ದೀದಿಯ ಧರಣಿ ಮತ್ತು ಪಂಜರದ ಗಿಣಿ
Team Udayavani, Feb 5, 2019, 12:30 AM IST
ಲೋಕಸಭಾ ಚುನಾವಣೆಯು ಸನ್ನಿಹಿತವಾಗುತ್ತಿರುವ ಸಮಯದಲ್ಲೇ ಎನ್‌ಡಿಎ ಮತ್ತು ತೃಣಮೂಲ ಸರ್ಕಾರದ ನಡುವಿನ ಸಮರ ನಿರ್ಣಾಯಕ ಘಟ್ಟ ತಲುಪಿದೆ. ಶಾರದಾ ಚಿಟ್ ಫಂಡ್ ಮತ್ತು ರೋಸ್‌ವ್ಯಾಲಿ ಹಗರಣದ ವಿಚಾರವಾಗಿ ಕೋಲ್ಕತ್ತಾ ಪೊಲೀಸ್ ಕಮಿಷನರ್ ರಾಜೀವ್ ಕುಮಾರ್‌ರ ವಿಚಾರಣೆಗೆಂದು ಸಿಬಿಐ ತಂಡ ಬಂದದ್ದೇ, ಮಮತಾ ಬ್ಯಾನರ್ಜಿ “ಸಂವಿಧಾನವನ್ನು ರಕ್ಷಿಸಿ’ ಎಂದು ಧರಣಿಗೆ ಕುಳಿತುಬಿಟ್ಟಿದ್ದಾರೆ. ಕೋಲ್ಕತ್ತಾ ಪೊಲೀಸರಂತೂ ವಿಚಾರಣೆಗೆ ಬಂದ ಸಿಬಿಐ ಅಧಿಕಾರಿಗಳನ್ನೇ ವಶಕ್ಕೆ ಪಡೆದು ಬಿಡುಗಡೆಗೊಳಿಸಿದ ಅಪರೂಪದ “ಅಸಹಜ’ ಘಟನೆಯೂ ನಡೆದಿದೆ.
ಈ ಘಟನೆಗಳು ಶಾರದಾ ಚಿಟ್‌ಫಂಡ್ ಹಗರಣ, ಆ ಸ್ಕೀಂ ಅನೇಕ ರಾಜ್ಯಗಳಲ್ಲಿ ಬೆಳೆದು ನಿಂತ-ಅಷ್ಟೇ ವೇಗವಾಗಿ ಕುಸಿದು ಬಿದ್ದ ರೀತಿಯನ್ನು ಮತ್ತು ದೇಶದ ಪ್ರಮುಖ ರಾಜಕೀಯ ಪಕ್ಷಗಳ ನಿಜ ಚಹರೆಗಳನ್ನು ಮತ್ತೂಮ್ಮೆ ಮುನ್ನೆಲೆಗೆ ತಂದು ನಿಲ್ಲಿಸಿದೆ.
ಚುನಾವಣೆಯ ಹೊತ್ತಿನಲ್ಲಿ ಮೋದಿ ಸರ್ಕಾರ ತಮ್ಮನ್ನು ಟಾರ್ಗೆಟ್ ಮಾಡುತ್ತಿದೆ ಎಂಬ ಆರೋಪ ಮಹಾಘಟಬಂಧನದ ನೇತೃತ್ವ ವಹಿಸಿಕೊಳ್ಳಲು ಬಯಸುತ್ತಿರುವ ಮಮತಾರದ್ದು. ರಾಹುಲ್, ಕೇಜ್ರಿವಾಲ್, ಒಮರ್ ಅಬ್ದುಲ್ಲಾ, ಚಂದ್ರಬಾಬು ನಾಯ್ಡು, ಅಖೀಲೇಶ್, ಕುಮಾರಸ್ವಾಮಿ, ಮಾಯಾವತಿ ಸೇರಿದಂತೆ ಈ ಮೈತ್ರಿಕೂಟದ ಸಂಭಾವ್ಯ ಭಾಗೀದಾರರೆಲ್ಲರೂ ದೀದಿಯ ಪರ ಧ್ವನಿಯೆತ್ತುತ್ತಿದ್ದಾರೆ. ಕೇಂದ್ರ ಸರ್ಕಾರ ಸಿಬಿಐ ಅನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ ಎನ್ನುವುದು ಇವರೆಲ್ಲರ ಒಕ್ಕೊರಲ ವಾದ. ನಮಗೂ ಇದಕ್ಕೂ ಸಂಬಂಧವಿಲ್ಲ ಎಂದು ಹೇಳುತ್ತಿದೆ ಕೇಂದ್ರ ಸರ್ಕಾರ. ಮೊದಲಿಂದಲೂ ಸಿಬಿಐ ಪಂಜರದ ಗಿಣಿ ಎನ್ನುವ ಆರೋಪ ಎದುರಿಸುತ್ತಲೇ ಬರುತ್ತಿರುವ ಸಂಸ್ಥೆ. ಮಮತಾ ಸಿಬಿಐ ಅನ್ನು ಕೇಂದ್ರದ ಪಂಜರದ ಗಿಣಿ ಎಂದು ಕರೆದರೆ, ಬಿಜೆಪಿ ರಾಜೀವ್ ಕುಮಾರ್ ಮತ್ತು ಕೋಲ್ಕತ್ತಾ ಪೋಲೀಸರನ್ನು ಮಮತಾರ ಗಿಣಿಗಳು ಎಂದು ಹೇಳುತ್ತಿದೆಯಷ್ಟೆ!
