ಪಟ್ಟದ ಕಿತ್ತಾಟದಲ್ಲಿ “ಕೋಟಿಲಿಂಗ’ ಅನಾಥವಾಗ್ತಿದೆಯಾ?
Team Udayavani, Feb 17, 2019, 7:34 AM IST
ಬಂಗಾರಪೇಟೆ: ಜಿಲ್ಲೆಯ ಕಮ್ಮಸಂದ್ರದ ವಿಶ್ವ ವಿಖ್ಯಾತಿ ಶ್ರೀಕೋಟಿಲಿಂಗೇಶ್ವರ ದೇಗುಲದ ಉತ್ತರಾಧಿಕಾರಕ್ಕೆ ಹಾಲಿ ಕಾರ್ಯದರ್ಶಿ ಕೆ.ವಿ.ಕುಮಾರಿ ಹಾಗೂ ಸ್ವಾಮೀಜಿಗಳ ಪುತ್ರ ಡಾ.ಶಿವಪ್ರಸಾದ್ ನಡುವೆ ನಡೆಯುತ್ತಿರುವ ಶೀತಲ ಸಮರ ಕಗ್ಗಂಟಾಗಿದ್ದು ದೇಗುಲಕ್ಕೆ ಅನಾಥವಾಗುವ ಭೀತಿ ಕಾಡುತ್ತಿದೆ.
ಡಿ.14 ರಂದು ಶ್ರೀಕೋಟಿಲಿಂಗೇಶ್ವರ ದೇಗುಲದ ಧರ್ಮಾಧಿಕಾರಿ ಶ್ರೀ ಕಮಲ ಸಾಂಭವ ಶಿವಮೂರ್ತಿ ಸ್ವಾಮೀಜಿ ಲಿಂಗೈಕ್ಯರಾಗಿದ್ದು ದೇಗುಲ ಮುನ್ನಡೆಸುವ ವಿಚಾರದಲ್ಲಿ ಇವರಿಬ್ಬರ ನಡುವೆ ತಗಾದೆ ಏರ್ಪಟ್ಟಿದೆ. ಇದರಿಂದಾಗಿ ದೇಗುಲದ ವಾಸ್ತವ ಸ್ಥಿತಿ ತೀರಾ ಕೆಳಮಟ್ಟಕ್ಕೆ ಬದಲಾಗುತ್ತಿರುವುದರಿಂದ ಭಕ್ತಾದಿಗಳಿಗೆ ಬೇಸರವನ್ನುಂಟು ಮಾಡಿದೆ. ಅಲ್ಲದೇ, ನಿತ್ಯ ಬರುವ ಪ್ರವಾಸಿಗರಿಗೆ ಕಿರಿಕಿರಿಯಾಗಿದೆ.
ದೇಗುಲದಲ್ಲಿ ಶಾಂತಿ ನೆಲೆಸಬೇಕೆಂದು ಕೋಲಾರದ ಸಂಸದ ಕೆ.ಎಚ್.ಮುನಿಯಪ್ಪ ಅಧ್ಯಕ್ಷತೆಯಲ್ಲಿ 2 ಸುತ್ತಿನ ಮಾತುಕತೆ ನಡೆದಿದೆ. ಆದರೆ, ಶ್ರೀಗಳ ಪುತ್ರ ಡಾ.ಶಿವಪ್ರಸಾದ್ ಹೇಳಿದಂತೆ ನಡೆದುಕೊಂಡಿಲ್ಲ. ಸ್ವಾಮೀಜಿಗಳ ಪುತ್ರ ಡಾ.ಶಿವಪ್ರಸಾದ್ ಹಾಗೂ ಪುತ್ರಿ ಅನುರಾಧಾ ದೇಗುಲ ಆದಾಯ ವಸೂಲಿ ಮಾಡಲು ಬೆಂಗಳೂರಿನಿಂದ ಇಡೀ ಕುಟುಂಬವೇ ಕಮ್ಮಸಂದ್ರದ ದೇಗುಲದ ಅತಿಥಿಗೃಹದಲ್ಲಿ ವಾಸ್ತವ್ಯ ಹೂಡಿದೆ.
