ಸರ್ಕಾರ ಬೀಳುತ್ತದೆ ಎಂಬುದು ಬಿಜೆಪಿ ಭ್ರಮೆ
Team Udayavani, Jan 13, 2019, 1:05 AM IST
ಶಿರಸಿ: ಸಮ್ಮಿಶ್ರ ಸರಕಾರ ಆಗ ಬೀಳುತ್ತದೆ, ಈಗ ಬೀಳುತ್ತದೆ ಎನ್ನುವುದು ಕೇವಲ ಭ್ರಮೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸರಕಾರ ಐದು ವರ್ಷ ಪೂರೈಸುವುದರಲ್ಲಿ ಸಂಶಯವಿಲ್ಲ. ಯಾವುದೇ ಸಮಸ್ಯೆ ಎದುರಾದರೆ ಎರಡೂ ಪಕ್ಷಗಳ ರಾಷ್ಟ್ರೀಯ ಅಧ್ಯಕ್ಷರು ಚರ್ಚಿಸಿ ಬಗೆಹರಿಸುತ್ತಾರೆ. ಈ ಮಧ್ಯೆ, ಪ್ರತಿಪಕ್ಷದವರು ಸರಕಾರ ಉರುಳಿಸುವುದಕ್ಕೆ ಮುಂದಾದರೆ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗುತ್ತದೆ. ರಾಜ್ಯದಲ್ಲಿ ಸಂಕ್ರಾಂತಿ ನಂತರ ಬಿಜೆಪಿಗರಿಗೆ ಕ್ರಾಂತಿ ಬರುತ್ತದೆ ಎಂದಾದರೆ ಸಂಕ್ರಾಂತಿ ನಂಬಿದವರಿಗೆ ರಾಜ್ಯದಲ್ಲಿ ಶಾಂತಿ ಬರುತ್ತದೆಂಬ ವಿಶ್ವಾಸವಿದೆ ಎಂದು ಬಿಜೆಪಿಗರಿಗೆ ಟಾಂಗ್ ನೀಡಿದರು.
ಸರಕಾರ ಉರುಳಿಸುವ ರಾಜಕೀಯ ನೈತಿಕವಾಗಿ ಸರಿಯಲ್ಲ. ಜನರು ಸಹ ಬಿಜೆಪಿಗರ ಪ್ರಯತ್ನ ಒಪ್ಪಲ್ಲ. ಕಾಂಗ್ರೆಸ್ ಪಕ್ಷದ ಚಿಹ್ನೆ ಪಡೆದು ಪಕ್ಷದಿಂದ ಸ್ಪರ್ಧಿಸಿದವರನ್ನು ಜನರು ಶಾಸಕರನ್ನಾಗಿ ಮಾಡಿರುತ್ತಾರೆ. ಅಂತವರು ಬಿಜೆಪಿಯವರು ಕರೆದಾಗ ಸರಕಿನಂತೆ ಬರುತ್ತಾರೆ ಎನ್ನುವುದು ಬಿಜೆಪಿಗರ ತಪ್ಪು ಕಲ್ಪನೆ. ಸಚಿವ ಎಚ್.ಡಿ ರೇವಣ್ಣ ಮತ್ತು ಅಧ್ಯಕ್ಷ ದಿನೇಶ ಗುಂಡೂರಾವ್ ಮಧ್ಯೆ ಸಣ್ಣ ಪುಟ್ಟ ಮಾತುಗಳಾಗಿದ್ದು, ಅದು ಪತ್ರಿಕೆಗಳಲ್ಲಿ ಮಸಾಲೆ ಹಚ್ಚಿ ಬಂದಿವೆ. ಕೆಲವೊಂದು ಕಪೋಲಕಲ್ಪಿತವಾಗಿಯೂ ವರದಿಯಾಗಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲೂ ರಾಹುಲ್ ಗಾಂಧಿ ಮತ್ತು ದೇವೇಗೌಡರ ಸಮಾಲೋಚನೆಯಲ್ಲಿ ಟಿಕೇಟ್ ಹಂಚಿಕೆ ಮಾಡಿ ಸ್ಪರ್ಧಿಸುತ್ತೇವೆ ಎಂದು ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.