ಮಾನವೀಯತೆಯ ಮಹಾಪಾತ್ರದಲ್ಲಿ  ಹರಿದ ಸಿದ್ಧಗಂಗೆ


Team Udayavani, Jan 27, 2019, 12:30 AM IST

ww-9.jpg

ಸಾಕ್ರೇಟಿಸ್‌ನಂಥ ದಾರ್ಶನಿಕ
ಸಿದ್ಧಗಂಗಾ ಶ್ರೀಗಳೆಂದೇ ಪ್ರಸಿದ್ಧರಾದ ಡಾ. ಶಿವಕುಮಾರ ಸ್ವಾಮೀಜಿಯವರು ಇತ್ತೀಚೆಗೆ ಲಿಂಗೈಕ್ಯರಾಗಿದ್ದಾರೆ. ಮಹಾನ್‌ ಸಾಧಕರಾದ ಅವರ ಸಾಧನೆಯ ಹಾದಿಯಲ್ಲಿ ಸಮಾಜದ, ಜನರ ಬಗೆಗಿನ ಕಾಳಜಿಯೇ ಹೆಚ್ಚಾಗಿದೆ. ಸುಮಾರು 60 ವರ್ಷಗಳಿಂದ ಗ್ರಾಮೀಣ ಮಕ್ಕಳಿಗೆ ಅನ್ನದಾಸೋಹ, ಅಕ್ಷರ ದಾಸೋಹ ಮಾಡುತ್ತಿದ್ದ  ರೀತಿ ಅನನ್ಯವಾದುದು. ನಿತ್ಯವೂ ಒಂಬತ್ತು ಸಾವಿರ ಮಕ್ಕಳು, ಸಾವಿರಾರು ಯಾತ್ರಾರ್ಥಿಗಳಿಗೆ ಪ್ರಸಾದ ವಿನಿಯೋಗವಾಗುತ್ತಿದೆ. ಇದು ಶ್ರೀಗಳ ಪವಾಡವಾಗಿದೆ. ಅವರ ದಾಸೋಹದ ಸ್ವರೂಪ ಹೇಗಿತ್ತೆಂದರೆ 1970ರ ಸಂದರ್ಭದಲ್ಲಿಯೇ-ಅಂದರೆ ಇಂದಿಗೆ ಹೋಲಿಸಿದರೆ ಇಪ್ಪತ್ತು ಪಟ್ಟು ಕಡಿಮೆ ಇದ್ದ ಕಾಲದಲ್ಲಿ-ಪ್ರಸಾದ ತಯಾರಿಸಲು ಸ್ವಾಮೀಜಿಯವರು ಸಾಂಬಾರ ಪುಡಿಯನ್ನು ಕೊಂಡುಕೊಳ್ಳಲು ಖರ್ಚು ಮಾಡಿದ ಹಣ 50 ಸಾವಿರ ರೂಪಾಯಿ. ಶ್ರೀಗಳ ದಾಸೋಹದ ಮಹತ್ವ ಮತ್ತು ವಿಸ್ತಾರವನ್ನು ಸಾರಲು ಬೇರೆ ಯಾವ ನಿದರ್ಶನ ಬೇಕು !

ಕರ್ನಾಟಕದಲ್ಲಿ 1961ರ ಹೊತ್ತಿಗೆ ಭೀಕರವಾದ ಕ್ಷಾಮ ಇದ್ದು ಜನ ಹಸಿವಿನಿಂದ ಕಂಗೆಟ್ಟಿದ್ದರು. ಸಾವಿರಾರು ಜನ ಸಿದ್ಧಗಂಗೆಯ ಅನ್ನದಾತನ ಕಡೆ ಮುಖ ಮಾಡಿದ್ದರು. ಆ ಘೋರ ಬರಗಾಲದಲ್ಲಿ ಪೂಜ್ಯರಿಗೆ ಮಠದಲ್ಲಿದ್ದ 2500 ವಿದ್ಯಾರ್ಥಿಗಳನ್ನು ಸಾಕುವುದೇ ಕಷ್ಟವಾಗಿತ್ತು. ಪೂಜ್ಯರು ಹತಾಶರಾಗಲಿಲ್ಲ. ಜೋಳಿಗೆ ಹಿಡಿದು ಹೊರಟೇ ಬಿಟ್ಟಿದ್ದರು. ದವಸಧಾನ್ಯ ಸಂಗ್ರಹಿಸಿದರು. ಜನತೆಯನ್ನು ಹಸಿವಿನಿಂದ ಕಾಪಾಡಿದರು. ಹಸಿವೆಂಬ ರಾಕ್ಷಸನನ್ನು ಹಿಮ್ಮೆಟ್ಟಿಸಿದ ದೇವಮಾನವನನ್ನು ಕಾಣಲು ಅಂದಿನ ಮುಖ್ಯಮಂತ್ರಿಗಳಾದ ಎಸ್‌. ನಿಜಲಿಂಗಪ್ಪನವರು, ಆಹಾರ ಸಚಿವರಾದ ಬಿ.ಡಿ. ಜತ್ತಿಯವರು ಸಿದ್ಧಗಂಗಾ ಮಠಕ್ಕೆ ಆಗಮಿಸಿ ದಾಸೋಹವನ್ನು ಕಣ್ಣಾರೆ ನೋಡಿ ಸ್ವಾಮೀಜಿಯವರಿಗೆ ನಮಿಸಿ ಅಭಿನಂದಿಸಿದ್ದರು.