ದೇಗುಲವನ್ನು ಸ್ವಾಮೀಜಿಗಳ ಆಶಯಂತೆ ನಡೆಸದೇ ಇರುವುದರಿಂದ ದೇಗುಲದಲ್ಲಿ ಶಾಂತಿ -ನೆಮ್ಮದಿ ಮಾಯವಾಗಿದೆ.ಎಂದು ಭಕ್ತರು ಆರೋಪಿಸುತ್ತಿದ್ದಾರೆ. ಸಂಸದ ಕೆ.ಎಚ್.ಮುನಿಯಪ್ಪ ಅವರು ಕೊನೆ ಮಾತುಕತೆಯಾಗಿ 5 ಸದಸ್ಯರ ತಂಡ ರಚಿಸಿ ದೇಗುಲ ನಿರ್ವಹಣೆಗೆ ಸೂಚನೆ ನೀಡಿದ್ದರು.
ಸ್ವಾಮೀಜಿಗಳ ಸಹೋದರ ನಾರಾಯಣಮೂರ್ತಿ, ಪುತ್ರ ಡಾ.ಶಿವಪ್ರಸಾದ್, ಕೆ.ವಿ.ಕುಮಾರಿ, ರಾಜ್ಯ ಹಿಂದುಳಿದ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕನಾಥ್ ಹಾಗೂ ಬೆಂಗಳೂರಿನ ಬಾಲ್ಡ್‌ವಿನ್ ಶಾಲೆ ಮುಖ್ಯಸ್ಥ ವೇಣುಗೋಪಾಲ್‌ರ ತಂಡದಲ್ಲಿ ಸ್ವಾಮೀಜಿಗಳ ಪುತ್ರ ಡಾ.ಶಿವಪ್ರಸಾದ್ ಗೌರವ ನೀಡದೇ ಹಾಗೂ ಇವರ ಸಲಹೆ ನಿರಾಕರಿಸಿ ಏಕಾಂಗಿಯಾಗಿ ವರ್ತಿಸುತ್ತಿರುವುದರಿಂದ ಅಸಮಾಧಾನ ಭುಗಿಲೆದ್ದಿದೆ.
ಸಾಂಭವ ಶಿವಮೂರ್ತಿ ಸ್ವಾಮೀಜಿ ತಮ್ಮ ಕುಟುಂಬದೊಂದಿಗೆ 1996ರಿಂದಲೂ ದೂರವಾಗಿದ್ದು ದೇಗುಲದ ನಿರ್ಮಾಣದಲ್ಲಿ ವಿರೋಧಿಗಳಾಗಿದ್ದರಿಂದ ಬೆಂಗಳೂರಿನಲ್ಲಿದ್ದ ತನ್ನ ಆಸ್ತಿಯನ್ನು ವಿಭಾಗ ಮಾಡಿ 1996ರಲ್ಲಿದ್ದ ಆಸ್ತಿಯಂತೆ ಕುಟುಂಬವನ್ನು ಬಿಡುಗಡೆ ಮಾಡಿದ್ದಾರೆ. ಈ ಕಾರಣದಿಂದ ಒಮ್ಮೆಯೂ ಇವರ ಕುಟುಂಬ 30 ವರ್ಷಗಳಲ್ಲಿ ಭಾಗಿಯಾಗಿಲ್ಲ. ಕಮ್ಮಸಂದ್ರದ ಶ್ರೀಕೋಟಿಲಿಂಗೇಶ್ವರ ದೇಗುಲಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಸ್ವಾಮೀಜಿಗಳ ಪತ್ನಿ, ಮಗ ಹಾಗೂ ಪುತ್ರಿ ಬಿಡುಗಡೆ ಪತ್ರ ಬರೆದುಕೊಟ್ಟಿದ್ದಾರೆ.
ಕುಟುಂಬದ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಶ್ರೀಗಳು 2002 ಏ.12 ರಂದು ರಾಜ್ಯಪಾಲರ ಹೆಸರಿಗೆ ವಿಲ್ ಬರೆದಿದ್ದರು. ನಂತರ ಈ ವಿಲ್ ರದ್ದು ಮಾಡಿ 2004 ರ ಜ.8 ರಂದು 30 ವರ್ಷಗಳಿಂದ ಸ್ವಾಮೀಜಿಗಳೊಂದಿಗೆ ದೇಗುಲ ನಿರ್ಮಾಣದಲ್ಲಿ ಸಹಕರಿಸಿದ್ದ ದೇಗುಲದ ಕಾರ್ಯದರ್ಶಿ ಕೆ.ವಿ.ಕುಮಾರಿ ಹೆಸರಿಗೆ ಸಮಸ್ತ ದೇವಾಲಯದ ಆಸ್ತಿ ವಿಲ್ ಬರೆದಿದ್ದಾರೆ.
