ಸೆಲ್ಫಿ ಯುಗದ ನೆನಪು ಅಲ್ಪಾಯುಷಿ
Team Udayavani, Feb 19, 2019, 12:30 AM IST
ಆಟೋಗ್ರಾಫ್ ಕಳೆದುಹೋದ ಸುಮಧುರ ನೆನಪುಗಳ ಸರಣಿಯನ್ನು ಮೆಲುಕು ಹಾಕಿಸುವ ಮಾಧ್ಯಮ. ಆಯಾಯ ಘಟ್ಟದ ನೆನಪಿನ ಘಮವನ್ನು ಅದು ಹೊರಸೂಸಿ ಮನಸ್ಸನ್ನು ಹಗುರಗೊಳಿಸುತ್ತದೆ, ಕಣ್ಣನ್ನು ತೇವಗೊಳಿಸುತ್ತದೆ. ಇದೀಗ ತಂತ್ರಜ್ಞಾನದ ಮೆಮೊರಿಗಳಲ್ಲಿ ಉಳಿದುಕೊಳ್ಳುವ ಫೋಟೋಗ್ರಾಫ್ನ ಕಾಲದಲ್ಲಿ ನಾವಿದ್ದೇವೆ…
ಅದು ಎಸ್ಸೆಸ್ಸೆಲ್ಸಿ ಕ್ಲಾಸು. ಹುಡುಗರಿಗೆ ಅದು ಮೀಸೆ ಚಿಗುರುವ ಪ್ರಾಯವೆಂದರೆ ಕೇಳಬೇಕೆ? ಚಿಗುರು ಮೀಸೆಯನ್ನು ಅದೆಷ್ಟು ಬಾರಿ ನಾಜೂಕಾಗಿ ಮುಟ್ಟಿಕೊಳ್ಳುವುದೋ, ಗಲ್ಲದಲ್ಲಿ ಮೂಡಿರುವ ಒಂದೆರಡು ಹಸಿಗಡ್ಡವನ್ನು ಅದೆಷ್ಟು ಬಾರಿ ನೀವಿಕೊಳ್ಳುವುದೋ, ಆ ಹರೆಯ ದಾಟಿ ಬಂದವನಿಗೇ ಗೊತ್ತು. ಆ ಸಮಯದ ಪುಳಕ ಪದಗಳಲ್ಲಿ ವರ್ಣಿಸಿದರೂ ಅನುಭವಿಸಲಾಗದ್ದು! ಅತ್ತ ಅದೇ ಸಮಯಕ್ಕೆ ಹುಡುಗಿಯರಿಗೋ ತಮ್ಮನ್ನು ನೋಡಲು ಬರುವ ಬೇರೆ ತರಗತಿಯ ಹುಡುಗರ ದಂಡನ್ನು ಕಂಡರೆ ಅದೇನೋ ಭಯ, ಹಿತವಾದ ಸಂಕಟ, ಪುಳಕ! ತನ್ನ ನೋಡುವವರಿರುವರೆಂದು ತಿಳಿದ ಬಳಿಕ ಆಕೆಯಲ್ಲಾಗುವ ಬದಲಾವಣೆಗಳೂ ಅನೇಕ. ಅಷ್ಟೂ ದಿನ ಅಮ್ಮ ಹೇಳಿದಂತೆ ತಲೆಗೆ ಕೊಬ್ಬರಿ ಎಣ್ಣೆ ಹಾಕಿ, ಜಡೆ ಹಾಕ್ಕೊಂಡು ಶಾಲೆಗೆ ಬರುತ್ತಿದ್ದವಳು ಬಳಿಕ ಘಮಘಮನೆಯ ಶ್ಯಾಂಪೂ ಹಾಕಿ ತಲೆಸ್ನಾನ ಮಾಡಿ, ಕೂದಲ ರಾಶಿಯನ್ನು ಹರವಿಕೊಂಡೇ ಬರತೊಡಗುತ್ತಾಳೆ. ಇಷ್ಟೆಲ್ಲಾ ಆಗುತ್ತಿದ್ದರೂ ಕಾಲವೆಲ್ಲಿ ನಿಂತೀತು? ಕೊನೆಗೂ ಆ ಸಮಯ ಸಮೀಪಿಸಿಯೇ ಬಿಟ್ಟಿತು. ಇನ್ನೇನು ಅಧ್ಯಾಪಕರೆಲ್ಲ ಬೀಳ್ಕೊಡುಗೆಯ ದಿನವನ್ನೂ ಘೋಷಿಸಿಯೇಬಿಟ್ಟರೆನ್ನುವಾಗ ಅಲ್ಲಿನ ಭಾವನೆಗಳ ಹೊಯ್ದಾಟ ಹೇಳತೀರದ್ದು.
