ರಂಗವಿಮರ್ಶೆ: ಅಲ್ಟಿಮೇಟ್ ಕುರುಕ್ಷೇತ್ರ
Team Udayavani, Jan 26, 2019, 2:25 AM IST
ಮಹಾಭಾರತವೆಂಬುದು ಆಕರವಿದ್ದಂತೆ; ಇದರಲ್ಲಿ ಮನುಷ್ಯನ ಪ್ರತಿಯೊಂದು ನಡಾವಳಿ ಅಡಕವಾಗಿದೆ. ಇಲ್ಲಿ ಅಡಕವಾಗಿಲ್ಲದೆ ಇರುವುದು ಮನುಕುಲದಲ್ಲಿ ಇಲ್ಲವಂತೆ ಎಂದು ವ್ಯಾಸರು ಹೇಳಿರುವುದನ್ನು ಅನೇಕರು ಉದಾಹರಿಸುತ್ತ ಬಂದಿದ್ದಾರೆ. ಹಾಗಾಗಿಯೇ ಇದು ಅಭಿಜಾತ ಕಾವ್ಯ. ಅಭಿಜಾತ ಆಗಿರುವುದರಿಂದಲೇ ಇದು ಎಲ್ಲ ಬಗೆಯ ವಿಶ್ಲೇಷಣೆಗಳಿಗೂ ತೆರೆದುಕೊಳ್ಳುತ್ತಿರುತ್ತದೆ. ತಾತ್ವಿಕರು ಇದನ್ನು ತತ್ವಚಿಂತನೆಗೆ ಹಚ್ಚುತ್ತಾರೆ. ಪ್ರತಿ ಪಾತ್ರದ ಒಳತೋಟಿಯನ್ನು ಕೆಲವು ಸೃಜನಶೀಲ ಬರಹಗಾರರು ತಮ್ಮ ನೆಲೆಗಳಲ್ಲಿ ವಿಶ್ಲೇಷಿಸಿದ್ದಾರೆ. ಅದನ್ನು ಕಾವ್ಯವಾಗಿಸಿದ್ದಾರೆ. ಸಾಹಿತ್ಯದ ಬೇರೆ ಬೇರೆ ಪ್ರಕಾರಗಳಲ್ಲಿ ಬಳಕೆ ಮಾಡಿಕೊಂಡಿದ್ದಾರೆ.
ಒಟ್ಟಿನಲ್ಲಿ ಇದು ನಮ್ಮ ಅಧ್ಯಯನದ ಕ್ರಮ ಹಾಗೂ ನಮ್ಮ ಕಾಣೆRಯನುಸಾರ ತೆರೆದುಕೊಳ್ಳುವ ಕಾವ್ಯ. ಗಂಭೀರವಾದ ನಿಕಷಕ್ಕೆ ಒಡ್ಡಿದರೆ ಅದು ಗಂಭೀರ ಸ್ವರೂಪ ತಾಳುತ್ತದೆ. ಇಲ್ಲ, ಇದನ್ನು ಹಾಸ್ಯದಂತೆ ಪರಿಭಾವಿಸಿ ಒಂದು ನಾಟಕ ಕಟ್ಟಿದರೆ ಅದು ಹಾಸ್ಯಕ್ಕೂ ಒಗ್ಗಿಬರುತ್ತದೆ. ಆದರೆ, ಇದರಲ್ಲೂ ಬಗೆಗಳಿವೆ. ಮಹಾಭಾರತದ ಒಂದು ಪ್ರಸಂಗವನ್ನು ಹಳ್ಳಿಯಲ್ಲಿ ಕಲಿಯುವ ನಾಟಕದ ಪ್ರಸಂಗಕ್ಕೆ ಹಾಸ್ಯದ ಆವರಣ ಕಲ್ಪಿಸಿದರೆ ಅದು ಹಾಸ್ಯವಾಗುತ್ತದೆ. “ಶ್ರೀಕೃಷ್ಣ ಸಂಧಾನ’ ಇದಕ್ಕೊಂದು ಉದಾಹರಣೆ.
ಆದರೆ, ಈಚೆಗೆ ರಂಗಶಂಕರದಲ್ಲಿ “ಆ್ಯಕ್ಟರ್ ಎನ್‌ಸೆಂಬಲ್ ಇಂಡಿಯಾ ಫಾರಂ’ನವರು ಮಹಾಭಾರತದಲ್ಲಿನ ಒಂದು ನಿರ್ದಿಷ್ಟ ಘಟ್ಟವನ್ನು ನಾಟಕವಾಗಿಸಿದರು. ಪ್ರಯೋಗ ಇಂಗ್ಲಿಷ್‌ನಲ್ಲಿತ್ತು. ಇಲ್ಲಿ ಕುರುಕ್ಷೇತ್ರ ಯುದ್ಧ ಏಕಾಏಕಿ ಆರಂಭಗೊಳ್ಳಲಿಲ್ಲ. ಅರ್ಜುನನಲ್ಲಿ ಉಂಟಾದ ವಿಷಾದಯೋಗವನ್ನು ಕೃಷ್ಣ ಕಳೆಯಲು ನಿಂತ ಸಮಯದಲ್ಲಿ ನಡೆದ ಘಟನಾವಳಿಗಳು ಈ ತಂಡದ “ಅಲ್ಟಿಮೇಟ್ ಕುರುಕ್ಷೇತ್ರ’ದ ವಸ್ತು. ಇದನ್ನು ಕೊಂಚ ಹಾಸ್ಯಮಿಶ್ರಿತವಾಗಿ ನಿರೂಪಿಸಲಾಗಿತ್ತು.
ಹಾಸ್ಯ ಎಂದರೆ, ನಮ್ಮ ಹಳ್ಳಿಗಾಡನ್ನು ಪ್ರತಿನಿಧಿಸುವ “ಕೃಷ್ಣಸಂಧಾನ’ದಂತೆ ಅಲ್ಲ. ಇಲ್ಲೊಂದು ಅಧ್ಯಯನ ಇದೆ. ಸಂದರ್ಭ ಮತ್ತು ಪಾತ್ರಗಳನ್ನು ತಮ್ಮ ಅಧ್ಯಯನದ ನೆಲೆಯಲ್ಲಿ ವಿಶ್ಲೇಷಿಸುವ ಬಗೆ ಇದೆ. ಇದರಲ್ಲಿ ಹಾಸ್ಯ ಮಿಳಿತ ಮಾಡಲಾಗಿದೆಯೇ ಹೊರತು ಕೇವಲ ಕಾಮಿಡಿಯಾಗಿಸುವ ಹಠ ತೊಟ್ಟಿಲ್ಲ ಎನ್ನುವುದು ಸಮಾಧಾನದ ಅಂಶ.
ನಾಟಕಾರ ಮತ್ತು ನಿರ್ದೇಶಕ ರಾಮ್‌ರ ಅಧ್ಯಯನಶೀಲತೆ ಇಲ್ಲಿ ಢಾಳಾಗಿ ಕಾಣುತ್ತದೆ. ಮಹಾಭಾರತ ಅವರಿಗೆ ಭಾರತದ ಅನೇಕ ಪ್ರಸ್ತುತದ ಸಮಸ್ಯೆಗಳನ್ನು ಬಿಂಬಿಸುವ ಕನ್ನಡಿಯಾಗಿ ಕಂಡಿದೆ. ಹಾಗಾಗಿ, ಅವರ “ಅಲ್ಟಿಮೇಟ್ ಕುರುಕ್ಷೇತ್ರ’ದಲ್ಲಿ ಇಂದಿನ ಸಮಾಜದ ಸೆಳಕುಗಳ ಬಗೆಗೆ ಸೂಚ್ಯವಾದ ಮಾತುಗಳು ಕೇಳಿಬರುತ್ತವೆ.
