ರಾಜೇಂದ್ರ ಕುಮಾರ್ ಸಹಕಾರ ಕ್ಷೇತ್ರಕ್ಕೆ ಭೂಷಣ: ಡಾ| ಹೆಗ್ಗಡೆ
Team Udayavani, Jan 20, 2019, 3:53 AM IST
ಮಂಗಳೂರು: “ವಿನೂತನ ಯೋಜನೆಗಳಿಂದ ಸಹಕಾರ ಕ್ಷೇತ್ರಕ್ಕೆ ನವಚೈತನ್ಯ ತುಂಬುವ ಮೂಲಕ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಅನನ್ಯತೆ ತಂದುಕೊಟ್ಟಿರುವ ಸಹಕಾರ ರತ್ನ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಅವರು ಸಹಕಾರ ಕ್ಷೇತಕ್ಕೆ ಭೂಷಣ’ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಡಾ| ಎಂ.ಎನ್. ರಾಜೇಂದ್ರ ಕುಮಾರ್ ಅವರು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ (ಎಸ್‌ಸಿಡಿಸಿಸಿ) ಬ್ಯಾಂಕ್ ಅಧ್ಯಕ್ಷರಾಗಿ 25 ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಎಂ.ಎನ್. ರಾಜೇಂದ್ರ ಕುಮಾರ್ ಅಭಿನಂದನ ಸಮಿತಿ ನಗರದ ನೆಹರೂ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ “ರಜತ ಸಂಭ್ರಮ’ ಹಾಗೂ ನವೋದಯ ಸ್ವ-ಸಹಾಯ ಸಂಘಗಳ “ವಿಂಶತಿ’ ಸಮಾವೇಶ ಉದ್ದೇಶಿಸಿ ಅವರು ಮಾತನಾಡಿದರು. ದ.ಕ. ಜಿಲ್ಲೆಯಲ್ಲಿ ಅನೇಕ ಹಿರಿಯರು ಕಟ್ಟಿ ಬೆಳೆಸಿದ ಸಹಕಾರ ಕ್ಷೇತ್ರವನ್ನು ಡಾ| ರಾಜೇಂದ್ರ ಕುಮಾರ್ ಜೋಪಾನವಾಗಿ ಸಂರಕ್ಷಿಸುತ್ತಾ ಪ್ರತಿ ಸಹಕಾರ ಸಂಸ್ಥೆಗೂ ಶಕ್ತಿ ನೀಡಿದವರು. ಇದರಿಂದಾಗಿ ಜಿಲ್ಲೆಯ ಸಹಕಾರ ಕ್ಷೇತ್ರವು ರಾಜ್ಯ ಮತ್ತು ರಾಷ್ಟ್ರದ ಸಹಕಾರ ಸಂಸ್ಥೆಗಳಿಗೆ ಮಾದರಿಯಾಗಿ ಬೆಳೆದು ನಿಂತಿದೆ ಎಂದರು.
“ರಾಜೇಂದ್ರ ಕುಮಾರ್ ಅವರ ಸಾಧನೆ ಮತ್ತು ಬೆಳವಣಿಗೆ ನನಗೆ ಸಂತಸ ತಂದಿದೆ. ಇಂದು ಅಪಾರ ಸಂಖ್ಯೆಯಲ್ಲಿ ಸಹಕಾರಿ ಬಂಧುಗಳು ಹಾಗೂ ನವೋ ದಯ ಸ್ವ-ಸಹಾಯ ಸಂಘಗಳು ಸೇರಿ ವ್ಯಕ್ತಪಡಿಸಿರುವ ಈ ಅಭಿಮಾನ ಮತ್ತು ಗೌರವ ಡಾ| ರಾಜೇಂದ್ರ ಕುಮಾರ್ ಅವರ ಹೊಣೆಗಾರಿಕೆಯನ್ನು ಇನ್ನಷ್ಟು ಹೆಚ್ಚಿಸಿದೆ. ಅವರಿಂದ ಸಹಕಾರ ಕ್ಷೇತ್ರಕ್ಕೆ ಇನ್ನಷ್ಟು ಸೇವೆ ಲಭಿಸಲಿ’ ಎಂದರು.
ಪರಿವರ್ತನೆಗೆ ಹೊಸ ದಿಕ್ಕು: ಡಿ.ವಿ.
ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಮಾತನಾಡಿ, ಡಾ| ರಾಜೇಂದ್ರ ಕುಮಾರ್ ಸತತ 25 ವರ್ಷಗಳ ಕಾಲ
ಎಸ್‌ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷರಾಗಿ ಹೊಸ ದಾಖಲೆ ಜತೆಗೆ ಬ್ಯಾಂಕನ್ನು ಉನ್ನತ ಸ್ಥಾನಕ್ಕೇರಿಸಿದ್ದಾರೆ. ಪರಿವರ್ತನೆಗಳಿಗೆ ವೇಗ ನೀಡಿ ಸಹಕಾರ ಕ್ಷೇತ್ರವನ್ನು ಹೊಸ ದಿಕ್ಕಿನೆಡೆಗೆ ಕೊಂಡೊಯ್ದ ಸಾಧಕರು ಅವರು ಎಂದು ಬಣ್ಣಿಸಿದರು.
ಐತಿಹಾಸಿಕ: ಕಾಶೆಂಪುರ
ರಜತ ಸಂಭ್ರಮ ರಾಜ್ಯದಲ್ಲೇ ಐತಿಹಾಸಿಕ ಕಾರ್ಯಕ್ರಮವಾಗಿ ಮೂಡಿಬಂದಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ ಹೇಳಿದರು. ಎಸ್‌ಸಿಡಿಸಿಸಿ ಬ್ಯಾಂಕ್ ರಾಜ್ಯದಲ್ಲೇ ಮುಂಚೂಣಿಯಲ್ಲಿದೆ. ಸಹಕಾರ ಕ್ಷೇತ್ರದಲ್ಲಿ ಇಲ್ಲಿ ಆಗಿರುವ ಪ್ರಗತಿಯ ಬಗ್ಗೆ ಜಿಲ್ಲೆಯ ತಜ್ಞರು, ಉತ್ತರ ಕರ್ನಾಟಕ ಭಾಗಕ್ಕೂ ಮಾರ್ಗದರ್ಶನ ನೀಡಬೇಕೆಂದು ಕೋರಿದರು.
ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತ ನಾಡಿ, ಸಹಕಾರ ಕ್ಷೇತ್ರದ ಮೊಳಹಳ್ಳಿ ಶಿವರಾಯರು, ಬಂಟ್ವಾಳ ನಾರಾಯಣ ನಾಯಕ್ ದೊಡ್ಡ ಸಾಧಕರಾಗಿ ಗುರುತಿಸಿಕೊಂಡಿದ್ದಾರೆ. ಇನ್ನು ಮುಂದೆ ಅವರ ಸಾಲಿನಲ್ಲಿ ಡಾ| ರಾಜೇಂದ್ರ ಕುಮಾರ್ ಹೆಸರು ಕೂಡಾ ಚಿರಸ್ಥಾಯಿಯಾಗಲಿದೆ ಎಂದರು.
ಸಂಸದ ನಳಿನ್ ಕುಮಾರ್ ಕಟೀಲು ಅವರು ರಾಜೇಂದ್ರ ಕುಮಾರ್ ಹೃದಯ ಶ್ರೀಮಂತಿಕೆಯಲ್ಲೂ ಎತ್ತಿದ ಕೈ ಎಂದು ಅಭಿನಂದಿಸಿದರು. ಇಲ್ಲಿಯವರೆಗೆ ರಾಜಕೀಯ ಇಲ್ಲ “ನಾನು ಯಾವತ್ತೂ ರಾಜಕೀಯ ಉದ್ದೇಶದಿಂದ ನವೋದಯ, ಎಸ್‌ಸಿಡಿಸಿಸಿ ಬ್ಯಾಂಕ್ ಶಾಖೆಗಳನ್ನು ಸ್ಥಾಪಿಸಲಿಲ್ಲ. ಸಮಾಜಮುಖೀ ಕಾರ್ಯದ ಉದ್ದೇಶವಿರಿಸಿ ಈ ಕಾರ್ಯ ನಡೆಸಿದ್ದೇನೆ. ಈ ಕ್ಷಣದವರೆಗೂ ರಾಜಕೀಯ ಉದ್ದೇಶ ನನ್ನಲ್ಲಿಲ್ಲ. ಮುಂದೆ ಏನು ಎಂಬುದು ನನಗೆ ಗೊತ್ತಿಲ್ಲ’ ಎಂದು ಡಾ| ರಾಜೇಂದ್ರ ಕುಮಾರ್ ಹೇಳಿದರು.
