ನಗರದ ಮೇಲ್ಸೇತುವೆಗಳೆಷ್ಟು ಸದೃಢ-ಸುರಕ್ಷಿತ?
Team Udayavani, Jan 7, 2019, 6:57 AM IST
ಮೆಟ್ರೋ ಮಾರ್ಗದ ವಯಾಡಕ್ಟ್‌ನಲ್ಲಿ ಬಿರುಕು ಕಾಣಿಸಿಕೊಂಡ ನಂತರ ನಗರದ ಮೇಲ್ಸೇತುವೆಗಳ ಗುಣಮಟ್ಟದ ಬಗ್ಗೆಯೂ ಪ್ರಶ್ನೆ ಎದ್ದಿದೆ. ಈ ನಿಟ್ಟಿನಲ್ಲಿ ನಗರದಲ್ಲಿರುವ ಮೇಲ್ಸೇತುವೆಗಳು ವಸ್ತುಸ್ಥಿತಿ ಹೇಗಿದೆ? ನಿರ್ವಹಣೆ ಆಗುತ್ತಿದೆಯೇ? ಅವುಗಳ ಆರೋಗ್ಯ ಹೇಗಿದೆ? ಮೇಲ್ಸೇತುವೆಗಳ ಆಯಸ್ಸಿನ ಬಗ್ಗೆ ತಜ್ಞರು ಏನಂತಾರೆ? ಸಮರ್ಪಕವಾಗಿ ಮೇಲ್ಸೇತುವೆಗಳ ವಿನ್ಯಾಸ ಪರಿಶೋಧನೆ (ಸ್ಟ್ರಕ್ಚರಲ್ ಆಡಿಟ್) ನಡೆಯುತ್ತಿದೆಯೇ? ಎಂಬ ಮಾಹಿತಿ ಸುದ್ದಿ ಸುತ್ತಾಟದಲ್ಲಿ.
ಬೆಂಗಳೂರು: ಲಕ್ಷಾಂತರ ಜನ ಪ್ರಯಾಣಿಸುವ ನಮ್ಮ ಮೆಟ್ರೋ ಮಾರ್ಗದ ವಯಾಡಕ್ಟ್‌ನಲ್ಲಿ ಕಾಣಿಸಿಕೊಂಡ ಬಿರುಕು ಮೆಟ್ರೊ ಪ್ರಯಾಣಿಕರಲ್ಲಿ ಮಾತ್ರವೇ ಆತಂಕ ಸೃಷ್ಟಿಸಿಲ್ಲ. ಬದಲಿಗೆ, ನಗರದಲ್ಲಿರುವ ಮೇಲ್ಸೇತುವೆಗಳು, ಅಂಡರ್‌ಪಾಸ್‌ಗಳು ಎಷ್ಟು ಸುರಕ್ಷಿತ? ಎಂಬ ಪ್ರಶ್ನೆ ಹುಟ್ಟುಹಾಕುವ ಮೂಲಕ ನಗರದ ಜನರನ್ನು ಆತಂಕಕ್ಕೆ ದೂಡಿದೆ.
ಬೆಂಗಳೂರಿನ ಪ್ರತಿ ಭಾಗದಲ್ಲೂ ಸಂಚಾರ ದಟ್ಟಣೆ ನಿವಾರಣೆಗೆ ಮೇಲ್ಸೇತುವೆ, ಕೆಳಸೇತುವೆ ಹಾಗೂ ಗ್ರೇಡ್ ಸಪರೇಟರ್ ನಿರ್ಮಿಸಲಾಗಿದೆ. ನಗರದಲ್ಲಿ ಸುಗಮ ಸಂಚಾರಕ್ಕೆ ಮೇಲ್ಸೇತುವೆಗಳನ್ನು ವರದಾನ ಎಂದೇ ಭಾವಿಸಿದ್ದರೂ, ಮೆಟ್ರೊ ಮಾರ್ಗದಲ್ಲಿ ಬಿರುಕು ಕಾಣಿಸಿಕೊಂಡ ಬಳಿಕ ಮೇಲ್ಸೇತುವೆಗಳು ಎಷ್ಟು ಸುರಕ್ಷಿತ ಎಂಬ ಚರ್ಚೆ ಆರಂಭವಾಗಿದೆ.
