ಪ್ರಬಂಧ: ಗಾಳ ಹಾಕುವ ಸಮಯ!


Team Udayavani, Feb 17, 2019, 12:30 AM IST

7.jpg

ತೇಜಸ್ವಿಯವರನ್ನು ಪದೇ ಪದೇ ಓದಿಕೊಂಡಿದ್ದಕ್ಕೊ ಏನೋ ಅದೊಂದು ತರಹದ ತಿಕ್ಕಲು ಪ್ರಯೋಗಗಳಿಗೆ ನನ್ನನ್ನೇ ನಾನು ಹಲವು ಬಾರಿ ಒಡ್ಡಿಕೊಂಡಿದ್ದೇನೆ! ಜೊತೆಗೆ ಅದನ್ನು ಹುರಿದಿಂಬಿಸಲು ಪಕ್ಕದ ಮನೆಯ ಮಿರಾಶಿ ಸದಾ ತಯಾರು. ಪಕ್ಷಿಗಳನ್ನು ಹಿಡಿದು ಸಾಕುವ ಪ್ರಯತ್ನವನ್ನು ಅವರು ಪುಸ್ತಕದಲ್ಲಿ ಬರೆದಂತೆ  ಪ್ರಯತ್ನಿಸಿ ಆರಂಭದಲ್ಲೇ ಸೋತು ಕೂತುವನು ನಾನು. ತೇಜಸ್ವಿಯವರೇ ಹಾಗೆ ಯೋಚನೆಗೆ ಒಂದಿಷ್ಟು ಮೇವು ಒದಗಿಸಿ ಅದನ್ನು ಪ್ರಯೋಗಿಸಲು ತಳ್ಳುವಂತಹ ವ್ಯಕ್ತಿತ್ವದವರು. ಪ್ರತಿಬಾರಿ ಅವರ ಲೇಖನಗಳನ್ನು, ಪುಸ್ತಕಗಳನ್ನು , ಕಥೆಗಳನ್ನು ಓದಿಕೊಂಡಾಗ ಹುಮ್ಮಸ್ಸು ತುಂಬಿ ಪ್ರಯೋಗಕ್ಕೆ ನಿಂತು ಬಿಡುತ್ತೇನೆ. ಮೊನ್ನೆ ಮೊನ್ನೆ ಅಂತಹದ್ದೇ ಪ್ರಯೋಗಕ್ಕೆ ಹೊರಟಿದ್ದು ಮೀನು ಹಿಡಿಯುವ ಮಹಾನ್‌ ಕಾರ್ಯಕ್ಕೆ.  ಫಿಶಿಂಗ್‌ ತೇಜಸ್ವಿಯವರಿಗೆ ಬಹು ಪ್ರಿಯವಾದ ಹವ್ಯಾಸಗಳಲ್ಲೊಂದು.