ಸ್ವಾಮೀಜಿಯವರ ಪ್ರಭಾವ ವಿಶಿಷ್ಟ ರೀತಿಯದಾಗಿತ್ತು. ಧರ್ಮ ಮತ್ತು ವಿಜ್ಞಾನ ಎರಡನ್ನು ವಿಶೇಷ ಆಸಕ್ತಿಯಿಂದ ಓದಿ ಅರಗಿಸಿಕೊಂಡವರು. ಅವರ ಮಾತಿನ ಮೋಡಿ ಎಂಥವರನ್ನೂ ಸೆಳೆಯುವ ಶಕ್ತಿಯಿಂದ ಕೂಡಿರುತ್ತದೆ. ಅವರ ಬಗ್ಗೆ ಕೃತಿರಚನಕಾರರು ಹೇಳುವಂತೆ “”ಕೇಳುಗರನ್ನು ತೋಯಿಸಿ ಅವರಲ್ಲೂ ಅಂಥದೇ ಭಾವನೆಯನ್ನು ಪುಟಿಯುವಂತೆ ಮಾಡುವ ಈ ಸನ್ಯಾಸಿಯ ಮಾತಿನ ಮೋಡಿಯನ್ನು ಅನುಭವಿಸುವುದೇ ಒಂದು ಅನುಭವ. ಅವರ ಮಾತುಗಳನ್ನು ಕೇಳುತ್ತ ಅದರಲ್ಲಿ ತಲ್ಲೀನರಾಗುತ್ತ ಹೋದಂತೆ ಎಲ್ಲ ಸಣ್ಣತನಗಳು, ಸ್ವಾರ್ಥ-ಅಸೂಯೆಗಳು ನಿರ್ನಾಮವಾಗುತ್ತವೆ” ಎಂದು ಸ್ವಾಮೀಜಿಯವರನ್ನು ಗ್ರೀಸ್‌ನ ತತ್ವಜ್ಞಾನಿ ಸಾಕ್ರೇಟಿಸ್‌ನಿಗೆ ಹೋಲಿಸಿದವರಿದ್ದಾರೆ. ಇದು ಔಚಿತ್ಯಪೂರ್ಣವಾಗಿದೆ.

