ಮಾನಸಿಕ, ದೈಹಿಕ ಆರೋಗ್ಯಕ್ಕೆ ಯೋಗವೇ ಮದ್ದು
Team Udayavani, Jan 4, 2019, 5:59 AM IST
ಮೈಸೂರು: ಮಾನಸಿಕ ಒತ್ತಡ ನಿವಾರಣೆ ಹಾಗೂ ಉತ್ತಮ ದೈಹಿಕ ಆರೋಗ್ಯಕ್ಕಾಗಿ ಪ್ರತಿಯೊಬ್ಬರೂ ನಿಯಮಿತವಾಗಿ ಯೋಗಾಭ್ಯಾಸ ಮಾಡಬೇಕು ಎಂದು ನಗರಪಾಲಿಕೆ ಸದಸ್ಯ ಶಿವಕುಮಾರ್ ಹೇಳಿದರು. ಮೈಸೂರಿನ ವಿವೇಕಾನಂದನಗರದಲ್ಲಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಕಚೇರಿಯಲ್ಲಿ ನಡೆದ ಯೋಗ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾವೆಲ್ಲ ಮಾನವ ಸಂಪನ್ಮೂಲಗಳಿದ್ದಂತೆ, ನಾವು ನಮ್ಮ ದೇಶಕ್ಕೆ ಮತ್ತು ಕುಟುಂಬಕ್ಕೆ ಏನಾದರೂ ಕೊಡುಗೆಯನ್ನು ನೀಡಬೇಕು. ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯ ಎಂದಿಗೂ ನಮ್ಮೊಂದಿಗಿರುತ್ತದೆ. ಯೋಗ ದೇವರುಕೊಟ್ಟಿರುವಂತಹ ಸಾಧನ, ಆದ್ದರಿಂದ ಯೋಗ ಎಲ್ಲರಿಗೂ ಅಗತ್ಯ. ಆರೋಗ್ಯವನ್ನು ಕಳೆದುಕೊಂಡರೆ ಭವಿಷ್ಯದಲ್ಲಿ ನಾವು ಎಲ್ಲವನ್ನೂ ಕಳೆದುಕೊಂಡಂತೆ ಎಂದು ಎಚ್ಚರಿಕೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಮೈಸೂರು ಪ್ರಾದೇಶಿಕ ನಿರ್ದೇಶಕ ಎ. ಶ್ರೀಹರಿ ಮಾತನಾಡಿ, ಒತ್ತಡ ಮತ್ತು ಬದಲಾದ ಜೀವನ ಶೈಲಿಯಿಂದ ಆರೋಗ್ಯ ಸಮಸ್ಯೆ ಉಲ್ಬಣವಾಗುತ್ತಿದೆ. ಅದರಲ್ಲೂ ಕಲುಷಿತ ಆಹಾರ ಸೇವನೆಯನ್ನು ಮಾಡುತ್ತಿದ್ದು ಆರೋಗ್ಯದ ಬಗ್ಗೆ ನಾವು ಚಿಂತನೆ ಮಾಡಬೇಕಾಗಿದೆ. ಆಸ್ಪತ್ರೆಗೆ ಹೋಗಿ ಅಂತಿಮ ಹಂತದಲ್ಲಿ ಯೋಗಕ್ಕೆ ಬರುವ ಬದಲು ಯೋಗ ಮಾಡಿ ಆಸ್ಪತ್ರೆಯಿಂದ ದೂರವಿರೋಣ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಲೆಕ್ಕ ಪರಿಶೋಧಕ ರವೀಂದ್ರ, ಜಿಲ್ಲಾ ನಿರ್ದೇಶಕ ವಿಜಯಕುಮಾರ್ ನಾಗನಾಳ, ಮಮತಾ ರಾವ್, ದೇವಿಕಾ, ಪ್ರಾಂಶುಪಾಲರಾದ ವಿಶಾಲ.ಬಿ.ಮಲ್ಲಾಪುರ, ಯೋಜನಾಧಿಕಾರಿ ಕೇಶವ್ ದೇವಾಂಗ, ಶಿವಕುಮಾರ್ ಮೊದಲಾದವರು ಹಾಜರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.