ಯಾವ ಸಂಸ್ಥೆ ಯಾರ ಗಿಣಿ ಎನ್ನುವುದಕ್ಕಿಂತ ಈಗ ಪ್ರಶ್ನೆ ಇರುವುದು, ಶಾರದಾ ಚಿಟ್ ಫಂಡ್ ಹಗರಣದಲ್ಲಿ ತೃಣಮೂಲದ ಪಾತ್ರವೆಷ್ಟಿದೆ, ಏಕೆ ಮಮತಾ ಬ್ಯಾನರ್ಜಿ ರಾಜೀವ್ ಕುಮಾರ್‌ರ ಪರ ಈ ಪರಿ ಬ್ಯಾಟಿಂಗ್ ಮಾಡುತ್ತಿದ್ದಾರೆ ಎನ್ನುವುದು. ಮಮತಾ ಅಂತೂ ತಾವು ಸಂವಿಧಾನವನ್ನು ರಕ್ಷಿಸುವುದಕ್ಕಾಗಿ ಮತ್ತು “ಜಗತ್ತಿನ ಅತ್ಯುತ್ತಮ ಪೊಲೀಸ್’ ರಾಜೀವ್ ಕುಮಾರ್‌ರ ರಕ್ಷಣೆಗಾಗಿ ಧರಣಿ ಕುಳಿತಿರುವುದಾಗಿ ಹೇಳುತ್ತಿದ್ದಾರಾದರೂ ಸತ್ಯ ಬೇರೆಯೇ ಇದೆ.
ಅದನ್ನು ಅರ್ಥ ಮಾಡಿಕೊಳ್ಳಲು ಶಾರದಾ ಚಿಟ್ ಫಂಡ್ ಹಗರಣದ ಕಗ್ಗಂಟುಗಳನ್ನು ಸಡಿಲಿಸಿ ನೋಡಲು ಪ್ರಯತ್ನಿಸುವುದು ಅಗತ್ಯ. ಒಂದು ಸಂಗತಿಯಂತೂ ಸ್ಪಟಿಕ ಸ್ಪಷ್ಟ- ಸಾವಿರಾರು ಕೋಟಿ ರೂಪಾಯಿ ಮೊತ್ತದ ಈ ರೀತಿಯ ಬೃಹತ್ ಆರ್ಥಿಕ ವ್ಯವಹಾರಗಳು ರಾಜಕೀಯ ನಾಯಕರ, ಅಧಿಕಾರ ವರ್ಗದ ಸಹಕಾರವಿಲ್ಲದೆ ನಡೆಯಲು ಸಾಧ್ಯವೇ ಇಲ್ಲ.