ಒಮ್ಮೆ ಉತ್ತರಭಾರತದ ಯಾತ್ರಿಕರ ತಂಡ ಸಿದ್ಧಗಂಗೆಗೆ ಬಂದು ಸ್ವಾಮೀಜಿಯನ್ನು ನೋಡಲು ಬಂದಿರುವುದಾಗಿ ಹೇಳಿ ಸ್ವಾಮೀಜಿ ಎಲ್ಲಿದ್ದಾರೆ ಎಂದು ವಿಚಾರಿಸಿದಾಗ ಮಠದ ಅಂಗಳದಲ್ಲಿ  ಸೌದೆ ಒಡೆಯುತ್ತಿರುವ ಕಾವಿಧಾರಿ ವ್ಯಕ್ತಿಯೇ ಸ್ವಾಮೀಜಿ ಎಂದು ತಿಳಿದು ನಿಬ್ಬೆರಗಾಗಿದ್ದರು. ಗ್ರಾಮೀಣ ಪ್ರದೇಶದಲ್ಲಿ ಪೂಜ್ಯರು ಪ್ರಾಥಮಿಕಪೂರ್ವ ಶಿಕ್ಷಣದಿಂದ ಹಿಡಿದು ಸ್ನಾತಕೋತ್ತರ ಶಿಕ್ಷಣದವರೆಗೆ ಶಾಲಾ-ಕಾಲೇಜುಗಳು, ಶಿಕ್ಷಕರ ತರಬೇತಿ ಸಂಸ್ಥೆಗಳು, ತಾಂತ್ರಿಕ ಮಹಾವಿದ್ಯಾಲಯ, ವ್ಯಕ್ತಿ ತರಬೇತಿ ಕೇಂದ್ರಗಳು ಹೀಗೆ 150ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳಲ್ಲಿ 25 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವ್ಯಾಸಂಗಕ್ಕೆ ಅವಕಾಶ ಕಲ್ಪಿಸಿದ್ದರು. ರಾಷ್ಟ್ರಕವಿ ಡಾ. ಜಿ.ಎಸ್‌. ಶಿವರುದ್ರಪ್ಪನವರ ಶ್ರೀಸಿದ್ಧಗಂಗೆಯ ಶ್ರೀಚರಣದಲ್ಲಿ ಎಂಬ ಪದ್ಯ ಮಹತ್ವದ್ದಾಗಿದೆ.

ಇಡೀ ಕರ್ನಾಟಕದಲ್ಲಿ ಕನ್ನಡ ಪಂಡಿತ್‌ ಕಾಲೇಜು ಇದ್ದದ್ದು ಧಾರವಾಡ ಮತ್ತು ಸಿದ್ಧಗಂಗಾ ಮಠದಲ್ಲಿ. ಧಾರವಾಡದ ಕಾಲೇಜು ಮುಚ್ಚಿಹೋಯಿತು. ಸಿದ್ಧಗಂಗಾ ಮಠದ ಕಾಲೇಜನ್ನು ಉಳಿಸಬೇಕೆಂದು ಡಾ. ಶಿವಕುಮಾರ ಸ್ವಾಮಿಗಳ ಸಂಕಲ್ಪವಾಗಿತ್ತು. ನಾನು ಶ್ರವಣಬೆಳಗೊಳದಲ್ಲಿ ಜರಗಿದ 81ನೆಯ ಅಖೀಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಿ ಆಯ್ಕೆಯಾದಾಗ ಸಿದ್ಧಗಂಗಾ ಮಠದ ಸ್ವಾಮೀಜಿಯವರ ಆಶೀರ್ವಾದ ಪಡೆಯಲು ಹೋಗಿದ್ದೆ. ಆಗ, ಮಠದವರು ಸ್ವಾಮೀಜಿಯವರ ಮೂಲಕ ನನಗೊಂದು ಪತ್ರ ಕೊಡಿಸಿ, “ಕನ್ನಡ ಪಂಡಿತ್‌ ಕಾಲೇಜನ್ನು ಉಳಿಸಲು ಸರ್ಕಾರವನ್ನು ಒತ್ತಾಯಿಸಬೇಕು’ ಎಂದು ಮನವಿ ಮಾಡಿದ್ದರು.

ಸಮ್ಮೇಳನದ ಸರ್ವಾಧ್ಯಕ್ಷನಾಗಿ ನನ್ನ ಭಾಷಣದಲ್ಲಿ ಈ ವಿಷಯವನ್ನು ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಪ್ರಸ್ತಾವಿಸಿದೆ. ಮುಂದೆ, ಸರ್ಕಾರವೂ ಈ ಬಗ್ಗೆ ಕ್ರಿಯಾಶೀಲವಾಗಿ ಸ್ಪಂದಿಸಿತು. ಹುದ್ದೆಗಳ ನೇಮಕಾತಿಗೆ ಆದೇಶ ಬಂತು. ಆ ಕಾಲೇಜು ಈಗಲೂ ನಡೆಯುತ್ತಿದೆ. ಸ್ವಾಮೀಜಿಯವರ ಸಂಕಲ್ಪವನ್ನು ಈಡೇರಿಸುವಲ್ಲಿ ಕಿರುಸೇವೆ ಸಲ್ಲಿಸುವ ಅವಕಾಶ ನನ್ನ ಪಾಲಿಗೆ ಬಂದ ಬಗ್ಗೆ ನನಗೆ ಆತ್ಮತೃಪ್ತಿಯಿದೆ.

