ಮದ್ಯ ನಿಷೇಧ ಆಗ್ರಹಿಸಿ ವಿಧಾನಸೌಧಕ್ಕಿಂದು ಮುತ್ತಿಗೆ
Team Udayavani, Jan 30, 2019, 6:49 AM IST
ಬೆಂಗಳೂರು: ಮದ್ಯಪಾನ ನಿಷೇಧಿಸುವಂತೆ ಆಗ್ರಹಿಸಿ ಚಿತ್ರದುರ್ಗದಿಂದ ಆರಂಭವಾಗಿದ್ದ ಮಹಿಳೆಯರ ಪಾದಯಾತ್ರೆ ಮಂಗಳವಾರ ಬೆಂಗಳೂರು ನಗರವನ್ನು ಪ್ರವೇಶಿಸಿದ್ದು, ಮೂರು ಸಾವಿರಕ್ಕೂ ಹೆಚ್ಚು ಮಹಿಳೆಯರು ಬುಧವಾರ ಬೆಳಗ್ಗೆ 10 ಗಂಟೆಗೆ ವಿಧಾನಸೌಧ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಿದ್ದಾರೆ.
ಜ.19 ರಂದು ಚಿತ್ರದುರ್ಗದಲ್ಲಿ ಆರಂಭವಾದ ಈ ಪಾದಯಾತ್ರೆಯು ಹಿರಿಯೂರು, ಶಿರಾ, ತುಮಕೂರು, ನೆಲಮಂಗಲ ಮಾರ್ಗವಾಗಿ ಸಾಗಿ 11 ದಿನಗಳ ನಂತರ ಮಂಗಳವಾರ ಬೆಂಗಳೂರು ನಗರವನ್ನು ಮಧ್ಯಾಹ್ನ ವೇಳೆಗೆ ಪ್ರವೇಶಿಸಿತು. ಸುಮಾರು 200 ಕಿ.ಮೀ ದೂರ ನಡೆದು ಬಂದ ಸಾವಿರಾರು ಮಹಿಳೆಯರು ಸಂಜೆ 8ಕ್ಕೆ ಮಲ್ಲೇಶ್ವರ ಮೈದಾನ ತಲುಪಿ ಅಲ್ಲಿಯೇ ವಿಶ್ರಾಂತಿ ಪಡೆದರು.
ಪಾದಯಾತ್ರೆ ಕುರಿತು ಮಹಿಳಾ ಮುಖಂಡರಾದ ವಿರುಪಮ್ಮ ಮಾತನಾಡಿ, ಮದ್ಯ ನಿಷೇಧ ಹೋರಾಟ ಮೂರು ವರ್ಷಗಳಿಂದ ಈ ಬೇಡಿಕೆ ರಾಜ್ಯ ಸರ್ಕಾರದ ಮುಂದಿದ್ದು, ಸರ್ಕಾರ ಮಾತ್ರ ಮದ್ಯ ಮಾರಾಟವು ಸರ್ಕಾರದ ಪ್ರಮುಖ ಆದಾಯ ಮೂಲ ಎಂದು ಹೇಳಿಕೊಂಡು ರಾಜ್ಯದ ಜನರನ್ನು ಯಾಮಾರಿಸುತ್ತಿದೆ.
ಆದರೆ, ಈ ಮದ್ಯಪಾನದಿಂದ ಶೇ.70 ಮಹಿಳೆಯರು ದೌರ್ಜನ್ಯಕ್ಕೆ ಒಳಗಾಗುತ್ತಿದ್ದು, ಕೌಟುಂಬಿಕ ಹಿಂಸೆಗಳು ನಿರಂತರವಾಗಿ ನಡೆಯುತ್ತಲೇ ಇವೆ. ಈ ಕುರಿತು ಸರ್ಕಾರಕ್ಕೆ ನ್ಯಾಯ ಕೇಳಬೇಕು ಎಂದು ನಿರ್ಧರಿಸಿ, ರಾಜ್ಯದ 28 ಜಿಲ್ಲೆಯ ಮಹಿಳೆಯರು ಬೀದಿಗಿಳಿದು ಧೀರ ಮಹಿಳೆ ಒನಕೆ ಓಬವ್ವ ಜಿಲ್ಲೆಯಲ್ಲಿ ಒಗ್ಗೂಡಿ ಬಿಸಿಲು, ಚಳಿಯನ್ನು ಲೆಕ್ಕಿಸದೇ 11 ದಿನ ನಿರಂತರ ಪಾದಯಾತ್ರೆ ನಡೆಸಿ ಬೆಂಗಳೂರು ತಲುಪಿದ್ದೇವೆ ಎಂದು ಹೇಳಿದರು.