ಶಾರದಾ ಸ್ಕೀಮ್
ಕಡಿಮೆ ಸಮಯದಲ್ಲೇ ಅಧಿಕ ಹಣ ಮಾಡುವ ಆಮಿಷ ಒಡ್ಡಿ ಆರಂಭವಾದದ್ದು ಶಾರದಾ ಚಿಟ್ ಫಂಡ್. ಪಶ್ಚಿಮ ಬಂಗಾಳ, ಅಸ್ಸಾಂ ಸೇರಿದಂತೆ ಒಟ್ಟು ಐದು ರಾಜ್ಯಗಳಲ್ಲಿನ ಸುಮಾರು 20 ಲಕ್ಷ ಜನರು, ಈ ವ್ಯವಹಾರದಲ್ಲಿ ಹಣ ಹೂಡಿದ್ದರು. ನೂರು ರೂಪಾಯಿಯಿಂದ ಹಿಡಿದು, ಲಕ್ಷಾಂತರ ರೂಪಾಯಿಯವರೆಗೆ ಹಣ ಹಾಕಿದವರಿದ್ದರು. ವರ್ಷದ ಅಂತ್ಯಕ್ಕೆ 50 ಪ್ರತಿಶತ ಲಾಭದೊಂದಿಗೆ ಹಣವನ್ನು ಹಿಂದಿರುಗಿಸುವುದಾಗಿ ಶಾರದಾ ಸಂಸ್ಥೆ ಜನರನ್ನು ನಂಬಿಸಿತ್ತು. ಹೊಸದಾಗಿ ಬಂದ ಹೂಡಿಕೆದಾರರಿಂದ ಹಳೆಯ ಇನ್ವೆಸ್ಟರ್ಸ್‌ಗಳಿಗೆ ಹಣ ಸಲ್ಲಿಕೆಯಾಗುತ್ತಿತ್ತು. ಆದರೆ ಯಾವಾಗ “ವಿವಿಧ’ ಕಾರಣಗಳಿಂದಾಗಿ ಹೊಸ ಹೂಡಿಕೆದಾರರ ಸಂಖ್ಯೆ ಕಡಿಮೆಯಾಗತೊಡಗಿತೋ ಆಗ ಬೆಳೆದಷ್ಟೇ ವೇಗದಲ್ಲಿ ಈ ಸ್ಕೀಮ್ ಕೆಳಕ್ಕೂ ಕುಸಿಯಿತು. 2013ರಲ್ಲಿ ಸೆಬಿ ಸಂಸ್ಥೆ ಶಾರದಾ ಕಂಪೆನಿ ತನ್ನೆಲ್ಲ ವಹಿವಾಟನ್ನೂ ನಿಲ್ಲಿಸಬೇಕೆಂದು ಆದೇಶಿಸಿತು. ಆದರೆ ಅಷ್ಟರಲ್ಲಾಗಲೇ ಸುಮಾರು 20 ಲಕ್ಷ ಜನ ಒಟ್ಟು 4 ಸಾವಿರ ಕೋಟಿ ರೂಪಾಯಿಗಳನ್ನು ಕಳೆದುಕೊಂಡರು. ಹಣ ಹಾಕಿದವರಲ್ಲಿ ಬಹುತೇಕರು ಕೂಲಿಕಾರ್ಮಿಕರು, ಚಿಕ್ಕ ವ್ಯಾಪಾರಿಗಳು, ರೈತರೇ ಇದ್ದದ್ದರಿಂದ ಅವರೆಲ್ಲ ಬೀದಿಗೆ ಬಿದ್ದರು. ಅನೇಕರು ನೋವು ತಡೆಯಲಾರದೆ ಆತ್ಮಹತ್ಯೆಗೂ ಶರಣಾದರು.
ಗಮನಿಸಬೇಕಾದ ಸಂಗತಿಯೆಂದರೆ, ಈಗ ಕಾಂಗ್ರೆಸ್ ನಾಯಕರು ಸಿಬಿಐ ಮೇಲೆ ಮುಗಿಬೀಳುತ್ತಿದ್ದಾರಾದರೂ, ಶಾರದಾ ಚಿಟ್ ಫಂಡ್ ಹಗರಣದಲ್ಲಿ ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು 2013ರಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದವರೂ ಅವರೇ! ಅಂದು ಕಾಂಗ್ರೆಸ್ ನಾಯಕ ಅಬ್ದುಲ್ ಮನ್ನಾಹ್ ಹಾಕಿದ ಅರ್ಜಿಯನ್ನು ಪರಿಶೀಲಿಸಿದ ಸುಪ್ರೀಂ ಕೋರ್ಟ್ ತನಿಖೆ ನಡೆಸುವಂತೆ ಸಿಬಿಐಗೆ ನಿರ್ದೇಶಿಸಿತ್ತು. ಆದರೆ ಮಮತಾ ಸರ್ಕಾರ ಆಗಲೂ ಕೂಡ ಸಿಬಿಐ ಅನ್ನು ಕೇಂದ್ರದ ಕೈಗೊಂಬೆ ಎಂದು ದೂಷಿಸಿ, ಪ್ರಕರಣದ ತನಿಖೆಯನ್ನು ಲಗುಬಗೆಯಿಂದ ಎಸ್‌ಐಟಿಗೆ ವಹಿಸಿತ್ತು. ಅದರ ನೇತೃತ್ವದ ಮಮತಾರ ಅತ್ಯಾಪ್ತ ರಾಜೀವ್ ಕುಮಾರ್ ವಹಿಸಿಕೊಂಡರು. ಅವರು ಪ್ರಮುಖ ಕಡತಗಳನ್ನು-ದಾಖಲೆಗಳನ್ನು ಮಾಯ ಮಾಡಿದ್ದಾರೆ, ಮಮತಾರನ್ನು ರಕ್ಷಿಸುತ್ತಿದ್ದಾರೆ ಎನ್ನುವ ಆರೋಪ ಎದುರಿಸುತ್ತಿದ್ದಾರೆ. ಆದಾಗ್ಯೂ ಈ ಹಗರಣದಲ್ಲಿ ಹೆಸರು ಕೆಡಿಸಿಕೊಂಡ ಖಾಕಿಧಾರಿ ಅವರೊಬ್ಬರೇ ಅಲ್ಲ. ಸೆಪ್ಟೆಂಬರ್ 2014ರಲ್ಲಿ ಅಸ್ಸಾಂನ ನಿವೃತ್ತ ಜಿಡಿಪಿ ಶಂಕರ್ ಬರುವಾ ಅವರ ಮನೆಯ ಮೇಲೂ ಈ ಹಗರಣದ ವಿಚಾರವಾಗಿ ಸಿಬಿಐ ದಾಳಿ ಮಾಡಿತ್ತು. ಆದರೆ ಸಿಬಿಐ ದಾಳಿ ನಡೆದ ಮೂರು ವಾರಗಳ ನಂತರ ಶಂಕರ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡುಬಿಟ್ಟರು…ಅಷ್ಟೇ ಅಲ್ಲ ದಿನಗಳೆದಂತೆ ಹಲವು ತೃಣಮೂಲ ನಾಯಕರ ಹೆಸರುಗಳು ತನಿಖೆಯಲ್ಲಿ ಹೊರಬರಲಾರಂಭಿಸಿದವು, ತಪಸ್ ಪೌಲ್ ಮತ್ತು ಸುದೀಪ್ ಬಂದೋಪಾಧ್ಯಯರಂಥ ಜನಪ್ರಿಯ ನಾಯಕರ ಬಂಧನವಾಯಿತು. ಮಮತಾ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿದ್ದ ಮದನ್ ಮಿತ್ರಾ ಕೂಡ ಜೈಲು ಸೇರಬೇಕಾಯಿತು.
21 ತಿಂಗಳ ಬಂಧನದ ನಂತರ ಅವರು ಜಾಮೀನಿನ ಮೇಲೆ ಬಿಡುಗಡೆಯಾದರು. ತದನಂತರ ಸೃಂಜಯ್ ಬೋಸ್, ರಜತ್ ಮಜುಂದಾರ್ ಜೈಲಿಗೆ ಹೋಗಿ ಬಂದರು. ಶಾರದಾ ಸಂಸ್ಥೆಯ ಬ್ರಾಂಡ್ ಅಂಬಾಸಿಡರ್ ಆಗಿದ್ದ ಚಿತ್ರನಟ, ತೃಣಮೂಲ ಕಾಂಗ್ರೆಸ್ ನಾಯಕ ಮಿಥುನ್ ಚಕ್ರವರ್ತಿಯವರನ್ನೂ ಜಾರಿ ನಿರ್ದೇಶನಾಲಯ ತೀವ್ರ ವಿಚಾರಣೆಗೆ ಒಳಪಡಿಸಿತು. ಇದಾದ ಕೆಲವೇ ಸಮಯದಲ್ಲಿ ಅವರು ಸಂಸದ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಹೊರನಡೆಯಬೇಕಾಯಿತು! ಇನ್ನು