ಓಶೋ ಹೇಳಿದ ಕತೆಗಳು
Team Udayavani, Feb 10, 2019, 12:30 AM IST
ಗಿಟಾರ್ ವಾದಕ
ಒಬ್ಬ ಸಂಗೀತಗಾರನಿದ್ದ. ಅಪ್ರತಿಮ ವಾದ್ಯಗಾರ. ಗಿಟಾರ್ ಹಿಡಿದರೆ ಜಗತ್ತೇ ಪರವಶವಾಗುತ್ತಿತ್ತು. ಒಮ್ಮೆ ದಕ್ಷಿಣ ಅಮೆರಿಕದ ಕಾಡಿನ ಮಧ್ಯೆ ಆತ ಹೇಗೋ ಸಿಲುಕಿಕೊಂಡ. ಜೊತೆಗೆ ಹೇಗೂ ಗಿಟಾರ್ ಇತ್ತು. ಅದು ಇದ್ದ ಮೇಲೆ ಒಂಟಿಯಾಗುವ ಭಯವಿಲ್ಲ ತಾನೆ? ಗಿಟಾರ್‌ನ್ನು ಹಿಡಿದು ನುಡಿಸಲಾರಂಭಿಸಿದ. ಅಷ್ಟರಲ್ಲಿ ಕಾಡುಗಳ ಪ್ರಾಣಿಗಳೆಲ್ಲ ಅವನ ಮುಂದೆ ಬಂದು ಸೇರಿದವು. ಮೊಲವೂ ಸಿಂಹವೂ ದ್ವೇಷ ಮರೆತು ಜೊತೆಯಾಗಿ ಕುಳಿತು ಆಲಿಸತೊಡಗಿದವು. ಹುಲಿಯೂ ಜಿಂಕೆಯೂ ಪರಸ್ಪರ ಸೋಂಕಿಕೊಂಡು ನಿಂತಿರುವುದನ್ನು ನೋಡಿ ಸೃಷ್ಟಿಕರ್ತನೇ ಬೆರಗಾದ.
ಅಷ್ಟರಲ್ಲಿ ಅನಕೊಂಡವೊಂದು ಅಲ್ಲಿಗೆ ನುಗ್ಗಿತು. ಸಂಗೀತಗಾರನನ್ನು ಬುಳುಂಕನೆ ನುಂಗಿತು. ಬಾಯಿಯನ್ನು ಒರೆಸಿಕೊಳ್ಳುತ್ತ ಪ್ರಾಣಿಗಳ ಕಡೆಗೊಮ್ಮೆ ದೃಷ್ಟಿ ಬೀರಿತು. ಪ್ರಾಣಿಗಳಿಗೆ ಕೆಂಡಾಮಂಡಲ ಸಿಟ್ಟು ಬಂದಿತ್ತು. “”ನಾವು ಸಂಗೀತವನ್ನು ಆಲಿಸುತ್ತಿದ್ದೆವು. ನೀನದನ್ನು ತಪ್ಪಿಸಿಬಿಟ್ಟೆ” ಎಂದು ಬೈದವು.
“”ಸಂಗೀತ, ಎಲ್ಲಿದೆ ಸಂಗೀತ?” ಅನಕೊಂಡ ವಿಸ್ಮಯದಿಂದ ಕೇಳಿತು.
“”ಅಗೊ, ಅಲ್ಲಿಂದ ಕೇಳುತ್ತಿದೆ ನೋಡು” ಎಂದು ಎಲ್ಲ ಪ್ರಾಣಿಗಳು ಅನಕೊಂಡದ ಹೊಟ್ಟೆಯ ಕಡೆಗೆ ಕೈ ತೋರಿಸಿದವು.
ಒಳಗಿನಿಂದ ಗಿಟಾರ್ ದನಿ ಕೇಳಿಬರುತ್ತಿತ್ತು.
ಅನಕೊಂಡವು ಪರವಶತೆಯಿಂದ ಅದನ್ನು ಕೇಳಲಾರಂಭಿಸಿತು.
ಮರಣದಂಡನೆ
ಒಬ್ಬ ರಾಜನಿದ್ದ. ಅವನಿಗೆ ಎಲ್ಲವೂ ತನ್ನ ಅಧೀನದಲ್ಲಿರಬೇಕೆಂಬ ಆಸೆ. ಯಾರ ಮನೆಯಲ್ಲಿ “ಅನನ್ಯ’ವಾದ ವಸ್ತುಗಳೇ ಇರಲಿ, ಅದು ಅವನಿಗೆ ಬೇಕು. ಎಂಥ ಪ್ರತಿಭೆಯವರೇ ಇರಲಿ, ಅವರು ಅವನಿಗೆ ತಲೆಬಾಗಬೇಕು.
