ಆದಾಯ ತೆರಿಗೆ ಇಲಾಖೆ ಪ್ರಾಮಾಣಿಕರ ಸ್ನೇಹಿ
Team Udayavani, Feb 19, 2019, 11:43 AM IST
ದಾವಣಗೆರೆ: ಆದಾಯ ತೆರಿಗೆ ಇಲಾಖೆಯು ಪ್ರಾಮಾಣಿಕ ತೆರಿಗೆ ಪಾವತಿದಾರರ ಸ್ನೇಹಿತನಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೆಚ್ಚುವರಿ ಆದಾಯ ತೆರಿಗೆ ವಲಯ-1ರ ಆಯುಕ್ತ ಡಾ| ಜಿ. ಮನೋಜ್ ಅಭಿಪ್ರಾಯಪಟ್ಟರು.
ನಗರದ ಬಾಪೂಜಿ ಎಂ.ಬಿ.ಎ ಸಭಾಂಗಣದಲ್ಲಿ ಸೋಮವಾರ ಆದಾಯ ತೆರಿಗೆ ಇಲಾಖೆ, ಜಿಲ್ಲಾ ತೆರಿಗೆ ಸಲಹೆಗಾರರ ಸಂಘ ಮುಂತಾದ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ತೆರಿಗೆ ಪಾವತಿದಾರರು, ವ್ಯಾಪಾರಿಗಳು, ಉದ್ದಿಮೆದಾರರಿಗೆ ಹಮ್ಮಿಕೊಂಡಿದ್ದ ಆದಾಯ ತೆರಿಗೆ ಕಾನೂನುಗಳ ವಿಚಾರ ಸಂಕಿರಣ ಮತ್ತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವ್ಯಾಪಾರಿಗಳು, ಉದ್ಯಮಿಗಳು ಸೇರಿದಂತೆ ಎಲ್ಲಾ ತೆರಿಗೆ ಪಾವತಿದಾರರಿಗೆ ಆದಾಯ ತೆರಿಗೆ ಇಲಾಖೆ ಸ್ವಯಂ ಪ್ರೇರಿತವಾಗಿ ತೆರಿಗೆ ಪಾವತಿಸಲು ನೆರವು ನೀಡುತ್ತಿದೆ. ತೆರಿಗೆದಾರರ ಸ್ನೇಹಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ರಿಟರ್ನ್ ಫೈಲ್ ಮಾಡಲು ಹಾಗೂ ತ್ವರಿತವಾಗಿ ರೀಫಂಡ್ ಪಡೆಯುವುದೂ ಸೇರಿದಂತೆ ಹಲವಾರು ಪ್ರಕ್ರಿಯೆಗಳಿಗೆ ಸಹಕಾರ ನೀಡುವ ಕೆಲಸ ಮಾಡುತ್ತಿದೆ ಎಂದರು.
ಆದಾಯ ತೆರಿಗೆ ಇಲಾಖೆ ವಿಷನ್-2020 ಹೊಂದಿದ್ದು, ಅದರ ಅನ್ವಯ ಇಲಾಖೆಯ ಪ್ರಕ್ರಿಯೆಗಳನ್ನು ಎಲೆಕ್ಟ್ರಾನಿಕ್ ಸ್ವರೂಪಕ್ಕೆ ತರಲಾಗುವುದು. ಇದರಿಂದಾಗಿ ತೆರಿಗೆ ಪಾವತಿ ಪ್ರಮಾಣದಲ್ಲಿ ಸಾಕಷ್ಟು ಸುಧಾರಣೆ ಆಗಲಿದೆ. ತೆರಿಗೆ ಪಾವತಿದಾರರಿಗೆ ಪ್ರಸ್ತುತ ತಂತ್ರಜ್ಞಾನದ ಕುರಿತು ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದ್ದು, ಅಜ್ಞಾನದಿಂದ ಉಂಟಾಗಿರುವ ಅಡೆತಡೆಗಳನ್ನು ನಿವಾರಿಸಬೇಕಿದೆ ಎಂದು ಹೇಳಿದರು.
ಉನ್ನತ ಆದಾಯದವರು ಈಗಾಗಲೇ ತೆರಿಗೆ ವ್ಯಾಪ್ತಿಗೆ ಒಳಪಟ್ಟಿದ್ದಾರೆ. 5 ಲಕ್ಷ ರೂ.ಗಳವರೆಗಿನ ಆದಾಯಕ್ಕೆ ವಿನಾಯಿತಿ ಇದೆ. ಹೀಗಾಗಿ ಆದಾಯ ತೆರಿಗೆ ಇಲಾಖೆ ಮಧ್ಯಮ ಆದಾಯದವರ ಕಡೆ ಹೆಚ್ಚು ಗಮನ ಹರಿಸುತ್ತಿದೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಮಧ್ಯ ಪ್ರವೇಶವಿಲ್ಲದೇ, ಕೇಂದ್ರಿಕೃತ ವ್ಯವಸ್ಥೆಯ ಮೂಲಕ ಪರಿಶೀಲನೆ ನಡೆಸುತ್ತಿದೆ ಎಂದರು.