ಕರಾವಳಿಯ ರೈತರು ಸಶಕ್ತರು
ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣ ನಡೆಯುತ್ತಿದ್ದಾಗ ದ.ಕ., ಉಡುಪಿ ಸೇರಿದಂತೆ ಕರಾವಳಿ ಭಾಗದಲ್ಲಿ ಯಾರೂ
ಕೂಡ ಕೆಟ್ಟ ಕೃತ್ಯಕ್ಕೆ ಮುಂದಾಗಲಿಲ್ಲ. ರೈತರ ಸಾಲ ಮರುಪಾವತಿಯಲ್ಲಿಯೂ ಕರಾವಳಿ ಜಿಲ್ಲೆ ಶೇ. 100ರ ಸಾಧನೆ ಮಾಡಿರುವುದನ್ನು ಗಮನಿಸಿದಾಗ ನಾವು ಸಶಕ್ತರು ಎಂಬುದನ್ನು ರಾಜ್ಯಕ್ಕೆ ತೋರಿಸಿಕೊಟ್ಟಂತೆ ಎಂದು ತಿಳಿಸಿದರು.
ಅಭಿನಂದನ ಸಮಿತಿ ಅಧ್ಯಕ್ಷ ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು ಸ್ವಾಗತ ಮಾಡಿ, ನಿರಂತರ 25 ವರ್ಷಗಳ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕೊಂದರ ಅಧ್ಯಕ್ಷ ರಾಗಿ ರಾಜೇಂದ್ರ ಕುಮಾರ್ ಅವರ ಈ ಸೇವೆಯು ಸಹಕಾರ ಕ್ಷೇತ್ರದಲ್ಲಿ ದಾಖಲೆಯಾಗಿದೆ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕನ್ನು ಉತ್ತುಂಗದೆಡೆಗೆ ಕೊಂಡೊಯ್ಯುವಲ್ಲಿ ಅವರ ಪಾತ್ರ ಹಾಗೂ ನೇತೃತ್ವ ಮಹತ್ವದ್ದು ಎಂದರು.
ರಾಜ್ಯ ಸರಕಾರದ “ಬಡವರ ಬಂಧು’ ಯೋಜನೆಯಡಿ ಫಲಾನುಭವಿಗಳಿಗೆ ಇಕೋ ವಾಹನದ ಕೀಲಿಕೈ ಸಚಿವ ಯು.ಟಿ. ಖಾದರ್ ವಿತರಿಸಿದರು.ವಿಧಾನ ಪರಿಷತ್ ಉಪ ಸಭಾಪತಿ ಎಸ್.ಎಲ್. ಧರ್ಮೇಗೌಡ, ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್. ಭೋಜೆಗೌಡ, ಹರೀಶ್ ಕುಮಾರ್, ಮಾಜಿ ಸಚಿವರಾದ ಬಿ. ರಮಾನಾಥ ರೈ, ಕೆ. ಅಮರನಾಥ ಶೆಟ್ಟಿ, ಅಭಯ ಚಂದ್ರ ಜೈನ್, ಬಿ. ನಾಗರಾಜ ಶೆಟ್ಟಿ, ವಿನಯ ಕುಮಾರ್ ಸೊರಕೆ, ಕೃಷ್ಣ ಜೆ. ಪಾಲೆಮಾರ್, ಮೇಯರ್ ಭಾಸ್ಕರ್ ಕೆ., ರಾಜ್ಯಸಭಾ ಮಾಜಿ ಸದಸ್ಯ ಬಿ. ಇಬ್ರಾಹಿಂ, ಮಾಜಿ ಶಾಸಕರಾದ ಗೋಪಾಲ ಪೂಜಾರಿ, ಮೊದಿನ್ ಬಾವಾ, ಶಕುಂತಳಾ ಶೆಟ್ಟಿ, ಕೆ. ಗೋಪಾಲ ಭಂಡಾರಿ, ಮೀನುಗಾರಿಕಾ ಮಾರಾಟ ಮಹಾಮಂಡಳದ ಅಧ್ಯಕ್ಷ ಯಶಪಾಲ್ ಸುವರ್ಣ, ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣ, ಯುಪಿಸಿಎಲ್ ಜಂಟಿ ಅಧ್ಯಕ್ಷ ಕಿಶೋರ್ ಆಳ್ವ, ಗಣ್ಯರಾದ ಎ.ಜಿ. ಕೊಡ್ಗಿ, ಮೋನಪ್ಪ ಭಂಡಾರಿ ಅತಿಥಿಗಳಾಗಿದ್ದರು. ಡಾ| ರಾಜೇಂದ್ರ ಕುಮಾರ್ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು. ಸಮಿತಿ ಕಾರ್ಯಾಧ್ಯಕ್ಷ ಶಶಿ ಕುಮಾರ್ ರೈ ವಂದಿಸಿದರು. ಮನೋಹರ ಪ್ರಸಾದ್, ರಾಜೇಶ್ ಕೆ.ಸಿ. ನಿರೂಪಿಸಿದರು.
