ನಕಲಿ ದಾಖಲೆ ನೀಡಿ ವಂಚಿಸಿದವರ ಸೆರೆ
Team Udayavani, Feb 1, 2019, 6:11 AM IST
ಬೆಂಗಳೂರು: ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಗುತ್ತಿಗೆ ನೌಕರನೊಬ್ಬ ನಕಲಿ ದಾಖಲೆ ಮೂಲಕ ವಿದ್ಯಾರ್ಥಿಗಳ ಹೆಸರಿನಲ್ಲಿ 1.70 ಕೋಟಿ ರೂ. ವಂಚನೆ ಮಾಡಿರುವ ಪ್ರಕರಣ ಪತ್ತೆಯಾಗಿದೆ. ಆರೋಪಿಯು ನಿಗಮದ ವೆಬ್‌ಸೈಟ್ ಮೂಲಕ ನಕಲಿ ದಾಖಲೆಗಳನ್ನು ಸಲ್ಲಿಸಿ ವಿದ್ಯಾರ್ಥಿಗಳ ಹೆಸರಿನಲ್ಲಿ ಶೈಕ್ಷಣಿಕ ಸಾಲ ಪಡೆದು ವಂಚನೆ ಮಾಡುತ್ತಿದ್ದ. ಆತನಿಗೆ ಅಲ್ಲೇ ಕೆಲಸ ಮಾಡುತ್ತಿದ್ದ ಹಳೆಯ ಸಿಬ್ಬಂದಿ ಸೇರಿ ಮೂವರು ಸಹಕಾರ ನೀಡುತ್ತಿದ್ದರು.
ಆರ್.ಟಿ.ನಗರ ನಿವಾಸಿ ಇಮ್ರಾನ್ ಖಾನ್ (30), ಎಚ್‌ಬಿಆರ್ ಲೇಔಟ್ ನಿವಾಸಿ ಎಂ.ಡಿ.ಮುಲ್ತಾನಿ ಇಫ್ತಿಕಾರ್(23), ಸುಲ್ತಾನ್ ಪಾಷಾ(25) ಮತ್ತು ಮೊಹಮ್ಮದ್ ಇಕ್ಬಾಲ್ (47) ಬಂಧಿತರು. ಬಂಧಿತರ ಪೈಕಿ ಇಮ್ರಾನ್ ಖಾನ್ ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಲ್ಲೇ ಗುತ್ತಿಗೆ ಆಧಾರದಲ್ಲಿ ಕೇಸ್ ವರ್ಕ್‌ರ್ (ವಿಷಯ ನಿರ್ವಾಹಕ)ಆಗಿ ಕೆಲಸ ಮಾಡುತ್ತಿದ್ದು,
ಮತ್ತೂಬ್ಬ ಆರೋಪಿ ಸುಲ್ತಾನ್ ಪಾಷಾ ಕೂಡ ಈ ಮೊದಲು ಇದೇ ನಿಗಮದಲ್ಲಿ ಕೆಲಸ ಮಾಡುತ್ತಿದ್ದ. ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸಕ್ಕಿದ್ದು ಇತ್ತೀಚೆಗೆ ಹುದ್ದೆ ತೊರೆದಿದ್ದ ಮುಲ್ತಾನಿ ಇಫ್ತಿಕಾರ್ ಹಾಗೂ ಮಾನವ ಹಕ್ಕುಗಳ ಸಂಘಟನೆ ಸ್ಥಾಪಿಸಿಕೊಂಡಿದ್ದ ಮೊಹಮ್ಮದ್ ಇಕ್ಬಾಲ್ ಆರೋಪಿ ಸುಲ್ತಾನ್ ಪಾಷಾನ ಸ್ನೇಹಿತರಾಗಿದ್ದಾರೆ.
ಆರೋಪಿಗಳು ಕೆಲ ತಿಂಗಳಿಂದ ಕೃತ್ಯದಲ್ಲಿ ತೊಡಗಿದ್ದು, ಇತ್ತೀಚೆಗೆ ಆರ್.ಟಿ.ನಗರದಲ್ಲಿರುವ ನಿಗಮದ ಕಚೇರಿಗೆ ಮೇಲೆ ದಾಳಿ ನಡೆಸಿ ಬಂಧಿಸಲಾಗಿದೆ. ಇದುವರೆಗೂ ಬಂಧಿತರು 1.70 ಕೋಟಿ ರೂ.ಗೂ ಅಧಿಕ ವಂಚನೆ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಈ ಪೈಕಿ ಆರೋಪಿಗಳ ಖಾತೆಯಲ್ಲಿದ್ದ 82 ಲಕ್ಷ ರೂ. ನಗದು, 8 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಎರಡು ಲ್ಯಾಪ್‌ಟಾಪ್‌ಗ್ಳು, ಕೋಟೆಕ್ ಮಹೇಂದ್ರ ಬ್ಯಾಂಕ್ ಲಿಮಿಟೆಡ್ ರಾಜಾಜಿನಗರ ಬೆಂಗಳೂರು-10 ಮತ್ತು ಕೋಟೆಕ್ ಮಹೇಂದ್ರ ಬ್ಯಾಂಕ್ ಲಿಮಿಟೆಡ್ ಆಥರೈಸ್ಡ್ ಸಿಗ್ನೆಟರಿ ಎಂಬ ಹೆಸರಿನ ಎರಡು ಸೀಲುಗಳು, ಆರು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಲ್ಲಿ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳ ಉನ್ನತ ವಿದ್ಯಾಭ್ಯಾಸಕ್ಕಾಗಿ 10 ರಿಂದ 75 ಸಾವಿರ ರೂ.ವರೆಗೆ ಶೈಕ್ಷಣಿಕ ಸಾಲ ಕೊಡಲಾಗುತ್ತದೆ. ಆರೋಪಿ ಇಮ್ರಾನ್ ಖಾನ್ ಗುತ್ತಿಗೆ ನೌಕರನಾಗಿರುವುದರಿಂದ ನಿಗಮದ WWW.KMDC.NIC.ARIVU-2 ವೆಬ್‌ಸೈಟ್ ಬಳಸಲು ಅಧಿಕೃತವಾಗಿ ಅವಕಾಶ ನೀಡಲಾಗಿದೆ.
