ವಿಭೂತಿ ಆರಾಧನೆ


Team Udayavani, Jan 28, 2019, 6:05 AM IST

vibhuthi.jpg

ತಪಸ್ವಿಗಳು, ಸಾಧಕರು, ಸ್ವಾಮೀಜಿಗಳು ಹಣೆ, ಕೈಗಳಿಗೆ ಭಸ್ಮ ಧರಿಸುತ್ತಾರೆ. ಅವರೆಲ್ಲಾ ಏಕೆ ಹೀಗೆ ಮಾಡುತ್ತಾರೆ? ಇದರ ವಿಶೇಷತೆ ಏನು, ಆ ಭಸ್ಮಗಳಲ್ಲಿ ಅಂಥದ್ದೇನಿದೆ? ಹೀಗೆ ನಮ್ಮ ಯುವ ಸಮೂಹ ಹೀಗೆಲ್ಲಾ ಕೇಳುವುದು ಸಾಮಾನ್ಯ. ಈ ಭಸ್ಮಕ್ಕೊಂದು ಪರಂಪರೆ-­ಸಂಸ್ಕೃತಿ ಇದೆ ಎಂಬುದು ಬಹುತೇಕರಿಗೆ ಗೊತ್ತಿಲ್ಲ…

ಈ ಭಸ್ಮದ ಉತ್ಪಾದನೆ, ಮಾರಾಟವೂ ಒಂದು ಶುದ್ಧ ಉದ್ಯಮವೂ ಕೂಡ. ಆದರೆ, ನಮ್ಮ ಹಿರಿಯರು ಕಾಲವಾದರೆ, ಈ ಭಸ್ಮವೂ ಕಾಲವಾಗುತ್ತದೆ ಎಂಬ ಆತಂಕ ಈಗ ಎಲ್ಲೆಡೆ ಮೂಡಿದೆ. ಕಾರಣ, ಭಸ್ಮ ಉತ್ಪಾದನೆ ಮಾಡುವುದೂ ಒಂದು ಶ್ರೇಷ್ಠ ಕಾಯಕ. ಶುದ್ಧ ಶರೀರ, ಶುದ್ಧ ಮನಸ್ಸು, ಸೇವೆಯ ಮನೋಭಾವನೆಯಿಂದ ಮುಂದುವರೆದಾಗ ಮಾತ್ರ ಈ ಭಸ್ಮ ತಯಾರಿಕೆ ಬಂದೀತು.

ಏನಿದು (ವಿಭೂತಿ) ಭಸ್ಮ ?

ಭಸ್ಮ ಅಂದರೆ ಕೇವಲ ಸಗಣಿ ಸುಟ್ಟು ಅದರಿಂದ ತಯಾರಿಸುವ ಗಟ್ಟಿಯಲ್ಲ. ಅದನ್ನು ತಯಾರಿಸಲು, ಅದರದೇ ಆದ ಪರಂಪರೆ, ಮಾರ್ಗವಿದೆ. ಅದರಲ್ಲೂ ಜರ್ಸಿ ಅಥವಾ ಎಮ್ಮೆಯ ಸಗಣಿಯಿಂದ ತಯಾರಿಸು­ವುದಲ್ಲ. ದೇಸೀಯ ಜವಾರಿ ಗೋವುಗಳ ಸಗಣಿಯಿಂದ ಮಾತ್ರ ತಯಾರಿಸುವುದೇ ಭಸ್ಮ ಅಥವಾ ವಿಭೂತಿ.

ಇದರಲ್ಲಿ ಒಟ್ಟು ಮೂರು ಪ್ರಕಾರಗಳಿವೆ. ಕ್ರಿಯಾಭಸ್ಮ, ಸಾದಾ ಭಸ್ಮ ಹಾಗೂ ಕಲ್ಪಭಸ್ಮ. ಹೀಗೆ ಮೂರು ಮಾದರಿಯ ಭಸ್ಮಗಳಲ್ಲಿ, ಸಾದಾ ಭಸ್ಮವನ್ನು ದೇಶದ ಎಲ್ಲೆಡೆ ತಯಾರಿಸಲಾಗುತ್ತದೆ. ಕ್ರಿಯಾಭಸ್ಮ ಮಾತ್ರ, ಇಡೀ ದೇಶದಲ್ಲಿ ಎರಡು ಕಡೆ ಮಾತ್ರ ಉತ್ಪಾದನೆಯಾಗುತ್ತವೆ. ಅದೂ ಬಾಗಲಕೋಟೆ ಜಿಲ್ಲೆಯಲ್ಲಿ ಮಾತ್ರ ಎಂಬುದು ವಿಶೇಷ.