ನಗರ ವೇಗವಾಗಿ ಬೆಳೆಯುತ್ತಿದ್ದು, ಅದಕ್ಕೆ ಪೂರಕವಾಗಿ ಹಲವಾರು ಅಭಿವೃದ್ಧಿ ಯೋಜನೆಗಳು ಜಾರಿಯಾಗುತ್ತಿವೆ. ಸಂಚಾರ ದಟ್ಟಣೆ ನಿವಾರಣೆಗೆ ಮೇಲ್ಸೇತುವೆ, ಅಂಡರ್‌ಪಾಸ್ ಹಾಗೂ ಗ್ರೇಡ್ ಸಪರೇಟರ್‌ಗಳನ್ನು ನಿರ್ಮಿಸಲಾಗಿದ್ದು, ಪ್ರತಿ ವರ್ಷ ಈ ಮೇಲ್ಸೇತುವೆಗಳ ಸಂಖ್ಯೆ ಹೆಚ್ಚುತ್ತಿದೆ. ಆದರೆ, ಅವುಗಳ ಸೂಕ್ತ ನಿರ್ವಹಣೆಯಾಗುತ್ತಿಲ್ಲ ಎಂಬುದು ವಾಸ್ತವ.
ಜೆ.ಎಚ್.ಪಟೇಲ್ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಗರದ ರಿಚ್ಮಂಡ್ ವೃತ್ತ¤ದಲ್ಲಿ ಮೊದಲ ಮೇಲ್ಸೇತುವೆ ನಿರ್ಮಿಸಲಾಗಿತ್ತು. ಆ ನಂತರ ಬಂದ ಸರ್ಕಾರಗಳು ಸಂಚಾರ ದಟ್ಟಣೆ ಹೆಚ್ಚಿರುವ ಕಡೆಗಳಲ್ಲಿ ಮೇಲ್ಸೇತುವೆ, ಅಂಡರ್‌ಪಾಸ್ ನಿರ್ಮಿಸುತ್ತಾ ಹೋದವು. ಅದರಂತೆ ನಗರದಲ್ಲಿ 80ಕ್ಕೂ ಹೆಚ್ಚು ಫ್ಲೈ ಓವರ್‌ಗಳನ್ನು ನಿರ್ಮಿಸಿದ್ದರೂ, ಅವುಗಳ ನಿರ್ವಹಣೆಗೆ ಸ್ಥಳೀಯ ಆಡಳಿತ ನಿರ್ಲಕ್ಷ್ಯ ವಹಿಸಿದೆ. ಪರಿಣಾಮ ಯಾವ ಸೇತುವೆ ಎಷ್ಟು ಸಾಮರ್ಥ್ಯ ಹೊಂದಿದೆ, ಅದರ ಆರೋಗ್ಯ ಹೇಗಿದೆ ಎಂದು ತಿಳಿಯದಾಗಿದೆ.