ಜೀವನದ ಮಹತ್ವದ ದಿನ: ಡಾ| ಎಂ.ಎನ್.ಆರ್
“ಸಹಕಾರ ಭೂಷಣ’ ಗೌರವ ಸ್ವಿಕರಿಸಿದ ಡಾ| ರಾಜೇಂದ್ರ ಕುಮಾರ್ ಮಾತನಾಡಿ, “ಇದು ನನ್ನ ಜೀವನದ ಅತ್ಯಂತ ಸಂತೋಷ ಹಾಗೂ ಮಹತ್ವದ ದಿನ. 25 ವರ್ಷದ ಹಿಂದೆ ಜನವರಿ 19ರಂದು ಮಧ್ಯಾಹ್ನ 1 ಗಂಟೆಗೆ ಎಸ್‌ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷನಾಗಿ ಅಧಿಕಾರ ವಹಿಸಿದ್ದೆª. ವಿಶೇಷವೆಂದರೆ, 25 ವರ್ಷಗಳ ಅನಂತರ ಅದೇದಿನದ ಅದೇ ಘಳಿಗೆಯಲ್ಲಿ ಸಮ್ಮಾನದ ಗೌರವದೊಂದಿಗೆ ಜನರೊಂದಿಗೆ ಮಾತನಾಡುವ ಸೌಭಾಗ್ಯ ದೊರೆತಿದೆ. ಲಕ್ಷ-ಲಕ್ಷ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದನ್ನು ಕಂಡಾಗ ಮನಸ್ಸು ತುಂಬಿ ಬರುತ್ತಿದೆ’ ಎಂದರು.
“ಸಹಕಾರ ಭೂಷಣ’ ಪ್ರಶಸ್ತಿ ಪ್ರದಾನ
ಡಾ| ಎಂ.ಎನ್. ಅವರು ಸಹಕಾರಿ ರಂಗದಲ್ಲಿ ಸಲ್ಲಿಸಿರುವ ಅನನ್ಯ ಸೇವೆ ಹಾಗೂ 25 ವರ್ಷಗಳಿಂದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ ಅವರು ಮಾಡಿರುವ ಉತ್ಕೃಷ್ಟ ಸಾಧನೆಯನ್ನು ಗುರುತಿಸಿ ಅವರಿಗೆ “ಸಹಕಾರ ಭೂಷಣ’ ಪ್ರಶಸ್ತಿಯನ್ನು ಡಾ| ಡಿ. ವೀರೇಂದ್ರ ಹೆಗ್ಗಡೆ ಪ್ರದಾನಿಸಿದರು. ಪತ್ನಿ ಅರುಣಾ ರಾಜೇಂದ್ರ ಕುಮಾರ್ ಉಪಸ್ಥಿತರಿದ್ದರು.
