ಮಹಾನಗರ ಪಾಲಿಕೆ ಚುನಾವಣೆ ಮುಂದಕ್ಕೆ?
Team Udayavani, Jan 15, 2019, 4:28 AM IST
ಮಹಾನಗರ : ಮಂಗಳೂರು ಮಹಾನಗರ ಪಾಲಿಕೆಯ ವಾರ್ಡ್‌ವಾರು ಮೀಸಲಾತಿ ನಿಗದಿಗೊಳಿಸಿ ರಾಜ್ಯ ಸರಕಾರ ಹೊರಡಿಸಿದ್ದ ಅಧಿಸೂಚನೆಯನ್ನು ರದ್ದುಗೊಳಿಸಿ ಹೈಕೋರ್ಟ್ ಆದೇಶ ಹೊರಡಿಸಿರುವುದರ ಪರಿಣಾಮ, ಇದೀಗ ಪಾಲಿಕೆಯ ಚುನಾವಣೆ ನಿಗದಿತ ಅವಧಿಗೆ ನಡೆಯುವುದೇ ಅಥವಾ ಮುಂದಕ್ಕೆ ಹೋಗುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ರಾಜ್ಯ ಸರಕಾರ ಈ ಹಿಂದೆ ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಿದ ಹೈಕೋರ್ಟ್ ಜನವರಿ 28ರೊಳಗೆ ಮೀಸಲಾತಿ ಮರು ನಿಗದಿಗೊಳಿಸುವಂತೆ ಸರಕಾರಕ್ಕೆ ಸೋಮವಾರ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ಸರಕಾರವು ಮುಂದಿನ ಎರಡು ವಾರಗಳೊಳಗೆ ಈ ವಾರ್ಡ್‌ವಾರು ಮೀಸಲಾತಿ ವಿಚಾರದಲ್ಲಿ ಒಂದು ಮಹತ್ವದ ತೀರ್ಮಾನಕ್ಕೆ ಬರಬೇಕಾಗಿದೆ. ಒಂದುವೇಳೆ, ನ್ಯಾಯಾಲಯದ ಆದೇಶಕ್ಕೆ ತಲೆಬಾಗಿ ಮೀಸಲಾತಿಗೆ ಸಂಬಂಧಿಸಿ ಹೊಸ ಆದೇಶವನ್ನು ಹೊರಡಿಸಲಿದೆಯೇ ಅಥವಾ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಿದೆಯೇ ಎಂಬ ಕುತೂಹಲ ಎದುರಾಗಿದೆ. ಹೀಗಿರುವಾಗ, ಮಹಾನಗರ ಪಾಲಿಕೆ ಚುನಾವಣೆಗೆ ಎರಡು ತಿಂಗಳೊಳಗೆ ದಿನಾಂಕ ಘೋಷಣೆಯಾಗುವುದು ಅನುಮಾನ ಎನ್ನುವ ಬಿಸಿಬಿಸಿ ಚರ್ಚೆ ಪಾಲಿಕೆ ವ್ಯಾಪ್ತಿಯಲ್ಲಿ ಇದೀಗ ಶುರುವಾಗಿದೆ.
ಕಾಲಾವಕಾಶ ಅಗತ್ಯ
ಪಾಲಿಕೆಯ ಪ್ರಸ್ತುತ ಆಡಳಿತದ ಅವಧಿ ಮಾರ್ಚ್ 7ರಂದು ಮುಕ್ತಾಯಗೊಳ್ಳುತ್ತದೆ. ಅಷ್ಟರೊಳಗೆ ಚುನಾವಣೆ ನಡೆದು ನೂತನ ಪರಿಷತ್ ರಚನೆ ಆಗಬೇಕಾಗಿದೆ. ಆದರೆ, ಮೀಸಲಾತಿ ಪಟ್ಟಿ ವಿಚಾರದಲ್ಲಿ ನ್ಯಾಯಾಲಯ ನೀಡಿರುವ ನಿರ್ದೇಶನವನ್ನು ತೆಗೆದುಕೊಂಡಾಗ, ಅದು ಸಾಧ್ಯವೇ ಎಂಬ ಪ್ರಶ್ನೆ ಎದುರಾಗುತ್ತದೆ. ಹೈಕೋರ್ಟ್ ಸೂಚಿಸಿರುವುದರಿಂದ ರಾಜ್ಯ ಸರಕಾರ ಮುಂದಿನ ಎರಡು ವಾರಗಳಲ್ಲಿ ಮರು ಆದೇಶ ಹೊರಡಿಸಿದ್ದರೂ ಚುನಾವಣೆ ನಡೆಸುವ ಬಗ್ಗೆ ನಿರ್ಧಾರಕ್ಕೆ ಬರಲು ರಾಜ್ಯ ಚುನಾವಣಾ ಆಯೋಗಕ್ಕೆ ಸ್ವಲ್ಪ ಕಾಲಾವಕಾಶ ಬೇಕಾಗಬಹುದು.