ಒಮ್ಮೆಯೂ ಆಗಿಲ್ಲ ಸ್ಟ್ರಕ್ಚರಲ್ ಆಡಿಟ್: ಸರ್ಕಾರದಿಂದ ನಿರ್ಮಿಸುವ ಕಟ್ಟಡ, ಮೇಲ್ಸೇತುವೆ, ಕೆಳಸೇತುವೆ, ರೈಲ್ವೆ ಮಾರ್ಗ, ರಾಷ್ಟ್ರೀಯ ಹೆದ್ದಾರಿ ಹೀಗೆ ಪ್ರತಿಯೊಂದು ಯೋಜನೆಯನ್ನು ಕಡ್ಡಾಯವಾಗಿ ಸ್ಟ್ರಕ್ಚರಲ್ ಆಡಿಟ್ (ವಿನ್ಯಾಸ ಪರಿಶೋಧನೆ)ಗೆ ಒಳಪಡಿಸಬೇಕು. ಅದರಂತೆ ಪಾಲಿಕೆ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಮೇಲ್ಸೇತುವೆಗಳನ್ನು ವರ್ಷದಲ್ಲಿ ಕನಿಷ್ಠ ಎರಡು ಬಾರಿ ಪರಿಶೀಲಿಸಿ ವರದಿ ನೀಡಬೇಕು. ಆದರೆ, ನಗರದಲ್ಲಿ ಒಮ್ಮೆಯೂ ವಿನ್ಯಾಸ ಪರಿಶೋಧನೆ ನಡೆಸದಿರುವುದು ಪಾಲಿಕೆ ಬೇಜವಾಬ್ದಾರಿಗೆ ಹಿಡಿದ ಕನ್ನಡಿಯಾಗಿದೆ.
ಎರಡು ಹಂತಗಳಲ್ಲಿ ಪರಿಶೋಧನೆ: ಸರ್ಕಾರದ ಆದೇಶದಂತೆ ಪ್ರತಿಯೊಂದು ಮೇಲ್ಸೇತುವೆಯನ್ನು ಪ್ರಾಥಮಿಕ ಹಾಗೂ ಮುಖ್ಯ ಪರಿಶೋಧನೆಗೆ ಒಳಪಡಿಸಬೇಕು. ಅದರಂತೆ ಪ್ರಾಥಮಿಕ ಪರಿಶೋಧನೆಯಲ್ಲಿ ಸಮರ್ಪಕವಾಗಿ ನೀರು ಹರಿದು ಹೋಗುತ್ತಿರುವುದು, ರಸ್ತೆ ಗುಂಡಿ, ಬೀದಿ ದೀಪದ ವ್ಯವಸ್ಥೆ ಪರಿಶೀಲಿಸಬೇಕು. ಅದೇ ರೀತಿ ಮುಖ್ಯ ಪರಿಶೋಧನೆಯಲ್ಲಿ ಮೇಲ್ಸೇತುವೆಯ ವಿಸ್ತರಿಸಿದ ಸಂಪರ್ಕ ಕೊಂಡಿ (ಎಕ್ಸ್‌ಪ್ಯಾನನ್ ಜಾಯಿಂಟ್), ಬೇರಿಂಗ್ ಸಮರ್ಪಕವಾಗಿದೆಯೇ ಹಾಗೂ ಎಲ್ಲಿಯಾದರೂ ಲೋಪ ಕಂಡುಬಂದಿದೆಯೇ ಎಂಬುದನ್ನು ಪರಿಶೀಲಿಸಬೇಕು.
ನಿರಂತರ ವಿನ್ಯಾಸ ಪರಿಶೋಧನೆಯ ವರದಿ ಲಾಗ್ ಪುಸ್ತಕದಲ್ಲಿ ಬರೆಯಬೇಕು. ಇದರಿಂದ ಯಾವ ಸಮಯದಲ್ಲಿ ಎಲ್ಲಿ ಸಮಸ್ಯೆ ಇತ್ತು. ಯಾವ ರೀತಿಯ ಸಮಸ್ಯೆಗಳು ಕಂಡುಬಂದಿದ್ದವು ಎಂಬ ಮಾಹಿತಿ ಹಾಗೂ ಅದಕ್ಕೆ ಯಾವ ರೀತಿಯ ಪರಿಹಾರಗಳನ್ನು ಕೈಗೊಳ್ಳಬೇಕು ಎಂಬುದು ತಿಳಿಯಲಿದೆ. ಆ ಮೂಲಕ ಉಂಟಾಗಬಹುದಾದ ಅನಾಹುತಗಳನ್ನು ತಪ್ಪಿಸಬಹುದು ಎನ್ನುತ್ತಾರೆ ತಜ್ಞರು.