ದಾವಣಗೆರೆಯಲ್ಲಿ ರಸಗೊಬ್ಬರ ಕಾರ್ಖಾನೆ
ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಕಾರ್ಖಾನೆ ಖಾತೆ ಸಚಿವ ಡಿ.ವಿ. ಸದಾನಂದ ಗೌಡ ಮಾತನಾಡಿ, ರೈತರಿಗೆ ಕಡಿಮೆ ದರದಲ್ಲಿ ರಸಗೊಬ್ಬರ ದೊರೆಯಬೇಕು ಎಂಬ ಉದ್ದೇಶದಿಂದ ದಾವಣಗೆರೆಯಲ್ಲಿ ಸುಸಜ್ಜಿತ ರಸಗೊಬ್ಬರ ಕಾರ್ಖಾನೆ ನಿರ್ಮಿಸಲು ಕೇಂದ್ರ ಸರಕಾರ ನಿರ್ಧರಿಸಿದೆ. ರಾಜ್ಯ ಸರಕಾರ ಇದಕ್ಕಾಗಿ ಭೂಮಿ ನೀಡಲು ಕ್ರಮ ಕೈಗೊಳ್ಳಬೇಕು. ಇದಕ್ಕೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ಮೂಲಕ 6,000 ಕೋ.ರೂ. ವಿನಿಯೋಗಿಸಲು ಡಾ| ಎಂ.ಎನ್. ರಾಜೇಂದ್ರ ಕುಮಾರ್ ಮನಸ್ಸು ಮಾಡಿದ್ದಾರೆ. ಶೀಘ್ರದಲ್ಲಿ ಈ ಕಾರ್ಯ ನೆರವೇರಲಿ ಎಂದರು. ಈ ರಸಗೊಬ್ಬರ ಕಾರ್ಖಾನೆ ಸ್ಥಾಪನೆಗೆ ಬೇಕಾಗುವ ಭೂಮಿಯನ್ನು ರಾಜ್ಯ ಸರಕಾರ ನೀಡಲಿದೆ ಎಂದು ಸಚಿವ ಬಂಡೆಪ್ಪ ಕಾಶೆಂಪುರ ಭರವಸೆ ನೀಡಿದರು. ರಸಗೊಬ್ಬರ ಕಾರ್ಖಾನೆ ನಿರ್ಮಾಣಕ್ಕೆ ರಾಜ್ಯ
ಸರಕಾರ ತತ್‌ಕ್ಷಣವೇ 300ರಿಂದ 400 ಎಕರೆ ಜಾಗವನ್ನು ನೀಡಲು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂಡರಗಿಯಲ್ಲಿ ಸಕ್ಕರೆ ಕಾರ್ಖಾನೆಯವರು ಜಾಗ ನೀಡಲು ಮುಂದಾಗಿದ್ದು, ಅದನ್ನು ಒದಗಿಸಿಕೊಡುವ ಬಗ್ಗೆಯೂ ಹೆಜ್ಜೆಯಿರಿಸಬೇಕು ಎಂದು ರಾಜೇಂದ್ರ ಕುಮಾರ್ ಬೇಡಿಕೆ ಇರಿಸಿದರು.
ಸಾಲ ಮನ್ನಾ: 147 ಕೋ.ರೂ. ಬಿಡುಗಡೆ
ಸಮ್ಮಿಶ್ರ ಸರಕಾರದ ಸಾಲ ಮನ್ನಾ ಯೋಜನೆಯಡಿ ದ.ಕ. ಜಿಲ್ಲೆಯಲ್ಲಿ 91,858 ರೈತರ ಒಟ್ಟು 705 ಕೋ.ರೂ. ಸಾಲ ಮನ್ನಾವಾಗಲಿದೆ. ಈವರೆಗೆ 147 ಕೋ.ರೂ. ಬಿಡುಗಡೆ ಮಾಡಲಾಗಿದ್ದು, ಉಳಿದ ಹಣ ಶೀಘ್ರ ಬಿಡುಗಡೆ
ಯಾಗಲಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ ಹೇಳಿದರು. ಈ ಬಾರಿಯ ಸಾಲ ಮನ್ನಾ ಯೋಜನೆಯಡಿ ಅವಧಿ ಮೀರಿ ಹೋಗಿ,ಬಾಕಿಯುಳಿದಿರುವ 11,000 ರೈತರಿಗೂ ಸಾಲಮನ್ನಾ ಯೋಜನೆಯಲ್ಲಿ ಸೇರಿಸ ಬೇಕು ಹಾಗೂ ಸ್ವ-ಸಹಾಯ ಸಂಘಗಳಿಗೆ ಸರಕಾರದ ಕಾಯಕ ಯೋಜನೆಯಲ್ಲಿ ಎಲ್ಲ 10 ಲಕ್ಷ ರೂ. ವರೆಗಿನ ಸಾಲವನ್ನು ಶೂನ್ಯಬಡ್ಡಿ ದರದಲ್ಲಿ ನೀಡಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲು ಸಚಿವರಲ್ಲಿ ಆಗ್ರಹಿಸಿದರು.
