ಹೀರೋ ಹಿಂದೆ ನಿಲ್ಲುತ್ತಿದ್ದವ ಈಗ ಹೀರೋ
Team Udayavani, Jan 5, 2019, 6:07 AM IST
ಅದೆಷ್ಟೋ ಚಿತ್ರಗಳಲ್ಲಿ ಗೆಳೆಯನ ಪಾತ್ರ, ಖಳ ನಟನ ಹಿಂದೆ ನಿಂತುಕೊಳ್ಳುವ ಪಾತ್ರ ಮಾಡುವ ಮೂಲಕ ಗುರುತಿಸಿಕೊಂಡಿದ್ದ ಬಸುಕುಮಾರ್ ಈಗ ಹೀರೋ ಆಗಿದ್ದಾರೆ. ಇದೇ ಮೊದಲ ಸಲ ಅವರು “ರಣ ಹೇಡಿ’ ಎಂಬ ಚಿತ್ರದ ಮೂಲಕ ನಾಯಕರಾಗಿರುವ ಖುಷಿಯಲ್ಲಿದ್ದಾರೆ. ಅಂದಹಾಗೆ, ಬಸುಕುಮಾರ್ ಇದೀಗ ತಮ್ಮ ಹೆಸರು ಬದಲಿಸಿಕೊಂಡಿದ್ದಾರೆ. “ರಣ ಹೇಡಿ’ ಚಿತ್ರದ ಮೂಲಕ ಕರ್ಣ ಕುಮಾರ್ ಎಂದು ನಾಮಕರಣ ಮಾಡಿಕೊಂಡು ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ಈ ಚಿತ್ರಕ್ಕೆ ಮನು ಕೆ. ಶೆಟ್ಟಿಹಳ್ಳಿ ನಿರ್ದೇಶಕರು. ಇವರಿಗಿದು ಮೊದಲ ಚಿತ್ರ. ಈ ಹಿಂದೆ “ಡೇಸ್ ಆಫ್ ಬೋರಾಪುರ’ ಚಿತ್ರಕ್ಕೆ ಸಂಭಾಷಣೆ ಬರೆದಿದ್ದರು. ಈಗ “ರಣ ಹೇಡಿ’ ಹಿಂದೆ ನಿಂತಿದ್ದಾರೆ. ಸುರೇಶ್ ನಿರ್ಮಾಪಕರು. ಚಿತ್ರಕ್ಕೆ ಐಶ್ವರ್ಯ ರಾವ್ ಎಂಬ ಮೈಸೂರು ಹುಡುಗಿ ನಾಯಕಿ. ಉಳಿದಂತೆ ಚಿತ್ರದಲ್ಲಿ ಅಚ್ಯುತಕುಮಾರ್, ಗಿರಿ ಸೇರಿದಂತೆ ಸ್ಥಳೀಯ ಪ್ರತಿಭೆಗಳು ಕಾಣಿಸಿಕೊಂಡಿವೆ. ಈಗಾಗಲೇ ಚಿತ್ರೀಕರಣ ಮುಗಿದಿದ್ದು, ಡಬ್ಬಿಂಗ್ ಕೆಲಸದಲ್ಲಿ ನಿರತವಾಗಿದೆ ಚಿತ್ರತಂಡ.
ಇದೇ ಮೊದಲ ಬಾರಿಗೆ ನಾಯಕರಾಗಿ ನಟಿಸುತ್ತಿರುವ ಕರ್ಣ ಕುಮಾರ್ ಅವರು ಗಾಂಧಿನಗರಕ್ಕೆ ಬಂದು ಒಂದು ದಶಕವೇ ಕಳೆದಿದೆ. “ಕಬಡ್ಡಿ’ ಅವರು ಅಭಿನಯಿಸಿದ ಮೊದಲ ಚಿತ್ರ. ಆ ನಂತರದಲ್ಲಿ “ಮಫ್ತಿ’,”ಕಬೀರ’,”ಮತ್ತೆ ಮುಂಗಾರು’,”ಭಾರತ್ ಸ್ಟೋರ್’, “ಮಾಸ್ಟರ್ ಪೀಸ್’, “ಚೌಕ’ ಸೇರಿದಂತೆ ಈವರೆಗೆ ಸುಮಾರು 40 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕರ್ಣ ಕುಮಾರ್ ಅವರಿಗೆ ರಂಗಭೂಮಿ ಹಿನ್ನೆಲೆಯೂ ಇದೆ. ಮಂಡ್ಯ ಮೂಲದವರಾದ ಕರ್ಣ ಕುಮಾರ್, ಅಲ್ಲಿನ “ಜನದನಿ’ ಮತ್ತು “ಗೆಳೆಯರ ಬಳಗ’ ರಂಗತಂಡದಲ್ಲಿ ಕೆಲಸ ಮಾಡಿದ್ದಾರೆ.