ಸೇತುವೆಗೆ ಡಾಂಬರು ಭಾರ: ನಿಯಮಗಳ ಪ್ರಕಾರ ಮೇಲ್ಸೇತುವೆ ನಿರ್ಮಿಸಿದ ನಂತರ ಕಾಂಕ್ರೀಟ್ ರಸ್ತೆಯ ಮೇಲೆ ಕೇವಲ ಒಂದು ಇಂಚಿನಷ್ಟು ಡಾಂಬರು ಮಾಡಬೇಕು. ಒಂದೊಮ್ಮೆ ಮರು ಡಾಂಬರೀಕರಣ ಮಾಡಬೇಕಾದರೆ, ಈಗಾಗಲೇ ಇರುವ ಡಾಂಬರು ಪದರ ತೆರವುಗೊಳಿಸಿ, ಮರು ಡಾಂಬರೀಕರಣ ಮಾಡಬೇಕು.
ಆದರೆ, ನಗರದ ಮೇಲ್ಸೇತುವೆಗಳಿಗೆ ಮರು ಡಾಂಬರೀಕರಣ ಮಾಡುವಾಗ ಗುತ್ತಿಗೆದಾರರು ಹಳೆಯ ಡಾಂಬರು ತೆರವುಗೊಳಿಸುವುದಿಲ್ಲ. ಪಾಲಿಕೆಯೂ ಇದನ್ನು ಕೇಳುವುದಿಲ್ಲ. ಇದರಿಂದಾಗಿ ಸೇತುವೆಯ ಮೇಲೆ ಭಾರ ಹೆಚ್ಚಾಗಿ ಅವುಗಳ ಆಯಸ್ಸಿನ ಮೇಲೆ ಪರಿಣಾಮ ಬೀರುತ್ತಿದೆ ಎಂದು ಪಾಲಿಕೆಯ ನಿವೃತ್ತ ಮುಖ್ಯ ಇಂಜಿನಿಯರ್ ಹೇಳುತ್ತಾರೆ.
ಮೇಲ್ಸೇತುವೆಯಲ್ಲಿ ಅರಳಿ ಗಿಡ: ಅರಳಿಗಿಡ ಹಾಗೂ ಮೇಲ್ಸೇತುವೆಗಳದ್ದು ಅವಿನಾಭಾವ ಸಂಬಂಧ. ನಗರದ ಬಹುತೇಕ ಮೇಲ್ಸೇತುವೆಗಳ ಗೋಡೆ ಅಥವಾ ಎಲಿಮೆಂಟ್‌ಗಳ ಬಿರುಕುಗಳಲ್ಲಿ ಅರಳಿ ಹಾಗೂ ಇತರೆ ಗಿಡಗಳು ಬೆಳೆಯುತ್ತಿವೆ. ಆದರೆ, ಅವುಗಳ ತೆರವಿಗೆ ಪಾಲಿಕೆ ಇಂಜಿನಿಯರ್‌ಗಳು ಮುಂದಾಗುತ್ತಿಲ್ಲ. ಅರಳಿಗಿಡಗಳು ಬೆಳೆದು ಅವುಗಳ ಬೇರುಗಳು ಬಲಿಷ್ಟವಾದರೆ, ಸೇತುವೆಯ ಕಾಂಕ್ರೀಟ್ ಬಿರುಕುಬಿಡುತ್ತದೆ ಎನ್ನುತ್ತಾರೆ ತಜ್ಞರು.
ನಿಂತಿಲ್ಲ ಭಾರಿ ವಾಹನಗಳ ಹಾವಳಿ: ಕೆಲ ಸೇತುವೆಗಳನ್ನು ಹೊರತುಪಡಿಸಿ ನಗರದಲ್ಲಿರುವ ಉಳಿದೆಲ್ಲ ಮೇಲ್ಸೇತುವೆಗಳಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ಅವಕಾಶವಿಲ್ಲ. ಆದರೆ, ನಿಯಮದ ಪರಿವೇ ಇಲ್ಲವೆಂಬಂತೆ ಲಾರಿಗಳು, ಬೃಹತ್ ಟ್ರಕ್‌ಗಳು ಮೇಲ್ಸೇತುವೆಯಲ್ಲೇ ಸಂಚರಿಸುತ್ತಿವೆ. ನಿಯಮ ಉಲ್ಲಂ ಸಿದರೂ ಸಂಚಾರ ಪೊಲೀಸರು ಕ್ರಮಕ್ಕೆ ಮುಂದಾಗಿಲ್ಲ.
