ಇದು ಬೆಡಗಲ್ಲೋ ಅಣ್ಣಾ…
Team Udayavani, Jan 11, 2019, 11:45 PM IST
ವಾರದ ಹಿಂದಷ್ಟೇ ಮುಗಿದ ಸಾಹಿತ್ಯ ಸಮ್ಮೇಳನದ ಜಾತ್ರೆಗೆ ಸಾವಿರಾರು ಮಂದಿ ಹೋಗಿ ಬಂದರು. ಅಂಥವರ ಪೈಕಿ ಗದಗ ಜಿಲ್ಲೆಯ ಮಲ್ಲಪ್ಪಜ್ಜನೂ ಒಬ್ಬ. ಬರೀ ಐದನೇತರಗತಿ ಓದಿರುವ ಮಲ್ಲಪ್ಪಜ್ಜ ಯಾವ ಭಾಷಾ ವಿಜ್ಞಾನಿಗೂ ಕಡಿಮೆ ಇಲ್ಲ. ಇವರ ಬಳಿ ಕನ್ನಡ ಭಾಷೆಯ ಹಿರಿಮೆ ಹೇಳುವ ಅಪರೂಪದ ವಸ್ತುಗಳ ಭಂಡಾರವೇ ಇದೆ. ಕನ್ನಡದ ಅಕ್ಷರಗಳಲ್ಲಿ ಅಡಗಿರುವ ಹಲವು ಅಪೂರ್ವ ರಹಸ್ಯಗಳನ್ನು ಸಮ್ಮೇಳನದ ಅಂಗಳದಲ್ಲಿಯೇ ಅಜ್ಜ ಹೇಳಿ ಬಿಟ್ಟರು. ಕನ್ನಡ ಭಾಷೆಯಲ್ಲಿರುವ ಬೆರಗು ಮತ್ತು ಬೆಡಗನ್ನು ಅನಾವರಣ ಮಾಡುವ ಅವರ ಮಾತುಗಳ ಸಾರ ಸಂಗ್ರಹ ಇಲ್ಲಿದೆ. ಓದಿಕೊಳ್ಳಿ…
ಓದಿದ್ದು ಐದನೇ ತರಗತಿ, ವಯಸ್ಸು 68, ಊರು ಗದಗ ಜಿಲ್ಲೆಯ, ರೋಣ. ಅಲ್ಲಿಂದ ಮಲ್ಲಯ್ಯಜ್ಜ ಟ್ರ್ಯಾಕ್ಟರ್ ಮಾಡಿಕೊಂಡು ಇಳಿವಯಸ್ಸಿನಲ್ಲಿ ಧಾರವಾಡದ 84ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬಂದಿದ್ದರು, ಕನ್ನಡದ ರಹಸ್ಯ ತಿಳಿಸಲಿಕ್ಕಾಗಿ! ಹೊಸಪೀಳಿಗೆಯ ಅರಿವಿನಲ್ಲೇ ಇರದ ಹಲವು ರಹಸ್ಯಗಳನ್ನು, ಅಚ್ಚರಿಗಳನ್ನು ಅಜ್ಜ ತೆರೆದಿಟ್ಟು ವಿಸ್ಮಯ ಮೂಡಿಸಿದರು. ಇವರ ಟ್ರ್ಯಾಕ್ಟರ್‌ನಲ್ಲಿ ಕನ್ನಡದ ಇತಿಹಾಸ ಹೇಳುವ ತಾಳೆಗರಿ, ನವಿಲುಗರಿ ಲೇಖನಿ, ಮಸಿ, ಹಳೆಗನ್ನಡ, ಹೊಸಗನ್ನಡ ವರ್ಣಮಾಲಿಕೆಗಳು ಇದ್ದವು. ಪುಸ್ತಕರೂಪದ ಪೆಟ್ಟಿಗೆಗಳು ಇದ್ದವು. ಕನ್ನಡದಲ್ಲಿ ಹಿಂದೆ ಇದ್ದ ಸಂಜ್ಞಾ ಭಾಷೆಯ ಜ್ಞಾನವೂ ಅವರಲ್ಲಿತ್ತು!
