ಪ್ರಬಂಧ: ಹುಣಿಸೆ ಮಹಾತ್ಮೆ
Team Udayavani, Jan 6, 2019, 12:30 AM IST
ಬಹಳ ವರ್ಷಗಳಿಂದ ಮನೆಯಲ್ಲಿ ಅಡುಗೆ ಮಾಡಿಕೊಂಡು ಕುಳಿತವಳಿಗೆ ಅಚಾನಕ್ ತಲೆಯಲ್ಲಿ ಮಿಂಚು ಸಂಚಾರವಾದಂತೆ ಆಗಿ ಪಕ್ಕದ ಮನೆ ಮಕ್ಕಳನ್ನು ಕರೆದು ನಾನು, “”ಇನ್ನುಮೇಲೆ ನಿಮಗೆ ಭರತನಾಟ್ಯ ಕಲಿಸುತ್ತೇನೆ. ವಾರಕ್ಕೆ ಎರಡು ದಿನ ಬರುತ್ತೀರಾ?” ಎಂದೆ. ಮೊದಲ ವಾರ ಇಬ್ಬರು ವಿದ್ಯಾರ್ಥಿಗಳಿಂದ ಪ್ರಾರಂಭವಾಗಿ ಹನ್ನೆರಡು ಸಂಖ್ಯೆಗೆ ಏರಿತು. ಡ್ಯಾನ್ಸ್ ಕ್ಲಾಸ್ ಮುಗಿದ ಮೇಲೆ ಮನೆ ಸುತ್ತ ಇರುವ ಹುಣಿಸೆ ಗಿಡದಿಂದ ಹುಣಸೆಕಾಯಿ ಹರಿದು ತಿಂದು ಚಪ್ಪರಿಸುತ್ತ ಮನೆಗೆ ಹೋಗುತ್ತಿದ್ದರು. ಒಂದು ವಾರ ಕ್ಲಾಸಿಗೆ ಬಂದ ಹುಡುಗಿಯರೆಲ್ಲ ಸೊಂಟಕ್ಕೆ ಕಟ್ಟುವ ಜಡಣಿಯಿಂದ ಮುಖ ಮುಚ್ಚಿಕೊಂಡು ಹಣೆಗೆ ಮುಖಕ್ಕೆ ವಿಕಾರವಾಗಿ ಅದು ಕಾಡಿಗೆಯೋ ಅಥವಾ ಮಸಿಯೋ ಗೊತ್ತಿಲ್ಲ; ಮೆತ್ತಿಕೊಂಡು ಬಂದಿದ್ದರು. ನನಗೆ ಭಯ ಹಾಗೂ ನಗು ಒಟ್ಟಿಗೇ ಬಂದಿತ್ತು. ಇದೇನು “ಭೂತ ಬೆಲ್ಲಿ’ ಅವತಾರ ಎಂತ ನೆಗಾಡಿದೆ. ಒಬ್ಬರಿಗೊಬ್ಬರು ಮುಖ ನೋಡಿಕೊಂಡು ಸುಮ್ಮನಾದರು. ಒಬ್ಬರು ಕೂಡ ಪಿಟಿಕ್ ಅನ್ನಲಿಲ್ಲ. ಮತ್ತೂಂದು ದಿನ ಗೊತ್ತಾಯಿತು ಕಲ್ಯಾಣಿ ಹುಣಿಸೆ ಮರದಿಂದ ಹುಣಿಸೆಕಾಯಿ ಕಿತ್ತು ತಿಂದು ಹೋಗಿದ್ದಳು. ರಾತ್ರಿಯೆಲ್ಲ ಏನೇನೋ ಕನವರಿಸುತ್ತಿದ್ದಳಂತೆ. ಹುಣಿಸೆ ಮರದಲ್ಲಿರುವ ಬ್ರಹ್ಮ ರಾಕ್ಷಸಿ ಅವಳನ್ನು ರಾತ್ರಿ ಕಾಡಿತ್ತಂತೆ. ಮುಖಕ್ಕೆ ಕಪ್ಪು ಹಬ್ಬಿಕೊಂಡರೆ ಭೂತ ಹತ್ತಿರ ಬರುವುದಿಲ್ಲ ಎನ್ನುವ ಸಮಾಚಾರ ಗೊತ್ತಾಯಿತು.
ಮನೆ ಸುತ್ತ ಇರುವ ಹೊಲದ ಜಾಗದಲ್ಲಿ ನಮ್ಮತ್ತೆ ಕಡಿಮೆ ನೀರಿನಲ್ಲಿ ಬರವನ್ನು ಎದುರಿಸುವ ಸಾಮರ್ಥ್ಯ ಇರುವ “ಜವಾರಿ’ ಹುಣಿಸೆ ಗಿಡಗಳನ್ನು ಹಾಕಿದ್ದಳು. ನಾನು ಮದುವೆಯಾಗಿ ಬರುವಷ್ಟರಲ್ಲಿ ಅವೆಲ್ಲ ಮರಗಳಾಗಿದ್ದವು. ಮನೆಗೆ ಬಂದವರೆಲ್ಲ ಮನೆ ಸುತ್ತು ಹುಣಿಸೆ ಮರಗಳಿವೆ, ತುಂಬಾ ಪಿತ್ತ-ದುಷ್ಟ ಶಕ್ತಿಗಳು ಇಲ್ಲೇ ಇರೋದು ಎನ್ನುತ್ತಿದ್ದರು. ಹುಣಿಸೆ ಮರಗಳು ಮನೆ ಸುತ್ತ ಇರುವುದರಿಂದಲೇ ಏನೋ, ಬೇಸಿಗೆಯಲ್ಲಿ ನಮ್ಮ ಮನೆ ತಂಪಾಗಿರುತ್ತದೆ.
ಹತ್ತನೆಯ ತರಗತಿಯಲ್ಲಿ ಓದುತ್ತಿರುವ ಮಗನಿಗೆ ಎರಡು ಮರಗಳ ಬಗ್ಗೆ ವಿವರಣೆ ಬರೆದುಕೊಂಡು ಬರಲು ಹೋಮ್‌ವರ್ಕ್ ಕೊಟ್ಟಿದ್ದರಂತೆ. “”ನೀನೇ ಮರದ ಹೆಸರು ಹೇಳಮ್ಮ” ಎಂದ. ಮನೆಯ ಮುಂದಿರುವ ಬೇವಿನ ಮರ, ಹುಣಿಸೆ ಮರ ತಟ್ಟನೆ ನೆನಪಾಗಿ ಅವುಗಳ ಹೆಸರು ಹೇಳಿದೆ. ಮಗ ಇಂಟರ್‌ನೆಟ್‌ನಲ್ಲಿ ಮರಗಳ ಬಗ್ಗೆ ವಿವರಣೆ ಹುಡುಕುತ್ತ ಇದ್ದ. “ಮನೆಯ ಮುಂದಿರುವ ಮರಗಳ ಬಗ್ಗೆ ನೆಟ್‌ನಲ್ಲಿ ವಿವರಣೆ ಹುಡುಕುತ್ತಿಯೇನೋ’ ಎಂದು ಬೈದೆ. “ನೀನು ಹೇಳು ನಾನು ಬರೀತೀನಿ’ ಅಂದ. ನಾನು ಹುಣಿಸೆ ಮರದ ಬಗ್ಗೆ ವಿವರಣೆ ನೀಡುತ್ತ, “ತೆಂಗಿನ ಮರವನ್ನು ಕಲ್ಪತರು ಎನ್ನುವಂತೆ, ಹುಣಿಸೆ ಮರವನ್ನು ಲಕ್ಷ್ಮಿ ಎನ್ನುತ್ತಾರೆ’ ಎಂದೆ. “ಹೋಗಮ್ಮ ನಿನ್ನ ಲಕ್ಷ್ಮಿ-ಸರಸ್ವತಿ ಎಲ್ಲಾ ಬೇಕಾಗಿಲ್ಲ’ ಎಂದು ಎದ್ದು ಹೋದ.
