ಕೃಷಿ ಪ್ರಗತಿಯ ಪರಿಕಲ್ಪನೆ ಇಲ್ಲದ ಬಜೆಟ್
Team Udayavani, Feb 2, 2019, 7:09 AM IST
ಕೇಂದ್ರ ಬಜೆಟ್‌ನಲ್ಲಿ ರೈತರು, ಕಾರ್ಮಿಕರು, ಮಧ್ಯಮವರ್ಗದವರಿಗೆ ಆಸೆ, ಆಮಿಷ ತೋರಿಸಿ ಜನಪ್ರಿಯ ಬಜೆಟ್ ಎನಿಸಿಕೊಳ್ಳುವ ಪ್ರಯತ್ನ ನಡೆಸಿದೆ. ಇದೊಂದು ಚುನಾವಣಾ ಬಜೆಟ್ ಎಂದು ಯಾವ ಸಂದೇಹವಿಲ್ಲದೇ ಹೇಳಬಹುದು. ವಾರ್ಷಿಕ 6 ಸಾವಿರ ರೂ. ವೇತನ ಘೋಷಿಸಿ ರೈತ ರನ್ನು, ತೆರಿಗೆ ಮಿತಿ ಹೆಚ್ಚಿಸಿ ಮಧ್ಯಮವರ್ಗದವರನ್ನು, ಪಿಂಚಣಿ ಘೋಷಿಸಿ ಕಾರ್ಮಿಕ ವಲಯವನ್ನು ಸೆಳೆಯುವ ಪ್ರಯತ್ನ ನಡೆಸಿದೆಯೇ ವಿನಃ ಅಭಿವೃದ್ಧಿಯ ದೂರದೃಷ್ಟಿಯುಳ್ಳ, ಕೃಷಿ ವಲಯದ ಪ್ರಗತಿ, ಆತ್ಮಹತ್ಯೆಗೆ ಶರಣಾಗದ ರೈತರಿಗೆ ಹೊಸ ಬದುಕು ಕಟ್ಟಿಕೊಡುವ ಅಂಶಗಳು ಕಾಣುತ್ತಿಲ್ಲವೆಂಬ ಅಭಿಪ್ರಾಯ ವ್ಯಕ್ತವಾಗಿದೆ.
ಮಂಡ್ಯ: ಮುಂದಿನ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್‌ನಲ್ಲಿ ಎಲ್ಲ ವರ್ಗದ ಜನರಿಗೂ ಬಂಪರ್ ಗಿಫ್ಟ್ ನೀಡಿದೆಯಾದರರೂ, ಕೃಷಿ ಪ್ರಧಾನ ದೇಶವನ್ನು ಕೃಷಿ ಆಧಾರಿತವಾಗಿ ಯಾವ ರೀತಿ ಮುನ್ನಡೆಸುತ್ತೇವೆ ಎಂಬ ಪರಿಕಲ್ಪನೆಗಳನ್ನು ಜನರ ಮುಂದಿಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ರೈತರು, ಜನರನ್ನು ಸೆಳೆಯುವ ದೃಷ್ಟಿಕೋನದಿಂದ ರೂಪಿತಗೊಂಡ ಆಕರ್ಷಣೀಯ ಬಜೆಟ್ ಇದಾಗಿದೆ.
ಕೃಷಿ ಕ್ಷೇತ್ರದಲ್ಲಿ ಆಧುನೀಕತೆ ಅಳವಡಿಸುವ, ಯುವಕರನ್ನು ವ್ಯವಸಾಯದತ್ತ ಆಕರ್ಷಿಸುವ, ಕೃಷಿ ಆಧಾರಿತ ಉದ್ಯಮಗಳ ಸ್ಥಾಪನೆಗೆ ಒತ್ತು ನೀಡುವ ಅಂಶಗಳು ಸೇರಿದಂತೆ ಕೃಷಿಯನ್ನು ಉತ್ತೇಜಿಸುವ ಕಾರ್ಯಕ್ರಮಗಳು ಬಜೆಟ್‌ನಲ್ಲಿ ಕಾಣುತ್ತಿಲ್ಲ. ಕೃಷಿ ಕ್ಷೇತ್ರವನ್ನು ಮರೆತ ಕೇಂದ್ರ ಸರ್ಕಾರ ಕೃಷಿಕರನ್ನು ಮಾತ್ರ ಮರೆತಿಲ್ಲ.
