ಸ್ವಂತ ಮನೆ ಅಡವಿಟ್ಟು ಉಳಿಸಿದ ಲಕ್ಷ್ಮೀಗೆ ಈಗ 100ರ ಸಂಭ್ರಮ
Team Udayavani, Jan 10, 2019, 9:41 AM IST
ಬಾಗಲಕೋಟೆ: ನೂರು ವರ್ಷಗಳ ಹಿಂದೆ ಆರಂಭಗೊಂಡ ಗುಳೇದಗುಡ್ಡದ ಲಕ್ಷ್ಮೀ ಸಹಕಾರಿ ಬ್ಯಾಂಕ್‌ನ ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮ ಜ. 13 ಮತ್ತು 14ರಂದು ಗುಳೇದಗುಡ್ಡದಲ್ಲಿ ನಡೆಯಲಿದೆ ಎಂದು ಬ್ಯಾಂಕ್ ಅಧ್ಯಕ್ಷ, ಮಾಜಿ ಶಾಸಕ ರಾಜಶೇಖರ ಶೀಲವಂತ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1913ರ ಫೆಬ್ರವರಿ 5ರಂದು ಲಿಂ| ವಿರುಪಾಕ್ಷಪ್ಪ ಭಾವಿ ಅವರ ನೇತೃತ್ವದಲ್ಲಿ ಆರಂಭಗೊಂಡ ಲಕ್ಷ್ಮೀ ಪತ್ತಿನ ಸಹಕಾರಿ ಸಂಘ, ಮುಂದೆ ಹಲವಾರು ಏಳು-ಬೀಳುಗಳ ಮಧ್ಯೆ ವ್ಯಾಪಾರಸ್ಥರು, ನೇಕಾರರು, ಕೃಷಿಕರಿಗೆ ಆರ್ಥಿಕ ಬಲ ನೀಡುತ್ತ ಸಾಗಿದೆ. ಮುಂದೆ 1996ರ ಸೆಪ್ಟಂಬರ್ 28ರಂದು ಭಾರತೀಯ ರಿಜರ್ವ್ ಬ್ಯಾಂಕ್‌ನಿಂದ ಬ್ಯಾಂಕಿಂಗ್ ಲೈಸನ್ಸ್ ಹೊಂದಿತು ಎಂದು ವಿವರಿಸಿದರು.
ಸ್ವಂತ ಮನೆ ಅಡವಿಟ್ಟಿದ್ದರು: ಬ್ಯಾಂಕ್ ತನ್ನ ನೂರು ವರ್ಷಗಳ ಅವಧಿಯಲ್ಲಿ ಹಲವರು ಏಳು-ಬೀಳು ಹೊಂದಿದೆ. ಹಿಂದೆ ಬ್ಯಾಂಕ್, ಡಿಸಿಸಿ ಬ್ಯಾಂಕಿನಿಂದ ಆರ್ಥಿಕ ನೆರವು ಪಡೆಯುವ ವೇಳೆ, ಭದ್ರತೆಗೆ ಲಿಂ| ಸಂಗಪ್ಪ ಕರಡಿ ಅವರು ತಮ್ಮ ಸ್ವಂತ ಮನೆಯನ್ನೇ ಅಡವು ಇಟ್ಟಿದ್ದರು. ಅಂದಿನಿಂದ ಆರ್ಥಿಕ ಸಬಲತೆ ಕಂಡ ಬ್ಯಾಂಕ್ ಈಗ, 167.24 ಕೋಟಿ ದುಡಿಯುವ ಬಂಡವಾಳ ಹೊಂದಿದೆ. 13ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದ್ದು, 150 ಕೋಟಿಗೂ ಅಧಿಕ ಠೇವಣಿ ಹೊಂದಿದೆ ಎಂದು ತಿಳಿಸಿದರು.
ವಿವಿಧೆಡೆ 8 ಶಾಖೆ: 1995ರಲ್ಲಿಯೇ ಬ್ಯಾಂಕ್ ತನ್ನ ಪ್ರಧಾನ ಕಚೇರಿಗೆ ಸ್ವಂತ ಕಟ್ಟಡ ಹೊಂದಿದ್ದು, ವಿವಿಧ ನಗರಗಳಲ್ಲಿ 8 ಶಾಖೆ ಹೊಂದಿದೆ. ಗ್ರಾಹಕರಿಗೆ ಅತ್ಯಾಧುನಿಕ ಸೌಲಭ್ಯ ಒದಗಿಸುತ್ತಿದೆ.ಉದ್ದಿಮೆದಾರರು, ಸಣ್ಣ ಹಾಗೂ ದೊಡ್ಡ ವ್ಯಾಪಾರ§ರು, ರೈತರಿಗೆ, ಕೂಲಿ ಕಾರ್ಮಿಕರಿಗೆ, ನೌಕರರಿಗೆ, ಗುಡಿ ಕೈಗಾರಿಕೆದಾರರು ಸೇರಿದಂತೆ ಎಲ್ಲ ವರ್ಗದವರಿಗೂ ಸುಲಭ ಹಾಗೂ ಶೀಘ್ರ ಸಾಲ ನೀಡುವ ಮೂಲಕ ಉದ್ಯೋಗ ಸೃಷ್ಟಿಯಾಗಲು, ಬಡವರ ಜೀವನಮಟ್ಟ ಸುಧಾರಿಸಲು ಸಹಕಾರಿಯಾಗಿದೆ. ಸಾವಿರಾರು ಸದಸ್ಯರು ಸಾಲ ಪಡೆದು ಯಶಸ್ವಿ ಜೀವನ ನಡೆಸುತ್ತಿದ್ದಾರೆ ಎಂದರು.
