ಡಿಡಿಪಿಐ ವಿರುದ್ಧ ಜಿಪಂ ಉಪಾಧ್ಯಕ್ಷೆ ಗರಂ
Team Udayavani, Jan 12, 2019, 9:56 AM IST
ಗದಗ: ಸರಕಾರಿ ಶಾಲಾ ಶಿಕ್ಷಕರ ನಿರ್ಲಕ್ಷ್ಯದಿಂದ ಸರಕಾರಿ ಮಕ್ಕಳ ಕಲಿಕಾ ಗುಣಮಟ್ಟ ಕುಸಿಯುತ್ತಿದೆ. ಖಾಸಗಿ ಶಾಲೆಗಳಿಗಿಂತ ಉನ್ನತ ಪದವಿ, ಸಂಬಳ ಹೊಂದಿದ್ದರೂ, ಸಮರ್ಪಕವಾಗಿ ಪಾಠ ಮಾಡುವುದಿಲ್ಲ. ಅಂಥವರಿಂದ ಸಮಾಜಕ್ಕೆ ಏನು ಪ್ರಯೋಜನ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಎಲ್.ಬಾರಟಕ್ಕೆ ಅವರನ್ನು ಜಿಪಂ ಉಪಾಧ್ಯಕ್ಷೆ ಶಕುಂತಲಾ ಮೂಲಿಮನಿ ತರಾಟೆಗೆ ತೆಗೆದುಕೊಂಡರು.
ಜಿಪಂ ಸಭಾಂಗಣದಲ್ಲಿ ಜಿಪಂ ಅಧ್ಯಕ್ಷ ಎಸ್.ಪಿ. ಬಳಿಗಾರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಶಿಕ್ಷಣ ಇಲಾಖೆ ಕುರಿತ ಪ್ರಗತಿ ಪರಿಶೀಲಿಸಲಾಯಿತು. ಈ ವೇಳೆ ಮಾತನಾಡಿದ ಜಿ.ಪಂ ಉಪಾಧ್ಯಕ್ಷೆ ಶಕುಂತಲಾ ಮೂಲಿಮನಿ, ಜಿಲ್ಲೆಯ ಅನೇಕ ಸರಕಾರಿ ಶಾಲೆಗಳ ಮೂರನೇ ತರಗತಿ ವಿದ್ಯಾರ್ಥಿಗಳಿಗೆ ಅಆಇಈ, ಒಂದೆರಡು ಅಂಕಿಗಳೂ ಹೇಳಲು ಬರುತ್ತಿಲ್ಲ. ಖಾಸಗಿ ಶಾಲೆಗಳ ಎಲ್‌ಕೆಜಿ ಮಕ್ಕಳನ್ನು ನಾಲ್ಕನೇ ಅವೆಲ್ಲವನ್ನೂ ಓದುತ್ತವೆ ಎಂದರು.
ಜಿ.ಪಂ ಉಪಾಧ್ಯಕ್ಷರ ಪ್ರಶ್ನೆಗಳಿಗೆ ಉತ್ತರಿಸಲು ತಡಬಡಾಯಿಸಿದ ಜಿ.ಎಲ್.ಬಾರಟಕ್ಕೆ, ಗುಣಮಟ್ಟದ ಬೋಧನೆಗಾಗಿ ಶಿಕ್ಷಕರಿಗೆ ಹೆಚ್ಚುವರಿ ತರಬೇತಿ ನೀಡಲಾಗುತ್ತದೆ ಎಂದು ಹೇಳಿ ನುನುಚಿಕೊಳ್ಳಲು ಯತ್ನಿಸಿದರು. ಇದರಿಂದ ಮತ್ತೆ ಗರಂ ಆದ ಉಪಾಧ್ಯಕ್ಷೆ ಶಕುಂತಲಾ ಮೂಲಿಮನಿ, ‘ಅಲ್ರೀ ಬಿ.ಎ., ಬಿ.ಇಡಿ, ಎಂಎ, ಪಿಎಚ್‌ಡಿ ಪದವೀಧರರಿಗೆ ಎಬಿಸಿಡಿ ಹೇಳಿಕೊಡುವುದು ತ್ರಾಸಾ’ ಎಂದು ಪ್ರಶ್ನಿಸಿದರು. ಆಗ ಮಧ್ಯ ಪ್ರವೇಶಿಸಿದ ಜಿಪಂ ಅಧ್ಯಕ್ಷ ಎಸ್.ಪಿ.ಬಳಿಗಾರ, ಶಿಕ್ಷಕರು ಸಮರ್ಪಕವಾಗಿ ಶಾಲೆಗಳಲ್ಲಿದ್ದು, ಆಸಕ್ತಿಯಿಂದ ಪಾಠ ಮಾಡಿದರೆ, ಸಾಕು ಎಲ್ಲ ಸಮಸ್ಯೆ ಬಗೆಹರಿಯುತ್ತದೆ. ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಡಿಡಿಪಿಐ ಜಿ.ಎಲ್.ಬಾರಟಕ್ಕೆ ಅವರಿಗೆ ನಿರ್ದೇಶಿಸಿ, ಚರ್ಚೆಗೆ ತೆರೆ ಎಳೆದರು.