ಕ್ರಿಯಾಭಸ್ಮ ಮಾಡುವ ವಿಧಾನದಲ್ಲಿ ಹಲವು ಕ್ರಿಯೆ (ಕಾಯಕ)ಗಳಿವೆ. ಒಂದು ಟ್ರ್ಯಾಕ್ಟರ್‌ ಸಗಣಿ ಸುಟ್ಟು, ನೀರಿನಲ್ಲಿ ಬಸಿದು (ಸೋಸಿ) ತೆಗೆಯುತ್ತಾರೆ. ಅದರಿಂದ ಕೇವಲ 180ರಿಂದ 200 ಕ್ರಿಯಾಭಸ್ಮದ ಗಟ್ಟಿಗಳು ಮಾತ್ರ ತಯಾರಾಗುತ್ತವೆ. ಅದೇ ಸಾದಾ ಭಸ್ಮ ಮಾಡಿದರೆ, ಒಂದು ಟ್ರ್ಯಾಕ್ಟರ್‌ ಸಗಣಿಯಿಂದ 500ರಿಂದ 550 ವಿಭೂತಿ ಗಡ್ಡೆ ತಯಾರಿಸಬಹುದು. ಹೀಗಾಗಿ ಸಾದಾ ಭಸ್ಮಕ್ಕೂ, ಕ್ರಿಯಾಭಸ್ಮಕ್ಕೂ ಬಹಳ ವ್ಯತ್ಯಾಸವಿದೆ.

ಸಾದಾ ಭಸ್ಮಗಳನ್ನು ನಿತ್ಯ ಮನೆಯಲ್ಲಿ ಯಾರು ಬೇಕಾದರೂ ಬಳಕೆ ಮಾಡಬಹುದು. ಕ್ರಿಯಾಭಸ್ಮಗಳನ್ನು ಸ್ವಾಮೀಜಿಗಳು, ಸಾಧಕರು ಹೆಚ್ಚು ಬಳಕೆ ಮಾಡುತ್ತಾರೆ. ಸ್ನಾನ ಮಾಡಿದ ಮೇಲೆಯೇ ಅದನ್ನು ಮುಟ್ಟಬೇಕು. ನಿತ್ಯವೂ ಜಗಲಿ (ದೇವರ ಕೋಣೆ)ಯಲ್ಲಿಯೇ ಇಟ್ಟಿರಬೇಕು ಎಂಬ ಸಂಪ್ರದಾಯ ಚಾಲ್ತಿಯಲ್ಲಿದೆ.

ಭಸ್ಮಗಳಲ್ಲಿ ಇನ್ನೊಂದು ಕಲ್ಪಭಸ್ಮ. ಇದನ್ನು ದೇಶದ ಯಾವ ಮೂಲೆಯಲ್ಲೂ ಇಂದು ಉತ್ಪಾದನೆ ಮಾಡುತ್ತಿಲ್ಲ. ಇದನ್ನು ತಯಾರಿಸುವುದೇ ಒಂದು ದೊಡ್ಡ ತಪಸ್ಸು. ಹಿಂದೆ ಇದನ್ನು ಸ್ವಾಮೀಜಿಗಳೇ ತಯಾರಿಸುತ್ತಿದ್ದರು.

