ಸಿದ್ಧಗಂಗಾ ಶ್ರೀಗಳ ಹೆಸರಲ್ಲಿ ವಿಶೇಷ ಯೋಜನೆ
Team Udayavani, Feb 1, 2019, 12:30 AM IST
ತುಮಕೂರು: ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಶ್ರೀಗಳು ಸಲ್ಲಿಸಿರುವ ಸೇವೆ ಅನನ್ಯವಾದುದು. ಪವಾಡ ಪುರುಷರಾಗಿ, ಭಕ್ತರ ಪಾಲಿನ ನಡೆದಾಡುವ ದೇವರಾಗಿದ್ದ ಲಿಂಗೈಕ್ಯ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ ಹೆಸರು ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡಲಾಗುವುದು. ಈ ನಿಟ್ಟಿನಲ್ಲಿ ಮುಂದಿನ ಬಜೆಟ್‌ನಲ್ಲಿ ಅವರ ಹೆಸರಲ್ಲಿ ಶಾಶ್ವತ ಯೋಜನೆಯೊಂದನ್ನು ಘೋಷಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಸಿದ್ಧಗಂಗಾ ಮಠದ ಶ್ರೀ ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿ ಗುರುವಾರ ನಡೆದ ಲಿಂಗೈಕ್ಯ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ ಪುಣ್ಯಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರದ ಮುಖೇನ ಶ್ರೀಗಳ ಹೆಸರಲ್ಲಿ ಶಾಶ್ವತ ಯೋಜನೆಯೊಂದನ್ನು ರೂಪಿಸಲು ಈಗಾಗಲೇ ಸಚಿವ ಸಂಪುಟದಲ್ಲಿ ಚರ್ಚಿಸಲಾಗಿದೆ. ಮುಂಬರುವ ಬಜೆಟ್‌ನಲ್ಲಿ ಶ್ರೀಗಳ ಹೆಸರಿನಲ್ಲಿ ವಿಶೇಷ ಕಾರ್ಯಕ್ರಮ ಘೋಷಿಸಲಾಗುವುದು. ಶ್ರೀಗಳ ಹೆಸರು ಶಾಶ್ವತವಾಗಿ ಉಳಿಯುವಂತಹ ವಿಶೇಷ ಕಾರ್ಯಕ್ರಮವನ್ನು ರೂಪಿಸುವ ಉದ್ದೇಶಕ್ಕೆ ನನ್ನ ಸಂಪೂರ್ಣ ಬಹುಮತವಿದೆ. ಈ ಪುಣ್ಯ ಕೆಲಸದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ವೇದಿಕೆಯಲ್ಲಿ ಉಪಸ್ಥಿತರಿರುವ ಎಲ್ಲ ಪಕ್ಷಗಳ ಮುಖಂಡರ ಸಹಮತ ಇದಕ್ಕಿದೆ ಎಂದು ಭಾವಿಸಿದ್ದೇನೆ ಎಂದರು.
ಮಾದರಿ ಗ್ರಾಮವಾಗಿ ವೀರಾಪುರ ಅಭಿವೃದ್ಧಿ: ಮಾಗಡಿ ತಾಲೂಕಿನ ವೀರಾಪುರದಲ್ಲಿ ಜನಿಸಿ, ಕಷ್ಟದ ದಿನಗಳಲ್ಲಿ ಮಠದ ಜವಾಬ್ದಾರಿಯನ್ನು ಹೊತ್ತು, ಸುದೀರ್ಘವಾದ ಧಾರ್ಮಿಕ ಸೇವೆ ಸಲ್ಲಿಸಿದ ಶ್ರೀಗಳು, ಎಂದೂ ಸರ್ಕಾರದಿಂದ ಇಂಥ ಯೋಜನೆ ಬೇಕು, ನೆರವು ಬೇಕು ಎಂದು ಅರ್ಜಿ ಸಲ್ಲಿಸಿದ ನಿದರ್ಶನಗಳಿಲ್ಲ. 2006-07ರಲ್ಲಿ ಶ್ರೀಗಳಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವ ಸೌಭಾಗ್ಯ ದೊರಕಿದ್ದು ನನ್ನ ಪುಣ್ಯ. ಶ್ರೀಗಳು ಜನಿಸಿದ ಮಾಗಡಿ ತಾಲೂಕು ವೀರಾಪುರ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಮುಂದಿನ ಬಜೆಟ್‌ನಲ್ಲಿ ಈ ಬಗ್ಗೆ ಘೋಷಣೆ ಮಾಡಲಾಗುವುದು ಎಂದರು.