ಇದಕ್ಕೂ ಮುನ್ನ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ಒಟ್ಟು 821 ಶಾಲೆ ಬಿಟ್ಟಿರುವ ಮಕ್ಕಳನ್ನು ಗುರುತಿಸಲಾಗಿದೆ. ಶಾಲೆಗಳು ಆಕರ್ಷಕವಾಗಿಲ್ಲ ಎಂಬುದು ಸೇರಿದಂತೆ ಇನ್ನಿತರೆ ಕಾರಣಗಳಿಂದ ಮಕ್ಕಳು ಶಾಲೆ ಬಿಟ್ಟಿದ್ದಾರೆ. ಸೇತುಬಂಧ ಕಾರ್ಯಕ್ರಮದ ಮೂಲಕ ಅಂಥ ಮಕ್ಕಳನ್ನು ಮರಳಿ ಶಾಲೆಗೆ ಕರೆ ತರಲಾಗುತ್ತದೆ. ಕೆಲ ಮಕ್ಕಳು ಪೋಷಕರೊಂದಿಗೆ ಗುಳೆ ಹೋಗಿದ್ದಾರೆ. ಅಂಥ ಮಕ್ಕಳು ಯಾವ ಊರಿಗೆ ತೆರಳಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಿ, ಆಯಾ ಜಿಲ್ಲೆಯ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಿಡಿಪಿಐ ಸಭೆಗೆ ಮಾಹಿತಿ ನೀಡಿದರು.
‘ಸೃಷ್ಟಿ’ ವಿರುದ್ಧ ಎಫ್‌ಐಆರ್ ಆದೇಶ:
ಬಳಿಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕುರಿತು ಪ್ರಗತಿ ಪರಿಶೀಲನೆ ವೇಳೆ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಕುಮಾರ ನೀಲಗುಂದ ಅವರು ರೋಣ ತಾಲೂಕಿನ ಮೆಣಸಗಿ ಗ್ರಾಮದಲ್ಲಿ ಕಳೆದ ತಿಂಗಳು ಖಾಸಗಿ ಸಂಸ್ಥೆ ಅನಧಿಕೃತವಾಗಿ ನಡೆಸಿದ ‘ಸ್ವರ್ಣಬಿಂದು’ ಪ್ರಾಶನ ಶಿಬಿರದ ಬಗ್ಗೆ ಅಧ್ಯಕ್ಷರ ಗಮನ ಸೆಳೆದರು.
ಸಭೆಗೆ ಉತ್ತರಿಸಿದ ಜಿಲ್ಲಾ ಆರೋಗ್ಯಾಧಿಕಾರಿ, ಸೃಷ್ಟಿ ಎಂಬ ಸಂಸ್ಥೆ ಅನಧಿಕೃತವಾಗಿ ಮೆಣಸಗಿಯಲ್ಲಿ ಸ್ವರ್ಣ ಬಿಂದು ಲಸಿಕೆ ಹಾಕಿರುವುದು ಗೊತ್ತಾಗಿದೆ ಎಂದು ತಿಳಿಸಿದರು.
ಈ ವೇಳೆ ಜಿಲ್ಲಾ ಆಯುಷ್ ಅಧಿಕಾರಿ ಡಾ.ಸುಜಾತಾ ಪಾಟೀಲ ಮಾತನಾಡಿ, ಸರಕಾರದಿಂದ ಉಚಿತವಾಗಿ ಸ್ವರ್ಣ ಬಿಂದು ಪ್ರಾಶನ ಕಾರ್ಯಕ್ರಮವಿದ್ದರೂ, ಖಾಸಗಿ ಸಂಸ್ಥೆಗಳು ಜನರಿಂದ ಹಣ ಪಡೆದು, ಲಸಿಕೆ ಹಾಕುತ್ತಾರೆ. ಅದರ ಗುಣಮಟ್ಟದ ಬಗ್ಗೆ ನಮಗೆ ಖಾತ್ರಿಯಾಗದು. ಸಂಸ್ಥೆ ವಿರುದ್ಧ ದೂರು ನೀಡಲು ತಮ್ಮಿಂದ ಸುತ್ತೋಲೆ ಹೊರಡಿಸಬೇಕು ಎಂದು ಕೋರಿದರು.