ಆ ತರಗತಿಯಲ್ಲಿ ಕೇವಲ ನಾಲ್ಕು ಗೋಡೆಗಳ ನಡುವೆ ಅಕ್ಕಪಕ್ಕ ದಿನಂಪ್ರತಿ ಕೂತು ಒಟ್ಟಿಗೆ ಪಾಠ ಕೇಳುತ್ತಿದ್ದ ಜೀವಗಳು ಮಾತ್ರವಿರುವುದಿಲ್ಲ. ಅಲ್ಲಿ ಒಟ್ಟೊಟ್ಟಿಗೆ ಅಂಬೆಗಾಲಿಟ್ಟವರು, ಚಿಕ್ಕಂದಿನ ಮನೆಯಾಟದಲ್ಲಿ ಗಂಡ- ಹೆಂಡಿರಾದವರು, ಆಟದ ಮೈದಾನದಲ್ಲಿ ಕಿತ್ತಾಡಿಕೊಂಡವರು, ಫಲಿತಾಂಶ ಬಂದಾಗ ಹೊಟ್ಟೆಕಿಚ್ಚು ಪಟ್ಟವರು, ಬಯ್ದವರು, ಬೈಸಿಕೊಂಡವರು, ಅಪ್ಪಿಕೊಂಡವರು, ಮುದ್ದಾಡಿದವರು, ನೋವಲ್ಲಿದ್ದಾಗ ಸಾಂತ್ವನದ ಭುಜವಿತ್ತವರು, ಖುಷಿಯಲ್ಲಿದ್ದಾಗ ಸಂಭ್ರಮಿಸಿದವರು, ಗಂಟೆಗಟ್ಟಲೇ ನಕ್ಕವರು, ಜೋರಾಗಿ ಅತ್ತವರು, ಮಳೆಗಾಲದಲ್ಲಿ ದೋಣಿ ಬಿಟ್ಟವರು, ಸೆಕೆಗಾಲದಲ್ಲಿ ಯಾರಧ್ದೋ ಮಾವಿನಮರಕ್ಕೆ ಕಲ್ಲು ತೂರಿದವರು, ಚಳಿಗಾಲದಲ್ಲಿ ಬೆಂಕಿ ಕೊಟ್ಟು ಚಳಿ ಕಾಯಿಸಿಕೊಂಡವರು ಎಲ್ಲರ ಪಾಲೂ ಇದೆ. “ಬೀಳ್ಕೊಡುಗೆ’ ಎಂಬ ಪದ ಆ ಮುಗ್ಧ ಮನಸ್ಸನ್ನೊಮ್ಮೆ ದಂಗುಬಡಿಸುತ್ತದೆ. ಆದರೆ, ಅದೊಂದು ಸತ್ಯ ಎಂಬ ಅರಿವೂ ಮೂಡುತ್ತದೆ. ಅಂತೆಯೇ ಎಲ್ಲರ ಕೈಲೂ ಆಗ ಕಾಣಸಿಗುವ ಪುಸ್ತಕ ಆಟೋಗ್ರಾಫ್ನದ್ದು!
ಪ್ರತಿಯೊಬ್ಬ ಗೆಳೆಯ- ಗೆಳತಿಗೂ ಆ ಆಟೋಗ್ರಾಫ್ನಲ್ಲಿ ಯಾರ್ಯಾರು ಏನೇನು ಬರೆದಿರಬಹುದೆಂಬ ಕುತೂಹಲ. ಹುಡುಗನೋ ತನ್ನ ನೆಚ್ಚಿನ ಕನಸಿನ ಸುಂದರಿಯ ಮುದ್ದು ಅಕ್ಷರ ನೋಡಲು ಕಾತರತೆಯಿಂದ ಕಾಯುತ್ತಿರುತ್ತಾನೆ. ಅತ್ತ ಹುಡುಗಿಗೋ ಅಷ್ಟೂ ದಿನ ತನ್ನ ಹಿಂದೆ ಕಳ್ಳಹೆಜ್ಜೆ ಹಾಕಿದವನೇನಾದರೂ ಹೃದಯದ ಮಾತುಗಳನ್ನು ಅಕ್ಷರಕ್ಕೆ ಇಳಿಸಿರಬಹುದಾ ಎಂಬ ಗಾಬರಿಮಿಶ್ರಿತ ಪುಳಕ. ಹುಡುಗಿಯಾದರೋ ತನ್ನ ಅಣ್ಣ- ಅಕ್ಕ- ಅಪ್ಪ- ಅಮ್ಮನ ಬಳಿ ಸಾಲೊಂದನ್ನು ಕೇಳಿ ಬರೆದು, ಕೊನೆಗೆ ತನ್ನ ಸಹಿಯೊಂದನ್ನು ಮೂಡಿಸಿ ಮಡಚಿಟ್ಟು ಬಿಡುತ್ತಾಳೆ. ಆದರೆ, ಹುಡುಗ ಹಾಗಲ್ಲ… ಅವನ ಮತ್ತು ಪ್ರೇಯಸಿಯ ಹೆಸರಿನ ಮೊದಲ ಅಕ್ಷರವನ್ನು ಜೊತೆಜೊತೆಯಾಗಿ ಹೊಸೆದು ಅದೇನೋ ನುಡಿಗಟ್ಟೊ, ಒಗಟೋ ರಚಿಸಿರುತ್ತಾನೆ. ಹೇಗೂ ಒಂದು ತಿಂಗಳಲ್ಲಿ ಶಾಲೆ ಮುಗಿಯುವುದು, ನಂತರ ಇಬ್ಬರೂ ಒಬ್ಬರಿಗೊಬ್ಬರು ಸಿಗಲಿಕ್ಕಿಲ್ಲವಾದ್ದರಿಂದ ಮನೆಯವರಿಂದ ರಾದ್ಧಾಂತವೇನೂ ಆಕೆ ಮಾಡುವುದಿಲ್ಲವೆಂಬ ನಂಬಿಕೆ ಅವನದ್ದು!
