ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ
Team Udayavani, Feb 5, 2019, 6:23 AM IST
ಬೆಂಗಳೂರು: ಕಾರ್ಮಿಕ ಕಾಯ್ದೆಯನ್ನು ಜಾರಿಗೊಳಿಸಿ ಸಮಾನ ಕೆಲಸಕ್ಕೆ ಸಮಾನ ವೇತನ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘದ ನೇತೃತ್ವದಲ್ಲಿ ಸಾವಿರಾರು ಕಾರ್ಯಕರ್ತೆಯರು ಸೋಮವಾರ ನಗರದ ಸ್ವಾತಂತ್ರ್ಯಉದ್ಯಾನದಲ್ಲಿ ಅಹೋರಾತ್ರಿ ಧರಣಿ ಆರಂಭಿಸಿದರು.
ರಾಮನಗರ, ದಕ್ಷಿಣ ಕನ್ನಡ ಜಿಲ್ಲೆ, ದಾವಣಗೆರೆ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಸಾವಿರಾರು ಕಾರ್ಯಕರ್ತೆಯರು ಬೆಳಗ್ಗೆ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ನಾಲ್ಕು ದಶಕಗಳಿಂದ ಕನಿಷ್ಠ ಗೌರವಧನ ಪಡೆದು ಸರ್ಕಾರದ ಸೇವೆಗಳನ್ನು ರಾಜ್ಯದ ಪ್ರತಿ ಮನೆಗಳಿಗೆ ತಲುಪಿಸುತ್ತಿದ್ದೇವೆ. ಆರಂಭದ ದಿನಗಳಲ್ಲಿ ಮಧ್ಯಾಹ್ನದವರೆಗೆ ಮಾತ್ರ ಕೆಲಸದ ಅವಧಿ ನಿಗದಿಯಾಗಿತ್ತು. ನಂತರದ ಬೆಳಗ್ಗೆಯಿಂದ ಸಂಜೆವರೆಗೂ ಕರ್ತವ್ಯ ನಿರ್ವಹಿಸಬೇಕು ಎಂದು ಆದೇಶ ನೀಡಿದರು.
ಮಕ್ಕಳ ಫೋಷಣೆ ಜತೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿವಿಧ ಯೋಜನೆಗಳ ಕೆಲಸಗಳನ್ನು ಮಾಡುತ್ತಿದ್ದೇವೆ. ಆದರೂ ಗೌರವಧನ ಹೆಚ್ಚಳ ಮಾಡಲು ಸರ್ಕಾರಗಳು ನಿರ್ಲಕ್ಷ್ಯ ವಹಿಸುತ್ತಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಪ್ರಸ್ತುತ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ 8ಸಾವಿರ ರೂ. ಮತ್ತು ಸಹಾಯಕಿಯರಿಗೆ 4 ಸಾವಿರ ರೂ. ಗೌರವಧನ ನೀಡಲಾಗುತ್ತಿದೆ.
ಇದರಿಂದ ಜೀವನ ನಿರ್ವಹಣೆ ಕಷ್ಟವಾಗುತ್ತದೆ. ಅಲ್ಲದೆ, ಪ್ರತಿ ತಿಂಗಳ ವೇತನವೂ ವಿಳಂಬವಾಗುತ್ತಿದೆ. ಅಂಗನವಾಡಿ ಸ್ವತ್ಛತೆಗೆ ಹಾಗೂ ಶಾಲಾ ಪೂರ್ವ ಶಿಕ್ಷಣಕ್ಕೆ ಪ್ರತಿ ತಿಂಗಳು ಕನಿಷ್ಠ 500 ರೂ. ತಗುಲುತ್ತದೆ. ಆದರೆ, ಸರ್ಕಾರ ಕೇವಲ 83 ರೂ. ನೀಡುತ್ತಿದೆ. ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಂದ ಇಲಾಖೇತರ ಕೆಲಸ ಮಾಡಿಸಬಾರದೆಂಬ ಆದೇಶವಿದ್ದರೂ ಹಲವು ಕೆಲಸ ಮಾಡಿಸಲಾಗುತ್ತಿದೆ ಎಂದು ಕಾರ್ಯಕರ್ತೆಯರು ಅಸಮಾಧಾನ ವ್ಯಕ್ತಪಡಿಸಿದರು.
