ಮಹಾಮಸ್ತಕಾಭಿಷೇಕ: ಬಿಸಿಲ ಬೇಗೆ ತಣಿಸಲು ಅಡಿಕೆ ಹಾಳೆ ಬೀಸಣಿಕೆ!
Team Udayavani, Feb 4, 2019, 5:34 AM IST
ಬೆಳ್ತಂಗಡಿ: ಪರಮ ವಿರಾಗಿ ಗೊಮ್ಮಟನೇನೋ ವರುಷ ವರುಷಗಳಿಂದ ಮಳೆ-ಬಿಸಿಲು-ಚಳಿಯೆನ್ನದೆ ಉನ್ನತ ಮೂರ್ತಿಯಾಗಿ ನಿಂತಿದ್ದಾನೆ, ಹನ್ನೆರಡು ವರುಷಗಳಿಗೊಮ್ಮೆ ಮಹಾಮಸ್ತಕಾಭಿಷೇಕವನ್ನು ಪಡೆಯುತ್ತಿದ್ದಾನೆ. ಆದರೆ ಪದತಲದಲ್ಲಿನಿಂತು ಮಹಾಮಜ್ಜನವನ್ನು ವೀಕ್ಷಿಸುವವರು ಮನುಷ್ಯಮಾತ್ರರಲ್ಲವೆ!ಅವರಿಗೆ ಉರಿಬಿಸಿಲು-ತಾಪಗಳನ್ನು ತಾಳಿಕೊಳ್ಳಲಾಗುವುದೆ!
ಧರ್ಮಸ್ಥಳದ ಬಾಹುಬಲಿ ಮೂರ್ತಿಗೆ ಮಹಾಮಸ್ತಕಾಭಿಷೇಕವನ್ನು ಹಮ್ಮಿಕೊಂಡಿರುವ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಮತ್ತು ಕುಟುಂಬದವರು ಅಭಿಷೇಕ ಕಾರ್ಯದಲ್ಲಿ ಪಾಲ್ಗೊಳ್ಳುವವರ ಬಿಸಿಲ ಬೇಗೆಯನ್ನು ತಣಿಸುವುದಕ್ಕಾಗಿ ಪರಿಸರ ಸ್ನೇಹಿ ಅಡಿಕೆ ಹಾಳೆಯಿಂದ ಬರೋಬ್ಬರಿ ಮೂರು ಸಾವಿರ ಬೀಸಣಿಗೆಗಳನ್ನು ಸಿದ್ಧಪಡಿಸಿ ಇರಿಸಿಕೊಳ್ಳಲು ಸೂಚಿಸಿದ್ದಾರೆ. ಮುಂಡಾಜೆ ಗ್ರಾಮದ ಕಾಲೇಜು ರಸ್ತೆಯಲ್ಲಿರುವ ಅಡಿಕೆ ಹಾಳೆ ತಟ್ಟೆ ಘಟಕವೊಂದರಲ್ಲಿ ಈ ಬೀಸಣಿಕೆಗಳನ್ನು ತಯಾರಿಸಲಾಗುತ್ತಿದೆ. ಈಗಾಗಲೇ ಬಹುತೇಕ ಪೂರ್ಣಗೊಂಡಿದೆ.
ಹಾಳೆಗೊಂದೇ ಬೀಸಣಿಕೆ!
ಬೀಸಣಿಕೆ ಗಾತ್ರದಲ್ಲಿ ಸಣ್ಣದಾಗಿ ಕಂಡರೂ ಬಹುತೇಕ ಅಡಿಕೆ ಹಾಳೆಗಳಿಂದ ಒಂದೇ ಬೀಸಣಿಗೆ ಮಾಡಲು ಸಾಧ್ಯ. 30 ಇಂಚುಗಳಷ್ಟು ಉದ್ದವಾದ ಹಾಳೆ ಸಿಕ್ಕಿದರೆ ಮಾತ್ರ 2 ಬೀಸಣಿಗೆಗಳನ್ನು ತಯಾರಿಸಬಹುದು. ಘಟಕದವರು ಇಂತಹ ಬೀಸಣಿಕೆಗಳನ್ನು ತಯಾರಿಸುತ್ತಿರುವುದು ಇದೇ ಮೊದಲು. ಹೀಗಾಗಿ ಆರಂಭದಲ್ಲಿ 100ರಷ್ಟು ಬೀಸಣಿಕೆಗಳು ಹಾಳಾದವು ಎಂದು ಘಟಕದ ಭವಾನಿ ಹೇಳುತ್ತಾರೆ.
ಪ್ರತಿ ಬೀಸಣಿಕೆಯೂ ನಿರ್ದಿಷ್ಟ ಅಳತೆಯಲ್ಲೇ ರಚನೆಗೊಂಡಿದೆ, ಅದಕ್ಕಾಗಿ ಸಿರಿ ಸಂಸ್ಥೆಯವರು ತಗಡಿನ ಅಚ್ಚನ್ನು ನೀಡಿದ್ದರು. ಅಚ್ಚನ್ನು ಹಾಳೆಯ ಮೇಲಿರಿಸಿ, ಗುರುತು ಮಾಡಿ ಕತ್ತರಿಸಲಾಗಿದೆ. ಅದು ಬಹಳ ಎಚ್ಚರಿಕೆಯಿಂದ ನಡೆಯಬೇಕು, ಹೀಗಾಗಿ ಒಂದು ಬೀಸಣಿಕೆ ತಯಾರಿಗೆ 10ರಿಂದ 15 ನಿಮಿಷ ವ್ಯಯಿಸಿದ್ದಾರೆ. ಕತ್ತರಿಸಿದ ಬಳಿಕ ವಿನ್ಯಾಸ ಕೊಡುವುದಕ್ಕೆ ಹೆಚ್ಚು ಸಮಯ ತಗಲಿದೆ ಎನ್ನುತ್ತಾರೆ ಭವಾನಿಯವರು.