ಆದಾಯ ತೆರಿಗೆ ವ್ಯವಸ್ಥೆ ಸರಳೀಕರಣವಾಗುತ್ತಿದೆ. ಜನರು ತಮ್ಮ ಆದಾಯದ ಬಗ್ಗೆ ಸರಿಯಾದ ಮಾಹಿತಿ ನೀಡಬೇಕು. ಆಗ ಪ್ರಾಮಾಣಿಕರಿಗೆ ಯಾವುದೇ ತೊಂದರೆ ಆಗುವುದಿಲ್ಲ. ಆದರೆ, ಆದಾಯದ ವಿವರವನ್ನು ಮುಚ್ಚಿಡುವ ಪ್ರಯತ್ನ ಮಾಡಿದ್ದಲ್ಲಿ ಬಂಧನದಂತಹ ಕಠಿಣ ಕ್ರಮ
ಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.
ಹೆಚ್ಚುವರಿ ಆದಾಯ ತೆರಿಗೆ ವಲಯ-2ರ ಆಯುಕ್ತ ಸುನೀಲ್ ಅಗರ್‌ವಾಲ್ ಮಾತನಾಡಿ, ದಾವಣಗೆರೆ ಕಾಲಕ್ಕೆ ತಕ್ಕಂತೆ ಬದಲಾದಂತೆ, ಆದಾಯ ತೆರಿಗೆ ಇಲಾಖೆ ಕೂಡ ಬದಲಾವಣೆ ಹೊಂದುತ್ತಿದೆ. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಇಲಾಖೆ ಅತಿ ವೇಗವಾಗಿ ಬೆಳೆಯುತ್ತಿದೆ ಎಂದು ಹೇಳಿದರು.
ಸ್ವಯಂ ಪ್ರೇರಣೆಯಿಂದ ತೆರಿಗೆ ಪಾವತಿ ಮಾಡುವವರಿಗೆ ಇಲಾಖೆ ಸಹಕಾರ ನೀಡುತ್ತದೆ. ಅದೇ ತೆರಿಗೆ ಪಾವತಿ ಮಾಡದೇ ತಪ್ಪಿಸಿಕೊಳ್ಳುವವರು ಮಾತ್ರ ತಾಂತ್ರಿಕತೆಯ ಸಹಾಯದಿಂದ ಇಂದಲ್ಲ ನಾಳೆ ಸಿಕ್ಕಿಹಾಕಿಕೊಳ್ಳುತ್ತಾರೆ. ಹಾಗಾಗಿ ವ್ಯಾಪಾರಸ್ಥರು, ಉದ್ಯಮಿಗಳು ತೆರಿಗೆಯಿಂದ ತಪ್ಪಿಸಿಕೊಳ್ಳುವ ಕೆಲಸ ಮಾಡದೇ ಸರಿಯಾದ ರೀತಿಯಲ್ಲಿ ತೆರಿಗೆ ಪಾವತಿ ಮಾಡಬೇಕು ಎಂದರಲ್ಲದೇ, ದೇಶದ ಎಲ್ಲಾ ರೀತಿಯ ಆರ್ಥಿಕಾಭಿವೃದ್ಧಿ ಯೋಜನೆಗಳಿಗೆ, ಸರ್ಕಾರಕ್ಕೆ ತೆರಿಗೆ ಇಲಾಖೆ ತನ್ನದೇ ಆದ ರೀತಿಯಲ್ಲಿ ಸಹಾಯ ಮಾಡುತ್ತಿದೆ ಎಂದರು.
