ಜೀವ ಉಳಿಸಿತು ಅವ್ವನ ನೆನಪು
Team Udayavani, Feb 1, 2019, 12:30 AM IST
ಹೆಂಡತಿ ಜತೆ ಸಣ್ಣ ವಿಷಯಕ್ಕೆ ಜಗಳ ಮಾಡಿಕೊಂಡು ಸಾಯುವ ನಿರ್ಧಾರ ಮಾಡಿ ಹೊಲಕ್ಕೆ ಹೋಗಿ ನೇಣು ಹಾಕಿಕೊಳ್ಳಲಿದ್ದ. ತಕ್ಷಣವೇ ಅವ್ವನ ಬಗ್ಗೆ ನೆನಪಾಯಿತು. ಅವಳನ್ನು ನೋಡಿಕೊಳ್ಳುವ ಬಗ್ಗೆ ಸ್ನೇಹಿತನಿಗೆ ಫೋನ್ ಮಾಡಿ ತನ್ನ ನಿರ್ಧಾರ ತಿಳಿಸಿದ. ಆತ ಮತ್ತೂಬ್ಬನಿಗೆ ಮಾಹಿತಿ ನೀಡಿ ಆತ್ಮಹತ್ಯೆ ಮಾಡಿಕೊಳ್ಳಲಿದ್ದಾತನ್ನು ಪಾರು ಮಾಡಿದ.
ಅದು ಸುಡುಬಿಸಿಲ ಬೇಸಿಗೆಯ ಒಂದು ಮಧ್ಯಾಹ್ನ. ಹಾಗೆ ನೋಡಿದರೆ ನಮ್ಮಲ್ಲಿ ವರ್ಷದ ಒಂದೆರಡು ತಿಂಗಳು ಬಿಟ್ಟರೆ ಉಳಿದ ದಿನಗಳೆಲ್ಲ ಸುಡುಬಿಸಿಲೇ. ಯಾವ ಎನರ್ಜಿ ಇಲ್ಲದಿದ್ದರೂ ಸುಡುಬಿಸಿಲೆಂಬ ಶಾಖ ಇಲ್ಲಿ ಯಥೇತ್ಛವಾಗಿ ದೊರಕುತ್ತದೆ. ಮತ್ತೆ ನಾವದನ್ನು ಅನಿವಾರ್ಯವಾಗಿ ಸುಖೀಸುತ್ತೇವೆ ಕೂಡ.ಅಂತಹ ಒಂದು ಮಧ್ಯಾಹ್ನದಲ್ಲಿ ನಮ್ಮ ಆಸ್ಪತ್ರೆಯ ನಿರೀಕ್ಷಣಾ ಕಕ್ಷೆಯ ತುಂಬೆಲ್ಲ ರೋಗಿಗಳು. ಸಾಮಾನ್ಯವಾಗಿ ಬೇಸಿಗೆಯ ದಿನಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚು. ರೈತಾಪಿ ಜನರೇ ಹೆಚ್ಚಾಗಿರುವ ನಮ್ಮ ಭಾಗದಲ್ಲಿ ಆಗ ಸುಗ್ಗಿಯ ಕಾಲ ಮುಗಿದಿರುತ್ತದೆ. ಬಂದ ಉತ್ಪನ್ನ ಗಳನ್ನು ಮಾರಿ ಕೈಯಲ್ಲೊಂದಿಷ್ಟು ದುಡ್ಡು ಮಾಡಿಕೊಂಡು ತಮ್ಮ ಬಹುಕಾಲದ ರೋಗಗಳಿಗೆ ಆರೈಕೆ ಪಡೆಯುವ ಸನ್ನಾಹದ ಲ್ಲಿರುತ್ತಾರೆ. ಹೀಗಾಗಿ ಗದ್ದಲವೋ ಗದ್ದಲ. ಒಬ್ಬರಿನ್ನೊಬ್ಬರೊಂದಿಗೆ ಜೋರಾಗಿ ಮಾತಾಡಿಕೊಳ್ಳುತ್ತ ತಮ್ಮ ಹೆಸರು ಕರೆದದ್ದನ್ನೂ ಲೆಕ್ಕಿಸದ ಜನ ಒಂದು ತೆರನಾದರೆ, ಕರೆಯದೆ ಬಾಗಿಲಲಿ ನಿಂತು ತಮ್ಮ ಸರದಿ ಬಂದ ಬಗ್ಗೆ ಮೇಲಿಂದ ಮೇಲೆ ವಿಚಾರಿಸುವವರದು ಇನ್ನೊಂದು ತೆರ. ಕರ್ಕಶ ಸಂಗೀತದ ತರಹೇವಾರಿ ರಿಂಗ್‌ಟೋನ್‌ಗಳ ಭರಾಟೆಯಂತೂ ಹೇಳತೀರದು. ಬಿಸಿಲಿನ ತಾಪ ಕಡಿಮೆ ಮಾಡಲು ಜೋರಾಗಿ ತಿರುಗುತ್ತ ಸಪ್ಪಳಕ್ಕೆ ತಮ್ಮ ಕೈಲಾದಷ್ಟು ಕಾಣಿಕೆ ಸಲ್ಲಿಸುವ ಫ್ಯಾನ್‌ಗಳು. ಜೊತೆಗೇ ನಾ ಮುಂದು ತಾ ಮುಂದು ಎಂಬ ಧಾವಂತ. ಎಂಥ ಶಿಸ್ತು ಪಾಲಿಸಬೇಕೆಂದರೂ ನಮ್ಮಂಥ ಆಸ್ಪತ್ರೆಗಳಲ್ಲಿ ಅದು ಅಸಾಧ್ಯದ ಮಾತು. ಅದಕ್ಕೆ ನೂರೆಂಟು ಕಾರಣಗಳು. ಒಬ್ಬನೇ ವೈದ್ಯ. ನೂರಾರು ರೋಗಿಗಳು. ಅವರವರ ರೋಗ ಅವರಿಗೆ ಎಮರ್ಜೆನ್ಸಿಯೇ. ಅಲ್ಲದೇ ಬೇಗ ತೋರಿಸಿ, ಬೇಗ ಹೋಗುವ ಅವಸರ. ಮತ್ತೆ ಕೆಲವೊಬ್ಬರು ಸ್ವಘೋಷಿತ ಲೀಡರ್‌ಗಳು ವಿಐಪಿ ಎಂಬ ಹಣೆಪಟ್ಟಿ ಹಚ್ಚಿಕೊಂಡೇ ಬಂದಿರುತ್ತಾರೆ. ಒಳನುಗ್ಗಲು ಅನಧಿಕೃತ ಲೈಸನ್ಸ್ ಹೊಂದಿಬಿಟ್ಟಿರುತ್ತಾರೆ. ಅವರನ್ನೆಲ್ಲ ಸಂಭಾಳಿಸಿ ಕಳಿಸಬೇಕಾದರೆ ಸಾಕು ಬೇಕಾಗುತ್ತದೆ. ಇಂಥ ಸಂದರ್ಭಗಳಲ್ಲಿ ನಮ್ಮ ವೈದ್ಯಕೀಯದ ಕಲಿಕೆಗಿಂತ ಸಾಮಾಜಿಕ ಕಲಿಕೆಯ ಅವಶ್ಯಕತೆ ಜಾಸ್ತಿ ಇರುತ್ತದೆ.
ಹೀಗಿರುವಾಗ ಒಮ್ಮೆಲೇ ನುಗ್ಗಿದ ಆ್ಯಂಬ್ಯುಲೆನ್ಸ್‌ನಿಂದ ಇಳಿದಿ ತ್ತೂಂದು ಸ್ಟ್ರೆಚರ್. ಆಸ್ಪತ್ರೆಯ ತುಂಬೆಲ್ಲ ಹೆಚ್ಚಿದ ಗದ್ದಲು, ಗೋಜಲು. ಸ್ಟ್ರೆಚರ್‌ನ ಸುತ್ತಲೂ ಮುಕುರಿದ ಜನ. ತಮ್ಮ ರೋಗಗಳನ್ನೆಲ್ಲ ಮರೆತು ಅಲ್ಲಿ ಹಣಿಕಿಕ್ಕತೊಡಗಿದ್ದರು. ನಮ್ಮ ಜನರ ಕುತೂಹಲವೇ ಹಾಗೆ. ತಮಗಲ್ಲದೆ ಬೇರೆಯವರಿಗೆ ಆದ ಅಪಾಯಗಳನ್ನು ಕಂಡು ಅನುಭವಿಸುವ ಇರಾದೆ. ಆದರೆ ಸಹಾಯ ಮಾಡುವ ಸಮಯ ಬಂದರೆ ಮಾತ್ರ ದೂರ ಸಾಗುತ್ತಾರೆ, ಕೆಲವು ಅಪವಾದಗಳನ್ನು ಹೊರತುಪಡಿಸಿ. ಗದ್ದಲ ಕೇಳಿ ನಾನೂ ಚೇಂಬರ್‌ನಿಂದ ಹೊರಗೋಡಿ ಬಂದು ನೋಡಿದರೆ, ಸುಮಾರು 25 ವಯಸ್ಸಿನ ಆರೋಗ್ಯವಂತ ಯುವಕ, ಬಾಯಲ್ಲಿ ಮೂಗಿನಲ್ಲಿ ಕೆಂಪು ಬಣ್ಣದ ನೊರೆ ಸುರಿಯುತ್ತಿದೆ. ಮುಖ ಕೆಂಪಗಾಗಿದೆ. ಜ್ಞಾನ ತಪ್ಪಿದೆ. ಉಸಿರಿಗಾಗಿ ಒ¨ªಾಡುತ್ತಿ¨ªಾನೆ. ಗಂಟಲಲ್ಲಿ ಗೊರ ಗೊರ ಸದ್ದು. ಕುತ್ತಿಗೆಯ ಸುತ್ತಲೂ ಓರೆಯಾಗಿ ಮೂಡಿದ ಕಂದೊತ್ತಿದ ಗಾಯ. ಅವನ ಗೆಳೆಯರು ಅವನನ್ನು ಹೊತ್ತು ತಂದಿ¨ªಾರೆ.ನೋಡಿದೊಡನೆ ಯಾರು ಬೇಕಾದರೂ ಹೇಳಿಬಿಡಬಹುದಾದ ಸ್ಥಿತಿ. ಹೌದು, ಆತ ನೇಣು ಹಾಕಿಕೊಂಡಿದ್ದ. ಅವನು ನಮ್ಮ ಆಸ್ಪತ್ರೆಯ ಸಮೀಪದ ಪೆಟ್ರೋಲ್ ಪಂಪಿನಲ್ಲಿ ಕೆಲಸ ಮಾಡುವ ಹುಡುಗ. ಅವನ ಗೆಳೆಯರು ಸರಿಯಾದ ಸಮಯಕ್ಕೆ ಅವನ ಕುತ್ತಿಗೆಗೆ ಬಿಗಿದಿದ್ದ ಹಗ್ಗವನ್ನು ಕತ್ತರಿಸಿ, ಮರದಿಂದ ಇಳಿಸಿ, “108’ರಲ್ಲಿ ಆಸ್ಪತ್ರೆಗೆ ದೌಡಾಯಿಸಿದ್ದರು. ವಾದ ವಿವಾದ ಗಳೇನೆ ಇರಲಿ, ಸರ್ಕಾರ ಒದಗಿಸಿದ ಈ ಆ್ಯಂಬ್ಯುಲೆನ್ಸ್‌ಗಳು ಬಂದ ಮೇಲೆ ತುರ್ತುಚಿಕಿತ್ಸೆಗೆ ತುಂಬ ಅನುಕೂಲವಾಗಿದೆ. ಅನೇಕ ಜೀವ ಗಳನ್ನು ಉಳಿಸಲು ಸಾಧ್ಯವಾಗಿದೆ. ಅನೇಕ ರೋಗಿಗಳು, ಆಸ್ಪತ್ರೆಗಳು, ಆ್ಯಂಬ್ಯುಲೆನ್ಸ್ ಸಿಬ್ಬಂದಿ ಇವುಗಳನ್ನು ದುರುಪಯೋಗಪಡಿಸಿಕೊಳ್ಳುತ್ತಾರಾದರೂ, ಪ್ರತಿ ನಾಣ್ಯಕ್ಕೂ ಎರಡು ಮುಖಗಳು. ಇಲ್ಲಿ ಸದುಪಯೋಗದ ಮುಖ ಹೆಚ್ಚು ಹೊಳೆಯುತ್ತಿದೆ’ ಎಂಬುದೇ ಸಮಾಧಾನಕರ ಅಂಶ.
