ಚಳವಳಿ, ಘೋಷಣಾ ಸಾಹಿತ್ಯದಲ್ಲಿ ನಂಬಿಕೆ ಇಲ್ಲ
Team Udayavani, Jan 21, 2019, 7:30 AM IST
ಮೈಸೂರು: ಸೃಜನಶೀಲ ಲೇಖಕ ಯಾವತ್ತೂ ಚಳವಳಿಯಿಂದ ದೂರ ಇರಬೇಕು. ಚಳವಳಿಯೊಳಗಿಳಿದು ಪಬ್ಲಿಕ್ ಫಿಗರ್ ಆಗಿಹೋದ್ರೆ ಇನ್ನು ಬರೆಯಲಾಗಲ್ಲ. ಹೀಗಾಗಿ ನನಗೆ ಚಳವಳಿ, ಘೋಷಣಾ ಸಾಹಿತ್ಯದಲ್ಲಿ ನಂಬಿಕೆ ಇಲ್ಲ, ಶುದ್ಧ ಸಾಹಿತ್ಯದಲ್ಲಿ ಮಾತ್ರ ನನಗೆ ನಂಬಿಕೆ ಎಂದು ಖ್ಯಾತ ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪ ಹೇಳಿದರು.
ಎಸ್.ಎಲ್.ಭೈರಪ್ಪ ಸಾಹಿತ್ಯ ಪ್ರತಿಷ್ಠಾನ ಮೈಸೂರಿನ ಕಲಾಮಂದಿರದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ಎಸ್.ಎಲ್.ಭೈರಪ್ಪ ಸಾಹಿತ್ಯೋತ್ಸವದಲ್ಲಿ ಭಾನುವಾರ ಅವರು ಸಮಾರೋಪ ಭಾಷಣ ಮಾಡಿದರು. ಘೋಷಣಾ ಸಾಹಿತ್ಯದ ಗದ್ದಲದ ನಡುವೆ ಶುದ್ಧ ಸಾಹಿತ್ಯ ಯಾವುದು ಅನ್ನುವುದು ಜನರಿಗೆ ಗೊತ್ತಾಗಿಲ್ಲ.
ಚಳವಳಿ ಸಾಹಿತ್ಯ ಎನ್ನುವುದು ರಾಜಕೀಯದಲ್ಲಿ ಯಾವ್ಯಾವ ಚಳವಳಿ ಇವೆಯೋ ಅವಕ್ಕೆ ಅನುಗುಣವಾಗಿ ಚಳವಳಿ ಸಾಹಿತ್ಯ ಶುರುವಾಗಿದೆ. ನಾನು ಬರವಣಿಗೆ ಆರಂಭಿಸುವ ಹೊತ್ತಿಗೆ ಸಾಹಿತ್ಯದಲ್ಲಿ ನವ್ಯ ಚಳವಳಿ ಸೇರಿತ್ತು. ನವ್ಯದಲ್ಲಿ ಬರೆಯುವುದಕ್ಕಿಂತ ಹೆಚ್ಚಾಗಿ ತನ್ನನ್ನು ಗುರುತಿಸಿಕೊಳ್ಳುವುದು ಮುಖ್ಯವಾಗುತ್ತದೆ. ಹಾಗಾಗಿ ಆತ ಬರೆದಿದ್ದು ಹೆಚ್ಚು ಹೆಚ್ಚು ದಿನಪತ್ರಿಕೆಗಳಲ್ಲಿ ಬರಬೇಕು, ಇದಕ್ಕೆ ಆತನಿಗೆ ಪತ್ರಿಕೆಯ ಸಂಡೇ ಎಡಿಟರ್ ಜತೆ ಸ್ನೇಹ ಇರಬೇಕಾಗುತ್ತದೆ ಎಂದು ಹೇಳಿದರು.
