ಸಾವಿರ ನೋವುಗಳಿದ್ದರೂ ದೇಶಾಭಿಮಾನ ಮರೆಸುತ್ತದೆ
Team Udayavani, Feb 15, 2019, 8:19 AM IST
ಕೋಟ: ಬ್ರಹ್ಮಾವರ ತಾಲೂಕು ಸಾಲಿಗ್ರಾಮ ಸಮೀಪ ಕಾರ್ಕಡ ಬಡಾಹೋಳಿ ನಿವಾಸಿ ಹೆರಿಯ ಹಾಗೂ ಸುಶೀಲಾ ದಂಪತಿಯ ಪುತ್ರ ಪ್ರಶಾಂತ್ ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡು ತೀರಾ ಬಡತನದಲ್ಲಿ ಬೆಳೆದ ವರು. ತಂದೆ ಇಲ್ಲದುದರಿಂದ ಚಿಕ್ಕ ವಯಸ್ಸಿನಲ್ಲಿ ಓದಿನ ಜತೆಗೆ ಕೆಲಸ ಮಾಡಿದರು. ಶಿಕ್ಷಣ ಮುಗಿದ ಕೂಡಲೇ ಕೈಬೀಸಿ ಕರೆದದ್ದು ಸೇನೆ. 10 ವರ್ಷಗಳಿಂದ ನಾಯಕ್ ಹುದ್ದೆಯಲ್ಲಿರುವ ಪ್ರಶಾಂತ್ ಪ್ರಸ್ತುತ ಸ್ಫೋಟಕ ವಸ್ತುಗಳನ್ನು ನಿಷ್ಕ್ರಿಯಗೊಳಿಸುವ ವಿಭಾಗದಲ್ಲಿ ತರಬೇತುದಾರರಾಗಿದ್ದಾರೆ.
ಬದುಕು ಕಲಿಸಿದ ಬಾಲ್ಯ
ಪ್ರಶಾಂತ್‌ಗೆ 12 ವರ್ಷ ವಯಸ್ಸಾಗಿದ್ದಾಗ ತಂದೆ ನಿಧನ ಹೊಂದಿದರು. ಪ್ರಶಾಂತ್, ಪ್ರದೀಪ್, ಪ್ರವೀಣ್ ಈ ಮೂವರು ಮಕ್ಕಳನ್ನು ಸಾಕಿ ದೊಡ್ಡವರನ್ನಾಗಿಸಲು ತಾಯಿ ಕೂಲಿ ಮಾಡುತ್ತ ಕಷ್ಟಪಟ್ಟರು. ಕಾಂಕ್ರೀಟ್, ಗಾರೆ ಕೆಲಸ ಮಾಡುತ್ತ ಪ್ರಶಾಂತ್ ನೆರವಾಗುತ್ತಿದ್ದರು. ನೆರೆಹೊರೆಯವರು ಆಸರೆಯಾದರು.
ಫೈರಿಂಗ್ ಸ್ಪರ್ಧೆಯಲ್ಲಿ ಗಳಿಸಿದ ಪ್ರಥಮ ಬಹುಮಾನದೊಂದಿಗೆ.
ಪೊಲೀಸ್ ಆಗಬೇಕೆಂದಿತ್ತು
ಪ್ರಶಾಂತ್ ಪ್ರಾಥಮಿಕ ಶಿಕ್ಷಣವನ್ನು ನ್ಯೂ ಕಾರ್ಕಡ ಶಾಲೆಯಲ್ಲಿ, ಪ್ರೌಢ ಮತ್ತು ಪ. ಪೂ. ಶಿಕ್ಷಣವನ್ನು ಕೋಟ ವಿವೇಕ ವಿದ್ಯಾಸಂಸ್ಥೆಯಲ್ಲಿ ಪೂರೈಸಿದರು. ಪದವಿ ವಿದ್ಯಾಭ್ಯಾಸ ಬ್ರಹ್ಮಾವರದ ಎಸ್‌ಎಂಎಸ್ ಕಾಲೇಜಿನಲ್ಲಾಯಿತು. ಪೊಲೀಸ್ ಆಗಬೇಕು ಎಂದು ನಿಶ್ಚಯಿಸಿದ್ದರು. ಕೊನೆಯ ಸೆಮಿಸ್ಟರ್‌ನಲ್ಲಿ ಓದುತ್ತಿರುವಾಗ ಸ್ನೇಹಿತ ನಾಗೇಶ ಪೂಜಾರಿ ಎಂಬವರು ಶಿವಮೊಗ್ಗದಲ್ಲಿ ನಡೆಯಲಿದ್ದ ಸೇನಾ ರ್ಯಾಲಿಯ ಕುರಿತು ತಿಳಿಸಿದ್ದು ಬದುಕನ್ನು ಬದಲಾಯಿಸಿತು. ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್‌ನಲ್ಲಿ 2 ವರ್ಷ ತರಬೇತಿ ಪಡೆದ ಮೇಲೆ ಕರ್ತವ್ಯಕ್ಕೆ ನಿಯುಕ್ತಿಗೊಂಡರು. ಮಥುರಾ, ಸಿಕ್ಕಿಂ, ಕಾಶ್ಮೀರ, ಬೆಂಗಳೂರು, ಅಮೃತ ಸರ, ಮೀರತ್ ಮುಂತಾದೆಡೆ ಸೇವೆ ಸಲ್ಲಿಸಿದ್ದಾರೆ.
