ಉಗ್ರ ಕೃತ್ಯ ಸಮರ್ಥಿಸಿಕೊಂಡವರ ವಿರುದ್ಧ ದೂರು
Team Udayavani, Feb 17, 2019, 6:23 AM IST
ಬೆಂಗಳೂರು: ಪುಲ್ವಾಮದಲ್ಲಿ ನಡೆದ ಉಗ್ರರ ಕೃತ್ಯವನ್ನು ಸಮರ್ಥಿಸಿಕೊಂಡು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡುತ್ತಿರುವ ದುಷ್ಕರ್ಮಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಾಗೇಶ್ ಎಂಬುವರು ಶನಿವಾರ ಸೈಬರ್ ಅಪರಾಧ ಠಾಣೆಗೆ ದೂರು ನೀಡಿದ್ದಾರೆ.
ಪುಲ್ವಾಮ ದುರ್ಘಟನೆಗೆ ಇಡೀ ದೇಶವೇ ಕಂಬನಿ ಮಿಡಿದಿದೆ. ಆದರೆ, ಕೆಲ ಕಿಡಿಗೇಡಿಗಳು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಕೃತ್ಯವನ್ನು ಸಮರ್ಥಿಸಿಕೊಂಡು ದೇಶದ್ರೋಹದ ಕೆಲಸ ಮಾಡುತ್ತಿದ್ದಾರೆ. ಅಂತಹ ದುಷ್ಕರ್ಮಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನಾಗೇಶ್ ಒತ್ತಾಯಿಸಿದ್ದಾರೆ.
ಆಬೀದ್ ಮಲಿಕ್, ಅಬ್ದುಲ್ ಹನೀಫ್, ಸುಲ್ತಾನ್ ಅಹ್ಮದ್, ಸಲ್ಮಾನ್ ನಿಸಾರ್, ಅಮೀರ್ ಷರೀಫ್ ಹಾಗೂ ಉಮೇರ್ ಘೋಷ್ ಎಂಬ ವ್ಯಕ್ತಿಗಳು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಯೋಧರ ಮೇಲಿನ ದಾಳಿಯನ್ನು ಸಮರ್ಥಿಸಿಕೊಂಡು ಪೋಸ್ಟ್ ಮಾಡಿದ್ದು, ಸಂಭ್ರಮಾಚರಣೆ ಮಾಡಿದ್ದಾರೆ ಎಂದು ನಾಗೇಶ್ ದೂರಿನಲ್ಲಿ ಆರೋಪಿಸಿದ್ದಾರೆ.
ವಕೀಲರಿಂದ ದೂರು: ಪುಲ್ವಾಮ ದಾಳಿಯನ್ನು ಸಮರ್ಥಿಸಿಕೊಂಡು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ ಜಮ್ಮು-ಕಾಶ್ಮೀರ ಮೂಲದ ಆಬಿದ್ ಮಲಿಕ್ ವಿರುದ್ಧ ಭಾರತೀಯ ದಂಡ ಸಂಹಿತೆ ಹಾಗೂ ಐಟಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಬೇಕು ಎಂದು ವಕೀಲ ಉಮೇಶ್ ಕುಮಾರ್ ಶನಿವಾರ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.
ಪುಲ್ವಾಮದಲ್ಲಿ ಆತ್ಮಾಹುತಿ ದಾಳಿ ಮಾಡಿದ ಉಗ್ರನ ಪರವಾಗಿ ಫೋಸ್ಟ್ ಪ್ರಕಟ ಮಾಡಿರುವ ಆಬಿದ್ ಮಲಿಕ್, ಉಗ್ರನ ಫೋಟೋ ಹಾಕಿ ಆತನ ಪರವಾಗಿ ಶ್ರದ್ಧಾಂಜಲಿ ಅರ್ಪಿಸಿ ಇದು ನಿಜವಾದ ಸರ್ಜಿಕಲ್ ಅಟ್ಯಾಕ್ ಎಂದು ಬರೆದುಕೊಂಡಿದ್ದ.
ಜಮ್ಮು-ಕಾಶ್ಮೀರದಲ್ಲಿರುವ ಆಬಿದ್ ಮಲಿಕ್: ಉಗ್ರರ ಪರ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದ ಆಬಿದ್ ಮಲಿಕ್ ಸದ್ಯ ಜಮ್ಮು-ಕಾಶ್ಮೀರದಲ್ಲಿ ತಲೆಮಮರೆಸಿಕೊಂಡಿದ್ದಾನೆ ಎಂದು ಎಚ್‌ಎಎಲ್ ಪೊಲೀಸರು ತಿಳಿಸಿದ್ದಾರೆ. ಆತ ಜಮ್ಮು-ಕಾಶ್ಮೀರದಿಂದಲೇ ಕೃತ್ಯ ಎಸಗಿರುವುದು ತನಿಖೆ ವೇಳೆ ತಿಳಿದುಬಂದಿದೆ.
ಈ ಕುರಿತು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಈ ಹಿಂದೆ ಆಬಿದ್ ಮಲಿಕ್ ಕುಮಾರಸ್ವಾಮಿ ಲೇಔಟ್‌ನ ಬಾಡಿಗೆ ಮನೆಯಲ್ಲಿ ವಾಸವಿದ್ದ ಎಂಬ ಮಾಹಿತಿಯಿದ್ದು, ಈ ಹಿನ್ನೆಲೆಯಲ್ಲಿ ಮನೆ ಮಾಲೀಕನನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಬೇಕಿದೆ ಎಂದು ಪೊಲೀಸರು ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.