ಶ್ರೀ ರವಿಶಂಕರ ಗುರೂಜಿಯವರು “ಸೀಮರೂಬಾ’ ವೃಕ್ಷವನ್ನು “ಲಕ್ಷ್ಮೀತರು’ ಎಂದು ಕರೆದಿದ್ದಾರೆ. ಆದರೆ ಹುಣಿಸೆಗಿಡದ ಬಗ್ಗೆ ತಿಳಿಯುತ್ತ ಹೋದರೆ ಹುಣಿಸೆ ಗಿಡವೇ ನಿಜವಾದ “ಲಕ್ಷ್ಮೀ’ ಎನ್ನಬಹುದು. ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಸಾಮಾನ್ಯವಾಗಿ ಹುಣಿಸೆೆಗಿಡದ ಹುಣಿಸೆಹಣ್ಣನ್ನು ಕೊಟ್ಟ ಮೇಲೆ ಎಲೆಯೆಲ್ಲ ಉದುರಿಸಿಕೊಂಡು ಬೋಳು ಮರವಾಗಿರುತ್ತದೆ- ಮರ ಸತ್ತೇ ಹೋಯಿತು ಅನ್ನಿಸುವಷ್ಟು. ಹೆಣ್ಣುಮಕ್ಕಳು ಒಣಗಿದ ಕೊಂಬೆಗಳನ್ನು ಮುರಿದುಕೊಂಡು ಕಟಗಿ ಮಾಡಿಕೊಳ್ಳುತ್ತಾರೆ. ಮೇ-ಜೂನ್ ತಿಂಗಳಲ್ಲಿ ಬೀಳುವ ತುಂತುರು ಮಳೆಯೇ ಸಾಕು, ಗಿಡದ ತುಂಬೆಲ್ಲ ಮೊಳಕೆ ಜಡೆದು ನೋಡನೋಡುತ್ತಿದ್ದಂತೆಯೇ ಕೆಂಪು ಬಣ್ಣದ ಚಿಗುರು ಹಸಿರು ಬಣ್ಣಕ್ಕೆ ತಿರುಗುವಷ್ಟರಲ್ಲಿ ಮೊಗ್ಗು ಬಿಟ್ಟು ಹೂವು ಮರದ ತುಂಬೆಲ್ಲ ಹರಡಿ ಎಲೆಗಳು ಕಾಣದಂತೆ ಹೂ ಬಿಟ್ಟಿರುತ್ತವೆ. ಕೆಲವು ಮರ ಹಳದಿ ಹೂಬಿಟ್ಟರೆ ಮತ್ತೆ ಕೆಲವು ಕೆಂಪು ಅಥವಾ ಹಳದಿ ರೇಕುಗಳು ಬಿದ್ದು ಹೂವಿನ ಹಾಸಿಗೆಯಂತಿರುತ್ತದೆ. ಅದರ ಮೇಲೆ ನಡೆದಾಡಿದರೆ ಸ್ವರ್ಗದಲ್ಲಿರುವ ಅನುಭವ ಉಂಟಾಗುತ್ತದೆ. ಹುಣಿಸೆ ಮರದ ಕೆಂಪು ಎಳೆಚಿಗುರು ಬಂದಾಗಿನಿಂದ ಅದರ ಉಪಯೋಗ ಶುರುವಾಗುತ್ತದೆ. ಎಲೆ ಚಿಗುರಿಗಾಗಿ ಕಾಯುವ ಚಪಲವಂತರು ಎಳೆ ಚಿಗುರನ್ನು ಕಿತ್ತು ಹಸಿಮೆಣಸಿನಕಾಯಿ- ಬೆಳ್ಳುಳ್ಳಿ-ಜೀರಿಗೆ-ಉಪ್ಪಿನೊಂದಿಗೆ ಒರಳಿನಲ್ಲಿ ಕುಟ್ಟಿ ತೊಗರಿಬೇಳೆಯೊಂದಿಗೆ ಬೇಯಿಸಿ ಗಟ್ಟಿ ಬೇಳೆ ಮಾಡುತ್ತಾರೆ. ಹುಣಿಸೆಹೂವಿನ ಮೊಗ್ಗನ್ನು ಸಹ ಚಿಗುರಿನೊಂದಿಗೆ ಸೇರಿಸುತ್ತಾರೆ. ಹುಳಿ ಹುಳಿಯಾಗಿರುವ ಗಟ್ಟಿ ಬೇಳೆ ತುಪ್ಪ, ಬಿಸಿ ಅನ್ನದೊಂದಿಗೆ ತಿಂದರೆ ಸ್ವರ್ಗಸುಖ ಕಂಡಂತಾಗುತ್ತದೆ. ಮನೆ ಪಕ್ಕದಲ್ಲಿರುವ ಶಾಲೆಯ ಹುಡುಗರಂತೂ ಹುಣಿಸೆ ಚಿಗುರು ಬಿಟ್ಟಾಗಿನಿಂದ ಹುಣಿಸೆ ಮರದಲ್ಲಿಯೇ ಸೇರಿಬಿಡುತ್ತಾರೆ. ಬಸುರಿ ಹೆಣ್ಣು ಮಕ್ಕಳಿಗಂತೂ ಚಿಗುಗಿರಿನಿಂದ ಹಿಡಿದು ಬಲಿತ ಹುಣಿಸೆ ತಪ್ಪಲವೂ ಬಯಕೆ ತೀರಿಸುತ್ತದೆ. ಹೂಗಳು ಉದುರಿ ಶ್ರಾವಣ ಮಾಸದಲ್ಲಿ ಹುಲಿ ಉಗುರಿನಂತಹ ಸಣ್ಣ ಹುಣಿಸೆ ಕಾಯಿಗಳು ಕಾಣಲಾರಂಭಿಸುತ್ತವೆ. ಇನ್ನೊಂದು ಹದಿನೈದು ದಿನಗಳಲ್ಲಿ ಸಣ್ಣ ಮಳೆಯಾದರೆ ಹುಣಿಸೆಕಾಯಿಯಲ್ಲಿ ಸಣ್ಣ ಬೀಜ ಬಂದಿದ್ದೇ ತಡ, ಬೆಳಿಗ್ಗೆ ಮತ್ತು ಸಾಯಂಕಾಲ ಮರದ ತುಂಬೆಲ್ಲ ಗಿಳಿಗಳ ಹಿಂಡು ತುಂಬಿರುತ್ತದೆ. ಹುಣಿಸೆಕಾಯಿಯಲ್ಲಿರುವ ಎಳೆ ಬೀಜ ತಿನ್ನುವುದೆಂದರೆ ಗಿಳಿಗಳಿಗೆ ತುಂಬಾ ಇಷ್ಟ. ಒಳಗಿನ ಎಳೆ ಬೀಜ ತಿಂದು ಸಣ್ಣ ಹುಣಿಸೆಕಾಯಿಯನ್ನು ನೆಲಕ್ಕೆ ಬೀಳಿಸುತ್ತವೆ. ಬಿದ್ದ ಹುಣಿಸೆಕಾಯಿ ಮಕ್ಕಳ ಪಾಲು. ದಸರಾ ಹೊತ್ತಿಗೆಲ್ಲ ಮರದಲ್ಲಿರುವ ಹುಣಿಸೆಕಾಯಿ ಕಣ್ಣಿಗೆ ಕುಕ್ಕುವಂತಿರುತ್ತದೆ. ಎಲ್ಲರ ಕಣ್ಣು ಮರದ ಮೇಲೆ. ದಸರಾ ಹಬ್ಬಕ್ಕೆ ಮಾಡುವ ಹೋಳಿಗೆ ಸಾರಿಗೆ ಕುದಿಸಿ ರಸ ತೆಗೆದ ಹುಣಿಸೇಕಾಯಿಯ ರಸದ್ದೇ ಸವಿ. ಸಾರು ಬೆಳ್ಳಗಿರುತ್ತದೆ. ವಯಸ್ಸಾದವರಿಗೆ ಸಾರು ಬೆಳ್ಳಗಿದ್ದರೇ ಇಷ್ಟ. ಈಗಿನಿಂದ ಮನೆಯಲ್ಲಿ ಹುಣಿಸೆಹಣ್ಣು ಇಲ್ಲದಿರುವಾಗ ಹುಣಿಸೇಕಾಯಿ ಕುದಿಸಿ ರಸ ತೆಗೆಯುವುದು ಶುರುವಾಗುತ್ತದೆ.
