ಬಜೆಟ್ ಘೋಷಣೆ ದಾಖಲೆಗೆ ಸೀಮಿತ!
Team Udayavani, Feb 1, 2019, 9:53 AM IST
ಬಳ್ಳಾರಿ: ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಎರಡನೇ ಬಜೆಟ್ ಮಂಡಿಸಲು ಸಿದ್ಧತೆಯಲ್ಲಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಗಣಿನಾಡು ಬಳ್ಳಾರಿ ಜಿಲ್ಲೆಗೆ ಮಾತ್ರ ಅನ್ಯಾಯವೆಸಗುತ್ತಿದೆ. ಈ ಹಿಂದೆ ಘೋಷಿಸಿದ್ದ ಹಲವು ಯೋಜನೆಗಳನ್ನು ಈಡೇರಿಸುವಲ್ಲಿ ವಿಫಲವಾಗಿರುವ ಮೈತ್ರಿ ಸರ್ಕಾರ, ಪ್ರಸಕ್ತ ಸಾಲಿನ ಬಜೆಟ್‌ನಲ್ಲಾದರೂ ಬಹುದಿನಗಳ ಬೇಡಿಕೆಯಾದ ಕೃಷಿ ಪದವಿ ಕಾಲೇಜು ಆರಂಭ ಮತ್ತು ಎರಡನೇ ಬೆಳೆಗೆ ನೀರಿನ ಕೊರತೆ ಎದುರಿಸುತ್ತಿರುವ ರೈತರಿಗೆ ಪರ್ಯಾಯ ವ್ಯವಸ್ಥೆಯ ಬಗ್ಗೆ ಗಟ್ಟಿ ನಿರ್ಧಾರ ಕೈಗೊಳ್ಳಲಿದೆಯೇ ಎಂಬುದು ಜಿಲ್ಲೆಯ ಜನರ ನಿರೀಕ್ಷೆಯಾಗಿದೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ 2018-19ನೇ ಸಾಲಿನ ಮೊದಲ ಬಜೆಟ್‌ನಲ್ಲಿ ಗಣಿ ಜಿಲ್ಲೆಯ ಅಭಿವೃದ್ಧಿಗಾಗಿ ಘೋಷಣೆ ಮಾಡಿದ್ದ ಹಲವಾರು ಭರವಸೆಗಳು ಈಡೇರಿಲ್ಲ. ಐತಿಹಾಸಿಕ ಹಿನ್ನೆಲೆಯುಳ್ಳ ಹಂಪಿಯ ಅಭಿವೃದ್ಧಿಗಾಗಿ 1 ಕೋಟಿ ರೂ. ಮೀಸಲಿಡುವುದಾಗಿ ಕಳೆದ ಬಜೆಟ್‌ನಲ್ಲಿ ಘೋಷಣೆಯಾಗಿತ್ತು. ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಹಂಪಿಯಲ್ಲಿ ಪ್ರವಾಸೋದ್ಯಮ ವಿಶ್ವವಿದ್ಯಾಲಯ ಸ್ಥಾಪಿಸುವುದಾಗಿಯೂ ಬಜೆಟ್‌ನಲ್ಲಿ ಘೋಷಿಸಿತ್ತು. ಆದರೆ, ಈ ಘೋಷಣೆಗಳು ಘೋಷಣೆಗಳಾಗಿಯೇ ಉಳಿದಿವೆ ಹೊರತು, ಯಾವುದೇ ಪ್ರಗತಿಕಂಡಿಲ್ಲ.
ಒಂದು ವೇಳೆ ಪ್ರವಾಸೋದ್ಯಮ ವಿಶ್ವವಿದ್ಯಾಲಯ ಸ್ಥಾಪನೆಯಾಗಿದ್ದರೆ, ಹೋಟೆಲ್ ಉದ್ಯಮ ಮತ್ತಷ್ಟು ವಿಸ್ತಾರಗೊಳ್ಳಲು ಸಾಧ್ಯವಾಗುತ್ತಿತ್ತು. ಪ್ರವಾಸೋದ್ಯಮಕ್ಕೆ ಅಗತ್ಯವಾದ ಇನ್ನಿತರೆ ಸಣ್ಣ ಉದ್ಯಮಗಳ ಅಭಿವೃದ್ಧಿಗೂ ಅನುಕೂಲವಾಗಿ, ಪ್ರವಾಸಿ ಮಾರ್ಗದರ್ಶಿಗಳನ್ನು ಸೇರಿ ಹಲವು ಉದ್ಯೋಗಗಳ ಸೃಷ್ಟಿಗೆ ಕಾರಣವಾಗುತ್ತಿತ್ತು. ಆದರೆ, ಕೇವಲ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದ ರಾಜ್ಯ ಸರ್ಕಾರ ಬಳಿಕ ಯಾವುದೇ ಕ್ರಮ ಕೈಗೊಳ್ಳದಿರುವುದು ಜಿಲ್ಲೆಯ ಜನರ ನಿರೀಕ್ಷೆ ಹುಸಿಗೊಳಿಸಿದೆ.