ನಿತ್ಯ ಬೆಳಗ್ಗೆ ಸ್ನಾನ ಮಾಡಿದ ಬಳಿಕ ಮಡಿಯಲ್ಲಿ ಆಕಳಿನ ಬಳಿ ಹೋಗಿ, ಕಾಯಬೇಕು. ಆಕಳು ಸೆಗಣಿ ಹಾಕುವುದನ್ನೇ ಕಾಯ್ದು, ಅದು ನೆಲದ ಮೇಲೆ ಹಾಕದಂತೆ ನೋಡಿಕೊಳ್ಳಬೇಕು. ಆಕಳು ಹಾಕುವ ಸೆಗಣಿಯನ್ನು ನೇರವಾಗಿ ಕೈಯಲ್ಲಿ ಹಿಡಿಯಬೇಕು. ಬಳಿಕ ಅದನ್ನು ಅಂತರದಲ್ಲೇ (ನೆಲಕ್ಕೆ ತಾಗದಂತೆ) ಒಣಗಿಸಬೇಕು. ಅಂತರದಲ್ಲೇ ಸುಟ್ಟು, ನೀರಿನಲ್ಲಿ ಸೋಸಬೇಕು. ಇದೆಲ್ಲವನ್ನೂ ಒಂದೇ ದಿನದಲ್ಲಿ ಮಾಡಲಾಗುವುದಿಲ್ಲ. ಅಷ್ಟೊಂದು ಮಡಿ-ಮೈಲಿಗೆಯಿಂದ ಮಾಡಲೂ ಸಾಧ್ಯವಾಗುವುದಿಲ್ಲ. ಹೀಗಾಗಿ ಕಲ್ಪಭಸ್ಮವನ್ನು ಯಾರೂ ಮಾಡುವುದಿಲ್ಲ. ಒಂದು ವೇಳೆ ಕಲ್ಪಭಸ್ಮ ಮಾಡಿದರೆ, ಅದು, ಮನುಷ್ಯನ ಎಲ್ಲ ರೋಗಗಳಿಗೂ ರಾಮಬಾಣ ಎಂಬ ಮಾತಿದೆ. ಮಕ್ಕಳಿಗೆ ಕೆಮ್ಮು-ನೆಗಡಿಯಾದರೆ, ಮೈ-ಕೈ ನೋವು ಬಂದರೆ, ಶರೀರದಲ್ಲಿ ಯಾವುದೇ ರೋಗ ಕಂಡು ಬಂದರೂ, ಈ ಕಲ್ಪಭಸ್ಮದ ಸ್ವಲ್ಪ ಭಾಗ ಸೇವಿಸಿದರೆ ಕಡಿಮೆಯಾಗುತ್ತದೆ ಅನ್ನುವ ನಂಬಿಕೆ ಗ್ರಾಮೀಣ ಪ್ರದೇಶದಲ್ಲಿ ಈಗಲೂ ಇದೆ. ಹೀಗೆ ವಿಭೂತಿ (ಭಸ್ಮ)ಯು ಸಾದಾ, ಕ್ರಿಯಾ ಮತ್ತು ಕಲ್ಪ ಎಂಬ ಮೂರು ತೆರನಾಗಿದ್ದು, ದೇಶದಲ್ಲಿ ಬಹುತೇಕ ಸಾದಾ ಭಸ್ಮ ಬಳಕೆಯಾಗುತ್ತದೆ. ಅದು ಕೆಲವೇ ಕೆಲವು ಸ್ಥಳಗಳಲ್ಲಿ ಸಿಗುತ್ತದೆ. ಕ್ರಿಯಾಭಸ್ಮವು ಬಾಗಲಕೋಟೆಯಲ್ಲಿ, ಅದರಲ್ಲೂ ಮುಚಖಂಡಿಯ ವೀರಯ್ಯ ಹಿರೇಮಠರ ವೀರಭ್ರದೇಶ್ವರ ವಿಭೂತಿ ನಿರ್ಮಾಣ ಕೇಂದ್ರದಲ್ಲಿ ಮಾತ್ರ ದೊರೆಯುತ್ತವೆ.