ಒಮ್ಮೆ ಸಂಗೀತಗಾರನೊಬ್ಬ ಆ ರಾಜ್ಯಕ್ಕೆ ಬಂದ. ಅವನ ಸಂಗೀತವನ್ನು ಆಲಿಸಿದ ಎಲ್ಲರೂ ಅವನನ್ನು ಅನುಸರಿಸತೊಡಗಿದರು. ರಾಜನಿಗೆ ಸುದ್ದಿ ಹೋಯಿತು. ತನ್ನ ಆಸ್ಥಾನಕ್ಕೆ ಬಂದು ಸಂಗೀತ ಕಛೇರಿಯನ್ನು ಪ್ರಸ್ತುತಪಡಿಸುವಂತೆ ಸೂಚಿಸಿದ.
ಸಂಗೀತಗಾರ “”ಬರಲಾರೆ” ಎಂದ.
ರಾಜ, “”ಬಂಗಾರವಸ್ತು ಒಡವೆ ಕೊಡುವೆ” ಎಂದ.
“”ಅವೆಲ್ಲ ಬೇಡ”
“”ಬರಲೇಬೇಕು”
“”ಬರುತ್ತೇನೆ. ಆದರೆ, ಒಂದು ಶರತ್ತು…”
“”ಏನದು?” ರಾಜನ ಅಸಹನೆ.
“”ಏನೂ ಇಲ್ಲ. ನಾನು ಹಾಡುವಾಗ ಸಭಾಂಗಣದಲ್ಲಿರುವ ಪ್ರೇಕ್ಷಕರಲ್ಲಿ ಯಾರೂ ತಲೆಯನ್ನು ಅಲ್ಲಾಡಿಸಬಾರದು. ತಲೆಯಲ್ಲಾಡಿಸಿದರೆ ಅವರಿಗೆ ಮರಣದಂಡನೆ ವಿಧಿಸಬೇಕು”.
ರಾಜ ಒಪ್ಪಿದ. ಸಂಗೀತ ಕಛೇರಿ ನಿಗದಿಯಾಯಿತು. ಸಂಗೀತಗಾರ ಹಾಡಲಾರಂಭಿಸಿದ.
ಯಾರೂ ಎಳ್ಳಿನ ಏಳು ಭಾಗದಷ್ಟೂ ಅಲ್ಲಾಡಲಿಲ್ಲ. ಸಾಸಿವೆ ಚೆಲ್ಲಿದರೂ ಕೇಳುವಷ್ಟು ಮೌನ. ಮಂತ್ರಿ ಬಿಗಿಯಾಗಿ ಕುಳಿತಿದ್ದ. ಸೇನಾಪತಿ ಭಯದಿಂದ ಮುದುಡಿ ಹೋಗಿದ್ದ. ಎಲ್ಲರಿಗೂ ತಮ್ಮ ಶರೀರವೇನಾದರೂ ಚಲಿಸುತ್ತಿದೆಯೇ ಎಂಬ ಭಯ. ಹಾಗೇನಾದರೂ ಆದರೆ ಜೀವಸಹಿತ ಮರಳಿಹೋಗುವಂತಿಲ್ಲ !
ಒಬ್ಬ ಮಾತ್ರ ತಲೆಯಲ್ಲಾಡಿಸಲು ಆರಂಭಿಸಿದ. ರಾಜ ಅವನನ್ನು ಹಿಡಿಯಲು ಭಟರಿಗೆ ಸೂಚಿಸಿದ. ಅವನನ್ನು ಇನ್ನೇನು, ಎಳೆದೊಯ್ಯುತ್ತಾರೆ ಎನ್ನುವಾಗ ಸಂಗೀತಗಾರ ತಡೆದು ಹೇಳಿದ, “”ಅವನನ್ನು ಮುಟ್ಟಬೇಡಿ”
ಭಟರು ದೂರ ಸರಿದು ನಿಂತರು. ಸಂಗೀತಗಾರ ರಾಜನತ್ತ ನೋಡಿ ಹೇಳಿದ, “”ರಾಜನ್, ನನ್ನ ಸಂಗೀತ ಆಲಿಸಲು ಇವನೊಬ್ಬನಿದ್ದರೆ ಸಾಕು- ನೇಣಿಗಾದರೂ ತಲೆ ಕೊಟ್ಟೇನು, ಸಂಗೀತಕ್ಕೆ ಸ್ಪಂದಿಸದೆ ಇರಲಾರೆನು- ಎಂಬಂಥವನು. ನಾನು ಇವನಿಗಾಗಿ ಹಾಡುತ್ತೇನೆ. ಉಳಿದವರನ್ನು ಹೊರಗೆ ಕಳುಹಿಸಿ”.
ನಾನು ನಾನೇ
ಹಕು-ಯಿನ್ ಗುರಿ ವಿದ್ಯೆಯಲ್ಲಿ ಮಹಾಪ್ರವೀಣನೆಂದು ಹೆಸರುವಾಸಿ. ಒಮ್ಮೆ ಅವನು ತನ್ನ ಗೆಳೆಯರೊಂದಿಗೆ ಒಂದು ಜಾತ್ರೆಗೆ ಹೊರಟಿದ್ದ. ಅಲ್ಲಿ ಬಾಣ ಬಿಡುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಹಕುಯಿನ್ ತಾನೂ ಸ್ಪರ್ಧಾಳುವಾಗಿ ನಿಂತ. ಅವನ ಕೈಗೆ ಮೂರು ಬಾಣಗಳನ್ನು ಕೊಡಲಾಯಿತು. ಮೊದಲ ಬಾಣವನ್ನು ಪ್ರಯೋಗಿಸಿಯೂ ಬಿಟ್ಟ.
