ಧರಣಿ ಸತ್ಯಾಗ್ರಹ ಅಂತ್ಯ
Team Udayavani, Jan 15, 2019, 9:54 AM IST
ಮುಧೋಳ: ಸಕ್ಕರೆ ಸಚಿವ ಆರ್.ಬಿ. ತಿಮ್ಮಾಪುರ ಭರವಸೆ ಮೇರೆಗೆ ಕಳೆದ 19 ದಿನಗಳಿಂದ ಮುಧೋಳ ನಗರ ಹಿತರಕ್ಷಣಾ ಸಮಿತಿ ವತಿಯಿಂದ ನಗರದ ಮೂಲಭೂತ ಸೌಕರ್ಯಕ್ಕಾಗಿ ಆಗ್ರಹಿಸಿ ನಡೆಸಲಾಗುತ್ತಿದ್ದ ಧರಣಿ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ ಎಂದು ಹೋರಾಟ ಸಮಿತಿ ಅಧ್ಯಕ್ಷ ಡಾ.ಸಂಜಯ ಘಾರಗೆ ಹಾಗೂ ಕಾರ್ಯದರ್ಶಿ ಡಾ| ಮೋಹನ ಬಿರಾದಾರ ಹೇಳಿದರು.
ಸೋಮವಾರ ಕಾನಿಪ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಗಮ ಸಂಚಾರಕ್ಕಾಗಿ ರಸ್ತೆ ಅಗಲೀಕರಣ, ಕುಡಿಯುವ ನೀರು, ಬೈಪಾಸ್ ರಸ್ತೆ, ಒಳಚರಂಡಿ ಯೋಜನೆ ಸೇರಿದಂತೆ 8 ಬೇಡಿಕೆ ಈಡೇರಿಸಲು ಸರ್ಕಾರದಿಂದ ಅನುದಾನ ಪಡೆದು ಕಾರ್ಯಾರಂಭ ಮಾಡಲು ಕಾಲಾವಕಾಶ ಬೇಕಾಗುತ್ತದೆ ಎಂದು ಸಚಿವರ ಭರವಸೆ ಮೇರೆಗೆ ಹೋರಾಟ ಹಿಂಪಡೆಯಲಾಗಿದೆ ಎಂದು ಅವರು ತಿಳಿಸಿದರು.
ರಾಜ್ಯ ಹೆದ್ದಾರಿ ಅಗಲೀಕರಣಕ್ಕಾಗಿ ಈಗಾಗಲೇ ರಸ್ತೆಯ ಎರಡೂ ಬದಿಯ ಅತಿಕ್ರಮಣ ಕಾರ್ಯವನ್ನು ಅಧಿಕಾರಿಗಳು ತೆರವುಗೊಳಿಸುತ್ತಿದ್ದು, ಇದರ ರಸ್ತೆ ಕಾಮಗಾರಿಗೆ ರೂ. 11.20 ಕೋಟಿ ಹಣ ಬೇಕಾಗುತ್ತದೆ. ಶಾಶ್ವತ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕಾಗಿ ಕೃಷ್ಣಾ ನದಿಯ ಹಿಪ್ಪರಗಿ ಬ್ಯಾರೇಜಿನ ಮೂಲಕ ನೀರನ್ನು ತಾಲೂಕಿನ ಮುಗಳಖೋಡ ಹಾಗೂ ಕುಳಲಿ ಮಧ್ಯೆ 100 ಎಕರೆ ಜಮೀನಿನಲ್ಲಿ ಕೆರೆ ನಿರ್ಮಿಸಿ ನೀರು ಸಂಗ್ರಹ ಮಾಡಿ ನಗರಕ್ಕೆ ನೀರು ಪೂರೈಸಲು ಸುಮಾರು ರೂ. 