ಕಮಿಟ್‌ಮೆಂಟ್: ಚಳವಳಿಗಾರರು ಸಾಹಿತ್ಯದ ಹೆಸರಲ್ಲಿ ಎಮೋಷನ್ ಹೇಳುತ್ತಿದ್ದಾರೆ. ಸಾಹಿತಿಗೆ ಸಾಮಾಜಿಕ ಜವಾಬ್ದಾರಿ ಇಲ್ಲ ಎಂದು ಅವರ ಗುಂಪಿನಿಂದ ಡಿಸ್‌ಮಿಸ್ ಮಾಡಿ ಬಿಡುತ್ತಾರೆ. ದೇಶದಲ್ಲಿ ಇಂಥದ್ದೇ ಥಿಯರಿ ಆಕ್ರಮಿಸಿಕೊಂಡಿದೆ. ಉದಯೋನ್ಮುಖ ಲೇಖಕರಿಗೆ ಇದನ್ನು ತಡೆಯಲಾಗಲ್ಲ. ಇನ್ನು ಗುಂಪಿನಿಂದ ಹೊರಹಾಕುತ್ತಾರೆ ಎಂಬ ಭಯ ವಿಮರ್ಶಕರಿಗೂ ಇರುತ್ತೆ. ಈ ಸೋಷಿಯಲ್ ಕಮಿಟ್‌ಮೆಂಟ್ ಅನ್ನುವುದು ಕಮ್ಯುನಿಸ್ಟ್ ಸಿದ್ಧಾಂತ, ರಷ್ಯಾದಲ್ಲಿ ಕಮ್ಯುನಿಸಂ ಬಂದ ಮೇಲೆ ಸಾಹಿತ್ಯದಲ್ಲೂ ಸೋಷಿಯಲ್ ಕಮಿಟ್‌ಮೆಂಟ್ ಎಂಬುದು ಹುಟ್ಟಿಕೊಳು.
ವೈದ್ಯನೊಬ್ಬ ಅರ್ಧರಾತ್ರಿಯಲ್ಲಿ ರೋಗಿಯ ಮನೆಗೆ ಹೋಗಿ ಚಿಕಿತ್ಸೆ ನೀಡಿ ಬರುವುದು ಇವರಿಗೆ ಸೋಷಿಯಲ್ ಕಮಿಟ್‌ಮೆಂಟ್‌ನಂತೆ ಕಾಣುವುದಿಲ್ಲ. ರೋಗಿ ಕಮ್ಯುನಿಸ್ಟಿಕ್ ಇಂಜಕ್ಷನ್‌ನಿಂದ ನನ್ನ ಕಾಯಿಲೆ ವಾಸಿಯಾಯಿತು ಎಂದು ಹೇಳಿದರೆ ಒಪ್ಪಿಕೊಳ್ಳುತ್ತಾರೆ. ಇದೇ ಕಮ್ಯುನಿಸ್ಟ್ ದೃಷ್ಟಿಯಿಂದಲೇ ಇತಿಹಾಸ, ಸಮಾಜಶಾಸ್ತ್ರ, ವಿಜ್ಞಾನವನ್ನೂ ಬರೆಸಿದ್ದಾರೆ. ಐನ್‌ಸ್ಟಿàನ್ ಸಿದ್ಧಾಂತವನ್ನೂ ಕಮ್ಯುನಿಸ್ಟ್ ವಿರೋಧಿ ಎಂದು ವಿರೋಧಿಸಿದ್ದರು.
ಪ್ರಗತಿಪರ ಸಾಹಿತ್ಯ: ಭಾರತದಲ್ಲಿ ಮುಲ್ಕ್ರಾಜ್ ಆನಂದ್, ಪ್ರಗತಿಪರ ಸಾಹಿತ್ಯ ಅಂತಾ ಶುರು ಮಾಡಿದರು. ಕನ್ನಡದಲ್ಲಿ ಆನಕೃ, ತರಾಸು, ನಿರಂಜನ ಕಟ್ಟಿàಮನಿ ಶುರು ಮಾಡಿದರು. ಆ.ನ.ಕೃಷ್ಣರಾಯರು ಪ್ರಗತಿಪರ ಸಾಹಿತ್ಯವನ್ನೂ ಬರೆಯುತ್ತಿದ್ದರು. ಶೃಂಗೇರಿ ಮಠಕ್ಕೂ ಹೋಗುತ್ತಿದ್ದರು. ತರಾಸು ಅವರು ಮನೆಯಲ್ಲಿ ಹೋಮ-ಹವನ ಮಾಡಿಸುತ್ತಿದ್ದರು ಎಂದು ಹೇಳಿದರು.
ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಇಷ್ಟ: ರಸ, ಧ್ವನಿ ಮತ್ತು ಔಚಿತ್ಯ ಸಾಹಿತ್ಯದ ಮೂಲ ನಿಕಶಗಳು. ಧ್ವನಿ ಮತ್ತು ಔಚಿತ್ಯಗಳು ಸಾಹಿತ್ಯದಲ್ಲಿ ರಸವನ್ನು ಸೃಷ್ಟಿ ಮಾಡುತ್ತವೆ. ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ನನಗಿಷ್ಟ. ಹೀಗಾಗಿ ಖ್ಯಾತನಾಮರ ಒಬ್ಬೊಬ್ಬರ ಸಂಗೀತ ಕಛೇರಿಗಳನ್ನು 20-25 ಬಾರಿ ಕೇಳಿದ್ದೇನೆ. ಸಂಗೀತದಿಂದ ರಸ, ಧ್ವನಿ ಮತ್ತು ಔಚಿತ್ಯ ಬಂತು. ಆದರೆ, ಇಂಗ್ಲಿಷ್‌ನಲ್ಲಿ ಎಮೋಷನ್‌ಗೆ ಬೇರೆ ಶಬ್ದ ಇಲ್ಲದ್ದರಿಂದ ಹೇಳುತ್ತಾರೆ.
ಭಾವ ಪಕ್ವವಾದಾಗ ಸಾಹಿತ್ಯದಲ್ಲಿ ರಸ ಬರುತ್ತದೆ. ಸಾಹಿತ್ಯ ಮೀಮಾಂಸೆಯ ಮೊಟ್ಟ ಮೊದಲ ಗುರು ಭರತ, ಅವನು ಬರೆದಿದ್ದು ನಾಟ್ಯಶಾಸ್ತ್ರ, ಸಾಹಿತ್ಯದಲ್ಲಿ ಮಾತ್ರವಲ್ಲ, ಲಲಿತಕಲೆಯಲ್ಲೂ ರಸ ಇದೆ. ಇದು ಪರಂಪರೆಯಿಂದ ಬಂದದ್ದು. ಕಾದಂಬರಿ, ಮಹಾಕೃತಿಗಳು ಸಮುದ್ರ ಇದ್ದ ಹಾಗೆ. ಭೂಮಿ ಒಂದೇ ಸಮ ಇರಲ್ಲ. ಬೆಟ್ಟ-ತಗ್ಗು ಇರುತ್ತದೆ. ಹಾಗೆಯೇ ಸಾಹಿತ್ಯದಲ್ಲಿ ಎಲ್ಲವೂ ರಸ ಸ್ಥಾನವಾಗಿರಲ್ಲ. ರಸ ಸ್ಥಾನ ಅಲ್ಲಲ್ಲಿ ಬರುತ್ತವೆ. ರಸ ಸ್ಥಾನ ಕಟ್ಟಿಕೊಡುವ ಕಡೆ ಭಾವ ಇರುತ್ತೆ ಎಂದರು.
ಸಾಕ್ಷಿ ಮೆಟಾಫಿಸಿಕಲ್ ನಾವೆಲ್, ಅಲ್ಲಿನ ಪಾತ್ರಗಳು ಯಾವ ರೀತಿ ಬಂದಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾದರೆ ನಮ್ಮ ದೇಶದ ಪುರುಷಾರ್ಥ ಗೊತ್ತಿರಬೇಕು. ಭೈರಪ್ಪ ಈ ವಯಸ್ಸಲ್ಲಿ ಸೆಕ್ಸ್ ಬರೆದಿದ್ದಾರೆ ಎಂದರೆ, ಅವರಿಗೆ ಏನೂ ಅರ್ಥವಾಗಿಲ್ಲ ಅಂತಾಯ್ತು ಎಂದು ಹೇಳಿದರು.
