6ನೇ ವೇತನ ಶ್ರೇಣಿ ಜಾರಿಗೆ ಸರಕಾರದ ಮೀನಮೇಷ
Team Udayavani, Jan 7, 2019, 5:34 AM IST
ಸುಬ್ರಹ್ಮಣ್ಯ: ಆರನೇ ವೇತನ ಆಯೋಗದ ವೇತನ ಪರಿಷ್ಕಾರ ಜಾರಿಯಾಗಿ ಒಂಬತ್ತು ತಿಂಗಳಾದರೂ ರಾಜ್ಯದ ಮುಜರಾಯಿ ಇಲಾಖೆಯ ಅಧಿಸೂಚಿತ ದೇವಸ್ಥಾನಗಳಲ್ಲಿ ಪಿಂಚಣಿ ರಹಿತ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಖಾಯಂ ನೌಕರರಿಗೆ ಪರಿಷ್ಕೃತ ವೇತನ ಸಿಕ್ಕಿಲ್ಲ. ಸಂಚಿತ ನೌಕರರನ್ನು ಖಾಯಂಗೊಳಿಸದೆ ಇರುವುದಕ್ಕೂ ಅಸಮಾಧಾನ ವ್ಯಕ್ತವಾಗಿದ್ದು, ಹೋರಾಟಕ್ಕೆ ನಿರ್ಧರಿಸಿದ್ದಾರೆ.
ರಾಜ್ಯದಲ್ಲಿ 34,458 ದೇವಸ್ಥಾನಗಳಿರುವುದಾಗಿ ಇಲಾಖೆ ಸರಕಾರಕ್ಕೆ ವರದಿ ಸಲ್ಲಿಸಿದೆ. ಇಲ್ಲಿನ ನೌಕರರಿಗೆ 6ನೇ ವೇತನ ಶ್ರೇಣಿ ಜಾರಿಗೊಳಿಸಿದರೆ ಮತ್ತು ಸಂಚಿತ ನೌಕರರನ್ನು ಖಾಯಂಗೊಳಿಸಿದರೆ ಸರಕಾರಕ್ಕೆ ಹೊರೆಯಾಗುತ್ತದೆ ಎಂಬುದು ಒಂದು ವಾದ. ಆದರೆ ಇಷ್ಟು ದೇವಸ್ಥಾನಗಳಿಲ್ಲ, ಸರ್ವೇ ಸರಿಯಾಗಿಲ್ಲ ಎನ್ನುವುದು ನೌಕರರ ಪ್ರತಿವಾದ.
ಯಾರಿಗೆಲ್ಲ?
ತಮ್ಮ ಆದಾಯ ಮಿತಿಯೊಳಗೆ ಆವಶ್ಯಕತೆಗೆ ತಕ್ಕಂತೆ ದೇಗುಲಗಳು ಸಿಬಂದಿಯನ್ನು ಸ್ಥಳೀಯವಾಗಿ ನೇಮಕ ಮಾಡುತ್ತ ಬಂದಿವೆ. ಪ್ರಸ್ತುತ 1,111 ಮಂದಿ 6ನೇ ವೇತನ ಶ್ರೇಣಿ ಪಡೆಯಲು ಅರ್ಹರು ಎಂಬ ಮಾಹಿತಿ ಇಲಾಖೆಯ ಪತ್ರದಲ್ಲಿದೆ. ಎ ಗ್ರೇಡ್ ಸಂಚಿತ 2,568 ಮಂದಿಗೆ ವೇತನ ನಿಗದಿಗೆ ಸಿದ್ಧ ಎನ್ನುವ ಭರವಸೆಯೂ ದೊರಕಿದೆ. ಇದರಲ್ಲಿ ಯಾರೆಲ್ಲ ಒಳಗೊಳ್ಳುತ್ತಾರೆ ಎನ್ನುವ ಸ್ಪಷ್ಟತೆಯಿಲ್ಲ.
ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ಅಧಿಸೂಚಿತ ಸಂಸ್ಥೆಗಳಲ್ಲಿ ಸರಕಾರಿ ವೇತನ ಶ್ರೇಣಿ ಪಡೆಯುವ ಖಾಯಂ ನೌಕರರು, ಸಂಚಿತ ಸಂಭಾವನೆ ಹಾಗೂ ಕಾರ್ಯಾರ್ಥ ನೌಕರರಿದ್ದಾರೆ. ಇವರು 2, 3, 4 ಮತ್ತು 5ನೇ ವೇತನ ಶ್ರೇಣಿಗಳನ್ನು ಪಡೆಯುತ್ತಿದ್ದಾರೆ. 1,300 ದೇಗುಲಗಳ ನೌಕರರಿಗೆ ಗ್ರೂಪ್ ಸಿ ಮತ್ತು ಡಿ ವೇತನ ಶ್ರೇಣಿ ಮಂಜೂರು ಮಾಡಲಾಗಿದೆ.
ರಾಜ್ಯದಲ್ಲಿ 3,679 ಮಂದಿ ಮುಜರಾಯಿ ಇಲಾಖೆ ಅಧಿಸೂಚಿತ ದೇವಾಲಯಗಳ ನೌಕರರಿದ್ದು, 1,111 ಮಂದಿ ಹೊಸ ವೇತನ ಶ್ರೇಣಿ ಪಡೆದಿದ್ದಾರೆ. ದಕ್ಷಿಣ ಕನ್ನಡದಲ್ಲಿ 41 ದೇಗುಲಗಳಲ್ಲಿ ಸುಮಾರು 1,600 ಮಂದಿಯಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 51 ದೇವಾಲಯಗಳಿದ್ದು 900ರಷ್ಟು ನೌಕರರಿದ್ದಾರೆ.
ಅಧಿಕಾರಿಗಳ ಅಡ್ಡಿ?
ಸರಕಾರಿ ಆದೇಶವನ್ನು ಜಾರಿಗೊಳಿಸಲು ಮುಜರಾಯಿ ಇಲಾಖೆಯ ಆಯುಕ್ತರ ಕಚೇರಿಯ ಕೆಲವು ಉನ್ನತ ಅಧಿಕಾರಿಗಳು ಮನಸ್ಸು ಮಾಡುತ್ತಿಲ್ಲ. ನೇಮಕಾತಿ ಸಮರ್ಪಕವಾಗಿಲ್ಲ ಇತ್ಯಾದಿ ತಪ್ಪು ಮಾಹಿತಿ ನೀಡಿ ಸರಕಾರವನ್ನು ದಿಕ್ಕು ತಪ್ಪಿಸುತ್ತಿದ್ದಾರೆ. 5ನೇ ಶ್ರೇಣಿ ತನಕ ಇಲ್ಲದ ಅಡ್ಡಿ ಈಗೇಕೆ ಎನ್ನುವುದು ನೌಕರರ ದೂರು.
ನಿಯಮ ಏನು?