ಸಾವಿರಾರು ಶಿಕ್ಷಣಾರ್ಥಿಗಳಿಗೆ ಜಾತಿ ಭೇದಭಾವವಿಲ್ಲದೆ ಶಿಕ್ಷಣವನ್ನು ನೀಡುತ್ತ ಬಂದಿರುವ ಸಿದ್ಧಗಂಗಾ ಕ್ಷೇತ್ರ ಹಾಗೂ ಸ್ವಾಮೀಜಿಯವರು ನಾಡಿಗೆ ಮಾದರಿಯಾಗಿದ್ದವರು. ನಿಜವಾಗಿ ಕೇಂದ್ರ ಸರ್ಕಾರ ಇವರಿಗೆ ಭಾರತರತ್ನ ಪ್ರಶಸ್ತಿ ನೀಡಿ ಗೌರವಿಸಬೇಕಾಗಿತ್ತು. ಧರ್ಮ, ಸಮಾಜ, ಮಾನವೀಯತೆಗಳ ನಡುವೆ ಅನುಸಂಧಾನ ಮಾಡಿಕೊಂಡ ಇಂಥ ಮಹಾತ್ಮರ ಬದುಕು ಅಪೂರ್ವವಾದದ್ದು. 

ಸಿದ್ಧಲಿಂಗಯ್ಯ

ಮಾದರಿಯಾಗಿದ್ದ  ಮಹಾತ್ಮ 
ನಾನು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕಾರ್ಯದರ್ಶಿಯಾಗಿದ್ದಾಗ ಸಿದ್ಧಗಂಗೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ವಿಜ್ಞಾನದ ಅರಿವನ್ನು ಮೂಡಿಸುವ ಸಲುವಾಗಿ ಅಲ್ಲಿಗೆ ಹೋಗಿದ್ದೆವು- ನಾಲ್ಕೈದು ವರ್ಷಗಳ ಹಿಂದೆ. ಶ್ರೀಗಳನ್ನು  ನೋಡಿದರೆ ನೂರು ವರ್ಷ ದಾಟಿದೆ ಎಂದು ಹೇಳಲು ಸಾಧ್ಯವಿರದಷ್ಟು ಕ್ರಿಯಾಶೀಲರಾಗಿ ಇದ್ದರು. ಹಾರ, ಹಣ್ಣು ಮುಂತಾದವನ್ನು ತೆಗೆದುಕೊಂಡು ಹೋಗಿದ್ದೆವು. ಹಾರವನ್ನು ಪಡೆದು ನನಗೇ ಹಾಕಿ ಸಂತೋಷಪಟ್ಟರು. “ಯಾವುದೇ ಹಣ್ಣು ನನಗೆ ಇಷ್ಟ’ ಎಂದು ಸ್ವೀಕರಿಸಿದರು. ಪರಿಷತ್ತಿನ ಪುಸ್ತಕಗಳನ್ನೂ ಜೊತೆಗೆ ನನ್ನ ಕೆಲವು ಪುಸ್ತಕಗಳನ್ನೂ ತೆಗೆದುಕೊಂಡು ಹೋಗಿದ್ದೆ. ಸಹಾಯಕರನ್ನು ಕರೆದು ಅವೆಲ್ಲವನ್ನೂ ತಮ್ಮ ಮೇಜಿನ ಮೇಲಿಡುವಂತೆ ಸೂಚಿಸಿದರು. “ಬೆಳಿಗ್ಗೆ ನಾನು ಎದ್ದ ಕೂಡಲೇ ಓದುತ್ತೇನೆ. ರಾತ್ರಿ ಓದದೇ ನಿದ್ರೆ ಬರುವುದಿಲ್ಲ. ಎಲ್ಲಿಗಾದರೂ ಹೋಗುವುದಿದ್ದರೂ ಪುಸ್ತಕಗಳನ್ನು ಜೊತೆಯಲ್ಲಿಯೇ ತೆಗೆದುಕೊಂಡು ಹೋಗುತ್ತೇನೆ. ಸಭೆ-ಸಮಾರಂಭಗಳಲ್ಲಿ ಯಾರಾದರೂ ಬರುವುದು ತಡವಾದರೆ ಆ ಸಮಯದಲ್ಲಿಯೂ ಓದಿನಲ್ಲಿ ನಿರತನಾಗುತ್ತೇನೆ’ ಎಂದರು. ನಿಜವಾಗಿ ಯುವ ಜನಾಂಗಕ್ಕೆ ಯಾರೂ ಮಾಡೆಲ್‌ ಇಲ್ಲ ಎಂದು ವ್ಯಥೆ ಪಡುತ್ತೇವೆ. ಶತಾಯುಷ್ಯವನ್ನು ದಾಟಿದ ಇಂಥ ಮಹಾತ್ಮರು ಇರುವಾಗ ಬೇರೆ ಮಾಡೆಲ್‌ಗ‌ಳನ್ನು ಯಾಕೆ ಹುಡುಕಬೇಕು ಎಂದು ನನ್ನ ಮನಸ್ಸಿಗೆ ತೋರಿತು.