ಈ ಪ್ರಯೋಗದ ಹಿಂದೆ ಅಧ್ಯಯನವಿದ್ದಂತೆ, ಅದನ್ನು ಹಾಸ್ಯದ ಲೇಪದಲ್ಲಿ ಕಾಣಿಸುವ ದರ್ಶನಗಳೂ ಇವೆ. ಆದರೆ, ಈ ತಂಡಕ್ಕೆ ತೊಡಕಾಗಿದ್ದು ಭಾಷೆ. ಭಾರತೀಯರು ಇಂಗ್ಲಿಷ್ ಉಚ್ಚರಿಸುವ ಬಗೆ ಬೇರೆ ಎಂಬುದು ಎಲ್ಲರಿಗೂ ತಿಳಿದಿದೆ. ಹಾಗೆಯೇ, ಬೇರೆಬೇರೆ ಜನಾಂಗದವರ ಉಚ್ಚಾರಣೆಯೂ ಬೇರೆ ರೀತಿಯಲ್ಲಿಯೇ ಇರುತ್ತದೆ. ಆದರೆ, ನಾಟಕಕ್ಕೆ ತಮ್ಮನ್ನು ತಾವು ಅಣಿಗೊಳಿಸಿಕೊಂಡಾಗ ಭಾಷೆಯ ವಿಚಾರದಲ್ಲಿ ಒಂದು ಹಂತದ ಪ್ರಭುತ್ವವನ್ನಾದರೂ ಕಾಣಿಸಬೇಕಾಗುತ್ತದೆ. ನಟರಾದವರು ಕಡೇಪಕ್ಷ ಚೂರೂ ಪ್ರಾವೀಣ್ಯತೆ ಕಾಣಿಸುವ ಗೋಜಿಗೂ ಹೋಗದಿದ್ದರೆ ನಾಟಕದಲ್ಲಿ ಎಷ್ಟು ಅಧ್ಯಯನಶೀಲತೆ ಇದ್ದರೂ ಭಾಷೆಯ ತೊಡಕು ಅದನ್ನು ಪೇಲವಗೊಳಿಸುತ್ತದೆ. “ಅಲ್ಟಿಮೇಟ್ ಕುರುಕ್ಷೇತ್ರ’ದಲ್ಲಿ ಆದದ್ದು ಇದೇ. ರಾಮ್ ಹಾಗೂ ಮಲ್ಲಿಕಾ ಪ್ರಸಾದ್‌ರ ಇಂಗ್ಲಿಷ್ ಕಡೇಪಕ್ಷ ಕೇಳುವ ಹಾಗೆ ಇತ್ತು. ಉಳಿದವರು ನಿರಾಶೆ ಹುಟ್ಟಿಸಿದರು. ಅವರ ಬಳಕೆಯ ಇಂಗ್ಲಿಷ್ ಹೈಸ್ಕೂಲ್ ಮಕ್ಕಳ ಉಚ್ಚಾರವಿದ್ದಂತೆ ಇತ್ತು. ಇದು ತೊಡಕನ್ನು ಸೃಷ್ಟಿಸುತ್ತಲೇ ಇದ್ದದ್ದರಿಂದ ಆರಂಭದಿಂದಲೇ ನಾಟಕ ನೋಡುವ ಮನಃಸ್ಥಿತಿ ಮಾಯವಾಯಿತು. ಚಿಂತನೆಗೆ ಹಚ್ಚಬಹುದಾದ ನಾಟಕವೊಂದು ಭಾಷೆಯ ತೊಡಕಿನಿಂದ ಉದ್ದಕ್ಕೂ ಕಳೆಗುಂದುತ್ತಾ ಸಾಗಿದ್ದು ಮನಸ್ಸಿನಲ್ಲಿ ಕುರುಕ್ಷೇತ್ರದ ವಾತಾವರಣ ನಿರ್ಮಿಸಿತು.
– ಎನ್.ಸಿ. ಮಹೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್ ನೀಡಿದ ರಿಷಭ್ ಪಂತ್
Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ
BBK11: ಇವತ್ತು ಬಿಗ್‌ಬಾಸ್ ಮನೆಯಿಂದ ಆಚೆ ಬರುವುದು ಇವರೇ ನೋಡಿ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.