25 ಕಿಲೋ ತೂಕ, 25 ಬಣ್ಣಗಳ ಹೂ ಮಾಲೆ!
ಡಾ| ಎಂ.ಎನ್. ರಾಜೇಂದ್ರ ಕುಮಾರ್ ಹಾಗೂ ಅರುಣಾ ರಾಜೇಂದ್ರ ಕುಮಾರ್ ಅವರನ್ನು ಅದ್ದೂರಿಯಾಗಿ ಸಮ್ಮಾನಿಸಲಾಯಿತು. 25ರ ಸಾರ್ಥಕ ನೆನಪಿನ ಹಿನ್ನೆಲೆಯಲ್ಲಿ 25 ಕೆ.ಜಿ. ತೂಕದ 25 ಬಣ್ಣದ ಹೂವಿನ ಮಾಲೆ ಅರ್ಪಿಸಲಾಯಿತು. ಪೇಟ, ಶಾಲು, ಫಲವಸ್ತು, ಏಲಕ್ಕಿ ಮಾಲೆಯನ್ನಿತ್ತು ಗೌರವಿಸಲಾಯಿತು. “ಸಹಕಾರ ಭೂಷಣ’ ಬಿರುದಿನೊಂದಿಗೆ ಡಾ| ಎಂ.ಎನ್. ಅವರನ್ನು ಸಮ್ಮಾನಿಸಲಾಯಿತು. ಬೆಳ್ಳಿಯ ಕಲಶ, ಬೆಳ್ಳಿಯ ಸಮ್ಮಾನ ಪತ್ರ ಹಾಗೂ ಬೆಳ್ಳಿಯ ಬಿರುದು ಪ್ರದಾನಿಸಲಾಯಿತು. ಸಹಕಾರಿ ಹಾಗೂ ನವೋದಯ ಕ್ಷೇತ್ರದ ಪ್ರಮುಖರು ಇದೇ ವೇಳೆ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಅವರನ್ನು ಸಮ್ಮಾನಿಸಿದರು.
ಸಿಎಂ, ಸಚಿವರು, ಶಾಸಕರ ಗೈರು
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ| ಜಿ. ಪರಮೇಶ್ವರ್ ಸೇರಿದಂತೆ ಬಹುತೇಕ ಸಚಿವರು, ಶಾಸಕರು ಭಾಗವಹಿಸಬೇಕಿತ್ತು. ಆದರೆ ಪಶ್ಚಿಮ ಬಂಗಾಲದಲ್ಲಿ ಆಯೋಜಿಸಲಾಗಿರುವ ಸಮಾವೇಶದಲ್ಲಿ ಪಾಲ್ಗೊಳ್ಳುವ ಕಾರಣದಿಂದ ಸಿಎಂ ಪಾಲ್ಗೊಂಡಿರಲಿಲ್ಲ. ಪ್ರಸ್ತುತ ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಗೆಯ ಹಿನ್ನೆಲೆಯಲ್ಲಿ ಸಚಿವರು, ಶಾಸಕರು ಗೈರಾಗಿದ್ದರು. ಡಿ.ವಿ. ಸದಾನಂದ ಗೌಡ ಹಾಗೂ ಯು.ಟಿ. ಖಾದರ್ ತಮ್ಮ ಭಾಷಣ ಮುಗಿದ ತತ್‌ಕ್ಷಣ ತೆರಳಿದ್ದರು. ಸಮಾರಂಭದ ಬಳಿಕ ಶಾಸಕರಾದ ಎಸ್. ಅಂಗಾರ, ಹರೀಶ್ ಪೂಂಜ, ಸಂಜೀವ ಮಠಂದೂರು ಹಾಗೂ ಸಂಸದೀಯ ಕಾರ್ಯದರ್ಶಿ ಐವನ್ ಡಿ’ಸೋಜಾ ಅವರು ಡಾ| ರಾಜೇಂದ್ರ ಕುಮಾರ್ ಅವರನ್ನು ಭೇಟಿಯಾಗಿ ಅಭಿನಂದಿಸಿದರು. ಬೆಳಗ್ಗೆ 10 ಗಂಟೆಗೆ ಎಸ್‌ಸಿಡಿಸಿಸಿಸಿ ಬ್ಯಾಂಕ್ ಮುಂಭಾಗದಿಂದ ಸ್ತಬ್ಧ ಚಿತ್ರಗಳೊಂದಿಗೆ ನೆಹರೂ ಮೈದಾನದವರೆಗೆ ಭವ್ಯ ಮೆರವಣಿಗೆ ನಡೆಯಿತು.
