ಸೂಕ್ಷ್ಮ ಪ್ರಕರಣದ ತನಿಖೆಯಲ್ಲಿ ರಾಜಕೀಯ ಸಲ್ಲದು
Team Udayavani, Feb 5, 2019, 12:30 AM IST
ಜನಸಾಮಾನ್ಯರು ತಮ್ಮ ದುಡಿಮೆಯಿಂದ ಕೂಡಿಟ್ಟ ಹಣ ನುಂಗಿದ ಸಂಸ್ಥೆ, ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾದದ್ದು ಅಗತ್ಯವೇ. ಹೀಗಾಗಿ, ಚುನಾವಣೆ ನಿಟ್ಟಿನಲ್ಲಿ ಟಿಎಂಸಿ ಮತ್ತು ಇತರ ಪ್ರತಿಪಕ್ಷಗಳು ತನಿಖೆಯ ದಾರಿ ತಪ್ಪದಂತೆ ನೋಡಿಕೊಳ್ಳಬೇಕು.
ಆರು ವರ್ಷಗಳ ಹಿಂದೆ ಪಶ್ಚಿಮ ಬಂಗಾಳ ಸೇರಿ ನಾಲ್ಕು ರಾಜ್ಯಗಳಲ್ಲಿ ಹೊರಬಿದ್ದ ಬಹುಕೋಟಿ ಹಗರಣಗಳಾಗಿರುವ ಶಾರದಾ ಮತ್ತು ರೋಸ್‌ವ್ಯಾಲಿ ಹಗರಣ ಭಾನುವಾರದಿಂದ ಮುನ್ನೆಲೆಗೆ ಬಂದಿವೆ. ಸದ್ಯ ಕೋಲ್ಕತಾ ಪೊಲೀಸ್ ಆಯುಕ್ತ, ಐಪಿಎಸ್ ಅಧಿಕಾರಿ ರಾಜೀವ್ ಕುಮಾರ್‌ರನ್ನು ಸಿಬಿಐನ 49 ಅಧಿಕಾರಿಗಳು ಇಳಿಹಗಲು 5 ಗಂಟೆಯ ಬಳಿಕ ವಿಚಾರಣೆ ನಡೆಸಲು ಹೋದದ್ದು ಈಗ ಕಾನೂನಾತ್ಮಕವೇ ಅಲ್ಲವೇ ಎಂಬ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಅದೇ ವಿಚಾರವನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡೆಸುತ್ತಿರುವ ಧರಣಿ 24 ತಾಸುಗಳನ್ನು ದಾಟಿದೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪೀಠದ ಮುಂದೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕೂಡಲೇ ವಿಚಾರಣೆ ನಡೆಸಬೇಕು ಎಂದು ಆಗ್ರಹಪಡಿಸಿದರೂ, ಅದಕ್ಕೆ ಮಣಿಯದ ನ್ಯಾಯಪೀಠ ಮಂಗಳವಾರಕ್ಕೆ ಮುಂದೂಡಿದೆ. ಪೊಲೀಸ್ ಆಯುಕ್ತರು 2 ಹಗರಣಗಳಲ್ಲಿ ಸಂಭಾವ್ಯ ಅಪರಾಧಿ ಎಂದು ಮೆಹ್ತಾ ವಾದಿಸಿದ್ದರೂ, ಅದನ್ನು ಸಾಬೀತುಪಡಿಸುವ ಸವಾಲು ಸಿಬಿಐ ಪರ ವಕೀಲರ ಮುಂದಿದೆ.