ಬಹುಶಃ ನೀವು ನಕ್ಕು ಬಿಡುತ್ತಿರೇನೊ? ಅದರಲ್ಲೇನಿದೆ ಮೀನು ಹಿಡಿಯುವುದು! ಅದ್ಯಾವ ಘನ ಕಾರ್ಯ ಅಂದುಕೊಳ್ಳುತ್ತಿರೇನೊ? ಇರಬಹುದು. ಆದರೆ, ಇದುವರೆಗೂ ಮೀನನ್ನೇ ಮುಟ್ಟಿರದ ನನ್ನಂಥವನಿಗೆ ಬಲು ಮೋಜಿನ ಕಾರ್ಯವಾಯಿತು. ಚಿಕ್ಕವನಿದ್ದಾಗ ನಮ್ಮೂರ ಕೆರೆಯಲ್ಲಿ ಹೆಂಗಸರ ಸೀರೆಯನ್ನು ಬಲೆಯಂತೆ ಚೆಲ್ಲಿ ಮೀನು ಹಿಡಿಯುವುದನ್ನು ನೋಡಿದ್ದೆ! ಯಾವುದೋ ಸೀರೆಯನ್ನೊ, ಪಂಚೆಯನ್ನೊ ಅಥವಾ ಒಂದು ಹೊಸ ಬಲೆಯನ್ನೊ ತಂದು ಈ ಮಹಾಕಾರ್ಯಕ್ಕೆ ಇಳಿದು ಬಿಡುವ ಯೋಚನೆ ನನ್ನಲ್ಲಿತ್ತು ಅಂದುಕೊಂಡ್ರಾ? ಇಲ್ಲ, ಖಂಡಿತ ಇಲ್ಲ! ಅದೆಂತಹ ಫಿಶಿಂಗ್‌? ಮೀನು ತಿನ್ನುವ ಚಪಲಕ್ಕೆ ಅರ್ಜೆಂಟಾಗಿ ಮಾಡಿಕೊಂಡ ಅನುಕೂಲಗಳವು. ನನ್ನ ಉದ್ದೇಶ ಬೇರೆಯದೇ ಆಗಿತ್ತು. ಗಾಳವನ್ನು ಹರಡಿಕೊಂಡು, ನೀರಿನ ಹಳ್ಳದ ದಡದ ಮೇಲೆ ಕೂತುಕೊಂಡು, ಹೀಗೆ ಮೌನವಾಗಿ ಯೋಚಿಸುತ್ತ, ಚಿಂತಿಸುತ್ತ, ಜೋಡಿ ಜೋಡಿಯಾಗಿ ಅಲೆಯುವ ಮೀನುಗಳನ್ನು ಕಣ್‌ ತುಂಬಿಕೊಳ್ಳುತ್ತಾ ಢ‌ಮಕ್‌ ಅಂತ ಗಾಳಕ್ಕೆ ಬೀಳುವ ಮೀನನ್ನು ಪಟ್ಟಂತೆ ಮೇಲೆಸೆದು ಅದನ್ನು ನೋಡಿ ಮತ್ತೆ ನೀರಿಗೆ ಬಿಡುವುದು. ಮೀನು ಹಿಡಿಯುವ ಕ್ರಿಯೆಯಲ್ಲೇ ಆನಂದ ಪಡೆಯುವುದು ನನ್ನ ಉದ್ದೇಶವಾಗಿತ್ತು. 

ಇಂತಹ ಪ್ರಯತ್ನಗಳಿಗೆ ಸದಾ ಜೈ ಅನ್ನುತ್ತಿದ್ದ ಮಿರಾಶಿ ಇವತ್ತು ಈ ಯೋಜನೆಗೆ ತುಸು ಹುರುಪಿನಿಂದಲೇ ಎದ್ದ ! ಅವನ ಒಂದು ಕರಾರಿಗೆ ನಾನು ಒಪ್ಪಿಕೊಳ್ಳಲೇ ಬೇಕಾಯ್ತು. ಹಿಡಿದ ಮೀನನ್ನು ವಾಪಸು ನೀರಿಗೆ ಬಿಡಬಾರದು. ಅದನ್ನು ಅಲ್ಲಿಯೇ ಸುಡಬೇಕು. ಅದಕ್ಕೆ ಬೇಕಾದ ಉಪ್ಪು-ಕಾರದ ವ್ಯವಸ್ಥೆಯನ್ನು ಮಾಡಿಕೊಳ್ಳುವುದಾಗಿಯೂ, ಇಷ್ಟವಿದ್ದರೆ ನನಗೂ ಕೂಡ ರುಚಿ ನೋಡಲು ಕೊಡುವುದಾಗಿಯೂ ಭರವಸೆ ಇತ್ತ! ಅದರ ರುಚಿ, ಉಪ್ಪು-ಖಾರ ಮಿಶ್ರಿತವಾದಾಗ ಹೊಮ್ಮುವ ಒಂದು ವಿಶೇಷ ವಾಸನೆಯನ್ನು ನನ್ನ ಮುಂದೆ ಮಾತಿನಲ್ಲೇ ಹರಡಿ, ತಾನು ಕೂಡ ಬಾಯಲ್ಲಿ ಜಿನುಗಿದ ನೀರನ್ನು ಚಪ್ಪರಿಸಿಕೊಂಡ. 