ಸಹೋದ್ಯೋಗಿ ಬಂಧುಬಳಗ
ಮನೆಯಲ್ಲಿ ಇರುವಾಗ ಅನಾರೋಗ್ಯವಾದ ಸಂದರ್ಭ ಮನೆಮಂದಿ ಆರೈಕೆ ಮಾಡುತ್ತಾರೆ. ಸೇನಾ ಕ್ಯಾಂಪ್‌ನಲ್ಲಿದ್ದಾಗ ಕಷ್ಟವಲ್ಲವೇ ಎಂಬ ಭಾವನೆ ಬೇಡ. ಅಲ್ಲಿ ಸಹೋದ್ಯೋಗಿಗಳೇ ಬಂಧುಗಳು. ಕಾಯಿಲೆ ಬಿದ್ದಾಗ ಕಾಳಜಿಯಿಂದ ಶುಶ್ರೂಷೆ ಮಾಡುತ್ತಾರೆ. ಮಲಗಿದ್ದಲ್ಲಿಗೇ ಊಟ ಉಪಾಹಾರ, ಔಷಧ ತಂದುಕೊಡುತ್ತಾರೆ. ತುಂಬಾ ನಿತ್ರಾಣವಿದ್ದರೆ ಕೈತುತ್ತು ಉಣಿಸುವುದೂ ಇದೆ. ಬೆಚ್ಚಗಿನ ಹೊದಿಕೆ ಹೊದಿಸಿ ಅಕ್ಕರೆ ತೋರುತ್ತಾರೆ. ಅಲ್ಲಿ ಬಂಧುಗಳಿಲ್ಲ ಎನ್ನುವ ನೋವಿಲ್ಲ – ಇದು ಪ್ರಶಾಂತ್ ಅವರ ಸ್ವಾನುಭವ.
ಸಿಕ್ಕಿಂನ ಭಯಾನಕ ದಿನಗಳು
ಸಿಕ್ಕಿಂನಲ್ಲಿ ಎರಡು ವರ್ಷ ಕೆಲಸ ಮಾಡಿದ ಅನುಭವ ಮರೆಯಲಾಗದ್ದು ಎನ್ನುತ್ತಾರೆ ಪ್ರಶಾಂತ್. ಹಿಮದಿಂದ ಆವೃತವಾದ ಬೆಟ್ಟಗಳಲ್ಲಿ ಆರೇಳು ಕಿ.ಮೀ. ನಡೆದು ಹೋಗಿ ಕರ್ತವ್ಯ ನಿರ್ವಹಿಸಬೇಕಿತ್ತು. ಕೂದಲೆಳೆಯಷ್ಟು ಎಚ್ಚರ ತಪ್ಪಿದರೂ ಪ್ರಪಾತವೇ ಗತಿ. ಮೊಬೈಲ್ ನೆಟ್‌ವರ್ಕ್ ಇಲ್ಲದೆ ಮನೆಯವರ ಜತೆ ಆಗಾಗ ಮಾತುಕತೆ ಸಾಧ್ಯವಿರಲಿಲ್ಲ. ಕುಡಿಯಲು ನೀರು ಬೇಕಾದರೆ ಬೆಟ್ಟದ ಕೆಳಕ್ಕೆ ಬರಬೇಕಿತ್ತು. ಆ ಚಳಿಯಲ್ಲಿ ಎರಡು ವರ್ಷ ಕಳೆದಿದ್ದೆವು. ದೇಶದ ಮೇಲಿನ ಪ್ರೀತಿ ಪರಿಸ್ಥಿತಿಯ ಕಾಠಿನ್ಯವನ್ನು ಮರೆಯಿಸುತ್ತಿತ್ತು ಎನ್ನುತ್ತಾರೆ ಪ್ರಶಾಂತ್.