ಒಪ್ಪಿಕೊಳ್ಳದಿದ್ದರೆ ಗುಂಪನಿಂದ ವಜಾ: ಕರ್ನಾಟಕದಲ್ಲಿರುವಷ್ಟು ಚಳವಳಿ ಸಾಹಿತ್ಯ ದೇಶದ ಇನ್ಯಾವ ರಾಜ್ಯಗಳಲ್ಲೂ ಕಾಣ ಸಿಗಲ್ಲ. ಪ್ರಗತಿಪರ, ಬಂಡಾಯ, ದಲಿತ, ಸ್ತ್ರೀವಾದ ಚಳವಳಿಗಳ ಸಾಹಿತ್ಯದಲ್ಲಿ ಅವರಿಗೆ ತಕ್ಕನಾಗಿ ಬರೆದರೆ ಸಾಹಿತಿ ಎಂದು ಒಪ್ಪಿಕೊಳ್ಳುತ್ತಾರೆ, ಇಲ್ಲವಾದರೆ ಅವರ ಗುಂಪಿನಿಂದ ವಜಾ ಮಾಡುತ್ತಾರೆ. ಚಳವಳಿಗಾರರು ತಮ್ಮ ಸಾಹಿತ್ಯದ ಮೂಲಕ ಸಮಾಜದ ಉದ್ಧಾರ ಮಾಡುತ್ತಿದ್ದೇವೆ ಎಂದು ಕೊಳ್ಳುತ್ತಾರೆ.
ಆದರೆ, ಸಾಹಿತ್ಯದಿಂದ ಸಮಾಜವನ್ನು ಉದ್ಧಾರ ಮಾಡಿಬಿಡುತ್ತೇನೆ ಎಂಬ ಭ್ರಮೆಯಲ್ಲಿ ನಾನಿಲ್ಲ. ಸಮಾಜದೊಳಗೆ ಅನ್ಯಾಯವನ್ನು ಅನುಭವಿಸುತ್ತಲೇ ಇದ್ದೇವೆ, ಅದಕ್ಕೆ ಕಾದಂಬರಿ ಯಾಕೆ ಓದಬೇಕು. ಕಾದಂಬರಿಗಳನ್ನು ವಿದ್ಯಾವಂತರೆ ಓದುವುದು, ಅವರಿಗೆ ಈ ಅನ್ಯಾಯಗಳು ಗೊತ್ತಿರುತ್ತವೆ, ಆದರೂ ವಿದ್ಯಾವಂತರೇನು ಹೋಗಿ ಓಟ್ ಮಾಡಲ್ಲ. ನಮ್ಮ ವಿಶ್ವವಿದ್ಯಾಲಯಗಳಲ್ಲಿರುವ ಪ್ರಾಧ್ಯಾಪಕರು ಸಾಹಿತ್ಯದ ಹೆಸರಲ್ಲಿ ಚಳವಳಿಗಳನ್ನೇ ಹೇಳುತ್ತಿದ್ದಾರೆ ಎಂದು ಎಸ್.ಎಲ್.ಭೈರಪ್ಪ ಹೇಳಿದರು.