ಕವಿ ಕುಮಾರವ್ಯಾಸನ ಕಾಲದಲ್ಲಿ ನವಿಲುಗರಿ ಬಳಸಿ ಹೇಗೆ ಬರೆಯುತ್ತಿದ್ದರು ಎನ್ನುವುದನ್ನು ಮಲ್ಲಯ್ಯಜ್ಜ ಬರೆದು ತೋರಿಸಿದರು. ಬರೆಯಲು ಬೇಕಾದ ತಾಳೆಗರಿಗಳೂ ಅವರ ಬಳಿ ಇದ್ದವು. ಅದರಲ್ಲಿ ಹಳೆಗನ್ನಡ ಅಕ್ಷರಗಳೂ ಇದ್ದವು. ತನ್ನಲ್ಲಿರುವ ಕನ್ನಡ ಕುರಿತ ಜ್ಞಾನ ತನ್ನೊಂದಿಗೇ ಮುಗಿದು ಹೋಗಬಾರದು, ಈಗಿನ ಯುವಕರಿಗೆ, ಭಾಷಾ ಪಂಡಿತರಿಗೆ ಗೊತ್ತಿಲ್ಲದ ಹಲವು ವಿಷಯಗಳು ಒಂದಷ್ಟು ಮಂದಿಗಾದರೂ ತಿಳಿದು ಅವು ಉಳಿದುಕೊಳ್ಳಬೇಕೆನ್ನುವುದು ಅಜ್ಜನ ಕಾಳಜಿ. ಅಜ್ಜ ತನ್ನಲ್ಲಿಟ್ಟುಕೊಂಡಿರುವ ಈ ರಹಸ್ಯಗಳನ್ನು ಸುಮ್ಮನೆ ನೋಡಿ, ನಕ್ಕೋ, ಅಬ್ಟಾ ಎಂದು ಉದ^ರಿಸಿಯೋ ಸುಮ್ಮನಿರಬೇಕಾದ ವಿಚಾರಗಳಂತೂ ಅಲ್ಲವೇ ಅಲ್ಲ. ಹಾಗೆ ಮಾಡಿದರೆ ನಾವು ಮುಟಾuಳರಾಗುತ್ತೇವೆ. ನಾವು ವಿದ್ಯಾವಂತರು, ಪ್ರಾಜ್ಞರು ಎಂದು ಭಾವಿಸದೇ ಅಜ್ಜ ಹೇಳಿದ ರಹಸ್ಯಗಳು, ಹೇಳದೆ ಉಳಿಸಿಕೊಂಡಿರುವ ರಹಸ್ಯಗಳನ್ನು ಗಂಭೀರವಾಗಿ ಅಧ್ಯಯನ ಮಾಡಿದರೆ, ಇಂತಹ ಎಷ್ಟೋ ಮಲ್ಲಯ್ಯಜ್ಜಂದಿರು ಬೆಳಕಿಗೆ ಬರುತ್ತಾರೆ. ಕನ್ನಡ ಭಾಷಾಲೋಕದ ಸಮೃದ್ಧ ಗಣಿ ತೆರೆದುಕೊಳ್ಳುತ್ತದೆ.
ಕನ್ನಡ ಅಕ್ಷರಗಳ ಹುಟ್ಟು ಹೇಗೆ?