ಸುಮಾರು50 ನಾಟಕಗಳಲ್ಲೂ ನಟಿಸಿದ್ದಾರೆ. ಒಂದು ವರ್ಷ “ರಂಗಾಯಣ’ದಲ್ಲೂ ಬಣ್ಣ ಹಚ್ಚಿದ್ದಾರೆ. ಇದರೊಂದಿಗೆ ಬೀದಿ ನಾಟಕಗಳಲ್ಲೂ ಕಾಣಿಸಿಕೊಂಡಿದ್ದ ಅವರು, ಆರಂಭದ ದಿನಗಳಲ್ಲಿ ಕಿರುತೆರೆಯಲ್ಲಿ ತಮ್ಮ ಜರ್ನಿ ಶುರುಮಾಡಿದ್ದರು. ಹಲವು ಚಿತ್ರಗಳಲ್ಲಿ ತರಹೇವಾರಿ ಪಾತ್ರ ಮಾಡಿದ್ದ ಅವರಿಗೆ ಈಗ “ರಣ ಹೇಡಿ’ ಚಿತ್ರದಲ್ಲಿ ನಾಯಕರಾಗಿ ನಟಿಸುವ ಅವಕಾಶ ಸಿಕ್ಕಿದೆ. ಈ ಬಗ್ಗೆ ಹೇಳಿಕೊಳ್ಳುವ ಕರ್ಣ ಕುಮಾರ್, “ನಾನು ಆ ಚಿತ್ರದ ನಾಯಕನಲ್ಲ. ಅಲ್ಲಿ ಕಥೆಯೇ ನಾಯಕ. ನಾನು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದೇನಷ್ಟೇ.
“ರಣಹೇಡಿ’ ಒಂದು ರೈತರ ಆತ್ಮಹತ್ಯೆ ಹಿನ್ನೆಲೆಯಲ್ಲಿ ಸಾಗುವ ಕಥೆ. ರೈತರ ವೈಯಕ್ತಿಕ ಸಮಸ್ಯೆಯಿಂದ ಆತ್ಮಹತ್ಯೆ ಆಗುವುದು ಮತ್ತು ಬೆಳೆ ನಷ್ಟ, ಸಾಲ ಹಿನ್ನೆಲೆಯಲ್ಲೂ ಆತ್ಮಹತ್ಯೆ ಆಗುವುದರ ಕುರಿತ ಚಿತ್ರಣವಿದೆ. ಸುಮಾರು 35 ದಿನಗಳ ಕಾಲ ಚಿತ್ರೀಕರಿಸಿದ್ದು, ಚಿತ್ರದಲ್ಲಿ ಬಹುತೇಕ ಹೊಸ ಪ್ರತಿಭೆಗಳಿವೆ. ಅಚ್ಯುತಕುಮಾರ್, ಗಿರಿ, ಷಫಿ ಇತರರು ನಟಿಸಿದ್ದಾರೆ.ಸಂಗೀತ ನಿರ್ದೇಶಕ ವಿ.ಮನೋಹರ್ ಅವರು ಆರು ಹಾಡುಗಳಿಗೆ ಸಂಗೀತ ನೀಡಿದ್ದಾರೆ.
ಕುಮಾರ್ ಗೌಡ ಛಾಯಾಗ್ರಾಹಣವಿದೆ ಎಂಬುದು ಕರ್ಣ ಕುಮಾರ್ ಮಾತು. ಆರಂಭದ ದಿನದಲ್ಲಿ ಹೊಟ್ಟೆಪಾಡಿಗೆ ಬಸ್ ಏಜೆಂಟ್ ಆಗಿ ಕೆಲಸ ಮಾಡಿದ್ದನ್ನು ಮರೆಯದ ಕರ್ಣ, “ನಾನೊಬ್ಬ ಕಲಾವಿದ ಆಗಬೇಕು ಎಂದು ಕಷ್ಟಪಟ್ಟು ಇಷ್ಟು ವರ್ಷ ಸಿಕ್ಕ ಪಾತ್ರ ಮಾಡಿದ್ದೇನೆ. ಲೈಫಲ್ಲಿ ಈಗ ಒಳ್ಳೆಯ ಪಾತ್ರ ಸಿಕ್ಕಿದೆ. ಜವಾಬ್ದಾರಿ ಹೆಚ್ಚಿದೆ. ಭಯವೂ ಇದೆ. ಆದರೆ, ಈ ಚಿತ್ರದ ಬಳಿಕವೂ ನಾನು ಬಂದ ಪಾತ್ರ ಕಣ್ಣಿಗೊತ್ತಿಕೊಂಡು ನಿರ್ವಹಿಸುತ್ತೇನೆ’ ಎನ್ನುತ್ತಾರೆ ಅವರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.