ಅದಕ್ಕೆ ಸ್ಪಂದಿಸಿದ ಜಿಪಂ ಸಿಇಒ ಮಂಜುನಾಥ ಚವ್ಹಾಣ, ಡಿಎಚ್ಒ ಮತ್ತು ಆಯುಷ್ ಅಧಿಕಾರಿಗಳು ಒಟ್ಟಾಗಿ ಸೃಷ್ಟಿ ಸಂಸ್ಥೆ ವಿರುದ್ಧ ಪೊಲೀಸರಿಗೆ ದೂರು ನೀಡಬೇಕು. ಅದರೊಂದಿಗೆ ಇಂಥ ಸಂಸ್ಥೆಗಳಿಗೆ ಸಹಕರಿಸದಂತೆ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಆದೇಶ ಹೊರಡಿಸುವಂತೆ ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಜಿ.ಪಂ ಅಧ್ಯಕ್ಷ ಎಸ್.ಪಿ.ಬಳಿಗಾರ ಮಾತನಾಡಿ, ಜಿಲ್ಲೆಯಲ್ಲಿ ಅಂದಾಜು 8 ಸಾವಿರ ರೈತರ ಜಮೀನು ಒಣ ಬೇಸಾಯವಿದ್ದು, ನೀರಾವರಿ ಎಂದು 2016ರ ಬೆಳೆ ಹಾನಿ ಸಮೀಕ್ಷೆ ಸಂದರ್ಭದಲ್ಲಿ ತಪ್ಪಾಗಿ ನಮೂಸಿದ್ದರಿಂದ ರೈತರ ಬೆಳೆ ವಿಮೆಯಿಂದ ವಂಚಿತರಾಗುತ್ತಿದ್ದಾರೆ. ಆದಷ್ಟು ಬೇಗ ಈ ಸಮಸ್ಯೆಯನ್ನು ಬಗೆಹರಿಸಬೇಕು. ಜಿಲ್ಲೆಯ ಮಲಪ್ರಭಾ ನೀರಾವರಿ ಕಾಲುವೆಗಳಲ್ಲಿ ಹೂಳೆತ್ತಿ, ತಾತ್ಕಾಲಿಕ ದುರಸ್ತಿಗೊಳಿಸಲು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕಾಮಗಾರಿ ಕೈಗೊಳ್ಳಲು ನರಗುಂದ ಉಪವಿಭಾಗದ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಕೆರೆ ಅಭಿವೃದ್ಧಿಗಾಗಿ ಸಣ್ಣ ನೀರಾವರಿ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಗಳಡಿ ಪ್ರದೇಶ, ರಸ್ತೆ ಗುರುತಿಸುವಾಗ ಜನಪ್ರತಿನಿಧಿಗಳ ಗಮನಕ್ಕೆ ತರಬೇಕು. ವಿವಿಧ ಇಲಾಖೆಗಳ ಸೌಲಭ್ಯ ಪಡೆಯುವ ಫಲಾನುಭವಿಗಳ ಅಂತಿಮ ಪಟ್ಟಿಯ ಪ್ರತಿಯನ್ನು ಜನಪ್ರತಿನಿಧಿಗಳಿಗೆ ನೀಡಲು ಕ್ರಮ ಜರುಗಿಸಬೇಕು ಎಂದು ಸ್ಥಾಯಿ ಸಮಿತಿ ಸದಸ್ಯರು ಆಗ್ರಹಿಸಿದರು.
ಪರಿಸರ ಬೆಳೆಸುವ ಟ್ರೀ ಪಾರ್ಕ್ ಯೋಜನೆಯ ಮಾರ್ಗದರ್ಶಿ ಸೂತ್ರಗಳನ್ವಯ ನಗರ ಪ್ರದೇಶದ 5 ಕಿಮೀ ವ್ಯಾಪ್ತಿಯಲ್ಲಿ ಜಿಲ್ಲೆಯ ಬಿಂಕದಕಟ್ಟಿ, ನರಗುಂದ ಹಾಗೂ ತಡಕೋಡಗಳಲ್ಲಿ ಟ್ರೀ ಪಾರ್ಕ್ ಬೆಳೆಸಲಾಗುತ್ತಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸಭೆಗೆ ತಿಳಿಸಿದರು.