ವಾರ್ಷಿಕ ನಿರ್ವಹಣೆಯಿಲ್ಲ: ಬಿಬಿಎಂಪಿ ವತಿಯಿಂದ ಹಿಂದೆ ಮೇಲ್ಸೇತುವೆಗಳ ನಿರ್ವಹಣೆಗೆ ಅನುದಾನ ಮೀಸಲಿಡಲಾಗುತ್ತಿತ್ತು. ಜತೆಗೆ ಇಂಜಿನಿಯರ್‌ಗಳು ಮುಂದೆ ನಿಂತು ಕಾಮಗಾರಿಗಳನ್ನು ಮಾಡಿಸುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಮೇಲ್ಸೇತುವೆಗಳ ನಿರ್ವಹಣೆ ಕನಸಿನ ಮಾತಾಗಿದೆ. ಇದರಿಂದಾಗಿ ಎಲ್ಲೆಂದರಲ್ಲಿ ಗಿಡಗಳು ಬೆಳೆಯುತ್ತಿದ್ದು, ಮಳೆನೀರು ಪೈಪುಗಳಲ್ಲಿ ಮಣ್ಣು ತುಂಬಿಕೊಂಡು, ಸೇತುವೆಗಳ ಮೇಲೆ ನೀರು ಹರಿಯುತ್ತಿದೆ.
ಮೇಲ್ಸೇತುವೆಯಲ್ಲಿ ಕಂಡುಬಂದ ಲೋಪಗಳ ವಿವರ
* ಬಿಡಿಎ ವತಿಯಿಂದ ನಿರ್ಮಿಸಿರುವ ಹೆಬ್ಟಾಳ ಮೇಲ್ಸೇತುವೆಯಲ್ಲಿ ಹಿಂದೆ ಬಿರುಕು ಕಾಣಿಸಿಕೊಂಡಿತ್ತು. ನಂತರ ಮೇಲ್ಸೇತುವೆ ಪರಿಶೀಲಿಸಿದ ತಜ್ಞರ ಸಮಿತಿ, ಅದು ಗಂಭೀರ ಬಿರುಕಲ್ಲ ಎಂದು ವರದಿ ನೀಡಿತ್ತು.
* ಮೈಸೂರು ರಸ್ತೆಯ ಸಿರ್ಸಿ ವೃತ್ತದ ಮೇಲ್ಸೇತುವೆ ವಿಸ್ತರಿಸಿದ ಸಂಪರ್ಕ ಕೊಂಡಿ (ಎಕ್ಸ್‌ಪ್ಯಾನನ್ ಜಾಯಿಂಟ್) ಹಾಳಾಗಿತ್ತು. ಅಧಿಕಾರಿಗಳು ಶೀಘ್ರ ಲೋಪ ಪತ್ತೆ ಹಚ್ಚಿದ ಹಿನ್ನೆಲೆಯಲ್ಲಿ ಅನಾಹುತ ತಪ್ಪಿಸಲು ಸಾಧ್ಯವಾಯಿತು.