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997 ಮತ್ತು 2002ರ 36ರಲ್ಲಿನ 2 ಮತ್ತು 1ರ ಪ್ರಕರಣದ ಪ್ರಕಾರ ಅರ್ಚಕರ ಮತ್ತು ನೌಕರರ ವೇತನಗಳು ದೇಗುಲದ ಒಟ್ಟು ವಾರ್ಷಿಕ ವರಮಾನದ ಶೇ.35 ಮೀರಬಾರದು. ಈ ನಿಯಮ ಪಾಲನೆಯಾಗುವ ದೇವಸ್ಥಾನಗಳ ಸಿಬಂದಿಗೆ ವೇತನವನ್ನು ಕನಿಷ್ಠ ವೇತನಕ್ಕಿಂತ ಕಡಿಮೆಯಾಗದಂತೆ ವೇತನ ಶ್ರೇಣಿ, ಅವಧಿಬದ್ಧ ವೇತನ ಭಡ್ತಿ ಹಾಗೂ ಇನ್ನಿತರ ಸೌಲಭ್ಯಗಳ ಜತೆಗೆ ನಿಯಮಾನುಸಾರ ನೀಡಲು ಆದೇಶವಿದೆ. 6ನೇ ವೇತನ ಶ್ರೇಣಿಯನ್ನು ಆರ್ಥಿಕವಾಗಿ ಸದೃಢ ಮತ್ತು ಸಿಬಂದಿ ವೇತನ ವೆಚ್ಚ ಶೇ.35 ಮೀರದ ದೇವಸ್ಥಾನಗಳಿಗೆ ಅನ್ವಯಿಸುವಂತೆ ಜಾರಿಗೊಳಿಸಬೇಕು. ಇದು ಶೇ.10ರ ಆದಾಯದ ಮಿತಿಯೊಳಗೆ ಬರುವ ಕಾರಣ ಜಾರಿಗೆ ಅಡ್ಡಿಯಾಗುವುದಿಲ್ಲ. 12 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಸಂಚಿತ, ಕಾರ್ಯಾರ್ಥ ನೌಕರರಿಗೆ ಇದುವರೆಗೆ ಸರಕಾರಿ ವೇತನ ಶ್ರೇಣಿ ನೀಡಿಲ್ಲ. ನೀಡಿದಲ್ಲಿ ಸಿಬಂದಿ ವೆಚ್ಚ ಶೇ.9.01 ಆಗಲಿದೆ. ಸಿಬಂದಿ ವೆಚ್ಚದಲ್ಲಿ ಒಟ್ಟು ಶೇ.1.01 ಮಾತ್ರ ಏರಿಕೆ ಆಗುತ್ತದೆ ಎಂಬುದು ನೌಕರರ ಅಭಿಪ್ರಾಯ.
ರಾಜ್ಯದೆಲ್ಲೆಡೆ ಹೋರಾಟ
ಕೊಲ್ಲೂರು ಮೂಕಾಂಬಿಕಾ, ತಿರುಮಲ ತಿರುಪತಿ ರಾಜ್ಯ ಛತ್ರ, ಪುತ್ತೂರು ಮಹಾಲಿಂಗೇಶ್ವರ ಹಾಗೂ ಮಲೆ ಮಹದೇಶ್ವರ ಸ್ವಾಮಿ ದೇಗುಲಗಳ ನೌಕರರು ಹೋರಾಟದ ಮೂಲಕ 6ನೇ ವೇತನ ಶ್ರೇಣಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತೀಚೆಗೆ ಮೈಸೂರು ಭಾಗದ ನೌಕರರು ಪ್ರತಿಭಟನೆ ನಡೆಸಿದ್ದರು. ಈಗ ಇತರೆಲ್ಲ ಕಡೆಯವರು ಹೋರಾಟಕ್ಕೆ ನಿರ್ಧರಿಸಿದ್ದಾರೆ. ಜನವರಿಯ ಮೊದಲ ವಾರದಲ್ಲಿ ಪ್ರತಿಭಟನೆ, ಫಲ ಸಿಗದಿದ್ದಲ್ಲಿ ಲೋಕಸಭೆ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲು ತೀರ್ಮಾನಿಸಿದ್ದಾರೆ.
ಬೇಡಿಕೆಯೇನು?
ಈ ಹಿಂದೆ ಸರಕಾರವು ಮಂಜೂರು ಮಾಡಿದ ಸರಕಾರಿ ವೇತನ ಶ್ರೇಣಿಯನ್ನು ಯಥಾವತ್ತಾಗಿ ಮುಂದುವರಿಸಬೇಕು.