ತೃಣಮೂಲ ಕಾಂಗ್ರೆಸ್‌ನಲ್ಲಿ ಮಮತಾ ನಂತರದ ಬಲಿಷ್ಠ ನಾಯಕರೆನಿಸಿಕೊಂಡಿದ್ದ ಮುಕುಲ್ ರಾಯ್ ಕೂಡ 2015ರಲ್ಲಿ ತೀವ್ರ ವಿಚಾರಣೆ ಎದುರಿಸಬೇಕಾಯಿತು. ಈ ಘಟನೆಯ ನಂತರ ಮಮತಾರ ಮೇಲೆ ಮುಕುಲ್ ಮುನಿಸಿಕೊಂಡರು. ಅವರು ಪಕ್ಷದಿಂದ ಹೊರಬಂದು ಬಿಜೆಪಿಯ ಭಾಗವಾಗಿಬಿಟ್ಟರು! ಗಮನಿಸಬೇಕಾದ ಸಂಗತಿಯೆಂದರೆ, ಶಾರದಾ ಚಿಟ್ ಫಂಡ್ ಹಗರಣದ ನಂತರ ಆರೋಪಿಗಳಲ್ಲಿ ಮುಕುಲ್ ರಾಯ್ ಅಷ್ಟೇ ಅಲ್ಲ, ಒಂದು ಕಾಲದಲ್ಲಿ ಅಸ್ಸಾಂ ಕಾಂಗ್ರೆಸ್‌ನ ಬಲಿಷ್ಠ ನಾಯಕರಾಗಿದ್ದ ಹಿಮಾಂತಾ ಬಿಸ್ವಾ ಶರ್ಮಾ ಕೂಡ ಈಗ ಬಿಜೆಪಿಯ ಭಾಗವಾಗಿದ್ದಾರೆ. ಶಾರದಾ ಸಂಸ್ಥೆಯು ಅಸ್ಸಾಂನಲ್ಲಿ ತನ್ನ ವ್ಯವಹಾರಗಳು ಸುಸೂತ್ರವಾಗಿ ನಡೆಯಬೇಕೆಂದು ಹಿಮಾಂತಾ ಅವರಿಗೆ ಪ್ರತಿ ತಿಂಗಳು 20 ಲಕ್ಷ ಹಣ ಕೊಡುತ್ತಿತ್ತು ಎನ್ನುವ ಆರೋಪವಿದೆ. ಈಗ ಮುಕುಲ್ ರಾಯ್ ಮತ್ತು ಹಿಮಾಂತಾಪಶ್ಚಿಮ ಬಂಗಾಳ ಹಾಗೂ ಅಸ್ಸಾಂನಲ್ಲಿ ಬಿಜೆಪಿಯ ಸ್ಟಾರ್ ಕ್ಯಾಂಪೇನರ್‌ಗಳೆಂದು ಕರೆಸಿಕೊಳ್ಳುತ್ತಿದ್ದಾರೆ. ಬಿಜೆಪಿಯು ಈಶಾನ್ಯ ಭಾಗದಲ್ಲಿ ಒಳದಾರಿಗಳನ್ನು ನಿರ್ಮಿಸಿಕೊಳ್ಳುವಲ್ಲಿ ಹಿಮಂತ್ ಪಾತ್ರ ಅಧಿಕವಿದೆ. ಲೋಕಸಭಾ ಚುನಾವಣೆಯಲ್ಲೂ ಇವರಿಬ್ಬರೂ ಬಿಜೆಪಿಗೆ ಬಹಳ ಲಾಭಕ್ಕೆ ಬರಲಿದ್ದಾರೆ. ಇನ್ನು ಕಾಂಗ್ರೆಸ್‌ನ ಹಿರಿಯ ನಾಯಕ ಪಿ. ಚಿದಂಬರಂ ಅವರ ಮಡದಿ ನಳಿನಿ ಚಿದಂಬರಂ ಹೆಸರೂ ಕೂಡ ಸಿಬಿಐ ಚಾರ್ಜ್‌ಶೀಟಿನಲ್ಲಿದೆ. 2010-12ರ ನಡುವೆ ಸೆಬಿ ಮತ್ತು ಆರ್‌ಒಸಿ ಸಂಸ್ಥೆಗಳ ತನಿಖೆಗಳನ್ನು ನಿರ್ವಹಿಸಲು ನಳಿನಿಯವರಿಗೆ ಶಾರದಾ ಸಂಸ್ಥೆ 1.4 ಕೋಟಿ ರೂಪಾಯಿ ಕೊಟ್ಟಿತ್ತು ಎನ್ನುವ ಆರೋಪವಿದೆ. ಸದ್ಯಕ್ಕೆ ಬಂಧನದಲ್ಲಿರುವ ಪ್ರಭಾವಿಗಳೆಂದರೆ ಶಾರದಾ ಸಂಸ್ಥೆಯ ಸ್ಥಾಪಕ ಸುದಿಪ್ತಾ ಸೇನ್ ಮತ್ತು ಆತನ ನಿಕಟವರ್ತಿ ದೇಬಾjನಿ ಮುಖರ್ಜಿಯಷ್ಟೇ.