ಆತನನ್ನು ಪರೀಕ್ಷಿಸಿ ನೋಡಿದರೆ ಎರಡೂ ಕಣ್ಣು ಪಾಪೆಗಳು ದೊಡ್ಡದಾಗಿ, ಟಾರ್ಚ್ ಬೆಳಕಿಗೆ ಕ್ಷೀಣವಾಗಿ ಸ್ಪಂದಿಸುತ್ತಿವೆ. ನಾಡಿ ಬಡಿತ ಕಡಿಮೆಯಾಗಿದೆ. ರಕ್ತದಲ್ಲಿ ಆಮ್ಲಜನಕದ ಪ್ರಮಾಣ ಗಣನೀಯವಾಗಿ ಕುಂದಿದೆ. ಅದು ಮೆದುಳು ಹಾನಿಗೊಳಗಾದ, ಸಾವಿಗೆ ತುಂಬ ಸಮೀಪದ ಸ್ಥಿತಿ. ಆಗ ಆತನಿಗೆ ತುರ್ತಾಗಿ ಅವಶ್ಯಕತೆ ಇದ್ದುದು ಮೆದುಳಿಗೆ ಆಮ್ಲಜನಕದ ಸರಬರಾಜು. ತನ್ಮೂಲಕ ಮೆದುಳನ್ನು ಮೊದಲಿನ ಸ್ಥಿತಿಗೆ ತರುವುದು. ಶ್ವಾಸನಾಳದಲ್ಲಿ ಟ್ಯೂಬ್ ತೂರಿಸಿ ಕೃತಕ ಉಸಿರಾಟದ ಯಂತ್ರಕ್ಕೆ ಜೋಡಿಸಿ, ಆಮ್ಲಜನಕ ನೀಡುತ್ತ, ಮೆದುಳಿಗೆ ಅವಶ್ಯವಾದ ಗುÉಕೋಸನ್ನು ರಕ್ತನಾಳಗಳ ಮುಖಾಂತರ ನೀಡಲು ಪ್ರಾರಂಭಿಸಿ, ಇನ್ನುಳಿದ ಪರೀಕ್ಷೆಗಳನ್ನೂ, ಮೆದುಳಿನ ಬಾವು ಕಡಿಮೆ ಮಾಡುವ ಇಂಜೆಕ್ಷನ್‌ಗಳನ್ನೂ ಕೊಡಲಾರಂಭಿಸಿದ ಮೇಲೆ ಒಂದಿಷ್ಟು ಸುಧಾರಣೆಯಾಯಿತಾದರೂ ಮುಂದಿನ ಹಲವು ಗಂಟೆಗಳ ಕಾಲ ಆತಂಕ ಇದ್ದದ್ದೇ. ಸುದೈವವಶಾತ್ ಆತ ನಮ್ಮ ಆರೈಕೆಗೆ ಸ್ಪಂದಿಸತೊಡಗಿದ. ಬದುಕುವ ಸಾಧ್ಯತೆಗಳು ಹೆಚ್ಚಾದವು. ಆಗಲೇ ನಾವು ನಿರಾಳವಾದದ್ದು. ಒಂದು ಅಮೂಲ್ಯ ಜೀವ ಉಳಿಸುವಲ್ಲಿ ನಾವೊಂದು ಸಾಧನವಾಗುವುದು ತುಂಬ ಸಾರ್ಥಕ ಮತ್ತು ಧನ್ಯತೆಯ ಭಾವ ನೀಡುತ್ತದೆ. ವೃತ್ತಿಯ ಬಗೆಗಿನ ಅಭಿಮಾನ ಹೆಚ್ಚಿಸುತ್ತದೆ. ಒಂದು ಸಾವನ್ನು ತಪ್ಪಿಸಿದ ತೃಪ್ತಿ ಇರುತ್ತದೆ. ಅದಕ್ಕೇ ವೈದ್ಯಕೀಯದಂಥ ವೃತ್ತಿ ಇನ್ನೊಂದಿಲ್ಲ, ಎನ್ನುವುದು.