ಭಸ್ಮ ತಯಾರಿಕೆ ಹೇಗೆ ?
ಈ ಭಸ್ಮ ತಯಾರಿಕೆ ವಿಶಿಷ್ಟತೆಯಿಂದ ಕೂಡಿದೆ. ದೇಶೀಯ ಜವಾರಿ ತಳಿಯ ಗೋವುಗಳು ನೀಡುವ ಸಗಣಿ­ಯನ್ನು ಬಿಸಿಲಿನಲ್ಲಿ ಒಣ ಹಾಕಬೇಕು. ಬಳಿಕ ಅದನ್ನು ಸುಟ್ಟು ಬೂದಿ ಮಾಡಬೇಕು. ಆ ಬೂದಿಯನ್ನು ರಾತ್ರಿಯೇ ಮಣ್ಣಿನ ದೊಡ್ಡ ಮಡಿಕೆಯಲ್ಲಿ ನೀರಿನೊಂದಿಗೆ ಹಾಕಬೇಕು. ಬೆಳಗ್ಗೆ ಬೂದಿ ಮಿಶ್ರಿತ ನೀರನ್ನು ಇನ್ನೊಂದು ಮಡಿಕೆಗೆ ಹಾಕಿ ಸೋಸಬೇಕು (ಬಟ್ಟೆಯಿಂದ). ಸೋಸಿದ ಬಳಿಕ ಸಿಗುವ ಬೂದಿಯ ರಾಡಿಯನ್ನು ಪುನಃ ಬಿಸಿಲಿಗೆ ಒಣ ಹಾಕಬೇಕು. ಬಳಿಕ ಯಾವ ಅಳತೆಯ ವಿಭೂತಿ ಬೇಕೋ ಆ ಆಳತೆಯಲ್ಲಿ ರಾಡಿಯ ಗುಂಪು ಹಾಕಬೇಕು. ನಂತರ ಒಂದು ಪರಸಿ ಕಲ್ಲಿನ ಮೇಲೆ, ನಿಧಾನವಾಗಿ ಬಡಿಯಬೇಕು. ಒಂದು ವಿಭೂತಿ ಸುತ್ತಲೂ ಆರು ಮೂಲೆ ಬಂದಿರಬೇಕು. ನಂತರ ಅದನ್ನು ಮೂರು ದಿನಗಳ ಕಾಲ ಭಟ್ಟಿ ರೀತಿ ಸುಡಬೇಕು. ಆಗ ಸಿಗುವುದೇ ಸಾದಾ ಭಸ್ಮ.

ಹೀಗೆ ಒಂದು ಟ್ರ್ಯಾಕ್ಟರ್‌ ಸಗಣಿಯಿಂದ ಒಂದು ವಾರಕ್ಕೆ 500 ಸಾದಾಭಸ್ಮ ಉತ್ಪಾದನೆ ಮಾಡಬಹುದು. ಆದರೆ, ಕ್ರಿಯಾಭಸ್ಮ ತಯಾರಿಕೆಗೆ ಇದೇ ಮಾದರಿಯಲ್ಲಿ ಎರಡು ಬಾರಿ ಪ್ರಕ್ರಿಯೆ ಮಾಡಬೇಕು. ಒಂದುಟ್ರ್ಯಾಕ್ಟರ್‌ ಸಗಣಿಯಿಂದ 180 ಕ್ರಿಯಾಭಸ್ಮದ ಗಟ್ಟಿ ಮಾತ್ರ ದೊರೆಯುತ್ತವೆ. ಹೀಗಾಗಿ, ಸಾದಾ ಭಸ್ಮ ಒಂದಕ್ಕೆ 30 ರೂ. ಇದ್ದರೆ, ಕ್ರಿಯಾಭಸ್ಮ ಒಂದಕ್ಕೆ 50 ರೂ.ಗೆ ಮಾರಾಟವಾಗುತ್ತವೆ.

ಖರ್ಚು-ವೆಚ್ಚ …
ಈ ಭಸ್ಮ ತಯಾರಿಕೆ ಕೆಲಸಕ್ಕೆ ಕನಿಷ್ಠ ನಾಲ್ವರು ಬೇಕು. ಒಬ್ಬ ಪುರುಷ ಕಾರ್ಮಿಕ, ನಾಲ್ವರು ಮಹಿಳೆಯರು ಕೂಡಿ, ಮುಚಖಂಡಿಯ ವೀರಭದ್ರೇಶ್ವರ ವಿಭೂತಿ ತಯಾರಿಕೆ ಕೇಂದ್ರದಲ್ಲಿ ಭಸ್ಮ ತಯಾರಿಸುತ್ತಾರೆ.