ತಪಾಸಣೆಗೆ ವಿಶೇಷ ಸಮಿತಿ ರಚಿಸಿ – ರಾಜಾರಾವ್: ಕಾನೂನಿನ ಪ್ರಕಾರ ಮಳೆಗಾಲಕ್ಕೆ ಮೊದಲು ಹಾಗೂ ನಂತರದಲ್ಲಿ ಮೇಲ್ಸೇತುವೆ, ಅಂಡರ್‌ಪಾಸ್‌ಗಳಲ್ಲಿ ನಿರ್ವಹಣೆ ಹಾಗೂ ಲೋಪಗಳ ಪತ್ತೆಗಾಗಿ ಸರ್ಕಾರ ವಿಶೇಷ ತಪಾಸಣಾ ಸಮಿತಿಯನ್ನು ರಚಿಸಬೇಕು ಎಂದು ನಿವೃತ್ತ ಮುಖ್ಯ ಇಂಜಿನಿಯರ್ ಕ್ಯಾಪ್ಟನ್ ರಾಜಾರಾವ್ ಅಭಿಪ್ರಾಯಪಟ್ಟಿದ್ದಾರೆ.
ಕಳೆದ ಮೂರು ವರ್ಷಗಳಿಂದೀಚೆಗೆ ನಿರ್ಮಾಣವಾದ ಮೇಲ್ಸೇತುವೆ, ಅಂಡರ್‌ಪಾಸ್‌ಗಳ ನಿರ್ವಹಣೆಯನ್ನು ಗುತ್ತಿಗೆ ಪಡೆದ ಸಂಸ್ಥೆಗಳಿಗೆ ವಹಿಸಲಾಗಿದೆ. ಆದರೆ, ಅದಕ್ಕೆ ಮೊದಲು ನಿರ್ಮಿಸಿರುವ ಸೇತುವೆಗಳ ನಿರ್ವಹಣೆ ಮಾಡುವವರು ಯಾರು? ಪಾಲಿಕೆಯಲ್ಲಿ ನಿರ್ವಹಣಾ ವಿಭಾಗವಿದ್ದರೂ ಸೇತುವೆಗಳ ಪರಿಶೀಲನೆಗೆ ಮುಂದಾಗಿಲ್ಲ ಎಂದರು.
ಜನರಿಗೆ ಹೆಚ್ಚು ಉಪಯುಕ್ತವಾಗಿರುವ ಮೇಲ್ಸೇತುವೆಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿ, ಲೋಪಗಳನ್ನು ಸರಿಪಡಿಸದಿದ್ದರೆ ಅನಾಹುತಗಳು ಸಂಭವಿಸುವ ಸಾಧ್ಯತೆಯಿರುತ್ತದೆ. ಹೀಗಾಗಿ ತಜ್ಞರನ್ನು ಒಳಗೊಂಡ ಪ್ರತ್ಯೇಕ ತಪಾಸಣಾ ಸಮಿತಿ ರಚಿಸಿ, ನಗರದಲ್ಲಿರುವ ಎಲ್ಲ ಮೇಲ್ಸೇತುವೆಗಳ ವರದಿಯನ್ನು ಸರ್ಕಾರ ಪಡೆಯಬೇಕಿದೆ ಎಂದರು.
ಸರ್ಕಾರಗಳು ಮೇಲ್ಸೇತುವೆಗಳನ್ನು ನಿರ್ಮಿಸಲು ಬಜೆಟ್‌ನಲ್ಲಿ ಅನುದಾನ ಮೀಸಲಿಡುತ್ತವೆ. ಆದರೆ, ಅವುಗಳ ನಿರ್ವಹಣೆಗೆ ಹಣ ಮೀಸಲಿಡುವುದಿಲ್ಲ. ಕಾಲಕಾಲಕ್ಕೆ ಮೇಲ್ಸೇತುವೆಗಳ ನಿರ್ವಹಣೆ ಮಾಡದ ಕಾರಣ ದುರಸ್ತಿ ಕಂಡುಬಂದರೆ ಹೆಚ್ಚು ಹಣ ವೆಚ್ಚ ಮಾಡಬೇಕಾಗುತ್ತದೆ. ಹೀಗಾಗಿ ಮೇಲ್ಸೇತುವೆಗಳ ನಿರ್ವಹಣೆಗೆ ಪಾಲಿಕೆ ಹಣ ಮೀಸಲಿಡಬೇಕು.
-ರವಿಚಂದರ್, ನಗರತಜ್ಞ
* ವೆಂ.ಸುನೀಲ್‌ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.