ನೇಣುಹಾಕಿಕೊಂಡು ಆತ್ಮಹತ್ಯೆಗೆ ಮಾಡಿಕೊಳ್ಳುವುದು ಒಂದು ಅತೀ ಸಾಮಾನ್ಯ ಹಾಗೂ ಅನಾದಿಕಾಲದ ಪದ್ಧತಿ. ಯಾವುದೇ ವಿಶೇಷ ಪರಿಕರಗಳ ಅವಶ್ಯಕತೆ ಇಲ್ಲದಿರುವುದರಿಂದ, ಮನಸ್ಸು ವ್ಯಗ್ರಗೊಂಡಾಗ ಅಥವಾ ಬದುಕಿನ ಬಗೆಗೆ ನಿರಾಸೆ ಆವರಿಸಿದಾಗ, ಶೀಘ್ರಸಾಧ್ಯವಾದ ಈ ಆತ್ಮಹತ್ಯಾವಿಧಾನಕ್ಕೆ ಬಹಳ ಜನ ಶರಣಾಗುತ್ತಾರೆ. ವಿಷಸೇವನೆ ಪ್ರಸಂಗಗಳು ಇದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿದ್ದರೂ ವಿಷ ಸೇವನೆಯ ನಂತರ ಆಸ್ಪತ್ರೆಗೆ ಸಾಗಿಸಲು ಹಾಗೂ ಆರೈಕೆ ಮಾಡಲು ಹೆಚ್ಚು ಸಮಯ ಸಿಗುತ್ತದೆ. ಆದರೆನೇಣಿಗೆ ಶರಣಾಗಿ ಜೀವಂತ ಉಳಿದುಕೊಳ್ಳುವವರು ಕಡಿಮೆ. ಯಾಕೆಂದರೆ ಕುತ್ತಿಗೆಗೆ ನೇಣು ಹಾಕಿಕೊಂಡು ಕೆಳಗೆ ಹಾರಿದ ಹತ್ತು ಹದಿನೈದು ಸೆಕೆಂಡ್‌ಗಳಲ್ಲಿ ಮನುಷ್ಯ ಪ್ರಜ್ಞೆ ಕಳೆದುಕೊಳ್ಳುತ್ತಾನೆ. ಹೃದಯ ಬಡಿತ ನಿಲ್ಲಲು ಮುಂದಿನ ಹದಿನೈದರಿಂದ ಇಪ್ಪತ್ತು ನಿಮಿಷ ಬೇಕಾಗುತ್ತ ದಾದರೂ ಬೇರೆ ಯಾರೂ ನೋಡದಿದ್ದರೆ, ಸಾವೇ ಗತಿ. ತನ್ನನ್ನು ತಾನು ಉಳಿಸಿಕೊಳ್ಳಬೇಕೆಂದು ಮನಸ್ಸು ಬದಲಾಯಿಸಲೂ ಆಗ ಸಮಯವಿರುವುದಿಲ್ಲ. ಮನಸ್ಸು ಮಾಡಿದರೂ ಕುತ್ತಿಗೆಗೆ ಬಿಗಿದ ಗಂಟು ಬಿಚ್ಚಿಕೊಳ್ಳಲು ಸಾಧ್ಯವಿಲ್ಲ. ಕುತ್ತಿಗೆಯ ಬಿಗಿತ ಹೆಚ್ಚಿದೊಡನೆ ಮೊದಲು ಮೆದುಳಿನಿಂದ ಹೃದಯಕ್ಕೆ ರಕ್ತ ತರುವ ದೊಡ್ಡ ಅಭಿಧಮನಿಗಳು ಹಿಸುಕಲ್ಪಡುತ್ತವೆ. ಅಪಧಮನಿಗಳು ಸ್ವಲ್ಪ ಪೆಡಸಾಗಿರುವುದರಿಂದ ಇನ್ನೂ ಸ್ವಲ್ಪ ಸಮಯ ರಕ್ತವನ್ನು ಮೆದುಳಿ ನೆಡೆಗೆ ಸರಬರಾಜು ಮಾಡುತ್ತಿರುತ್ತವೆ. ಹೊರಹರಿವು ಇಲ್ಲದಂತಾಗಿ, ತಲೆಯ ಭಾಗದಲ್ಲಿ ರಕ್ತ ಶೇಖರಣೆಗೊಂಡು ಮೆದುಳಿಗೆ ಬಾವು ಬರುತ್ತದೆ. ಕಣ್ಣು ಗುಡ್ಡೆಗಳು ಹೊರಬಂದಂತಾಗುವುದು, ನಾಲಿಗೆ ಹೊರಗೆ ಬರುವುದು, ಮುಖ ಕೆಂಪಗಾಗುವುದು, ದದ್ದುಗಳಾ ಗು ವುದು ಎಲ್ಲವೂ ಇದರ ಪರಿಣಾಮದಿಂದಲೇ. ಇದಲ್ಲದೆ ಶ್ವಾಸನಾಳ ಹಿಸುಕಲ್ಪಟ್ಟು ಅದರೊಳಗೆ ಗಾಯಗಳಾಗುವುದು, ಕುತ್ತಿಗೆಯ ಹಲವು ಮುಖ್ಯ ಭಾಗಗಳಿಗೆ ಬಾವು ಬರುವುದು ಸಾಮಾನ್ಯ. ನೇಣಿನಿಂದಾಗಿ ಸಂಭವಿಸುವ ಸಾವು ತ್ವರಿತವಾಗಿರುತ್ತದಾದರೂ ತುಂಬ ನೋವಿನಿಂದ ಕೂಡಿರುತ್ತದೆ. ಯಾಕೆಂದರೆ ನೇಣಿನಿಂದ ಸಾವಿನವರೆಗೆ ಹದಿನೈದು ನಿಮಿಷಕ್ಕಿಂತ ಹೆಚ್ಚು ಹೊತ್ತು ಒ¨ªಾಟವಿರುತ್ತದೆ. ಆದ್ದರಿಂದಲೇ ನ್ಯಾಯಿಕಮರಣದಂಡನೆ’ಗಾಗಿ ನೇಣು ಹಾಕುವಾಗ, ನೇಣಿಗೇರ ಬೇಕಾದ ಮನುಷ್ಯನ ಎತ್ತರಕ್ಕಿಂತಲೂ ಹೆಚ್ಚು ಎತ್ತರದಿಂದ ಅವನನ್ನು ಕೆಳಗೆ ತ್ವರಿತವಾಗಿ ಜೋತು ಬೀಳಿಸಲಾಗುತ್ತದೆ. ಆಗ ಮನುಷ್ಯನ ತೂಕ ಮತ್ತು ಮೇಲಿಂದ ಬಿದ್ದ ವೇಗದಿಂದ ಉಂಟಾಗುವ ಬಲದಿಂದ ಕುತ್ತಿಗೆಯ ಮೂಳೆಗಳು ಮುರಿದು, ಸ್ಥಾನಪಲ್ಲಟಗೊಂಡು ಬೆನ್ನುಹುರಿ ಕತ್ತರಿಸಲ್ಪಡುತ್ತದೆ. ಹೀಗಾಗಿ ಯಾವುದೇ ನೋವಿಲ್ಲದ ಸಾವು’ ಸಂಭವಿಸುತ್ತದೆ. ಇಂಥ ನೋವಿಲ್ಲದ ಸಾವು ನೀಡಲೆಂದೇ ಗಲ್ಲುಶಿಕ್ಷೆ ನಿಗದಿಯಾದವರ ಸಂಬಂಧಿಕರು ಗಲ್ಲಿಗೇರಿಸುವವರಿಗೆ ಲಂಚ ಕೊಟ್ಟ ನಿದರ್ಶನಗಳಿವೆ ! ಅಲ್ಲದೇ ಈ ನೋವಿಲ್ಲದ ಸಾವು’ ಎಂಬುದನ್ನು ದಯಪಾಲಿಸಲು’ ಮರಣದಂಡನೆಯ ವಿಧಾನಗಳ ಪರಿಷ್ಕರಣೆಗಾಗಿ ಹಲವು ವೈದ್ಯಕೀಯ ಸಂಶೋಧನೆಗಳೇ ಜರುಗಿವೆ, ಸಾವಿನ ನೋವನ್ನು ಸಹ್ಯವಾಗಿಸಲು..!!ಆದರೇನು, ಸಾವೇ ಒಂದು ನೋವಾಗಿರುವಾಗ ಅದೆಂಥ ನೋವಿಲ್ಲದ ಸಾವು…!!!
ಮುಂದಿನ ಎರಡು ದಿನಗಳಲ್ಲಿ ಆತ ನಮ್ಮ ಐ. ಸಿ.ಯು. ನಲ್ಲಿ ಚೇತರಿಸಿಕೊಂಡ. ಎಚ್ಚರವಾದ. ಪೂರ್ಣ ಗುಣಮುಖನಾದ. ನೇಣು ಹಾಕಿಕೊಂಡ ನಂತರ ಶೀಘ್ರವಾಗಿ ಅವನನ್ನು ಕೆಳಗೆ ಇಳಿಸಿದ್ದರಾ ದರಿಂದ ಮೆದುಳಿಗೆ ಅಂಥ ಹಾನಿಯಾಗಿರಲಿಲ್ಲ. ಒಂದಿಷ್ಟೇ ತಡವಾಗಿದ್ದರೂ ಮೆದುಳಿಗೆ ಹಾನಿಯಾಗಿ ಸಾಯುತ್ತಿದ್ದ. ಇಲ್ಲವೇ ಜೀವನಪರ್ಯಂತ ನಿಷ್ಕ್ರಿಯ ಬದುಕು ಸಾಗಿಸಬೇಕಾಗುತ್ತಿತ್ತು, ಜೀವತ್ಛವದಂತೆ. ಎರಡು ನಿಮಿಷಗಳಿಗಿಂತ ಹೆಚ್ಚಿನ ಅವಧಿ ಮೆದುಳಿಗೆ ರಕ್ತ ಸರಬರಾಜು ಇರದಿದ್ದರೆ ಸರಿಪಡಿಸಲಾಗದ ಹಾನಿ ಸಂಭವಿಸುತ್ತದೆ. ಆದರೆ ಈತ ನೇಣು ಹಾಕಿಕೊಂಡದ್ದು ತನ್ನ ಹೊಲದಲ್ಲಿ, ಯಾರೂ ಇಲ್ಲದ್ದನ್ನು ಖಚಿತಪಡಿಸಿಕೊಂಡು. ಇವನನ್ನು ಅಷ್ಟು ಬೇಗ ನೇಣಿನಿಂದ ಕೆಳಗಿಳಿಸಲು ಹೇಗೆ ಸಾಧ್ಯವಾಯಿತು,ಎಂಬ ಕುತೂಹಲದಿಂದ ವಿಚಾರಿಸಿದರೆ ಅವನ ಗೆಳೆಯರು ಹೇಳಿದ್ದು, ಪವಾಡ ಸದೃಶವಾದ ಸಿನೀಮಯ ಘಟನೆಯನ್ನು…!