ಮಹಾಮಸ್ತಕಾಭಿಷೇಕದಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ಗಾಳಿ ಬೀಸುವ ವಸ್ತು ಒದಗಿಸುವುದೂ ಒಂದು ಪುಣ್ಯ ಕಾರ್ಯ. ಮುಂಡಾಜೆಯ ಘಟಕದವರು ಬೀಸಣಿಗೆಯ ರಚನೆಯ ಜವಾಬ್ದಾರಿ ನಿರ್ವಹಿಸಿದ್ದಾರೆ. ರಚನೆಯ
ಕಾರ್ಯ ಸಾಗುತ್ತಿದ್ದು, ಶೀಘ್ರದಲ್ಲಿ ಪೂರ್ಣಗೊಳ್ಳಲಿದೆ ಎಂದು ಮೇಲ್ವಿಚಾರಕ ಗಣೇಶ್ ತಿಳಿಸಿದ್ದಾರೆ.
ಒಂದು ತಿಂಗಳಿಂದ ತಯಾರಿ
ಅಡಿಕೆ ಹಾಳೆಯ ಬೀಸಣಿಕೆ ಸರಳವಾಗಿ ಕಂಡರೂ ಅದರ ತಯಾರಿ ಅಷ್ಟು ಸುಲಭವಲ್ಲ. ಅಡಿಕೆ ಹಾಳೆಗಳ ಸಂಗ್ರಹದಿಂದ ಹಿಡಿದು ಬೀಸಣಿಕೆಯಾಗಿ ಅವನ್ನು ರೂಪಿಸುವುದು ಸವಾಲಿನ ಕಾರ್ಯವೇ ಸರಿ. ಘಟಕದ ಐವರು ಕಾರ್ಮಿಕರು ಒಂದು ತಿಂಗಳಿನಿಂದ ಇದಕ್ಕಾಗಿ ಹಗಲು-ರಾತ್ರಿ ಪರಿಶ್ರಮ ಪಟ್ಟಿದ್ದಾರೆ.
ಸಂಪಾದನೆಯ ದೃಷ್ಟಿಗಿಂತಲೂ ಮಸ್ತಕಾಭಿಷೇಕದ ಪುಣ್ಯಕಾರ್ಯದಲ್ಲಿ ನಮ್ಮದೂ ಕಿಂಚಿತ್ ಸೇವೆ ಇರಲಿ ಎಂಬ ದೃಷ್ಟಿಯಿಂದ ಅವರು ಈ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ. ಆರಂಭದಲ್ಲಿ ಅಡಿಕೆ ಹಾಳೆಗಳನ್ನು ನೀರಿನಲ್ಲಿ ನೆನೆಸಿ ಹದ ಮಾಡಬೇಕಾಗುತ್ತದೆ. ಬಳಿಕ ನಿರ್ದಿಷ್ಟ ಅಳತೆಯಲ್ಲಿ ಕತ್ತರಿಸಲಾಗುತ್ತದೆ. ಒಂದು ಬೀಸಣಿಕೆ 8 ಇಂಚು ಸುತ್ತಳತೆಯದ್ದಾಗಿದ್ದರೆ ಹಿಡಿಕೆ 4 ಇಂಚಿನದ್ದಾಗಿದೆ.
ಪ್ರತಿ 10 ಬೀಸಣಿಗೆಗಳನ್ನು ಕತ್ತರಿಸಿ ರೂಪಿಸಿದ ಬಳಿಕ ಸಮತಲದಲ್ಲಿ ಪೇರಿಸಿಟ್ಟು ಅದರ ಮೇಲೆ ಭಾರವಾದ ವಸ್ತುವನ್ನು ಇರಿಸಲಾಗುತ್ತದೆ. ಅಡಿಕೆ ಹಾಳೆಯ ಉಬ್ಬುತಗ್ಗು ನಿವಾರಿಸುವುದಕ್ಕೆ ಹೀಗೆ ಮಾಡಬೇಕು. ಹೀಗೆ ಒಂದು ದಿನ ಇರಿಸಿದ ಬಳಿಕ ನೀರಿನಂಶ ಹೋಗಲಾಡಿಸಲು ಗಾಳಿಗೆ ಬಿಡಿಸಿಡಬೇಕಾಗುತ್ತದೆ. ಹೀಗೆ ಮಾಡಿದರೆ ಮಾತ್ರ ಅದು ನೆಟ್ಟಗಿರುತ್ತದೆ, ಇಲ್ಲವಾದರೆ ಸುರುಟಿಕೊಂಡು ಉಪಯೋಗಿಸಲಾಗದ ಸ್ಥಿತಿಗೆ ಬರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.