ಅದೊಂದಿಷ್ಟು ವರ್ಷಗಳ ಬಳಿಕ ಆತ ತನ್ನ ಕಪಾಟಿನಿಂದ ಆ ಪುಸ್ತಕವನ್ನು ಹೊರತೆಗೆಯುತ್ತಾನೆ. ಅದರ ಒಂದೊಂದೇ ಪುಟಗಳನ್ನು ತಿರುವುತ್ತಲೇ ಅಲ್ಲೊಂದು ನೆನಪಿನ ಘಮ ಸೂಸುತ್ತದೆ. ಆತನಾಗ ಪದವೀಧರನೋ, ವೃತ್ತಿಪರನೋ ಆಗಿರುವುದಿಲ್ಲ. ಅದೇ ಹೈಸ್ಕೂಲಿನ ಹುಡುಗನಾಗುವ ರೂಪಾಂತರ ಪ್ರಕ್ರಿಯೆ ಅದು! ಒಬ್ಬೊಬ್ಬರ ಸಹಿ ಮತ್ತು ಹೆಸರು ನೋಡುವಾಗಲೂ ಆತನ ತುಟಿ ಆತನ ನಿರ್ದೇಶನವಿಲ್ಲದಂತೆ ನಟಿಸುತ್ತದೆ. ಒಬ್ಬೊಬ್ಬರ ಹೆಸರಿನಲ್ಲಿಯೂ ಅವರದ್ದೊಂದು ಮುಖಚರ್ಯೆ, ವ್ಯಕ್ತಿತ್ವ ಕಣ್ಮುಂದೆ ಚಿತ್ರಪಟದಂತೆ ಕಾಣಿಸುತ್ತದೆ. ಕೊನೆಗೂ ಆ ಒಂದು ಪುಟ್ಟ ಮುದ್ದು ಅಕ್ಷರ ಆತನ ಮುಖದಲ್ಲೊಂದು ಪ್ರಾಮಾಣಿಕ ಮುಗ್ಧ ನಗು ತರಿಸುತ್ತದೆ. ಮೊನ್ನೆ ತಾನೇ ಊರ ಜಾತ್ರೆಯಲ್ಲಿ ಕಾರಿನಿಂದಿಳಿದು ಮಗುವನ್ನು ಕಂಕುಳಲ್ಲೆತ್ತಿಕೊಂಡವಳನ್ನು ದೂರದಿಂದಲೇ ನೋಡಿ ಖುಷಿಪಟ್ಟಾತ ಆತ! ಈಗ ಅದೇ ಆಟೋಗ್ರಾಫ್ನ ಮುದ್ದು ಅಕ್ಷರದ ಮುಗ್ಧ ಹುಡುಗಿಯ ಹರೆಯದ ಚಿತ್ರ ನೆನೆಯುತ್ತಾನೆ. ಅಲ್ಲೊಂದು ನಿಷ್ಕಲ್ಮಶ ಸಿಹಿಸಂಕಟ ಮೂಡುತ್ತದೆ. ಕಣ್ಣೇ ಗುರುತಿಸದಂತೆ ಒಂದು ಹನಿ ಕಣ್ಣಿಂದ ಉದುರಿ ಆಕೆಯ ಸಹಿಯೊಂದಿಗೆ ಬೆರೆತು ಭಾಗಿಯಾಗುತ್ತದೆ!