ಕರೆ ಸ್ವೀಕರಿಸದ ಶ್ರೀಗಳ ಪುತ್ರ: ಕಮ್ಮಸಂದ್ರದ ಶ್ರೀಕೋಟಿಲಿಂಗ ದೇವಾಲಯದ ಸ್ವಾಮೀಜಿಗಳ ಪುತ್ರ ಡಾ.ಶಿವಪ್ರಸಾದ್ ಅವರ ಬಗ್ಗೆ ಹೇಳಿಕೆ ಪಡೆಯಲು “ಉದಯವಾಣಿ’ ಹಲವಾರು ಬಾರಿ ಮೊಬೈಲ್ ಮೂಲಕ ಸಂಪರ್ಕಕ್ಕೆ ಪ್ರಯತ್ನ ಮಾಡಿದರೂ ಪ್ರಯೋಜನವಾಗಲಿಲ್ಲ. ಕರೆ ಸ್ವೀಕರಿಸಿಲ್ಲ.
14.28 ಹೆಕ್ಟೇರ್‌ನಲ್ಲಿ ಕೋಟಿಲಿಂಗ ದೇಗುಲ: ಪ್ರಸಿದ್ಧ ಶ್ರೀಕೋಟಿಲಿಂಗೇಶ್ವರ ದೇಗುಲ 14.28 ಎಕರೆ ಭೂ ಪ್ರದೇಶದಲ್ಲಿ ನಿರ್ಮಾಣಗೊಂಡಿದೆ. ಸರ್ವೆ ನಂ. 44ರಲ್ಲಿ 3.20 ಎಕರೆ, 52ರಲ್ಲಿ 20.5 ಗುಂಟೆ, 53 ರಲ್ಲಿ, 8 ಗುಂಟೆ, 60ರಲ್ಲಿ 5 ಎಕರೆ, 62ರಲ್ಲಿ 4.01 ಗುಂಟೆ ಜಮೀನು ಹೊಂದಿದೆ.
ಇದರಲ್ಲಿ ಕೋಟಿಲಿಂಗಗಳ ಪ್ರತಿಷ್ಠಾಪನೆ, 13 ದೇಗುಲ, 3 ಕಲ್ಯಾಣ ಮಂಟಪ, ದಿನಸಿ ಅಂಗಡಿ ಸೇರಿದಂತೆ ಸುಮಾರು 12-13 ಕೋಟಿ ಆಸ್ತಿ ಹೊಂದಿದೆ ಎಂದು ಅಂದಾಜಿಸಲಾಗಿದೆ. ಶ್ರೀಕೋಟಿಲಿಂಗ ದೇಗುಲದ ಆವರಣದಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರ ದೇಗುಲ ಸೇರಿ ಸುಮಾರು 16ದೇಗುಲಗಳಿವೆ. ಈ ದೇಗುಲಗಳಲ್ಲಿ ಒಟ್ಟು 15 ಹುಂಡಿಗಳಿದ್ದು, ಪ್ರತಿ ತಿಂಗಳು 6 ಲಕ್ಷ ಸಂಗ್ರಹಣೆಯಾಗಲಿದೆ.
ಅರ್ಚಕರು 1.50 ಲಕ್ಷ ರೂ.ವನ್ನು ದೇಗುಲದ ಆಡಳಿತ ಮಂಡಳಿಗೆ ನೀಡುತ್ತಿದ್ದಾರೆ. ಭಕ್ತಾದಿಗಳು ಹಾಕುವ ತಟ್ಟೆ ಕಾಸು ಅರ್ಚಕರಿಗೆ ಸೇರಿದೆ. ಶನಿವಾರ, ಭಾನುವಾರ, ಸೋಮವಾರ, ಹಬ್ಬ ಹರಿದಿನಗಳಲ್ಲಿ ಹಾಗೂ ಸರ್ಕಾರಿ ರಜೆ ದಿನಗಳಲ್ಲಿ ಪ್ರತಿ ದಿನ ದೇವಾಲಯಕ್ಕೆ ಸುಮಾರು 4 ಸಾವಿರ ಭಕ್ತಾದಿಗಳು ಬರುತ್ತಾರೆ. ಉಳಿದ ದಿನಗಳಲ್ಲಿ ಸುಮಾರು 1500 ಭಕ್ತಾದಿಗಳು ಬರುತ್ತಿದ್ದಾರೆ.