ಬುಧವಾರ ಬೆಳಗ್ಗೆ ಮಲ್ಲೇಶ್ವರ ಮೈದಾನದಲ್ಲಿ ಸಾರ್ವಜನಿಕ ಸಮಾವೇಶ ಮಾಡಿ ಆ ನಂತರ 11 ಗಂಟೆಗೆ ನೇರವಾಗಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ, ಮದ್ಯ ನಿಷೇಧಕ್ಕೆ ಸೂಚನೆ ನೀಡುವಂತೆ ಮುಖ್ಯಮಂತ್ರಿ ಸೇರಿದಂತೆ ಶಾಸಕರು, ಸಚಿವರನ್ನು ಒತ್ತಾಯಿಸುತ್ತೇವೆ. ಮುಖ್ಯಮಂತ್ರಿಗಳು ನೇರವಾಗಿ ಬಂದು ನಮ್ಮ ಮನವಿಯನ್ನು ಕೇಳಬೇಕು. ಒಂದು ವೇಳೆ ಸರ್ಕಾರ ನಮ್ಮ ಬೆಡಿಕೆಗೆ ಸ್ಪಂದಿಸದಿದ್ದರೆ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.
ಪರಿಹಾರಕ್ಕೆ ಒತ್ತಾಯ: ಪಾದಯಾತ್ರೆ ವೇಳೆ ದಾಬಸ್‌ಪೇಟೆಯ ಕುಲವನಹಳ್ಳಿ ಬಳಿ ರೇಣುಕಮ್ಮ (60) ಎಂಬುವವರು ರಸ್ತೆ ಅಪಘಾತದಿಂದ ಸಾವಿಗೀಡಾಗಿದ್ದಾರೆ. ಮಹಿಳೆ ಸಾವಿಗೆ ನಮ್ಮ ಪಾದಯಾತ್ರೆಗೆ ಅಗತ್ಯ ಭದ್ರತೆ ಹಾಗೂ ನೆರವು ನೀಡದ ರಾಜ್ಯ ಸರ್ಕಾರವೇ ನೇರ ಹೊಣೆಯಾಗಿದೆ. ಹೀಗಾಗಿ, ಅವರ ಕುಟುಂಬಕ್ಕೆ ಮುಖ್ಯಮಂತ್ರಿಗಳು ಸೂಕ್ತ ಪರಿಹಾರ ನೀಡಬೇಕು ಎಂದು ಪ್ರತಿಭಟನಾ ನಿರತರು ಒತ್ತಾಯಿಸಿದರು.
ದಾರಿಯುದ್ದಕ್ಕೂ ಮಠ ಮಂದಿರ ಬಯಲುಗಳಲ್ಲಿ ವಿಶ್ರಾಂತಿ ಪಡೆದು, ಅಕ್ಕಪಕ್ಕದ ಊರಿನ ಜನ ನೀಡಿದ ಊಟವನ್ನು ಮಾಡಿ, ಚಳಿ- ಗಾಳಿ ಎನ್ನದೇ ಸಾವಿರಾರು ಮಹಿಳೆಯರು ಮದ್ಯ ನಿಷೇಧಕ್ಕೆ ಪಣತೊಟ್ಟು ಪಾದಯಾತ್ರೆ ಮಾಡಿದ್ದೇವೆ. ಬುಧವಾರ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಮೂಲಕ ಸರ್ಕಾರಕ್ಕೆ ಮಹಿಳೆಯರ ಕೂಗನ್ನು ಮುಟ್ಟಿಸುತ್ತೇವೆ.
-ಸ್ವರ್ಣಾ ಭಟ್, ರಾಜ್ಯ ಸಂಚಾಲನ ಸಮಿತಿ ಸದಸ್ಯೆ, ಮದ್ಯ ನಿಷೇಧ ಅಂದೋಲನ ಕರ್ನಾಟಕ ಸಮಿತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು
Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.