ಶ್ರೀಗಳಿಗೆ ಭಾರತ ರತ್ನ ನೀಡುವ ಅವಕಾಶ ನಮಗೆ ಸಿಗಲಿದೆ: ನಾನು ಮಠಕ್ಕೆ ಬಂದಾಗಲೆಲ್ಲ, ರೈತರನ್ನು ಮರೆಯಬೇಡಿ ಎಂದು ಹೇಳುತ್ತಿದ್ದರು. ಇಂತಹ ಪವಾಡ ಪುರುಷರಿಗೆ ನೋಬೆಲ್ ಪ್ರಶಸ್ತಿ ಬರಬೇಕಿತ್ತು. ಶ್ರೀಗಳಿಗೆ ಭಾರತ ರತ್ನ ನೀಡಿ ಎಂದು ಕೇಂದ್ರ ಸರಕಾರಕ್ಕೆ ನಾನು ಹಲವು ಬಾರಿ ಮನವಿ ಮಾಡಿದ್ದೆ. ಆದರೆ, ಕೇಂದ್ರ ಸರಕಾರ ಶ್ರೀಗಳಿಗೆ ಭಾರತ ರತ್ನ ನೀಡಲಿಲ್ಲ. ಮುಂದಿನ ನಾಲ್ಕೈದು ತಿಂಗಳಲ್ಲಿ ನಿಮಗೊಂದು ಅವಕಾಶ ಬರುತ್ತದೆ. ಆ ಅವಕಾಶ ಬಳಸಿಕೊಂಡು ನಮಗೆ ಶಕ್ತಿ ನೀಡಿದರೆ, ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡಿದರೆ ಅದರ ಮೌಲ್ಯ ಹೆಚ್ಚುತ್ತದೆ. ಅಂತಹ ಅವಕಾಶ ನಮಗೆ ಒದಗಿ ಬರಲಿದೆ ಎಂಬ ವಿಶ್ವಾಸವಿದೆ ಎಂದರು. ಆ ಮೂಲಕ ಜೆಡಿಎಸ್ ಸಹಕಾರ ಪಡೆದು ಅಧಿಕಾರ ನಡೆಸುವ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ ಎಂಬ ಪರೋಕ್ಷ ಸುಳಿವು ನೀಡಿದರು.
ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿರಿಗೆರೆಯ ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಶ್ರೀ ಶೈಲಂನ ಡಾ.ಶ್ರೀ ಚನ್ನಸಿದ್ದರಾಮ ಶಿವಾಚಾರ್ಯ ಸ್ವಾಮೀಜಿ, ಆದಿಚುಂಚನಗಿರಿಯ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಕನಕಪುರ ದೇಗುಲ ಮಠದ ಶ್ರೀ ಮುಮ್ಮಡಿ ನಿರ್ವಾಹಣ ಸ್ವಾಮೀಜಿ, ಆರ್ಟ್ ಆಫ್ ಲಿವಿಂಗ್‌ನ ಶ್ರೀ ರವಿಶಂಕರ್ ಗುರೂಜಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಯಡಿಯೂರಪ್ಪ, ವೀರಪ್ಪ ಮೊಯ್ಲಿ, ಗೃಹ ಸಚಿವ ಎಂ.ಬಿ.ಪಾಟೀಲ್ ಹಾಗೂ ಇತರರು ಉಪಸ್ಥಿತರಿದ್ದರು.
ಪುತ್ಥಳಿ ಅನಾವರಣ
ಪುಣ್ಯಸ್ಮರಣೆ ಕಾರ್ಯಕ್ರಮಕ್ಕೂ ಮುನ್ನ ಶ್ರೀಗಳ ಕಂಚಿನ ಪುತ್ಥಳಿಯನ್ನು ಅನಾವರಣ ಮಾಡಲಾಯಿತು. 6 ಅಡಿ ಎತ್ತರ, ಸುಮಾರು 700 ಕೆ.ಜಿ.ತೂಕದ ಶ್ರೀಗಳ ಕಂಚಿನ ಪ್ರತಿಮೆಯನ್ನು ಹರಗುರುಚರಮೂರ್ತಿಗಳ ದಿವ್ಯ ಸಾನ್ನಿಧ್ಯದಲ್ಲಿ ಮುಖ್ಯಮಂತ್ರಿ ಅನಾವರಣ ಮಾಡಿದರು. ಮಠದ ಆವರಣದಲ್ಲಿ ಪ್ರತಿಮೆ ಸ್ಥಾಪನೆಗೊಂಡಿದೆ.