ಶಾರದಾ ಚಿಟ್ ಫಂಡ್ ಪ್ರಕರಣ ಬಹಿರಂಗವಾದ ಸಮಯದಲ್ಲೇ, ಅಂಥದ್ದೇ ರೂಪದ, ಆದರೆ ಅದಕ್ಕಿಂತಲೂ ದೊಡ್ಡದಾದ ರೋಸ್‌ವ್ಯಾಲಿ ಹಗರಣವೂ ಹೊರಬಿತ್ತು. ಹೂಡಿಕೆದಾರರಿಗೆ 17,000 ಕೋಟಿ ರೂಪಾಯಿ ಪಂಗನಾಮ ಹಾಕಿದ ರೋಸ್‌ವ್ಯಾಲಿ ಹಗರಣದಲ್ಲೂ ತೃಣಮೂಲ ಕಾಂಗ್ರೆಸ್‌ನ ಅನೇಕ ನಾಯಕರ ಹೆಸರುಗಳು ಆರೋಪಿತರ ಪಟ್ಟಿಯಲ್ಲಿವೆ. ರೋಸ್ ವ್ಯಾಲಿಯೂ ಕೂಡ ಶಾರದಾ ಸಂಸ್ಥೆಯ ಹಾದಿಯಲ್ಲೇ ವಹಿವಾಟು ಆರಂಭಿಸಿತ್ತು. ಪಶ್ಚಿಮ ಬಂಗಾಳದ ಖ್ಯಾತ ಕ್ರೀಡಾಪಟುಗಳು, ಸಿನೆಮಾ ತಾರೆಯರು, ನಾಯಕರ ಸಹಾಯದಿಂದ ಕೆಲವೇ ವರ್ಷಗಳಲ್ಲಿ ಜನಪ್ರಿಯ ಸ್ಕೀಂ ಆಗಿ ಅದು ಬದಲಾಗಿತ್ತು. ಈ ಎರಡೂ ಹಗರಣಗಳು ಮಮತಾ ಬ್ಯಾನರ್ಜಿಯವರಿಗೆ ನುಂಗಲಾರದ ತುಪ್ಪವಾಗಿರುವುದಂತೂ ಸತ್ಯ. ಏಕೆಂದರೆ, ಎರಡರಲ್ಲಿನ ಹೂಡಿಕೆದಾರರೂ ಮಮತಾ ಬ್ಯಾನರ್ಜಿಯವರ ಪ್ರಬಲ ಬೆಂಬಲಿಗರು. ಸತ್ಯವೇನೆಂದರೆ, ತೃಣಮೂಲ ಕಾಂಗ್ರೆಸ್ ನಾಯಕರು ಯಾವ ಮಟ್ಟದಲ್ಲಿ ಈ ಎರಡೂ ಸಂಸ್ಥೆಗಳ ಜೊತೆಗೆ ತನ್ನನ್ನು ಗುರುತಿಸಿಕೊಂಡರೆಂದರೆ, ಮಮತಾರ ಮುಖ ನೋಡಿಯೇ ಬಡವರು ಈ ಕಂಪೆನಿಗಳಲ್ಲಿ ಹಣ ಹಾಕಿಬಿಟ್ಟರು. 2014ರ ವೇಳೆಗೆ ರೋಸ್‌ವ್ಯಾಲಿ ಸಂಸ್ಥೆಯ 4ನ್ಯೂಸ್ ಚಾನೆಲ್‌ಗಳು, ಶಾರದಾ ಸಂಸ್ಥೆಯ ಮೂರು ಸುದ್ದಿವಾಹಿನಿಗಳು ಮತ್ತು ಎರಡು ಪತ್ರಿಕೆಗಳು ಪ.ಬಂಗಾಳದಲ್ಲಿ ಕಾರ್ಯನಿರ್ವಹಿಸಲಾರಂಭಿಸಿದ್ದವು. ಅವುಗಳಲ್ಲಿ ನಿರಂತರವಾಗಿ ಈ ಸ್ಕೀಮುಗಳ ಬಗ್ಗೆ ಜಾಹೀರಾತುಗಳು ಪ್ರಕಟವಾಗುತ್ತಿದ್ದವು. ಆ ಜಾಹೀರಾತುಗಳಿಗೆ ಮಿಥುನ್ ಚಕ್ರವರ್ತಿಯಂಥ ಸ್ಟಾರ್‌ಗಳ ಚಹರೆ ಇರುತ್ತಿತ್ತು.