ರೈತರ ನಿರೀಕ್ಷೆ ಹುಸಿ: ರೈತರ ಆತ್ಮಹತ್ಯೆ ತಡೆಯುವ ನಿಟ್ಟಿನಲ್ಲಿ ಬಡ್ಡಿ ರಹಿತ ಸಾಲ ಘೋಷಣೆಯಾಗಬಹುದೆಂಬ ನಿರೀಕ್ಷೆ ರೈತರಲ್ಲಿ ಇತ್ತು. ಅದನ್ನು ಬಜೆಟ್ ಹುಸಿಗೊಳಿಸಿದೆ. ಸಾಲಬಾಧೆಯಿಂದ ತತ್ತರಿಸುತ್ತಿರುವ ರೈತರನ್ನು ರಕ್ಷಣೆ ಮಾಡುವ, ಅವರ ಬದುಕಿಗೆ ಸುಭದ್ರತೆ ಒದಗಿಸುವ, ಅನ್ನದಾತರನ್ನು ಸ್ವಾವಲಂಬಿಯನ್ನಾಗಿ ಮಾಡುವ ಯಾವ ಯೋಜನೆಗಳಾಗಲೀ, ಕಾರ್ಯಕ್ರಮಗಳಾಗಲೀ ಬಜೆಟ್‌ನಲ್ಲಿ ಕಾಣುತ್ತಿಲ್ಲ. ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಸೃಷ್ಟಿಸುವ ಗೋಜಿಗೂ ಹೋಗದೆ ರೈತರು ಸರ್ಕಾರಗಳ ಮೇಲೆ ಅವಲಂಬಿತರನ್ನಾಗಿ ಮಾಡುವುದನ್ನೇ ಗುರಿಯಾಗಿಸಿಕೊಂಡು ಬಜೆಟ್ ಸಿದ್ಧಪಡಿಸಲಾಗಿದೆ.
ಕನಿಷ್ಠ ಬೆಂಬಲ ಬೆಲೆ: ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ ರೈತರ ಸಾಲ ಮನ್ನಾ ಬಗ್ಗೆ ದಿವ್ಯಮೌನ ವಹಿಸಿದ್ದ ಕೇಂದ್ರ ಸರ್ಕಾರದ ವಿರುದ್ಧ ಸಿಟ್ಟಿಗೆದ್ದಿದ್ದ ರೈತರನ್ನು ಸಮಾಧಾನಪಡಿಸಲು ರೈತರಿಗೆ ಪ್ರತಿ ವರ್ಷ ಆರು ಸಾವಿರ ರೂ. ಹಣವನ್ನು ನೇರವಾಗಿ ಪಾವತಿ ಮಾಡುವ ಕಿಸಾನ್ ಸಮ್ಮಾನ್ ಯೋಜನೆ ಜಾರಿಗೊಳಿಸಿದೆ. 5 ಎಕರೆಗಿಂತ ಕಡಿಮೆ ಭೂಮಿ ಹೊಂದಿರುವವರಿಗೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ 2 ಸಾವಿರ ರೂ. ಅವರ ಖಾತೆ ಸೇರಲಿದೆ.
