ಪ್ರೇಮ ಪುರಾಣ ; ಪ್ರೀತಿ-ಪ್ರೇಮಕ್ಕೆ ಕಾಲ ದೇಶಗಳ ಕಟ್ಟುಪಾಡಿಲ್ಲ


Team Udayavani, Feb 13, 2019, 12:30 AM IST

b-8.jpg

ಪ್ರೀತಿ-ಪ್ರೇಮಕ್ಕೆ ಕಾಲ ದೇಶಗಳ ಕಟ್ಟುಪಾಡಿಲ್ಲ. ದಿವಿ- ಭುವಿಗಳ  ಭೇದವಿಲ್ಲ. ಜಾತಿ- ಮತ-ಪಂಥಗಳ ಗೊಡವೆಯೂ ಇಲ್ಲ. “ಪ್ರೀತಿ ಕೇಳುವುದು ಪ್ರೀತಿಯೊಂದನ್ನು ಮಾತ್ರ’ ಎಂಬ ಮಾತಿದೆ. ಆ ಮಾತನ್ನು ರುಜುವಾತು ಪಡಿಸುವ ಹಲವಾರು ಕತೆಗಳು ಪುರಾಣದಲ್ಲಿವೆ. ಆ ಕಣಜದಿಂದ ಕೆಲವು ಕತೆಗಳನ್ನು ಆಯ್ದು ನಿಮ್ಮ ಮುಂದಿಟ್ಟಿದ್ದೇವೆ. “ಪ್ರೀತಿ ಮಾಯೆ ಹುಷಾರು’ ಎಂದು ಹಾಡಿಕೊಳ್ಳುವ ಈ ದಿನಗಳಲ್ಲಿ, ಈ ಅಮರ ಪ್ರೇಮ ಕತೆಗಳು ಮಾದರಿಯಾಗಲಿ.

1. ಉಮಾ-ಮಹೇಶ್ವರರ ಪ್ರೀತಿ ಪ್ರಸಂಗವು…
ಜಗತ್ತಿಗೆ ಪ್ರೇಮಪಾಠವನ್ನು ಬೋಧಿಸಿದ ಮೊದಲ ಜೋಡಿ ಪಾರ್ವತಿ-ಪರಮೇಶ್ವರರದ್ದು. ಅವರನ್ನು “ಜಗದಾದಿಮ ದಂಪತಿ’ ಎಂದು ಗೌರವಿಸಲಾಗಿದೆ. ತಪಸ್ಸಿನ ಮೂಲಕ ಪ್ರೀತಿ ಸಾಕ್ಷಾತ್ಕಾರ ಮಾಡಿಕೊಂಡ ಶಿವ- ಶಿವೆಯರ ಕಥೆಯೇ ಮನೋಹರ. ಹಿಮವಂತ- ಮೇನಾವತಿಯರ ಮುದ್ದಿನ ಮಗಳು ಪಾರ್ವತಿ. ಅವಳಿಗೆ ಪರಮೇಶ್ವರನನ್ನೇ ಪತಿಯಾಗಿ ಪಡೆಯುವ ಹೆಬ್ಬಯಕೆ. ಅದಕ್ಕಾಗಿ ಇರುವ ಆಯ್ಕೆ ಒಂದೇ… ತಪಸ್ಸು. ಆದರೆ, ಅವಳಿಗಿನ್ನೂ ವಯಸ್ಸು ಚಿಕ್ಕದು. ತಪಸ್ಸಿನ ಹಾದಿ ಬಹಳ ಕಠಿಣವಾದದ್ದು. ತಾಯಿ, “ಬೇಡ ಕಣಮ್ಮಾ… ತಪಸ್ಸು ಮಕ್ಕಳಾಟವಲ್ಲ’ ಎಂದರೂ ಪಾರ್ವತಿ ಮನಸ್ಸು ಬದಲಿಸಲಿಲ್ಲ. ಆಕೆಯ ತಪಸ್ಸಿನ ಗುರು, ಗುರಿ ಮಹೇಶ್ವರ (ನಮ್ಮ ಅಕ್ಕಮಹಾದೇವಿ ಮಾಡಿದ್ದೂ ಅದನ್ನೇ ಅಲ್ಲವೆ?)

ಅತ್ತ ಅವಳ  ಹೃದಯೇಶ್ವರ, ಮಹೇಶ್ವರನ ಪರಿಸ್ಥಿತಿಯೂ ಇವಳಿಗಿಂತ ಭಿನ್ನವಾಗಿರಲಿಲ್ಲ. ಒಲವಿನ ಮಡದಿ ದಾಕ್ಷಾಯಿಣಿ ಮಡಿದ ಮೇಲೆ ಪ್ರಪಂಚದ ಮೇಲೆಯೇ ವೈರಾಗ್ಯ ಬಂದು ಬಿಟ್ಟಿತ್ತು! “ಮಡದಿ ಇಲ್ಲದ ಮನೆ, ಮನೆಯಲ್ಲ’ ಎಂದುಕೊಂಡು ಮನೆಯನ್ನೇ ಬಿಟ್ಟ ಶಿವನಿಗೂ ಅಂತರಂಗದಲ್ಲಿ ಶಿವೆಯದ್ದೇ ಧ್ಯಾನ. ಆತನೂ ಘೋರ ತಪಸ್ಸಿಗಿಳಿದ. ಹಿಮಪರ್ವತದಲ್ಲಿ ಒಂದೆಡೆ ಪಾರ್ವತಿಯ ತಪಸ್ಸು, ಇನ್ನೊಂದೆಡೆ ಪರಮೇಶ್ವರನ ತಪಸ್ಸು. ಪಾರ್ವತಿಯ ತಪಸ್ಸಿಗೆ ಪರಮೇಶ್ವರನೇ ಫ‌ಲ. ಪರಮೇಶ್ವರನ ತಪಸ್ಸಿಗೆ ಪಾರ್ವತಿಯೇ ಫ‌ಲ.

