ಅರ್ಜಿ ಸಲ್ಲಿಸದವರ ಬ್ಯಾಂಕ್ ಖಾತೆಗೆ ಸಾಲ-ಸಹಾಯಧನ ಜಮಾ!
Team Udayavani, Jan 24, 2019, 10:28 AM IST
ಚಿತ್ರದುರ್ಗ: ಸಾಲ ನೀಡುವಂತೆ ಅರ್ಜಿ ಸಲ್ಲಿಸಿಲ್ಲ, ಯಾರೂ ಸಾಲ ಮಂಜೂರು ಮಾಡಿಲ್ಲ. ಆದರೂ ಬ್ಯಾಂಕ್ ಖಾತೆಗೆ ಸಾಲ ಮತ್ತು ಸಹಾಯ ಧನದ ಲಕ್ಷಾಂತರ ರೂ. ಜಮಾ ಆಗಿದೆ!
ಹೌದು. ಆಶ್ಚರ್ಯ ಎನ್ನಿಸುವ ಇಂತಹದ್ದೊಂದು ಪ್ರಕರಣ ಡಾ| ಬಿ.ರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕೇಂದ್ರ ಕಚೇರಿಯಲ್ಲಿ ನಡೆದಿದ್ದು, ಈಗ ಬೆಳಕಿಗೆ ಬಂದಿದೆ. ಸರ್ಕಾರದ ಯಾವುದೇ ಯೋಜನೆಯ ಸಾಲ, ಸಹಾಯಧನ ಮತ್ತಿತರ ಸೌಲಭ್ಯ ಪಡೆಯಲು ವರ್ಷಗಳ ಕಾಲ ಅಲೆಯಬೇಕಾಗುತ್ತದೆ. ಆದರೆ, ಇಲ್ಲಿ ನೇರ ಸಾಲ ಯೋಜನೆಯಡಿಯಲ್ಲಿ ಹೈನುಗಾರಿಕೆ ಮಾಡಲು ಯಾವುದೇ ಅರ್ಜಿ ಸಲ್ಲಿಸದ ವ್ಯಕ್ತಿಯ ಇಡೀ ಕುಟುಂಬದ ಎಲ್ಲ ಸದಸ್ಯರ ಬ್ಯಾಂಕ್ ಖಾತೆಗಳಿಗೆ ಸಾಲ ಮತ್ತು ಸಹಾಯಧನದ ಹಣ ಆರ್‌ಟಿಜಿಎಸ್ ಮೂಲಕ ಜಮಾ ಆಗಿದೆ. ಈ ಬಗ್ಗೆ ಪೊಲೀಸ್ ದೂರು ದಾಖಲಾಗುತ್ತದೆ ಎಂಬ ಹಂತದಲ್ಲಿ ಇಡೀ ಪ್ರಕರಣ ಬಹಿರಂಗಗೊಂಡಿದೆ.
ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಚಿತ್ರದುರ್ಗ ತಾಲೂಕಿನ ತುರುವನೂರು ಗ್ರಾಮದ ಪ್ರಕಾಶ್ ಮಲ್ಲಪ್ಪ, ಇವರ ಮೂವರು ಪುತ್ರಿಯರಾದ ಪಲ್ಲವಿ, ರಜತ್ ಐಹೊಳೆ, ಪ್ರಿಯಾ, ಪತ್ನಿ ನರಸಮ್ಮ, ಪ್ರಕಾಶ್ ತಾಯಿ ಓಬಮ್ಮ ಇವರ ಹೆಸರಿನಲ್ಲಿರುವ ಚಿತ್ರದುರ್ಗದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಚಿತ್ರದುರ್ಗದ ಸಿಂಡಿಕೇಟ್ ಬ್ಯಾಂಕ್‌ಗಳ ಖಾತೆಗಳಿಗೆ ಕುರಿ ಸಾಕಾಣಿಕೆ ಮಾಡಲು ನೇರ ಸಾಲ ಯೋಜನೆಯಡಿಯಲ್ಲಿ ಹಣ ವರ್ಗಾವಣೆ ಆಗಿದೆ. ಇದರೊಂದಿಗೆ ಚಿತ್ರದುರ್ಗ ನಗರ ನಿವಾಸಿ ಗೌರಮ್ಮ ಕೋಂ ತಿಪ್ಪೇರುದ್ರಪ್ಪ ಎನ್ನುವವರ ಖಾತೆಗೂ ಹಣ ವರ್ಗಾವಣೆಯಾಗಿದೆ.
ಹಗರಣ: ಯಾವುದೇ ಅರ್ಜಿ ಸಲ್ಲಿಸದೇ ಸಾಲ ಮತ್ತು ಸಹಾಯಧನದ ಹಣ ಇಡೀ ಕುಟುಂಬದ ಸದಸ್ಯರ ಬ್ಯಾಂಕ್ ಖಾತೆಗೆ ಜಮಾ ಆಗಿದ್ದಾರೂ ಹೇಗೆ ಎಂಬ ಪ್ರಶ್ನೆ ಉದ್ಭವಿಸಿದೆ. ಇಲ್ಲಿ ಇಲಾಖೆ, ಬ್ಯಾಂಕ್ ಸಿಬ್ಬಂದಿ ಭ್ರಷ್ಟಾಚಾರ ಎಸಗಿದ್ದಾರೆಯೇ? ಅಥವಾ ಸಹಾಯಧನ ಬಿಡುಗಡೆ ಮಾಡುವಂತೆ ಜನಪ್ರತಿನಿಧಿಗಳು ಸೂಚಿಸಿದ್ದಾರೆಯೇ ಎಂಬುದಕ್ಕೆಲ್ಲ ಉತ್ತರ ಸಿಗಬೇಕಿದೆ.
ಅರ್ಜಿ ಸಲ್ಲಿಸುವಾಗ ಕೊಡಬೇಕಾಗುವ ದಾಖಲೆಗಳು ಸರಿಯಿದ್ದಲ್ಲಿ ಮಾತ್ರ ಹಣ ದೊರಕಲಿದೆ. ಸ್ಥಳೀಯ ಶಾಸಕರು ಅಧ್ಯಕ್ಷರಾಗಿರುವ ಸಮಿತಿ ಯೋಜನೆಗೆ ಫಲಾನುಭವಿ ಆಯ್ಕೆ ಮಾಡಲಿದೆ. ಈ ಪ್ರಕರಣದಲ್ಲಿ ಯಾವುದೂ ಸಹ ನಿಯಮದಂತೆ ನಡೆದಿಲ್ಲ; ಈ ಕುರಿತು ಸಮಗ್ರ ತನಿಖೆ ಮಾಡಿದರೆ ಸಂಪೂರ್ಣ ಸತ್ಯ ಹೊರ ಬೀಳಲಿದೆ.
ಗೊಂದಲದ ಹೇಳಿಕೆ: ಈ ಪ್ರಕರಣಕ್ಕೆ ಸಂಬಂಧಿಸಿ ಕಚೇರಿ ಅಧಿಕಾರಿ ಮತ್ತು ನೌಕರರು ಗೊಂದಲದ ಹೇಳಿಕೆಗಳನ್ನು ನೀಡುತ್ತಿದ್ದು, ಸಂಶಯ ಹೆಚ್ಚಲು ಕಾರಣವಾಗಿದೆ. ವ್ಯವಸ್ಥಾಪಕ ಶಿವಲಿಂಗಯ್ಯ, ಕ್ಷೇತ್ರಾಧಿಕಾರಿ ಹಾಲಸ್ವಾಮಿ, ಕೇಸ್ ವರ್ಕರ್ ಕಾರ್ತಿಕ್ ಒಂದೊಂದು ರೀತಿಯ ಹೇಳಿಕೆ ನೀಡುತ್ತಿದ್ದು, ಹಲವಾರು ಅನುಮಾನ ಮೂಡಿಸಿದೆ.