ವರ್ಷಕ್ಕೆ ಕೋಟಿಗೂ ಹೆಚ್ಚು ಆದಾಯ: ಸಾಮಾನ್ಯ ಪ್ರವೇಶ ಟಿಕೆಟ್ ದರ 20 ರೂ, ವಿಶೇಷ ದರ್ಶನ 50 ರೂ. ಸೇರಿ ಪ್ರತಿ ದಿನಕ್ಕೆ 50 ಸಾವಿರ ಆದಾಯ ಬರುತ್ತಿದೆ. ಲಿಂಗ ಪ್ರತಿಷ್ಠಾಪನೆಯಿಂದ ಪ್ರತಿ ತಿಂಗಳು 10 ಲಕ್ಷ ರೂ., ಅಭಿಷೇಕದಿಂದ 1 ಲಕ್ಷ ರೂ., ವಾಹನಗಳ ಪೂಜೆಯಿಂದ 10 ಸಾವಿರ ರೂ. ವರಮಾನ ಬರುತ್ತಿದೆ. ಇನ್ನು ಪ್ರಸಾದ ಮಾರಾಟದಲ್ಲಿ ವಾರ್ಷಿಕವಾಗಿ 20 ಲಕ್ಷಕ್ಕೆ ಗುತ್ತಿಗೆ,
ವಾಹನಗಳ ಪಾರ್ಕಿಂಗ್ 20 ಲಕ್ಷ, ದೇಗುಲದ ಒಳಗೆ ಪೋಟೊ ತೆಗೆಯಲು 8 ಲಕ್ಷ, 2 ಶೌಚಾಲಯ 2ಲಕ್ಷ, ಶ್ರೀಸಾಂಭವಶಿವಮೂರ್ತಿ, ಶ್ರೀಅನ್ನಪೂರ್ಣೇಶ್ವರಿ ಹಾಗೂ ಶ್ರೀಸಾಯಿ ಕಲ್ಯಾಣ ಮಂಟಪ, ಭಕ್ತಾದಿಗಳ 10 ಕೊಠಡಿಗಳಿಂದ 6 ಲಕ್ಷ, ದೇಗುಲದ ಅಧೀನದಲ್ಲಿನ 40 ದಿನಸಿ ಅಂಗಡಿಗಳಿಂದ ಪ್ರತಿ ದಿನಕ್ಕೆ 300 ರೂ.,ಗಳಂತೆ ವರ್ಷಕ್ಕೆ 43 ಲಕ್ಷ ರೂ., ಭಕ್ತಾದಿಗಳ ಕ್ಯಾಮೆರಾ ಬಿಲ್‌ನಿಂದ 4 ಲಕ್ಷ, ಚಪ್ಪಲಿ ಕಾಯ್ದಿರಿಸುವ ಅಂಗಡಿಯಿಂದ ಒಂದು ಲಕ್ಷ ರೂ., ಆದಾಯ ಬರುತ್ತಿದೆ.
ದೇಗುಲ ನಿರ್ವಹಣೆ ಖರ್ಚು ಇಷ್ಟಿದೆ: ಪ್ರತಿ ದಿನ 500-600 ಭಕ್ತರಿಗೆ ಉಚಿತ ಊಟದ ವ್ಯವಸ್ಥೆ ಇದ್ದು ಪ್ರತಿ ತಿಂಗಳು 12-13 ಲಕ್ಷ ಖರ್ಚು ಆಗುತ್ತಿದೆ. ವಿದ್ಯುತ್ ಬಿಲ್ ಪ್ರತಿ ತಿಂಗಳು ಒಂದು ಲಕ್ಷ, ಸಿಬ್ಬಂದಿ, ಆಡಳಿತದ ವೆಚ್ಚ 8 ಲಕ್ಷ, ಜನರೇಟರ್ ಡೀಸೆಲ್‌ಗೆ 1 ಲಕ್ಷ ಖರ್ಚಾಗುತ್ತಿದೆ. ಕಮ್ಮಸಂದ್ರ ಗ್ರಾಪಂಗೆ ಪ್ರತಿ ವರ್ಷಕ್ಕೆ 50 ಸಾವಿರ ರೂ. ತೆರಿಗೆ ಕಟ್ಟಲಾಗುತ್ತಿದೆ.