ನೆಹರೂ ಮೈದಾನದಲ್ಲಿ ಸಹಕಾರಿ ಸಾಗರ
ಮಂಗಳೂರಿನ ನೆಹರೂ ಮೈದಾನದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಸಹಕಾರಿಗಳು ಹಾಗೂ ನವೋದಯ ಸ್ವಸಹಾಯ ಸಂಘಗಳ ಸದಸ್ಯರು ನೆರೆದು, ಸಹಕಾರಿ ಸಾಗರವಾಗಿ ಪರಿವರ್ತನೆಯಾಗುವ ಮೂಲಕ ಐತಿಹಾಸಿಕ ಕಾರ್ಯಕ್ರಮವಾಗಿ ಮೂಡಿಬಂತು. ಮೈದಾನದಲ್ಲಿ ಜನರಿಗೆ ಕುಳಿತುಕೊಳ್ಳಲು ಮಾಡಿದ್ದ ಆಸನದ ವ್ಯವಸ್ಥೆ ಹಾಗೂ ಇಡೀ ಮೈದಾನ ಆವರಣಕ್ಕೆ ಬಹಳ ಆಕರ್ಷಕವಾದ ಪೆಂಡಾಲ್ ಹಾಕಿದ್ದು ವಿಶೇಷ ಗಮನಸೆಳೆಯುವ ಮೂಲಕ ಹೊಸ ದಾಖಲೆಗೆ ಕಾರಣವಾಗಿದೆ. ಸಮಾವೇಶದಲ್ಲಿ ಭಾಗವಹಿಸಿದ ಎಲ್ಲರಿಗೂ ಊಟದ ಪ್ಯಾಕೇಟ್ ವ್ಯವಸ್ಥೆ ಮಾಡಲಾಗಿತ್ತು. ರಾಜೇಂದ್ರ ಕುಮಾರ್ ಅವರ ಕುರಿತು ಪತ್ರಕರ್ತ ಪಿ.ಬಿ. ಹರೀಶ್ ರೈ ಬರೆದ “ಸಹಕಾರಿ ವೀರ’ ಪುಸ್ತಕವನ್ನು ಡಾ| ಹೆಗ್ಗಡೆ ಬಿಡುಗಡೆ ಮಾಡಿದರು. ನವೋದಯ ಸ್ವ-ಸಹಾಯ ಸಂಘಗಳ “ವಿಂಶತಿ’ ಸ್ಮರಣ ಸಂಚಿಕೆಯನ್ನು ಸಚಿವ ಸದಾನಂದ ಗೌಡ ಬಿಡುಗಡೆಗೊಳಿಸಿದರು.
ಬೆಳಗ್ಗೆ ಮಜ್ಜಿಗೆ; ಮಧ್ಯಾಹ್ನ ಊಟ!
ಕಾರ್ಯಕ್ರಮಕ್ಕೆ ಆಗಮಿಸಿದವರ ಬಾಯಾರಿಕೆ ನೀಗಲು ಯಥೇತ್ಛವಾಗಿ ಮಜ್ಜಿಗೆ ಪ್ಯಾಕೆಟ್ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನದ ವೇಳೆಗೆ ಊಟದ ಪ್ಯಾಕೆಟ್‌ಗಳನ್ನು ವಿತರಿಸಲಾಯಿತು.