ಚಾರ್ಟರ್ ಅಕೌಂಟೆಂಟ್ಸ್ ಅಸೋಸಿಯೇಷನ್ ಗೌರವಾಧ್ಯಕ್ಷ ಅಥಣಿ ವೀರಣ್ಣ ಮಾತನಾಡಿ, ಆದಾಯ ತೆರಿಗೆ ಇಲಾಖೆಯು ಇನ್ಫೋಸಿಸ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇದರಿಂದ ರಿಟರ್ನ್ ಫೈಲ್ ಮಾಡೋ ವಿಧಾನದಲ್ಲಿ ಸರಳೀಕರಣ ಕಾಣಬಹುದು. ದೇಶದಲ್ಲಿ ಒಟ್ಟು ಜನಸಂಖ್ಯೆಯಲ್ಲಿ ಶೇ.6 ರಷ್ಟು ಜನ ಮಾತ್ರ ತೆರಿಗೆ ಪಾವತಿಸುತ್ತಿದ್ದಾರೆ. ಆದರೀಗ ಪತ್ರಿಕೆಯಲ್ಲಿ ಓದಿದ ವರದಿಗಳ ಪ್ರಕಾರ ಸುಮಾರು 12 ಲಕ್ಷ ಕೋಟಿ ರೂ.ನಷ್ಟು ಆದಾಯ ತೆರಿಗೆ ಸಂಗ್ರಹಿಸಲಾಗಿದೆ ಎಂಬುದು ಹೆಮ್ಮೆಯ ವಿಷಯ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಸಣ್ಣ ಪುಟ್ಟ ಕೈಗಾರಿಕೆ ಮತ್ತು ಉದ್ಯಮಿಗಳು ವ್ಯಾಪಾರದಲ್ಲಿ ಕೂಡಿಟ್ಟಿದ್ದ ಉಳಿತಾಯದ ಹಣವನ್ನು ಜಿಎಸ್‌ಟಿ ಮತ್ತು ನೋಟು ಅಮಾನ್ಯಿಕರಣದಿಂದ ಕಳೆದುಕೊಂಡು ತಮ್ಮ ಕೈಗಾರಿಕೆಗಳನ್ನು ಮುಚ್ಚಿಕೊಂಡಿದ್ದಾರೆ. ಆದಾಯ ತೆರಿಗೆ ಇಲಾಖೆಯವರು ಮಧ್ಯಮ ವರ್ಗದವರಿಗೆ ಜಿಎಸ್‌ಟಿ
ಮತ್ತು ಆದಾಯ ತೆರಿಗೆ ಎರಡನ್ನು ಸೇರಿಸಿ ತೆರಿಗೆಯಲ್ಲಿ ಸ್ವಲ್ಪ ವಿನಾಯತಿ ನೀಡಿದರೆ ಒಳ್ಳೆಯದಾಗುತ್ತದೆ ಎಂದು ಹೇಳಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಮಹಾಸಂಸ್ಥೆ ಕಾರ್ಯದರ್ಶಿ ಎ.ಬಿ. ಶಂಭುಲಿಂಗಪ್ಪ ಮಾತನಾಡಿ, ಕೈಗಾರಿಕೋದ್ಯಮಿಗಳು ಮತ್ತು ವ್ಯಾಪಾರಸ್ಥರು ತೆರಿಗೆ ಪಾವತಿ ಮೂಲಕ ದೇಶದ ಪ್ರಗತಿಗೆ ಕಾರಣರಾಗಬೇಕು ಎಂದರು.
ಚಾರ್ಟರ್ ಅಕೌಂಟೆಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಕಿರಣ್ ಪಾಟೀಲ್, ತೆರಿಗೆ ಸಲಹೆಗಾರರ ಸಂಘದ ಗೌರವಾಧ್ಯಕ್ಷ ಬಿ.ಜಿ. ಬಸವರಾಜಪ್ಪ, ಅಧ್ಯಕ್ಷ ಜಂಬಗಿ ರಾಧೇಶ್, ಆದಾಯ ತೆರಿಗೆ ಅಧಿಕಾರಿ ಭಾಸ್ಕರ್, ಇತರರು ಉಪಸ್ಥಿತರಿದ್ದರು.
ಪ್ರಾಮಾಣಿಕವಾಗಿ ತೆರಿಗೆ ಪಾವತಿಸಿ ದಾವಣಗೆರೆ ಮೂರನೇ ಹಂತದ ನಗರವಾಗಿದೆ. ಇಲ್ಲಿ ತೆರಿಗೆ ತಳಹದಿ ಹೆಚ್ಚಿಸಲು ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ರಿಯಲ್ ಎಸ್ಟೇಟ್, ಆಭರಣ, ಶಿಕ್ಷಣ, ರೈಸ್‌ಮಿಲ್ ಸೇರಿದಂತೆ ಹಲವಾರು ವಲಯಗಳಲ್ಲಿ ಆದಾಯದ ಬಗ್ಗೆ ಪರಿಶೀಲಿಸಲಾಗುತ್ತಿದೆ. ಕಡಿಮೆ ತೆರಿಗೆ ಪಾವತಿಸುತ್ತಾ ತೆರಿಗೆ ವಂಚನೆ ಮಾಡುವುದು, ಕೃಷಿ ಆದಾಯ ಹೆಚ್ಚಿನ ರೀತಿಯಲ್ಲಿ ತೋರಿಸುವುದು, ಆಭರಣದ ದಾಸ್ತಾನಿನಲ್ಲಿ ಏರುಪೇರು ಇತ್ಯಾದಿ ಕಾನೂನು ಬಾಹಿರ ಕೆಲಸ ಮಾಡಿದರೆ ಅಂತಹ ತೆರಿಗೆ ಪಾವತಿದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೆಚ್ಚುವರಿ ಆದಾಯ ತೆರಿಗೆ ವಲಯ-1ರ ಆಯುಕ್ತ ಡಾ| ಜಿ. ಮನೋಜ್ ಎಂದು ಎಚ್ಚರಿಕೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
Davangere: ಮಹಿಳೆಯ ಮೇಲೆ ಕರಡಿ ದಾಳಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.