ಈಕೆ ಬ್ಯಾಡ್ಮಿಂಟನ್ ಕ್ಷೇತ್ರದ ಅಶ್ವಿನಿ ನಕ್ಷತ್ರ
Team Udayavani, Jan 19, 2019, 12:35 AM IST
ಅದೃಷ್ಟ ಕೆಲವು ಸಲ ಹಾಗೆ ಸುಮ್ಮನೇ ಬೆನ್ನಟ್ಟಿಕೊಂಡು ಬರುತ್ತವೆ. ಇನ್ನೂ ಕೆಲವು ಸಲ ಬೇಕೂ ಎಂದರೂ ಕೈಗೆಟುಕದೆ ಸತಾಯಿಸುತ್ತಿರುತ್ತದೆ. ನಮ್ಮ ಪ್ರಯತ್ನ ನಿರಂತರವಾಗಿದ್ದರೆ ಅದೃಷ್ಟಕ್ಕಾಗಿ ಪರಿತಪಿಸಬೇಕಾದ ಪ್ರಸಂಗವೇ ಬರುವುದಿಲ್ಲ. ಅದಕ್ಕೊಂದು ತಾಜಾ ಉದಾಹರಣೆ ಬೆಂಗಳೂರಿನ ಉದಯೋನ್ಮುಖ ಬ್ಯಾಡ್ಮಿಂಟನ್ ತಾರೆ ಅಶ್ವಿನಿ ಭಟ್.
ಅಶ್ವಿನಿ ಎಲ್ಲರಂತಲ್ಲ. ಕಿರಿಯ ವಯಸ್ಸಿಗೇ ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ಮಿಂಚಿನ ಸಂಚಲವನ್ನುಂಟು ಮಾಡಿದ ಪ್ರಚಂಡ ಪ್ರತಿಭೆ. ರಾಜ್ಯದ ಗಡಿ ದಾಟಿ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕಗಳಿಗೆ ಕೊರಳೊಡ್ಡಿದ ಸಾಧಕಿ. ಇದುವರೆಗೆ ರಾಜ್ಯ ಮಟ್ಟದಲ್ಲಿ 64 ಪದಕ. ರಾಷ್ಟ್ರೀಯ ಮಟ್ಟದಲ್ಲಿ 32 ಚಿನ್ನದ ಪದಕಗಳನ್ನು ಗೆದ್ದ ಪ್ರತಿಭಾವಂತೆ. ಕಿರಿಯರ ವಿಭಾಗದ ಅಂತಾರಾಷ್ಟ್ರೀಯ ಕೂಟದಲ್ಲೂ ಪಾಲ್ಗೊಂಡು ಭರವಸೆ ಮೂಡಿಸಿದ್ದಾರೆ. ಭವಿಷ್ಯದಲ್ಲಿ ಕಾಮನ್‌ವೆಲ್ತ್, ಏಷ್ಯನ್ ಗೇಮ್ಸ್ ಹಾಗೂ ಒಲಿಂಪಿಕ್ಸ್ ನಂತಹ ಮಹಾಕೂಟಗಳಲ್ಲಿ ಭಾಗವಹಿಸಬೇಕು ಎನ್ನುವುದು ಕನಸು ಕಾಣುತ್ತಿದ್ದಾರೆ. ವಿಶ್ವ ಮಟ್ಟದಲ್ಲಿ ಹೆಸರುಗಳಿಸಬೇಕು. ಸಾಧಕರ, ಕ್ರೀಡಾ ದಂತಕಥೆಗಳ ಸಾಲಿನಲ್ಲಿ ನನ್ನ ಹೆಸರೂ ಅಜರಾಮರವಾಗಿರಬೇಕು ಎನ್ನುವ ಸಾವಿರ ಕನಸುಗಳು ಅಶ್ವಿನಿ ಕಣ್ಣಲ್ಲೇ ಕಾಣುತ್ತದೆ. ಹಾಗಂತ ಅಶ್ವಿನಿ ಕೇವಲ ಕನಸುಗಳನ್ನೇ ಕಾಣುತ್ತಾ ಕುಳಿತಿಲ್ಲ. ಗುರಿ ಮುಟ್ಟುವುದಕ್ಕಾಗಿ ನಿರಂತರ ಪ್ರಯತ್ನ ನಡೆಸುತ್ತಲೇ ಇದ್ದಾರೆ. ದಿನನಿತ್ಯ ಹಲವು ಗಂಟೆಗಳ ಅಭ್ಯಾಸ, ಹಲವು ತ್ಯಾಗಗಳು ಅಶ್ವಿನಿಯನ್ನು ಇಂದು ಉನ್ನತ ಮಟ್ಟಕ್ಕೆ ಕೊಂಡೊಯ್ದಿದೆ. ಅಂತಹ ಸಾಧಕಿ ನಾಡಿನ ಯುವ ಜನತೆಗೆ ನಿಜವಾದ ಸ್ಫೂರ್ತಿ.
ಯಾರಿವರು ಅಶ್ವಿನಿ?
ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ವಯಸ್ಸು 18. ಸುಳ್ಯ ತಾಲೂಕಿನ ಐವರ್ನಾಡು ಎಂಬ ಪುಟ್ಟ ಊರಿನವರು. ಇವರ ತಂದೆ ಕೇಶವ ಭಟ್ ಉದ್ಯೋಗ ನಿಮಿತ್ತ ಬೆಂಗಳೂರು ಸೇರಿಕೊಂಡು ಹಲವು ವರ್ಷಗಳೇ ಸಂದಿವೆ. ಅಲ್ಲಿಂದ ಇಲ್ಲಿ ತನಕ ಅಶ್ವಿನಿಗೆ ಬೆಂಗಳೂರೇ ಸ್ವಂತ ಸೂರಾಗಿದೆ.
ಅಶ್ವಿನಿಗೊ ಬಾಲ್ಯದಿಂದಲೂ ಬ್ಯಾಡ್ಮಿಂಟನ್‌ನತ್ತ ಹೆಚ್ಚು ಆಸಕ್ತಿ. ಬ್ಯಾಡ್ಮಿಂಟನ್ ತುಂಬಾ ಶ್ರೀಮಂತರ ಆಟ, ವೆಚ್ಚವನ್ನು ಭರಿಸುವುದು ತುಂಬಾ ಕಷ್ಟ ಮಗು ಎನ್ನುವುದು ತಂದೆಯ ಮಾತಾಗಿತ್ತು. ಆದರೆ ಅಶ್ವಿನಿ ಯಾರ ಮಾತನ್ನೂ ಕೇಳಲಿಲ್ಲ. “ಅಪ್ಪ…ಕಲಿತರೆ ನಾನು ಬ್ಯಾಡ್ಮಿಂಟನ್ ಮಾತ್ರ’ ಎಂದು ಹಠ ಹಿಡಿದಳು. ಕೊನೆಗೂ ಕೇಶವ ಭಟ್ ಮಗಳ ಆಸೆಗೆ ಶರಣಾಗಲೇಬೇಕಾಯಿತು. ಬಳಿಕ ಮಗಳ ಸಾಧನೆಗೆ ಜತೆಯಾಗಿ ನಿಲ್ಲುವ ಸಂಕಲ್ಪ ಮಾಡಿದರು ತಂದೆ. ಅಂದಿನಿಂದ ಇಂದಿನ ತನಕ ಮಗಳು ನಡೆಯುವ ಪ್ರತಿ ಹೆಜ್ಜೆಗೂ ಅಪ್ಪ ಜತೆಯಾಗಿದ್ದಾರೆ.
ವೈದ್ಯಕೀಯ ವೃತ್ತಿಯನ್ನೇ ಬಿಟ್ಟ ಅಮ್ಮ!
ಮಗಳು ಆರಂಭದಲ್ಲೇ ಬ್ಯಾಡ್ಮಿಂಟನ್ ಕಲಿಕೆಗೆ ಮುಂದಾಗಿದ್ದಾಗ ಅಮ್ಮ ಡಾ.ಸುಧಾ ಅಷ್ಟೊಂದು ತಲೆಕೆಡಿಸಿಕೊಂಡಿರಲಿಲ್ಲ. ವೃತ್ತಿಪರ ವೈದ್ಯರಾಗಿದ್ದ ಅವರು ಆಗಷ್ಟೇ ಕ್ಲೀನಿಕ್‌ವೊಂದನ್ನು ಬೆಂಗಳೂರಿನಲ್ಲಿ ನಡೆಸುತ್ತಿದ್ದರು. ಯಾವಾಗ ಮಗಳು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮಿಂಚಲು ಶುರು ಮಾಡಿದರೂ ಆಗ ತಾಯಿ ಅತೀವ ಖುಷಿ ಪಟ್ಟರು. ಇನ್ನು ಕ್ಲೀನಿಕ್ ಬಿಟ್ಟು ಪೂರ್ಣ ಸಮಯ ಮಗಳ ಸಾಧನೆಗಾಗಿ ಮೀಸಲಿಡಲು ನಿರ್ಧರಿಸಿದರು. ವೈದ್ಯಕೀಯ ಕ್ಷೇತ್ರಕ್ಕೆ ಗುಡ್‌ಬೈ ಹೇಳಿದರು ಸುಧಾ. ಅಂದಿನಿಂದ ಇಂದಿನ ತನಕ ಮಗಳ ತಯಾರಿ, ಸಮಯಕ್ಕೆ ಸರಿಯಾಗಿ ಅಡುಗೆ ಮಾಡಿಕೊಡುವುದು, ತರಬೇತಿಗೆ ಕರೆದುಕೊಂಡು ಹೋಗುವುದು, ಕರೆದುಕೊಂಡು ಬರುವುದು. ಅಂತರ್ ರಾಜ್ಯ, ಅಂತಾರಾಷ್ಟ್ರೀಯ ಮಟ್ಟಕ್ಕೆ ಅಶ್ವಿನಿ ಹೊರಟು ನಿಂತಾಗ ಮಗಳ ಜತೆಯಾಗಿ ತಾನೂ ಹೋಗಿ ಮಗಳನ್ನು ಬೆಂಬಲಿಸುವುದು ಅಮ್ಮನ ನಿತ್ಯದ ಕೆಲಸವಾಗಿದೆ.
