8 ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದದ್ದು ನಿಜ
Team Udayavani, Jan 18, 2019, 1:15 AM IST
ಬೆಂಗಳೂರು: ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರ್ಯತಂತ್ರ ರೂಪಿಸಿದ್ದ ಬಿಜೆಪಿ ಜತೆ ಕಾಂಗ್ರೆಸ್‌ನ ಏಳು ಹಾಗೂ ಇಬ್ಬರು ಪಕ್ಷೇತರ ಶಾಸಕರು ಸಂಪರ್ಕದಲ್ಲಿ ಇದ್ದದ್ದು ನಿಜ. ಜತೆಗೆ, ಬಿಜೆಪಿ ಸರ್ಕಾರ ರಚನೆಯಾದ ಮೇಲೆ ಇಂತದ್ದೇ ಖಾತೆ ಸಚಿವರಾಗುತ್ತೀರಿ ಎಂದು ಭರವಸೆಯನ್ನೂ ನೀಡಲಾಗಿತ್ತು.
ರಮೇಶ್ ಜಾರಕಿಹೊಳಿಗೆ ಗೃಹ, ಪಕ್ಷೇತರ ಶಾಸಕರಾದ ಆರ್. ಶಂಕರ್‌ಗೆ ಅರಣ್ಯ ಖಾತೆ, ನಾಗೇಶ್‌ಗೆ ಸಣ್ಣ ನೀರಾವರಿ, ಉಮೇಶ್ ಜಾಧವ್‌ಗೆ ಸಮಾಜ ಕಲ್ಯಾಣ ಹೀಗೆ ಖಾತೆ ಸಹ ಹಂಚಿಕೆ ಮಾಡಲಾಗಿತ್ತು. ರಮೇಶ್ ಜಾರಕಿಹೊಳಿ, ನಾಗೇಂದ್ರ, ಕಂಪ್ಲಿ ಗಣೇಶ್, ಕುಮಟಳ್ಳಿ , ಪ್ರತಾಪ್‌ಗೌಡ ಪಾಟೀಲ್, ಬಿಜೆಪಿ ನಾಯಕರ ಸಂಪರ್ಕದಲ್ಲಿದ್ದರು.
ಆನಂದ್‌ಸಿಂಗ್, ಬಿ.ಸಿ.ಪಾಟೀಲ್ ಅವರು ನಿಮ್ಮ ಬಳಿ 16 ಶಾಸಕರು ಇರುವ ಬಗ್ಗೆ ಖಾತರಿಕೊಟ್ಟರೆ ನಾವು ಬಂದು ಸೇರುತ್ತೇವೆ ಎಂದು ಭರವಸೆ ನೀಡಿದ್ದರು ಎಂದು ಹೇಳಿದ್ದರು. ಆನಂದ್‌ಸಿಂಗ್ ಸಹ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾಗ, ನನ್ನನ್ನು ಸಂಪರ್ಕಿಸಿರುವುದು ನಿಜ, ಹೋಗುವುದಾದರೆ ಹೇಳಿಯೇ ಹೋಗುತ್ತೇನೆ ಎಂದು ಹೇಳಿದ್ದರು ಎಂದು ಹೇಳಲಾಗಿದೆ. ಬಿಜೆಪಿ ಜತೆ ಸಂಪರ್ಕವಿದ್ದ ಎಲ್ಲ ಶಾಸಕರು ಮುಂಬೈ-ಪುಣೆ ಅಕ್ಕ ಪಕ್ಕವೇ ಇದ್ದರು. ದೇವಸ್ಥಾನ ಭೇಟಿ, ಪ್ರವಾಸ ನೆಪದಲ್ಲಿ ವಾಸ್ತವ್ಯ ಹೂಡಿದ್ದರು. ಇಬ್ಬರು ಪಕ್ಷೇತರರು ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ವಾಪಸ್ ಪಡೆದ ನಂತರ ಮರುದಿನ ಆರು ಶಾಸಕರ ರಾಜೀನಾಮೆಗೆ ವೇದಿಕೆ ಸಜ್ಜುಗೊಳಿಸಲಾಗಿತ್ತು.
