“ಕನ್ನಡದ ಶಾಸ್ತ್ರೀಯ ಸ್ಥಾನ: ಲಾಭ ಪಡೆಯಲು ವಿಫಲ’
Team Udayavani, Jan 20, 2019, 1:00 AM IST
ಉಡುಪಿ: ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದರೂ ಅದರ ಲಾಭ ಪಡೆಯಲು ನಾವು ವಿಫಲರಾಗಿದ್ದೇವೆ ಎಂದು ತಾ| ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ| ಗಣನಾಥ ಎಕ್ಕಾರು ಹೇಳಿದರು.
ಶುಕ್ರವಾರ ಬ್ರಹ್ಮಗಿರಿ ಲಯನ್ಸ್ ಭವನದಲ್ಲಿ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರೊಂದಿಗೆ ನಡೆದ ಸಂವಾದದಲ್ಲಿ ಪಾಲ್ಗೊಂಡ ಅವರು, ಆಡಳಿತಾರೂಢರ ಈ ವೈಫಲ್ಯದ ಬಗೆಗೆ ಕನ್ನಡ ಸಾಹಿತ್ಯ ಪರಿಷತ್ತಿನವರು ಪ್ರಶ್ನಿಸಬೇಕು ಎಂದರು.
ಸಾಹಿತ್ಯ, ಸಂಸ್ಕೃತಿ ಕಡೆಗೆ ವಿದ್ಯಾರ್ಥಿಗಳನ್ನು ಆಕರ್ಷಿಸುವ ಪ್ರಯತ್ನಗಳಾಗಬೇಕು ಎಂದು ಡಾ| ಎಕ್ಕಾರು ಅಭಿಪ್ರಾಯಪಟ್ಟರು.
ರಂಗ- ಚಲನಚಿತ್ರ ಕಲಾವಿದೆ ಪ್ರತಿಮಾ ನಾಯಕ್, ಪ್ರಾಂಶುಪಾಲ ಅರುಣಪ್ರಕಾಶ ಶೆಟ್ಟಿ, ಎನ್‌ಎಸ್‌ಎಸ್ ಘಟಕದ ಎಂ.ಸಿ. ಕುಸುಮಾದೇವಿ, ಸಂಶೋಧಕ ಡಾ| ರಾಮಕೃಷ್ಣ ಭಟ್, ಉಪನ್ಯಾಸಕ ರಮಾನಂದ ರಾವ್ ಸಂವಾದವನ್ನು ನಡೆಸಿಕೊಟ್ಟರು. ಸಾಹಿತಿ ಅಂಶುಮಾಲಿ ನಿರ್ವಹಿ ಸಿದರು. ಪೂರ್ಣಿಮಾ ಜನಾರ್ದನ ಕೊಡವೂರು ವಂದಿಸಿದರು.
ಕವಿಗೋಷ್ಠಿ
ಉಪನ್ಯಾಸಕಿ ಡಾ| ಕಾತ್ಯಾಯಿನಿ ಕುಂಜಿಬೆಟ್ಟು ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಪಣಿಯಾಡಿ ರಾಜೇಶ ಭಟ್, ಸುಹಾನ್ ಸಾಸ್ತಾನ, ಸಣ್ಣಕ್ಕಿಬೆಟ್ಟು ರವೀಂದ್ರ ನಾಯಕ್, ವಿಷ್ಣು ಭಟ್ ಹೊಸಮನೆ, ಶಿಲ್ಪಾ ಜೋಷಿ, ರತ್ನಾವತಿ, ಪತ್ರಕರ್ತೆ ಪ್ರೇಮಾ, ಸಂಗೀತ ಜಾನ್ಸನ್ ಅವರು ಕವನಾ ವಾಚಿಸಿದರು. ಪತ್ರಕರ್ತ ದೀಪಕ್ ಜೈನ್, ರೈತ ಸಾಹಿತಿ ಕುರುವತ್ತಿ ಗೌಡ ನಿರ್ವಹಿಸಿದರು. ಡಾ| ಸುಚರಿತಾ ರಾಜೇಂದ್ರ ವಂದಿಸಿದರು. ಡಾ| ಗಣನಾಥ ಎಕ್ಕಾರು ಉಪಸ್ಥಿತರಿದ್ದರು.