ರೆಸಾರ್ಟ್ ವಾಸ ಅಂತ್ಯ;ಶಾಸಕರ ಬರ ಸೆಳೆತ
Team Udayavani, Jan 20, 2019, 1:10 AM IST
ಬೆಂಗಳೂರು: ಶಾಸಕರ ರೆಸಾರ್ಟ್ ವಾಸ್ತವ್ಯದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿ
ದ್ದಂತೆ ಎಚ್ಚೆತ್ತುಕೊಂಡ ಬಿಜೆಪಿ ಮತ್ತು ಕಾಂಗ್ರೆಸ್‌ನ ಶಾಸಕರು “ಬರ’ಪೀಡಿತ ಪ್ರದೇಶಗಳತ್ತ ಮುಖ ಮಾಡಿದ್ದಾರೆ.
ಗುರುಗ್ರಾಮದಲ್ಲಿದ್ದ ಶಾಸಕರನ್ನು ವಾಪಸ್ ಕರೆಸಿ ಬರಪೀಡಿತ ಪ್ರದೇಶಗಳಿಗೆ ತೆರಳುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದ ಬೆನ್ನಲ್ಲೇ ಕಾಂಗ್ರೆಸ್ ಸಹ ತಮ್ಮ ಶಾಸಕರಿಗೆ ಬರಪೀಡಿತ ಪ್ರದೇಶಗಳಿಗೆ ತೆರಳುವಂತೆ ನಿರ್ದೇಶನ ನೀಡಿದೆ. ಈ ಮೂಲಕ ಬರ ಪೀಡಿತ ಪ್ರದೇಶಗಳಿಗೂ ಪೈಪೋಟಿ ಮೇಲೆ ಪ್ರವಾಸ ಶುರು ಮಾಡಲು ಎರಡೂ ಪಕ್ಷಗಳು ಮುಂದಾಗಿವೆ.
ಗುರುಗ್ರಾಮದಿಂದ ಬಿಜೆಪಿ ಶಾಸಕರಿಗೆ ಶನಿವಾರ ಬಿಡುಗಡೆ ಭಾಗ್ಯ ದೊರೆತಿದ್ದು, ರವಿವಾರ ಕಾಂಗ್ರೆಸ್ ಶಾಸಕರಿಗೆ ಈಗಲ್‌ಟನ್ ರೆಸಾರ್ಟ್‌ನಿಂದ ಬಿಡುಗಡೆ ಭಾಗ್ಯ ದೊರೆಯಲಿದೆ.
ಕಾಂಗ್ರೆಸ್ ಶಾಸಕ ಪಕ್ಷ ನಾಯಕ ಸಿದ್ದರಾಮಯ್ಯ ಅವರು ಶನಿವಾರ ರಾತ್ರಿ ನಡೆದ ಸಭೆಯಲ್ಲಿ, ಕಾಂಗ್ರೆಸ್ ಶಾಸಕರಿಗೆ ತಮ್ಮ ತಮ್ಮ ಕ್ಷೇತ್ರಗಳಿಗೆ ತೆರಳಲು ಸೂಚನೆ ನೀಡಿದರು. ಬಿಜೆಪಿ ಶಾಸಕರು ಬರಪೀಡಿತ ಪ್ರದೇಶಗಳಿಗೆ ಬರುವ ಮೊದಲೇ ಕಾಂಗ್ರೆಸ್ ಶಾಸಕರು ಅಲ್ಲಿರಬೇಕು ಎಂದು ತಾಕೀತು ಮಾಡಿದರು. ಹೀಗಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಶಾಸಕರು ಪೈಪೋಟಿಯಲ್ಲಿ ಸೋಮ ವಾರದಿಂದ ಬರಪೀಡಿತ ಪ್ರದೇಶಗಳಿಗೆ ತೆರಳಲಿದ್ದಾರೆ.