ಮಮತಾರ ಸರ್ಕಾರ 2011-12ರಲ್ಲಿ ಶಾರದಾ ಚಿಟ್ ಫಂಡ್ ಗ್ರೂಪ್ ಒಡೆತನದಲ್ಲಿದ್ದ ಪತ್ರಿಕೆಗೆ ಚಂದಾದಾರರಾಗಬೇಕೆಂದು ತಮ್ಮ ರಾಜ್ಯದ ಎಲ್ಲಾ ಸರ್ಕಾರಿ ಗ್ರಂಥಾಲಯಗಳಿಗೆ ಆದೇಶ ನೀಡಿತು. ಅಲ್ಲದೇ ಉಚಿತ ಕೊಡುಗೆಗಳನ್ನು ನೀಡುವುದರಲ್ಲಿ ಖ್ಯಾತಿವೆತ್ತ ಮಮತಾರ ಸರ್ಕಾರ ಪಶ್ಚಿಮ ಬಂಗಾಳದ ನಕ್ಸಲ್ ಪೀಡಿತ ಪ್ರದೇಶಗಳ ಜನರ ಮನ ತಣಿಸಲು ಸೈಕಲ್‌ಗಳನ್ನು, ಮೊಟರ್‌ಸೈಕಲ್‌ಗಳನ್ನು ಮತ್ತು ಆ್ಯಂಬುಲೆನ್ಸ್‌ಗಳನ್ನು ಪೂರೈಸಲು ಕೋಟ್ಯಂತರ ರೂಪಾಯಿಯನ್ನು ಶಾರದಾ ಗ್ರೂಪ್‌ನಿಂದ ತೆಗೆದುಕೊಂಡಿತ್ತು ಎನ್ನುವ ಆರೋಪವೂ ಇದೆ. ಶಾರದಾ ಸಂಸ್ಥೆಯ ಕೆಲ ಪ್ರಭಾವಿ ನೌಕರರು ತಮ್ಮ ಓಡಾಟಕ್ಕೆ ಪೊಲೀಸ್ ವಾಹನಗಳನ್ನೇ ಬಳಸಿಕೊಂಡ ಉದಾಹರಣೆಗಳೂ ಇವೆ!
ಇದೆಲ್ಲದರ ಹೊರತಾಗಿಯೂ ತಮಗೂ ಶಾರದಾ ಸಂಸ್ಥೆಗೂ ಸಂಬಂಧವೇ ಇಲ್ಲ ಎನ್ನುವಂತೆ ಮಮತಾ ಬ್ಯಾನರ್ಜಿ ವರ್ತಿಸುತ್ತಾ¤ ಬಂದಿದ್ದಾರೆ (ಅದರ ಎರಡು ಕಚೇರಿಗಳನ್ನು ತಾವೇ ಉದ್ಘಾಟಿಸಿದ್ದರೂ ಸಹ!). ಅಲ್ಲದೇ ಈ ಸಂಸ್ಥೆ 2006ರಲ್ಲೇ, ಅಂದರೆ, ಎಡಪಕ್ಷಗಳ ಅವಧಿಯಲ್ಲೇ ಅಸ್ತಿತ್ವಕ್ಕೆ ಬಂದಿತ್ತು ಎನ್ನುವುದು ಅವರ ವಾದ.
ಚಿಲ್ಲರೆ ಮಾರುಕಟ್ಟೆಯಲ್ಲಿ ನೇರ ಬಂಡವಾಳ ಹೂಡಿಕೆಯನ್ನು ವಿರೋಧಿಸಿ ತಾನು 2012ರಲ್ಲಿ ಯುಪಿಎದಿಂದ ನಂಟುಕಡಿದುಕೊಂಡಿದ್ದಾಗಿ ತೃಣಮೂಲ ಕಾಂಗ್ರೆಸ್ ಹೇಳುತ್ತದೆ. ಆದರೆ ಸತ್ಯ ಬೇರೆಯೇ ಇದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. 2012ರಲ್ಲಿ ಮಮತಾರ ಪಕ್ಷ ಯುಪಿಎದಿಂದ ನಿರ್ಗಮಿಸಿದ್ದಕ್ಕೆ ಎಫ್ಡಿಐ ಕೇವಲ ನೆಪವಾಗಿತ್ತಷ್ಟೇ. ಆಗ ಕೇಂದ್ರದ ತನಿಖಾ ಸಂಸ್ಥೆಗಳು ಶಾರದಾ ಪ್ರಕರಣದಲ್ಲಿನ ಕಗ್ಗಂಟುಗಳನ್ನು ಬಿಚ್ಚುವಲ್ಲಿ ಆಸಕ್ತಿ ತೋರುತ್ತಿದ್ದದ್ದು ಮಮತಾರ ಮುನಿಸಿಗೆ ಕಾರಣವಾಗಿತ್ತು.