ರೈತರ ಕಲ್ಯಾಣ ಮತ್ತು ಅವರ ಆದಾಯ ದ್ವಿಗುಣ ಮಾಡುವ ಉದ್ದೇಶದಿಂದ ಬೆಳೆಗಳಿಗೆ 1.5ರಷ್ಟು ಹೆಚ್ಚಿನ ಕನಿಷ್ಠ ಬೆಂಬಲ ಬೆಲೆ ಘೋಷಣೆ ಮಾಡಿದೆ. ನೈಸರ್ಗಿಕ ವಿಕೋಪಕ್ಕೆ ಒಳಗಾದ ರೈತ ವರ್ಗಕ್ಕೆ ಶೇ. 2ರಷ್ಟು ಬಡ್ಡಿ ರಿಯಾಯಿತಿ ನೀಡಲಾಗುವುದು. ಸಾಲ ಮರುಪಾವತಿ ಮಾಡಿದ ರೈತರಿಗೆ ಶೇ. 3ರಷ್ಟು ಬಡ್ಡಿ ವಿನಾಯಿತಿ ಕಲ್ಪಿಸಿ ಸಂತೈಸಲು ಮುಂದಾಗಿದೆ.
ರೈತರ ಅಸಮಾಧಾನ: ಇದೇ ಸಮಯದಲ್ಲಿ ಕೃಷಿಯಲ್ಲಿ ವೈಜ್ಞಾನಿಕ ವಿಧಾನಗಳನ್ನು ಜಾರಿಗೊಳಿಸುವ, ಆಹಾರ ಉತ್ಪಾದನೆಯನ್ನು ಹೆಚ್ಚಿಸುವ, ಕೃಷಿ ಕ್ಷೇತ್ರಕ್ಕೆ ಹೊಸ ರೂಪ ನೀಡುವ ನಿಟ್ಟಿನಲ್ಲಿ ವಿಶೇಷವಾದ ಕೊಡುಗೆಗಳು ಬಜೆಟ್‌ನಲ್ಲಿ ಕಾಣುತ್ತಿಲ್ಲ. ಕೃಷಿಯಲ್ಲಿ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲೂ ಕೇಂದ್ರ ಸರ್ಕಾರ ಯೋಜನೆ ರೂಪಿಸದೆ ಆ ಕ್ಷೇತ್ರವನ್ನು ಅಭಿವೃದ್ಧಿಯಿಂದ ದೂರವೇ ಇಟ್ಟಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ.
ಬೆಳೆಗಳ ಉತ್ಪಾದನಾ ವೆಚ್ಚವನ್ನು ಗಮನದಲ್ಲಿಟ್ಟುಕೊಂಡು ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಪಡಿಸಬೇಕು ಎಂಬ ದೃಷ್ಟಿಯಿಂದ ಡಾ.ಸ್ವಾಮಿನಾಥನ್ ವರದಿ ಜಾರಿಗೆ ಪ್ರಾಮುಖ್ಯತೆ ನೀಡಿಲ್ಲ. ಕಬ್ಬು ಜಿಲ್ಲೆಯ ಪ್ರಮುಖ ಬೆಳೆಯಾಗಿದ್ದರೂ ಅದಕ್ಕೆ ಸಂಬಂಧಿಸಿದಂತೆ ಅಧ್ಯಯನ ಕೇಂದ್ರದ ಸ್ಥಾಪನೆಗೆ ಒಲವು ತೋರಲಿಲ್ಲ. ಕಬ್ಬಿನ ಉತ್ಪನ್ನಗಳು ಹೆಚ್ಚು ಬಳಕೆಯಾಗುವುದರೊಂದಿಗೆ ರೈತರಿಗೆ ಹೆಚ್ಚಿನ ಆದಾಯ ಸೃಷ್ಟಿಸಿಕೊಡುವ ಪ್ರಯತ್ನಗಳನ್ನಾಗಲೀ, ಮೊಲಾಸಸ್ ಬಳಕೆ ಬಗ್ಗೆ ತಿಳಿವಳಿಕೆ ಹಾಗೂ ಅದಕ್ಕೆ ಪೂರಕವಾಗುವ ಉದ್ಯಮಗಳನ್ನು ತೆರೆಯುವುದಕ್ಕೂ ಮನಸ್ಸು ಕೊಟ್ಟಿಲ್ಲ.
