ಆಟವಾಡುವ ವಯಸ್ಸಿನಲ್ಲೇ ಸಾವನ್ನು ಗೆದ್ದವರು
Team Udayavani, Feb 4, 2019, 12:48 AM IST
ಬೆಂಗಳೂರು: ಜೀವನದ ಪರಿಕಲ್ಪನೆಯೇ ಇಲ್ಲದ ವಯಸ್ಸಿನಲ್ಲಿ ಸಾವು ಗೆದ್ದು ಬಂದವರ ಕಥೆ ಇದು. ಆಟ ಆಡಿಕೊಂಡಿರುವ ಹಂತದಲ್ಲಿ ಬಂದೆರಗಿದ ಕಾಯಿಲೆಯನ್ನು ಮೆಟ್ಟಿ ನಿಂತು, ಮರು ಹುಟ್ಟು ಪಡೆದವರು. ಈಗ ಅವರೇ ಹತ್ತಾರು ಜನರಿಗೆ ಮಾದರಿಯಾಗಿದ್ದಾರೆ.
ಬೆಂಗಳೂರು ಮೂಲದ ನವೀನ್ ಹಾಗೂ ವಿಜಯಪುರದ ವಿಜಯ್ (ಹೆಸರು ಬದಲಿಸಲಾಗಿದೆ) ಆ ಸಾಧಕರು. ಅಚ್ಚರಿ ಎಂದರೆ ಇವರಿಗೆ ಕ್ಯಾನ್ಸರ್ ಇತ್ತು ಎಂಬ ವಿಚಾರ ಕುಟುಂಬ ಸದಸ್ಯರನ್ನು ಹೊರತುಪಡಿಸಿದರೆ, ಇದುವರೆಗೆ ಯಾರಿಗೂ ಗೊತ್ತಿಲ್ಲ. ಅಷ್ಟರಮಟ್ಟಗೆ ಸಾಮಾನ್ಯ ಜೀವನ ನಡೆಸುತ್ತಿದ್ದಾರೆ. ವಿಶ್ವ ಕ್ಯಾನ್ಸರ್ ದಿನಾಚರಣೆ ಹಿನ್ನೆಲೆಯಲ್ಲಿ ಅವರು ತಮ್ಮ ಅನುಭವವನ್ನು ‘ಉದಯವಾಣಿ’ಯೊಂದಿಗೆ ಹಂಚಿಕೊಂಡಿದ್ದು ಹೀಗೆ…
‘ನಾನಿನ್ನೂ 8ನೇ ತರಗತಿಯಲ್ಲಿ ಓದುತ್ತಿದ್ದ ದಿನಗಳವು. ಇದ್ದಕ್ಕಿದ್ದಂತೆ ಜ್ವರ ಕಾಣಿಸಿಕೊಂಡಿತು. ನಂತರ ಆಸ್ಪತ್ರೆಗೆ ಹೋಗಿ ರಕ್ತ ಪರೀಕ್ಷೆ ಮಾಡಿಸಿದಾಗ, ಏಕಾಏಕಿ ಕಿದ್ವಾಯಿ ಸ್ಮಾರಕಗ್ರಂಥಿ ಸಂಸ್ಥೆಗೆ ಭೇಟಿ ನೀಡುವಂತೆ ವೈದ್ಯರು ಸಲಹೆ ಮಾಡಿದರು. ಬಳಿಕ ಕಿದ್ವಾಯಿ ವೈದ್ಯರು ಅನೇಕ ಪರೀಕ್ಷೆ ಮಾಡಿದಾಗ ನನ್ನ ಪೋಷಕರಿಗೆ ಬರಸಿಡಿಲು ಬಡಿಯಿತು. ಯಾಕೆಂದರೆ, ನನಗೆ ರಕ್ತ ಕ್ಯಾನ್ಸರ್ (ಲ್ಯುಕೇಮಿಯಾ) ಇದೆ ಎಂಬುದು ಖಾತ್ರಿ ಆಗಿತ್ತು.
ಚಾಕೋಲೇಟ್ ಮಾರಾಟ ಮಾಡುತ್ತಿದ್ದ ನನ್ನ ಅಪ್ಪನಿಗೆ ಚಿಕಿತ್ಸೆಗಾಗಿ ಐದಾರು ಲಕ್ಷ ರೂ.ಹೊಂದಿಸುವುದೇ ದೊಡ್ಡ ಸವಾಲಾಗಿತ್ತು. ನಂತರ ನಿರಂತರ ಒಂಬತ್ತು ತಿಂಗಳು ಆಸ್ಪತ್ರೆಯ ನಾಲ್ಕು ಗೋಡೆಗಳ ಮಧ್ಯೆ ಚಿಕಿತ್ಸೆ ನಡೆಯಿತು. ಕೀಮೋಥೆರಪಿ ವೇಳೆ ಆಗುತ್ತಿದ್ದ ಸುಸ್ತು ಯಾವ ಶತ್ರುವಿಗೂ ಬೇಡ. ಮನೆಯಲ್ಲಿ ಇದ್ದುಕೊಂಡು ಒಂದು ವರ್ಷ ಚಿಕಿತ್ಸೆ ಪಡೆದು ಮರು ಜನ್ಮ ಸಿಕ್ಕಂತಾಯಿತು.
ಇದೆಲ್ಲ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಎಲ್ಲಾ ಮಕ್ಕಳಂತೆ ನನ್ನ ಆಟ-ಪಾಠ ಮುಂದುವರಿಯಿತು. ಇದೆಲ್ಲದರ ನಡುವೆ ಎಸ್ಸೆಸ್ಸೆಲ್ಸಿಯಲ್ಲಿ ಶೇ.92, ಪಿಯುಸಿಯಲ್ಲಿ ಶೇ.89ರಷ್ಟು ಅಂಕ ಗಳಿಸಿ ಇಂದು ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಏಳನೇ ಸೆಮಿಸ್ಟರ್ ಓದುತ್ತಿದ್ದು, ಇಲ್ಲಿಯೂ ಪ್ರತಿ ಸೆಮಿಸ್ಟರ್‌ನಲ್ಲಿ ಅತ್ಯುನ್ನತ ದರ್ಜೆಯಲ್ಲಿಯೇ ಉತ್ತೀರ್ಣನಾಗುತ್ತಿದ್ದೇನೆ. ಎಂಜಿನಿಯರಿಂಗ್ ನಂತರ ಒಳ್ಳೆ ಕೆಲಸ ಪಡೆದು ತನ್ನ ಜೀವನ ನಡೆಸಲು ಅಗತ್ಯವಿರುವಷ್ಟು ಹಣ ಇಟ್ಟುಕೊಂಡು ಉಳಿದ ಹಣವನ್ನು ಕ್ಯಾನ್ಸರ್‌ಪೀಡಿತ ಮಕ್ಕಳ ಚಿಕಿತ್ಸೆಗೆ ವಿನಿಯೋಗಿಸುವ ಗುರಿ ಹೊಂದಿದ್ದೇನೆ ಎಂದು ಹೇಳಿದರು ನವೀನ್.
