ಮಾನವ ವಿಶ್ವ ಕುಟುಂಬಿಯಾಗಲಿ: ತರಳಬಾಳು ಸ್ವಾಮೀಜಿ
Team Udayavani, Feb 10, 2019, 10:21 AM IST
ಸಿರಿಗೆರೆ: ಹಾರುವ ಹಕ್ಕಿಗಳಿಗೆ, ಹರಿಯುವ ನದಿಗಳಿಗೆ ಯಾವ ದೇಶದ ಗಡಿಯ ಹಂಗೂ ಇಲ್ಲ. ಅವುಗಳಿಗೆ ಪಾಸ್‌ಪೋರ್ಟ್, ವೀಸಾ ಕೂಡ ಬೇಕಿಲ್ಲ. ಅವುಗಳಂತೆ ವಿಶ್ವ ಕುಟುಂಬಿಗಳಾಗಿ ಬಾಳಲು ಮನುಜರು ಪಣ ತೊಡಬೇಕು ಎಂದು ತರಳಬಾಳು ಜಗದ್ಗುರು ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು.
ವಿಶ್ವಸಂಸ್ಥೆಯ ಸಹವರ್ತಿ ಸಂಸ್ಥೆಯಾದ ಅಂತಾರಾಷ್ಟ್ರೀಯ ಶಾಂತಿ ಪ್ರತಿಷ್ಠಾನದ ಆಶ್ರಯದಲ್ಲಿ ದಕ್ಷಿಣ ಕೊರಿಯಾ ದೇಶದ ರಾಜಧಾನಿ ಸಿಯೋಲ್‌ನಲ್ಲಿ ನಡೆಯುತ್ತಿರುವ ವಿಶ್ವ ಶೃಂಗ ಶಾಂತಿ ಸಮ್ಮೇಳನದಲ್ಲಿ ಪ್ರಬಂಧ ಮಂಡಿಸಿ ಶ್ರೀಗಳು ಮಾತನಾಡಿದರು.
ಕ್ರಿಶ್ಚಿಯನ್ನರು, ಹಿಂದೂಗಳು, ಮುಸ್ಲಿಮರು, ಬೌದ್ಧರು ಜಗತ್ತಿನಲ್ಲಿ ಬಹುಸಂಖ್ಯೆಯಲ್ಲಿ ಇದ್ದಾರೆ. ಆದರೆ ಮಾನವರನ್ನು ಪ್ರೀತಿಸುವ ಸರಳ ಮಾನವರು ಅತ್ಯಲ್ಪವಾಗಿದ್ದಾರೆ. ಇಹ ಮತ್ತು ಪರಗಳೆರಡರಲ್ಲೂ ಸುಖ ಮತ್ತು ಶಾಂತಿ ಮನುಷ್ಯನಿಗೆ ದೊರೆಯಬೇಕೆಂಬುದು ಎಲ್ಲಾ ಧರ್ಮಗಳ ಧ್ಯೇಯ. ಜಗತ್ತಿನ ಯಾವ ಧರ್ಮವೂ ಹಿಂಸೆಯನ್ನು ಬೋಧಿಸಿಲ್ಲವಾದರೂ ಧರ್ಮದ ಕಾರಣಕ್ಕೆ ಹಿಂಸಾಚಾರ, ರಕ್ತಪಾತ ನಡೆಯದ ದೇಶವೇ ಇಲ್ಲವೆಂಬುದು ದೊಡ್ಡ ದುರಂತ ಎಂದು ವಿಷಾದಿಸಿದರು.
ಜಗತ್ತಿನಲ್ಲಿ ಇಂದು ಮಾನವ ನಿರ್ಮಿತ ಹಾಗೂ ಪ್ರಾಕೃತಿಕವಾದ ಎರಡು ಸಮಸ್ಯೆಗಳು ಎದುರಾಗಿವೆ. ಸುನಾಮಿ, ಭೂಕಂಪ, ಪ್ರವಾಹಗಳು ಅಪ್ಪಳಿಸಿದಾಗ ಎಲ್ಲಾ ರಾಷ್ಟ್ರಗಳೂ ಒಂದುಗೂಡಿ ಸಂಕಷ್ಟಕ್ಕೀಡಾದ ನಾಗರಿಕರ ಸಹಾಯಕ್ಕೆ ಮುಂದೆ ಬರುತ್ತವೆ. ಆದರೆ ಮಾನವ ನಿರ್ಮಿತ ಕೋಮು ಸಂಘರ್ಷ ಮತ್ತು ಭಯೋತ್ಪಾದಕತೆಯಂತಹ ಸನ್ನಿವೇಶಗಳು ಘಟಿಸಿದಾಗ ನೆರವಿಗೆ ಯಾರೂ ಬರುವುದಿಲ್ಲ. ಧರ್ಮದ ಆಶಯ ಎಲ್ಲರಲ್ಲಿಯೂ ಸಂತೋಷವನ್ನು ಬೆಳೆಸುವುದೇ ಆಗಿದೆ. ಯಾವುದೇ ಧರ್ಮವೂ ತನ್ನ ಅನುಯಾಯಿಗಳಿಗೆ ಹಿಂಸೆಯನ್ನು ಬೋಧಿಸುವುದಿಲ್ಲ. ಆದರೂ ಇಂದು ಜಗತ್ತಿನ ಯಾವುದೇ ದೇಶ ಹಿಂಸೆ ಮತ್ತು ರಕ್ತಪಾತದಂತಹ ಸನ್ನಿವೇಶಗಳಿಂದ ಮುಕ್ತವಾಗಿಲ್ಲ ಎಂದರು.