ಬಿಜೆಪಿ ಶಾಸಕರು ಹೊರಗೆ ಬಂದರೆ ಆಪರೇಷನ್ ಹಸ್ತ-ತೆನೆ ಮಾಡಲು ಕಾಂಗ್ರೆಸ್ ನಾಯಕರು ಕಾಯುತ್ತಿದ್ದರೆ, ಕಾಂಗ್ರೆಸ್ ಶಾಸಕರು ಹೊರಬಂದರೆ ಆಪರೇಷನ್ ಕಮಲ ಖೆಡ್ಡಾಗೆ ಕೆಡವಲು ಬಿಜೆಪಿ ನಾಯಕರು ತೆರೆಮರೆಯಲ್ಲಿ ಕಾರ್ಯತಂತ್ರದಲ್ಲಿ ತೊಡಗಿದ್ದಾರೆ. ಹೀಗಾಗಿ ರೆಸಾರ್ಟ್ ನಿಂದ ಹೊರಬಂದ ಮೇಲೆ ಏನಾಗುತ್ತದೆ ಎಂಬುದು ಕುತೂಹಲ ಮೂಡಿಸಿದೆ.
ಆತಂಕ ದೂರವಾಗಿಲ್ಲ
ಆಪರೇಷನ್ ಕಮಲ ಆತಂಕ ಇನ್ನೂ ಕಾಂಗ್ರೆಸ್‌ಗೆ ದೂರವಾಗಿಲ್ಲ. ಹೀಗಾಗಿ ಎಲ್ಲ ಶಾಸಕರ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಆಪರೇಷನ್ ಕಮಲ ಭೀತಿ ಎಷ್ಟಿದೆ ಎಂಬುದಕ್ಕೆ ಸಾಕ್ಷಿ ಎಂಬಂತೆ ಸಚಿವ ಡಿ.ಕೆ. ಶಿವಕುಮಾರ್ ಅವರು ಶನಿವಾರ ವಿಧಾನಸೌಧದಲ್ಲಿ ಸಭೆ ನಡೆಸಲು ಅತೃಪ್ತ ಶಾಸಕರಾದ ಭೀಮಾ ನಾಯಕ್, ಗಣೇಶ್, ಆನಂದ ಸಿಂಗ್ ಅವರನ್ನು ಕರೆತಂದಿದ್ದರು. ಬಳ್ಳಾರಿ ಜಿಲ್ಲೆಯ ವಿಚಾರಕ್ಕೆ ಸಂಬಂಧಿಸಿದ ಸಭೆ ಇದೆ. ಅದಕ್ಕೆ ಶಾಸಕರ ಜತೆ ಬಂದಿದ್ದೇನೆ ಎಂಬ ಸಮಜಾಯಿಷಿ ನೀಡಿದರು.
ಮತ್ತೂಂದೆಡೆ ಕೆ.ಸಿ. ವೇಣುಗೋಪಾಲ್ ಹಿರಿಯ ನಾಯಕರ ಸಭೆ ನಡೆಸಿ, ಆಪರೇಷನ್ ಕಮಲ ಕಾರ್ಯಾಚರಣೆಯಡಿ ಬಿಜೆಪಿಯ ಗುರಿ ತಲುಪಲು ನಾವು ಬಿಡಬಾರದು. ಅಸಮಾಧಾನಿತರ ಮನವೊಲಿಸಿ ಅವರ ಬೇಡಿಕೆ ಈಡೇರಿಸೋಣ. ಇದಕ್ಕಾಗಿ ಕೆಲವರು ತ್ಯಾಗ ಮಾಡಬೇಕಾಗಬಹುದು ಎಂದು ತಿಳಿಸಿದರು. ಮುಂಬಯಿಯಲ್ಲಿರುವ ನಾಲ್ವರು ಶಾಸಕರ ಪೈಕಿ ರಮೇಶ ಜಾರಕಿಹೊಳಿ ಹೊರತುಪಡಿಸಿ ಉಳಿದ ಮೂವರು ಶಾಸಕರನ್ನು ಸಂಪರ್ಕಿಸಿ ವಾಪಸ್ ಕರೆತರಲು ನಿರ್ಧರಿಸಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರು ಮೂವರ ಜತೆಯೂ ಚರ್ಚಿಸಿದ್ದು ಪೂರಕ ಸ್ಪಂದನೆ ದೊರೆತಿದೆ ಎಂದು ಹೇಳಲಾಗಿದೆ.
ಆಮಿಷಗಳಿಗೆ ಬಲಿಯಾಗಬೇಡಿ
ಈಗಲ್‌ಟನ್ ರೆಸಾರ್ಟ್‌ನಲ್ಲಿ ಶನಿವಾರ ರಾತ್ರಿ ಶಾಸಕರ ಜತೆ ಸಭೆ ನಡೆಸಿದ ಉಪ ಮುಖ್ಯಮಂತ್ರಿ ಡಾ| ಜಿ. ಪರಮೇಶ್ವರ್, ಶಾಸಕಾಂಗ ಪಕ್ಷದ ಅಧ್ಯಕ್ಷ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವ ಡಿ.ಕೆ. ಶಿವ ಕುಮಾರ್ ಅವರು, ಬಿಜೆಪಿಯ ಆಮಿಷಗಳಿಗೆ ಬಲಿಯಾಗಬೇಡಿ ನಿಮಗೆ ಒಳ್ಳೆಯ ಭವಿಷ್ಯವಿದೆ ಎಂದು ನೀತಿ ಪಾಠ ಹೇಳಿದರು.
ಬಿಜೆಪಿ ಸಂಪರ್ಕದಲ್ಲಿದ್ದಾರೆ ಎನ್ನಲಾದ ಶಾಸಕರ ಜತೆಯೂ ನೇರಾನೇರ ಚರ್ಚೆ ನಡೆಸಿ ಪಕ್ಷ ಬಿಡುವುದಿಲ್ಲ ಎಂಬ ಭರವಸೆ ಪಡೆದರು. ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ರವಿವಾರ ಮತ್ತೂಮ್ಮೆ ಶಾಸಕರ ಜತೆ ಲೋಕಸಭೆ ಚುನಾವಣೆ ಹಾಗೂ ಬಜೆಟ್ ಕುರಿತು ಚರ್ಚಿಸಲಿದ್ದಾರೆ ಎಂದು ಹೇಳಲಾಗಿದೆ.
ಶನಿವಾರ ಅಪರಾಹ್ನ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ ಎಂದು ಹೇಳಿ ಸಂಜೆಯಾದರೂ ಸಭೆ ಆರಂಭಿಸದ್ದಕ್ಕೆ ರೆಸಾರ್ಟ್‌ನಲ್ಲಿದ್ದ ಕೆಲವು ಶಾಸಕರು ಆಕ್ಷೇಪ ವ್ಯಕ್ತಪಡಿಸಿ ಗರಂ ಆದರು.
ಆಪರೇಷನ್ ಹಸ್ತಕ್ಕೆ ತಂತ್ರ, ಡಿಕೆಶಿ-ಜಮೀರ್‌ಗೆ ಹೊಣೆ
ಆಪರೇಷನ್ ಕಮಲಕ್ಕೆ ಪ್ರತಿತಂತ್ರ ರೂಪಿಸಿ ತಿರುಗೇಟು ನೀಡಲು ಕಾಂಗ್ರೆಸ್ ತೀರ್ಮಾನಿಸಿದೆ. ಬಿಜೆಪಿಯ ನಾಲ್ವರು ಶಾಸಕರನ್ನು ಸೆಳೆಯಲು ಕಾರ್ಯತಂತ್ರ ರೂಪಿಸಲಾಗಿದೆ. ಆ ಪೈಕಿ ಬೆಂಗಳೂರಿನ ಓರ್ವರು, ಚಿತ್ರದುರ್ಗದ ಇಬ್ಬರು, ಕಲಬುರಗಿಯ ಒಬ್ಬರು ಸೇರಿದ್ದಾರೆ. ಇಬ್ಬರಿಗೆ ಸಚಿವಗಿರಿಯ ಆಫರ್ ಸಹ ನೀಡಲಾಗಿದೆ. ಶಾಸಕರನ್ನು ಸೆಳೆಯುವ ಹೊಣೆಗಾರಿಕೆ ಸಚಿವರಾದ ಡಿಕೆಶಿ ಹಾಗೂ ಜಮೀರ್‌ಗೆ ನೀಡಲಾಗಿದೆ. ಈಗಾಗಲೇ ಅವರು ಬಿಜೆಪಿ ಶಾಸಕರ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗಿದೆ. ವಿ.ಸೋಮಣ್ಣ, ಗೂಳಿಹಟ್ಟಿ ಶೇಖರ್, ಪೂರ್ಣಿಮಾ ಶ್ರೀನಿವಾಸ್, ಸುಭಾಷ್ ಗುತ್ತೇದಾರ್, ಶಿವನಗೌಡ ನಾಯಕ್ ಹೆಸರು ಪ್ರಮುಖವಾಗಿದೆ.