ಮನೆಪಕ್ಕ ಶಾಲೆ ಇರುವುದರಿಂದ ಡಬ್ಬಿ ಅಂಗಡಿಗಳಿವೆ. ಹುಡುಗರು ನಮ್ಮನೆ ಮರದಿಂದ ಹುಣಿಸೆಕಾಯಿ ಕದ್ದು ಡಬ್ಬಿ ಅಂಗಡಿಯವನಿಗೆ ಮಾರುತ್ತಾರೆ. ಅವನು ರೂಪಾಯಿಗೆ ಒಂದರಂತೆ ಮಕ್ಕಳಿಗೆ ಕೊಡುತ್ತಾನೆ. ಎಳ್ಳಮವಾಸ್ಯೆ ಸಂಕ್ರಾಂತಿಗೆಲ್ಲ ಹುಣಿಸೆಕಾಯಿ ಡೋರು ಹಣ್ಣಾಗಿರುತ್ತದೆ. ನೀರುಮಾನ್ವಿ ಎಲ್ಲಮ್ಮದೇವಿಯ ಜಾತ್ರೆಯ ಹೊತ್ತಿಗೆಲ್ಲ ಹುಣಿಸೆ ಖಾರ ಹಾಕಿ ಮುಗಿಸಬೇಕು.
ಎಲ್ಲಮ್ಮದೇವಿಯ ಎಡೆಗೆ ಹುಣಿಸೆಖಾರ ಶ್ರೇಷ್ಠ. ಪ್ರತಿವರ್ಷ ಎಡೆಗೋಸ್ಕರ ಹುಣಿಸೆ ಖಾರ ಹಾಕಲೇಬೇಕು. ಅದು ಮೊದಲು ದೇವಿಗೆ ಮೀಸಲು. ಎಂತಹ ಬಡವರಾದರೂ ಕನಿಷ್ಠ ಅರ್ಧ ಕೇಜಿ ಹುಣಿಸೆಖಾರ ಹಾಕದೇ ಇರುವುದಿಲ್ಲ. ರಾಯಚೂರು ಜನ ಹುಣಿಸೆಖಾರ ಎಂದರೆ, ಧಾರವಾಡ ಹುಬ್ಬಳ್ಳಿ ಕಡೆ ಹುಣಿಸೆ ತೊಕ್ಕು, ಹುಣಿಸೆ ಚಟ್ನಿ ಎಂದೆಲ್ಲ ಕರೆಯುತ್ತಾರೆ. ಇನ್ನು ಮಾಡುವ ವಿಧಾನವು ವಿಶೇಷ. ಡೋರು ಹುಣಿಸೆಕಾಯಿಯನ್ನು ಮರದಿಂದ ಹರಿದ ತಕ್ಷಣ, ತೊಳೆದು ನೀರೆಲ್ಲ ಸೋಸಿ ಉಪ್ಪಿನೊಂದಿಗೆ ಅರೆಯುತ್ತಾರೆ. ಇದಕ್ಕೂ ಮೊದಲು ಮೆಂತ್ಯ ಹಾಗೂ ಅರಸಿನವನ್ನು ಪುಡಿಮಾಡಿ ನೆನೆಸಿ ರೆಡಿ ಮಾಡಿ ಇಟ್ಟುಕೊಂಡಿರುತ್ತಾರೆ. ಇದನ್ನು ಅರಿಯಲು ವಿಶೇಷವಾದ ಹಾಸುಗಲ್ಲು ಹಾಗೂ ಗುಂಡುಕಲ್ಲು ಇರುತ್ತದೆ. ಮಣಗಟ್ಟಲೆ (10 ಕೆಜಿ) ಹಾಕುವಾಗ ಕನಿಷ್ಠ ನಾಲ್ಕು ಹೆಣ್ಣು ಮಕ್ಕಳು ಹುಣಿಸೆಖಾರ ಸಿದ್ಧಪಡಿಸಲು ಬೇಕೇಬೇಕು. ಇತ್ತೀಚೆಗೆ ಪಟ್ಟಣಗಳಲ್ಲಿ ದೋಸೆಹಿಟ್ಟು ರುಬ್ಬುವ ಯಂತ್ರದಲ್ಲಿಯೇ ಹುಣಿಸೆಕಾರವನ್ನು ರುಬ್ಬಿ ಕೊಡಲಾಗುತ್ತದೆ. ದೋಸೆ ಆದರೆ ಕಲ್ಲಿನಿಂದ ಅರೆದ ಹುಣಿಸೇಖಾರದ ಅದ್ಭುತ ರುಚಿಯೇ ಬೇರೆ. ಇದನ್ನು ಎಲ್ಲಮ್ಮದೇವಿಯ ಎಡೆಗಾಗಿ ಮಾಡುವುದರಿಂದ ಹೆಣ್ಮುಮಕ್ಕಳು ಅತೀ ಶ್ರದ್ಧೆ ಹಾಗೂ ಶುಚಿತ್ವದಿಂದ ಮಾಡುತ್ತಾರೆ. ಮೊದಲೆಲ್ಲ ಮಣಗಟ್ಟಲೆ ಹಾಕಿದ ಹುಣಿಸೆ ಖಾರವನ್ನು ಮಣ್ಣಿನ ಪಡಗಗಳಲ್ಲಿ ತುಂಬಿಬಿಡುತ್ತಿದ್ದರು. ಈಗ ಅರ್ಧ ಕೆಜಿ ಅಥವಾ ಒಂದು ಕೆಜಿ ಹಾಕುವುದರಿಂದ ಪ್ಲಾಸ್ಟಿಕ್ ಡಬ್ಬದಲ್ಲಿ ಹಾಕಿಡುತ್ತಾರೆ. ಹುಣಿಸೇಖಾರ ಹಾಕಿದ ದಿನ ಸಾಯಂಕಾಲ ಭಕ್ತಿಯಿಂದ ಮನೆಗೆ ಲಕ್ಷ್ಮೀ¾ ಬಂದಳೆಂದು ಹೊಸ ಹುಣಿಸೆಖಾರವನ್ನು ಪೂಜಿಸುತ್ತಾರೆ. ಉಳ್ಳವರು ಊರಗೌಡರು ಈಗಲೂ ಮಣಗಟ್ಟಲೆ ಹುಣಿಸೆ ಖಾರವನ್ನು ಹಾಕುತ್ತಾರೆ. ಹುಣಿಸೇ ಖಾರವನ್ನು ಕೇಳಲು ಬಂದವರಿಗೆ ಇಲ್ಲ ಅನ್ನದೆ ಕೊಡುತ್ತಾರೆ. ಸಣ್ಣಮಕ್ಕಳಿಗೆ ಘನ ಆಹಾರವನ್ನು ಪ್ರಾರಂಭಿಸುವಾಗ ಮೆತ್ತನೆಯ ಅನ್ನ ತುಪ್ಪ ಹಾಗೂ ಹುಣಸೇಖಾರವನ್ನು ತಿನ್ನಿಸುತ್ತಾರೆ. ಅಥವಾ ಅನ್ನ ಹಾಲು ಹುಣಿಸೆಖಾರ ತಿನ್ನಿಸುತ್ತಾರೆ. ಕರುಗಳಿಗೆ ಹುಲ್ಲು ತಿನ್ನಿಸುವ ಅಭ್ಯಾಸ ಮಾಡಿಸಲು ಮೆತ್ತನೆಯ ಜೋಳದ ರೊಟ್ಟಿಗೆ ಹುಣಸೆಖಾರ ತಿನ್ನಿಸುತ್ತಾರೆ. ರಾಸುಗಳ ನಾಲಿಗೆಯಲ್ಲಿ ಮುಳ್ಳಾದರೆ ಹುಣಿಸೆ ಖಾರ ನೆಕ್ಕಿಸುತ್ತಾರೆ. ಜ್ವರ ಬಂದು ನಾಲಿಗೆ ರುಚಿ ಹೋದರೆ ಹುಣಿಸೆ ಖಾರದೊಂದಿಗೆ ಊಟ ಮಾಡುತ್ತಾರೆ. ಎಂತಹ ಭೂರಿಭೋಜನವಿರಲಿ, ಹುಣಿಸೆಖಾರ ಇಲ್ಲದೆ ಹೋದರೆ ಊಟವನ್ನು ಯಾರೂ ಮೆಚ್ಚುವುದಿಲ್ಲ. ಬಿಸಿ ಜೋಳದ ರೊಟ್ಟಿಯ ಜೊತೆಯಲ್ಲಿ ಹುಣಿಸೆಖಾರ ತುಪ್ಪವಿದ್ದರೆ ಎರಡು ರೊಟ್ಟಿ ಹೆಚ್ಚಿಗೆ ಹೋಗುತ್ತದೆ. ನಮ್ಮತ್ತೆ ಹೇಳುತ್ತಿದ್ದರು, “ಊಟ ಜೊತೆ ಹುಣಿಸೆಖಾರವಿದ್ದರೆ ಊಟದ ರುಚಿ ಹೆಚ್ಚಿಸುತ್ತದೆ. ಆದರೆ, ಈಗಿನ ವೈದ್ಯರ ಪ್ರಕಾರ ಹುಣಿಸೆಕಾರ ಅಸಿಡಿಟಿ ಉಂಟುಮಾಡು
ತ್ತದೆ ತಿನ್ನಬೇಡಿ ಎನ್ನುತ್ತಾರೆ. ಹುಣಿಸೇಕಾರದ ರುಚಿ ಗೊತ್ತಿರುವವರು ಅದನ್ನು ಹೇಗೆ ಬಿಡುತ್ತಾರೆ?’
ಮುಂದೆ ಬರುವುದೇ ಹುಣಿಸೆ ಹಣ್ಣಿನ ಕಾಲ. ಹುಣಿಸೆಹಣ್ಣು ಹೆಸರು ಒಂದು ಆದರೆ, ಅದರಲ್ಲಿರುವ ವೈವಿಧ್ಯತೆ ಹೇಳತೀರದು. ಎರಡು ಬೋಟಿನ ಒಂದೇ ಗೊಂಚಲಿನಲ್ಲಿ ಹತ್ತಾರು ಕಾಯಿ ನೇತಾಡುವ ಮರ, ಎರಡು ಬೆರಳು ಅಗಲದ ನೀಲವಾಗಿ ಪಟ್ಟಿ ಆಕಾರದ ಹುಣಿಸೆಹಣ್ಣು, ಜಾಂಗೀರು ಆಕಾರದ ಹುಣಿಸೆಹಣ್ಣು. ಎರಡು-ಮೂರು ಬೋಟಿನ ಒಂಟಿಯಾಗಿ ನೇತಾಡುವ ಹುಣಿಸೆಹಣ್ಣು. ಹುಣಿಸೆಹಣ್ಣಿನ ಬಣ್ಣದಲ್ಲಿಯೂ ವಿವಿಧ ಚಂದದ ಕೆಂಪು ಬಣ್ಣ, ಇದ್ದಿಲ ಮಸಿ ಬಣ್ಣ , ಗಾಢ ಕೆಂಪು ಬಣ್ಣ ರುಚಿಯೂ ಅಷ್ಟೇ, ಕಡಕ್ ಹುಳಿ. ಬೆಲ್ಲದಷ್ಟು ಸಿಹಿಯಾಗಿರುವ ಹುಣಿಸೆಹಣ್ಣು ಕೂಡಾ ಇದೆ. ರೆಂಬೆ ಅಲ್ಲಾಡಿಸಿದರೆ ಪಟಪಟ ಉದುರುವ, ಕುಡುಗೋಲಿನಿಂದ ಹಾಕಿ ಎಳೆದರೂ ಬಾರದ ಹುಣಿಸೆಹಣ್ಣಿನ ಪ್ರಕಾರಗಳಿವೆ.
ಇಪ್ಪತ್ತೈದು ವರ್ಷಗಳ ಹಿಂದೆ ಅಣ್ಣಿಗೇರಿಯ ನಡುಕಟ್ಟಿನ್ ಅವರ ಮನೆಗೆ ಹೋಗಿದ್ದೆ. ಅವರ ಹುಣಿಸೆಹಣ್ಣನ್ನು ಪ್ರತ್ಯೇಕಿಸಲು ವಿಶೇಷವಾದ ಯಂತ್ರವನ್ನು ಕಂಡುಹಿಡಿದು ಉಪಯೋಗಿಸುತ್ತಿದ್ದರು. ಹುಣಿಸೇಹಣ್ಣನ್ನು ಮರದಿಂದ ಹರಿಯಲು ಟ್ರ್ಯಾಕ್ಟರ್‌ಗೆ ವಿಶೇಷವಾದ ಯಂತ್ರವನ್ನು ಜೋಡಿಸಿದ್ದರು. ಹುಣಿಸೇಹಣ್ಣಿನ ನಾರು, ತೊಗಟೆ, ಬೀಜವನ್ನು ಪ್ರತ್ಯೇಕಿಸಲು ವಿಶೇಷವಾದ ಯಂತ್ರ ಬಳಸುತ್ತಿದ್ದರು. ಹಣ್ಣಿನ ಸಿಪ್ಪೆ ಮತ್ತು ಬೀಜ ಪಶು ಆಹಾರಕ್ಕೆ ಮಾರಾಟ ಮಾಡುತ್ತಿದ್ದರು. ಹುಣಿಸೇಹಣ್ಣನ್ನು ಮಾರಾಟ ಮಾಡುವುದರ ಜೊತೆಗೆ ಅದರಿಂದ ತಯಾರಿಸಿದ ಚಾಕಲೇಟ್ ಅನ್ನು ಕೂಡಾ ಮಾರಾಟ ಮಾಡುತ್ತಿದ್ದರು. ಹುಣಿಸೆಹಣ್ಣನ್ನು ಮಾರಾಟ ಮಾಡಿ “ಟೀಕೆ ಮಣಿ’ (ಒಂದು ವಿಧದ ಚಿನ್ನ ನೆಕ್‌ಲೆಸ್) ಮಾಡಿಸಿಕೊಂಡ ಹೆಣ್ಣು ಮಕ್ಕಳೆಷ್ಟೋ? ಹುಣಿಸೇಹಣ್ಣು ಹಾಗೂ ಬೆಲ್ಲದ ಜ್ಯೂಸ್ ಬೇಸಿಗೆಯಲ್ಲಿ ತಂಪು ನೀಡುತ್ತದೆ. ಉರಿಮೂತ್ರ ಶಮನಕಾರಿ. ಹುಣಿಸೇಮರ ಮರಮುಟ್ಟುಗಳಿಗೆ ಉಪಯೋಗ, ಮರದ ತೊಗಟೆ ಔಷಧಿ ಗುಣ ಹೊಂದಿದೆ. ಎಂತಹ ಬರಗಾಲದಲ್ಲೂ ಹಣ್ಣು ಹೂಬಿಟ್ಟು ನಳನಳಿಸುತ್ತಿರುತ್ತದೆ ಹುಣಿಸೇ ಮರ. ಆದರೆ, ಹವಾಮಾನ ವೈಪರೀತ್ಯ ಹುಣಿಸೇ ಮರಕ್ಕೂ ತಟ್ಟಿದೆ. ಮೇ-ಜೂನ್ ತಿಂಗಳಲ್ಲಿ ತುಂತುರು ಮಳೆಯಾಗದಿದ್ದರೆ ಹುಣಿಸೇ ಗಿಡ ಚಿಗುರುವುದಿಲ್ಲ. ವರ್ಷಾನುಗಟ್ಟಲೆ ಕಾಯಿಬಿಡದೆ ಹಾಗೆಯೇ ನಿಂತ ಮರಗಳ ಸಂಖ್ಯೆಯೇ ಜಾಸ್ತಿಯಾಗುತ್ತದೆ.
ಎಸ್.ಬಿ. ಅನುರಾಧಾ, ಮಾನ್ವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Seema Haider; 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಸೀಮಾ ಈಗ ಗರ್ಭಿಣಿ!!
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Drama ಬಿಟ್ಟು ಅಂಬೇಡ್ಕರ್ ಅವರಿಗೆ ನಿರಂತರ ಅವಮಾನ ಮಾಡಿದ್ದಕ್ಕೆ ಕಾಂಗ್ರೆಸ್ ಕ್ಷಮೆ ಕೇಳಲಿ
You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.