“ನಿಮ್ಮ ಬರಹಗಳನ್ನು ಆಗಾಗ ಪತ್ರಿಕೆಗಳಲ್ಲಿ ಓದುತ್ತಿರುತ್ತೇನೆ. ನಿಜವಾಗಿಯೂ ಸಮಾಜದಲ್ಲಿ ವೈಜ್ಞಾnನಿಕ ಪ್ರಜ್ಞೆಯನ್ನು ಮೂಡಿಸುತ್ತಿರುವುದು ತುಂಬಾ ಒಳ್ಳೆಯದು’ ಎಂದರು. ಎಲ್ಲರಿಗೂ ಇರುವಂತೆ ನನಗೂ ಅವರ ಆರೋಗ್ಯದ ಬಗ್ಗೆ ಕುತೂಹಲ ಹುಟ್ಟಿ  ಕೇಳಿದೆ. ಅದಕ್ಕೆ ಅವರು, “ನನಗೆ ಡಯಾಬಿಟೀಸ್‌, ಬಿಪಿ ಯಾವುದೂ ಇಲ್ಲ. ನಾನು ಮಿತಾಹಾರಿ, ನಿದ್ದೆ ಕಡಿಮೆ’ ಎಂದರು. “ಬೆಳಿಗ್ಗೆ  ಎದ್ದ ತತ್‌ಕ್ಷಣ ಖಾಲಿ ಹೊಟ್ಟೆಯಲ್ಲಿ ಬೇವಿನ ಚಕ್ಕೆಯ ಕಷಾಯ ಅಥವಾ ಬೇವಿನ ಎಲೆ, ಒಂದು ಇಡ್ಲಿ ಚಟ್ನಿ. ಮಧ್ಯಾಹ್ನ ಎರಳೆಕಾಯಿ ಗಾತ್ರದ ಮುದ್ದೆ ಸ್ವಲ್ಪ$ಅನ್ನ, ಸ್ವಲ್ಪ$ಹಣ್ಣು. ರಾತ್ರಿ ಸ್ವಲ್ಬ ಅನ್ನ-ಹಣ್ಣು ಇಷ್ಟೇ’ ಎಂದರು. ಅಷ್ಟು ದೊಡ್ಡ ಮಠದ ಸ್ವಾಮೀಜಿ ಆಗಿದ್ದರೂ ಅವರು ಅಲ್ಲಿನ ಸಾಮಾನ್ಯ ಕಾರ್ಯಕರ್ತರ ಹಾಗೆ ಕೆಲಸ ಮಾಡುತ್ತಿದ್ದರು. ಎಲ್ಲಿಗಾದರೂ ಕಾಲ್ನಡಿಗೆಯಲ್ಲಿಯೇ ಹೋಗುತ್ತಿದ್ದರು. ಮಕ್ಕಳಿಗೆ ಊಟ ಬಡಿಸುವುದಿರಬಹುದು, ಹೊಲದಲ್ಲಿ ಕೆಲಸ ಹೇಳುವುದಾಗಬಹುದು, ಪಾಠ ಹೇಳುವುದಾಗಿರಬಹುದು. ಹೇಳಿ ಮಾಡಿಸುವುದು ಬೇರೆ ತಾನೇ ಮಾಡಿ ಬೇರೆಯವರು ತೊಡಗುವಂತೆ ಮಾಡುವುದು ಬೇರೆ. “ಕಾಯಕ ನಿಷ್ಠೆ’ ಎಂಬ ಪದದ ಅರ್ಥ ನನಗೆ ಸ್ವಾನುಭವಕ್ಕೆ ಬಂದದ್ದು ಅವರ ಸಮ್ಮುಖದಲ್ಲಿ.