ರಾಷ್ಟ್ರೀಯ ಕೂಟ ಗುರಿ: 2007ರಿಂದ ಅಶ್ವಿನಿ ಬ್ಯಾಡ್ಮಿಂಟನ್ ಕಲಿಕೆ ಆರಂಭಿಸಿದರು. ಆರಂಭದಲ್ಲಿ ಬೆಂಗಳೂರಿನ ವೈಟ್ ಪಿಕಾಕ್ ಅಕಾಡೆಮಿಯಿಂದ ಬ್ಯಾಡ್ಮಿಂಟನ್ ತರಬೇತಿ ಆರಂಭಿಸಿದರು. ಇದಾದ ಬಳಿಕ ಕೋರಮಂಗಲದ ಎನ್‌ಜಿವಿ ಕ್ಲಬ್‌ನಲ್ಲಿ 5 ವರ್ಷದ ತರಬೇತಿ ಪಡೆದರು. 2018ರಿಂದ ಸ್ಕೈ ಫಿಂಚ್ ಅಕಾಡೆಮಿಯಲ್ಲಿ ಕೋಚ್ ವಿನೋದ್ ಕುಮಾರ್ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಫೆಬ್ರವರಿ 2ನೇ ವಾರದಲ್ಲಿ ಗುವಾಹಟಿಯಲ್ಲಿ ರಾಷ್ಟ್ರೀಯ ಹಿರಿಯರ ಬ್ಯಾಡ್ಮಿಂಟನ್ ಕೂಟ ನಡೆಯಲಿದೆ. ಇದಕ್ಕಾಗಿ ಅಶ್ವಿನಿ ಕಠಿಣ ತಯಾರಿ ನಡೆಸುತ್ತಿದ್ದಾರೆ. ಇವರಿಗೆ ಮಿಶ್ರ ಡಬಲ್ಸ್‌ನಲ್ಲಿ ಸಾಯಿ ಪ್ರತೀಕ್ ಹಾಗೂ ಮಹಿಳಾ ಡಬಲ್ಸ್‌ನಲ್ಲಿ ಧೃತಿ ಯತೀಶ್ ಜತೆಗಾರರಾಗಿದ್ದಾರೆ.
ರಾಜ್ಯದ ಪರ ಹಲವು ಪದಕ ಗೆದ್ದ ಅಶ್ವಿನಿ
2008ರಿಂದ ಅಶ್ವಿನಿ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದಾರೆ. ಅಂಡರ್- 10, 13, 15, 17, 19, ಸೀನಿಯರ್ ವಿಭಾಗಳಲ್ಲಿ ರಾಜ್ಯ ಕೂಟಗಳಲ್ಲಿ ಸ್ಪರ್ಧಿಸಿ ಒಟ್ಟಾರೆ ಸಿಂಗಲ್ಸ್, ಡಬಲ್ಸ್, ಮಿಶ್ರ ಡಬಲ್ಸ್‌ನಲ್ಲಿ ಒಟ್ಟಾರೆ 60ಕ್ಕೂ ಹೆಚ್ಚು ಪದಕ ಗೆದ್ದಿದ್ದಾರೆ. ರಾಷ್ಟ್ರೀಯ ಸಿಂಗಲ್ಸ್‌ನಲ್ಲಿ 6 ಚಿನ್ನದ ಪದಕ, 5 ಬೆಳ್ಳಿ ಪದಕ ಪಡೆದಿದ್ದಾರೆ. ಬಾಲಕಿಯರ ಡಬಲ್ಸ್‌ನಲ್ಲಿ 24 ಚಿನ್ನ, 8 ಬೆಳ್ಳಿ ಹಾಗೂ 1 ಕಂಚಿನ ಪದಕವನ್ನು ಕೊರಳಿಗೇರಿಸಿಕೊಂಡಿದ್ದಾರೆ. ಒಟ್ಟಾರೆ 32 ರಾಷ್ಟ್ರೀಯ ಚಿನ್ನದ ಪದಕವನ್ನು ಅಶ್ವಿನಿ ಗೆದ್ದಿರುವುದು ವಿಶೇಷ. ಏಷ್ಯನ್ ಕಿರಿಯರ ಚಾಂಪಿಯನ್‌ಶಿಪ್‌ನಲ್ಲಿ ಮೂರು ಸಲ ಭಾರತವನ್ನು ಪ್ರತಿನಿಧಿಸಿರುವ ಅವರು ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಎರಡು ಸಲ ಪಾಲ್ಗೊಂಡಿದ್ದಾರೆ.
ಹೇಮಂತ್ ಸಂಪಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.