ಪಾರ್ವತಿಯ ಪ್ರೀತಿಗೆ ಪರಮೇಶ್ವರ ಸೋತ. ಆದರೂ ಅವಳ ಆಂತರ್ಯವನ್ನು ಕೆಣಕಬೇಕೆಂಬ ಕುತೂಹಲ. ಬ್ರಹ್ಮಚಾರಿ ವೇಷದಲ್ಲಿ ಬಂದ. ಪಾರ್ವತಿಯ ಎದುರೇ ಪರಮೇಶ್ವರನನ್ನು (ತನ್ನನ್ನು) ವಾಚಾಮಗೋಚರ ನಿಂದಿಸತೊಡಗಿದ. “ನೀನು  ಸುಂದರಿ, ಕುಲೀನೆ, ಸದ್ಗುಣಸಂಪನ್ನೆ. ನಿನ್ನಂಥ ಹುಡುಗಿ ಬಯಸುವ ಒಂದಾದರೂ ಗುಣ ಆ ಮಹೇಶ್ವರನಲ್ಲಿದೆಯೇ? ನೀನು ಶೋಭನಾಂಗಿ, ನಿನ್ನಂಥವಳಿಗೆ ಆ ಬೂದಿಬಡುಕ, ಸ್ಮಶಾನವಾಸಿ, ಕುರೂಪಿ, ಖಂಡಿತಾ ಯೋಗ್ಯ ವರ ಅಲ್ಲ. ಅವನಿಗೆ ವಾಸಕ್ಕೆ ಮನೆ ಇಲ್ಲ. ಅವನಿಗೊಂದು ಕುಲವಿಲ್ಲ, ಗೋತ್ರವಿಲ್ಲ, ಅಪ್ಪ-ಅಮ್ಮ ಯಾರೋ ಗೊತ್ತಿಲ್ಲ. ಅಂಥವನನ್ನು ಕಟ್ಟಿಕೊಂಡು ನೀನೇನು ಸುಖವಾಗಿರುತ್ತೀಯೇ?’ ಎಂದು ಲೇವಡಿ ಮಾಡಿದ.

ಪಾರ್ವತಿಯು ಆ ಮಾತನ್ನು ಕೇಳುವಷ್ಟು ಕೇಳಿದಳು. ತನ್ನ ಶಿವನನ್ನು ಸಮರ್ಥಿಸುವಷ್ಟೂ ಸಮರ್ಥಿಸಿದಳು. “ನನಗೆ ನನ್ನ ಹೃದಯೇಶ್ವರನ ಪೂರ್ಣ ಜಾತಕ ಗೊತ್ತು. ಅವನಲ್ಲಿ ಏನಿಲ್ಲದಿದ್ದರೂ ಹೃದಯದ ಪ್ರೀತಿಗೆ ಕೊರತೆ ಇಲ್ಲ. ನನ್ನ ಪ್ರೀತಿ ನನ್ನ ಶಿವನಿಗೆ ಅರ್ಪಿತ’ ಎಂದಳು.

“ನನ್ನ ಪ್ರಿಯಕರನ ಬಗ್ಗೆ ಇನ್ನೊಂದು ಕೆಟ್ಟ ಮಾತನಾಡಿದರೆ, ನಿನ್ನನ್ನು ಆಶ್ರಮದಿಂದ ಆಚೆಗೆ ದಬ್ಬಿಸಿಬಿಡುವೆ’ ಎಂದು ಹೆಜ್ಜೆ ಮುಂದಿಟ್ಟಳು. ಆ ಕ್ಷಣದಲ್ಲೇ ಶೈಲಪುತ್ರಿಯ ಹೃದಯಾಧಿರಾಜ ಅವಳ ಎದುರೇ ನಿಂತುಬಿಟ್ಟಿದ್ದ. ಆಕೆ ನಾಚಿ ನೀರಾದಳು. ಮುಂದೆ ಹೆಜ್ಜೆ ಇಡಲಾರಳು, ನಿಂತಲ್ಲಿ ನಿಲ್ಲಲಾರಳು. ಇಬ್ಬರ ಪ್ರೀತಿ ಏಕೀಭವಿಸಿತು. ಇಬ್ಬರೂ ಕರ ಚಾಚಿದರು, ಸ್ಪರ್ಶಿಸಲಿಲ್ಲ! “ನಿಶ್ಚಿತಾರ್ಥ ಅಪ್ಪ- ಅಮ್ಮನ ಸಮ್ಮುಖದಲ್ಲಿ’ ಎಂದಳು ಪಾರ್ವತಿ. ಪರಮೇಶ್ವರ ಗಂಭೀರವಾಗಿ ನಕ್ಕ.  ಸಪ್ತರ್ಷಿಗಳೇ ಈ ಅಮರಪ್ರೇಮಿಗಳ ಮದುವೆಗೆ ಮಧ್ಯಸ್ಥಗಾರರು, ಪುರೋಹಿತರು. ಹಿಮವಂತನ ಬಳಿ ಹೋಗಿ ಪರಮೇಶ್ವರನಿಗೆ ಹೆಣ್ಣು ಕೊಡುವಂತೆ ಶಾಸ್ತ್ರಕ್ರಮದಲ್ಲಿ ಕೇಳಿದರು. ಇದೊಂದು ಅದ್ಭುತಪ್ರಸಂಗವೆಂದು ದಾಖಲಾಯಿತು.