ಗುರಿ ತಪ್ಪಿತು. ಕೊಂಚ ಕೆಳಗಿನಿಂದ ದಾಟಿ ಹೋಯಿತು. ಎಲ್ಲರೂ ಗೊಳ್ಳನೆ ನಕ್ಕರು.
ಈಗ ಎರಡನೆಯ ಬಾಣ ಪ್ರಯೋಗ. ಅದು ಗುರಿಯಿಂದ ಸ್ವಲ್ಪ ಮೇಲೆ ಚಲಿಸಿತು. ಅದೂ ತಪ್ಪಿತು. ಎಲ್ಲರೂ ಹಾಹೂ ಎಂದು ನಕ್ಕರು.
ಮೂರನೆಯ ಬಾಣ “ಸೊಂಯ್’ ಎಂದು ಹಾರಿದ್ದೇ ಗುರಿಯನ್ನು ಕರಾರುವಕ್ಕಾಗಿ ಭೇದಿಸಿತು. ನಕ್ಕವರೆಲ್ಲ ಪೆಚ್ಚಾಗಿ ನಿಂತರು. ಯಾರೋ ಕೇಳಿದರು, “”ಮೂರನೆಯ ಬಾಣದಲ್ಲಿಯೇ ಹೇಗೆ ನಿನಗೆ ಗುರಿ ಭೇದಿಸಲು ಸಾಧ್ಯವಾಯಿತು?”
ಹಕು-ಯಿನ್ ಹೇಳಿದ, “”ನಾನು ಯಾವಾಗಲೂ ಮೂರನೆಯ ಪ್ರಯತ್ನದಲ್ಲಿಯೇ ಯಶಸ್ವಿಯಾಗುವುದು! ಇಲ್ಲಿಯೂ ಹಾಗಾಯಿತು. ಮೊದಲನೆಯ ಬಾಣ ಪ್ರಯೋಗಿಸುವಾಗ ಕೀಳರಿಮೆ ಹೊಂದಿದವನಾಗಿದ್ದೆ. ನನ್ನ ಬಗ್ಗೆ ನನಗೇ ವಿಶ್ವಾಸವಿರಲಿಲ್ಲ. ಅದು ವ್ಯರ್ಥವಾಯಿತು. ಎರಡನೆಯ ಬಾರಿ ಮೇಲರಿಮೆಯವನಾಗಿದ್ದೆ. ನನ್ನ ಬಗ್ಗೆ ನನಗೇ ಅತಿಯಾದ ಅಭಿಮಾನ. ಅದು ಕೂಡ ತಪ್ಪಿತು. ಮೂರನೆಯ ಬಾರಿ ನಾನು ಹಕು-ಯಿನ್ ಆಗಿದ್ದೆ. ಹಾಗಾಗಿ ಗೆದ್ದೆ”.
ಬೆರಳುಗಳು
ಇಬ್ಬರು ಹರಟೆ ಹೊಡೆಯುತ್ತಿದ್ದರು. ಒಬ್ಬ ಹೇಳಿದ, “”ನಿನ್ನೆ ನನಗೊಂದು ಕನಸು ಬಿತ್ತು”
“”ಹೌದೆ, ಏನದು ಹೇಳು?”
“”ನಾನು ಮತ್ತು ನೀನು ಜೊತೆಯಾಗಿ ಕುಳಿತಿದ್ದೆವು. ನೀನು ಬೆರಳನ್ನು ತುಪ್ಪದ ನದಿಯಲ್ಲಿ ಅದ್ದಿದ್ದೆ. ನಾನು ನನ್ನ ಬೆರಳನ್ನು ಕೊಳಚೆಯಲ್ಲಿ ಮುಳುಗಿಸಿದ್ದೆ”.
“”ಹ್ಹಹ್ಹಹ್ಹ. ನಿನ್ನ ಯೋಗ್ಯತೆಯೇ ಅಷ್ಟು! ನಾನು ನನ್ನ ಬೆರಳನ್ನು ಯಾವತ್ತೂ ತುಪ್ಪದಲ್ಲಿಯೇ ಮುಳುಗಿಸುವವನು. ಅದರಲ್ಲೇನು ವಿಶೇಷ?”
“”ಕನಸು ಅಲ್ಲಿಗೆ ಮುಗಿಯುವುದಿಲ್ಲ”.
“”ಮುಂದೇನಾಯಿತು?”
“”ಕನಸಿನ ಮುಂದಿನ ಭಾಗದಲ್ಲಿ ನೀನು ನನ್ನ ಬೆರಳನ್ನು ಚೀಪುತ್ತಿದ್ದೆ. ನಾನು ನಿನ್ನ ಬೆರಳನ್ನು ಚೀಪುತ್ತಿದ್ದೆ”.
ಬದುಕು ಮುಖ್ಯವಲ್ಲ , ಅನುಭವ ಮುಖ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.