ವೇತನ ಶ್ರೇಣಿ ವಂಚಿತರಿಗೆ ಸರಕಾರಿ ವೇತನ ಶ್ರೇಣಿ ನೀಡಲು ದೇಗುಲ ನೌಕರರ ವೇತನ ನಿಧಿ ಸ್ಥಾಪಿಸಬೇಕು ಎಂಬುದು ನೌಕರರ ಆಗ್ರಹ. 5ನೇ ವೇತನ ಶ್ರೇಣಿ ಹಾಗೂ 6ನೇ ವೇತನ ಆಯೋಗದ ಶಿಫಾರಸಿನಂತೆ ಮಧ್ಯಂತರ ಪರಿಹಾರವನ್ನು ಕೂಡ ಮಂಜೂರು ಮಾಡಲಾಗಿದೆ. ಸರಕಾರದ ಪರಿಷ್ಕೃತ ಆದೇಶದಂತೆ ಷರತ್ತುಗಳನ್ವಯ ಹಾಲಿ ವೇತನ ಶ್ರೇಣಿಯಲ್ಲಿ ವೇತನ ಪಡೆಯುತ್ತಿರುವ ದೇಗುಲಗಳ ನೌಕರರಿಗೆ ಹೊಸ ವೇತನ ಶ್ರೇಣಿಯನ್ನು ನಿಯಮಾನುಸಾರ ಪರಿಶೀಲಿಸಿ ಸ್ಥಳೀಯ ಹಂತದಲ್ಲೇ ಮಂಜೂರು ಮಾಡಲು ಇಲಾಖೆ ಈ ಹಿಂದೆ ಅನುಮತಿ ನೀಡಿತ್ತು.
ಸರಕಾರಕ್ಕೆ ಸಲ್ಲಿಸಿದ್ದೇವೆ
ವೇತನ ಶ್ರೇಣಿ ಬಗ್ಗೆ ಸಮಿತಿಯ ವರದಿಯನ್ನು ಸರಕಾರಕ್ಕೆ ಸಲ್ಲಿಸಿದ್ದೇವೆ. ಮುಂದೆ ಸರಕಾರ ನಿರ್ಧರಿಸುತ್ತದೆ. ವೇತನ ಶ್ರೇಣಿಯಲ್ಲಿ ನಿಯಮ 8ಕ್ಕೆ ತಿದ್ದುಪಡಿಗೂ ಹೇಳಲಾಗಿದೆ. ಪ್ರಕ್ರಿಯೆ ಪ್ರಗತಿಯಲ್ಲಿದೆ.
ಸಿ.ಪಿ. ಶೈಲಜಾ, ಧಾರ್ಮಿಕ ದತ್ತಿ ಆಯುಕ್ತೆ, ಬೆಂಗಳೂರು
ಪ್ರತಿಭಟಿಸುತ್ತೇವೆ
ಆಯುಕ್ತರು ಬೇಡಿಕೆಗಳನ್ನು ನಿಯಮಾನುಸಾರ ಜಾರಿಗೊಳಿಸುವ ಭರವಸೆ ನೀಡಿದ್ದರು. ಅದು ಈಡೇರಿಲ್ಲ. ಬೇಡಿಕೆ ಈಡೇರದಿದ್ದರೆ ರಾಜ್ಯಾದ್ಯಂತ ಬೀದಿಗಿಳಿದು ಹೋರಾಟ ನಡೆಸುತ್ತೇವೆ.
ಶ್ರೀಧರ ಆಚಾರ್ಯ ಅಧ್ಯಕ್ಷರು, ದೇಗುಲ ನೌಕರರ ಒಕ್ಕೂಟ.
ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jharkhand Polls: ಬುಡಕಟ್ಟು ರಾಜ್ಯದಲ್ಲಿ ಅಧಿಕಾರದತ್ತ ಇಂಡಿಯಾ ಒಕ್ಕೂಟ; ಬಿಜೆಪಿಗೆ ಹಿನ್ನಡೆ
Maharashtra Results 2024: ಮಾಹಾಯುತಿಗೆ ಭರ್ಜರಿ ಜನಮನ್ನಣೆ, ಮಹಾವಿಕಾಸ್ ಅಘಾಡಿಗೆ ಮುಖಭಂಗ
Maharashtra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್
Aaram Aravinda Swamy Movie Review: ಪಕ್ಕದ್ಮನೆ ಹುಡುಗನ ಫನ್‌ರೈಡ್
Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.