ಕನ್ನಡದ ಒಂದೊಂದು ಅಕ್ಷರವೂ ಶರೀರದ ಒಂದೊಂದು ಭಾಗದಲ್ಲಿ ಹುಟ್ಟುತ್ತದೆ ಎನ್ನುವುದು ಭಾಷಾ ಶಾಸ್ತ್ರಜ್ಞರಿಗೆ ಗೊತ್ತು. ಅದನ್ನು ಶಿಕ್ಷಕರು ಶಾಲೆಯಲ್ಲಿ ಮಕ್ಕಳಿಗೆ ಬೋಧಿಸುತ್ತಾರೆ ಕೂಡ. ಇಂತಹ ಅದ್ಭುತ ಶರೀರ-ಭಾಷಾ ವಿಜ್ಞಾನವನ್ನು ಬರೀ ಐದನೆ ತರಗತಿ ಓದಿರುವ ಮಲ್ಲಯ್ಯಜ್ಜ ಸ್ಪಷ್ಟವಾಗಿ ವಿವರಿಸುತ್ತಿದ್ದರು. ಕಂಠಸ್ಥಾನದಿಂದ ಸ್ವರಗಳಾದ ಅ, ಆ ಮತ್ತು ಕ ವರ್ಗ, ತಾಲುಸ್ಥಾನ ಅಂದರೆ ನಾಲಗೆಯ ಪ್ರಾರಂಭದ ಜಾಗದಿಂದ ಸ್ವರಗಳಾದ ಇ, ಈ, ಚ ವರ್ಗ ಜೊತೆಗೆ ಯ,ಶಗಳು ಹುಟ್ಟುತ್ತವೆ. ನಾಲಗೆಯ ಮುಂಭಾಗದಿಂದ ಋಕಾರ, ಟವರ್ಗ ಮತ್ತು ರ, ಷ,ಳ ಅಕ್ಷರ, ಓಷ್ಠ ಅಂದರೆ ತುಟಿಯಿಂದ ಉ,ಊ ಹಾಗೂ ಪ ವರ್ಗ, ದಂತ ಅಂದರೆ ಹಲ್ಲಿನಿಂದ ತ ವರ್ಗ ಮತ್ತು ಲ, ಸ ಅಕ್ಷರಗಳು ಹುಟ್ಟುತ್ತವೆ. ಕಂಠ ಮತ್ತು ನಾಲಗೆ ಸೇರಿ (ಕಂಠತಾಲು) ಎ, ಏ, ಐ ಅಕ್ಷರಗಳು, ಕಂಠ, ತುಟಿ ಸೇರಿ (ಕಂಠೊಷ್ಠ) ಒ,ಓ,ಔಗಳು, ದಂತ, ತುಟಿ ಸೇರಿ (ದಂತೋಷ್ಠ) ವ ಅಕ್ಷರಗಳು ಹುಟ್ಟಿಕೊಳ್ಳುತ್ತವೆಂದು ಮಲ್ಲಯ್ಯಜ್ಜ ಹೇಳುತ್ತಿದ್ದ ಪರಿಗೆ ಜನರು ತಬ್ಬಿಬ್ಟಾಗಿದ್ದರು. ಅಕ್ಷರ ಎಲ್ಲಿ ಹುಟ್ಟುತ್ತದೆಂದು ಕೇಳಿದಾಗ, ಬಾಯಿಂದ ಎಂಬ ಉತ್ತರ ಬಂದರೆ ಅದನ್ನು ತಪ್ಪೆನ್ನಲು ಸಾಧ್ಯವಿಲ್ಲ. ಅದು ಸಹಜ ಜ್ಞಾನ. ಒಂದೊಂದು ಅಕ್ಷರಗಳು ಒಂದೊಂದು ಕಡೆ ಹುಟ್ಟಿಕೊಳ್ಳುತ್ತವೆ ಎನ್ನುವುದು ವಿಜ್ಞಾನ. ಈ ಮಲ್ಲಯ್ಯಜ್ಜ ಭಾಷಾವಿಜ್ಞಾನಿಗೆ ಕಡಿಮೆ ಹೇಗಾಗುತ್ತಾರೆ?