ಮಹಿಳೆಯರಿಗೆ ಸ್ವಾಭಿಮಾನಿ ಬದುಕು
ನವೋದಯ ಸ್ವ-ಸಹಾಯ ಸಂಘಗಳು ಗ್ರಾಮೀಣ ಮಹಿಳೆಯರನ್ನು ಆರ್ಥಿಕವಾಗಿ ಸಶಕ್ತಗೊಳಿಸಿ ಸ್ವಾವಲಂಬಿ, ಸ್ವಾಭಿಮಾನಿ ಬದುಕು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿವೆ. ಅವರಲ್ಲಿ ವ್ಯವಹಾರ ಜ್ಞಾನ ತುಂಬಿ ಜೀವನ ಪರೀಕ್ಷೆಯನ್ನು ಎದುರಿಸುವ ಶಕ್ತಿಯನ್ನು ಸ್ವ-ಸಹಾಯ ಸಂಘಗಳು ತುಂಬಿವೆ. ಮಹಿಳೆಯರು ಸ್ವ-ಸಹಾಯ ಸಂಘಗಳ ಗರಿಷ್ಠ ಪ್ರಯೋಜನವನ್ನು ಪಡೆದುಕೊಳ್ಳಬೇಕು.
ಡಾ| ಡಿ. ವೀರೇಂದ್ರ ಹೆಗ್ಗಡೆ
ಬೆಳಕಾದವರನ್ನು ಮರೆಯಲಾರೆ
“ಡಾ| ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದ ಪಡೆದುಕೊಂಡು ಆರಂಭಿಸಿರುವ ನನ್ನ ಎಲ್ಲ ಕಾರ್ಯಗಳು ಯಶಸ್ಸನ್ನು ದಾಖಲಿಸಿದ್ದಕ್ಕೆ ಅವರ ಪ್ರೇರಣೆ-ಶ್ರೀರಕ್ಷೆಯೇ ಕಾರಣ. ಅಮರನಾಥ ಶೆಟ್ಟಿ ಮೂಲಕ ಸಹಕಾರ ಕ್ಷೇತ್ರಕ್ಕೆ ಆಗಮಿಸಿದ ನಾನು ಉಡುಪಿಯ ಶಂಭು ಶೆಟ್ಟರ ಮೂಲಕ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ಏರಿದ ಮೆಟ್ಟಿಲನ್ನು ಯಾವತ್ತೂ ಮರೆಯಬಾರದು. ಹಾಗೆಯೇ, ನನ್ನ ಜೀವನದಲ್ಲಿ ಬೆಳಕಾದವರನ್ನು ನಾನೆಂದೂ ಮರೆಯಲಾರೆ.
ಡಾ| ಎಂ.ಎನ್.ಆರ್.
ಬೆಳಕು ನೀಡಿದ ಸಾಧಕ
ಕರಾವಳಿಯ ಸಮಗ್ರ ಅಭಿವೃದ್ಧಿಯ ನೆಲೆಯಲ್ಲಿ ಸಹಕಾರ ಕ್ಷೇತ್ರ ನೀಡಿರುವ ಕೊಡುಗೆ ಅಪಾರ. ಕರಾವಳಿಯಲ್ಲಿ ಕಾಣದ ಕೈಗಳಂತೆ ಇದ್ದುಕೊಂಡು ಸಹಕಾರ ಕ್ಷೇತ್ರವು ಮಾಡಿರುವ ಕಾರ್ಯ ಶ್ಲಾಘನೀಯ. ಹಲವಾರು ಕುಟುಂಬಗಳ ಬಾಳಿನಲ್ಲಿ ಡಾ| ಎಂ.ಎನ್. ಅವರು ಬೆಳಕು ನೀಡಿದ ಸಾಧಕರು.
ಯು.ಟಿ.ಖಾದರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kerala: ಆ್ಯಂಬುಲೆನ್ಸ್ ಓಡಾಟಕ್ಕೆ ಅಡ್ಡಿ: ಕಾರು ಮಾಲೀಕನ ಲೈಸೆನ್ಸ್ ರದ್ದು!
Anmol Bishnoi: ಅಮೆರಿಕದಲ್ಲಿ ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್ ಬಿಷ್ಣೋಯ್ ಬಂಧನ
Manipur issue: ಶಾ ಸಭೆಯ ಬಳಿಕ ಮಣಿಪುರಕ್ಕೆ ಹೆಚ್ಚುವರಿ ಪಡೆಗಳನ್ನು ಕಳುಹಿಸಿದ ಕೇಂದ್ರ
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Grant Fight: ಕರ್ನಾಟಕಕ್ಕೆ ಅನ್ಯಾಯವಾದಾಗ ಎಚ್‌ಡಿಡಿ, ಎಚ್‌ಡಿಕೆ ಮಾತಾಡಿದ್ದಾರಾ?: ಸಿಎಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.