ಮೇನಾವತಿಯು, “ಏನು ಮಗಳೇ, ಹುಡುಗ ಒಪ್ಪಿಗೆಯೇನೇ?’ ಎಂದು ಕೇಳಿದಾಗ, ಕಮಲದ ದಳಗಳನ್ನು ಎಣಿಸುತ್ತಾ ನಸುನಕ್ಕಳು ಪಾರ್ವತಿ. ಕೊನೆಗೂ ಆಕೆ ಪ್ರೀತಿಯನ್ನು ಸಾಧಿಸಿ ಗೆದ್ದಳು. ಇವರ ಕಲ್ಯಾಣವೂ, ಲೋಕಕಲ್ಯಾಣವೂ (ತಾರಕ ವಧೆ) ಏಕಕಾಲದಲ್ಲಿ ಸಾಧಿತವಾಯಿತು. ಅಂದರೆ, ಜಗತ್ತಿಗೇ ಮದುವೆಯ ಸಿಹಿಯೂಟ ಹಂಚಿಕೆಯಾಯಿತು.

2. ಕರ್ಣಶ್ರಮದ ಹುಡುಗಿಯ ಕಥೆ
ಹೆಸರು ಶಕುಂತಲೆ. ಕರ್ಣಶ್ರಮದ ಕಣ್ಮಣಿ. ಮುಗ್ದೆ, ಸುಂದರಿ. ಎಷ್ಟು ಸುಂದರಿ? ಬ್ರಹ್ಮ, ಪ್ರಪಂಚದ ಸೌಂದರ್ಯವನ್ನೆಲ್ಲ ಕಲೆಹಾಕಿ ಅವಳನ್ನು ಸೃಷ್ಟಿಸಿದ್ದನೇನೋ ಎನ್ನುವಷ್ಟು!

ಪೌರವ ದುಷ್ಯಂತ ರಾಜ ಒಮ್ಮೆ ಬೇಟೆಗೆಂದು ಕಾಡಿಗೆ ಬಂದವನು, ಕರ್ಣಶ್ರಮಕ್ಕೆ ಬಂದ. ಶಕುಂತಲೆಯನ್ನು ನೋಡಿದಾಕ್ಷಣ ಮೋಹಿತನಾದ. ತನ್ನನ್ನು ವರಿಸೆಂದು ಕೇಳಿದ. ಅಪ್ಪನ ಒಪ್ಪಿಗೆ ಬೇಕೆಂದಳು, ಶಕುಂತಲೆ. “ಗಾಂಧರ್ವ ವಿಧಿಯಂತೆ ಮದುವೆಯಾಗೋಣ’ ಎಂದ ದುಷ್ಯಂತ. ಶಕುಂತಲೆ ಆಗಲೇ ದುಷ್ಯಂತನಿಗೆ ಸಂಪೂರ್ಣ ಮನಸೋತಿದ್ದಳು. ಆತನ ಮಾತಿಗೆ ಒಪ್ಪಿದಳು; ಪ್ರೀತಿಯ ಸಂಗಮವಾಯಿತು. ದುಷ್ಯಂತ ತನ್ನ ರಾಜ್ಯಕ್ಕೆ ಮರಳಿದ. ಅನಂತರ ವಿಷಯ ತಿಳಿದ ಕಣ್ವರು- “ತಪ್ಪೇನೂ ಆಗಿಲ್ಲ, ಒಳ್ಳೆಯ ಆಯ್ಕೆಯನ್ನೇ ಮಾಡಿದ್ದೀಯ’ ಎಂದು ಮಗಳನ್ನು ಹರಸಿದರು.