ನೀರಿಗಾಗಿ ವೈರಿಗಳ ನಡುವೆ
2013ರಲ್ಲಿ ಜಮ್ಮು- ಕಾಶ್ಮೀರದಲ್ಲಿ ಸೇವೆ ಸಲ್ಲಿಸುವಾಗ ಕಠಿನ ಅನುಭವಗಳಾಗಿವೆ – ಪ್ರಶಾಂತ್ ಹೇಳುತ್ತಾರೆ. ಅವರಿದ್ದ ಪ್ರದೇಶ ಹಿಮದಿಂದ ಆವರಿಸಿರುತ್ತಿತ್ತು. ಒಮ್ಮೊಮ್ಮೆ ಬಿಸಿಲಿಗಾಗಿ ದಿನಗಟ್ಟಲೆ ಕಾದುದೂ ಇತ್ತು. ಹಿಮಗಡ್ಡೆಯನ್ನು ಬಿಸಿ ಮಾಡಿದ ನೀರೇ ಕುಡಿಯುವುದಕ್ಕೆ. ಸ್ನಾನ ತಿಂಗಳಿಗೆ ನಾಲ್ಕೈದು ಬಾರಿ ಮಾತ್ರ. ನೀರು ಸಂಗ್ರಹಿಸಲು ದುರ್ಗಮ ಹಾದಿಯಲ್ಲಿ ಹಲವು ಕಿ.ಮೀ. ತೆರಳಬೇಕಿತ್ತು. ಹೀಗೆ ನೀರು ಹಿಡಿಯುವಾಗ ನಮ್ಮ ಎದುರಿಗೇ ಪಾಕ್ ಸೇನೆಯವರು ಬಂದೂಕು ಹಿಡಿದು ನಿಂತಿರುತ್ತಿದ್ದರು. ಶೂಟ್ ಮಾಡುತ್ತೇವೆ ಎಂದು ಎಚ್ಚರಿಕೆ ಕೊಡುತ್ತಿದ್ದರು. ಆದರೆ ಹಿಂಬದಿಯಲ್ಲಿ ನಮ್ಮ ಸೇನಾ ತಂಡ ಇರುವುದರಿಂದ ಧೈರ್ಯವಾಗಿ ನೀರು ತುಂಬಿಕೊಂಡು ಹಿಂದಿರುಗುತ್ತಿದ್ದೆವು – ಪ್ರಶಾಂತ್ ವಿವರಿಸುತ್ತಾರೆ.
ರಜೆ ಮುಗಿಸಿ ಹೊರಡುವಾಗ ಮನಸ್ಸು ಆದ್ರ
ಸಾಮಾನ್ಯವಾಗಿ ವರ್ಷದಲ್ಲಿ ಒಂಬತ್ತು ತಿಂಗಳು ಕರ್ತವ್ಯ. ಮನೆ, ಮನೆಮಂದಿಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ. ವರ್ಷದಲ್ಲಿ ಒಂದು ಬಾರಿ ಸಿಗುವ ಮೂರು ತಿಂಗಳ ರಜೆ ಯಾವಾಗ ಬರುತ್ತದೆ, ಊರಿನಲ್ಲಿ ಏನೇನು ಮಾಡಬೇಕು ಎಂದು ಕನಸು ಕಟ್ಟುತ್ತಿರುತ್ತೇವೆ. ರಜೆ ಮಿಂಚಿನಂತೆ ಕರಗಿಹೋಗುತ್ತದೆ. ಮರಳಿ ರೈಲೇರುವಾಗ ಹೃದಯ ದ್ರವಿಸಿ ಕಣ್ಣಂಚಿನಲ್ಲಿ ಹನಿಗಟ್ಟುತ್ತದೆ- ಭಾವುಕ ರಾಗಿ ವಿವರಿಸುತ್ತಾರೆ ಪ್ರಶಾಂತ್.