ಹೈಕ ಭಾಗಕ್ಕೆ ಅನ್ಯಾಯ: ರಾಜ್ಯ ಸರ್ಕಾರ ಕಳೆದ 2017-18ನೇ ಸಾಲಿಗೆ 1.86 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಲಾಗಿತ್ತು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕಳೆದ 2018-19ನೇ ಸಾಲಿಗೆ ಬಜೆಟ್ ಗಾತ್ರ 2.18 ಲಕ್ಷ ಕೋಟಿ ರೂ.ಗೆ ಏರಿಕೆಯಾಯಿತು. ಕೇವಲ ಒಂದು ವರ್ಷದಲ್ಲಿ 32 ಸಾವಿರ ಕೋಟಿ ರೂ. ಹೆಚ್ಚುವರಿ ಬಜೆಟ್ ಮಂಡಿಸಿದರೂ, ಹೈಕ ಭಾಗಕ್ಕೆ ನೀಡುತ್ತಿದ್ದ ಅನುದಾನವನ್ನು ಹೆಚ್ಚಿಸಿಲ್ಲ. ಮೇಲಾಗಿ ಕಡಿತಗೊಳಿಸಿ ಅನ್ಯಾಯವೆಸಗಿದೆ.
ಹೈಕ ಭಾಗದ ಅಭಿವೃದ್ಧಿಗೆ ಈ ಮೊದಲು ಪ್ರತಿವರ್ಷ 1500 ಕೋಟಿ ರೂ. ಅನುದಾನ ನೀಡುವುದಾಗಿ ರಾಜ್ಯ ಸರ್ಕಾರ ತಿಳಿಸಿತ್ತು. ಅದರಲ್ಲಿ 1000 ಕೋಟಿ ರೂ. ನೀಡುವುದಾಗಿ ತಿಳಿಸಿತು. ನಂತರ ಇತರೆ ಬೇರೆ ಬೇರೆ ಇಲಾಖೆಗಳಲ್ಲಿ ಖರ್ಚು ಮಾಡಿದ್ದ ಅನುದಾನ ಸೇರಿಸಿ ಹೈಕ ಭಾಗಕ್ಕೆ ನೀಡಲಾಗಿದೆ ಎಂದು ತೋರಿಸಲಾಗಿದೆ. ಒಟ್ಟಾರೆಯಾಗಿ ರಾಜ್ಯ ಸರ್ಕಾರದಿಂದ ಹೈಕ ಅಭಿವೃದ್ಧಿಗೆ ನೇರವಾಗಿ ದೊರೆತದ್ದು ಕೇವಲ 420 ಕೋಟಿ ರೂ. ಅನುದಾನ ಮಾತ್ರ. ಉಳಿದ 1080 ಕೋಟಿ ರೂ.ಅನುದಾನ ನೀಡದೆ ಅನ್ಯಾಯವೆಸಲಾಗಿದೆ. ಕಳೆದ ಎರಡು ವರ್ಷಗಳಿಂದ ಈ ರೀತಿ ಅನ್ಯಾಯ ಮಾಡಲಾಗುತ್ತಿದೆ ಎಂಬುದು ಜಿಲ್ಲೆಯ ಹೈಕ ಹೋರಾಟಗಾರರ ಅಸಮಾಧಾನ.
ಈಡೇರದ ದಶಕದ ಬೇಡಿಕೆ: ತಾಲೂಕಿನ ಹಗರಿಯಲ್ಲಿ ಶತಮಾನೋತ್ಸವ ಪೂರೈಸಿರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ಪದವಿ ಕಾಲೇಜು ಆರಂಭಿಸಬೇಕು ಎಂಬ ಕೂಗು ದಶಕದಿಂದ ಕೇಳಿ ಬರುತ್ತಿದೆ. ಕಳೆದ ಐದು ವರ್ಷಗಳಿಂದ ಹೋರಾಟಗಳು ನಡೆದಿವೆ. ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ, ಬಳ್ಳಾರಿ ಮತ್ತು ಚಾಮರಾಮನಗರದಲ್ಲಿ ಎರಡು ಕೃಷಿ ಪದವಿ ಕಾಲೇಜುಗಳ ಆರಂಭಕ್ಕೆ ಕೂಡಲೇ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಜಿಲ್ಲೆಯಲ್ಲಿ ನೀರಾವರಿ ಸೌಲಭ್ಯವಿದ್ದರೂ, ಅಷ್ಟೇ ಪ್ರಮಾಣದಲ್ಲಿ ಮಳೆಯಾಶ್ರಿತ ಪ್ರದೇಶವೂ ಇದೆ. ಪ್ರತಿವರ್ಷ ಸಮರ್ಪಕ ಮಳೆಯಿಲ್ಲದೆ ರೈತ ತೊಂದರೆ ಅನುಭವಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಕೆಲವೆಡೆ ಮಳೆಯಾಶ್ರಿತ ಪ್ರದೇಶದಲ್ಲೇ ಅಂಜೂರ, ಸಪೋಟ, ಪಪ್ಪಾಯಿ, ದಾಳಿಂಬೆ ಸೇರಿದಂತೆ ಇನ್ನಿತರೆ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಹಗರಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ಪದವಿ ಕಾಲೇಜು ಆರಂಭಿಸಿದರೆ, ಜಿಲ್ಲೆಯ ಮಳೆಯಾಶ್ರಿತ ಪ್ರದೇಶಗಳಲ್ಲಿನ ರೈತರು ಪರ್ಯಾಯ ಬೆಳೆಯನ್ನು ಬೆಳೆಯಲು ಅನುಕೂಲವಾಗಲಿದೆ. ಹಾಗಾಗಿ ಕಳೆದ 10 ವರ್ಷಗಳಿಂದ ಯಾವುದೇ ಕ್ರಮ ಕೈಗೊಳ್ಳದ ರಾಜ್ಯ ಸರ್ಕಾರ, ಪ್ರಸಕ್ತ ಸಾಲಿನ ಬಜೆಟ್‌ನಲ್ಲಾದರೂ ಕೃಷಿ ಪದವಿ ಕಾಲೇಜು ಬಗ್ಗೆ ಕ್ರಮ ಕೈಗೊಳ್ಳಲಿದೆಯೇ ಕಾದು ನೋಡಬೇಕಾಗಿದೆ.
ಎರಡನೇ ಬೆಳೆಗೆ ಪರ್ಯಾಯ ವ್ಯವಸ್ಥೆ: ಅಂತರಾಜ್ಯಗಳ ಜನರ ಜೀವನಾಡಿ ತುಂಗಭದ್ರಾ ಜಲಾಶಯ ಜಿಲ್ಲೆಯಲ್ಲೇ ಹರಿದರೂ ಜಿಲ್ಲೆಯ ಜನರಿಗೆ ಎರಡನೇ ಬೆಳೆಗೆ ನೀರು ದೊರೆಯದಂತಾಗಿದೆ. ಪ್ರಸಕ್ತ ವರ್ಷ ನದಿಗೆ ಹರಿಸಲಾಗಿದ್ದ ಅಂದಾಜು 200 ಟಿಎಂಸಿಗೂ ಹೆಚ್ಚು ನೀರನ್ನು ಸಂಗ್ರಹಿಸಿಕೊಂಡಿದ್ದರೆ ಪ್ರಸಕ್ತ ವರ್ಷ ಎರಡನೇ ಬೆಳೆಗೆ ನೀರು ಒದಗಿಸಲು ಸಾಧ್ಯವಾಗುತ್ತಿತ್ತು ಎಂಬುದು ಜಿಲ್ಲೆಯ ಪ್ರಜ್ಞಾವಂತ ರೈತರ ವಾದ. ಜಲಾಶಯದಲ್ಲಿನ ಹೂಳು