ತನ್ನ ಹೆಂಡತಿಯೊಡನೆ ಯಾವುದೋ ಸಣ್ಣ ವಿಷಯಕ್ಕೆ ಜಗಳ ಮಾಡಿಕೊಂಡು ಒಮ್ಮೆಲೇ ಸಾಯುವ ನಿರ್ಧಾರ ಮಾಡಿ, ಊರಿಂದ ದೂರದಲ್ಲಿರುವ ತನ್ನ ಹೊಲಕ್ಕೇ ಹೋಗಿ, ಸುತ್ತಲೂ ಯಾರೂ ಇಲ್ಲದ್ದನ್ನು ಖಚಿತಪಡಿಸಿಕೊಂಡು, ಗಿಡಕ್ಕೆ ಹಗ್ಗ ಕಟ್ಟಿ ಇನ್ನೇನು ತನ್ನ ಕುತ್ತಿಗೆಗೆ ಅದನ್ನು ಹಾಕಿಕೊಳ್ಳಬೇಕೆನ್ನುವಾಗಲೇ ಅವರ ಅವ್ವ ನೆನಪಾಗಿ¨ªಾಳೆ. ತಾನಿಲ್ಲವಾದ ಮೇಲೆ ಅವಳನ್ನು ನೋಡುವವರು ಯಾರೆಂಬ ಚಿಂತೆ ಶುರುವಾಗಿದೆ. ಅದಕ್ಕೆ ತನ್ನ ಆತ್ಮೀಯ ಗೆಳೆಯನೊಬ್ಬನಿಗೆ ಫೋನ್ ಮಾಡಿ, ತಾನು ಸಾಯುತ್ತಿರುವು ದಾಗಿಯೂ, ತನ್ನ ಮರಣಾನಂತರ ತನ್ನ ಅವ್ವನನ್ನು ಜೋಪಾನ ಮಾಡುವಂತೆ ಮಾತು ಕೊಡುವಂತೆಯೂ ತಿಳಿಸಿ¨ªಾನೆ. ಮೊದಲು ಅದೊಂದು ತಮಾಷೆಯ ಮಾತೆಂದು ನಕ್ಕು ಬಿಟ್ಟ, ಆತನ ಗೆಳೆಯ. ಆದರೆ ಆತ ನಿಜವಾಗಿಯೂ ಸಾಯುತ್ತಿರುವುದನ್ನು ತಿಳಿಸಿದಾಗ ಈತನಿಗೆ ಗಾಬರಿ. ತಾನು ಇದ್ದದ್ದು ಮುಧೋಳದಲ್ಲಿ, ಅವನು ಸಾಯಲು ಹೋದ ಹೊಲ ಅಲ್ಲಿಂದ ಇಪ್ಪತ್ತು ಕಿ.ಮೀ. ದೂರದಲ್ಲಿ. ಅತ್ಯಂತ ಸಂಭಾವಿತ, ಯಾರಿಗೂ ಕೇಡನ್ನು ಬಯಸದ ತನ್ನ ಗೆಳೆಯ ಸಾವಿನ ಬಾಗಿಲಲ್ಲಿ ನಿಂತಿದ್ದಕ್ಕಾಗಿ ತುಂಬ ವಿಷಾದವೆನಿಸಿದೆ. ಫೋನಿನಲ್ಲಿ ತಿಳಿಹೇಳುವ ಪ್ರಯತ್ನ ಸಫಲವಾಗಲಿಲ್ಲ. ಇವನು ಆಗದು ಎಂದು ಕೈಕಟ್ಟಿ ಕುಳಿತಿದ್ದರೆ’ ಒಂದು ಜೀವ ಹೊರಟುಹೋಗುತ್ತಿತ್ತು. ಏನಾದರೂ ಮಾಡಿ ಅವನನ್ನು ಉಳಿಸಲೇಬೇಕೆಂಬ ಚಡಪಡಿಕೆ. ಆಗ ಒಮ್ಮೆಲೇ ಆತನಿಗೆ ಹೊಳೆದ ಉಪಾಯವೊಂದು ಪವಾಡದಂಥ ಕೆಲಸ ಮಾಡಿತು. ಅವನ ಹೊಲದ ಬದಿಯ ಹೊಲದಲ್ಲಿರುವ ತನ್ನ ಗೆಳೆಯನೊಬ್ಬನಿಗೆ ಈ ವಿಷಯ ತಿಳಿಸಿ, ಅವನು ನೇಣು ಹಾಕಿಕೊಳ್ಳುತ್ತಿರುವ ವಿಷಯ ವಿವರಿಸಿ¨ªಾನೆ. ಇಷ್ಟು ವಿಷಯ ತಿಳಿದ ಆ ಗೆಳೆಯ ತನ್ನ ಜೊತೆ ಇನ್ನಿಬ್ಬರನ್ನು ಕರೆದುಕೊಂಡು ಓಡುತ್ತ ಅವನಿದ್ದ ಹೊಲ ತಲುಪುವುದಕ್ಕೂ, ಅವನು ಹಗ್ಗವನ್ನು ತನ್ನ ಕುತ್ತಿಗೆಗೆ ತೊಡಕಿಸಿಕೊಂಡು ಜೋತು ಬೀಳುವುದಕ್ಕೂ ಸರಿಯಾಗಿದೆ. ಎಲ್ಲರೂ ಕೂಡಿ ಕ್ಷಣಮಾತ್ರದಲ್ಲಿ ಅವನ ಕುತ್ತಿಗೆಯ ಹಗ್ಗ ಕತ್ತರಿಸಿ, ಆಸ್ಪತ್ರೆಗೆ ಧಾವಿಸಿದ್ದಾರೆ..!! ಮುಂದಿನದೆಲ್ಲ ಸುಖಾಂತ್ಯ.
ಸಾಯುವುದಕ್ಕೂ ಮೊದಲು ಅವನು ತನ್ನ ಗೆಳೆಯನಿಗೆ ಫೋನ್ ಮಾಡಿದ್ದು, ಅವನು ಇನ್ನೊಬ್ಬನಿಗೆ ತಿಳಿಸಿದ್ದು, ಆ ಇನ್ನೊಬ್ಬ ಅದೇ ವೇಳೆಯಲ್ಲಿ ಬದಿಯ ಹೊಲದಲ್ಲಿದ್ದದ್ದು, ಓಡುತ್ತ ಹೋಗುವುದರಲ್ಲಿ ಇವನಿನ್ನೂ ಜೀವಂತ ಇದ್ದದ್ದು, ವೇಳೆಗೆ ಸರಿಯಾಗಿ ಅಂಬುಲೆನ್ಸ… ದೊರಕಿದ್ದು, ಎಲ್ಲ ಸರಪಳಿ ಕ್ರಿಯೆಗಳು ಕಾಕತಾಳೀಯ’ ಎನಿಸಿದರೂ, ಆ ರೋಮಾಂಚಕ ಕ್ರಿಯೆಯ ಆರಂಭವಾಗಿದ್ದು ಮಾತ್ರ ಅವ್ವನ ನೆನಪು’ ಎಂಬ ಭಾವನಾತ್ಮಕ ಬಂಧದಿಂದಾಗಿ.
ಈಗ ನಾನು ಕಾರಿಗೆ ಪೆಟ್ರೋಲ್ ಹಾಕಿಸಲು ಹೋದಾಗಲೆಲ್ಲ ಅವನು ಓಡಿ ಬರುತ್ತಾನೆ. ಅವನ ಮುಖದಲ್ಲೊಂದು ಕೃತಜ್ಞತೆಯ ಮಿಂಚು, ನನ್ನ ಮನದಲ್ಲಿ ವೃತ್ತಿ ಸಾರ್ಥಕ್ಯದ, ಧನ್ಯತೆಯ ಭಾವ..!!
ಡಾ. ಶಿವಾನಂದ ಕುಬಸದ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.