ಈಗ ನಮ್ಮ ಮುಂದೆ ಇದ್ದ ಪ್ರಶ್ನೆ ಗಾಳ ಹುಡುಕುವುದು. ಎಲ್ಲಿ ಸಿಗುತ್ತೆ? ಅದರಲ್ಲೂ ಇಂತಹ ನಗರದಲ್ಲಿ ಸಿಗುತ್ತಾ? ಅಷ್ಟಕ್ಕೂ ಗಾಳ ಕೇಳಲು ಹೋದರೆ ನಮ್ಮನ್ನು ಅದ್ಯಾವ ರೀತಿಯಲ್ಲಿ ನೋಡಬಹುದೆಂದು ಮನಸ್ಸಿನಲ್ಲೇ ಕಲ್ಪಿಸಿಕೊಂಡೆ. ಕಳೆದ ತಿಂಗಳಷ್ಟೇ ನಗರದ ಸರ್ಕಾರಿ ಶಾಲೆಯ ಜಗುಲಿಯ ಮೇಲೆ ಉಳಿದಿದ್ದ ಒಂದು ಅಲೆಮಾರಿ ಜನಾಂಗದವರ ಬಳಿ ಬಲೆ ಇರುವುದನ್ನು ಕಂಡಿದ್ದೆ. ಈಗ ಅವರು ಇದಿದ್ದರೆ ಗಾಳ ಕೇಳಬಹುದಿತ್ತು. ಬಲೆಯನ್ನು ಇಟ್ಟುಕೊಂಡವರು ಗಾಳವನ್ನು ಇಟ್ಟುಕೊಳ್ಳದೇ ಇರುತ್ತಾರೆಯೇ? ಆದರೆ ಈಗ ಅದರ ಬಗ್ಗೆ ಯೋಚಿಸಿ ಪ್ರಯೋಜನವಿರಲಿಲ್ಲ. ಅವರು ಅಲ್ಲಿಲ್ಲ ಈಗ. ಎಲ್ಲಿ ಹೋದರೊ ಏನೊ! ಮೀನು ತಿನ್ನುವ ಆಸೆಯಲ್ಲಿದ್ದ ಮಿರಾಶಿ, “ಅಂಗಡಿಯಲ್ಲಿ ವಿಚಾರಿಸೋಣ, ಇಲ್ಲ ಅಂದರೆ ನಾಲ್ಕೈದು ದಿನದಲ್ಲಿ ತರ್ಸಿಕೊಡಿ ಅಂತ ಕೇಳ್ಳೋಣ’ ಅಂದ. ನನಗೂ ಸರಿಯೆನಿಸಿತು. 

ಭೇಟಿ ಕೊಟ್ಟ ಮೊದಲೆರಡು ಅಂಗಡಿಗಳಲ್ಲಿ ಗಾಳದ ಸುಳಿವಿಲ್ಲ! “ಹೋಗ್ರಿ, ಹೋಗ್ರಿ ಅವೆಲ್ಲಿ ಸಿಗ್ತಾವೆ ಈಗ ಅಂದ್ರು. ಆನ್‌ಲೈನ್‌ನಲ್ಲಿ ಟ್ರೆ„ ಮಾಡಿ ಸಿಗಬಹುದು’ ಅಂತ ಉಚಿತ ಸಲಹೆ ಕೊಟ್ರಾ. ನನಗೂ ಸರಿಯೆನಿಸಿತು. ಮಿರಾಶಿ ಅದಾಗಲೇ ಮುಂದಿನ ಅಂಗಡಿಯಲ್ಲಿ ನಿಂತಿದ್ದ. ಅವನ ಮುಖದಲ್ಲಿನ ಗೆಲುವು ಕಂಡು ಸಿಕ್ಕಿರಬಹುದೆಂದು ಭಾವಿಸಿದೆ. ಸಿಕ್ಕಿತು. ಆದರೆ, ಪೂರ್ತಿ ಗಾಳವಲ್ಲ. ತುದಿಯ ಕೊಕ್ಕೆ ಮಾತ್ರ. “ಇಷ್ಟು ಸಿಕ್ತಲ್ವ, ಇನ್ಮುಂದೆ ನಾ ನೋಡಿಕೊಳ್ತೀನಿ’ ಅಂದ. ಅದಕ್ಕೊಂದು ನೈಲಾನ್‌ ದಾರ, ಒಂದಿಷ್ಟು ಉದ್ದದ ಥರ್ಮಕೋಲ್‌ ಕೊಂಡು ಮನೆಯ ಕಡೆ ಹೆಜ್ಜೆ ಹಾಕಿದೆವು. 