142 ಕೋಟಿ ಹಣವನ್ನು ಬರುವ ಬಜೆಟ್‌ನಲ್ಲಿ ಮಂಜೂರಾತಿ ಪಡೆಯಲಾಗುವುದು. ಕೆರೆ ಅತಿಕ್ರಮಣ ಮಾಡಿದ ಕುಟುಂಬಗಳು ಬಡ ಕುಟುಂಬಗಳಾಗಿದ್ದು, ಪುನರ್ವಸತಿಗೆ ಮಾಲಾಪುರ ಬಳಿ 16 ಎಕರೆ ಜಾಗ ಖರೀದಿಸಿ ಅಲ್ಲಿ ಅವರಿಗೆ ಪುನರ್ವಸತಿ ಕಲ್ಪಿಸಲಾಗುವುದು. ಅಲ್ಲದೇ ಕೆರೆಗಳನ್ನು ಅತಿಕ್ರಮಿಸಿಕೊಂಡ ಶ್ರೀಮಂತರ ಕಟ್ಟಡ ತೆರವುಗೊಳಿಸಲಾಗುವುದು. ಒಳಚರಂಡಿ ಯೋಜನೆ ಕಳಪೆಯಾಗಿರುವ ಬಗ್ಗೆ ಒಳಚರಂಡಿ ನಿಗಮದ ಅಧ್ಯಕ್ಷ ಯಶವಂತರಾಯಗೌಡ ಪಾಟೀಲ ಹಾಗೂ ವ್ಯವಸ್ಥಾಪಕ ನಿರ್ದೇಶಕ ಹಾಗೂ ಅಧಿಕಾರಿಗಳೊಂದಿಗೆ ಮುಧೋಳ ನಿಯೋಗದೊಂದಿಗೆ ಭೇಟಿ ಮಾಡಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ ಎಂದು ಹೇಳಿದರು.
ನಗರದಲ್ಲಿ ಉದ್ಯಾನವನ ಹಾಗೂ ಸರ್ಕಾರಿ ಜಾಗ ಅತಿಕ್ರಮಣ ತೆರವುಗೊಳಿಸಲಾಗುವುದು. ಅಲ್ಲದೇ ಇನ್ನುಳಿದ ಬೇಡಿಕೆಗಳ ಬಗ್ಗೆ ಎರಡು-ಮೂರು ತಿಂಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂಬ ಸಚಿವರು ಭರವಸೆ ನೀಡಿದ್ದಾರೆ ಎಂದು ಹೇಳಿದರು.
ನ್ಯಾಯವಾದಿ ಪ್ರಕಾಶ ವಸ್ತ್ರದ ಮಾತನಾಡಿ, ಸರ್ಕಾರದ ಪರವಾಗಿ ಸಚಿವ ಆರ್.ಬಿ. ತಿಮ್ಮಾಪುರ ಹಾಗೂ ಶಾಸಕ ಗೋವಿಂದ ಕಾರಜೋಳ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದ್ದಾರೆ. ನ್ಯಾಯವಾದಿಗಳ ಸಂಘದವರು ರಸ್ತೆ ಅಗಲೀಕರಣಕ್ಕಾಗಿ ನಡೆಯುತ್ತಿರುವ ತೆರವು ಕಾರ್ಯಾಚರಣೆಗೆ ಸಂಬಂಧವಾಗಿ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಯಾವುದೇ ಕೇಸ್ ಪಡೆಯುದಿಲ್ಲವೆಂದು ನಿರ್ಣಯ ಕೈಗೊಂಡಿದ್ದರಿಂದ ತೆರವು ಕಾರ್ಯಾಚರಣೆ ಸುಗಮವಾಗಿ ನಡೆಯಲು ಸಹಕಾರ ನೀಡಿದ್ದಾರೆ. ನಿಗದಿತ ವೇಳೆಯಲ್ಲಿ ಕಾರ್ಯೋನ್ಮುಖರಾಗದಿದ್ದರೆ ಮತ್ತೆ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು. ಡಾ| ಸಂಜಯ ಘಾರಗೆ, ಡಾ| ಮೋಹನ ಬಿರಾದಾರ, ಬಸವಂತ ಕಾಟೆ, ಡಾ| ಸತೀಶ ಮಲಘಾಣ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.