ಉಚಿತ ಆಂಬ್ಯುಲೆನ್ಸ್ ಕೊಡುಗೆ: ಬ್ಯಾಂಕ್ ಆರ್ಥಿಕ ವ್ಯವಹಾರ ಜತೆಗೆ ಆರೋಗ್ಯ, ಧಾರ್ಮಿಕ, ಕ್ರೀಡೆ, ಕಲೆ, ಸಾಹಿತ್ಯ, ಸಂಸ್ಕೃತಿ, ಸಾಮಾಜಿಕ ಹಾಗೂ ಸೇವಾ ಕಾರ್ಯಗಳಿಗೆ ಸಾಕಷ್ಟು ಧನಸಹಾಯ ಮಾಡಿದೆ. ಗುಳೇದಗುಡ್ಡದ ಸೇವಾ ಭಾರತಿ ಪ್ರಕಲ್ಪದ ಸಂಚಾರಿ ಚಿಕಿತ್ಸಾಲಯಕ್ಕೆ ಆಂಬ್ಯುಲೆನ್ಸ್ ವಾಹನ ಕೊಡುಗೆಯಾಗಿ ನೀಡಿ, ಗ್ರಾಮೀಣ ಭಾಗದ ಜನರ ಆರೋಗ್ಯ ರಕ್ಷಣೆಗೆ ಸಹಕಾರ ನೀಡಿದೆ. ಈಗ ಆ ಆಂಬ್ಯುಲೆನ್ಸ್ ಹಳೆಯದಾಗಿದ್ದು,ಈಗ ಮತ್ತೂಂದು ಹೊಸ ಆಂಬ್ಯುಲೆನ್ಸ್ ನೀಡಲಾಗುತ್ತಿದೆ ಎಂದರು.
ಶತಮಾನೋತ್ಸವ ಸಂಭ್ರಮ: 1913ರಲ್ಲಿ ಸಣ್ಣ ಆರ್ಥಿಕ ಸಂಸ್ಥೆಯಾಗಿ ಆರಂಭಗೊಂಡ ಲಕ್ಷ್ಮೀ ಸಹಕಾರಿ ಬ್ಯಾಂಕ್ ಅನೇಕ ಕಷ್ಟ-ನಷ್ಟ ಎದುರಿಸಿ ಜನರಿಗೆ ಸಮರ್ಪಣಾ ಭಾವನೆಯಿಂದ ಕೆಲಸ ಮಾಡುತ್ತಿದೆ. ಜ.13ಮತ್ತು 14ರಂದು ಎರಡು ದಿನಗಳ ಕಾಲ ಬ್ಯಾಂಕಿನ ಶತಮಾನೋತ್ಸವ ಕಾರ್ಯಕ್ರಮ ನಡೆಯಲಿದೆ. ಜ.13ರಂದು ಬೆಳಗ್ಗೆ 10ಕ್ಕೆ ಗುಳೇದಗುಡ್ಡದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಶತಮಾನೋತ್ಸವ ಕಟ್ಟಡವನ್ನು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು ಉದ್ಘಾಟಿಸುವರು. ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಶತಮಾನೋತ್ಸವ ನಾಮಫಲಕ, ಮಾಜಿ ಸಿಎಂ, ಬಾದಾಮಿ ಶಾಸಕ ಸಿದ್ದರಾಮಯ್ಯ ಪ್ರಧಾನ ಕಚೇರಿ ಶಾಖೆ ಉದ್ಘಾಟನೆ ನೆರವೇರಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಸೇಫ್ ಲಾಕರ್, ಸಹಕಾರ ಸಚಿವ ಬಂಡೆಪ್ಪ ಖಾಶೆಂಪುರ ಆಡಳಿತ ಕಚೇರಿ ಉದ್ಘಾಟಿಸುವರು. ಇದೇ ವೇಳೆ ಬ್ಯಾಂಕ್‌ನ ಸಭಾಂಗಣಕ್ಕೆ ಮಾಜಿ ಪ್ರಧಾನಿ-ಭಾರತರತ್ನ ಅಟಲ್‌ಬಿಹಾರಿ ವಾಜಪೇಯಿ ಅವರ ಹೆಸರಿಟ್ಟಿದ್ದು, ಅದನ್ನು ಮಾಜಿ ಸಿಎಂ ಜಗದೀಶ ಶೆಟ್ಟರ ಉದ್ಘಾಟಿಸುವರು ಎಂದರು.