ಈ ಕೇಂದ್ರಕ್ಕೆ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಯಲಗೂರ ಗೋ ಶಾಲೆಯಿಂದ ಒಂದು ವಾರಕ್ಕೆ ಒಂದು ಟ್ರ್ಯಾಕ್ಟರ್‌ ಗೋವಿನ ಸಗಣಿ (ಒಂದು ಲೋಡ್‌ಗೆ 7,500 ರೂ. – ಟ್ರ್ಯಾಕ್ಟರ್‌ ಬಾಡಿಗೆ 4 ಸಾವಿರ) ತರುತ್ತಾರೆ. ಅದನ್ನು ಎರಡು ದಿನ ಬಿಸಿಲಿಗೆ ಒಣ ಹಾಕಲಾಗುತ್ತದೆ. ಈ ಕಾರ್ಯ ನೋಡಿಕೊಳ್ಳಲು ಲಕ್ಷ್ಮಣ ಸಾಸನ್ನವರ ಎಂಬ ಖಾಯಂ ಕಾರ್ಮಿಕರಿದ್ದಾರೆ. ಸಗಣಿ ಒಣಗಿದ ಬಳಿಕ ಸುಡುವುದು, ಭಸ್ಮಗಳನ್ನು ಭಟ್ಟಿ ಹಾಕುವುದು, ಮಡಿಕೆಗಳಿಗೆ ನೀರು ಹಾಕುವುದನ್ನೆಲ್ಲ ನೋಡಿಕೊಳ್ಳಲು ಒಬ್ಬರು ಕಡ್ಡಾಯವಾಗಿಬೇಕು. ಅವರಿಗೆ 300ರಿಂದ 400 ದಿನದ ಸಂಬಳ. ಇನ್ನು ನಾಲ್ವರು ಮಹಿಳೆಯರಿಗೆ ನಿತ್ಯ 200ರಿಂದ 250 ರೂ. ಸಂಬಳ. ವಾರದಲ್ಲಿ ಕನಿಷ್ಠ 4 ದಿನ ಭಸ್ಮ ತಯಾರಿಕೆ ಕೆಲಸ ಮಾಡುತ್ತಾರೆ. ನಾಲ್ವರು ಮಹಿಳೆಯರಿಗೆ ನಾಲ್ಕು ದಿನಕ್ಕೆ 1 ಸಾವಿರ ಸಂಬಳ. ಒಟ್ಟು 1400ರಿಂದ 1500 ರೂ. ಕಾರ್ಮಿಕರ ವೇತನ, 11 ಸಾವಿರದ ಸಗಣಿಗೆ ಕೊಟ್ಟರೆ, ಅದರಿಂದ ಉತ್ಪಾದನೆಯಾಗುವ ಅಂದಾಜು 550 ಭಸ್ಮಗಳಿಂದ 16,500 ರೂ. ಬರುತ್ತದೆ. ಖರ್ಚು-ವೆಚ್ಚ ತೆಗೆದರೆ ಕನಿಷ್ಠ 3 ಸಾವಿರ ವರೆಗೆ ಆದಾಯ ಉಳಿಯುತ್ತದೆ. ಇದು ಒಮ್ಮೆ ಹೆಚ್ಚಾದರೆ, ಮತ್ತೂಮ್ಮೆ ಕಡಿಮೆಯೂ ಆಗುತ್ತದೆ. ವೀರಯ್ಯ ಹಿರೇಮಠರ ವಿಭೂತಿ ನಿರ್ಮಾಣ ಕೇಂದ್ರದಲ್ಲಿ ಅವರ ಪತ್ನಿ ಬಸಮ್ಮ ವೀರಯ್ಯ ಹಿರೇಮಠ ಕೂಡ ನಿತ್ಯ ಕಾರ್ಮಿಕರಂತೆ ಕೆಲಸ ಮಾಡುತ್ತಾರೆ.