ಉಲ್ಟಾ-ಪಲ್ಟಾ: ಅಚ್ಚರಿ ಎಂದರೆ, ಬಿಜೆಪಿ ಸಂಪರ್ಕದಲ್ಲಿದ್ದ ಎಲ್ಲ ಶಾಸಕರೂ ಇನ್ನೇನು ಸಮ್ಮಿಶ್ರ ಸರ್ಕಾರ ಪತನವಾಗಬಹುದು ಎಂದೇ ಅಂದುಕೊಂಡಿದ್ದರು. ಆದರೆ, ಹೈಕಮಾಂಡ್ ಕಟ್ಟುನಿಟ್ಟಿನ ಸೂಚನೆ ಮೇರೆಗೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ “ರಂಗಪ್ರವೇಶ’ ದೊಂದಿಗೆ ಎಲ್ಲವೂ ಉಲ್ಟಾ-ಪಲ್ಟಾ ಆಯಿತು ಎಂದು ಹೇಳಲಾಗಿದೆ.
ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳುವ ಅನಿವಾರ್ಯತೆ ಜೆಡಿಎಸ್‌ಗಿಂತ ಕಾಂಗ್ರೆಸ್‌ಗೆ ಹೆಚ್ಚಾಗಿದ್ದ ಕಾರಣ ಖುದ್ದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಜತೆ ಮಾತನಾಡಿ ಪರಿಸ್ಥಿತಿ ಕುರಿತು ಮಾಹಿತಿ ಪಡೆದು ತಕ್ಷಣವೇ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರಿಗೆ ಕರೆ ಮಾಡಿದ್ದರು.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೈತ್ರಿ ಸರ್ಕಾರ ಮುಂದುವರಿಯುವುದು ಅನಿವಾರ್ಯ. ಈ ಹಂತಕ್ಕೆ ಹೋಗಲು ಬಿಡಬಾರದಿತ್ತು. ತಕ್ಷಣ ಬಿಜೆಪಿಯವರ ಸಂಪರ್ಕದಲ್ಲಿರುವ ಕಾಂಗ್ರೆಸ್ ಶಾಸಕರನ್ನು ಸಂಪರ್ಕಿಸಿ ತಡೆಯೊಡ್ಡಿ ಎಂದು ಸೂಚನೆ ನೀಡಿದರು. ಆದಾದ ನಂತರ ಸಿದ್ದರಾಮಯ್ಯ ಅವರು ಸಚಿವರಾದ ಡಿ.ಕೆ. ಶಿವಕುಮಾರ್ ಹಾಗೂ ಜಮೀರ್ ಅಹಮದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ಖಂಡ್ರೆ ಜತೆಗೂಡಿ ಅತೃಪ್ತ ಶಾಸಕರ ಸಂಪರ್ಕ ಮಾಡಿ ಮನವೊಲಿಸಿ ವಾಪಸ್ ಕರೆಸುವ ಗಂಭೀರ ಪ್ರಯತ್ನ ಆರಂಭಿಸಿದರು.
