್ದರಿಂದ ನೀನು ಪಾಪಮಯ ಅಸುರಯೋನಿಯಲ್ಲಿ ಹೋಗಿ ಬೀಳು ” ಎಂದು ಶಾಪವನ್ನು ಕೊಟ್ಟಳು.
ಆಗ ಚಿತ್ರಕೇತುವು ವಿಮಾನದಿಂದಿಳಿದು ತಲೆತಗ್ಗಿಸಿ ನಮಸ್ಕರಿಸುತ್ತಾ ” ಓ ಜಗನ್ಮಾತೆಯೇ ,ನಿನ್ನ ಈ ಶಾಪವನ್ನು ನಾನು ವಿನಯದಿಂದ ಸ್ವೀಕರಿಸುತ್ತೇನೆ ಏಕೆಂದರೆ ದೇವತೆಗಳು ಮನುಷ್ಯರಿಗೆ ಏನಾದರೂ ನುಡಿದರೆ ಅವರ ಪ್ರಾರಬ್ಧಕ್ಕನುಗುಣವಾಗಿ ಸಿಗುವ ಫಲದ ಪೂರ್ವ ಸೂಚನೆಯಾಗಿರುತ್ತದೆ. ದೇವಿಯೇ , ನನ್ನನ್ನು ಶಾಪದಿಂದ ಬಿಡುಗಡೆ ಮಾಡೆಂದು ನಾನು ನಿನ್ನನ್ನು ಬೇಡುತ್ತಿಲ್ಲ. ಆದರೆ ಕೆಟ್ಟದೆಂದು ನಿನಗೆ ಅನಿಸಿರುವ ನನ್ನ ಮಾತುಗಳನ್ನು ಕೃಪೆಯಿಟ್ಟು ಕ್ಷಮಿಸಬೇಕೆಂದು ನಾನು ಬಯಸುತ್ತೇನೆ . ಎಂದು ಹೇಳಿ ಪಾರ್ವತೀಪರಮೇಶ್ವರರಿಗೆ ನಮಸ್ಕರಿಸಿ ತನ್ನ ವಿಮಾನವನ್ನೇರಿ ಹೊರಟುಹೋದನು.
ಚಿತ್ರಕೇತುವಿನ ಈ ನಡೆಯಿಂದ ಪಾರ್ವತಿಯ ಮನಸ್ಸು ಶಾಂತವಾಯಿತು.ಅಷ್ಟೇ ಅಲ್ಲದೆ ಭಾಗವತೋತ್ತಮನಾದ ಚಿತ್ರಕೇತುವೂ ಕೂಡಾ ನನಗೆ ಪ್ರತಿಶಾಪವನ್ನು ಕೊಡಲು ಸಮರ್ಥನಾಗಿದ್ದರೂ ಶಾಪವನ್ನು ಕೊಡದೆ ನನ್ನ ಶಾಪವನ್ನು ಶಿರಸಾವಹಿಸಿದ್ದನ್ನು ಕಂಡು ಪಾರ್ವತಿಗೆ ಆಶ್ಚರ್ಯವೂ ಆಯಿತು.
ಇದೇ ಚಿತ್ರಕೇತುವು ದಾನವಯೋನಿಯನ್ನು ಆಶ್ರಯಿಸಿ ತ್ವಷ್ಟನ ದಕ್ಷಿಣಾಗ್ನಿಯಿಂದ ಹುಟ್ಟಿ ವೃತ್ರಾಸುರನೆಂಬ ಹೆಸರಿನಿಂದ ವಿಖ್ಯಾತನಾದನು. ವೃತ್ರಾಸುರನಿಗೆ ಅಂತ್ಯ ಕಾಲದಲ್ಲಿ ತನ್ನನ್ನು ಸಂಹಾರಮಾಡಲು ಬಂದ ಶ್ರೀಹರಿಯನ್ನು ಕಂಡು ತನ್ನ ಪೂರ್ವಜನ್ಮದ ಸ್ಮರಣೆ ಉಂಟಾಗಿ ಶ್ರೀಹರಿಯಲ್ಲಿ ಶರಣಾಗಿ ಮುಕ್ತಿಯನ್ನು ಪಡೆದನು .
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ
JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?
“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…
ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!
ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ
BBK11: ಇವತ್ತು ಬಿಗ್‌ಬಾಸ್ ಮನೆಯಿಂದ ಆಚೆ ಬರುವುದು ಇವರೇ ನೋಡಿ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.