ಮಠ-ಮಂದಿರಗಳಿಂದ ಸಂಸ್ಕೃತಿ-ಸಂಸ್ಕಾರ
Team Udayavani, Jan 12, 2019, 10:58 AM IST
ಬಸವಕಲ್ಯಾಣ: ವಿದೇಶಗಳಲ್ಲಿ ಬುದ್ಧಿಗೆ ಮಹತ್ವ ನೀಡಿದರೆ, ನಮ್ಮ ಭಾರತದಲ್ಲಿ ಹೃದಯವಂತಿಕೆಗೆ ಮೊದಲು ಆದ್ಯತೆ ನೀಡಲಾಗುತ್ತದೆ. ಇದು ನಮ್ಮ ದೇಶದ ಸಂಸ್ಕೃತಿಯಾಗಿದೆ ಎಂದು ಬೀದರ್‌ನ ಸಿದ್ಧಾರೂಢ ಮಠ ಚಿದಂಬರಾಶ್ರಮದ ಶ್ರೀ ಶಿವಕುಮಾರ ಸ್ವಾಮೀಜಿ ಹೇಳಿದರು.
ಹಾರಕೂಡ ಗ್ರಾಮದ ಶ್ರೀ ಸದ್ಗುರು ಚೆನ್ನಬಸವ ಶಿವಯೋಗಿಗಳ 67ನೇ ಜಾತ್ರಾ ಮಹೋತ್ಸವ ನಿಮಿತ್ತ ನಡೆದ ಶಿವಾನುಭವ ಚಿಂತನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಮನುಷ್ಯನಲ್ಲಿ ವೈಭವದ ಜೀವನಕ್ಕೆ ಬೇಕಾಗುವ ಎಲ್ಲ ಸಂಪತ್ತು ಇದೆ. ಆದರೆ ಜೀವನದಲ್ಲಿ ನೆಮ್ಮದಿಯಿಲ್ಲ. ಏಕೆಂದರೆ ಮಠ-ಮಂದಿರದ ಪರಂಪರೆಯನ್ನು ನಾವು ಮರೆಯುತ್ತಿದ್ದೇವೆ. ಅದಕ್ಕೆ ಎಷ್ಟೇ ಆಸ್ತಿ ಇದ್ದರೂ ಸಮಸ್ಯೆಯಿಂದ ಮುಕ್ತಿ ಹೊಂದಲು ಸಾಧ್ಯವಾಗುತ್ತಿಲ್ಲ. ಮನುಷ್ಯನಲ್ಲಿ ಸಂಸ್ಕೃತಿ, ಸಂಸ್ಕಾರ ಬರಬೇಕಾದರೆ ಮಠ, ಮಂದಿರಕ್ಕೆ ಹೋಗಬೇಕು. ಆಗ ಮಾತ್ರ ಸಮಸ್ಯೆಯಿಂದ ಮುಕ್ತಿ ಪಡೆಯಲು ಸಾಧ್ಯ ಎಂದು ಹೇಳಿದರು.
ಹಾರಕೂಡ ಸಂಸ್ಥಾನ ಹಿರೇಮಠದ ಡಾ| ಚನ್ನವೀರ ಶಿವಾಚಾರ್ಯರು ಮಾತನಾಡಿ, ಭಾರತ ಭಕ್ತಿ ಮತ್ತು ಧರ್ಮ ಪ್ರಧಾನ ದೇಶವಾಗಿದೆ. ದೇಶದ ಜನ ದೇವರ ಮತ್ತು ಧರ್ಮದ ಮೇಲೆ ಅಚಲವಾದ ಶ್ರದ್ಧೆ ಇಟ್ಟಿದ್ದಾರೆ. ದಾಸೋಹಕ್ಕೆ ಶ್ರೀ ಚೆನ್ನಬಸವ ಶಿವಯೋಗಿಗಳು ಅತ್ಯಂತ ಮಹತ್ವ ನೀಡಿದ್ದರು ಎಂದರು.