ಇನ್ನು ಸಿಬಿಐ ಅಧಿಕಾರಿಗಳನ್ನು ವಶಕ್ಕೆ ಪಡೆದು, ಬಿಡುಗಡೆ ಮಾಡಿದ ಕೋಲ್ಕತಾ ಪೊಲೀಸರ ಕ್ರಮದ ಬಗ್ಗೆ ರಾಜಕೀಯ ಕೋಲಾಹಲ ಉಂಟಾಗಿದೆ. ಸದ್ಯ ಇರುವ ನಿಯಮಗಳ ಪ್ರಕಾರ ಸಿಬಿಐಗೆ ಯಾವುದೇ ಪ್ರಕರಣದ ತನಿಖೆಯನ್ನು ಕೇಂದ್ರ ಸರ್ಕಾರ ವಹಿಸಬೇಕು, ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್ ಆದೇಶದ ಅನ್ವಯ ಬರುತ್ತದೆ ಮತ್ತು ಆಯಾ ರಾಜ್ಯ ಸರ್ಕಾರ ಮನವಿ ಮಾಡಿಕೊಂಡರೆ ಕೇಂದ್ರ ತನಿಖಾ ಸಂಸ್ಥೆಗೆ ಅದನ್ನು ತನಿಖೆ ಮಾಡಬಹುದು. ಶಾರದಾ ಚಿಟ್‌ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಸರ್ಕಾರ ರಚಿಸಿದ್ದ ವಿಶೇಷ ತನಿಖಾ ದಳದ ತನಿಖೆ ಸಮಾಧಾನ ತರದೇ ಇದ್ದ ಕಾರಣವೇ ಕಾಂಗ್ರೆಸ್ ಮತ್ತು ಎಡಪಕ್ಷಗಳು ಸುಪ್ರೀಂಕೋರ್ಟ್‌ಗೆ ಹೋಗಿದ್ದವು. 2014ರ ಮೇ 9ರ ತೀರ್ಪಿನ ಪ್ರಕಾರ “ಪಶ್ಚಿಮ ಬಂಗಾಳ ಸರ್ಕಾರ ಮತ್ತು ಪೊಲೀಸ್ ಇಲಾಖೆ ಹಗರಣದ ತನಿಖೆಯ ಹೊಣೆ ಯನ್ನು ಸಿಬಿಐಗೆ ನೀಡಬೇಕು ಮತ್ತು ಎಲ್ಲಾ ರೀತಿಯ ಸಹಕಾರ ನೀಡಬೇಕು. ಜತೆಗೆ ಸುಪ್ರೀಂ ಕೋರ್ಟ್ ತನಿಖೆಯ ಉಸ್ತುವಾರಿ ವಹಿಸುವುದಿಲ್ಲ. ಆದರೆ ಎಲ್ಲಾ ರೀತಿಯ ವಂಚನೆ ವಿಚಾರಗಳೂ ತನಿಖೆಯಾಗಬೇಕು’ ಎಂದು ಹೇಳಿತ್ತು.
ಹೀಗಾಗಿ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಯ ದುರುಪಯೋಗ ಮಾಡುತ್ತಿದೆ ಎಂಬ ಪ್ರತಿಪಕ್ಷಗಳು ಒಕ್ಕೊರಲಿನಿಂದ ಪ್ರಶ್ನಿಸುವುದೇ ಪ್ರಶ್ನಾರ್ಥಕವಾಗಿದೆ. ಸಿಬಿಐ ಅನ್ನು ಕೇಂದ್ರ ದುರುಪಯೋಗ ಮಾಡುತ್ತಿದೆ ಎಂಬ ಕಾರಣವೊಡ್ಡಿ ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳು ಕೇಂದ್ರ ತನಿಖಾ ಸಂಸ್ಥೆಗೆ ನೀಡಲಾಗಿದ್ದ ತನಿಖಾ ಅಧಿಕಾರವನ್ನು ಹಿಂಪಡೆದಿವೆ. 