ಕ್ಯಾನ್ಸರ್ ಬಂದವರೆಲ್ಲ ಸಾಯಲ್ಲ: ಅದೇ ರೀತಿ, ವಿಜಯ್ ಕೂಡ 7ನೇ ತರಗತಿ ಓದುವಾಗಲೇ ಕ್ಯಾನ್ಸರ್‌ಗೆ ತುತ್ತಾದವರು. ‘ರಕ್ತ ಕ್ಯಾನ್ಸರ್‌ಗೆ ವಿಜಯಪುರದಲ್ಲಿ ಸೂಕ್ತ ವೈದ್ಯಕೀಯ ಸೌಲಭ್ಯವಿಲ್ಲ ಎಂದು ಬೆಂಗಳೂರಿನ ಕಿದ್ವಾಯಿಗೆ ಬಂದು ಒಂದು ವರ್ಷ ಚಿಕಿತ್ಸೆ ಪಡೆದೆ. ಬಿಪಿಎಲ್ ಕಾರ್ಡ್ ಇದ್ದುದರಿಂದ ಚಿಕಿತ್ಸೆಗಳು ಉಚಿತವಾಗಿಯೇ ಆದವು. ಅಪ್ಪನಿಲ್ಲದ ಮನೆಯ ಜವಾಬ್ದಾರಿಯನ್ನು ಮುಂದೆ ನಾನು ನಿಭಾಯಿಸಲು ಉತ್ತಮವಾಗಿ ಓದಬೇಕು ಎಂದು ನಿರ್ಧರಿಸಿ ಪಿಯುಸಿಯಲ್ಲಿ ಶೇ.87ರಷ್ಟು ಅಂಕ ಗಳಿಸಿ ವಿಜಯಪುರದ ಪ್ರತಿಷ್ಠಿತ ತಾಂತ್ರಿಕ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ ಎಂಜಿಯರಿಂಗ್ ಓದುತ್ತಿದ್ದೇನೆ. ಕ್ಯಾನ್ಸರ್ ಬಂದ ತಕ್ಷಣ ಎಲ್ಲರೂ ಸಾಯುವುದಿಲ್ಲ. ಮೊದಲ ಹಂತದಲ್ಲೇ ಪತ್ತೆ, ಅದಕ್ಕೆ ಸೂಕ್ತ ಚಿಕಿತ್ಸೆಯಿಂದ ಆ ಕಾಯಿಲೆ ಗೆಲ್ಲಬಹುದು. ಇದೆಲ್ಲಕ್ಕಿಂತ ಮುಖ್ಯವಾಗಿ ಆ ಸಮಯದಲ್ಲಿ ಆತ್ಮಸ್ಥೈರ್ಯ ಅತ್ಯವಶ್ಯಕ’ ಎಂದು ಹೇಳುತ್ತಾರೆ.
ಲಕ್ಷ ಜನರಲ್ಲಿ 140 ಜನರಿಗೆ ಕ್ಯಾನ್ಸರ್
ಇತ್ತೀಚಿನ ದಿನಗಳಲ್ಲಿ ಜೀವನ ಶೈಲಿ, ಆಹಾರ ಪದ್ಧತಿಯಲ್ಲಿ ಬದಲಾವಣೆ, ಕೆಲಸದ ಒತ್ತಡ, ಅನುವಂಶೀಯ ಕಾರಣಗಳಿಂದ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯ ನೋಂದಣಿ ವಿಭಾಗದ ಪ್ರಕಾರ ಒಂದು ಲಕ್ಷ ಜನರಲ್ಲಿ 140 ಮಂದಿಗೆ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದ್ದು, 2018ರಲ್ಲಿ 8,209 ಪುರುಷರು, 13,975 ಮಹಿಳೆಯರನ್ನು ಒಳಗೊಂಡು ಒಟ್ಟು 22,184 ಮಂದಿ ಕ್ಯಾನ್ಸರ್ ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಜಯಪ್ರಕಾಶ್ ಬಿರಾದಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Indiranagar; ಅಸ್ಸಾಂ ಯುವತಿ ಹ*ತ್ಯೆ ಕೇಸ್: ಆರೋಪಿ ಬಂಧಿಸಿದ ಪೊಲೀಸರು
Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ
Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ
ಚಂದ್ರಶೇಖರ ಶ್ರೀ ವಿರುದ್ಧ ಕೇಸ್; ಒಕ್ಕಲಿಗರು ತಿರುಗಿ ಬೀಳುತ್ತಾರೆ: ಆರ್.ಅಶೋಕ್ ಎಚ್ಚರಿಕೆ
Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.