ನಿವೃತ್ತರಾಗುವ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಮಾಸಿಕ 5 ಸಾವಿರ ರೂ. ಪಿಂಚಣಿ , ಮಿನಿ ಅಂಗನವಾಡಿಯನ್ನು ಮೇಲ್ದರ್ಜೆಗೆ ಏರಿಸಬೇಕು, 10 ವರ್ಷ ಮೇಲ್ಪಟ್ಟು ದುಡಿದ ಅಂಗನವಾಡಿ ಕಾರ್ಯಕರ್ತರೆಯರಿಗೆ ಸೇವಾಹಿರಿತನದ ಆಧಾರದಲ್ಲಿ ಮೇಲ್ವಿಚಾರಕಿ ಹುದ್ದೆ ನೀಡುವುದು,
ಪದವೀಧರ ಅಂಗನವಾಡಿ ಕಾರ್ಯಕರ್ತೆಯರ ವಯಸ್ಸು ಪರಿಗಣಿಸದೆ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಮೇಲ್ವಿಚಾರಕಿ ಹುದ್ದೆಯನ್ನು ನೀಡಬೇಕು, ಅಂಗನವಾಡಿ ಕೇಂದ್ರಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಹೋರಾಟಗಾರರು ಒತ್ತಾಯಿಸಿದರು.
ಸಿಎಂ, ಸಚಿವರಿಗಾಗಿ ಪಟ್ಟು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಥವಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಡಾ ಬಿ. ಜಯಮಾಲಾ ಧರಣಿ ಸ್ಥಳಕ್ಕೆ ಬರಬೇಕೆಂದು ಕಾರ್ಯಕರ್ತೆಯರು ಒತ್ತಾಯಿಸಿದರು. ಈ ಮಧ್ಯೆ ಇಲಾಖೆ ನಿರ್ದೇಶಕಿ ಅರುಂಧತಿ ಚಂದ್ರಶೇಖರ್ ಪ್ರತಿಭಟನಾಕಾರರ ಬೇಡಿಕೆ ಪತ್ರ ಸ್ವೀಕರಿಸಿ, ಸಚಿವರು ಹಾಗೂ ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು. ಧರಣಿ ಕೈಬಿಡುವಂತೆ ಮನವೊಲಿಸಲು ಪ್ರಯತ್ನಿಸಿದರು. ಆದರೆ, ಪ್ರತಿಭಟನಾಕಾರರು, ಸಚಿವರು ಸ್ಥಳಕ್ಕೆ ಬರಲೇಬೇಕೆಂದು ಪಟ್ಟು ಹಿಡಿದರು.
ಪೊಲೀಸ್ ಭದ್ರತೆ: ಸುಮಾರು ಒಂದು ಸಾವಿರಕ್ಕೂ ಅಧಿಕ ಮಹಿಳೆಯರು ಸ್ವಾತಂತ್ರ್ಯ ಉದ್ಯಾನದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಹೀಗಾಗಿ ಶಾಮಿಯಾನ ಅಳವಡಿಸಿದ್ದರೂ ವಿದ್ಯುತ್ ವ್ಯವಸ್ಥೆ ಇಲ್ಲದ ಪರಿಣಾಮ ಕತ್ತಲೆಯಲ್ಲೇ ಧರಣಿ ಮುಂದುವರಿಸಿದರು. ಈ ಹಿನ್ನೆಲೆಯಲ್ಲಿ ಒಂದು ಕೆಎಸ್‌ಆರ್‌ಪಿ ತುಕಡಿ, ನೂರಕ್ಕೂ ಹೆಚ್ಚು ಮಹಿಳಾ ಸಿಬ್ಬಂದಿ ಸೇರಿ 350ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಶೌಚಾಲಯ ಸಮಸ್ಯೆ: ಸ್ವಾತಂತ್ರ್ಯ ಉದ್ಯಾನದಲ್ಲಿ ಶೌಚಾಲಯದ ವ್ಯವಸ್ಥೆ ಇಲ್ಲದೆ ಕಾರ್ಯಕರ್ತೆಯರು ಪರದಾಡಿದರು. ಬೆಳಗ್ಗೆಯಿಂದ ಸಂಜೆವರೆಗೆ ಉದ್ಯಾನದೊಳಗಿನ ಕೆಲ ಶೌಚಾಲಯ ಉಪಯೋಗಿಸಿದ್ದರು. ಸಂಜೆಯಾಗುತ್ತಿದ್ದಂತೆ ಉದ್ಯಾನದ ಸಿಬ್ಬಂದಿ ಶೌಚಾಲಯಕ್ಕೆ ಬೀಗ ಹಾಕಿದ್ದರಿಂದ ಮಹಿಳೆಯರು ಶೌಚಾಲಯಕ್ಕಾಗಿ ಪರದಾಡಿದರು. ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.