ಕನ್ನಡ ಅಕ್ಷರಗಳಿಗೆ ದಿಕ್ಕೂ ಇದೆ
ಕನ್ನಡ ಅಕ್ಷರಗಳು ನಿರ್ದಿಷ್ಟ ದಿಕ್ಕಿನಲ್ಲಿ ಹುಟ್ಟುತ್ತವೆ ಎನ್ನುತ್ತ ಅದಕ್ಕೆ ವಿವರಣೆಯನ್ನೂ ಮಲ್ಲಯ್ಯಜ್ಜ ನೀಡುತ್ತಾರೆ. ಇದನ್ನು ಮನಮುಟ್ಟುವಂತೆ ವಿವರಿಸಲು ಅಜ್ಜನಿಗೆ ಸ್ವಲ್ಪ ಕಷ್ಟ. ವಿವರಿಸಲು ಆಗುತ್ತಿಲ್ಲ ಎಂದ ಮಾತ್ರಕ್ಕೆ ಅಜ್ಜನ ಮಾತನ್ನು ನಿರ್ಲಕ್ಷಿಸುವುದು ಸೂಕ್ತವಲ್ಲ. ಭಾಷಾ ಶಾಸ್ತ್ರಜ್ಞರು ಅಜ್ಜನ ತರ್ಕವನ್ನು ತಿಳಿದು, ಅದು ಹೇಗೆ ಎಂದು ಅರಿತರೆ ಕನ್ನಡದ ಇನ್ನೊಂದು ಅದ್ಭುತ ಶಕ್ತಿ ಅನಾವರಣಗೊಳ್ಳಬಹುದೇನೋ? ಅಜ್ಜ ಹೇಳುವ ಪ್ರಕಾರ, ಎಲ್ಲ 19 ಸ್ವರಗಳು ಪೂರ್ವ ದಿಕ್ಕಿನಿಂದ, ಕವರ್ಗ ಆಗ್ನೇಯ ದಿಕ್ಕಿನಿಂದ, ಚವರ್ಗ ದಕ್ಷಿಣ ದಿಕ್ಕಿನಿಂದ, ಟವರ್ಗ ನೈರುತ್ಯದಿಂದ, ತವರ್ಗ ಪಶ್ಚಿಮ ದಿಕ್ಕಿನಿಂದ, ಪವರ್ಗ ವಾಯುವ್ಯ ದಿಕ್ಕಿನಿಂದ, ಯರಲವಶ ಉತ್ತರ ದಿಕ್ಕಿನಿಂದ, ಷಸಹಳ ಹಾಗೂ ಕ್ಷ,ಜ್ಞ (ಈ ಅಕ್ಷರಗಳ ಬಳಕೆ ಈಗಿಲ್ಲ) ಈಶಾನ್ಯ ದಿಕ್ಕಿನಿಂದ ಹುಟ್ಟಿಕೊಳ್ಳುತ್ತವೆ. ಇದರ ಅರ್ಥವೇನು? ಇಂತಹದೊಂದು ಲೆಕ್ಕಾಚಾರ ಬರೀ ಐದನೆ ತರಗತಿ ಓದಿದ್ದ ಅಜ್ಜನಿಗೆ ಸಿಕ್ಕಿದ್ದಾದರೂ ಹೇಗೆ ಎಂಬುದಂತೂ ನಿಸ್ಸಂಶಯವಾಗಿ ಅಧ್ಯಯನ ಯೋಗ್ಯ ಸಂಗತಿ.
ಮರೆಯಾದ ಅಕ್ಷರಗಳು ಯಾವುವು ಗೊತ್ತಾ?