“ಪರಿಷತ್ತಿನಲ್ಲಿ ಏನೇನು ಕೆಲಸ ಮಾಡುತ್ತೀರಿ?’ ಎಂದು ಕೇಳಿದರು. ಅದೇ ಸಮಯದಲ್ಲಿ ಶಿರಾ ಹತ್ತಿರದ ಗೊಲ್ಲರ ಹಟ್ಟಿಗಳಲ್ಲಿ ಬಸುರಿ ಹೆಣ್ಣುಮಕ್ಕಳನ್ನು ಮನೆಯಿಂದ ಆಚೆ ಗುಡ್ಲು ಹಾಕಿ, ಏನೊಂದೂ ಮಾಡಿಕೊಡದೆ ದೂರ ಇಡುವ ಸಂಪ್ರದಾಯ ಇತ್ತು. ನಾನು ಶ್ರೀಗಳೊಂದಿಗೆ, “ಅಲ್ಲಿಗೆ ಹೋಗಿ ನಾವೆಲ್ಲ ನಿಮ್ಮ ಜೊತೆ ಇದ್ದೇವೆ. ಇವೆಲ್ಲ ಮೂಢನಂಬಿಕೆ ಎಂದು ಹೇಳಿ ಅವರಲ್ಲಿ ವೈಜಾnನಿಕ ಅರಿವನ್ನು ಬೆಳೆಸುವ ಕೆಲಸ ಮಾಡುತ್ತಿದ್ದೇವೆ’ ಎಂದೆ. ಅವರಿಗೆ ತುಂಬಾ ಸಂತೋಷವಾಯಿತು. ಮೆಚ್ಚುಗೆಯ ಮಾತುಗಳನ್ನಾಡಿ, “ಇಂಥ ಕೆಲಸ ಹೆಚ್ಚು ಆಗಬೇಕು. ಋತುಚಕ್ರ, ತಾಯ್ತನ ಮುಂತಾದವು ಹೆಣ್ಣಿನ ಸಹಜ ಪ್ರಕ್ರಿಯೆಗಳು. ಅದಕ್ಕೆ ಹೆದರುವ ಅಥವಾ ಅಸಹ್ಯಪಟ್ಟುಕೊಳ್ಳುವ ಕಾರಣ ಇಲ್ಲ. ಇವೆಲ್ಲಕ್ಕೂ ಮಹಿಳೆಯರು ಹೆಮ್ಮೆ ಪಡಬೇಕು. ಮಹಿಳೆಯರ ಆಹಾರ, ಆರೋಗ್ಯದ ಬಗ್ಗೆ ವೈಜ್ಞಾನಿಕ  ಅರಿವು ಉಂಟಾದರೆ ಸಾಮಾಜಿಕ ಬದಲಾವಣೆ ಸಾಧ್ಯ. ಇದು ಸ್ಮರಣೀಯ ಕಾರ್ಯಕ್ರಮ’ ಎಂದರು.