ದುಷ್ಯಂತ ರಾಜನಿಗೆ ಹಲವು ಹೆಂಡತಿಯರು ಇರಬಹುದು. ಆದರೆ, ಶಕುಂತಲೆಗೆ ಮಾತ್ರ ಒಬ್ಬನೇ ದುಷ್ಯಂತ. ಆ ದೃಷ್ಟಿಯಿಂದ ಮೊದಲು ನೋಡಿದ್ದೂ ಒಬ್ಬನನ್ನೇ, ವರಿಸಿದ್ದೂ ಅವನನ್ನೇ. ಪ್ರೀತಿಯನ್ನು ಪೂರ್ಣವಾಗಿ ಧಾರೆಯೆರೆದಿದ್ದೂ ಒಬ್ಬನಿಗೇ.
ಮರಳಿ ಬರುತ್ತೇನೆಂದು ಹೋದವನ ಪತ್ತೆಯಿಲ್ಲ. ಹೊಟ್ಟೆಯಲ್ಲಿ ಕೂಸು ಬೆಳೆಯುತ್ತಿದೆ. ಹೆಣ್ಣಿನ ಆತಂಕಕ್ಕೆ ಹಲವು ಮುಖಗಳು. 
ಶಕುಂತಲೆ ಆಶ್ರಮದ ಹೊರಗೆ ಒಬ್ಬಳೇ ಕುಳಿತಿದ್ದಾಳೆ. ಕೆನ್ನೆಯ ಮೇಲೆ ಕೈ. ಒತ್ತರಿಸಿ ಬರುತ್ತಿರುವ  ಕಣ್ಣೀರು. “ಮೋಸ ಹೋದೆನಾ ನಾನು? ತಪ್ಪಾಯಿತಾ ನನ್ನಿಂದ?’ - ಭವಿಷ್ಯವನ್ನು ನೆನೆದು ಗಾಬರಿಯಾದಳು. ದಿನಗಳು ಉರುಳುತ್ತಿವೆ. ಕಣ್ವರೂ ಆತಂಕಕ್ಕೀಡಾದರು. ಮಗಳನ್ನು ಪತಿಗೃಹಕ್ಕೆ ಕಳುಹಿಸುವ ಏರ್ಪಾಡು ಮಾಡಿದರು. ಅತ್ಯಂತ ಆತಂಕದಿಂದ ಶಕುಂತಲೆ ಪತಿಯ ಎದುರು ನಿಂತಿದ್ದಾಳೆ. ದುಷ್ಯಂತ- “ಯಾರು ನೀನು? ಇಲ್ಲಿಗೇಕೆ ಬಂದೆ?’ ಅಂತ ಕೇಳಿದಾಗ, ಶಕುಂತಲೆಗೆ ಭೂಮಿ ಬಾಯ್ದೆರೆದ ಅನುಭವ.

ದುಷ್ಯಂತ ತನ್ನ ಆಶ್ರಮಕ್ಕೆ ಬಂದಿದ್ದನ್ನು ನೆನಪಿಸಿದಳು. ಒಂದೊಂದು ಘಟನೆಯನ್ನೂ, ಅವನೊಂದಿಗೆ ಕಳೆದ ಪ್ರತಿಕ್ಷಣವನ್ನೂ ಕಣ್ಣಿಗೆ ಕಟ್ಟಿದಳು. ಹೆಂಗಸರಿಗೆ ಬಣ್ಣದ ಮಾತನ್ನು ಯಾರೂ ಕಲಿಸಬೇಕಾಗಿಲ್ಲವೆಂದು ಶೀಲವನ್ನೇ ಶಂಕಿಸಿ ಮಾತನಾಡಿದ ರಾಜ. ಮಾನಧನೆಯಾದ ಶಕುಂತಲೆಗೆ ತೀವ್ರ ಅವಮಾನವಾಯಿತು. ದುಷ್ಯಂತ ಅಂದು ತನ್ನ ಪ್ರೀತಿಗೆ ನೆನಪಿನ ಕಾಣಿಕೆಯಾಗಿ ಕೊಟ್ಟಿದ್ದ ಮುದ್ರೆಯುಂಗುರವನ್ನು ತೋರಿಸಲು ಕೈ ಚಾಚಿದಳು. ಆದರೆ, ವಿಧಿ ಕೈಕೊಟ್ಟಿತ್ತು. ಮುದ್ರೆಯುಂಗುರ ಎಲ್ಲಿಯೋ ಜಾರಿ ಬಿದ್ದು ಹೊಗಿತ್ತು. “ದೈವ ಕೈಕೊಟ್ಟಿದೆ, ದಯವಿಟ್ಟು ನನ್ನ ನಿಷ್ಕಲ್ಮಷ ಪ್ರೀತಿಗೆ ದ್ರೋಹ ಎಸಗಬೇಡಿ’ ಎಂದು ಬೇಡಿಕೊಂಡಳು.

“ಸುಳ್ಳು ಹೆಣೆಯುವುದನ್ನು ಹೆಂಗಸರಿಗೆ ಯಾರೂ ಕಲಿಸಬೇಕಾಗಿಲ್ಲ’ ಎಂದು, ದುಷ್ಯಂತ ಮತ್ತಷ್ಟು ನಿಂದಿಸಿದ. ಶಕುಂತಲೆ ಇನ್ನು ತಡೆಯದಾದಳು. “ನೀನೊಬ್ಬ ಧರ್ಮದ ಮುಖವಾಡ ಹಾಕಿಕೊಂಡ ಪಾತಕಿ ರಾಜ’ ಎಂದಳು. ಯಾವ ಸಮಜಾಯಿಷಿಗಳೂ ಪ್ರಯೋಜನಕ್ಕೆ ಬರಲಿಲ್ಲ. ಇತ್ತ ದುಷ್ಯಂತ ಶಕುಂತಲೆಯನ್ನು ತಿರಸ್ಕರಿಸಿದ, ಅತ್ತ ತವರಿನವರೂ ಬಿಟ್ಟು ಹೊರಟು ಬಿಟ್ಟರು. ನನ್ನ ಪ್ರೀತಿ ನನ್ನನ್ನೇ ಕೊಂದಿತಲ್ಲ! ಇನ್ನೇಕೆ ಬದುಕು? ಎಂದುಕೊಂಡಳು. ಪರಿಶುದ್ಧ ಪ್ರೀತಿಗೆ ಸಾವು ಬರಲು ಸಾಧ್ಯವಿಲ್ಲ ಶಕುಂತಲೆ! ಎಲ್ಲಿಂದಲೋ ಸಾಂತ್ವನದ ಜತೆಗೆ ಒಲವಿನ ಧ್ವನಿಯೊಂದು ಉಲಿದು ಬಂತು. ರಾಜ ಪುರೋಹಿತರು ಅವಳ ನೆರವಿಗೆ ಬಂದರು. ತಾಯಿ ಮೇನಕೆ ಬಂದು ಮಗಳನ್ನು ಕರೆದೊಯ್ದಳು. ಅಲ್ಲಿ ಶಕುಂತಲೆ ಸರ್ವದಮನನಿಗೆ ಜನ್ಮಕೊಟ್ಟಳು.