2014ರಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಪ್ರಕಾರ ಚಿಟ್‌ಫಂಡ್ ವಂಚನೆ ವಿಚಾರವನ್ನು ಸಿಬಿಐ ನಡೆಸಲೇಬೇಕು. ಆದರೆ 2018ರ ನವೆಂಬರ್‌ನಲ್ಲಿ ಟಿಎಂಸಿ ಸರ್ಕಾರ ಅನುಮತಿ ಹಿಂಪಡೆದಿದೆ. ಆದರೆ ಸುಪ್ರೀಂಕೋರ್ಟ್ ಪ್ರಕರಣದ ವರ್ಗಾವಣೆಯನ್ನು ಕೇಂದ್ರ ತನಿಖಾ ಸಂಸ್ಥೆಗೆ ಮಾಡಿದ ಸಂದರ್ಭದಲ್ಲಿ ಸಿಬಿಐ ರಚನೆಗೆ ಕಾರಣವಾಗಿರುವ ದೆಹಲಿ ಪೊಲೀಸ್ ಎಸ್ಟಾಬ್ಲಿಷ್‌ಮೆಂಟ್ ಕಾಯ್ದೆಯ ಸೆಕ್ಷನ್ ಸೆಕ್ಷನ್ 6ರ ಪ್ರಕಾರ ರಾಜ್ಯ ಸರ್ಕಾರದ ಅನುಮತಿ ಬೇಕು ಎಂಬ ನಿಯಮ ಅನ್ವಯವಾಗುವುದಿಲ್ಲ ಎನ್ನುವ ವಾದವೂ ಇದೆ. ಇನ್ನು ರಾಜೀವ್ ಕುಮಾರ್ ವಿರುದ್ಧ ಸಿಬಿಐ ನೀಡಿದ್ದ ಸಮನ್ಸ್ ಅನ್ನು ಕಲ್ಕತಾ ಹೈಕೋರ್ಟ್ ರದ್ದು ಮಾಡಿತ್ತು. ಇದರ ಹೊರತಾಗಿಯೂ ಅಧಿಕಾರಿಗಳು ಅವರ ವಿಚಾರಣೆಗೆ ಹೋದದ್ದು ಏಕೆ ಎನ್ನುವುದು ಚರ್ಚೆಗೆ ಗ್ರಾಸವಾಗಿದೆ. ತನಿಖಾ ಸಂಸ್ಥೆಯನ್ನು ಕೇಂದ್ರ ದುರುಪಯೋಗಪಡಿಸಿಕೊಳ್ಳುತ್ತಿದೆ ಎನ್ನುವುದು ಪ್ರತಿಪಕ್ಷಗಳ ವಾದ. ಇಂಥ ವಾದ ಮಾಡುವ ಪ್ರತಿಪಕ್ಷಗಳ ನಾಯಕರು ಗಮನಿಸಬೇಕಾದ ಅಂಶವೊಂದಿದೆ. ಸಿಬಿಐಗೆ ಪ್ರಕರಣದ ವರ್ಗಾವಣೆಯಾದದ್ದು ಕೇಂದ್ರದಲ್ಲಿ ಸದ್ಯ ಅಧಿಕಾರದಲ್ಲಿರುವ ಸರ್ಕಾರ ಬರುವುದಕ್ಕಿಂತ ಮೊದಲೇ. ಜನಸಾಮಾನ್ಯರು ತಮ್ಮ ದುಡಿಮೆಯಿಂದ ಕೂಡಿಟ್ಟ ಹಣ ನುಂಗಿದ ಸಂಸ್ಥೆ, ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾದದ್ದು ಅಗತ್ಯವೇ. ಹೀಗಾಗಿ, ಚುನಾವಣೆ ನಿಟ್ಟಿನಲ್ಲಿ ಟಿಎಂಸಿ ಮತ್ತು ಇತರ ಪ್ರತಿಪಕ್ಷಗಳು ತನಿಖೆಯ ದಾರಿ ತಪ್ಪದಂತೆ ನೋಡಿಕೊಳ್ಳಬೇಕು. ಕೇಂದ್ರದಲ್ಲಿನ ಸರ್ಕಾರವೂ ಕೂಡ ಪ್ರತಿಪಕ್ಷಗಳ ಮಾತಿನ ಕೂರಂಬುಗಳನ್ನು ಎದುರಿಸುವ ಭರದಲ್ಲಿ ತನಿಖೆ ಹಳಿ ತಪ್ಪದಂತೆ ಎಚ್ಚರಿಕೆ ವಹಿಸಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ
Puttur: ಇದು ಅಜಿತರ ಸಾಹಸ : ರಬ್ಬರ್ ತೋಟದಲ್ಲಿ ಕಾಫಿ ಘಮ ಘಮ
Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.