ದೇವಸ್ಥಾನ-ಮಠಗಳಲ್ಲಿ ಹೆಚ್ಚು ಬಳಕೆ
ಸಿದ್ಧಗಂಗಾ ಮಠ, ಶಿರಿಗೆರೆ, ಚಿತ್ರದುರ್ಗದ ಮುರಘಾಮಠ, ಹುಬ್ಬಳ್ಳಿಯ ಮೂರುಸಾವಿರ ಮಠ, ಕಲಬುರಗಿಯ ಸುಲಫಲ, ಆರ್‌ಕೋಡ, ಮಧುರೈ, ಕೊಯಮುತ್ತೂರಿನ ಸದ್ಗುರುಗಳ ಸದಾ ಯೋಗ ಕೇಂದ್ರ, ಕಾಶಿ, ಕಂಚಿ, ಶ್ರೀಶೈಲ, ರಂಭಾಪುರಿ, ಉಜ್ಜಯನಿ ಜಗದ್ಗುರು ಪೀಠಗಳ, ಮಲೆಮಹದೇಶ್ವರ, ಸುತ್ತೂರು, ಯಡೆಯೂರು, ಆದಿಚುಂಚನಗಿರಿ ಮಠ… ಹೀಗೆ ದೇಶದ ಹಲವು ಪ್ರಸಿದ್ಧ ಮಠ- ದೇವಸ್ಥಾನಗಳಿಗೆ ಮುಚಖಂಡಿಯಿಂದ ಭಸ್ಮ ಪೂರೈಕೆಯಾಗುತ್ತವೆ.

ದೇವಸ್ಥಾನ, ಮಠಗಳು, ಜಗದ್ಗುರು ಪೀಠದವರು ಮುಂಚಿತವಾಗಿ 5 ಸಾವಿರದಿಂದ 10 ಸಾವಿರ ವರೆಗೆ ಭಸ್ಮ ಬೇಕು ಎಂದು ವೀರಯ್ಯ ಅವರಿಗೆ ಹೇಳುತ್ತಾರೆ. ಕ್ರಿಯಾ ಮತ್ತು ಸಾದಾ ಭಸ್ಮಗಳ ಪ್ರತ್ಯೇಕ ಆರ್ಡರ್‌ ಪಡೆದು, ಎಷ್ಟು ಅಳತೆಯ ಭಸ್ಮ ಕೇಳುತ್ತಾರೋ, ಹಾಗೆ ಮಾಡಿಕೊಡುತ್ತಾರೆ. ಅದರಿಂದಲೇ 1 ಸಾವಿರ ಭಸ್ಮಕ್ಕೆ 30 ಸಾವಿರ ರೂಗಳನ್ನು ಸಾದಾ ಭಸ್ಮಕ್ಕೆ ಪಡೆದರೆ, 1 ಸಾವಿರ ಕ್ರಿಯಾ ಭಸ್ಮಕ್ಕೆ 50 ಸಾವಿರ ಪಡೆಯುತ್ತಾರೆ. ಇದೊಂದು ಚಿಕ್ಕ ಉದ್ಯಮವಾಗಿಯೂ ಬೆಳೆದಿದೆ.

ಎಲ್ಲೆಲ್ಲಿ ತಯಾರಿಕೆ ಮಾಡ್ತಾರೆ?
ದೇಶೀಯ ಜವಾರಿ ಆಕಳಿನ ಸೆಗಣಿಯಿಂದ ಭಸ್ಮ ತಯಾರಿಸುವುದು ಬಾದಾಮಿ ತಾಲೂಕಿನ ಶಿವಯೋಗ ಮಂದಿರ ಹಾಗೂ ಬಾಗಲಕೋಟೆ ಸಮೀಪದ ಮುಚಖಂಡಿಯ ವೀರಭದ್ರೇಶ್ವರ ವಿಭೂತಿ ನಿರ್ಮಾಣ ಕೇಂದ್ರದಲ್ಲಿ ಮಾತ್ರ. ಈಚೆಗೆ ವಿಜಯಪುರದ ಕಗ್ಗೋಡದ ಯತ್ನಾಳರ ಗೋವು ಶಾಲೆಯಲ್ಲೂ ತಯಾರಿಸಲಾಗುತ್ತಿದೆ. ಕ್ರಿಯಾ ಭಸ್ಮವನ್ನು ಮಾತ್ರ, ಮುಚಖಂಡಿ ಮತ್ತು ಶಿವಯೋಗ ಮಂದಿರದಲ್ಲಷ್ಟೇ ಉತ್ಪಾದಿಸಲಾಗುತ್ತಿದೆ.