ಶಕುಂತಲೆ ಪತಿಗೃಹಕ್ಕೆ ಬರುತ್ತಿದ್ದಾಗ, ನದಿ ದಾಟುವ ಸಂದರ್ಭದಲ್ಲಿ ಆಕಸ್ಮಿಕವಾಗಿ ನೀರಿಗೆ ಬಿದ್ದು ಮೀನಿನ ಹೊಟ್ಟೆ ಸೇರಿದ್ದ ಮುದ್ರೆಯುಂಗುರ ಬೆಸ್ತನ ಮೂಲಕ ರಾಜನ ಕೈ ಸೇರಿತು. ದುಷ್ಯಂತನಿಗೆ ಎಲ್ಲವೂ ನೆನಪಾಯಿತು. ದೂರ್ವಾಸರು ಹಿಂದೊಮ್ಮೆ ಶಕುಂತಲೆಗೆ ಕೊಟ್ಟಿದ್ದ ಶಾಪಕ್ಕೆ ಮುಕ್ತಿ ಸಿಕ್ಕಿತು. ದುಷ್ಯಂತ-ಶಕುಂತಲೆ ಮತ್ತೆ ಒಂದಾದರು. ಮುಂದೆ ಅವರ ಪ್ರೀತಿಯ ಕುವರ, ಭರತ ಚಕ್ರವರ್ತಿಯಾದ. ಅವನಿಂದ ಈ ದೇಶ “ಭಾರತ’ವಾಯಿತು. 

3. ಹಂಸ ಮಾಡಿಸಿದ ಮದುವೆ
ವಿದರ್ಭ ದೇಶದ  ಭೀಮರಾಜನ ಮಗಳು ದಮಯಂತಿ. ಆಕೆ ಗುಣವತಿ, ರೂಪವತಿ. ಒಮ್ಮೆ ಉದ್ಯಾನವನಕ್ಕೆ ಹೋದಾಗ ಚಿನ್ನದ ಬಣ್ಣದ ಹಂಸವನ್ನು ಕಂಡಳು. ಅದನ್ನು ಹಿಡಿಯುವ ಆಸೆಯಾಯ್ತು. ಅದು ಬೇಕಂತಲೇ ದಮಯಂತಿಯನ್ನು ಸಾಕಷ್ಟು ಆಡಿಸಿ, ಓಡಿಸಿ ಕೊನೆಗೆ ಕೇಳಿತು… “ನಿನಗೆ ನಿಷಧಾಧಿಪತಿ ನಳ ಗೊತ್ತೇನು? ಅವನಷ್ಟು ಸುಂದರ, ಅವನಷ್ಟು ಗುಣವಂತ, ಪರಾಕ್ರಮಿ ಜಗತ್ತಿನಲ್ಲೇ ಯಾರೂ ಇಲ್ಲ’ - ಹಂಸ ಒಂದೇ ಸಮನೆ ನಳನನ್ನು ಹೊಗಳುತ್ತಲೇ ಹೋಯಿತು.

ನಳನ ಚಿತ್ರ ದಮಯಂತಿಯ ಹೃದಯದಲ್ಲಿ ಅಚ್ಚೊತ್ತಿತು. ನಾನು ಮದುವೆಯಾಗುವುದಿದ್ದರೆ ನಳನನ್ನೇ ಎಂದು ನಿರ್ಧರಿಸಿಬಿಟ್ಟಳು. ಹಂಸಕ್ಕೆ ಹೇಳಿದಳು: “ನೀನು ಹೇಗಾದರೂ ಮಾಡಿ ನಳ ನನ್ನನ್ನೇ ವರಿಸುವಂತೆ ಮಾಡು’. ಹಂಸ ನಿಷಧ ದೇಶಕ್ಕೆ ಹೋಯಿತು. ದಮಯಂತಿಯ ಚಿತ್ರವನ್ನು ನಳನ ಮುಂದೆ ತೆರೆದಿಟ್ಟಿತು. ನಳ ಹೇಳಿದ: “ನಾನು ಮದುವೆಯಾಗುವುದಿದ್ದರೆ ದಮಯಂತಿಯನ್ನೇ’. ಹಂಸದ ಮಧ್ಯಸ್ಥಿಕೆ ಫ‌ಲ ಕೊಟ್ಟಿತು. ಶುಭಮುಹೂರ್ತದಲ್ಲಿ ದಮಯಂತಿಯ ಸ್ವಯಂವರ ಏರ್ಪಾಡಾಯಿತು. ಕಠಿಣ ಪರೀಕ್ಷೆಯ ನಡುವೆಯೂ ದಮಯಂತಿಯ ಪ್ರೀತಿ ಗೆದ್ದಿತು. ಮುಂದೆ ದಮಯಂತಿ ಬದುಕಿನಲ್ಲಿ ಕಠಿಣ ಪರೀಕ್ಷೆಗಳನ್ನು ಎದುರಿಸಬೇಕಾಯ್ತು. ಎಲ್ಲ ಸಂದರ್ಭದಲ್ಲೂ ಅವಳನ್ನು ಗೆಲ್ಲಿಸಿದ್ದು ನಳನ ಮೇಲಿನ ನಿಷ್ಕಲ್ಮಷ ಪ್ರೀತಿ.

