ಗೋ ಸಾಕಾಣಿಕೆ ಮಾತ್ರವಲ್ಲ, ಸಂರಕ್ಷಣೆ ಮಾಡುವುದೂ ಕೂಡ ಸೇವೆ
Team Udayavani, Jan 1, 2019, 7:55 AM IST
ವಿಜಯಪುರ: ಗೋವನ್ನು ಸಾಕುವುದು ಮಾತ್ರ ಗೋ ಸೇವೆಯಲ್ಲ, ಗೋವುಗಳನ್ನು ಕಸಾಯಿಖಾನೆಗೆ ಹೋಗದಂತೆ ತಡೆಯುವುದು, ಗೋವಿಗೆ ಶೋಷಣೆ ಬಂದಾಗ ಅದನ್ನು ತಡೆಗಟ್ಟುವುದು ನಿಜವಾದ ಗೋ ಸೇವೆ ಎಂದು ಸರ್ವಜ್ಞ ವಿದ್ಯಾವಿಹಾರ ಪೀಠದ ಕುಲಪತಿ ಪಂ| ಮಧ್ವಾಚಾರ್ಯ ಮೊಕಾಶಿ ಹೇಳಿದರು.
ವಿಜಯಪುರ ತಾಲೂಕಿನ ಕಗ್ಗೋಡದಲ್ಲಿ ಜರುಗಿದ ಭಾರತೀಯ ಸಂಸ್ಕೃತಿ ಉತ್ಸವದ ಧರ್ಮ-ಸಂಸ್ಕೃತಿ ಉತ್ಸವದಲ್ಲಿ ಮಾತನಾಡಿದ ಅವರು, ಗೋವಿಗೆ ಮೇವು ತಿನ್ನಿಸುವ ಕಾರ್ಯದಷ್ಟೇ ಗೋವಿನ ರಕ್ಷಣೆಗೆ ನಿಲ್ಲುವುದು ಸಹ ಮಹತ್ತ ಗೋ ಸೇವೆ. ಗೋವು ಕಸಾಯಿಖಾನೆಗೆ ಹೋಗದಂತೆ ಎಚ್ಚರಿಕೆ ವಹಿಸಬೇಕು. ದಿಲೀಪ ಮಹಾರಾಜ ಗೋವಿನ ಪ್ರಾಣ ರಕ್ಷಣೆಗಾಗಿ ತನ್ನ ದೇಹವನ್ನು ಸಿಂಹಕ್ಕೆ ಅರ್ಪಿಸಲು ಮುಂದಾಗುತ್ತಾನೆ.
ಆಗ ದೇವತೆಗಳು ಅವತರಿಸಿ ದಿಲೀಪ ಮಹಾರಾಜನ ಗೋ ರಕ್ಷಣಾ ಮನೋಭಾವ ಮೆಚ್ಚಿದರು. ಈ ದಿಲೀಪ ಮಹಾರಾಜರ ಆದರ್ಶವನ್ನು ಪಾಲಿಸಿ ಗೋ ಮಾತೆ ರಕ್ಷಣೆಗಾಗಿ ಪ್ರತಿಯೊಬ್ಬರು ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.
ಭಾ ಎಂದರೆ ಜ್ಞಾನ ಎಂದರ್ಥ. ಯಾವುದು ಸಂಸ್ಕಾರ ಪಡೆದಿದೆಯೋ ಅದು ಸಂಸ್ಕೃತಿ, ಇನ್ನೊಬ್ಬರಿಗೆ ಹಂಚಿ ತಿನ್ನುವುದು, ಮೂಕ ಪ್ರಾಣಿಗಳಿಗೆ ಕೊಟ್ಟು ಉಣ್ಣುವುದು ಭಾರತೀಯ ಸಂಸ್ಕೃತಿಯ ಅಂಗ. ಅತಿ ಬಡವರಿಗೆ, ದೀನ ದಲಿತರಿಗೆ, ಪಶು ಪ್ರಾಣಿಗಳಿಗೆ ಉಣ್ಣಲು ನೀಡದೇ ತನ್ನಷ್ಟಕ್ಕೇ ತಾನೇ ಊಟ ಮಾಡುವವನು ದೊಡ್ಡ ಸ್ವಾರ್ಥಿ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಭಾರತೀಯ ವಿಕಾಸ ಸಂಗಮದ ರಾಷ್ಟ್ರೀಯ ಸಂರಕ್ಷಕ ಬಸವರಾಜ ಪಾಟೀಲ ಸೇಡಂ, ಟಿವಿ, ಮೊಬೈಲ್ ಬಳಕೆ ಮಾಡುತ್ತ ದೇಶದ ಬಗ್ಗೆ ಗಂಟೆಗಟ್ಟಲೆ ಹರಟೆ ಹೊಡೆಯುವುದೇ ದೇಶ ಸೇವೆ ಎಂದು ಭಾವಿಸಿರುವುದು ನೋವಿನ ಸಂಗತಿ. ಮನುಷ್ಯನ ವಿಕಾಸಕ್ಕೆ ಮನುಷ್ಯತ್ವ ಬೇಕು. ಅಂತಃಕರಣ, ಮಾನವ ಪ್ರೀತಿ, ಜ್ಞಾನ, ಪರೋಪಕಾರಗಳನ್ನು ಹೊಂದಿ ದುಃಖ, ಬಡತನ ಹಾಗೂ ಮಾನವೀಯತೆ ಅಭಾವದಲ್ಲಿ ಆಶ್ರಯ ನೀಡುವವರೇ ಧರ್ಮ ಹಾಗೂ ಸಂಸ್ಕೃತಿಯಿಂದ ಕೂಡಿದವರು. ಒಂದು ಅಡಿಕೆ ಹೋಳಿನಷ್ಟು ಮಣ್ಣಿನಲ್ಲಿ ಎರಡು ಕೋಟಿ ಜೀವಾಣುಗಳಿವೆ. ಈ ಎಲ್ಲ ಜೀವ ಸಂಕುಲಕ್ಕೆ ಬದುಕುವ ಹಕ್ಕಿದೆ. ಭೂಮಿಯಲ್ಲಿ ದೆವ್ವದಂತಹ ಟ್ರ್ಯಾಕ್ಟರ್ ಬಳಸಿ ಫಲವತ್ತತೆ ಹಾಳು ಮಾಡಿದ್ದೇವೆ. ಆತ್ಮ ವಂಚನೆಯಿಂದ ದೇಶ ತ್ತತ್ತರಿಸಿದೆ, ನೌಕರಿಗಾಗಿ ಕೈ ಚಾಚುವ ಶಿಕ್ಷಣ ಬೋಧಿಸುತ್ತಿದ್ದೇವೆ ಎಂದರು.
ಮಹೇಶ ಮಹಾರಾಜರು ಮಾತನಾಡಿ, ಇಂದು ಸಂಸ್ಕೃತಿ, ಮೌಲ್ಯಗಳಿಂದ ಜನತೆ ವಿಮುಖರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಜ್ಜನರು ಮೌನ ಮುರಿಯಬೇಕು. ಯುವ ಜನತೆಯನ್ನು ಸರಿದಾರಿಗೆ ತರುವ ಕಾರ್ಯದಲ್ಲಿ, ಮೌಲ್ಯಗಳ ಪುನರುತ್ಥಾನಗೊಳಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು. ನಿಡಸೋಸಿ ಪಂಚಮ ಶಿವಲಿಂಗೇಶ್ವರ ಶ್ರೀಗಳು ಆಶೀರ್ವಚನ ನೀಡಿ, ಮನುಷ್ಯ ಅತಿಯಾದ ಸ್ವಾರ್ಥ ಬಂದಾಗ ಧಾರ್ಮಿಕ, ಸಂಸ್ಕೃತಿಯ ವಿಚಾರಗಳಿಂದ ವಿಮುಖನಾಗುತ್ತಾನೆ. ಸಾತ್ವಿಕ ಆಹಾರ, ಮನೆಯಲ್ಲಿನ ಧರ್ಮ ಸಂಸ್ಕೃತಿ ಎಲ್ಲವೂ ಕಳೆದು ಹೋಗುತ್ತಿವೆ ಎಂದು ವಿಷಾದಿಸಿದರು. ಹೃದಯ ಸಮುದ್ರದಲ್ಲಿ ಮುತ್ತು, ರತ್ನಗಳಿವೆ, ಈ ಮುತ್ತು, ರತ್ನಗಳನ್ನು ಸಂಸ್ಕೃತಿ, ಸಂಸ್ಕಾರ ಬಲದಿಂದ ಹುಡುಕಿ ತೆಗೆಯಬೇಕಾದ ಅವಶ್ಯಕತೆ ಇದೆ. ಯಾತ್ರಿಕ ಹ್ಯೂಯೆನ್ಸ್ ತಾಂಗ್ ಭಾರತೀಯರ ಹೃದಯ ವೈಶಾಲ್ಯತೆ ಕೊಂಡಾಡಿದ್ದಾನೆ. ಸಂಸ್ಕೃತಿ ಪ್ರಸಾರಕ್ಕಾಗಿ ಈ ರೀತಿಯ ಅರ್ಥಪೂರ್ಣ ಕಾರ್ಯಕ್ರಮ ಸಂಘಟಿಸಿರುವುದು ಸಂತೋಷದ ಸಂಗತಿ ಎಂದರು. ಆಸ್ಸಾಂನ ನಾನಿ ಗೋಪಾಲ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಅಂತಾರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿದ ಅರವಿಂದ ಪಾಟೀಲ, ಕಿರಣ ಉಪಾಧ್ಯಾಯ ಮಾತನಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.