ಕಟ್ಟಿ, ಬಿಚ್ಚಿ, ಎಳೆದಾಡಿ, ಕೂರಿಸಿ ಹೇಗೊ ಮಾಡಿ ಒಂದು ಗಾಳ ರೆಡಿ ಮಾಡಿದೆವು. ತೇಜಸ್ವಿಯವರು ಗಾಳದ ತುದಿಗೆ ಹುಳುವನ್ನು ಚುಚ್ಚುವುದನ್ನು ಓದಿದ್ದೆ. ನಾನು ಮಿರಾಶಿಗೆ ಅವುಗಳನ್ನು ಈಗ ಎಲ್ಲಿ ಹುಡುಕುವುದು ಎಂದೆ. ಅವನಿಗೂ ಕಸಿವಿಸಿಯಾಯ್ತು ಅನಿಸುತ್ತೆ. ನಾನು ಶೃಂಗೇರಿಯಲ್ಲಿ ಮೀನುಗಳಿಗೆ ಪುರಿ ಹಾಕುವುದನ್ನು ನೋಡಿದ್ದೆ. ನಾವು ಒಂದಿಷ್ಟು ಪುರಿ, ಪಪ್ಸ್‌, ಚಿಪ್ಸ್‌, ಗೋಬಿ ಮುಂತಾದ ತರಹೇವಾರಿ ತಿಂಡಿಗಳನ್ನು ಕಟ್ಟಿಸಿಕೊಂಡು ಹೊರಡುವ ತಯಾರಿ ಮಾಡಿದೆವು. ಸಂಜೆ ನಾಲ್ಕು ಗಂಟೆಗಾಗಲೇ ಊರಿನ ಬಳಿಯ ದೊಡ್ಡಕೆರೆಯ ಹತ್ತಿರ ನಮ್ಮ ತಿಂಡಿಗಳು ಮತ್ತು ಗಾಳದೊಂದಿಗೆ ಹಾಜರಿದ್ದೆವು. 

“ಏನೊ ಮಿರಾಶಿ ಒಂದೂ ಮೀನು ಕಾಣ್ತಿಲ್ಲವಲ್ಲೊ’ ಅಂದೆ. “ಲೋ ಮೀನು ಇರೋದು ನೀರೊಳಗೆ, ನೀರಿನ ಮೇಲೆಲ್ಲ ತಿಂಡಿ ಎಸೆದ್ರೆ ಹೇಗೆ ಬರ್ತಾವೆ ನೋಡು’ ಅಂದ. ನಾನು ನನ್ನ ಕೈಯಲ್ಲಿದ್ದ ಪುರಿ ತಗೆದುಕೊಂಡು ಒಂದಿಷ್ಟನ್ನು ನೀರಿಗೆ ಎಸೆದೆ! ತೇಲಿದ ಪುರಿ ತಿನ್ನಲು ಆ ಕಡೆ ಈ ಕಡೆ ಈಜಿ ಹೋದವೇ ಹೊರತು ಒಂದು ಮೀನೂ ನಮ್ಮ ಕಡೆ ಬರಲಿಲ್ಲ. ಕೊನೆಗೆ ಗೋಬಿಯ ಒಂದು ತುಂಡನ್ನು ಗಾಳದ ಕೊಕ್ಕೆಗೆ ಸಿಕ್ಕಿಸಿ ನೀರಿನಲ್ಲಿ ಬಿಟ್ಟು ಕುಳಿತುಕೊಂಡೆವು. “ಹೋಗು, ನೀನು ಒಂದಿಷ್ಟು ಸೌದೆ ಎತ್ತಿಕೊಂಡು ಬಾ, ಮೀನು ಸುಡಬೇಕು’ ಅಂದ ಮಿರಾಶಿ. “ಇಲ್ಲ ಇಲ್ಲ, ಮೀನು ನಾನೇ ಹಿಡಿತೀನಿ ನೀನು ಹೋಗು’ ಅಂದೆ. “ನಿಂಗೆ ಹಿಡಿಯೋಕೆ ಬರಲ್ಲ ಹೋಗು’ ಅಂದ. “ಇಲ್ಲ ಇಲ್ಲ, ನಾನು ಇದರ ಬಗ್ಗೆ ಓದಿಕೊಂಡಿದ್ದೀನಿ ನನಗೆ ಗೊತ್ತಿದೆ’ ಅಂದೆ. 