ಮೊದಲಿಗೆ ಆನಂದ್‌ಸಿಂಗ್ ಅವರನ್ನು ಪತ್ತೆ ಹಚ್ಚಿದ ಡಿ.ಕೆ.ಶಿವಕುಮಾರ್ ಅವರ ಮೂಲಕವೇ ನಾಗೇಂದ್ರ ಅವರನ್ನು ಸಂಪರ್ಕಿಸಲು ಯತ್ನಿಸಿದರು. ಆದರೆ, ಆನಂದ್‌ಸಿಂಗ್ ವಾಪಸ್ ಕರೆಸುವಲ್ಲಿ ಯಶಸ್ವಿಯಾದರು. ನಂತರ ಜಮೀರ್ ಅಹಮದ್ ಮೂಲಕ ಭೀಮಾ ನಾಯಕ್ ಹಾಗೂ ಕಂಪ್ಲಿ ಗಣೇಶ್ ಅವರನ್ನು ಸಂಪರ್ಕಿಸಿ ಬೆಂಗಳೂರಿಗೆ ವಾಪಸ್ ಕರೆಸುವಲ್ಲಿಯೂ ಸಿದ್ದರಾಮಯ್ಯ ಸಫಲರಾದರು. ಜತೆಗೆ ಆನಂದ್‌ಸಿಂಗ್ ಮೂಲಕ ಬಿಜೆಪಿಯ ಕಾರ್ಯತಂತ್ರದ ಸಂಪೂರ್ಣ ಮಾಹಿತಿ ಪಡೆದು ಅದಕ್ಕೆ ತಿರುಗೇಟು ಕೊಡುವ ಪ್ರತಿತಂತ್ರ ರೂಪಿಸಿದರು.
ಈ ಮಧ್ಯೆ, ಬಸನಗೌಡ ದದ್ದಲ್, ಬಿ.ಸಿ.ಪಾಟೀಲ್, ಶಿವರಾಮ್ ಹೆಬ್ಟಾರ್, ಪ್ರತಾಪಗೌಡ ಪಾಟೀಲ್ ಅವರನ್ನೂ ಸಂಪರ್ಕಿಸಿದ “ಟ್ರಬಲ್ ಶೂಟರ್’ ಕಾಂಗ್ರೆಸ್ ಬಿಡುವುದಿಲ್ಲ, ನಾವೆಲ್ಲೂ ಹೋಗುವುದಿಲ್ಲ ಎಂದು ಅವರ ಕೈಯಿಂದಲೇ ಹೇಳಿಕೆ ಕೊಡಿಸಿತು. ಜತೆಗೆ, ಉಮೇಶ್ ಜಾಧವ್ ಹಾಗೂ ಕುಮಟಳ್ಳಿ ಸಹ, 18 ಶಾಸಕರು ನಮ್ಮ ಜತೆ ಬರುತ್ತಾರೆ ಎಂದು ನಮಗೆ ಹೇಳಿದಿರಿ, ಇಲ್ಲಿ ಐವರು ಬಿಟ್ಟರೆ ಇಲ್ಲ ಎಂದು ಜಗಳಕ್ಕೆ ಬಿದ್ದರು. ಇದಾದ ನಂತರವೇ ಬಿಜೆಪಿಗೆ ಆಪರೇಷನ್ ಕೈ ಕೊಡಲಿದೆ ಎಂಬ ಮುನ್ಸೂಚನೆ ದೊರೆಯಿತು ಎಂದು ಹೇಳಲಾಗಿದೆ.
ಶಾಸಕಾಂಗ ಪಕ್ಷದ ಸಭೆ ಬಳಿಕ ತೀರ್ಮಾನ ನಾಯಕರ ಮನವೊಲಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಲ್ಲೇ ಇರುತ್ತೇವೆ ಎಂದು ಹೇಳಿರುವ ಕಾಂಗ್ರೆಸ್ ಶಾಸಕರಲ್ಲಿ ನಾಲ್ವರಿಗೆ ಸಚಿವ ಸ್ಥಾನದ ಭರವಸೆ ನೀಡಿ ವಾಪಸ್ ಕರೆಸಲಾಗಿದೆ ಎನ್ನಲಾಗಿದೆ. ಆದರೆ, ನಿಮ್ಮನ್ನು ಸಚಿವರನ್ನಾಗಿ ಮಾಡುವುದಿಲ್ಲ. ಸುಮ್ಮನೆ ಆಸೆ ಹುಟ್ಟಿಸಿದ್ದಾರೆ. ಲೋಕಸಭೆ ಚುನಾವಣೆವರೆಗೂ ಹೀಗೇ ಮುಂದೂಡುತ್ತಾರೆ. ನಮ್ಮ ಜತೆ ಬನ್ನಿ ಎಂದು ಈಗಲೂ ಬಿಜೆಪಿ ನಾಯಕರು ಅತೃಪ್ತ ಕಾಂಗ್ರೆಸ್ ಶಾಸಕರ ಬೆನ್ನು ಬಿದ್ದಿದ್ದಾರೆ. ಹೀಗಾಗಿಯೇ ಶಾಸಕಾಂಗ ಪಕ್ಷದ ಸಭೆ ನಡೆಯಲಿ, ಆಮೇಲೆ ನೋಡೋಣ ಎಂದು ಹೇಳುತ್ತಿದ್ದಾರೆ ಎಂದು ಹೇಳಲಾಗಿದೆ.