ಅರಣ್ಯ ಹಕ್ಕು ಪತ್ರ ನೀಡುವ ಪ್ರಕ್ರಿಯೆಯನ್ನು ಜಿಲ್ಲಾಮಟ್ಟದ ಸಮಿತಿ ಆದಷ್ಟು ಬೇಗನೆ ಪೂರ್ಣಗೊಳಿಸಲು ಕ್ರಮ ವಹಿಸಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ ಚವ್ಹಾಣ ಸಮಿತಿ ಸದಸ್ಯ ಕಾರ್ಯದರ್ಶಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ತಿಳಿಸಿದರು.
ಗ್ರಾಮಿಣ ಕುಡಿಯುವ ನೀರು, ಕೃಷಿ, ತೋಟಗಾರಿಕೆ, ಹಿಂದುಳಿದ ವರ್ಗ, ವಿವಿಧ ನಿಗಮ, ಹೆಸ್ಕಾಂ, ರೇಷ್ಮೆ, ಪಶುಸಂಗೋಪನೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಜರುಗಿತು. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಹನುಮಂತಪ್ಪ ಪೂಜಾರ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಈರಪ್ಪ ನಾಡಗೌಡ್ರ, ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಕುಮಾರ ನೀಲಗುಂದ, ಜಿಪಂ ಉಪಕಾರ್ಯದರ್ಶಿ ಡಿ.ಪ್ರಾಣೇಶ, ಯೋಜನಾಧಿಕಾರಿ ಬಿ.ಆರ್. ಪಾಟೀಲ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಸಾಕಷ್ಟು ಅನುದಾನ, ಶಿಕ್ಷಕರಿಗೆ ಕೈ ತುಂಬ ಸಂಬಳ ಹಾಗೂ ಮಕ್ಕಳ ಕಲಿಕೆಯನ್ನು ಪ್ರೋತ್ಸಾಹಿಸಲು ಹತ್ತು ಹಲವು ಯೋಜನೆ ಜಾರಿಗೊಳಿಸಿದೆ. ಆದರೂ, ಸರಕಾರಿ ಶಾಲಾ ಮಕ್ಕಳು ಕಲಿಕೆಯಲ್ಲಿ ಸಾಕಷ್ಟು ಹಿಂದಿದ್ದಾರೆ. ಶಿಕ್ಷಣ ಗುಣಮಟ್ಟ ಸುಧಾರಣೆಗಾಗಿ ಕಾಲಕಾಲಕ್ಕೆ ಇಲಾಖೆ ಅಧಿಕಾರಿಗಳು ಶಿಕ್ಷಕರಿಗೆ ಸೂಚಿಸಬೇಕು.
· ಶಕುಂತಲಾ ಮೂಲಿಮನಿ, ಜಿ.ಪಂ ಉಪಾಧ್ಯಕ್ಷೆ.
ಸರಕಾರಿ ಶಾಲೆಗಳ ಎಸ್‌ಡಿಎಂಸಿಗಳು ಶಾಲಾ ಕಟ್ಟಡ, ಅನುದಾನ ಬಳಕೆಗಿನ ಆಸಕ್ತಿಯನ್ನು ಮಕ್ಕಳ ಕಲಿಕೆಯತ್ತ ತೋರುತ್ತಿಲ್ಲ. ಎಸ್‌ಡಿಎಂಸಿಗಳಿಂದಾಗಿ ಅನೇಕ ಶಾಲೆಗಳು ರಾಜಕೀಯ ತಲೆ ಎತ್ತಿರುವುದು ನೋವಿನ ಸಂಗತಿ.
ಈರಪ್ಪ ಈಶ್ವರಪ್ಪ ನಾಡಗೌಡ್ರ,
ಸ್ಥಾಯಿ ಸಮಿತಿ ಅಧ್ಯಕ್ಷ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ
Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ
Gadaga: ಎಸ್ಪಿ ಬಿ.ಎಸ್.ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ವಂಚನೆಗೆ ಯತ್ನ
Gadaga: ನರಗುಂದ ಬಳಿ ಭೀಕರ ಅಪಘಾತ: ಕಾರಿಗೆ ಲಾರಿ ಡಿಕ್ಕಿ ಹೊಡೆದು ದಂಪತಿ ಸ್ಥಳದಲ್ಲೇ ಸಾವು
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.