ಕೋಪದಲ್ಲೇ ಎದ್ದು ಹೋದ. ಗಾಳ ಹಿಡಿದುಕೊಂಡು ಕೂತೆ. ಮುಂದೆ ಬಂಡೆಗೆ ಸೇರಿದಂತೆ ಮುಕ್ಕಾಲು ಪಾಲು ಆವರಿಸಿದ ನೀರು, ಏಕಾಂತ, ಸಂಜೆಯ ತಣ್ಣನೆ ಗಾಳಿ, ವಾಕ್‌ ಹೊರಟ ಅಲೆಗಳು, ದೂರದಲ್ಲಿ ಈಜುತ್ತಿದ್ದ ಬೆಳ್ಳಕ್ಕಿಗಳು, ಮೇಲೆ ಮನೆ ಕಡೆಯ ಹಾದಿ ಹಿಡಿದಿದ್ದ ಬಣ್ಣ ಬಣ್ಣದ ಹಕ್ಕಿಗಳು ಎಂತಹ ಸುಂದರ ದೃಶ್ಯ ಇದು. ಕುವೆಂಪು, ತೇಜಸ್ವಿಯವರದು ಯಾಕೆ ಆ ಪರಿಯ ವ್ಯಕ್ತಿತ್ವದ ರೂಪುಗೊಂಡಿದ್ದು ಅಂತ ಗೊತ್ತಾಗತೊಡಗಿತು. ನನ್ನಲ್ಲಿ ಆ ಏಕಾಂತಕ್ಕೆ ಹಲವು ಯೋಚನೆಗಳು ಆರಂಭವಾದವು. ಪ್ರಕೃತಿಯೊಂದಿಗೆ ಬೆರೆತು ಹೋದೆನಾ? ಗೊತ್ತಿಲ್ಲ. ಕೈಯೊಳಗೆ ಗಾಳವಿದೆ. ತಾನು ಹಿಡಿಯಲು ಬಂದಿರುವುದು ಮೀನು ಅನ್ನುವುದು ಕೂಡ ನನಗೆ ಅರಿವಿಲ್ಲದಂತೆ ಅಲ್ಲಿನ ಪರಿಸರದಲ್ಲಿ ಮುಳುಗಿ ಹೋದೆ. ಹಾಗೆ ಎಷ್ಟು ಹೊತ್ತು ಕಳೆದೆನೋ ಗೊತ್ತಿಲ್ಲ. 

ಕೈಯೊಳಗಿನ ಗಾಳ ಮಿಸಕಾಡಿದಂತಾಯ್ತು. ರಪ್ಪನೆ ನನ್ನ ಮೀನು ಹಿಡಿಯುವ ಪ್ರಪಂಚಕ್ಕೆ ಬಂದು ಬೀಳುವ ಹೊತ್ತಿಗೆ ಮೀನೊಂದು ಗೋಬಿಯ ತುಂಡು ಕಚ್ಚಿಕೊಂಡು ಹೋಗುವುದನ್ನು ಕಂಡೆ! ಗಾಳವನ್ನು ಮೇಲೆತ್ತಿದೆ. ಗಾಳದ ತುದಿ ಖಾಲಿ ಖಾಲಿ. 