ಮೊಮ್ಮಕ್ಕಳೊಂದಿಗೆ ಅಂಡಮಾನ್‌ಗೆ ಹೋಗಿದ್ದೆ, ಕೆಲವು ವಿಚಾರದಲ್ಲಿ ನನಗೆ ಬೇಸರ ಇದೆ. ಅದನ್ನು ಪಕ್ಷದ ವೇದಿಕೆಯಲ್ಲಿ ಹಿಂದೆಯೂ ಚರ್ಚೆ ಮಾಡಿದ್ದೆ, ಈಗಲೂ ಚರ್ಚೆ ಮಾಡುತ್ತೇನೆ. ಹಾಗಂತ ಪಕ್ಷ ಬಿಟ್ಟು ಹೋಗಲ್ಲ. ಬಿಜೆಪಿಯವರು ಕಾರ್ಯಕರ್ತರ ಮೂಲಕ ಸಂಪರ್ಕಿಸಿದ್ದರು. ಆದರೆ, ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ.
● ಶಿವರಾಮ್ ಹೆಬ್ಟಾರ್, ಯಲ್ಲಾಪುರ ಶಾಸಕ
ಶುಕ್ರವಾರವೂ ಕೋರ್ಟ್‌ಗೆ ಹಾಜ ರಾಗಬೇಕಿದೆ. ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗುವುದು ಸ್ವಲ್ಪ ಕಷ್ಟ ಇದೆ. ನೋಡಬೇಕು ಏನಾಗುತ್ತ ದೆಯೋ, ಆದರೆ, ನಾನು ಕಾಂಗ್ರೆಸ್ ಬಿಡುವುದಿಲ್ಲ. ಬಿಜೆಪಿಗೆ ಹೋಗುವುದಿಲ್ಲ.
● ನಾಗೇಂದ್ರ, ಬಳ್ಳಾರಿ ಗ್ರಾಮೀಣ ಶಾಸಕ
ನಾನು ಬೆಂಗಳೂರಿನಲ್ಲಿಯೇ ಇದ್ದೇನೆ. ನಾನು ಯಾವುದೇ ಆಪರೇಷನ್‌ಗೆ ಒಳಗಾಗುವುದಿಲ್ಲ. ಸರ್ಕಾರದ ಬಗ್ಗೆ ನಮ್ಮ ನಾಯಕರು ಹೇಳುತ್ತಾರೆ. ನಾನು ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗುತ್ತೇನೆ.
● ಆನಂದ್ ಸಿಂಗ್, ಹೊಸಪೇಟೆ ಶಾಸಕ
ಎಸ್.ಲಕ್ಷ್ಮೀ ನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಅವಿವಾಹಿತರಿಗೆ ಸಂಬಂಧ ಕೂಡಿಬರುವ ಸೂಚನೆ, ಆರೋಗ್ಯದ ಕಡೆಗೆ ಗಮನ ಇರಲಿ
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
Udupi: ಜಾಗ ಖರೀದಿಗೆ ಕರಾರು ಮಾಡಿಸಿ ವಂಚನೆ: ಪ್ರಕರಣ ದಾಖಲು
Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್?
Bangaluru; ವ್ಯಕ್ತಿ ಹೊಟ್ಟೆಯಿಂದ 50 ಟೂತ್‌ಬ್ರೆಷ್ ಹೊರತೆಗೆದ ವೈದ್ಯರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.