ಆ ರೀತಿ ಹೊಸ ವಾರ್ಡ್‌ವಾರು ಮೀಸಲಾತಿ ಬಂದ ಮೇಲೆ ಪಾಲಿಕೆ ಚುನಾವಣೆಗೆ ದಿನಾಂಕವನ್ನು ಆಯೋಗ ಘೋಷಣೆ ಮಾಡಿದರೆ, ಅದೇವೇಳೆಗೆ, ಲೋಕಸಭೆ ಚುನಾವಣೆ ಕೂಡ ಎದುರಾಗುವ ಸಾಧ್ಯತೆಯಿದೆ. ಈ ನಡುವೆ, ಶಾಲಾ-ಕಾಲೇಜುಗಳಿಗೆ ಒಂದೆರಡು ತಿಂಗಳಲ್ಲಿ ಪರೀಕ್ಷೆ ಕೂಡ ಶುರುವಾಗಲಿದೆ. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸುವಾಗ, ಲೋಕಸಭೆ ಚುನಾವಣೆಗೂ ಮೊದಲು ಮಂಗಳೂರು ಪಾಲಿಕೆ ಚುನಾವಣೆ ನಡೆಯುವ ಸಾಧ್ಯತೆ ತೀರಾ ಕಡಿಮೆಯಿದೆ. ಇನ್ನು, ಪಾಲಿಕೆ 5 ವರ್ಷಗಳ ಅಧಿಕಾರವಧಿ ಮಾರ್ಚ್ 7ಕ್ಕೆ ಕೊನೆಗೊಳ್ಳುತ್ತದೆ. ಈ ಕಾರಣಕ್ಕೆ ಪಾಲಿಕೆ ಚುನಾವಣೆಯನ್ನು ಮುಂದೂಡುವುದಾದರೆ, ಪಾಲಿಕೆಗೂ ಆಡಳಿತಾಧಿಕಾರಿಯನ್ನು ನೇಮಕ ಗೊಳಿಸುವ ಅನಿವಾರ್ಯ ಎದುರಾಗಲಿದೆ.
ರಾಜ್ಯ ಸರಕಾರಕ್ಕೆ ಮುಖಭಂಗ
ಹೈಕೋರ್ಟ್ ತೀರ್ಪಿನಿಂದಾಗಿ ರಾಜ್ಯ ಸರಕಾರಕ್ಕೆ ಮುಖಭಂಗ. ಕರಡು ಮೀಸಲಾತಿ ಪಟ್ಟಿಗೂ ಅಂತಿಮ ಮೀಸಲಾತಿ ಪಟ್ಟಿಗೂ ಅಜಗಜಾಂತರವಿದೆ. ಅಂತಿಮ ಪಟ್ಟಿಯಲ್ಲಿ ಬಹಳಷ್ಟು ರಾಜಕೀಯ ಹಸ್ತಕ್ಷೇಪ ನಡೆದಿದೆ. ಈ ರಾಜಕೀಯ ಹಸ್ತಕ್ಷೇಪದಿಂದಾಗಿ ನ್ಯಾಯಾಲಯ ಕೂಡ ಈ ರೀತಿ ತೀರ್ಮಾನಕ್ಕೆ ಬಂದಿರಬಹುದು.
ಪ್ರೇಮಾನಂದ ಶೆಟ್ಟಿ, ವಿಪಕ್ಷ ನಾಯಕ
ಸರಕಾರ ಯೋಗ್ಯ ತೀರ್ಮಾನ ಕೈಗೊಳ್ಳಲಿ
ಮೀಸಲಾತಿಗೆ ಸಂಬಂಧಿಸಿದ ಸರಕಾರದ ಈ ಹಿಂದಿನ ಆದೇಶವನ್ನು ಹೈಕೋರ್ಟ್ ರದ್ದು ಪಡಿಸಿ ಜ. 28ರೊಳಗೆ ಹೊಸತಾಗಿ ಆದೇಶ ಹೊರಡಿಸಬೇಕೆಂದು ಆದೇಶಿಸಿರುವುದರಿಂದ ಈಗ ಸರಕಾರವೇ ಯೋಗ್ಯ ತೀರ್ಮಾನವನ್ನು ಕೈಗೊಳ್ಳಬೇಕು. ನ್ಯಾಯಾಲಯದ ಆದೇಶಕ್ಕೂ ಸರಕಾರ ತಲೆ ಬಾಗ ಬೇಕಾಗುತ್ತದೆ.