ಸ್ವಾಮೀಜಿ ಅವರು ಕೆಲವರಿಗೆ ತಾಯಿತ ಬರೆದುಕೊಡುತ್ತಿದ್ದರು. ನನಗೆ ಕುತೂಹಲ ಹುಟ್ಟಿತು. ಕೇಳಿದೆ, “ನೀವು ವೈಜ್ಞಾನಿಕವಾಗಿ ಆಲೋಚನೆ ಮಾಡುವವರು. ಯಾವುದೇ ಹವನ ಹೋಮ, ವಾಸ್ತು, ಭವಿಷ್ಯಗಳಲ್ಲಿ ನಂಬಿಕೆ ಇಲ್ಲದವರು. ಆದರೆ, ತಾಯಿತ ಮಾಡಿಕೊಡುತ್ತಿದ್ದೀರಲ್ಲ?’ ಎಂದು. ಅದಕ್ಕವರು ಹೇಳಿದರು. “ನೋಡಿ, ಎಲ್ಲೆಲ್ಲಿಂದಲೋ ಬರುತ್ತಾರೆ. ಅವರಿಗೆ ಒಂದು ನಂಬಿಕೆ ಹೀಗೆ ಮಾಡಿದರೆ ಸರಿ ಹೋಗುತ್ತದೆ ಎಂದು. ಮಕ್ಕಳಲ್ಲಿ ಭಯ ಹುಟ್ಟಿರುತ್ತದೆ, ಮತ್ತೇನೋ ಅನನುಕೂಲ ಆಗಿರುತ್ತದೆ. ಅದನ್ನು ಮಾನಸಿಕವಾಗಿ ಸರಿಪಡಿಸಲು ಇದೊಂದು ಉಪಾಯ ಅಷ್ಟೆ. ಇದನ್ನೆಲ್ಲ ಮಾಡಿಕೊಡುವುದಿಲ್ಲ ಎಂದರೆ ನೊಂದುಕೊಳ್ಳುತ್ತಾರೆ. ಜೊತೆಗೆ ಇದರಿಂದ ಅವರಿಗೆ ಯಾವ ಅಡ್ಡಪರಿಣಾಮವೂ ಆಗುವುದಿಲ್ಲ. ಮಾನಸಿಕ ಸ್ಥಿತಿ ಸದೃಢವಾಗಲು ಕಾರಣವಾಗುತ್ತದೆ’ ಎಂದರು.

ಸಿದ್ಧಗಂಗಾಮಠದ ಶ್ರೀಶಿವಕುಮಾರ ಸ್ವಾಮಿಗಳನ್ನು ಸಂದರ್ಶಿಸಿದ ಬಳಿಕ ನನ್ನೊಳಗೆ ಯೊಚನೆ ಹೊಸ ಬೆಳಕು ಮೂಡಿತು. ಭಾವನಾತ್ಮಕತೆ ಮತ್ತು ವೈಚಾರಿಕತೆಗಳ ನಡುವೆ ಇಂಥ ಸಮನ್ವಯ ಸಾಧಿಸುವುದು ಸಾರ್ಥಕ ಸಾಧನೆಯೇ ಸರಿ. ಅವರ ಆದರ್ಶದ ನಡೆಯನ್ನು ನಾವು ಅನುಸರಿಸೋಣ.

ವಸುಂಧರಾ ಭೂಪತಿ

ಸಿದ್ಧಗಂಗೆಯ ಶ್ರೀಚರಣಕ್ಕೆ

ಹರನ ಕರುಣೋದಯದ ತೆರದಲಿ ಬೆಳಗು ತೆರೆಯುವ ಹೊತ್ತಿಗೆ
ವೇದಘೋಷದ ದಿವ್ಯ ಲಹರಿಯು ಮನವ ತೊಳೆಯಲು ಮೆಲ್ಲಗೆ
ಬರುವ ಶ್ರೀಗುರು ಪಾದುಕೆಯ ದನಿ ಅನುರಣಿತವಾಗಲು ಮೌನಕೆ
ಸಿದ್ಧಗಂಗೆಯ ನೆಲವು- ಜಲವೂ ನಮಿಸಿ ನಿಲುವುದು ಸುಮ್ಮಗೆ 

ಬೆಟ್ಟ-ಬಂಡೆಯ ನಡುವೆ ಗಿಡ-ಮರ ಹೂವನೆತ್ತಿರೆ ಪೂಜೆಗೆ
ದೇಗುಲದ ಪೂಜಾರತಿಯ ಗಂಟೆಯ ಮೊಳಗು ಮುಟ್ಟಲು ಬಾನಿಗೆ
ಧೂಪ ಗಂಧವು ಮಂದ ಮಂದಾನಿಲನ ಜೊತೆಯೊಳು ಮನಸಿಗೆ
ಸಂಭ್ರಮವನ್ನುಕ್ಕಿಸೆ ಬೆಳಗು ಇಳಿವುದು ಸಿದ್ಧಗಂಗೆಯ ಕ್ಷೇತ್ರಕೆ 