ಅಂದಿನಿಂದ ಇಂದಿನವರೆಗೂ ಶಾರದಾ ಚಿಟ್ ಫಂಡ್ ಪ್ರಕರಣ ಮಮತಾರನ್ನು ಬೆಂಬಿಡದೇ ಕಾಡುತ್ತಿದೆ. ಆದರೆ ಈಗವರು ಈ ಪ್ರಕರಣದೆಡೆಗಿನ ತಮ್ಮ ಪ್ರತ್ರಿಕ್ರಿಯೆ ಮತ್ತು ರಣತಂತ್ರ ಬದಲಿಸಿಕೊಂಡಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಅವರೀಗ ಸಂತ್ರಸ್ತೆಯ ಪಾತ್ರ ನಿರ್ವಹಿಸುತ್ತಿದ್ದಾರೆ. ಬಿಜೆಪಿ ತಮ್ಮನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಅನುಕಂಪ ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಸತ್ಯ ತಿಳಿದಿದ್ದರೂ ಅವರ ಈ ನಾಟಕಕ್ಕೆ ಮಹಾಘಟಬಂಧನದ ನಾಯಕರೆಲ್ಲ ಸಾಥ್ ಕೊಡುತ್ತಿದ್ದಾರೆ. ಈ ರಾಜಕೀಯ ನಾಟಕದಲ್ಲಿ ವಿಶೇಷ ಪಾತ್ರದಲ್ಲಿ ಮಿಂಚುತ್ತಿರುವ ಪ್ರಮುಖರೆಂದರೆ, ಅಂದು ಮಮತಾ ವಿರುದ್ಧ ಬೆಂಕಿಯುಗುಳಿ, ಇಂದು ಅವರೆಡೆಗೆ ಮಮತೆ ತೋರುತ್ತಿರುವ “ರಾಹುಲ್ ಗಾಂಧಿ’ಯವರು ಮತ್ತು ಭ್ರಷ್ಟಾಚಾರ ನಿರ್ಮೂಲನೆಯ ಹೆಸರಲ್ಲಿ ಮುನ್ನೆಲೆಗೆ ಬಂದು, ಈಗ ಹಗರಣದ ವಿಷಯವನ್ನೇ ಪ್ರಸ್ತಾಪಿಸದ “ಕೇಜ್ರಿವಾಲರು’…
ಇದೇನೇ ಇದ್ದರೂ ಈ ವಿದ್ಯಮಾನ ಅತ್ತ ಮಮತಾ ಜೊತೆಗೆ, ಇತ್ತ ಸಿಬಿಐ ಕುರಿತೂ (ಕೇಂದ್ರ ಎಂದು ಓದಿಕೊಳ್ಳಿ) ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ. “ಇಷ್ಟು ದಿನದವರೆಗೆ ಶಾರದಾ ಚಿಟ್ ಫಂಡ್ ಪ್ರಕರಣದಲ್ಲಿ ಪಕ್ಷದ ಹಿರಿಯ ನಾಯಕರೇ ಬಂಧನಕ್ಕೊಳಗಾದರೂ ಸುಮನಿದ್ದ ಮಮತಾ ಬ್ಯಾನರ್ಜಿಯವರು, ಈಗ ರಾಜೀವ್ ಕುಮಾರ್‌ರನ್ನು ರಕ್ಷಿಸಿಕೊಳ್ಳಲು ಏಕೆ ಇಷ್ಟು ಪ್ರಯತ್ನಿಸುತ್ತಿದ್ದಾರೆ?’ ಇನ್ನು ಸಿಬಿಐ ವಿಷಯಕ್ಕೆ ಬಂದರೆ, “ಅದು 2014ರಿಂದಲೇ ರೋಸ್‌ವ್ಯಾಲಿ ಮತ್ತು ಶಾರದಾ ಹಗರಣಗಳೆಡೆಗಿನ ತನಿಖೆಗೆ ವೇಗ ಕೊಡಲಿಲ್ಲವೇಕೆ? ಈಗ ಲೋಕಸಭಾ ಚುನಾವಣೆಯ ಹೊಸ್ತಿಲಲ್ಲೇ ಅದು ಆ್ಯಕ್ಟಿವ್ ಆಗಿದ್ದೇಕೆ?’
ಆದರೆ, ಮೊದಲು ಉತ್ತರಿಸಬೇಕಿರುವುದು ಮಮತಾ ಬ್ಯಾನರ್ಜಿಯವರು…
ರಾಘವ ಎ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.