ಆಟೋಗ್ರಾಫ್ ಕಳೆದುಹೋದ ಸುಮಧುರ ನೆನಪುಗಳ ಸರಣಿಯನ್ನು ಮೆಲುಕು ಹಾಕಿಸುವ ಮಾಧ್ಯಮ. ಆಯಾಯ ಘಟ್ಟದ ನೆನಪಿನ ಘಮವನ್ನು ಅದು ಹೊರಸೂಸಿ ಮನಸ್ಸನ್ನು ಹಗುರಗೊಳಿಸುತ್ತದೆ, ಕಣ್ಣನ್ನು ತೇವಗೊಳಿಸುತ್ತದೆ. ಇದೀಗ ತಂತ್ರಜ್ಞಾನದ ಮೆಮೊರಿಗಳಲ್ಲಿ ಉಳಿದುಕೊಳ್ಳುವ ಫೋಟೋಗ್ರಾಫ್ನ ಕಾಲದಲ್ಲಿ ನಾವಿದ್ದೇವೆ. ಪ್ರಸಿದ್ಧ ವ್ಯಕ್ತಿಗಳೆದುರು ಪೆನ್ನು ಡೈರಿ ಹಿಡಿದು ಕಾಯುವ ಅಭಿಮಾನಿ ಈಗ ಕನಸು. ಯಾವ ಪ್ರಸಿದ್ಧ ವ್ಯಕ್ತಿಯೇ ಇರಲಿ, ಅವರಿಗೆ ಅಂಟಿಕೊಂಡು ನಿಂತು, ಸೆಲ್ಫಿ ತೆಗೆದು, ಅದನ್ನು ಜಾಲತಾಣಗಳಲ್ಲಿ ಹಾಕಿ ಮೆರೆದು ಮರೆತು ಬಿಡುವವವರೆಗೂ ನಿದ್ದೆ ಹತ್ತದಂತಾಗಿದ್ದೇವೆ. ಇದೀಗ ಬದುಕು 24 ಗಂಟೆ ವಿಜೃಂಭಿಸಿ ಮಾಯವಾಗುವ ಸ್ಟೇಟಸ್ಸುಗಳಂತಾಗಿದೆ.
ಸೆಲ್ಫಿಯಲ್ಲೇನಿದೆ ನೆನಪು?
ಈಗಿನ ಹತ್ತನೇ ತರಗತಿಯ ಕ್ಲಾಸಿನಲ್ಲಿ ಆಟೋಗ್ರಾಫ್ಗಳ ಘಮವಿಲ್ಲ. ಎಂದೋ ಅಳಿದುಹೋಗುವ ಫೋಟೋಗ್ರಾಫುಗಳು, ಸೆಲ್ಫಿಗಳು ಅಲ್ಲಿ ರಾರಾಜಿಸುತ್ತವೆ. ಸುಮಧುರ ನೆನಪಿನ ಅಗತ್ಯವೂ ಈಗ ಮನಸ್ಸುಗಳಿಗಿಲ್ಲ. ಈಗ ನೆನಪುಗಳೂ ಅಲ್ಪಾಯುಷಿಗಳು. ಆಟೋಗ್ರಾಫ್ ಹಿಡಿದು ಗತಿಸಿದ ಕಾಲವನ್ನು, ಆ ಕಪ್ಪು- ಬಿಳುಪು ನೆನಪುಗಳನ್ನು ನೆನೆದು ಒಂದು ರೀತಿಯ ಸುಖಪಡುವಿಕೆಯ ಅದೃಷ್ಟ ಈಗಿನ ಜಮಾನಕ್ಕಿಲ್ಲ ಎಂಬುದು ವಿಪರ್ಯಾಸ.
ಅರ್ಜುನ್ ಶೆಣೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
IPL 2024: ನನಗೆ ಪ್ರೀತಿ ಗೌರವ ಕೊಡಿ ಸಾಕು..: ಡೆಲ್ಲಿ ಮಾಲಿಕರ ಮುಂದೆ ರಾಹುಲ್ ಬೇಡಿಕೆ
Tollywood: ಒಂದೇ ದಿನ ವಿವಾಹವಾಗಲಿದ್ದಾರಾ ಅಕ್ಕಿನೇನಿ ಸಹೋದರರು? ನಾಗಾರ್ಜುನ್ ಹೇಳಿದ್ದೇನು?
Video: ಜೈಲಿನಿಂದ ಬಿಡುಗಡೆಯಾದ ಖುಷಿ… ಜೈಲು ಅಧಿಕಾರಿಗಳ ಎದುರೇ ಯುವಕನ ಬ್ರೇಕ್ ಡ್ಯಾನ್ಸ್
Mangaluru: 7 ಕೆರೆ, ಪಾರ್ಕ್ ಅಭಿವೃದ್ಧಿಗೆ ಅಮೃತ 2.0
Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.