ಪ್ರಸಾದವನ್ನು ಭಗವಂತನ ಕೃಪೆ ಎಂಬ ಭಾವದಿಂದ ಸ್ವೀಕರಿಸಬೇಕು. ಅನ್ನ ಹಾಳು ಮಾಡಿದರೆ, ಪ್ರಸಾದಕ್ಕೆ ಅಪಚಾರ ಮಾಡಿದಂತಾಗುತ್ತದೆ. ಏಕೆಂದರೆ ಪ್ರತಿಯೊಂದು ಕಾಳಿನ ಹಿಂದೆ ರೈತನ ಬೇವರು ಹಾಗೂ ಶ್ರಮದಾನವಿರುತ್ತದೆ. ಆದ್ದರಿಂದ ಅನ್ನವನ್ನು ಹೆಚ್ಚು ಪಡೆಯದೇ ತಮಗೆ ಬೇಕಾಗುಷ್ಟು ಸ್ವೀಕರಿಸಿಬೇಕು. ಇದೇ ದೊಡ್ಡ ಕೊಡುಗೆಯಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಿವಣಿಯ ಶ್ರೀ ಹಾವಲಿಂಗೇಶ್ವರ ಶಿವಾಚಾರ್ಯರು ಮಾತನಾಡಿ, ಧಾರ್ಮಿಕ, ಆಧ್ಯಾತ್ಮಿಕ, ಸಾಹಿತ್ಯಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಹಾರಕೂಡ ಮಠದ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಶಾಸಕ ಬಿ.ನಾರಾಯಣರಾವ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ಭಾಗದ ಕಲಾವಿದರಿಗೆ ಪ್ರೋತ್ಸಾಹಿಸಿ, ಬೆಳೆಸಿದ ಕೀರ್ತಿ ಸುಕ್ಷೇತ್ರ ಹಾರಕೂಡಕ್ಕೆ ಸಲ್ಲುತ್ತದೆ. ನಾನು ವಿಧಾನ ಸಭೆ ಪ್ರವೇಶ ಮಾಡುವುದಕ್ಕೆ ಹಾರಕೂಡ ಶ್ರೀಗಳ ಆಶೀರ್ವಾದ ಮತ್ತು ಅವರು ಹಾಕಿಕೊಟ್ಟ ಮಾರ್ಗದರ್ಶನ ಕಾರಣ ಎಂದು ಸ್ಮರಿಸಿದರು. ಹಾರಕೂಡ ಗ್ರಾಮದ ಪ್ರತಿ ಮನೆ-ಮನೆಗೂ ಒಂದು ತಿಂಗಳ ಒಳಗಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಸ್ಥಳದಲ್ಲಿದ್ದ ಇಒ ಅಧಿಕಾರಿಗೆ ಸೂಚಿಸಿದರು. ಜೈಶ್ರೀ ಬಸವರಾಜ ಮುತ್ತಿಮಡು ಮಾತನಾಡಿದರು.
ಕಲಬುರಗಿ ಜಿಪಂ ಅಧ್ಯಕ್ಷೆ ಸುವರ್ಣಾ ಮಲಾಜೆ, ಮುಡಬಿ ಜಿಪಂ ಸದಸ್ಯ ರಾಜಶೇಖರ ಮೇತ್ರೆ, ತಾಪಂ ಅಧ್ಯಕ್ಷೆ ಯಶೋಧಾ ನೀಲಕಂಠ ರಾಠೊಡ, ತಾಪಂ ಸದಸ್ಯೆ ಸೋನಾಬಾಯಿ, ಬಾಬು ಹೊನ್ನಾನಾಯಕ, ನೀಲಕಂಠ ರಾಠೊಡ, ಶಿವರಾಜ ನರಶೆಟ್ಟೆ, ಬಿ.ಕೆ.ಹಿರೇಮಠ, ಸಿದ್ರಾಮ ಗುದಗೆ, ಇಒ ಮಡೋಳಪ್ಪಾ ಪಿ.ಎಸ್. ಬಂಡೆಪ್ಪಾ ಕಿಣಗಿ ಹಾಗೂ ವಿವಿಧ ಮಠದ ಶ್ರೀಗಳು ಹಾಗೂ ಅಪಾರ ಭಕ್ತರು ಇದ್ದರು.
ಕಲಾವಿದರಾದ ಮಲ್ಲಿಕಾರ್ಜುನ ಶಾಸ್ತ್ರಿ, ಸಿದ್ರಾಮಯ್ಯ ಸ್ವಾಮಿ ಗೋರ್ಟಾ ಸಂಗೀತ ನಡೆಸಿಕೊಟ್ಟರು. ರಾಜಕುಮಾರ ಪಾಟೀಲ ಸಿರಗಾಪುರ ಸ್ವಾಗತಿಸಿದರು. ಹಾಸ್ಯ ಕಲಾವಿದ ನವಲಿಂಗ ಪಾಟೀಲ ನಿರೂಪಿಸಿ, ವಂದಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.