ಶಿಥಿಲಾವಸ್ಥೆ-ಅಗಲ ಕಿರಿದು: ಹೊಸ ಸೇತುವೆ ನಿರ್ಮಾಣಕ್ಕೆ ಬೇಡಿಕೆ
Team Udayavani, Jan 2, 2019, 6:11 AM IST
ಬೆಳ್ತಂಗಡಿ : ಪ್ರಾಕೃತಿಕವಾಗಿ ಹಚ್ಚ ಹಸುರಿನ ಪರಿಸರದಿಂದ ಕೂಡಿರುವ, ಐತಿಹಾಸಿಕ ಪ್ರವಾಸಿತಾಣ ಗಡಾಯಿಕಲ್ಲಿನ ತಳಭಾಗದ ಲಾೖಲ ಗ್ರಾ.ಪಂ. ವ್ಯಾಪ್ತಿಯ ಚಂದ್ಕೂರು-ಅಗರಿ ಪ್ರದೇಶ ಸಂಪರ್ಕಿಸುವ ಸೇತುವೆಯೊಂದು ಶಿಥಿಲಾವಸ್ಥೆಗೆ ತಲುಪಿರುವ ಜತೆಗೆ ಕಿರಿದಾಗಿದ್ದು, ಹೊಸ ಸೇತುವೆ ನಿರ್ಮಾಣಕ್ಕೆ ಬೇಡಿಕೆ ಕೇಳಿ ಬರುತ್ತಿದೆ.
ಹಾಲಿ ಸೇತುವೆ ನಡ ಗ್ರಾ.ಪಂ. ವ್ಯಾಪ್ತಿಯಲ್ಲಿದ್ದು, ನಡ – ಲಾೖಲವನ್ನು ಸಂದಿಸುತ್ತಿದೆ. ಅದು ಅತಿ ಕಿರಿದಾದ ಸೇತುವೆಯಾಗಿರುವ ಕಾರಣ ಸಣ್ಣಪುಟ್ಟ ವಾಹನಗಳಿಗೆ ಮಾತ್ರ ಹೋಗಬಹುದಾಗಿದೆ. ದೊಡ್ಡ ವಾಹನಗಳಿಗೂ ತೆರಳುವುದಕ್ಕೆ ಸೇತುವೆಯನ್ನು ಅಭಿವೃದ್ಧಿಪಡಿಸಬೇಕಾಗಿ ಗ್ರಾಮಸ್ಥರ ಒತ್ತಾಯವಾಗಿದೆ.
ಯಾಗದ ಮೂಲಕ ಪ್ರಸಿದ್ಧಿ
ಕುತ್ರೊಟ್ಟು ಜಂಕ್ಷನ್‌ನಿಂದ ಈ ರಸ್ತೆಯು ಚಂದ್ಕೂರು ಮೂಲಕ ಅಗರಿ ಭಾಗವನ್ನು ಸಂಪರ್ಕಿಸುತ್ತದೆ. ಸುಮಾರು 400 ವರ್ಷಗಳ ಇತಿಹಾಸವನ್ನು ಹೊಂದಿರುವ ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೂ ಇದೇ ರಸ್ತೆಯ ಮೂಲಕ ಸಂಪರ್ಕಿಸ ಬೇಕಿದೆ. ಹಿಂದೊಮ್ಮೆ ಇಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ದೊಡ್ಡ ಮಟ್ಟದ ಯಾಗವೊಂದು ನಡೆದಿದ್ದು, ಚಂದ್ಕೂರು ಹೆಚ್ಚು ಪ್ರಸಿದ್ಧಿ ಪಡೆದಿತ್ತು ಎಂದು ಸ್ಥಳೀಯರು ಅಭಿಪ್ರಾಯಿಸುತ್ತಾರೆ.
ಅದಕ್ಕೆ ಸುಮಾರು 4 ವರ್ಷಗಳ ಹಿಂದೆ ಅಂದರೆ 1996ರಲ್ಲಿ ಈ ಸೇತುವೆ ನಿರ್ಮಾಣವಾಗಿತ್ತು. ಪ್ರಸ್ತುತ ಸೇತುವೆ ಜತೆಗೆ ರಸ್ತೆಯೂ ಶಿಥಿಲಾವಸ್ಥೆಯಲ್ಲಿದೆ. ಹೀಗಾಗಿ ರಸ್ತೆ ದುರಸ್ತಿ ಬೇಡಿಕೆಯೂ ಕೇಳಿಬರುತ್ತಿದೆ. ಮಳೆಗಾಲದಲ್ಲಿ ಸೇತುವೆಯ ತಳದಲ್ಲಿ ಅಪಾಯದ ಸ್ಥಿತಿಯಲ್ಲಿ ನೀರು ಹರಿಯುವುದರಿಂದ ಜನರು ಸೇತುವೆ ದಾಟುವುದಕ್ಕೆ ಹೆದರುತ್ತಾರೆ.