4. ಸಾವನ್ನು ಸೋಲಿಸಿದ ಪ್ರೀತಿ
ಮದ್ರದೇಶದ ಅರಸ ಅಶ್ವಪತಿಯ ಮಗಳು ಸಾವಿತ್ರಿ. ಸಕಲಗುಣ ಸಂಪನ್ನೆ. ಬಂಗಾರದ ಪುತ್ಥಳಿ. ಅವಳ ಸೌಂದರ್ಯವೇ ದೊಡ್ಡ ಸಮಸ್ಯೆಯಾಯಿತು ಹೆತ್ತವರಿಗೆ. ಬಂದ ವರಮಹಾಶಯರೆಲ್ಲ “ಇವಳಿಗೆ ನಾವು ತಕ್ಕವರಲ್ಲ’ ಎಂದು ಅವರವರೇ ತೀರ್ಮಾನಿಸಿ ಬಿಡುತ್ತಿದ್ದರು. ಗಂಡುಗಳನ್ನು ಹುಡುಕಿ ಸುಸ್ತಾದ ಅಪ್ಪ ಮಗಳಿಗೆ ಹೇಳಿದ- “ನಿನಗೆ ಯೋಗ್ಯನಾದ ಗಂಡನ್ನು ನೀನೇ ಹುಡುಕಿಕೊಳ್ಳಬೇಕಮ್ಮ, ನಾವಂತೂ ಅಸಹಾಯಕರು’. ದಿಟ್ಟೆ, ವಿಶ್ವಸುಂದರಿ, ಸಾವಿತ್ರಿ ಕುದುರೆ ಏರಿ ಹೊರಟಳು. “ಎಲ್ಲಿದ್ದೀಯೋ ರಾಜಕುಮಾರ?’ ಎಂದು ಹುಡುಕಿಯೇ  ಹುಡುಕಿದಳು. ಎಲ್ಲಿಯೂ ದುಡುಕಲಿಲ್ಲ. ದೇಶ ದೇಶ ಸುತ್ತಿದಳು. 

ಕೊನೆಗೂ ಒಬ್ಬ ಸಿಕ್ಕಿದ; ಅಚ್ಚರಿಯ ಆಯ್ಕೆ… 
“ಅವನು’ ರಾಜ್ಯಕೋಶ ಕಳೆದುಕೊಂಡು ಕಾಡುಸೇರಿದ ಕಡುಬಡವ. ಹೃದಯ ಶ್ರೀಮಂತಿಕೆಗೆ ಕೊರತೆಯಿಲ್ಲದವ. ಧರ್ಮಾತ್ಮ, ಸತ್ಯಸಂಧ. ಹೆಸರು ಸತ್ಯವಾನ. ಸಾಲ್ವದೇಶದ ದ್ಯುಮತ್ಸೇನ ರಾಜನ ಕುವರ. ದ್ಯುಮತ್ಸೇನ, ದುರಾದೃಷ್ಟದಿಂದ ದೃಷ್ಟಿಯನ್ನೂ, ರಾಜ್ಯಕೋಶಗಳನ್ನೂ ಕಳೆದುಕೊಂಡಿದ್ದ. ಸತ್ಯವಾನ ಕಾಡಿನಲ್ಲಿ ಅಪ್ಪ ಅಮ್ಮನ ಸೇವೆ ಮಾಡಿಕೊಂಡಿದ್ದ. 

ಸಾವಿತ್ರಿ ಸತ್ಯವಾನನನ್ನೇ ಮದುವೆಯಾಗಲು ನಿರ್ಧರಿಸಿದಳು. ನಂತರ ಇನ್ನೊಂದು ಆಘಾತಕಾರಿ ವಿಷಯ ಅವಳಿಗೆ ನಾರದರಿಂದ ತಿಳಿದು ಬಂತು. “ಸತ್ಯವಾನ ಅಲ್ಪಾಯು. ಇನ್ನೊಂದು ವರ್ಷ ಮಾತ್ರ ಬದುಕಿರುತ್ತಾನಷ್ಟೆ…’ ಎಂದರು ನಾರದಮುನಿ.
 “ಈ ಸಂಬಂಧ ಬೇಡ ಮಗಳೆ’ ಎಂದರು ಆಕೆಯ ಹೆತ್ತವರು. ಸ್ವತಃ ದ್ಯುಮತ್ಸೇನನೂ, “ಇನ್ನಾವುದಾದರೂ ಒಳ್ಳೆಯ ಮನೆ ಸೇರಿಕೋ ಕಂದಾ’ ಎಂದು ಬುದ್ಧಿವಾದ ಹೇಳಿದ. 