– ಭಾಸ್ಕರ್ ಕೆ.,ಮೇಯರ್
ನಗರಾಭಿವೃದ್ಧಿ ಸಚಿವರ ತವರು ಜಿಲ್ಲೆಗೆ ಮುಖ ಭಂಗ
ಹೈಕೋರ್ಟ್ ತೀರ್ಪಿನಿಂದಾಗಿ ನಗರಾಭಿವೃದ್ಧಿ ಖಾತೆ, ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರಿಗೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಮುಖ ಭಂಗ ವಾಗಿದೆ. ಸಚಿವರು ತಮ್ಮ ತವರು ಜಿಲ್ಲೆ ಯಲ್ಲಿ ಮೀಸಲಾತಿ ಪಟ್ಟಿಯನ್ನು ಸರಿ ಪಡಿಸುವಲ್ಲಿ ವಿಫಲರಾಗಿ ದ್ದಾರೆ. ಸಚಿವರು ಅಧಿಕಾರ ದುರು ಪಯೋಗ ಮಾಡಿ ಪಾಲಿಕೆ ಯಲ್ಲಿ ಆಡಳಿತ ಪಕ್ಷವನ್ನು ಮತ್ತೂಮ್ಮೆ ಅಧಿಕಾರಕ್ಕೆ ತರಲು ನಡೆಸಿದ ಪ್ರಯತ್ನ ವಿಫಲವಾಗಿದೆ.
– ವೇದವ್ಯಾಸ ಕಾಮತ್, ಶಾಸಕ
ಕಾಂಗ್ರೆಸ್ ಜಾಯಮಾನಕ್ಕೆ ತೀವ್ರ ಹಿನ್ನಡೆ
ಹೈಕೋರ್ಟ್ ತೀರ್ಪಿನಿಂದ ತಮಗೆ ಬೇಕಾದ ಹಾಗೆ ಅಧಿಕಾರವನ್ನು ದುರ್ಬಳಕೆ ಮಾಡುವ ಕಾಂಗ್ರೆಸ್ ಜಾಯಮಾನಕ್ಕೆ ತೀವ್ರ ಹಿನ್ನಡೆಯಾಗಿದೆ. ಪಾಲಿಕೆಯಲ್ಲಿ ಅಧಿಕಾರಕ್ಕೆ ಬರಬೇಕೆಂದು ಅನೈತಿಕ ಮಾರ್ಗ ಹಿಡಿದ ಕಾಂಗ್ರೆಸ್ಸಿಗೆ ನ್ಯಾಯಾಲಯದ ತೀರ್ಪು ಛೀಮಾರಿ ಹಾಕಿದಂತೆ ಆಗಿದೆ. ಮೀಸಲಾತಿ ರೋಟೇಶನ್ ಪದ್ಧತಿಯ ಪ್ರಕಾರ ಪಾಲಿಕೆ ಚುನಾವಣೆ ನಡೆಯಲಿ.
– ಡಾ| ವೈ. ಭರತ್ ಶೆಟ್ಟಿ,ಶಾಸಕರು
ಸರಕಾರ ನಿರ್ಧರಿಸಲಿ
ವಾರ್ಡ್ ಮೀಸಲಾತಿ ವಿಚಾರದಲ್ಲಿ ಸರಕಾರಕ್ಕೆ ಅಧಿಕಾರವಿದೆ. ಹಾಗಾಗಿ ಸರಕಾರ ಸೂಕ್ತ ನಿರ್ಧಾರವನ್ನು ಕೈಗೊಳ್ಳಬಹುದೆಂಬ ನಿರೀಕ್ಷೆ ಇದೆ.
– ಶಶಿಧರ್ ಹೆಗ್ಡೆ, ಪಾಲಿಕೆ ಸಚೇತಕ
••ಹಿಲರಿ ಕ್ರಾಸ್ತಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ, ಏನು ಮಾರ್ಗಸೂಚಿ ಇಳಿದೆ ಮಾಹಿತಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.