ಅಂ, ಅಃ ಎಂಬ ಯೋಗವಾಹಗಳು, ಋಕಾರದ ದೀರ್ಘ ಸ್ವರ, ಕ್ಷ,ಜ್ಞ ಎಂಬ ಸಂಯುಕ್ತಾಕ್ಷರಗಳು ಕನ್ನಡ ವರ್ಣಮಾಲೆಯಲ್ಲಿ ಈಗಿಲ್ಲ ಎನ್ನುವುದು ಅಜ್ಜನ ನೋವಿಗೆ ಕಾರಣ. ಈ ಅಕ್ಷರಗಳಿಂದ ಉಪಯೋಗವಿಲ್ಲ ಎಂದು ಕನ್ನಡ ಭಾಷಾ ಶಾಸ್ತ್ರಜ್ಞರು ಅವುಗಳನ್ನು ವರ್ಣಮಾಲೆಯ ಪಟ್ಟಿಯಿಂದ ಕೈಬಿಟ್ಟಿದ್ದಾರೆ. ಈ ಸಂಯುಕ್ತಾಕ್ಷರ ಇಲ್ಲದೆಯೂ ಅವನ್ನು ಸೃಷ್ಟಿಸಬಹುದೆನ್ನುವ ಆಧುನಿಕ ಪಂಡಿತರ ವಾದದಲ್ಲೂ ತಿರುಳಿದೆ. ಆದರೆ ಮಲ್ಲಯ್ಯಜ್ಜನ ಮಟ್ಟಿಗೆ ಈ ಅಕ್ಷರಗಳು ಉಳಿದುಕೊಳ್ಳಬೇಕಿತ್ತು. ಅದನ್ನು ಹೇಳಲೆಂದೇ ಅಜ್ಜ ಹಿಂದೆ ಇದ್ದ ವರ್ಣಮಾಲೆ ಮತ್ತು ಈಗಿದ್ದ ವರ್ಣಮಾಲೆಯನ್ನು ತಮ್ಮ ಟ್ರ್ಯಾಕ್ಟರ್‌ನ ಒಂದು ಭಾಗಕ್ಕೆ ಅಂಟಿಸಿಕೊಂಡಿದ್ದರು. ನೋವಿನಿಂದ, ಇವೆಲ್ಲ ಬಿಡಲ್ಪಟ್ಟ ಅಕ್ಷರಗಳು ಎಂದು ಅಜ್ಜ ಹೇಳುತ್ತಿದ್ದಾಗ, ಒಂದು ಸಲ ನಾಚಿಕೆಯೆನಿಸುತ್ತದೆ. ಇವೆಲ್ಲ ಬಿಡಲ್ಪಟ್ಟ ಅಕ್ಷರಗಳು ಎಂದು ನಮಗೆ ಗೊತ್ತಾಗಲು ಮಲ್ಲಯ್ಯಜ್ಜ ಬರಬೇಕಾಯ್ತಲ್ಲ? ಮಲ್ಲಯ್ಯಜ್ಜನಂತಹ ಕೊಂಡಿಗಳಿಲ್ಲದಿದ್ದರೆ ಕನ್ನಡ ವಿದ್ಯಾರ್ಥಿಗಳಿಗೆ ಈ ಇತಿಹಾಸ ತಿಳಿಯುವುದಾದರೂ ಹೇಗೆ?
ಆಭರಣಗಳನ್ನು ಪುಸ್ತಕದಲ್ಲಿ ಅಡಗಿಸುತ್ತಿದ್ದರಂತೆ
ಅಜ್ಜ ಹೇಳಿದ ಇನ್ನೊಂದು ಸಂಗತಿ ಕನ್ನಡಕ್ಕೆ ಸಂಬಂಧಿಸಿದ್ದಲ್ಲ, ಸಾಹಿತ್ಯಕ್ಕೂ ಸಂಬಂಧಿಸಿದ್ದಲ್ಲ, ಇವೆರಡಕ್ಕೂ ಸಂಬಂಧಿಸಿದಂತೆ ಕಾಣುವ, ಆದರೆ ಸಂಬಂಧಿಸಿರದ, ಇವೆರಡನ್ನೂ ಬಳಸಿಕೊಂಡು ಇನ್ನೊಂದನ್ನು ಸಾಧಿಸುವ ಉಪಾಯ. ಮನೆಗಳಿಗೆ ನುಗ್ಗಿ ಕದಿಯುವ ಕಳ್ಳರಿಂದ ತಮ್ಮ ಮನೆಯ ಬೆಲೆಬಾಳುವ ಒಡವೆಗಳನ್ನು, ಹಣವನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳಲು ಒಂದು ವಿಶಿಷ್ಟ ಉಪಾಯವನ್ನು ಜನ ಹುಡುಕಿಕೊಂಡಿದ್ದರಂತೆ. ಒಂದು ಪುಸ್ತಕ ಭಂಡಾರದೊಳಗೆ ಪುಸ್ತಕದಂತೆಯೇ ಕಾಣುವ ಪೆಟ್ಟಿಗೆಯನ್ನು ಸೃಷ್ಟಿಸುವುದು, ಅದರಲ್ಲಿ ಹಣ, ಆಭರಣವನ್ನು ಇಟ್ಟುಬಿಡುವುದು. ಪುಸ್ತಕ ಭಂಡಾರದೊಳಗೆಲ್ಲೋ ಇರುವ ಇವನ್ನು ಕಳ್ಳರು ಊಹಿಸುವುದಾದರೂ ಹೇಗೆ? ಅಲ್ಲದೇ ಪುಸ್ತಕವನ್ನು ಕದಿಯುವುದು ಪಾಪ ಎಂಬ ಪ್ರಜ್ಞೆ ಆಗಿನ ಕಾಲದಲ್ಲಿ ಜಾಗೃತವಾಗಿತ್ತು. ಹಾಗಾಗಿ ಕಳ್ಳರು ಪುಸ್ತಕದ ತಂಟೆಗೆ ಹೋಗುತ್ತಿರಲಿಲ್ಲ. ಇದನ್ನು ಅಂದಿನ ಜನರು ಚೆನ್ನಾಗಿ ಬಳಸಿಕೊಂಡಿದ್ದರು ಎನ್ನುವ ವಿಚಾರ, ಇತಿಹಾಸದಲ್ಲಿ ಏನೇನೆಲ್ಲ ಹುದುಗಿ ಹೋಗಿರಬಹುದು ಎಂಬ ವಿಸ್ಮಯ ಮೂಡಿಸುತ್ತದೆ.
ಸಂಜ್ಞಾ ಭಾಷೆಯ ಕೈಬೆರಳ ಕನ್ನಡ!
ರಾಜರ ಕಾಲದಲ್ಲಿ ಕನ್ನಡವನ್ನು ಸಂಜ್ಞೆಯ ರೂಪದಲ್ಲೂ ಬಳಸುವ ಕ್ರಮವಿತ್ತಂತೆ. ತಾವಾಡಿದ ಮಾತುಗಳು ಇನ್ನೊಬ್ಬರಿಗೆ ತಿಳಿಯದಿರಲಿ ಎನ್ನುವುದು ಅವರ ಉದ್ದೇಶ. ಗುಪ್ತವಾಗಿ ಸಂದೇಶವನ್ನು ರವಾನಿಸಬೇಕಾದಾಗ, ಶಬ್ದವಾಗಬಾರದು ಎಂಬ ಸ್ಥಿತಿಯಿದ್ದಾಗ, ಅಪರಿಚಿತರು ಎದುರಿಗಿದ್ದಾಗ ಈ ಭಾಷೆ ಬಳಕೆಯಾಗುತ್ತಿತ್ತಂತೆ. ಮೂಕರು ಕೈಗಳನ್ನು ಬಳಸಿ ಹಾವಭಾವದ ಮೂಲಕವೇ ಮಾತನಾಡುವುದು ಕೂಡ ಸಂಜ್ಞಾ ಭಾಷೆಯೇ, ಅಂದರೆ ಸಾಂಕೇತಿಕ ಭಾಷೆ. ಇದೇ ರೀತಿ, ರಾಜರ ಕಾಲದಲ್ಲಿ ಕೈಬೆರಳನ್ನು ಬಳಸಿಯೇ ಇನ್ನೊಬ್ಬರಿಗೆ ಅಕ್ಷರವನ್ನು ತಿಳಿಸುತ್ತಿದ್ದರಂತೆ. ಇದು ಹೇಗೆಂದರೆ, ಬೆರಳುಗಳಲ್ಲಿರುವ ಗೆರೆಗಳ ನಡುವಿನ ಜಾಗಕ್ಕೆ, ಒಂದೊಂದು ಕನ್ನಡ ಅಕ್ಷರಗಳನ್ನು ನಿರ್ಧರಿಸಲಾಗಿತ್ತು. ಒತ್ತಕ್ಷರಕ್ಕೂ ನಿರ್ದಿಷ್ಟ ಜಾಗವಿತ್ತು. ಹೆಬ್ಬೆರಳನ್ನು ಬಳಸಿ ನಿರ್ದಿಷ್ಟ ಜಾಗವನ್ನು ಮುಟ್ಟಿದರೆ ನಿರ್ದಿಷ್ಟ ಅಕ್ಷರವೆಂದು ಅರ್ಥ ಮಾಡಿಕೊಳ್ಳಬೇಕು. ಹೀಗೆ ಪದಗಳನ್ನು, ವಾಕ್ಯಗಳನ್ನು ಸೃಷ್ಟಿಸಿ, ಶಬ್ದಮಾಡದೇ ಮಾತನಾಡುತ್ತಿದ್ದರಂತೆ!