ಸಾವಿತ್ರಿ ನಿರ್ಧಾರ ಬದಲಿಸಲಿಲ್ಲ. “ಸತ್ಯವಾನನಿಗೆ ಹೃದಯ ಒಪ್ಪಿಸಿಯಾಗಿದೆ, ನನಗೆ ಎರಡು ಹೃದಯಗಳಿಲ್ಲ. ನನ್ನ ಪಾಲಿನ ಪಂಚಾಮೃತ ನನಗೇ ಇರಲಿ’ ಎಂದಳು.  ಒಂದು ವರ್ಷ ಕಳೆಯಿತು. ಕಾಡಿಗೆ ಸೌದೆ ತರಲು ಹೊರಟ ಸತ್ಯವಾನ. ಸಾವಿತ್ರಿಯ ಪ್ರಾಣಸಂಕಟ ಅವಳಿಗೆ ಮಾತ್ರ ಗೊತ್ತು. ಭವಿಷ್ಯದ ಜಾಡು ಗೊತ್ತಿದ್ದ ಸಾವಿತ್ರಿ, ಗಂಡನ ಜತೆಗೆ ಹೊರಟಳು. ಸೌದೆ ಸೀಳುತ್ತಿದ್ದ ಸತ್ಯವಾನ ಅಲ್ಲಿಯೇ ಕುಸಿದ. ಕ್ಷಣದಲ್ಲಿ ಪ್ರಾಣಪಕ್ಷಿ ಯಮನ ಪಾಶದಲ್ಲಿ ಸಿಕ್ಕಿಬಿತ್ತು. ಸಾವಿತ್ರಿ ತನ್ನ ತಪಶ್ಶಕ್ತಿಯಿಂದ ಯಮನನ್ನು ಹಿಂಬಾಲಿಸಿ ಹೊರಟಳು. ಯಮ ಬಹುಪರಿಯಾಗಿ ಹೇಳಿದ- “ಸತ್ತವರು ಮರಳಿ ಬಾರರು. ಹಿಂದಿರುಗು’. 

ಸಾವಿತ್ರಿ ಹೇಳಿದಳು- “ನನ್ನ ಪ್ರೀತಿಯ ಸತ್ಯವಾನ ಎಲ್ಲಿರುತ್ತಾನೋ, ನಾನು ಅಲ್ಲಿಯೇ ಇರುತ್ತೇನೆ. ನನ್ನ ಗಂಡನನ್ನು ಬದುಕಿಸು, ಇಲ್ಲವೇ ನನ್ನನ್ನೂ ಕರೆದೊಯ್ಯಿ’.  ಸಾವಿತ್ರಿಯ ಪತಿ ಪ್ರೀತಿಗೆ, ತಪಸ್ಸಿಗೆ, ಕುಟುಂಬ ಪ್ರೀತಿಗೆ ಯಮ ಅಚ್ಚರಿಪಟ್ಟ, ಸಂಪ್ರೀತನಾದ. ಮೃತ್ಯುದೇವತೆಯನ್ನು ಸೋಲಿಸಿದ ಏಕೈಕ ಸಾಧ್ವಿಮಣಿ ನೀನು ಎಂದು, ಸತ್ಯವಾನನನ್ನು ಪಾಶದಿಂದ ಬಿಡುಗಡೆಗೊಳಿಸಿದ. ಸಾವಿತ್ರಿ ಗಂಡನನ್ನು ಬದುಕಿಸಿಕೊಂಡಿದ್ದಷ್ಟೇ ಅಲ್ಲ, ಅವನಿಗೆ ದೀರ್ಘಾಯುಷ್ಯವನ್ನೂ,  ಗಂಡನ ಮನೆ, ತವರು ಮನೆಗೆ ಬೆಳಕಾಗುವ ಹಲವು ವರಗಳನ್ನು ಯಮನಿಂದ ಪಡೆದಳು. ಪ್ರೀತಿಯ ಶಕ್ತಿಯನ್ನು ಜಗತ್ತಿಗೆ ಸಾರಿದ ತಪಸ್ವಿನಿಯೆನಿಸಿದಳು. 