ತೆರವುಗೊಳಿಸುವುದು ವೈಜ್ಞಾನಿಕವಾಗಿ ಸಾಧ್ಯವಲ್ಲ ಎಂಬುದನ್ನು ಈಗಾಗಲೇ ತಜ್ಞರು ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ಪರ್ಯಾಯವಾಗಿ ನವಿಲೆ ಬಳಿ ಸಮಾನಾಂತರ ಜಲಾಶಯ ನಿರ್ಮಿಸುವುದಾಗಿಯೂ ಈ ಹಿಂದೆ ಸರ್ಕಾರ ಘೋಷಿಸಿತ್ತು. ಈಗಾಗಲೇ ಡಿಪಿಎಆರ್ ಆಗಿದೆ ಎನ್ನಲಾಗುತ್ತಿದೆಯಾದರೂ, ಈ ವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಸಮಾನಾಂತರ ಜಲಾಶಯ ನಿರ್ಮಿಸಿದಾಗಲಾದರೂ ಜಿಲ್ಲೆಯ ರೈತರಿಗೆ ಒಂದಷ್ಟು ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಪ್ರಸಕ್ತ ಸಾಲಿನ ಬಜೆಟ್‌ನಲ್ಲಾದರೂ ಈ ಬಗ್ಗೆ ನಿರ್ಣಯ ಕೈಗೊಳ್ಳಲಿದೆಯೇ ಎಂಬುದು ಜಿಲ್ಲೆಯ ಪ್ರಗತಿಪರ ರೈತರ ನಿರೀಕ್ಷೆಯಾಗಿದೆ.
ರಾಜ್ಯ ಸಮ್ಮಿಶ್ರ ಸರ್ಕಾರ ರೈತರ ಪರವಾಗಿದೆ. ರೈತರ ಒಟ್ಟು 48 ಸಾವಿರ ಕೋಟಿ ರೂ. ಸಾಲವನ್ನು ಶೀಘ್ರದಲ್ಲೇ ಮನ್ನಾ ಮಾಡಲಿದೆ. ಇದರೊಂದಿಗೆ ಹಿಂದಿನ ಸಿಎಂ ಸಿದ್ದರಾಮಯ್ಯರ ಅವರ ಅನ್ನಭಾಗ್ಯ ಸೇರಿ ಎಲ್ಲ ಯೋಜನೆಗಳನ್ನೂ ಮುಂದುವರಿಸುತ್ತಿದ್ದಾರೆ. ಸಮ್ಮಿಶ್ರ ಸರ್ಕಾರವಾದ್ದರಿಂದ ಸ್ವಯಂ ನಿರ್ಣಯ ಕೈಗೊಳ್ಳಲಾಗುವುದಿಲ್ಲ. ಏನೇ ಆದರೂ ರೈತರ ಎಲ್ಲ ಬೇಡಿಕೆ ಮುಂಬರುವ ಬಜೆಟ್‌ನಲ್ಲಿ ಈಡೇರಿಸುವ ಭರವಸೆ ಇದೆ.
•ಬಿ.ವಿ.ಶಿವಯೋಗಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಬಳ್ಳಾರಿ.
ರಾಜ್ಯದ ಮೈತ್ರಿ ಸರ್ಕಾರ ಕಳೆದ ವರ್ಷದ ಬಜೆಟ್‌ನಲ್ಲಿ ಘೋಷಿಸಿದ್ದ ಯಾವುದೇ ಭರವಸೆ ಈಡೇರಿಸಿಲ್ಲ. ಗ್ರಾಮೀಣ ಭಾಗದವರು ಸಿಎಂ ಅವರನ್ನು ನೇರವಾಗಿ ಸಂಪರ್ಕಿಸಬಹುದು ಎಂದು ಇ-ಗವರ್ನಿಂಗ್ ಯೋಜನೆ ಜಾರಿಗೊಳಿಸಿತ್ತು. ಅದು ಇನ್ನು ಕಾರ್ಯರೂಪಕ್ಕೆ ಬಂದಿಲ್ಲ. ಕಲುಷಿತಗೊಳ್ಳುತ್ತಿರುವ ಗಾಳಿಯ ಗುಣಮಟ್ಟ ಅಳೆಯುವ ಪದ್ಧತಿ ಜಾರಿಗೆ ತರುವುದಾಗಿ ಘೋಷಿಸಿತ್ತು. ಅದೂ ಸಾಧ್ಯವಾಗಿಲ್ಲ. ಕಳೆದ 10 ವರ್ಷಗಳಿಂದ ಬೇಡಿಕೆಯಿಟ್ಟಿದ್ದರೂ ಕೃಷಿ ಪದವಿ ಕಾಲೇಜು ಆರಂಭವಾಗಿಲ್ಲ. ಈ ಬಾರಿಯ ಬಜೆಟ್‌ನಲ್ಲಾದರೂ ಸಾಧ್ಯವಾಗಲಿದೆಯೇ ಎಂದು ನಿರೀಕ್ಷಿಸಲಾಗಿದೆ.