ಯಾವುದಕ್ಕೂ ಪ್ರತಿಕ್ರಿಯಿಸದೆ ನಾನು ಬರೆದುಕೊಂಡು ಬಂದೆ: ನಾನು ತತ್ವಶಾಸ್ತ್ರ, ಈಸ್ಥಿಟಿಕ್ಸ್ ಸೌಂದರ್ಯ-ಕಲಾ ಮೀಮಾಂಸೆ ಒಳಗೆ ಸಾಹಿತ್ಯ ಮೀಮಾಂಸೆ ಓದಿದ್ದರಿಂದ ಯಾವುದಕ್ಕೂ ಪ್ರತಿಕ್ರಿಯೆ ಕೊಡದೆ ಬರೆಯಬೇಕು ಎಂದು ಬರೆದುಕೊಂಡು ಬಂದೆ. ಒಂದೊಂದು ಕಾದಂಬರಿ ಬರೆಯುವಾಗಲೂ ಮನಸ್ಸಿನಲ್ಲಿ ಕಾನ್ಸೆಫ್ಟ್ ಗಟ್ಟಿಯಾಗುತ್ತಿತ್ತು. ನಾನೇಕೆ ಬರೆಯುತ್ತೇನೆ ಎಂಬ ಲೇಖನ, ಪರ್ವ, ಮಂದ್ರ ಕಾದಂಬರಿಗಳನ್ನು ಬರೆದಿದ್ದು ತೃಪ್ತಿಕೊಟ್ಟಿದೆ.
ಉಳಿದಿದ್ದೆಲ್ಲಾ ಅಲ್ಲಿ-ಇಲ್ಲಿ ತಿಳಿದು ಬರೆದಿದ್ದು, ಅವಕ್ಕೆ ಮೌಲ್ಯ ಇದೆ ಎಂದು ಅನಿಸಲ್ಲ. ಇಷ್ಟನ್ನು ಬಿಟ್ಟು ನನಗೆ ಹೊಸದಾಗಿ ಏನನ್ನೂ ಹೇಳಲು ಸಾಧ್ಯವಿಲ್ಲ. ಹೇಳಬೇಕಾದ್ದು ಕಾದಂಬರಿಯಾಗಿ ಬರಬೇಕು. ದಾಟು ಕಾದಂಬರಿ ಭಾರತದಲ್ಲಿನ ಜಾತಿ ಪದ್ಧತಿಯನ್ನು ಹೇಳುತ್ತೆ. ಅದೇ ಕಾದಂಬರಿಯ ಗಟ್ಟಿತನ. ಹಳ್ಳಿಯಲ್ಲಿ ಹುಟ್ಟಿ-ಬೆಳೆದು, ನನ್ನ ಭಾಗದ ಎಲ್ಲಾ ಹಳ್ಳಿ ಸುತ್ತಿ ಜಾತಿ ಪದ್ಧತಿ ನೋಡಿದ್ದೆ. ಶಾಸ್ತ್ರ, ನಂಬಿಕೆಗಳೇನು ಎಂಬುದು ಚಿಕ್ಕ ವಯಸ್ಸಿನಲ್ಲೇ ಗೊತ್ತಾಗುತ್ತಿತ್ತು.
ಮದುವೆ ಶಾಸ್ತ್ರ, ಸತ್ತರೆ ಏನು ಮಾಡುತ್ತಾರೆ ಎಂಬುದು ನನಗೆ 8ನೇ ವಯಸ್ಸಿಗೇ ಗೊತ್ತಿತ್ತು. ಜೊತೆಗೆ ಉತ್ತರ ಭಾರತದಲ್ಲಿ ಉಳಿದು ಅಧ್ಯಯನ ಮಾಡಿದ್ದೆ, ಸಮಾಜಶಾಸ್ತ್ರ ಓದಿದ್ದೆ, ಹೀಗಾಗಿ ಜಾತಿ ವ್ಯವಸ್ಥೆ ಕುರಿತು ದಾಟು ಕಾದಂಬರಿ ಬರೆದೆ. 1973ರಲ್ಲಿ ನಾನು ಬರೆದ ದಾಟು ಕಾದಂಬರಿಯನ್ನು ಸರಿಗಟ್ಟುವ ಮತ್ತೂಂದು ಕಾದಂಬರಿ ಬಂದಿಲ್ಲ ಎಂದು ಎಸ್.ಎಲ್.ಭೈರಪ್ಪ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.