ಭಾರತ – ಚೀನ ಶೀತಲ ಸಮರ ಸಂದರ್ಭದ ಸೇವೆ
2017ರಲ್ಲಿ ಭಾರತ ಮತ್ತು ಚೀನ ನಡುವೆ ಡೋಕ್ಲಾಂ ಗಡಿಯಲ್ಲಿ ಶೀತಲ ಸಮರ ಏರ್ಪಟ್ಟು ಉದ್ವಿಗ್ನ ಸ್ಥಿತಿ ಇತ್ತು. ಆಗ ಪ್ರಶಾಂತ್ ಕೂಡ ಅಲ್ಲಿದ್ದರು. ಚೀನವು ಭಾರತದ ಮೇಲೆ ಯುದ್ಧ ತಯಾರಿಯೊಂದಿಗೆ ಟಿಬೆಟ್‌ನಲ್ಲಿ ಸಮರಾಭ್ಯಾಸ ನಡೆಸುತ್ತಿತ್ತು. ಸದಾ ಹಿಮದಿಂದ ಕೂಡಿರುವ ದುರ್ಗಮ ಪ್ರದೇಶವದು. ಕ್ಯಾಂಪ್‌ನಿಂದ ಆರೇಳು ಕಿ.ಮೀ. ದೂರದ ಗಡಿಯಲ್ಲಿ ಚೀನೀಯರ ಚಟುವಟಿಕೆಗಳನ್ನು ಕಟ್ಟೆಚ್ಚರದಿಂದ ಗಮನಿಸುತ್ತ ಇದ್ದ ನಮ್ಮ ಸೈನಿಕರಿಗೆ ಕುಡಿಯುವುದಕ್ಕೆ ನೀರು, ಆಹಾರಗಳನ್ನು ಒಯ್ದುಕೊಡಬೇಕಿತ್ತು. ಒಮ್ಮೊಮ್ಮೆ ಬೆಳಗ್ಗೆ 4 ಗಂಟೆಗೆ ಎದ್ದು ಕೊರೆಯವ ಚಳಿಯಲ್ಲಿ ಆರೇಳು ಕಿ.ಮೀ. ನಡೆದು ಆಹಾರ ಕೊಟ್ಟು ಬರುತ್ತಿದ್ದರಂತೆ.
ಸೇನೆಯ ಸೇವೆ ಬಾಲ್ಯದ ನೋವನ್ನು ಮರೆಸಿದೆ
ನಮಗಾಗಿ ತಾಯಿ ಅನುಭವಿಸಿದ ಕಷ್ಟ, ನೋವುಗಳನ್ನು ವಿವರಿಸಿ ಹೇಳಲು ಸಾಧ್ಯವಿಲ್ಲ. ನನ್ನ ಬಾಲ್ಯದ ಶಿಕ್ಷಕರಾದ ನಾರಾಯಣ ಆಚಾರ್ಯರು, ನೆರೆಕರೆಯ ಮನೆಗಳ ವಿಶ್ವೇಶ್ವರ ಹೊಳ್ಳ, ಹರಿಕೃಷ್ಣ ಹೊಳ್ಳ, ಉಮೇಶ ಉಡುಪ, ಜನಾರ್ದನ ಹೊಳ್ಳ, ವಾಸುದೇವ ಹೆಬ್ಟಾರ್, ಶ್ರೀಮತಿ ಹೊಳ್ಳ, ಗುರುರಾಜ ಹೊಳ್ಳ ಮುಂತಾದವರು ಕಷ್ಟಕಾಲದಲ್ಲಿ ನೀಡಿದ ನೆರವು ಮರೆಯಲಾಗದ್ದು. ಸಹೋದರರು, ಸ್ನೇಹಿತರ ಸಹಕಾರ ಸಾಕಷ್ಟಿದೆ. ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ ಎನ್ನುವ ತೃಪ್ತಿ ನೋವುಗಳನ್ನು ಮರೆಯಿಸಿದೆ. ನಿವೃತ್ತಿಯ ಅನಂತರ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಬೇಕೆಂಬ ಆಶಯ ಇದೆ.
– ಪ್ರಶಾಂತ್ ಕೆ., ಯೋಧ
ಪುತ್ರನ ಬಗ್ಗೆ ಹೆಮ್ಮೆ
ಪ್ರಶಾಂತ್ ಸೇನೆ ಸೇರುತ್ತೇನೆ ಎಂದಾಗ ತುಂಬಾ ಭಯವಾಗಿತ್ತು. ಮೊದಲಿಗೆ ಬೇಡ ಎಂದಿದ್ದೆ. ಅನಂತರ ಧೈರ್ಯ ತಂದುಕೊಂಡು ಕಳುಹಿಸಿಕೊಟ್ಟೆ. ಈಗ ಸಮಾಜದಲ್ಲಿ ಅವನಿಗೆ ಸಿಗುತ್ತಿರುವ ಗೌರವ ನೋಡುವಾಗ ಖುಷಿಯಾಗುತ್ತದೆ.
– ಸುಶೀಲಾ, ಪ್ರಶಾಂತ್ ಅವರ ತಾಯಿ
— ರಾಜೇಶ್ ಗಾಣಿಗ ಅಚ್ಲಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ
Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.