5. ಕೃಷ್ಣನ ಹೆಜ್ಜೆ, ರಾಧೆಯ ಗೆಜ್ಜೆ             
ಲೋಕದ ಕಣ್ಣಿಗೆ ರಾಧೆಯು ಕೂಡ ಎಲ್ಲರಂತೆ ಒಂದು ಹೆಣ್ಣು. ಆದರೆ, ರಾಧೆಯ ಲೋಕ ರಾಧೆಗೆ ಮಾತ್ರ ಗೊತ್ತು. ಅದು ಸಪ್ತ ಲೋಕದಾಚೆಯ  ಸುಪ್ತಲೋಕ. ಅದು ಗೊತ್ತಿದ್ದದ್ದು ಕೃಷ್ಣನಿಗೆ ಮಾತ್ರ. ರಾಧಾ-ಮಾಧವ, ಪ್ರೀತಿಗೆ ಹೊಸ ಭಾಷ್ಯ ಬರೆದವರು. ಈರ್ವರ ಪ್ರೀತಿಗೆ ಈರ್ವರ ಪ್ರೀತಿಯೇ ಸಾಟಿ. ಕೃಷ್ಣ ರಾಜವಂಶದವ, ರಾಧೆ ಸಾಮಾನ್ಯ ಗೊಲ್ಲರ ಮನೆಯ ಹುಡುಗಿ. ಎಲ್ಲಿಂದೆಲ್ಲಿಯ ಸಂಬಂಧ? ಅವರ ನಡುವೆ ಸಂಬಂಧ ಬೆಸೆದದ್ದು, ಕಾಮವನ್ನು ಮೀರಿದ ಪ್ರೇಮ. ನಿಷ್ಕಾಮ ಪ್ರೀತಿ! ಮೋಹನ ಮುರಳಿ (ಕೊಳಲು)ಯನ್ನು ಕೈಗೆತ್ತಿಕೊಂಡರೆ ಅದು ಮೊದಲು ಕಾಣುತ್ತಿದ್ದುದು ರಾಧೆಯ ಕಣಳಿಗೆ. ನುಡಿಸಿದರೆ ಮೊದಲು ಕೇಳಿಸುತ್ತಿದ್ದುದು ರಾಧೆಯ ಹೃದಯಕ್ಕೆ! ಆಕೆ ಎಲ್ಲಿದ್ದರೂ, ಹೇಗಿದ್ದರೂ.

ಕೃಷ್ಣನ ಹೆಜ್ಜೆಗೆ-ಗೆಜ್ಜೆಗೆ, ರಾಧೆಯ ಹೆಜ್ಜೆ-ಗೆಜ್ಜೆ. ಎರಡು ದೇಹ-ಒಂದು ಹೃದಯ.
ಕೃಷ್ಣ-ರಾಧೆಯರು ಮದುವೆಯಾದರಾ, ಇಲ್ಲ. ಅವರು ಮದುವೆಯಾಗದೇ ಒಂದಾದವರು. 
ರಾಧೆ ಅನಕ್ಷರಸ್ಥೆ. ಆದರೆ ಕೃಷ್ಣನ ಹೃದಯವನ್ನು ಓದಿಕೊಂಡಿದ್ದಳು. ತನ್ನ ಭಾವಭಿತ್ತಿಯ ಮೇಲೆ ಎಂದೂ ಅಕ್ಷರವಾಗದ “ಕೃಷ್ಣ’ ಎಂಬ ಎರಡಕ್ಷರಗಳನ್ನು ಬರೆದುಕೊಂಡಿದ್ದಳು. ಅವಳಿಗೆ ಕೃಷ್ಣ ಹಾಗೂ ಪ್ರೀತಿ ಬೇರೆ ಬೇರೆ ಪದ‌ಗಳಾಗಿರಲಿಲ್ಲ. ಅವಳು ಜೀವನ ಪೂರ್ತಿ ಆ ಪ್ರೀತಿಯನ್ನೇ ಆರಾಧಿಸಿದಳು. ಪ್ರೀತಿಯಲ್ಲೇ ಲೀನವಾದಳು.   

ಸಿ.ಎ. ಭಾಸ್ಕರ ಭಟ್ಟ, ನಾಗಮಂಗಲ 

ಟಾಪ್ ನ್ಯೂಸ್

1-jjjjj

ODI; ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ,ಹರ್ಮನ್ ಪ್ರೀತ್

1-allu

”Pushpa 2′′ ಭಾಷೆಯ ತಡೆಯನ್ನು ಮುರಿಯುತ್ತಿದೆ, ತೆಲುಗು ಜನರಿಗೆ ಹೆಮ್ಮೆ: ಅಲ್ಲು ಅರ್ಜುನ್

arrested

Indiranagar; ಅಸ್ಸಾಂ ಯುವತಿ ಹ*ತ್ಯೆ ಕೇಸ್: ಆರೋಪಿ ಬಂಧಿಸಿದ ಪೊಲೀಸರು

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

R Ashok (2)

ಚಂದ್ರಶೇಖರ ಶ್ರೀ ವಿರುದ್ಧ ಕೇಸ್‌; ಒಕ್ಕಲಿಗರು ತಿರುಗಿ ಬೀಳುತ್ತಾರೆ: ಆರ್.ಅಶೋಕ್ ಎಚ್ಚರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1-jjjjj

ODI; ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ,ಹರ್ಮನ್ ಪ್ರೀತ್

de

Guttigar: ಮಾವಿನಕಟ್ಟೆ; ಮರದಿಂದ ಬಿದ್ದು ವ್ಯಕ್ತಿ ಸಾವು

9

Kaup: ಬೀಚ್‌ನಲ್ಲಿನ್ನು ಪ್ಯಾರಾ ಮೋಟರಿಂಗ್‌

8(1

Udupi: ಸ್ಥಾಪಕರು ಜೀವನ ಪಾಠ ಮಾಡಿದ್ದ ಎಂಜಿಎಂ ಕಾಲೇಜಿಗೆ ಅಮೃತೋತ್ಸವ

7

Kollur: ದ್ವಿಪಥ ರಸ್ತೆ ನಿರ್ಮಾಣಕ್ಕೆ ಅಂಗಡಿ ಮುಂಗಟ್ಟು ತೆರವು ಆರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.