ದೇಗುಲದಿಂದ ಮನವಿ
ಪ್ರಸ್ತುತ ಚಂದ್ಕೂರು ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳು ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಅಲ್ಲಿನ ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು ಡಿ.31 ರಂದು ಶಾಸಕರನ್ನು ಭೇಟಿಯಾಗಿ ಅನುದಾನಕ್ಕಾಗಿ ಮನವಿ ನೀಡಿದ್ದಾರೆ.
ದೇವಸ್ಥಾನಕ್ಕೆ ಬೇಕಾದ ಅನುದಾನದ ಜತೆಗೆ ಕುತ್ರೊಟ್ಟಿನಿಂದ ದೇವಸ್ಥಾನವನ್ನು ಸಂಪರ್ಕಿಸುವ 3 ಕಿ.ಮೀ. ಉದ್ದದ ರಸ್ತೆ ದುರಸ್ತಿ, ಹೊಸ ಸೇತುವೆ ನಿರ್ಮಿಸುವಂತೆ ಮನವಿಯಲ್ಲಿ ತಿಳಿಸಿದ್ದಾರೆ. ಶಾಸಕರು ಸಂಬಂಧಪಟ್ಟ ಸಚಿವರ ಬಳಿ ಅನುದಾನಕ್ಕೆ ಪ್ರಯತ್ನಿಸುವ ಭರವಸೆ ನೀಡಿದ್ದಾರೆ ಎಂದು ಸಮಿತಿಯವರು ತಿಳಿಸಿದ್ದಾರೆ.
ಶಿಥಿಲಾವಸ್ಥೆಯಲ್ಲಿದೆ
ಸೇತುವೆ ಕಿರಿದಾಗಿರುವುದಲ್ಲದೆ ಶಿಥಿಲಾವಸ್ಥೆಗೂ ತಲುಪಿದೆ. ಸೇತುವೆಯ ಇಕ್ಕೆಲಗಳಲ್ಲಿ ಒಂದು ಭಾಗದ ತಡೆ ಗೋಡೆ ಬಿದ್ದಿದ್ದು, ಅದನ್ನು ರಾಡ್ ಮೂಲಕ ದುರಸ್ತಿ ಮಾಡಲಾಗಿದೆ. ಸಾಮಾನ್ಯವಾಗಿ ಸೇತುವೆಗಳಿರುವಲ್ಲಿ ನದಿ ಮುಗಿದ ಬಳಿಕವೂ ತಡೆಗೋಡೆಯನ್ನು ಕೊಂಚ ವಿಸ್ತರಿಸಲಾಗಿರುತ್ತದೆ. ಆದರೆ ಇಲ್ಲಿ ಕೇವಲ ನದಿ ಭಾಗಕ್ಕೆ ಮಾತ್ರ ತಡೆಗೋಡೆ ಹಾಕಲಾಗಿದ್ದು, ಉಳಿದಂತೆ ಅಪಾಯದ ಸ್ಥಿತಿ ಇದೆ. ಸೇತುವೆ ಕಿರಿದಾಗಿರುವ ಪರಿಣಾಮ ಏಕಕಾಲದಲ್ಲಿ ಒಂದು ಬದಿಯಲ್ಲಿ ಮಾತ್ರ ವಾಹನ ತೆರಳುವುದಕ್ಕೆ ಅವಕಾಶವಿದೆ. ಇದರಿಂದ ನಡೆದು ಹೋಗುವುದಕ್ಕೂ ಹೆದರುವ ಪರಿಸ್ಥಿತಿ ಇದೆ.
ಗಮನಕ್ಕೆ ಬಂದಿಲ್ಲ
ಸೇತುವೆಯ ಕುರಿತು ನನ್ನ ಗಮನಕ್ಕೆ ಬಂದಿಲ್ಲ. ತಾನು ಬರುವುದಕ್ಕಿಂತ ಮುಂಚೆ ಹಿಂದೆ ನಮ್ಮ ಕಚೇರಿಯಿಂದ ಪ್ರಸ್ತಾವನೆಗಿರಲೂಬಹುದು. ಸೇತುವೆಗೆ ಹೆಚ್ಚಿನ ಅನುದಾನ ಬೇಕಿದ್ದರೆ ಜಿ.ಪಂ.ನಿಂದ ಬರುವುದು ಕಷ್ಟ ಸಾಧ್ಯ. ಅದರ ಕುರಿತು ಮುಂದೆ ಗಮನ ಹರಿಸುತ್ತೇವೆ.
ಚೆನ್ನಪ್ಪ ಮೊಯಿಲಿ,
ಎಇಇ, ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗ,
ಬೆಳ್ತಂಗಡಿ
ಕಿರಣ್ ಸರಪಾಡಿ