ಮಾಹಿತಿ ಬಂದರೆ ಸೂಕ್ತ ಕ್ರಮ: ಬಂಗಾರಪೇಟೆ ತಾಲೂಕಿನ ಪ್ರಸಿದ್ಧ ಶ್ರೀಕೋಟಿಲಿಂಗೇಶ್ವರ ದೇಗುಲದಲ್ಲಿ ಉತ್ತರಾಧಿಕಾರಕ್ಕಾಗಿ ಗೊಂದಲ ಸೃಷ್ಟಿ ಬಗ್ಗೆ ಮಾಹಿತಿ ಇಲ್ಲ. ದೇವರ ಕಾರ್ಯಕ್ಕೆ ಅಡಚಣೆ, ಭಕ್ತರಿಗೆ ಅನಾನುಕೂಲವಾದಲ್ಲಿ ಮುಜರಾಯಿ ಇಲಾಖೆ ತಹಶೀಲ್ದಾರ್ ಮೂಲಕ ಪರಿಶೀಲನೆ ನಡೆಸಿ ಸಾರ್ವಜನಿಕರ ಹಿತದೃಷ್ಟಿಯಿಂದ ಇಲಾಖೆ ಆಡಳಿತಾಧಿಕಾರಿಗಳ ಮೂಲಕ ದೇಗುಲವನ್ನು ನಡೆಸಲು ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದ್ದಾರೆ.
ಕಿತ್ತಾಡಿಕೊಂಡರೆ ಅವರವರ ದಾರಿ ಅವರದು: ಸತತ 30 ವರ್ಷಗಳಿಂದ ಕಮ್ಮಸಂದ್ರದ ಶ್ರೀಕೋಟಿಲಿಂಗ ದೇಗುಲಕ್ಕೆ ಪ್ರತಿ ವರ್ಷಕ್ಕೆ ಕನಿಷ್ಠ 10 ಬಾರಿ ಭೇಟಿ ನೀಡುತ್ತಿದ್ದೇನೆ. ಶ್ರೀಗಳ ದೇಗುಲದ ಕಾರ್ಯಗಳನ್ನು ಮುಂದೆಯೂ ನಡೆಸಬೇಕು. ಕೆ.ವಿ.ಕುಮಾರಿ ಹಾಗೂ ಸ್ವಾಮೀಜಿಗಳ ಪುತ್ರ ಡಾ.ಶಿವಪ್ರಸಾದ್ ಇವರಿಬ್ಬರನ್ನು ಒಟ್ಟಿಗೆ ಸೇರಿಸಿ ಮಾತುಕತೆ ಮೂಲಕ ಬುದ್ಧಿವಾದ ಹೇಳಿದ್ದೇನೆ.
ವೈಯುಕ್ತಿಕ ದ್ವೇಷ ಬೆಳೆಸಿಕೊಳ್ಳದೇ ದೇಗುಲದ ಬಗ್ಗೆ ಭಕ್ತಾದಿಗಳು ವಿಶ್ವಾಸ ಕಳೆದುಕೊಳ್ಳವ ಹಾಗೆ ನಡೆದುಕೊಳ್ಳಬಾರದೆಂದು ಎಚ್ಚರಿಸಿದ್ದೇನೆ. ಇದನ್ನೂ ಮೀರಿ ಕಿತ್ತಾಟದಲ್ಲಿ ತೊಡಗಿದ್ದಲ್ಲಿ ಅವರವರ ದಾರಿ ಅವರದು. ನಂತರ ಸಾರ್ವಜನಿಕರ ಹಿತದೃಷ್ಟಿಯಿಂದ ಏನಾಗಬೇಕೋ ಅದು ಆಗುತ್ತದೆ ಎಂದು ಸಂಸದ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.