ತೆರಿಗೆ ಹೊರೆ ಇಳಿದ ಸಮಾಧಾನ: ಆದಾಯ ತೆರಿಗೆ ಮಿತಿಯನ್ನು 5 ಲಕ್ಷ ರೂ.ವರೆಗೆ ಹೆಚ್ಚಿಸಿ ಮಧ್ಯಮ ವರ್ಗದ ಜನರಿಗೆ ನೇರ ಅನುಕೂಲ ಕಲ್ಪಿಸಿದೆ. ಈ ಮೂಲಕ ಮಧ್ಯಮ ವರ್ಗದವರ ಮನಗೆಲ್ಲುವ ಆಲೋಚನೆ ಇದೆ. ಪ್ರತಿ ವರ್ಷ ತೆರಿಗೆ ಮಿತಿ 50 ಸಾವಿರ ರೂ.ವರೆಗೆ ಮಾತ್ರ ಏರಿಕೆಯಾಗುತ್ತಿತ್ತು. ಈ ಸಾಲಿನಲ್ಲಿ ಅದು ಏಕಾಏಕಿ 2.50 ಲಕ್ಷ ರೂ.ವರೆಗೆ ಏರಿಕೆಯಾಗಿದ್ದು, ಮಧ್ಯಮ ವರ್ಗದ ಜನರಿಗೆ ಖುಷಿ ನೀಡಿದೆ. ತೆರಿಗೆ ಹೊರೆ ಇಳಿಯಿತೆಂಬ ಸಂತಸ ಅವರಲ್ಲಿದೆ.
ಪಿಎಂ ಪಿಂಚಣಿ: ಅಸಂಘಟಿತ ವಲಯದ ಕಾರ್ಮಿಕರನ್ನು ಆಕರ್ಷಿಸುವ ಸಲುವಾಗಿ ಸುಮಾರು 10 ಕೋಟಿ ಕಾರ್ಮಿಕರಿಗೆ ಪಿಎಂ ಪಿಂಚಣಿ ಯೋಜನೆ ಜಾರಿಗೊಳಿಸಿದೆ. ಅಸಂಘಟಿತ ವಲಯದಲ್ಲಿ 60 ವರ್ಷ ದಾಟಿದ ಕಾರ್ಮಿಕರಿಗೆ ಪ್ರತಿ ತಿಂಗಳು 3 ಸಾವಿರ ರೂ. ಪಿಂಚಣಿ ಸೌಲಭ್ಯ ಸಿಗಲಿದೆ. ಇದಕ್ಕೆ ಪ್ರತಿ ತಿಂಗಳು 100 ರೂ.ಗಳನ್ನು ಕಾರ್ಮಿಕರು ಪಾವತಿ ಮಾಡಬೇಕು. ಇದಲ್ಲದೆ, ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳ ಮಾಡಿ ಅವರಿಗೂ ಖುಷಿಪಡಿಸಿದ್ದಾರೆ.
ಮುಂದಿನ ಚುನಾವಣೆಯನ್ನು ಗೆಲ್ಲಲೇಬೇಕೆಂಬ ಗೇಮ್ ಪ್ಲಾನ್‌ನೊಂದಿಗೆ ಬಜೆಟ್ ಮಂಡಿಸಲಾಗಿದೆ. ಈ ಬಜೆಟ್ ಚುನಾವಣೆಯ ಮೇಲೆ ಯಾವ ರೀತಿ ಪ್ರಭಾವ ಬೀರಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
* ಮಂಡ್ಯ ಮಂಜುನಾಥ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ
CCB Police: ವಕೀಲೆ ಜೀವಾ ಆತ್ಮಹತ್ಯೆ ಕೇಸ್ ಸಿಸಿಬಿಗೆ ವರ್ಗಾವಣೆ
Pushpa 2: ಕಿಸಿಕ್ ಎಂದು ಕುಣಿದ ಶ್ರೀಲೀಲಾ
ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ
Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.