ಸೈನಿಕರಿಗೆ ಸನ್ಮಾನ: ಜ.13ರಂದು ಸಂಜೆ 5ಕ್ಕೆ ಸ್ಥಳೀಯ ಕಲಾವಿದರಿಂದ ಕಲಾ ಪ್ರದರ್ಶನ, ಖ್ಯಾತ ಗಾಯಕರಾದ ಡಾ| ಶಮಿತಾ ಮಲ್ನಾಡ ಮತ್ತು ರಾಜೇಶ ಕೃಷ್ಣನ್ ಅವರಿಂದ ದೇಶಭಕ್ತಿ ಗೀತೆಗಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಅಲ್ಲದೇ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಸೇನಾಧಿಕಾರಿಗಳಿಗೆ, ವೀರಯೋಧರ ಕುಟುಂಬದವರಿಗೆ ಸನ್ಮಾನಿಸಿ ಗೌರವಿಸಲಾಗುವುದು ಎಂದರು.
ಸಾಧಕರ ಸನ್ಮಾನ: ಜ.14ರಂದು ಬೆಳಗ್ಗೆ 11ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಮಾಜಿ ಸಿಎಂ-ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಂಬ್ಯುಲೆನ್ಸ್ ಲೋಕಾರ್ಪಣೆ ಮಾಡುವರು. ಶಿವಯೋಗ ಮಂದಿರ ಅಧ್ಯಕ್ಷ ಡಾ| ಸಂಗನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಕೇಂದ್ರ ಸಚಿವ ರಮೇಶ ಜಿಗಜಿಣಗಿ, ಸಕ್ಕರೆ ಸಚಿವ ಆರ್.ಬಿ. ತಿಮ್ಮಾಪುರ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಸಂಸದ ಪ್ರಹ್ಲಾದ ಜೋಶಿ ಸೇರಿದಂತೆ ಜಿಲ್ಲೆಯ ಹಾಗೂ ನಾಡಿನ ವಿವಿಧ ಭಾಗದ ಗಣ್ಯರು ಭಾಗವಹಿಸುವರು. ಅಂದು ಕೃಷಿ, ನೇಕಾರಿಕೆ, ಸಮಾಜ ಸೇವೆ ಹೀಗೆ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಗುವುದು. ಅದೇ ದಿನ ಸಂಜೆ 7ಕ್ಕೆ ಡಾ| ಶಮಿತಾ ಮಲ್ನಾಡ ಮತ್ತು ರಾಜೇಶ ಕೃಷ್ಣನ್ ತಂಡದಿಂದ ಚಲನಚಿತ್ರ ವೈಭವ ಕಾರ್ಯಕ್ರಮ ನಡೆಯಲಿದೆ ಎಂದರು.
ಬಸವೇಶ್ವರ-ರಕ್ತರಾತ್ರಿ ಪ್ರದರ್ಶನ: ಬ್ಯಾಂಕಿನ ಶತಮಾನೋತ್ಸವ ಅಂಗವಾಗಿ ಜ.9ರಂದು ರಾತ್ರಿ ಭಂಡಾರಿ ಕಾಲೇಜು ಮೈದಾನದಲ್ಲಿ ಲಿಂ| ಮಹಾದೇವ ಬಣಕಾರ ವಿರಚಿತ ಕುಂದಗೋಳದ ವಿಶ್ವಭಾರತಿ ರಮ್ಯ ನಾಟಕ ಸಂಘದಿಂದ ಜಗಜ್ಯೋತಿ ಬಸವೇಶ್ವರ ನಾಟಕ (ಬಸವರಾಜ ಬೆಂಗೇರಿ ಅವರು ಬಸವಣ್ಣನ ಪಾತ್ರದಲ್ಲಿ) ಪ್ರದರ್ಶನಗೊಳ್ಳಲಿದೆ. ಜ.10ರಂದು ರಾತ್ರಿ ದಿ.ಕಂದಗಲ್ಲ ಹನಮಂತರಾಯ ವಿರಚಿತ ಗುಳೇದಗುಡ್ಡದ ಆದಿಶಕ್ತಿ ಅರವಿಂದ ಕೃಪಾಪೋಷಿತ ನಾಟಕ ಸಂಘದಿಂದ ರಕ್ತರಾತ್ರಿ ಪೌರಾಣಿಕ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು. ಶತಮಾನೋತ್ಸವ ಆಚರಣೆಯ ಸ್ವಾಗತ ಸಮಿತಿ ಅಧ್ಯಕ್ಷ ಸಂಪತಕುಮಾರ ರಾಠಿ, ಕುಮಾರ ಜಿಗಜಿನ್ನಿ, ವಿಷ್ಣು ಬಡಗೇರ, ಸುಭಾಸ ಕೊಠಾರಿ, ಎಸ್.ಕೆ. ಕುಲಕರ್ಣಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.