ಅದೇ ಹೊತ್ತಿಗೆ ಸೌದೆೆ ಹೊತ್ತುಕೊಂಡ ಬಂದ ಮಿರಾಶಿ. “ಎಷ್ಟು ಸಿಕೊÌ!?’ ಅಂದ. ನನ್ನ ಮುಖವನ್ನು ನೋಡಿಯೇ ತೀರ್ಮಾನಿಸಿ ಬಿಟ್ಟ. “ನನಗೆ ಗೊತ್ತಿತ್ತು, ನಿನ್ನಿಂದ ಇದು ಆಗಲ್ಲ ಅಂತ’ ಅಂದು ನನ್ನನ್ನು ಎಬ್ಬಿಸಿದ. ಅವನೇ ಕೂತು ಮತ್ತೂಂದು ತುಂಡು ಗೋಬಿ ಚೂರನ್ನು ಕೊಕ್ಕೆಗೆ ಸಿಕ್ಕಿಸಿ ಗಾಳ ಚೆಲ್ಲಿ ಕೂತ. ನಾನು ಅವನ ಪಕ್ಕ ಸುಮ್ಮನೆ ಕೂತೆ. ತಂದ ತಿನಿಸುಗಳನ್ನು ತಿನ್ನುತ್ತ, ಮಾತಾಡುತ್ತ ಕುಳಿತುಕೊಂಡೆವು. “ಮಾತಿರಲಿ, ಗಾಳದ ಕಡೆ ಗಮನ ಕೊಡು’ ಅಂದೆ. “ನಂಗೆಲ್ಲ ಗೊತ್ತಾಗುತ್ತೆ ನೀ ಸುಮ್ನೆ ತಿನ್ನು’ ಅಂದ. ಅರ್ಧ ಗಂಟೆಯಾದರೂ ಮೀನು ಬೀಳದೆ ಇರುವುದಕ್ಕೆ ಗಾಳವನ್ನು ಎತ್ತಿ ನೋಡಿದರೆ ಅಲ್ಲಿ ಗೋಬಿಯ ತುಣುಕೇ ಇರಲಿಲ್ಲ. ಏನೋ, ಕಾಲ ಬದಲಾದಂತೆ ಮೀನುಗಳು ಕೂಡ ತುಂಬಾ ಬುದ್ಧಿವಂತ ಆಗಿರಬೇಕು ಅಂದೆ. ಅವನ ಮುಖವೂ ಪೆಚ್ಚಾಗಿತ್ತು. ಇನ್ನೊಮ್ಮೆ ಅದೇ ಪ್ರಯತ್ನ ಮಾಡಿದೆವು. ನಮ್ಮ ಅದೃಷ್ಟಕ್ಕೆ ಒಂದೇ ಒಂದು ಸಣ್ಣ ಮೀನು ಕೂಡ ಸಿಗಲಿಲ್ಲ. ಸಂಜೆ ಕಳೆದು ರಾತ್ರಿ ಆವರಿಸ ತೊಡಗಿತು. ಮನೆಯ ಕಡೆ ಹೆಜ್ಜೆ ಹಾಕದೇ ವಿಧಿ ಇರಲಿಲ್ಲ. ಮಿರಾಶಿ ತಂದು ಹಾಕಿದ್ದ ಸೌದೆ ಮಿರಾಶಿಯನ್ನು ಅಣಕಿಸಿದಂತಿತ್ತು. ಇಬ್ಬರು ಪರಸ್ಪ‌ರ ಬೈದುಕೊಂಡು ನಮ್ಮ ಅಸಹಾಯಕತೆಯನ್ನು ಮುಚ್ಚಿಕೊಂಡು ಬಂದೆವು. 

ಪ್ರಕೃತಿಯೇ ಹಾಗೆ ಅನಿಸಿತು! ಅದು ಎಷ್ಟೊಂದು ನಿಗೂಢ, ಕುತೂಹಲಕಾರಿ. ಅಲ್ಲಿ ಯಾವುದೂ ಪುಸ್ತಕದ ಮೇಲಿರುವಂತೆ ನಡೆಯುವುದಿಲ್ಲ. ಕೇವಲ ಒಂದೇ ಒಂದು ಸಂಜೆಗೆ ಸಾಕು ಅನಿಸಿದ ಕಾರ್ಯದಿಂದ ತೇಜಸ್ವಿಯವರ ತಾಳ್ಮೆಯ ಅರಿವಾಯ್ತು. ಅವರ ಹತ್ತುಹಲವು ಪ್ರಯೋಗಗಳು ಪ್ರಕೃತಿಯೊಂದಿಗೆ ಬೆರೆತಂಥವು. ಪ್ರಕೃತಿ ಬಯಸುವುದು ತಾಳ್ಮೆಯನ್ನು. ಅದು ಧ್ಯಾನ ಸ್ಥಿತಿ. ಅಲ್ಲಿ ಮುಳುಗಿದವನಿಗೆ ಮಾತ್ರ ಆಳದ ಮುತ್ತುಗಳು ಸಿಗಲು ಸಾಧ್ಯ! 

ಸದಾಶಿವ ಸೊರಟೂರು

ಟಾಪ್ ನ್ಯೂಸ್

Parameahwar

Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್‌

UP-Killed

Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್‌: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ

CM-siddu

Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ

Coffe-Grower

Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್‌ ಗೋಯಲ್‌

V.Somanna

Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ

Ravikumar

Session: ಕಾಂಗ್ರೆಸಿಗರ ವೀಡಿಯೋಗೆ ಯಾವ ಬೆಲೆಯೂ ಇಲ್ಲ: ಎಂಎಲ್‌ಸಿ ರವಿಕುಮಾರ್‌

Parliament: ಸಂಸದರ ತಳ್ಳಾಟ: ಇಂದು ಸಂಸತ್‌ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?

Parliament: ಸಂಸದರ ತಳ್ಳಾಟ: ಇಂದು ಸಂಸತ್‌ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Parameahwar

Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್‌

UP-Killed

Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್‌: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ

CM-siddu

Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ

Coffe-Grower

Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್‌ ಗೋಯಲ್‌

V.Somanna

Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.