3 ತಲೆಮಾರಿನಿಂದಭಸ್ಮ ತಯಾರಿಕೆ
ಮೂರು ತಲೆಮಾರುಗಳಿಂದ ವೀರಯ್ಯ ಹಿರೇಮಠರ ಕುಟುಂಬ ಭಸ್ಮ ತಯಾರಿಕೆಯಲ್ಲಿ ತೊಡಗಿದೆ. ಅವರ ಅಜ್ಜ ಗುರಸಂಗಯ್ಯ ಹಿರೇಮಠರು, ಹಾನಗಲ್‌ ಕುಮಾರ ಶಿವಯೋಗಿಗಳ ಒಡನಾಡಿ­ಯಾಗಿದ್ದರು. ಅವರ ಮಾರ್ಗದರ್ಶನದಲ್ಲೇ ವಿಭೂತಿ ತಯಾರಿಕೆ ಶುರು ಮಾಡಿದ್ದರು. ಬಳಿಕ ವೀರಯ್ಯರ ತಂದೆ ಮಹಾಲಿಂಗಯ್ಯ ಕೂಡ ಇದೇ ಕಾಯಕ ಮಾಡುತ್ತಿದ್ದರು. ಮಹಾಲಿಂಗಯ್ಯ ಅವರು, ಕಲ್ಪಭಸ್ಮ, ಪೀಠಿಕಾ (ಲಿಂಗದಲ್ಲಿ ಇರುವ ಚಿಕ್ಕ ಶಿವಲಿಂಗ) ಕೂಡಾ ತಯಾರಿಸುತ್ತಿದ್ದರು. ಕಲ್ಪಭಸ್ಮದ ಸ್ವಲ್ಪ ಭಾಗವನ್ನು ವೀರಯ್ಯರ ಮನೆಯಲ್ಲಿ ಹಲವು ವರ್ಷಗಳಿಂದ ಕಾಯ್ದಿರಿಸಲಾಗಿತ್ತು. ಹಲವಾರು ಜನರು, ತಮ್ಮ ಮಕ್ಕಳಿಗೆ ರೋಗ-ರುಜಿನ ಬಂದರೆ, ಇವರ ಮನೆಗೆ ಬಂದು ಕಲ್ಪಭಸ್ಮದ ಪುಡಿ ಸೇವಿಸಿ ಹೋಗುತ್ತಿದ್ದರು. ಅದರಿಂದ ಮಕ್ಕಳಿಗೆ ರೋಗ ದೂರಾಗುತ್ತಿತ್ತು ಎನ್ನಲಾಗುತ್ತದೆ.

•ಶ್ರೀಶೈಲ ಕೆ. ಬಿರಾದಾರ

ಟಾಪ್ ನ್ಯೂಸ್

Naxal-encounter-Vikram-1

Naxal Package: “ಮೊದಲೇ ಪ್ಯಾಕೇಜ್‌ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ

Birth-Certi

Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Ullala ಮಡ್ಯಾರು: ಕಾರ್ಮಿಕರಿಗೆ ಹಲ್ಲೆ; ಬಂಧನ

Ullala ಮಡ್ಯಾರು: ಕಾರ್ಮಿಕರಿಗೆ ಹಲ್ಲೆ; ಬಂಧನ

Gangolli: 6 ದಿನ ಕಳೆದರೂ ಕಡಲಿಗೆ ಬಿದ್ದ ಮೀನುಗಾರನ ಸುಳಿವು ಇಲ್ಲ

Gangolli: 6 ದಿನ ಕಳೆದರೂ ಕಡಲಿಗೆ ಬಿದ್ದ ಮೀನುಗಾರನ ಸುಳಿವು ಇಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Naxal-encounter-Vikram-1

Naxal Package: “ಮೊದಲೇ ಪ್ಯಾಕೇಜ್‌ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ

Birth-Certi

Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.