ಶ್ರೀಗಳಿಗೆ ಭಾರತ ರತ್ನ ಕೊಡಲೇಬೇಕು. ಮುಂದಿನ ದಿನಗಳಲ್ಲಿ ಕೇಂದ್ರದಲ್ಲಿ ಯಾವ ಸರ್ಕಾರ ಅಧಿಕಾರಕ್ಕೆ ಬಂದರೂ ಶ್ರೀಗಳಿಗೆ ಭಾರತ ರತ್ನ ನೀಡಿ ಗೌರವಿಸುವ ಕೆಲಸ ಮಾಡಬೇಕಾಗಿದೆ.ಶ್ರೀಗಳಿಗೆ ಮರಣೋತ್ತರವಾಗಿ ಭಾರತ ರತ್ನ ಕೊಡು ವುದರಿಂದ ಆ ಪ್ರಶಸ್ತಿಗೆ ಘನತೆ, ಗೌರವ ಬರುತ್ತದೆ. ಅಲ್ಲದೆ, ಈ ಸಂಸ್ಥೆಗೆ ನೋಬೆಲ್ ಪಾರಿತೋಷಕವನ್ನು ದೊರಕಿಸಿಕೊಡಲು ನಾನು ಶ್ರಮಿಸುತ್ತಿದ್ದು, ಮುಖ್ಯಮಂತ್ರಿಗಳು ಸಹಕಾರ ನೀಡಬೇಕು.
– ಎಂ.ಬಿ.ಪಾಟೀಲ್, ಗೃಹ ಸಚಿವ
111 ವರ್ಷಗಳ ಕಾಲ ಶ್ರೀಗಳು ಜೀವಿಸಿದ ಕಾಲಘಟ್ಟದಲ್ಲಿ ಇದ್ದ ನಾವೆಲ್ಲಾ ಪುಣ್ಯವಂತರು. ಪ್ರಪಂಚದ ಯಾವುದೇ ಮೂಲೆಗೆ ಹೋದರೂ ಮಠದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಕಾಣ ಸಿಗುತ್ತಾರೆ.ಸ್ವಾಮೀಜಿಯವರ ಹೆಸರು ಸಮಾಜದಲ್ಲಿ ಶಾಶ್ವತವಾಗಿ ಉಳಿಯುವಂತಹ ವಿಶೇಷ ಯೋಜನೆಯೊಂದನ್ನು ಸಿಎಂ ಜಾರಿಗೊಳಿಸಲಿ.
– ಡಾ.ಜಿ.ಪರಮೇಶ್ವರ್, ಉಪಮುಖ್ಯಮಂತ್ರಿ
ಸಿದ್ಧಗಂಗಾ ಕ್ಷೇತ್ರ ಭಾವೈಕ್ಯತೆಗೆ ಸಾಕ್ಷಿಯಾಗಿದೆ. ಬದುಕಿನಲ್ಲಿ ಬಸವ ತತ್ವವನ್ನು ಅಳವಡಿಸಿ ಕೊಂಡಿದ್ದ ಶ್ರೀಗಳು,ಚಾಚೂ ತಪ್ಪದೆ ಪಾಲಿಸಿ, ಆಧುನಿಕ ಬಸವಣ್ಣ ಆಗಿದ್ದರು. ಸಿದ್ಧಗಂಗಾ ಶ್ರೀಗಳೊಂದಿಗೆ ಯಾವ ರೀತಿ ಜತೆಯಲ್ಲಿದ್ದೇವೋ ಅದೇ ರೀತಿ ಸಿದ್ದಲಿಂಗ
ಸ್ವಾಮೀಜಿಯವರೊಂದಿಗೂ ಇರುತ್ತೇವೆ. ಅದೇ ರೀತಿ ಭಕ್ತ ಸಮೂಹ ಕೂಡ ಸಿದ್ದಲಿಂಗ ಸ್ವಾಮೀಜಿಯವರಿಗೆ ಸಹಕಾರ ನೀಡಬೇಕು.
– ಬಿ.ಎಸ್.ಯಡಿಯೂರಪ್ಪ,
ಮಾಜಿ ಮುಖ್ಯಮಂತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.