ಇದನ್ನೇ ದುರುಪಯೋಗ ಪಡಿಸಿಕೊಂಡ ಆರೋಪಿ, ನಮಿ ಟೆಕ್ನಾಲಾಜಿ ಎಂಬ ಶಿಕ್ಷಣ ಸಂಸ್ಥೆಯ ಹೆಸರನ್ನು ವೆಬ್‌ಸೈಟ್‌ನಲ್ಲಿ ನೋಂದಾಯಿಸಿದ್ದ. ಬಳಿಕ ಈ ಶಿಕ್ಷಣ ಸಂಸ್ಥೆಯಲ್ಲಿ ಇಂತಿಷ್ಟು ವಿದ್ಯಾರ್ಥಿಗಳಿದ್ದು, ಇಷ್ಟು ಮಂದಿ ವಿದ್ಯಾರ್ಥಿಗಳಿಗೆ ಸಾಲ ಬೇಕಾಗಿದೆ ಎಂದು ಅರ್ಜಿ ಸಲ್ಲಿಸಿದ್ದ.
ಕೆಲ ದಿನಗಳ ಬಳಿಕ ವಿದ್ಯಾರ್ಥಿಗಳ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸಲ್ಲಿಸಿ ಶೈಕ್ಷಣಿಕ ಸಾಲಕ್ಕಾಗಿ ಬೇರೆ ಬೇರೆ ಸಮಯದಲ್ಲಿ ಅರ್ಜಿ ಸಲ್ಲಿಸಿದ್ದ. ಬಳಿಕ ಅದೇ ನಿಗಮದಲ್ಲಿರುವ ಅಧಿಕಾರಿಗಳಿಗೆ ತನಗೆ ಪರಿಚಯ ಇರುವ ವಿದ್ಯಾರ್ಥಿಗಳು ಎಂದು ಹೇಳಿ ಹಣ ಮಂಜೂರು ಮಾಡಿಸಿಕೊಳ್ಳುತ್ತಿದ್ದ. ಇದಕ್ಕಾಗಿ ಲ್ಯಾಪ್‌ಟಾಪ್ ಹಾಗೂ ಕೆಲ ನಕಲಿ ಸೀಲುಗಳನ್ನು ಖರೀದಿಸಿದ್ದ ಎಂದು ಪೊಲೀಸರು ಹೇಳಿದರು.
ಸಂಘಟನೆ ಹೆಸರಿನಲ್ಲಿ ರಕ್ಷಣೆ: ಆರೋಪಿಗಳ ಪೈಕಿ ಮೊಹಮ್ಮದ್ ಇಕ್ಬಾಲ್ ಮಾನವ ಹಕ್ಕುಗಳ ಹೋರಾಟ ಸಮಿತಿ ಎಂಬ ಸಂಘಟನೆ ನಡೆಸುತ್ತಿದ್ದಾನೆ. ಒಂದು ವೇಳೆ ಇಮ್ರಾನ್ ಖಾನ್ ಹಾಗೂ ಇತರೆ ಆರೋಪಿಗಳು ಯಾವುದಾದರೂ ಸಮಸ್ಯೆಗೆ ಸಿಲುಕಿದಲ್ಲಿ ಕೂಡಲೇ ಸಂಘಟನೆ ಹೆಸರಿನಲ್ಲಿ ನೆರವಿಗೆ ಬಂದು ರಕ್ಷಣೆ ಮಾಡುತ್ತಿದ್ದ ಎಂದು ಹೇಳಲಾಗಿದೆ.
ಆರೋಪಿಗಳ ಪೈಕಿ ಇಮ್ರಾನ್ ಖಾನ್ ಕರ್ನಾಟಕ ಅಲ್ಪಸಂಖ್ಯಾತರ ನಿಗಮದಲ್ಲಿ ಗುತ್ತಿಗೆ ನೌಕರನಾಗಿದ್ದು, ನಮಿ ಟೆಕ್ನಾಲಜಿ ಎಂಬ ಶಿಕ್ಷಣ ಸಂಸ್ಥೆ ಹೆಸರನ್ನು ನಿಗಮದ ವೆಬ್‌ಸೈಟ್‌ನಲ್ಲಿ ನಮೂದಿಸಿ ವಂಚಿಸುತ್ತಿದ್ದ ಎಂಬುದು ತನಿಖೆಯಿಂದ ತಿಳಿದು ಬಂದಿದೆ.
-ಚೇತನ್ ಸಿಂಗ್ ರಾಥೋಡ್, ಉತ್ತರ ವಲಯ ಡಿಸಿಪಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.