•ಎಸ್.ಪನ್ನಾರಾಜ್, ಸಾರ್ವಜನಿಕ ಸೇವೆಯಲ್ಲಿರುವ ಗಣ್ಯರು
ರಾಜ್ಯ ಸರ್ಕಾರ ರೈತರ ಸಾಲಮನ್ನಾ ಮಾಡುವುದಾಗಿ ಘೋಷಿಸಿದೆ. ಆದರೆ, ಅದಕ್ಕೆ ಸರ್ಕಾರದ ಬಳಿ ಹಣವಿಲ್ಲ. ಸಾಲ ಪಡೆದು ಮನ್ನಾ ಮಾಡಬೇಕಾಗಿದೆ. ರಾಜ್ಯದಲ್ಲಿ ಸಮುದ್ರ ಬಂದರು ಇನ್ನಷ್ಟು ಹೆಚ್ಚಿಸಬೇಕಾಗಿದೆ. ನೆರೆಯ ಆಂಧ್ರ, ಒರಿಸ್ಸಾ, ಮಹಾರಾಷ್ಟ್ರ ರಾಜ್ಯಗಳಲ್ಲಿ ಖಾಸಗಿಯವರ ಸಹಭಾಗಿತ್ವದಲ್ಲಿ ಬಂದರು ಹೆಚ್ಚಿಸಲಾಗಿದೆ. ಅದೇ ರೀತಿ ಚಕಾರವಾರ ಬಂದರು ಜತೆಗೆ ಖಾಸಗಿ ಸಹಭಾಗಿತ್ವದಲ್ಲಿ ಬಂದರು ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಬೇಕಾಗಿದೆ. ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಆರಂಭಿಸಬೇಕಾಗಿದೆ. ಇಲ್ಲದಿದ್ದರೆ ಭವಿಷ್ಯದಲ್ಲಿ ಉದ್ಯೋಗ ದೊರೆಯುವುದಿಲ್ಲ. ಸಂದರ್ಶನದ ಕರೆಯೂ ನಮ್ಮ ವಿದ್ಯಾರ್ಥಿಗಳಿಗೆ ಬರಲ್ಲ. ಕೈಗಾರಿಕೆ ಸ್ಥಾಪಿಸಲು ಕೃಷಿ ಜಮೀನು ಭೂ ಪರಿವರ್ತನೆಗೆ ಇರುವ ನಿಯಮ ಸಡಿಲಗೊಳಿಸಬೇಕಾಗಿದೆ.
•ಡಾ| ರಮೇಶ್ ಗೋಪಾಲ್, ಜಿಲ್ಲಾಧ್ಯಕ್ಷರು, ಜಿಲ್ಲಾ ಛೇಂಬರ್ ಆಫ್ ಕಾಮರ್ಸ್.
•ವೆಂಕೋಬಿ ಸಂಗನಕಲ್ಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Sandur By Election; ಕುಟುಂಬ ಸಮೇತ ಮತದಾನ ಮಾಡಿದ ಸಂಸದ ತುಕಾರಾಂ
Kampli: ಸ.ಹಿ.ಪ್ರಾ. ಶಾಲೆಯ ಬಿಸಿಯೂಟದಲ್ಲಿ ಹಲ್ಲಿ; 26ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ
Sanduru: ಕಾಂಗ್ರೆಸ್‌ಗೆ ಕ್ಷೇತ್ರ ಉಳಿಸಿಕೊಳ್ಳುವ ತವಕ, ಕಸಿದುಕೊಳ್ಳಲು ಬಿಜೆಪಿ ಪ್ರಯತ್ನ
MUST WATCH
ಹೊಸ ಸೇರ್ಪಡೆ
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.