ಇಲ್ಲಿ ಇಲ್ಲ ಪವಾಡದದ್ಭುತ ಅಥವಾ ಉತ್ಸವದಬ್ಬರ 
ಮುಡಿಯನೆತ್ತಿದೆ ಸರಳ ಸಾಧಾರಣದ ಬದುಕಿನ ಗೋಪುರ
ಅದರ ಮೇಲಿದೆ ತ್ಯಾಗ ಧ್ವಜ ಕೈಬೀಸಿ ಕರೆವುದು ಪಥಿಕರ
ಪರಮ ನಿರಪೇಕ್ಷೆಯಲಿ ದಿನವೂ ಸೇವೆಗಾಗಿದೆ ಸರ್ವರ 

ಭಿಕ್ಷೆ ಹೊರಟಿದೆ ಜಂಗಮರ ಜೋಳಿಗೆ, ಲಕ್ಷ ಜನಗಳ ಪೊರೆದಿದೆ ;
ತೀರ್ಥವಾಗಿದೆ ಭಕ್ತರಿಗೆ, ಚಿರಸ್ಫೂರ್ತಿಯಾಗಿದೆ ಬುದ್ಧಿಗೆ
ಬಂದ ಹಣತೆಗೆ ಎಣ್ಣೆ-ಬತ್ತಿಯ- ದೀಪ್ತಿ ದಾನವ ಮಾಡಿದೆ
ರಕ್ಷೆಯಾಗಿದೆ ಮುಗಿಲನೇರಿದ ಎಷ್ಟೋ ರೆಕ್ಕೆಯ ಹಾದಿಗೆ 

ಸದ್ದುಗದ್ದಲವಿರದ ಸಾಧನೆ ಇಲ್ಲಿ ಗದ್ದುಗೆಯೇರಿದೆ 
ಕಾಯಕವೇ ಕೈಲಾಸವೆನ್ನುವ ಮಾತು ಕೃತಿಯೊಳು ಮೂಡಿದೆ
ಕಾವಿಯುಡುಗೆಯನ್ನುಟ್ಟು ನಭವೇ ಕಿರಣಹಸ್ತವ ಚಾಚಿದೆ 
ಎಲ್ಲ ನನ್ನವರೆನುವ ಭಾವದ ಕರುಣೆಯೇ ಕಣ್ತೆರೆದಿದೆ
(ಜಿ. ಎಸ್‌. ಶಿವರುದ್ರಪ್ಪ ಅವರ ಗೋಡೆ ಸಂಕಲನದಲ್ಲಿರುವ ಕವಿತೆ)

ಇತ್ತೀಚೆಗೆ ಲಿಂಗೈಕ್ಯರಾದ ತುಮಕೂರಿನ ಸಿದ್ಧಗಂಗಾಮಠದ ಡಾ. ಶಿವಕುಮಾರ ಮಹಾಸ್ವಾಮಿಗಳವರ ನೂರಾಹನ್ನೊಂದು ವರ್ಷಗಳ ಉನ್ನತ ಬದುಕೆಂದರೆ ಆಧ್ಯಾತ್ಮಿಕತೆ-ವೈಚಾರಿಕತೆಗಳ ಸಮನ್ವಯ ದರ್ಶನ !
ರಾಷ್ಟ್ರಕವಿ  ಜಿ. ಎಸ್‌. ಶಿವರುದ್ರಪ್ಪ 

ಟಾಪ್ ನ್ಯೂಸ್

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

yathnal

Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್‌

bjp-congress

Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ

BJP FLAG

Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ

kolahara-TV

By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!

8

Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್‌ ಗೆಲುವು: ಬೊಮ್ಮಾಯಿ ಆರೋಪ

RSS

Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

6

ಐರನ್‌ ಮ್ಯಾನ್: ರೀಲ್‌ ಅಲ್ಲ, ರಿಯಲ್‌ ಹೀರೋಗಳ ಕಥೆ!

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

Syed Mushtaq Ali Trophy T20: ಕರ್ನಾಟಕಕ್ಕೆ 6 ರನ್‌ಗಳ ಸೋಲು

Syed Mushtaq Ali Trophy T20: ಕರ್ನಾಟಕಕ್ಕೆ 6 ರನ್‌ಗಳ ಸೋಲು

ICC Champions Trophy: ನ.26ಕ್ಕೆ ಐಸಿಸಿ ತುರ್ತು ಸಭೆ?

ICC Champions Trophy: ನ.26ಕ್ಕೆ ಐಸಿಸಿ ತುರ್ತು ಸಭೆ?

16

Pro Kabaddi: ಗುಜರಾತ್‌ಗೆ ರೋಚಕ ಜಯ

yathnal

Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.