ರೆಸಾರ್ಟ್ ವಾಸಕ್ಕೆ ಆಕ್ರೋಶ
ಕಾಂಗ್ರೆಸ್ ಶಾಸಕರು ಈಗಲ್‌ಟನ್ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿರುವ ಬಗ್ಗೆ ಆಕ್ಷೇಪ ವ್ಯಕ್ತವಾಗಿದ್ದು, ಮಿತ್ರ ಪಕ್ಷ ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ ಸಹ ಬೇಸರ ವ್ಯಕ್ತಪಡಿಸಿದ್ದಾರೆ. ರೆಸಾರ್ಟ್‌ನವರು ಸರಕಾರಿ ಭೂಮಿ ಒತ್ತುವರಿ ಮಾಡಿಕೊಂಡ ಆರೋಪ ಇದ್ದು 982 ಕೋಟಿ ರೂ. ದಂಡ ಸಹ ಪಾವತಿಸಬೇಕಾಗಿದೆ. ಅಂತಹ ರೆಸಾರ್ಟ್ ನಲ್ಲಿ ಹೋಗಿ ಶಾಸಕರು ಇರುವುದು ಸರಿಯಲ್ಲ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಶಿ., ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಈಗಲ್‌ಟನ್ ರೆಸಾರ್ಟ್ ಒತ್ತುವರಿ ಪತ್ತೆ ಮಾಡಿಲ್ಲ. ನಮ್ಮ ಸರಕಾರವೇ ಪತ್ತೆ ಮಾಡಿದೆ. ಸದ್ಯ ಪ್ರಕರಣ ಕೋರ್ಟ್‌ನಲ್ಲಿದೆ ಎಂದಿದ್ದಾರೆ.
ರಮೇಶ್, ಕುಮಟಳ್ಳಿಗೆ ನೋಟಿಸ್
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಗೈರು ಹಾಜರಾದ ರಮೇಶ್ ಜಾರಕಿಹೊಳಿ ಮತ್ತು ಮಹೇಶ್ ಕುಮಟಳ್ಳಿ ಅವರಿಗೆ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೋಟಿಸ್ ಜಾರಿ ಮಾಡಿದ್ದು, ನಿಮ್ಮನ್ನು ವಿಧಾನಸಭಾ ಸದಸ್ಯತ್ವದಿಂದ ಅನರ್ಹಗೊಳಿಸಲು ಯಾಕೆ ಕ್ರಮ ಜರಗಿಸಬಾರದು ಎಂದು ಪ್ರಶ್ನಿಸಿದ್ದಾರೆ. ಪತ್ರ ತಲುಪಿದ ಕೂಡಲೇ ಉತ್ತರ ನೀಡಬೇಕು. ತಪ್ಪಿದಲ್ಲಿ ಕ್ರಮ ಕೈಗೊಳ್ಳ ಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಸೋಮವಾರದಿಂದ ಬರಪೀಡಿತ ಪ್ರದೇಶಗಳಿಗೆ ಬಿಜೆಪಿ ಶಾಸಕರು ಪ್ರವಾಸ ಕೈಗೊಳ್ಳಲಿದ್ದಾರೆ. ನಾನು ಮಂಗಳವಾರ ಚಾಮರಾಜನಗರ-ಮೈಸೂರು ಜಿಲ್ಲೆಗಳಲ್ಲಿ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಭೆ ನಡೆಸುತ್ತೇನೆ.
– ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ
ರಾಜ್ಯ ಸರಕಾರವನ್ನು ಅಸ್ಥಿರ ಗೊಳಿಸು ವುದಿಲ್ಲ. ವಿಪಕ್ಷವಾಗಿ ಕೆಲಸ ನಿರ್ವಹಿಸುತ್ತೇವೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೆ ಭಯ ಬೇಡ ಎಂದಿರುವ ಬಿ.ಎಸ್.ಯಡಿಯೂರಪ್ಪ ನುಡಿದಂತೆ ನಡೆಯಲಿ.
ಸಿದ್ದರಾಮಯ್ಯ, ಮಾಜಿ ಸಿಎಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.