ಪ್ರತಿ ದೇಶಕ್ಕೂ ರಾಜಕೀಯ ಪ್ರೇರಿತ ಭೌಗೋಳಿಕ ಗಡಿಗಳು ಇರುತ್ತವೆ. ಆದರೆ ಧರ್ಮಗಳ ಆಧಾರದ ಮೇಲೆ ಮನುಷ್ಯರು ತಮ್ಮದೇ ಆದ ಮಾನಸಿಕ ಗಡಿಗಳನ್ನು ನಿರ್ಮಿಸಿಕೊಂಡಿದ್ದಾರೆ. ಧರ್ಮಗಳ ಗಡಿಗಳು ಮನುಷ್ಯರನ್ನು ಮಾನಸಿಕವಾಗಿ ವಿಂಗಡಿಸಿವೆ. ದೇಶಗಳನ್ನು ಬೇರ್ಪಡಿಸುವ ಭೌಗೋಳಿಕ ಗಡಿಗಳು ಕಾಲ ಕಾಲಕ್ಕೆ ಬದಲಾದರೂ ಮಾನಸಿಕವಾಗಿ ನಿರ್ಮಾಣಗೊಂಡ ಅಗೋಚರ ಧಾರ್ಮಿಕ ಗಡಿಗಳು ಎಂದೂ ಬದಲಾಗಲಾರವು ಎಂದು ಅಭಿಪ್ರಾಯಪಟ್ಟರು.
ದಯಾ ಮೂಲದ ಧರ್ಮ ಅಗತ್ಯ
ಧರ್ಮದ ಕಾರಣಕ್ಕೆ ಜೀವಮಾನದಲ್ಲೇ ಎಂದೂ ನೋಡಿರದ ದೂರ ದೇಶದ ಸ್ವಧರ್ಮೀಯ ವ್ಯಕ್ತಿ ನೆರೆಮನೆಯವನೇ ಆದ ಅನ್ಯ ಧರ್ಮೀಯನಿಗಿಂತ ಆತ್ಮೀಯನಾಗುತ್ತಾನೆ. ಧರ್ಮಾಂಧತೆಯಿಂದ ಆಗುತ್ತಿರುವ ಹಿಂಸೆ ಜಗತ್ತಿನಲ್ಲಿ ಮೇರೆ ಮೀರಿದೆ. 12ನೇ ಶತಮಾನದ ಸಾಮಾಜಿಕ ಧಾರ್ಮಿಕ ಕ್ರಾಂತಿಯ ಹರಿಕಾರರಾದ ಬಸವಣ್ಣನವರು ದಯೆಗೆ ಧರ್ಮವೇ ಮೂಲವೆಂದು ಸಾರಿದರು. ದಯಾಮೂಲವಾದ ಧರ್ಮ ನಮ್ಮದಾಗಬೇಕು. ಜಗತ್ತಿನಲ್ಲಿ ಶಾಂತಿ ನೆಲೆಸಬೇಕಾದರೆ ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಶಾಂತಿ ನೆಲೆಗೊಳ್ಳಬೇಕು ಎಂದು ತರಳಬಾಳು ಶ್ರೀಗಳು ಆಶಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಅಡಿಕೆ ಖರೀದಿಸಿ ಹಣ ನೀಡದೆ ವಂಚನೆ; ಆತ್ಮಹ*ತ್ಯೆಗೆ ಶರಣಾದ ವ್ಯಾಪಾರಿ
Talk Fight: ಬಿ.ಎಸ್.ಯಡಿಯೂರಪ್ಪ ಬಗ್ಗೆ ಹಗುರ ಮಾತು ಸಲ್ಲ: ಬಿ.ವೈ.ವಿಜಯೇಂದ್ರ ಎಚ್ಚರಿಕೆ
Waqf Property: ಸಚಿವ ಜಮೀರ್ ಅಹ್ಮದ್‌ರನ್ನು ಗಡೀಪಾರು ಮಾಡಿ: ಬಿ.ವೈ.ವಿಜಯೇಂದ್ರ
ಬಿಜೆಪಿಯವರಿಗೆ ಕಾಳಜಿಯಿದ್ದರೆ ಕೇಂದ್ರದಿಂದ ಬೆಳೆ ಪರಿಹಾರ ಹೆಚ್ಚಿಸಲಿ: ಕೃಷ್ಣ ಬೈರೇಗೌಡ
Rain: ಚಿತ್ರದುರ್ಗದಲ್ಲಿ ತಡರಾತ್ರಿ ವರುಣನ ಅಬ್ಬರ… ಕೆರೆಯಂತಾದ ನಾಯಕನಹಟ್ಟಿ ಪೊಲೀಸ್ ಠಾಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.