ಗಮನಿಸಲೇಬೇಕಾದ ವಿಚಾರವೆಂದರೆ, ಕೈಬೆರಳನ್ನು ಬಳಸಿ ಬೀಜಮಂತ್ರಗಳನ್ನು ಎಣಿಕೆ ಮಾಡುವ ಕ್ರಮ ಭಾರತೀಯರಲ್ಲಿ ಸಹಜ ಅಭ್ಯಾಸ. ಬಲಗೈ ಕಿರುಬೆರಳಿನ ಪಕ್ಕದ ಬೆರಳು ಅಂದರೆ ಉಂಗುರದ ಬೆರಳಿನ ಕೆಳಭಾಗದ ಎರಡು ಗೆರೆಗಳ ನಡುವೆ ಇರುವ ಜಾಗದಿಂದ ಎಣಿಕೆಯನ್ನು ಪ್ರಾರಂಭಿಸಲಾಗುತ್ತದೆ. ಅದು ಕಿರು ಬೆರಳಿನ ಮೂಲಕ ಮುಂದುವರಿದು, ತೋರು ಬೆರಳಿನ ಕೆಳಭಾಗಕ್ಕೆ ಮುಟ್ಟಿದಾಗ 10 ಜಪವಾಯಿತೆಂದು ಅರ್ಥ. ಹೀಗೆಯೇ ಎಷ್ಟು ಸಾವಿರ ಬೇಕಾದರೂ ಎಣಿಸಲು ಬೇಕಾದ ತಂತ್ರವೊಂದಿದೆ. ಹಾಗೆ ಎಣಿಸುವಾಗ ಕೈಬೆರಳುಗಳನ್ನು ನೇರವಾಗಿ ಇಟ್ಟುಕೊಂಡರೆ, ಹಲವು ಮುದ್ರೆಗಳನ್ನೂ (ಭಾರತೀಯ ಅಧ್ಯಾತ್ಮದಲ್ಲಿ ಬಳಸುವ ವಿಶೇಷ ಕ್ರಮ) ಮಾಡಿದಂತಾಗುತ್ತದೆ. ಅಜ್ಜ ಹೇಳಿದ ಸಂಜ್ಞಾ ಭಾಷೆ ಬಹುತೇಕ ಇದನ್ನೇ ಹೋಲುತ್ತಿತ್ತು ಎಂಬುದೊಂದು ಅಚ್ಚರಿಯ ಸಂಗತಿ. ಅಂದರೆ ಆಧ್ಯಾತ್ಮಿಕ ವಿಜ್ಞಾನಕ್ಕೂ ಈ ಸಂಜ್ಞಾ ಭಾಷೆಗೂ ಒಂದು ಗುಪ್ತ ಸಂಬಂಧವಿತ್ತು ಎಂದು ಊಹಿಸಿದರೆ ಅದು ತಪ್ಪಲ್ಲ.
ನಿರೂಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Vitla: ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿ ಸಾವು
NZvsENG: ಭರ್ಜರಿ ಕಮ್‌ಬ್ಯಾಕ್ ಮಾಡಿದ ಕೇನ್ ವಿಲಿಯಮ್ಸನ್
Delhi: ಒಂದು ತಿಂಗಳ ಅಂತರದಲ್ಲಿ ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಎರಡನೇ ಸ್ಫೋಟ
Belagavi: ಸಿಪಿಐ ಕಿರುಕುಳ ಆರೋಪ; ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ
BBK11: ಮಂಜುವನ್ನು ರೋಗಿಷ್ಠ ರಾಜ ಎಂದ ರಜತ್; ಜೋರಾಗಿ ನಕ್ಕ ಶಿಶಿರ್, ಐಶ್ವರ್ಯಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.