ಈ ಹಿಂದೆ ಜಿಲ್ಲಾ ವ್ಯವಸ್ಥಾಪಕರಾಗಿದ್ದವರಿಂದ ಈ ರೀತಿಯಾಗಿದೆ ಎಂದು ಒಬ್ಬರು ಹೇಳಿದರೆ, ಹಣ ಬಿಡುಗಡೆ ಮಾಡುವಂತೆ ಶಾಸಕರೊಬ್ಬರು ಶಿಫಾರಸು ಪತ್ರಗಳನ್ನು ನೀಡಿದ್ದರು ಎಂದು ಮತ್ತೂಬ್ಬರು ಹೇಳುತ್ತಿದ್ದಾರೆ. ಅಲ್ಲದೆ ಈಗಾಗಲೇ ಹಣ ಪಡೆದಿರುವ ವ್ಯಕ್ತಿ ಕಚೇರಿಗೆ ಬಂದು ಗಲಾಟೆ ಮಾಡಿ ಹಣ ಬಿಡುಗಡೆ ಮಾಡಿಸಿಕೊಂಡಿದ್ದಾರೆ ಎಂದೂ ಕೆಲ ಸಿಬ್ಬಂದಿ ಹೇಳುತ್ತಿದ್ದು ಎಲ್ಲವೂ ಅಸ್ಪಷ್ಟವಾಗಿದೆ.
ನಾನು ಯಾರಿಗೂ ಶಿಫಾರಸು ಪತ್ರ ನೀಡಿಲ್ಲ. ಪ್ರಕರಣ ಗಮನಕ್ಕೆ ಬಂದಿದ್ದು ಕೂಡಲೇ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿ ಸಮಗ್ರ ತನಿಖೆ ಮಾಡಿ ಕ್ರಿಮಿನಲ್ ಮೊಕದ್ದಮೆ ಹೂಡಿ ಆರೋಪಿತರನ್ನು ಬಂಧಿಸುವಂತೆ ಸೂಚಿಸಿದ್ದೇನೆ.
• ಟಿ.ರಘುಮೂರ್ತಿ, ಶಾಸಕರು, ಚಳ್ಳಕೆರೆ
ಪ್ರಕಾಶ್ ಎನ್ನುವ ವ್ಯಕ್ತಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮನವಿ ಸಲ್ಲಿಸಲಾಗಿದೆ. ಈಗಾಗಲೇ ಅವರು 2.67 ಲಕ್ಷ ರೂ.ಗಳನ್ನು ಇಲಾಖೆಗೆ ಪಾವತಿಸಿದ್ದಾರೆ. ಇನ್ನೂ 2 ಲಕ್ಷ ರೂ. ಪಾವತಿಸಬೇಕಿದೆ. ಈ ಪ್ರಕರಣ ನನ್ನ ಅವಧಿಯಲ್ಲಿ ಆಗಿದ್ದಲ್ಲ. 2017-18ನೇ ಸಾಲಿನಲ್ಲಿ ನಡೆದಿದೆ.
•ಶಿವಲಿಂಗಯ್ಯ, ಜಿಲ್ಲಾ ವ್ಯವಸ್ಥಾಪಕರು, ಅಂಬೇಡ್ಕರ್ ಅಭಿವೃದ್ಧಿ ನಿಗಮ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siddaramaiah ಸರ್ಕಾರದಿಂದ ಜನತೆಗೆ ಆತ್ಮಹತ್ಯೆ ಭಾಗ್ಯ: ಕಾರಜೋಳ
ತೋಟದ ಮನೆಗಳಿಗೆ ಹಗಲು ತ್ರಿಫೇಸ್, ರಾತ್ರಿ ಸಿಂಗಲ್ ಫೇಸ್ ವಿದ್ಯುತ್: ಸಚಿವ ಜಾರ್ಜ್
ನಾನು ಗಣಪತಿ ಕೇಸ್ ನಲ್ಲಿ ರಾಜೀನಾಮೆ ನೀಡಿದ್ದೆ…: ಬಿಜೆಪಿ ವಿರುದ್ಧ ಸಚಿವ ಜಾರ್ಜ್ ಕಿಡಿ
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.